ಪ್ರಶಸ್ತಿಯ ಕನವರಿಕೆಯಲ್ಲಿ ಕಲಾವಿದ ಕುಕನೂರು ಬಾಬಣ್ಣ ಕಲ್ಮನಿ ಅಸ್ತಂಗತ

2 years ago

ಕನ್ನಡ ವೃತ್ತಿ ರಂಗಭೂಮಿಯ ಚರಿತ್ರೆಯಲ್ಲಿ ಕುಕನೂರು ಬಾಬಣ್ಣ ಕಲ್ಮನಿಯವರದು ಮರೆಯಲಾಗದ ಹೆಸರು, ಗಮನಾರ್ಹ ಸಾಧನೆ. ನಟರಾಗಿ, ಕಂಪನಿ ಮಾಲೀಕರಾಗಿ, ರಂಗ ಸಂಘಟಕರಾಗಿ ಏಳು ದಶಕಗಳಿಗೂ ಹೆಚ್ಚು ಕಾಲ ರಂಗಸೇವೆ ಮಾಡಿದ ಬಾಬಣ್ಣ ಕಲ್ಮನಿಯವರು ತಮ್ಮ 90ನೇ ವಯಸ್ಸಿನಲ್ಲಿ ಡಿಸೆಂಬರ್ 10ರಂದು ಶಾಶ್ವತವಾಗಿ ನೇಪಥ್ಯಕ್ಕೆ ಸೇರಿಹೋದರು. ಅವರ ಉಸಿರು ಹೋದರೇನಾಯ್ತು ರಂಗಭೂಮಿ ಇತಿಹಾಸದಲ್ಲಿ ಹೆಸರು ಉಳಿಯಿತು.

ಬಾಬಣ್ಣನವರ ತಾಯಿ ರೆಹಮಾನಮ್ಮ ಕಲ್ಮನಿಯವರು ವೃತ್ತಿ ರಂಗಭೂಮಿಯ ಹೆಸರಾಂತ ಕಲಾವಿದೆಯಾಗಿದ್ದರು. “ಲಲಿತ ನಾಟ್ಯ ಸಂಘ” ಎನ್ನುವ ಹೆಸರಿನ ನಾಟಕ ಕಂಪನಿ ಕಟ್ಟಿ ಹಲವಾರು ಅಡೆತಡೆಗಳನ್ನು ಮೆಟ್ಟಿ ನಿಂತು ಮುನ್ನಡೆಸಿದ್ದರು. ತಮ್ಮ ತಾಯಿಯವರ ಕಂಪನಿಯನ್ನೂ ಮುಂದುವರೆಸಿದ ಬಾಬಣ್ಣನವರು ತದನಂತರ ವಿಜಯಲಕ್ಷ್ಮಿ ನಾಟ್ಯ ಸಂಘವನ್ನು ಆರಂಭಿಸಿ ಹತ್ತು ವರ್ಷಗಳ ಕಾಲ ಮುನ್ನಡೆಸಿ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿ ಕೊನೆಗೆ ಕಂಪನಿ ಮುಚ್ಚಿ ಬೇರೆ ನಾಟಕ ಕಂಪನಿಗಳಲ್ಲಿ ಅಭಿನಯಿಸತೊಡಗಿದರು. ಬಿ.ಆರ್.ಅರಿಷಿಣಗೋಡಿಯವರ ಹುಚ್ಚೇಶ್ವರ ನಾಟ್ಯ ಸಂಘ, ಕುಮಾರೇಶ್ವರ ನಾಟ್ಯ ಸಂಘ, ಚಿಂದೋಡಿ ಲೀಲಾರವರ ನಾಟಕ ಕಂಪನಿ, ಗುಡಗೇರಿ, ಪುಟ್ಟರಾಜ ಗವಾಯಿಗಳ ನಾಟಕ ಕಂಪನಿ ಹೀಗೆ ಅನೇಕ ನಾಟಕ ಕಂಪನಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದರು. ಸ್ತ್ರೀ ಪಾತ್ರಗಳನ್ನೂ ಅಭಿನಯಿಸಿ ಪ್ರೇಕ್ಷಕರ ಮನ್ನಣೆಗೆ ಪಾತ್ರರಾಗಿದ್ದರು. 10ನೇ ವಯಸ್ಸಿಗೆ ಬಣ್ಣದ ಬದುಕಿಗೆ ಕಾಲಿಟ್ಟು ಅಭಿನಯದ ಪಯಣ ಆರಂಭಿಸಿದ್ದ ಬಾಬಣ್ಣನವರು ಎಂಟು ದಶಕಗಳ ಕಾಲ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎನ್ನುವುದು ವಿಸ್ಮಯದ ಸಂಗತಿ. ನಲಿವಿಗಿಂತ ನೋವುಗಳನ್ನೇ ಕಂಡುಂಡ ಬಾಬಣ್ಣನವರು ಅದೆಷ್ಟೇ ಸಂಕಷ್ಟಗಳು ಬಂದರೂ ರಂಗಭೂಮಿಯಿಂದ ವಿಮುಖವಾಗಲಿಲ್ಲ. ಅವರಿಗೆ ರಂಗಭೂಮಿಯೇ ಬದುಕಾಗಿತ್ತು, ರಂಗಕಲೆಯೇ ಉಸಿರಾಗಿತ್ತು.

