ವೃತ್ತಿರಂಗಭೂಮಿಯ ಹಿರಿಯ ಕಲಾವಿದ ಕುಕನೂರಿನ ಬಾಬಣ್ಣ ಕಲ್ಮನಿಯವರು ತಮ್ಮ 90ನೇ ವಯಸ್ಸಿನಲ್ಲಿ ಡಿ.10ರಂದು ನಿಧನರಾದರು. ಅವರ ಸಾಧನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಘೋಷಿಸಿ ಹತ್ತು ತಿಂಗಳು ಕಳೆದರೂ ಕೊಡಲಾರದೇ ಸತಾಯಿಸಿತು. “ನಾನು ಸಾಯುವ ಮುನ್ನ ಅದೊಂದು ಪ್ರಶಸ್ತಿ ಕೊಡಿಸಿ ಪುಣ್ಯಕಟ್ಟಿಕೊಳ್ಳಿ” ಎಂದು ಆ ಹಿರಿಯ ಜೀವ ಹಲವಾರು ಬಾರಿ ಅವಲತ್ತುಕೊಂಡಿತ್ತು. ಪ್ರಶಸ್ತಿಯ ಜೊತೆಗೆ ಸರಕಾರ ಕೊಡಮಾಡುವ 5 ಲಕ್ಷ ರೂಪಾಯಿಗಳು ತಮ್ಮ ಕುಟುಂಬದ ಆರ್ಥಿಕ ಸಮಸ್ಯೆಗೆ ಪರಿಹಾರವಾಗಬಹುದು ಎನ್ನುವುದು ಬಾಬಣ್ಣನವರ ಬಯಕೆಯಾಗಿತ್ತು. ಆದರೆ ಸರಕಾರದ ನಿರ್ಲಕ್ಷದಿಂದಾಗಿ ಪ್ರಶಸ್ತಿ ಪ್ರದಾನ ಆಗಲೇ ಇಲ್ಲ. ಅಲ್ಲಿವರೆಗೂ ಬಾಬಣ್ಣನವರು ಬದುಕಲೂ ಇಲ್ಲ. ಅವರ ಅಂತಿಮ ಆಸೆ ನೆರವೇರಲೂ ಇಲ್ಲ.
ಹೋಗಲಿ ಮರಣೋತ್ತರವಾಗಿಯಾದರೂ ಬಾಬಣ್ಣನವರಿಗೆ ಸಲ್ಲಬೇಕಾದ ಪ್ರಶಸ್ತಿ ಮತ್ತು ಹಣವನ್ನು ಅವರ ಕುಟುಂಬಕ್ಕೆ ಕೊಡಬೇಕು ಎಂದು ಆಗ್ರಹಿಸಿ ನಾನು ಲೇಖನವನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೆ. ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೂ ಹಾಗೂ ಸಚಿವಾಲಯಕ್ಕೂ ಲೇಖನ ತಲುಪಿಸಿದ್ದೆ. ಆ ಲೇಖನಕ್ಕೆ ಕೆಲವಾರು ಜನ ಬೆಂಬಲವನ್ನೂ ಸೂಚಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿಗಳಾಗಿರುವ ಕಿರಣ್ ಸಿಂಗ್ ರವರು ಈ ಲೇಖನಕ್ಕೆ ಸ್ಪಂದಿಸಿದರು. ಹಾಗೂ ವಾಟ್ಸಪಲ್ಲಿ ತಮ್ಮ ಅನಿಸಿಕೆಯನ್ನು ಈ ಕೆಳಗಿನಂತೆ ಹಂಚಿಕೊಂಡರು.
