ನನ್ನ ತಾಯಿ ಲಕ್ಷ್ಮಮ್ಮನ ನಾಲ್ಕು ಜನ ತಂಗಿಯರ ಪೈಕಿ ಮೂರನೆಯವಳೇ ಈ ಚೆನ್ನಮ್ಮ. ನಾನು ಚೆನ್ನಚಿಕ್ಕಿ ಚೆನ್ನಚಿಕ್ಕಿ ಎಂದು ಕರೆಯುತ್ತಿದ್ದೆ. ತೀರ ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ನನಗೆ, ಇವರೆಲ್ಲ ತಾಯಿ ಪ್ರೀತಿಯನ್ನು ತೋರಿದ ಹೃದಯವಂತರು.
ತುಮಕೂರಿನ ಸಿದ್ದಗಂಗಾ ಸಂಜೆ ಕಾಲೇಜಿಗೆ 140 ರೂಪಾಯಿಗಳನ್ನು ಆ ಕಾಲದಲ್ಲಿ ಕಟ್ಟಬೇಕಾಗಿತ್ತು. ನಾನು ಮಾವಿನಕಾಯಿ ಕೀಳುವ ಕೂಲಿ ಹುಡುಗನಾಗಿ, ಗೆಳೆಯ ಮುಜೀಬುಲ್ಲನೊಂದಿಗೆ ಕೆಲಸ ಮಾಡಿ 70 ರೂಪಾಯಿಗಳನ್ನು ಸಂಪಾದನೆ ಮಾಡಿದ್ದೆ. ಉಳಿದ ಹಣಕ್ಕಾಗಿ ಎಲ್ಲ ಸಂಬಂಧಿಕರನ್ನು ಎಡತಾಕತೊಡಗಿದೆ. ಯಾರು ಹಣ ಕೊಡಲಿಲ್ಲ.
ಕಟ್ಟಕಡೆಗೆ ಬೆಂಗಳೂರಿನ ಹಳೆಗುಡ್ಡದ ಹಳ್ಳಿಯಲ್ಲಿನ ಒಂದು ವಠಾರದಲ್ಲಿ ವಾಸವಾಗಿದ್ದ ನಮ್ಮ ಲಕ್ಕಮ್ಮ ಹಾಗೂ ಚನ್ನಮ್ಮ ಚಿಕ್ಕಿಯರ ಬಳಿ ಹೋದೆ. ಅವರು ನಾಲ್ಕು ದಿನ ತಮ್ಮ ಮನೆಯಲ್ಲಿ ಇಟ್ಟುಕೊಂಡು, ಊದುಬತ್ತಿ ಹೊಸೆದು ನೂರು ರೂಪಾಯಿಗಳನ್ನು ಸಂಪಾದಿಸಿ ನನಗೆ ಕೊಟ್ಟರು. ಅದನ್ನು ತೆಗೆದುಕೊಂಡು ಹೋಗಿ ಕಾಲೇಜಿಗೆ ಪೀಸು ಕಟ್ಟಿ ಬಿ.ಎ. ಓದತೊಡಗಿದೆ.
ನನಗೆ ಮಾಡಿದ ಈ ಸಹಾಯಕ್ಕಿಂತ ಚನ್ನಚಿಕ್ಕಿ ನಮ್ಮ ಅನೇಕ ಸಂಬಂಧಿಕರಿಗೆ ಹಲವು ರೀತಿಯಲ್ಲಿ ನೆರವಾಗುತ್ತಿದ್ದರು. ಯಾರದೇ ಮನೆಯಲ್ಲಿ ಮಗು ಹುಟ್ಟಿದರೆ ಆ ಮಗುವಿನ ಹಾರೈಕೆ, ಬಾಣಂತಿತನ ಮಾಡುತ್ತಿದ್ದದ್ದೇ ಈ ಚನ್ನಚಿಕ್ಕಿ.
ನನ್ನಂತೆ ತಬ್ಬಲಿಯಾಗಿದ್ದ ನನ್ನ ಅಕ್ಕಂದಿರ ಬಾಣಂತಿತನವನ್ನು ಚಿಕ್ಕಿ ನಿಷ್ಠೆಯಿಂದ ಮಾಡಿತ್ತು. ನನ್ನ ಅಕ್ಕನ ಮಕ್ಕಳಾದ ಭಾರತಿ, ಗೀತಾ, ಸುಮ ಚೆನ್ನಚಿಕ್ಕಿಯ ಕರುಣೆಯಿಂದಲೇ ಕಣ್ಣುಬಿಟ್ಟಿದ್ದರು.
ಪತ್ನಿಯನ್ನು ಕಳೆದುಕೊಂಡು ತಮ್ಮ ಮೊದಲ ಮಗಳ ಬಾಣಂತಿತನ ಮಾಡುವ ಜವಾಬ್ದಾರಿ ಹೊತ್ತು ಗುರು ಕಿ.ರಂ.ನಾಗರಾಜ ತಲ್ಲಣಿಸುತಿದ್ದರು. ನನ್ನ ವಿನಂತಿಯ ಮೇರೆಗೆ ಚನ್ನಚಿಕ್ಕಿ ಕಿ.ರಂ. ಮನೆಯಲ್ಲಿ ಉಳಿದುಕೊಂಡು, ಅವರ ಮಗಳ ಬಾಣಂತನವನ್ನು ನಿಸೂರಾಗಿ ಮಾಡಿದ್ದರು.
ಹತ್ತಿರ ಹತ್ತಿರ 90ರ ವಯಸ್ಸನ್ನು ಮೀರಿ ಬದುಕಿದ್ದ ನಮ್ಮ ಚನ್ನಚಿಕ್ಕಿ ಈಗ ವಿಧಿವಶರಾಗಿದ್ದಾರೆ. ಅವರನ್ನು ನೋಡಿಕೊಳ್ಳಬೇಕಾಗಿದ್ದ ದೊಡ್ಡ ಮಗಳು ಶಾರದಕ್ಕ ಕರೋನ ಕಾಲದಲ್ಲಿ ತೀರಿಹೋಗಿದ್ದರು. ಎರಡನೆಯ ಮಗಳು ಜಯ್ಯನಿಗೂ ಗಂಡ ಇರಲಿಲ್ಲ. ಆಕೆಯೇ ಅತಂತ್ರವಾಗಿ ತನ್ನ ಒಬ್ಬಳೇ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಅಳಿಯ ರವಿ ತುಂಬಾ ದೊಡ್ಡ ಮನುಷ್ಯ. ತನ್ನ ಹೆಂಡತಿಯ ಅಜ್ಜಿಯನ್ನು ಆತ ಮನೆಯಲ್ಲಿ ಇಟ್ಟುಕೊಂಡು ಸಲಹುತ್ತಿದ್ದ.
ಈಗ ಚನ್ನಚಿಕ್ಕಿ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ.