ಬಾಬಣ್ಣನವರ ಜೊತೆ ನಾನು ಮಾತಾಡಿದ್ದೇ ಎರಡು ಸಲ. ಒಂದು ಸೂತಕದ ಸಂದರ್ಭದಲ್ಲಿ ಹಾಗೂ ಇನ್ನೊಮ್ಮೆ ಸಂಭ್ರಮದ ಸನ್ನಿವೇಶದಲ್ಲಿ. ಬಾಬಣ್ಣನವರ ತಾಯಿಯವರಾದ ವೃತ್ತಿ ರಂಗಭೂಮಿಯ ಅಭಿಜಾತ ಕಲಾವಿದೆ ರೆಹಮಾನವ್ವ ಕಲ್ಮನಿಯವರು ತೀರಿಕೊಂಡಾಗ ಸಾಂತ್ವನ ಹೇಳಲು ಪೋನ್ ಮಾಡಿ ತುಂಬಾ ಸಮಯ ಚರ್ಚಿಸಿದ್ದು ಬಿಟ್ಟರೆ ಬಾಬಣ್ಣನವರಿಗೆ ರಂಗಭೂಮಿಯ ಅತ್ಯುನ್ನತ ಪ್ರಶಸ್ತಿಯಾದ ಗುಬ್ಬಿ ವೀರಣ್ಣ ಪ್ರಶಸ್ತಿ ಘೋಷಣೆಯಾದಾಗ ಅಭಿನಂದಿಸಲು ಪೋನ್ ಮಾಡಿದ್ದೆ. ಅವತ್ತು ಅವರ ಸಂಭ್ರಮ ಹೇಳತೀರದ್ದಾಗಿತ್ತು. ಅದು ಪ್ರಶಸ್ತಿ ಬಂದ ಕಾರಣಕ್ಕಿಂತಲೂ ಪ್ರಶಸ್ತಿಯ ಜೊತೆಗೆ ರಾಜ್ಯ ಸರಕಾರ 5 ಲಕ್ಷ ರೂಪಾಯಿಗಳನ್ನು ಕೊಡುತ್ತದೆ ಎನ್ನುವ ಸಂಗತಿಯೇ ಬಾಬಣ್ಣನವರ ಖುಷಿ ನೂರ್ಮಡಿಯಾಗಲು ಕಾರಣವಾಗಿತ್ತು. ಯಾಕೆಂದರೆ ರಂಗವೇದಿಕೆಯಲ್ಲಿ ವಿಜೃಂಭಿಸಿದ್ದ ಈ ರಂಗಕಲಾವಿದ ಇಳಿವಯಸ್ಸಿನಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ವಯೋಸಹಜವಾದ ಅನಾರೋಗ್ಯವೂ ತೀವ್ರವಾಗಿ ಕಾಡತೊಡಗಿತ್ತು. ಸಂಪಾದನೆಯ ಮಾರ್ಗಗಳು ನಿಂತಾಗಿತ್ತು. ಬಾಕಿ ಬದುಕಿನ ಬಗ್ಗೆ ಚಿಂತೆ ಶುರುವಾಗಿತ್ತು. ಇಂತಹ ದುಃಸ್ಥಿತಿಯಲ್ಲಿ ಮರುಭೂಮಿಯಲ್ಲಿ ನೀರಿನ ವರತೆ ಸಿಕ್ಕಂತೆ ಪ್ರಶಸ್ತಿ ಘೋಷಣೆಯಾಗಿತ್ತು. ಅದರ ಜೊತೆಗೆ ಸಿಗುವ ಹಣ ನೀರಲ್ಲಿ ಮುಳುಗುವವನಿಗೆ ಮರದ ಬೊಡ್ಡೆ ಸಿಕ್ಕಷ್ಟು ನಿರಾಳತೆ ತಂದಿತ್ತು. ಪ್ರಶಸ್ತಿ ಪ್ರದಾನ ಮಾಡುವ ದಿನ ಇಂದು ಬರುತ್ತೆ ನಾಳೆ ಬರುತ್ತೆ ಅಂತಾ ಬಾಬಣ್ಣ ಕಾಯ್ದಿದ್ದೇ ಬಂತು. ಆ ದಿನ ಬರಲೇ ಇಲ್ಲ. ಪ್ರಶಸ್ತಿಯ ಹಣ ಕನ್ನಡಿಯೊಳಗಿನ ಗಂಟಾಯಿತು.