ಪ್ರಕಟವಾಗುತ್ತಿರುವ ಅಭಿಪ್ರಾಯಗಳನ್ನು ಗಮನಿಸಿದ್ದೇನೆ. ಕಳೆದ ಎರಡು ಸಭೆಗಳಲ್ಲಿಯೂ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರು ಯಾವುದೇ ಪ್ರಶಸ್ತಿಗಳನ್ನು ಬಾಕಿ ಉಳಿಸಬಾರದು, ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಶಸ್ತಿಗಳನ್ನು ಯಾಕೆ ಪ್ರಧಾನ ಮಾಡಲಿಲ್ಲ ಎಂದು ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಸಾಧ್ಯವಾದಷ್ಟು ಬೇಗನೆ ಆಯೋಜಿಸಲು ಸೂಚಿಸಿದ್ದಾರೆ, ಅಲ್ಲದೆ ಪ್ರಸಕ್ತ ಸಾಲಿನ ವಿವಿಧ ಪ್ರಶಸ್ತಿಗಳ ಆಯ್ಕೆ ಸಮಿತಿಗಳನ್ನು ಸಹ ಎರಡು ತಿಂಗಳಷ್ಟು ಹಿಂದೆಯೇ ಅನುಮೋದಿಸಿ ಕಳುಹಿಸಿ ಕೊಟ್ಟಿದ್ದಾರೆ. ಕಲಾವಿದರ ಅಭಿಪ್ರಾಯಗಳನ್ನು ಮಾನ್ಯ ಸಚಿವರ ಗಮನಕ್ಕೆ ತಂದು ಸಾಧ್ಯವಾದಷ್ಟು ಬೇಗ ಎಲ್ಲಾ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಕ್ರಮ ಕೈಗೊಳ್ಳಲಾಗುವುದು.
ಕಿರಣ್ ಸಿಂಗ್ ರವರ ಈ ಪ್ರತಿಕ್ರಿಯೆಗೆ ಪ್ರತಿಯಾಗಿ ಮತ್ತೆ ಪ್ರಶ್ನೆಗಳನ್ನು ಈ ರೀತಿ ಬರೆದು ಉತ್ತರಕ್ಕೆ ಆಗ್ರಹಿಸಿದೆ.
“ಸರ್.. ಈ ಕೆಳಗಿನ ಪ್ರಶ್ನೆಗಳಿಗೆ ರಂಗಭೂಮಿಯವರು ನಿಮ್ಮಿಂದ ಉತ್ತರ ಬಯಸುತ್ತಿದ್ದಾರೆ. ದಯವಿಟ್ಟು ಉತ್ತರಿಸುವ ಸೌಜನ್ಯ ತೋರಿಸಿ.
ದಿವಂಗತ ಕುಕನೂರು ಬಾಬಣ್ಣನವರಿಗೆ ಘೋಷಣೆಯಾಗಿದ್ದ ಗುಬ್ಬಿ ವೀರಣ್ಣ ಪ್ರಶಸ್ತಿ ಹಾಗೂ ಹಣವನ್ನು ಅವರ ಕುಟುಂಬಕ್ಕೆ ಕೊಡಮಾಡುವ ವ್ಯವಸ್ಥೆ ಮಾಡುತ್ತೀರಾ?
ಹಾಗೆಯೇ ಬಿ.ವಿ.ಕಾರಂತ ಪ್ರಶಸ್ತಿ ಪ್ರದಾನಕ್ಕೂ ಮೊದಲೇ ತೀರಿಕೊಂಡ ಎಸ್.ಮಾಲತಿಯವರ ಮನೆಯವರಿಗೂ ತಲುಪಿಸುತ್ತೀರಾ?
ಸಂಸ್ಕೃತಿ ಇಲಾಖೆಯಿಂದ ಯಾವುದೇ ಪ್ರಶಸ್ತಿ ಘೋಷಣೆ ಆದ ನಂತರ ಕಾಲಮಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲೇಬೇಕೆಂಬ ನಿಯಮವನ್ನು ಜಾರಿಗೆ ತರುತ್ತೀರಾ?
ಹೋಗಲಿ ಈಗಾಗಲೇ ಸರಕಾರದಿಂದ ಆರೇಳು ವರ್ಷಗಳ ಹಿಂದೆ ಆದೇಶವಾದ ಸಾಂಸ್ಕೃತಿಕ ನೀತಿಯನ್ನು ಈಗಲಾದರೂ ಅಧಿಕೃತವಾಗಿ ಜಾರಿಗೆ ತರುತ್ತೀರಾ?
