ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಮನವಿ

2 years ago

ಬೆಂಗಳೂರು: ಸಮಾನತೆಯ ಹರಿಕಾರ ವಚನ ಚಳವಳಿಯ ನೇತಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯನ್ನಾಗಿ ಘೋಷಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಈ ಕುರಿತು ತರಳಬಾಳು ಜಗದ್ಗುರು ಮತ್ತು ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ನೇತೃತ್ವದ ಲಿಂಗಾಯತ ಸ್ವಾಮೀಜಿಗಳು, ಪ್ರಗತಿಪರ ಸ್ವಾಮೀಜಿಗಳು, ಪ್ರಗತಿಪರ ಚಿಂತಕರು ಮತ್ತು ದಲಿತ, ರೈತ, ಕಾರ್ಮಿಕ, ಮಹಿಳಾ ಚಳವಳಿಗಳ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಸಿತು.

ಮನವಿ ಸ್ವೀಕರಿಸಿ ನಿಯೋಗದ ಜತೆ ಚರ್ಚಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ವಚನ ಚಳವಳಿಯ ಅಣ್ಣ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕೆನ್ನುವ ಒಕ್ಕೊರಲ ಒತ್ತಾಯವನ್ನು ಗೌರವಿಸುತ್ತೇನೆ. ವೈಯುಕ್ತಿಕವಾಗಿ ನನಗೆ ಈ ಘೋಷಣೆ ಬಗ್ಗೆ ತಕರಾರಿಲ್ಲ. ಆದರೆ, ಇದನ್ನು ಕ್ಯಾಬಿನೆಟ್ ನಲ್ಲಿ ಇಟ್ಟು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಬಸವಾದಿ ಶರಣರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿವೆ. ವಚನ ಮತ್ತು ಸಂವಿಧಾನದ ಧ್ಯೇಯೋದ್ದೇಶಗಳು ಒಂದೇ ಆಗಿವೆ. ಆದ್ದರಿಂದ ಈ ಮಹತ್ವದ ಸಂಗತಿಯನ್ನು ಕ್ಯಾಬಿನೆಟ್ ಮುಂದೆ ಇಟ್ಟು ತೀರ್ಮಾನಿಸಲಾಗುವುದು ಎಂದರು.

ನಿಯೋಗದಲ್ಲಿ ಶ್ರೀಶೈಲ ಜಗದ್ಗುರು, ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಡಾ.ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಡಾ.ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಶ್ರೀ ವೀರಭದ್ರ ಶಿವಾ ಕಡಕಂಚಿ, ಅಕ್ಕ ಅನ್ನಪೂರ್ಣತಾಯಿ, ಜ್ಞಾನ ಪ್ರಕಾಶ ಸ್ವಾಮೀಜಿ, ಡಾ.ಗಂಗಾಬಿಕೆ ಅಕ್ಕ, ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ 48 ಸ್ವಾಮೀಜಿಗಳು, ಶರಣರು ನಿಯೋಗದಲ್ಲಿದ್ದರು.

ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ ಮತ್ತು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್ ನಿಯೋಗದ ಜೊತೆಯಲ್ಲಿ ಇದ್ದರು.

ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ವಲಯದಿಂದ ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಎಚ್.ಎಲ್.ಪುಷ್ಪ, ಮಾವಳ್ಳಿ ಶಂಕರ್, ವಸುಂಧರ ಭೂಪತಿ, ಕೆ.ಷರೀಫಾ, ಎಲ್.ಎನ್.ಮುಕುಂದರಾಜ್, ಜಾಗೃತ ಕರ್ನಾಟಕದ ಬಿ.ಸಿ.ಬಸವರಾಜು, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಹೋರಾಟಗಾರ್ತಿ ಸೌಮ್ಯ, ಅಖಿಲ, ಸೇರಿ ಹಲವು ಪ್ರಮುಖರು ನಿಯೋಗದೊಂದಿಗೆ ಇದ್ದರು.

Leave a Reply