ಹಿಂದಿನ ಸರಕಾರ ಬದಲಾಯಿತು. ಇಂದಿನ ಸರಕಾರ ನಿರ್ಲಕ್ಷ್ಯ ತಾಳಿತು. 2021-22ನೇ ಇಸವಿಯ ಗುಬ್ಬಿ ವೀರಣ್ಣ ಪ್ರಶಸ್ತಿ ವಿತರಣೆಯ ದಿನ ನಿಗದಿಯಾಗಲೇ ಇಲ್ಲ. ಬಾಬಣ್ಣನವರ ನಿರೀಕ್ಷೆ ಫಲನೀಡಲಿಲ್ಲ. ಹಾಗಂತ ಅವರು ಆಶಾವಾದವನ್ನೂ ಬಿಡಲಿಲ್ಲ.

ಒಂದು ತಿಂಗಳ ಹಿಂದೆ ಅದೊಂದು ದಿನ ಬಾಬಣ್ಣನವರಿಂದ ನನಗೆ ಪೋನ್ ಬಂದಿತು. ದ್ವನಿಯಲ್ಲಿ ಶಕ್ತಿಯೇ ಇರಲಿಲ್ಲ. ಆರೋಗ್ಯವೂ ಸ್ಥಿರವಾಗಿರಲಿಲ್ಲ. “ಸರ್.. ಪ್ರಶಸ್ತಿ ಯಾವಾಗ ಕೊಡ್ತಾರಂತೆ ಸರ್. ತುಂಬಾ ಕಷ್ಟ ಇದೆ. ಪ್ರಶಸ್ತಿಯ ಹಣ ಬಂದರೆ ಇನ್ನೂ ಸ್ವಲ್ಪ ದಿನ ಬದುಕುತ್ತೇನೆ. ನಿಮ್ಮಂತವರು ಬರೀಬೇಕು, ಸರಕಾರದ ಮೇಲೆ ಒತ್ತಡ ತರಬೇಕು” ಎಂದು ಕಂಪಿಸುವ ದನಿಯಲ್ಲಿ ಅವಲತ್ತುಕೊಂಡರು.

ಹಿರಿಯರಾದವರು ಸರ್ ಎಂದು ಕರೆದಷ್ಟೂ ಮುಜುಗರ. ಆದರೆ ರಂಗಭೂಮಿಯವರು ಅದೆಷ್ಟೇ ಹಿರಿಯರಾದರೂ ಎನಗಿಂತ ಕಿರಿಯರಿಲ್ಲವೆಂದೇ ಬದುಕಿದವರು. ಬಾಬಣ್ಣನವರಿಗೆ ಏನು ಹೇಳಬೇಕೆಂದೇ ನನಗೆ ಗೊತ್ತಾಗಲಿಲ್ಲ. ಬರಹಕ್ಕೆ ಸ್ಪಂದಿಸುವ ಸೂಕ್ಷ್ಮತೆಯನ್ನು ಈಗಿನ ಸರಕಾರಗಳು ಕಳೆದುಕೊಂಡು ಬಹುಕಾಲವಾಗಿದೆ. ಎಷ್ಟೇ ಬರೆದು ಎಚ್ಚರಿಸಿದರೂ ಒಂದು ವರ್ಷವಾದರೂ ಅಕಾಡೆಮಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ದಾವಂತವೇ ಸರಕಾರಿ ವ್ಯವಸ್ಥೆಗಿಲ್ಲ. ಇನ್ನು ಘೋಷಿಸಿದ ಪ್ರಶಸ್ತಿಗಳನ್ನು ಕಾಲಮಿತಿಯಲ್ಲಿ ಪ್ರದಾನ ಮಾಡಲು ಸಾಧ್ಯವೇ? ಬಾಬಣ್ಣನವರ ಸಮಾಧಾನಕ್ಕೆ “ಆಯ್ತು ಸರ್, ಆರೋಗ್ಯ ಕಾಪಾಡಿಕೊಳ್ಳಿ” ಎಂದು ಹೇಳಿ ಸುಮ್ಮನಾದೆ.