ಕಳೆದ ಒಂದು ವರ್ಷದಿಂದ ನಿರ್ಲಕ್ಷಕ್ಕೆ ಒಳಗಾದ ಅಕಾಡೆಮಿ ಪ್ರಾಧಿಕಾರ ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಇನ್ನೂ ಯಾವಾಗ ನೇಮಿಸುತ್ತೀರಿ?
ರಂಗಸಮಾಜಕ್ಕೆ ಯಾವಾಗ ಸದಸ್ಯರುಗಳ ಆಯ್ಕೆಯಾಗುತ್ತದೆ ಹಾಗೂ ನಿರ್ದೇಶಕರ ನೇಮಕಾತಿ ಮಾಡಲಾಗುತ್ತದೆ?
ಇಷ್ಟನ್ನು ನೀವು ಮುತುವರ್ಜಿವಹಿಸಿ, ಇಲಾಖೆಯ ಸಚಿವರನ್ನು ಒಪ್ಪಿಸಿ ಜಾರಿ ಮಾಡಿಸಿದ್ದೇ ಆದರೆ ನಾವು ರಂಗಭೂಮಿಯವರು ನಿಮಗೆ ಹಾಗೂ ಸಚಿವರಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿ ಸನ್ಮಾನ ಸಮಾರಂಭ ಆಯೋಜಿಸಿ ರಂಗಗೌರವ ಸಲ್ಲಿಸುತ್ತೇವೆ. ಆಗಬಹುದಾ..?”
ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಕಿರಣ್ ಸಿಂಗ್ ರವರಿಂದ ಸಕಾರಾತ್ಮಕ ಉತ್ತರ ಹೀಗೆ ಬಂದಿತು.
ನಮಸ್ಕಾರ ಸರ್, ತಾವು ಹಾಗೂ ಲೋಕೇಶ್ ಇಬ್ಬರೂ ಅಕಾಡೆಮಿಗಳಲ್ಲಿ ಸರ್ಕಾರದ ಪರವಾಗಿ ಕೆಲಸ ಮಾಡಿದ್ದೀರಿ, ಹಾಗಾಗಿ ಇವು ಹೇಗೆ ಆಗುತ್ತವೆ ಎಂಬ ಬಗ್ಗೆ ತಮಗೆ ಸ್ಪಷ್ಟ ಕಲ್ಪನೆ ಇದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಘೋಷಣೆಯಾದ ಪ್ರಶಸ್ತಿಗಳನ್ನು ಅಂದಿನ ಅವಧಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳು ಯಾಕೆ ಪ್ರಧಾನ ಮಾಡಲಿಲ್ಲ ಎಂಬ ಬಗ್ಗೆ ಹಿಂದಿನ ಸಭೆಯಲ್ಲಿ ಮಾನ್ಯ ಸಚಿವರು ಪ್ರಶ್ನಿಸಿದ್ದಾರೆ, ಆದರೆ ಅದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಪ್ರಸಕ್ತ ಸರ್ಕಾರ ರಚನೆಯಾದ ಕೂಡಲೇ ಈ ಮೊದಲೇ ಹೇಳಿದ ಹಾಗೆ ನಾನೇ ಖುದ್ದು ಮುತುವರ್ಜಿ ವಹಿಸಿ ವಿವಿಧ ಪ್ರಶಸ್ತಿಗಳ ಆಯ್ಕೆ ಸಮಿತಿಗಳ ಪಟ್ಟಿಯನ್ನು ಅನುಮೋದಿಸಿ ಕಳುಹಿಸಿ ಕೊಡಲಾಗಿದೆ. ಸಂಬಂಧಪಟ್ಟ ಜಂಟಿ ನಿರ್ದೇಶಕರು ಸಭೆ ಕರೆದು ಪ್ರಶಸ್ತಿ ಘೋಷಿಸಬೇಕಿದೆ. ಹಿಂದಿನ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಅನುದಾನದ ಕೊರತೆ ಇದೆ ಎಂದು ತಿಳಿಸಿದರು. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಿ ಅದನ್ನು ಸಹ ಮಂಜೂರು ಮಾಡಿಸಿಕೊಡುತ್ತೇನೆ ಎಂದು ಖುದ್ದು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಾಂಸ್ಕೃತಿಕ ನೀತಿ ಜಾರಿಗೆ ಸಂಬಂಧಿಸಿದಂತೆ ಮಾನ್ಯ ಸಚಿವರು ಡಾ. ಬರಗೂರು ರಾಮಚಂದ್ರಪ್ಪ ಅವರ ಮನೆಗೆ ಭೇಟಿ ನೀಡಿ ಅವರೊಂದಿಗೆ ಚರ್ಚಿಸಿದ್ದಾರೆ ಹಾಗೂ ಬೆಳಗಾವಿ ಅಧಿವೇಶನದ ನಂತರ ಸಾಂಸ್ಕೃತಿಕ ನೀತಿ ಅನುಷ್ಠಾನ ಕುರಿತು ಚರ್ಚಿಸಲು ಸಭೆ ಆಯೋಜಿಸುವಂತೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ರಂಗ ಸಮಾಜದ ಸದಸ್ಯರ ಆಯ್ಕೆ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲಿಯೇ ನೇಮಕ ಮಾಡಲಾಗುವುದು ಎಂದು ಮಾನ್ಯ ಸಚಿವರು ತಿಳಿಸಿದ್ದಾರೆ. ಯಾವುದೇ ಸನ್ಮಾನದ ಅಪೇಕ್ಷೆ ನನಗಿಲ್ಲ, ಆದರೆ ಸಾಂಸ್ಕೃತಿಕ ಲೋಕದಲ್ಲಿ ಅಪಾರ ಸ್ನೇಹಿತರನ್ನು ಹೊಂದಿರುವ ನಾನು ಸಾಂಸ್ಕೃತಿಕ ಲೋಕದ ಬಗ್ಗೆ ಅಪಾರ ಕಾಳಜಿಯನ್ನು ಇಟ್ಟುಕೊಂಡಿರುವುದರಿಂದ, ಅದರ ಜೊತೆಗೆ ಮಾನ್ಯ ಸಚಿವರ ಕಚೇರಿಯಲ್ಲಿ ಕೆಲಸ ಮಾಡುವುದರಿಂದ ಅನೇಕ ವಿಷಯಗಳ ಬಗ್ಗೆ ತಪ್ಪು ಮಾಹಿತಿ ಹೋಗಬಾರದು ಎಂಬ ಕಾರಣಕ್ಕೆ ಮಾತ್ರವೇ ಇಷ್ಟನ್ನು ವಿವರಿಸಿದ್ದೇನೆ. ನನ್ನ ಇತಿಮಿತಿಯಲ್ಲಿ ಸಾಂಸ್ಕೃತಿಕ ಲೋಕದ ಒಳಿತಿಗಾಗಿ ನನ್ನ ಕೈಯಲ್ಲಿ ಸಾಧ್ಯವಾಗಬಹುದಾದ ಎಲ್ಲಾ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಮಾತ್ರ ಹೇಳಬಲ್ಲೆ.
ಸಚಿವಾಲಯದ ಉನ್ನತ ಅಧಿಕಾರಿಯ ಸ್ಪಷ್ಟೀಕರಣ ಒಂದಿಷ್ಟು ಕ್ಲಾರಿಫಿಕೇಶನ್ ಕೊಟ್ಟಿತಾದರೂ ಮರಣಾನಂತರ ಘೋಷಿತ ಪ್ರಶಸ್ತಿ ಕೊಡಬೇಕೆನ್ನುವ ನನ್ನ ಬೇಡಿಕೆಗೆ ಉತ್ತರ ಸಿಕ್ಕಲಿಲ್ಲ. ಮತ್ತೆ ಅದನ್ನೇ ಪ್ರಶ್ನಿಸಿದೆ.