ಆದರೆ ಕಡುಕಷ್ಟದಲ್ಲಿದ್ದ ಬಾಬಣ್ಣನವರು ಸುಮ್ಮನಾಗಲಿಲ್ಲ. ಪರಿಚಯದ ಪತ್ರಕರ್ತರಿಗೆಲ್ಲಾ ವಿನಂತಿಸಿಕೊಂಡರು. ಪರಿಚಯವಿರದ ಪತ್ರಿಕಾ ಸಂಪಾದಕರಿಗೂ ಪೋನ್ ಮಾಡಿ ವರದಿ ಪ್ರಕಟಿಸುವ ಮೂಲಕ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದರು. ಆದರೆ ಯಾರೂ ಅವರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ. ರಾಜಕೀಯ ಪಕ್ಷದ ನಾಯಕರು ಚುನಾವಣೆಯಲ್ಲಿ ಬ್ಯೂಜಿಯಾಗಿದ್ದರು. ಹೊಸ ಸರಕಾರ ಗ್ಯಾರಂಟಿಗಳ ಗದ್ದಲದಲ್ಲಿ ಸಾಂಸ್ಕೃತಿಕ ಕ್ಷೇತ್ರವನ್ನೇ ಟೋಟಲ್ಲಾಗಿ ನಿರ್ಲಕ್ಷಿಸಿಯಾಗಿತ್ತು. ನಿರಾಸೆಯೊಂದೇ ಬಾಬಣ್ಣನವರ ನಿತ್ಯ ಸಂಗಾತಿಯಾಗಿತ್ತು. ಆತಂಕದ ಪರಿಸ್ಥಿತಿಯಲ್ಲೂ ಆಶಾವಾದಿಯಾಗಿದ್ದರು. ಇಂದಲ್ಲಾ ನಾಳೆ ಪ್ರಶಸ್ತಿ ಕೊಡಮಾಡುವ ದಿನ ಬಂದೇ ಬರುತ್ತದೆ ಎಂದುಕೊಂಡೇ ಬದುಕು ಸಾಗಿಸುತ್ತಿದ್ದರು.

ಆದರೆ ತಾನೊಂದು ಬಗೆದರೆ ಕಾಲದ ಲೆಕ್ಕಾಚಾರವೇ ಬೇರೆಯಾಗಿರುತ್ತದೆ. ಜಡ ಸರಕಾರಕ್ಕೆ ಕರುಳೂ ಇಲ್ಲಾ ಕರುಣೆಯೂ ಇಲ್ಲವಾಗಿರುವಾಗ ನಿಷ್ಕರುಣಿಯಾದ ಕಾಲಕ್ಕೆ ಕರುಣೆ ಇರಲು ಹೇಗೆ ಸಾಧ್ಯ? ಕೊನೆಗೂ ಅತ್ಯಂತ ನಿರಾಸೆಯಿಂದ, ಅಪಾರವಾದ ಹತಾಶೆಯಿಂದ ಮಹಾನ್ ಕಲಾವಿದ ಕಾಲವಶವಾದರು.
ಕಲಾವಿದನೊಬ್ಬನ ಕೊನೆಗಾಲದ ನೆಮ್ಮದಿಯನ್ನು ಕಿತ್ತುಕೊಂಡ ಸರಕಾರಿ ವ್ಯವಸ್ಥೆ ಕಾಲಕ್ಕಿಂತಲೂ ನಿಷ್ಕರುಣೆಯಿಂದಾ ನಡೆದುಕೊಂಡಿತು. ಕಲಾವಿದನ ಕೊನೆಗಾಲದ ಆಸೆಯನ್ನೇ ಕೊಂದುಹಾಕಿತು.

ಅವತ್ತೂ ಹಾಗೇ ಆಗಿತ್ತು. ಎಸ್.ಮಾಲತಿಯವರಿಗೆ ಬಿ.ವಿ.ಕಾರಂತ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಸರಕಾರಿ ವ್ಯವಸ್ಥೆಯ ನಿಧಾನದ್ರೋಹಕ್ಕೊಳಗಾಗಿ ಪ್ರಶಸ್ತಿ ಪ್ರದಾನ ವಿಳಂಬವಾಯ್ತು. ಆದರೆ ಸಾವು ಕಾಯಲಿಲ್ಲ. ಪ್ರಶಸ್ತಿ ಪಡೆಯುವ ಮುನ್ನವೇ ಮಾಲತಿಯವರೂ ಕಾಲವಶವಾದರು. ಮರಣೋತ್ತರವಾಗಿಯಾದರೂ ಪ್ರಶಸ್ತಿ ಕೊಡಿ ಎಂದು ಜೆ.ಲೊಕೇಶರವರು ಸರ್ವ ಪ್ರಯತ್ನ ಮಾಡಿದರು. ಅದಕ್ಕೆ ಅವಕಾಶವಿಲ್ಲ ಎಂದು ಉನ್ನತ ಅಧಿಕಾರಿಗಳು ಜಾರಿಕೊಂಡರು.

ಕಲಾವಿದರ ಬಗ್ಗೆ ಒಂದಿಷ್ಟಾದರೂ ಗೌರವ ಇದ್ದಿದ್ದೇ ಆದರೆ ಈಗಿನ ಸರಕಾರವಾದರೂ ಕುಕನೂರು ಬಾಬಣ್ಣನವರಿಗೆ ಮರಣೋತ್ತರವಾಗಿ ಘೋಷಿತವಾದ ಪ್ರಶಸ್ತಿ ಕೊಡಬೇಕಿದೆ. ಪ್ರಶಸ್ತಿಯ ಹಣ ಆರ್ಥಿಕವಾಗಿ ಕಷ್ಟದಲ್ಲಿರುವ ಬಾಬಣ್ಣನವರ ಕುಟುಂಬದವರ ಬದುಕಿಗೆ ಭರವಸೆಯಾಗಬೇಕಿದೆ. ಯಾಕೆಂದರೆ ಬಾಬಣ್ಣನವರ ತಾಯಿ ರೆಹಮಾನಮ್ಮ ಕಲ್ಮನಿಯವರ ಇಡೀ ಕುಟುಂಬವೇ ಶತಮಾನದ ಕಾಲ ವೃತ್ತಿರಂಗಭೂಮಿಯಲ್ಲಿ ಸಕ್ರೀಯವಾಗಿತ್ತು. ಅಂತಹ ಕಲಾವಿದರ ಕುಟುಂಬಕ್ಕೆ ಸರಕಾರ ಎಷ್ಟೇ ಸಹಾಯ ಮಾಡಿದರೂ ಕಮ್ಮಿಯೇ. ಮರಣೋತ್ತರವಾಗಿ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಕೊಡುವ ಮೂಲಕ ಸರಕಾರದಿಂದಾದ ವಿಳಂಬಕ್ಕೆ ಸರಕಾರಿ ವ್ಯವಸ್ಥೆ ಪಶ್ಚಾತ್ತಾಪ ಮಾಡಿಕೊಳ್ಳಬೇಕಿದೆ. ಬದುಕನ್ನೇ ಕಲೆಗೆ ಸಮರ್ಪಿಸಿಕೊಂಡ ಕಲಾವಿದನಿಗೆ ಅಂತಿಮ ಗೌರವ ಸಲ್ಲಿಸಬೇಕಿದೆ. ಸಾಂಸ್ಕೃತಿಕ ಲೋಕದ ಗಣ್ಯಮಾನ್ಯರು ಹಾಗೂ ವೃತ್ತಿ ರಂಗಭೂಮಿಯ ಹಿರಿಯರು ಸರಕಾರವನ್ನು ಒತ್ತಾಯಿಸಿ ಬಾಬಣ್ಣನವರಿಗೆ ಮರಣೋತ್ತರ ಪ್ರಶಸ್ತಿ ಕೊಡಲೇ ಬೇಕೆಂದು ಆಗ್ರಹಿಸಬೇಕಿದೆ. ಕುಕನೂರಲ್ಲಿ ಬಾಬಣ್ಣನವರ ಹೆಸರಲ್ಲಿ ರಂಗಮಂದಿರವನ್ನು ಕಟ್ಟಿಸುವ ಮೂಲಕ ಅವರ ಹೆಸರನ್ನು ಅಜರಾಮರಗೊಳಿಸಬೇಕೆಂದು ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ.

  • ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ

Leave a Reply