“ನಿಮ್ಮ ಸ್ಪಂದನೆಗೆ ಧನ್ಯವಾದಗಳು ಸರ್. ಮಾನ್ಯ ಸಚಿವರ ಮನವೊಲಿಸಿ ಆದಷ್ಟು ಶೀಘ್ರವಾಗಿ ಸಾಂಸ್ಕೃತಿಕ ಲೋಕದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು, ಸರಕಾರದ ವಿಳಂಬ ಧೋರಣೆಯನ್ನು ಬದಲಾಯಿಸಲು ನೀವು ಪ್ರಯತ್ನಿಸಬೇಕೆಂದು ನಿಮ್ಮಲ್ಲಿ ಕೋರಿಕೊಳ್ಳುವೆ.
ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡುವ ಕುರಿತು ನಿಮ್ಮಿಂದ ಸ್ಪಷ್ಟೀಕರಣ ಬರಲಿಲ್ಲ. ಬಾಬಣ್ಣ ಕಲ್ಮನಿಯವರ ಕೊನೆಯ ಆಸೆಯನ್ನು ನೆರವೇರಿಸಲು ಸಾಧ್ಯವಾ? ಕಷ್ಟದಲ್ಲಿರುವ ಅವರ ಕುಟುಂಬಕ್ಕಾದರೂ ಪ್ರಶಸ್ತಿಯ ಮೊತ್ತವನ್ನು ಕೊಡಿಸಲು ಆಗುತ್ತದೆಯಾ? ಸರಕಾರ ಮಾನವೀಯ ದೃಷ್ಟಿಯಿಂದ ಸ್ಪಂದಿಸಬಹುದಾ? ಈ ನಿಟ್ಟಿನಲ್ಲಿ ನೀವೂ ಪ್ರಯತ್ನ ಮಾಡಲು ಆಗುತ್ತದಾ?”
ಅದಕ್ಕೂ ಈ ರೀತಿಯ ಉತ್ತರ ಬಂದಿತು.
ಮರಣೋತ್ತರವಾಗಿ ಪ್ರಶಸ್ತಿ ಪ್ರಧಾನ ಮಾಡುವ ಬಗ್ಗೆ ಖಂಡಿತವಾಗಿ ಮಾನ್ಯ ಸಚಿವರ ಅನುಮೋದನೆ ಪಡೆಯಲು ಪ್ರಯತ್ನಿಸುತ್ತೇನೆ. ಸಚಿವರು ಸಹೃದಯರು, ಮುಕ್ತ ಮನಸ್ಸಿನವರು ಆದ್ದರಿಂದ ಖಂಡಿತವಾಗಿಯೂ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ.
ಹೀಗೆ ಕೇಳಿದ್ದಕ್ಕೆಲ್ಲಾ ಭರವಸೆಯ ಮಾತುಗಳನ್ನು ಕಿರಣ್ ಸಿಂಗ್ ರವರು ಕೊಟ್ಟಿದ್ದರಿಂದಾಗಿ ಈ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸಲು ನಿರ್ಧರಿಸಿ ಕೊನೆಯದಾಗಿ
“‘ನೀವಿತ್ತ ಭರವಸೆ ಬಾಬಣ್ಣನವರ ಕುಟುಂಬಕ್ಕೆ ಬೆಳಕಾಗಬಲ್ಲುದು. ನೆನೆಗುದಿಗೆ ಬಿದ್ದಿರುವ ಸಾಂಸ್ಕೃತಿಕ ನೀತಿಯ ಜಾರಿ ಪ್ರಯತ್ನ ಅಯೋಮಯವಾಗಿರುವ ಸಾಂಸ್ಕೃತಿಕ ಲೋಕಕ್ಕೆ ಭರವಸೆ ನೀಡಬಲ್ಲುದು. ಕೋರಿಕೊಂಡ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ನಿಮ್ಮಂತ ಅಧಿಕಾರಿಗಳು ಅಭಿನಂದನಾರ್ಹರು”
ಎಂದು ಅಭಿನಂದನೆಯನ್ನು ತಿಳಿಸಿ ಚರ್ಚೆ ಮುಗಿಸಿದೆ. ಇನ್ನು ಕಿರಣ್ ಸಿಂಗ್ ರವರು ಕೊಟ್ಟ ಭರವಸೆಗಳನ್ನು ಈಡೇರಿಸುತ್ತಾರಾ? ಅವರ ಮಾತಿಗೆ ಸಚಿವರು ಒಪ್ಪುತ್ತಾರಾ? ಸರಕಾರಿ ವ್ಯವಸ್ಥೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾ? ಸಾಂಸ್ಕೃತಿಕ ಲೋಕದ ಬಹುಕಾಲದ ಬೇಡಿಕೆಯಾದ ಸಾಂಸ್ಕೃತಿಕ ನೀತಿಯ ಅನುಷ್ಠಾನ ಆಗುತ್ತದಾ? ಸರಕಾರಿ ಪ್ರಶಸ್ತಿಗಳು ಕಾಲಮಿತಿಯಲ್ಲಿ ಪ್ರದಾನವಾಗುತ್ತವಾ? ಆದಷ್ಟು ಬೇಗ ಅನಾಥವಾಗಿರುವ ಅಕಾಡೆಮಿ, ಪ್ರಾಧಿಕಾರ, ಪ್ರತಿಷ್ಠಾನ, ರಂಗಾಯಣಗಳಿಗೆ ವಾರಸುದಾರರ ನೇಮಕ ಆಗುತ್ತದಾ? ಪ್ರಶಸ್ತಿಯ ಕನವರಿಕೆಯಲ್ಲೇ ಕಾಲವಶರಾದ ಬಾಬಣ್ಣನವರ ಕುಟುಂಬಕ್ಕೆ ಘೋಷಿತ ಪ್ರಶಸ್ತಿ ಹಾಗೂ ಮೊತ್ತ ತಲುಪುತ್ತದಾ? ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ ದಿನಗಳು ಉತ್ತರ ಹೇಳುತ್ತವೆ.
ಇದಕ್ಕೆ ಪೂರಕವಾಗಿ ಇವತ್ತು ಒಂದು ಉತ್ತಮ ಬೆಳವಣಿಗೆಯಾಗಿದೆ. ಸಾಂಸ್ಕೃತಿಕ ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿಯವರಾದ ಮಾಲಗತ್ತಿ ಮೇಡಂ ಡಿಸೆಂಬರ್ 15 ರಂದು ಕನ್ನಡ ಭವನದಲ್ಲಿ ಸಮಾಲೋಚನಾ ಸಭೆಯನ್ನು ಕರೆದಿದ್ದಾರೆ. ಸಾಂಸ್ಕೃತಿಕ ಲೋಕದವರನ್ನು ಆಹ್ವಾನಿಸಿದ್ದಾರೆ. ಏನೇ ಆಗಲಿ ಒಂದು ಲೇಖನ, ಒಂದಿಷ್ಟು ಅಭಿಪ್ರಾಯಗಳು ಸಂಸ್ಕೃತಿ ಇಲಾಖೆಯಲ್ಲಿ ಒಂದಿಷ್ಟಾದರೂ ಸಂಚಲನವನ್ನು ಮೂಡಿಸಿದ್ದು ಆಶಾದಾಯಕ ಬೆಳವಣಿಗೆಯಾಗಿದೆ. ಹೇಗಾದರೂ ಸರಿ ಬಹುತೇಕ ನಿಷ್ಕ್ರಿಯಗೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತೆ ಸಕ್ರಿಯಗೊಂಡರೆ ಸಾಕು. ಅದಕ್ಕೆ ಅಧಿಕಾರಿಗಳ ಸಂಪೂರ್ಣ ಸಹಕಾರ ಬೇಕು.
- ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ




