ಕನ್ನಡ ರಾಜ್ಯವೆಂಬುದು ಹುಟ್ಟಿದ್ದು 50-60 ವರ್ಷಗಳ ಹಿಂದೆ ಅಲ್ಲ

2 years ago

ಒಕ್ಕಲು ಮಕ್ಕಳೇ ಶುಭಾಶಯಗಳು.

ಕನ್ನಡ ರಾಜ್ಯವೆಂಬುದು ಹುಟ್ಟಿದ್ದು 50-60 ವರ್ಷಗಳ ಹಿಂದೆ ಅಲ್ಲ. ಗಂಗ, ಕದಂಬ ಮುಂತಾದ ಕನ್ನಡ ಸಾಮ್ರಾಜ್ಯಗಳು ಹುಟ್ಟಿಕೊಂಡ ಒಂದು ಮುಕ್ಕಾಲು ಸಾವಿರ ವರ್ಷಗಳ ಹಿಂದೆಯೆ ಕರ್ನಾಟಕ ರಾಜ್ಯ ಹುಟ್ಟಿದೆ.
ಇದನ್ನೆಲ್ಲ ಹೇಳಿದರೆ, ನಿಮಗೆ ಇರಿಸುಮುರಿಸು ಆಗಬಹುದು. ಚರಿತ್ರೆಯ ಪುಟಗಳು ನಿಮಗೆ ಕಿರಿಕಿರಿ ಉಂಟು ಮಾಡಬಹುದು. ನನ್ನಂತಹ ಮುದುಕರು ಇದರ ಬಗ್ಗೆ ಮಾತನಾಡಿದರೆ, ನಿಮಗೆ ಮುದುಕನ ಹಳಹಳಿಕೆ ಎಂದು ಅನಿಸಬಹುದು.

ಒಕ್ಕಲಿಗ ಜನಾಂಗವು ಚರಿತ್ರೆಯ ಉದ್ದಕ್ಕೂ ಸಕಲ ಚರಾಚರ ಜೀವಿಗಳನ್ನು ಪೋಷಿಸಿದ ಜನಾಂಗ. ತಾವು ಬೆಳೆದ ದವಸ ಧಾನ್ಯಗಳನ್ನು ಕಣದಲ್ಲಿ ಇತರ ಸಣ್ಣಪುಟ್ಟ ಶ್ರಮಿಕ ಸಂಕುಲಗಳಿಗೆ ಪಡಿಕೊಟ್ಟು ಸಲುಹಿದ ಜನಾಂಗ ಎನ್ನುವ ಹೆಮ್ಮೆ ನಮಗೆ ಇರಬೇಕು. ತಾವು ಹಸಿದಿದ್ದರೂ, ಇತರ ಜಾತಿ ಜನಾಂಗಗಳನ್ನು ಪೊರೆದವರು ನಮ್ಮ ಪೂರ್ವಿಕರು. ಬದಲಾದ ಈ ಕಾಲಮಾನದಲ್ಲಿ ಒಕ್ಕಲಿಗರ ಈ ಸಂಸ್ಕೃತಿ ಯಾವುದೇ ಕಾರಣಕ್ಕೂ ಬದಲಾಗಿಲ್ಲ. ಆದರೆ ಒಕ್ಕಲಿಗ ಜನಾಂಗದಲ್ಲಿ ಹುಟ್ಟಿ, ಬ್ರಾಹ್ಮಣ್ಯದ ಗುಲಾಮಗಿರಿಗೆ ಬಿದ್ದವರು ಮಾತ್ರ ಇದನ್ನು ನೆನಪಿಸಿಕೊಳ್ಳುತ್ತಿಲ್ಲ. ಅವರಿಗೆ ಹಿಂದೂ, ಸನಾತನ ಧರ್ಮದ ನಶೆ ಏರಿದೆ. ನಶೆ ಅಥವಾ ಮತ್ತೇರಿದವರಿಗೆ ವಾಸ್ತವ ಸತ್ಯಗಳನ್ನು ಅರ್ಥ ಮಾಡಿಸುವುದು ಬಹಳ ಕಷ್ಟ. ಒಮ್ಮೆ ವಿದೇಶಿ ಆರ್ಯ ಪುರೋಹಿತರ ಕಪಿಮುಷ್ಟಿಗೆ ಸಿಕ್ಕಿದರೆ, ಈ ಒಕ್ಕಲಿಗ ಜನಾಂಗ ಎಂದಿಗೂ ಬದಲಾಗಲಾರದು‌. ಪುರೋಹಿತರು ಹೇಳುವ ಮಾತುಗಳನ್ನೇ ಸತ್ಯ ಎಂದು ಉತ್ಕಂಠಿತರಾಗಿ ನಂಬಿಬಿಡುತ್ತಾರೆ. ಇದನ್ನು ನಾನು ಹಲವಾರು ವರ್ಷಗಳಿಂದ ಹೇಳುತ್ತಲೇ ಇದ್ದೇನೆ.

ತೀರ ಇತ್ತೀಚಿಗೆ ಎಂದರೆ ಕಳೆದ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳ ಹಿಂದೆ ಬಿಡದಿಯಲ್ಲಿ ನಡೆದ ಜೆಡಿಎಸ್ ಪಕ್ಷದ ತಳ ಸಮುದಾಯಗಳ ಚಿಂತನ ಶಿಬಿರದಲ್ಲಿ ಮಾತನಾಡಿದ್ದೆ. ವೇದಿಕೆಯಲ್ಲಿ ಬಂಡೆಪ್ಪ ಕಾಶಂಪುರ್, ಡಾ. ಅನ್ನದಾನಿ ಮುಂತಾದ ಜೆಡಿಎಸ್ ಶಾಸಕರು ಆಸೀನರಾಗಿದ್ದರು. ಸಭಿಕರ ಸಾಲಿನಲ್ಲಿ ನಮ್ಮೆಲ್ಲರ ಹೆಮ್ಮೆಯ ಮಾಜಿ ಪ್ರಧಾನಿ ಸನ್ಮಾನ್ಯ ದೇವೇಗೌಡರು ಹಾಗೂ ಕುಮಾರಸ್ವಾಮಿ ಕುಳಿತಿದ್ದರು.
ಒಕ್ಕಲಿಗರು ಸೇರಿದಂತೆ ಎಲ್ಲ ಕೆಳಜಾತಿಯವರನ್ನು ಸಾವಿರಾರು ವರ್ಷಗಳಿಂದ ವೈದಿಕರು ಯಾವ ರೀತಿಯಲ್ಲಿ ಶೋಷಣೆಗೆ ಒಳಪಡಿಸಿದ್ದರು ಎಂಬುದನ್ನು ಸಾಕ್ಷಿಗಳ ಸಮೇತವಾಗಿ ವಿವರಿಸಿ ಹೇಳಿದ್ದೆ. ಬುದ್ಧ, ಬಸವಣ್ಣ, ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ಪೆರಿಯಾರ್, ಕುವೆಂಪು ಮುಂತಾದವರು ಈ ಬಗ್ಗೆ ಹೇಳಿರುವ ಮಾತುಗಳನ್ನು ಅಲ್ಲಿ ಉಲ್ಲೇಖ ಮಾಡಿದ್ದೆ.

ವೇದಿಕೆಯಿಂದ ಕೆಳಗಿಳಿದು ಬಂದಾಗ ಸನ್ಮಾನ್ಯ ದೇವೇಗೌಡರು ನನ್ನನ್ನು ಹತ್ತಿರಕ್ಕೆ ಕರೆದು ಮೈದಡವಿ, “ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ, ನನ್ನ ಮೈಮೇಲಿನ ಕೂದಲುಗಳು ಎದ್ದು ನಿಂತು, ರೋಮಾಂಚನವಾಯಿತು. ಒಮ್ಮೆ ನಮ್ಮ ಮನೆಗೆ ಊಟಕ್ಕೆ ಬನ್ನಿ” ಎಂದು ಪ್ರೀತಿಯ ಮಾತುಗಳನ್ನು ಹೇಳಿದರು. ಕರ್ನಾಟಕದ ಚಾರಿತ್ರಿಕ ಪುರುಷನೊಬ್ಬನ ಬಾಯಲ್ಲಿ ಈ ಮಾತುಗಳನ್ನು ಕೇಳಿದ ನನ್ನ ಜನ್ಮ ಸಾರ್ಥಕವೆನಿಸಿತ್ತು. ಮಾನ್ಯ ಕುಮಾರಸ್ವಾಮಿ ನನ್ನನ್ನು ತಮ್ಮ ಶಾಸಕರೊಂದಿಗೆ ಊಟಕ್ಕೆ ಕರೆದೊಯ್ದರು. ನನಗೋ ಸಂಕೋಚವೋ ಸಂಕೋಚ. ಮಾಜಿ ಮುಖ್ಯ ಮಂತ್ರಿಗಳೊಂದಿಗೆ ಹೇಗೆ ಊಟ ಮಾಡಬೇಕು ಎಂಬುದು ಹಳ್ಳಿಗನಾದ ನನಗೆ ಗೊತ್ತಿರಲಿಲ್ಲ. ಅಲ್ಲಿಗೆ ಹೋಗಲು ನನ್ನನ್ನು ಒಪ್ಪಿಸಿ ಕಳಿಸಿದ ಗೆಳೆಯ ವಿಶುಕುಮಾರ್ ಹಾಗೂ ವಿಧಾನಪರಿಷತ್ ಸದಸ್ಯರಾಗಿದ್ದ ಮಾನ್ಯ ತಿಪ್ಪೇಸ್ವಾಮಿಯವರನ್ನು ನಾನು ಎಂದಿಗೂ ಮರೆಯಲಾರೆ.

ಅಂದು ನನ್ನ ಮಾತುಗಳನ್ನು ಕೇಳಿದ ಕಾರಣಕ್ಕೋ, ಅಥವಾ ಬೇರೆ ಪುಸ್ತಕಗಳನ್ನು ಅಧ್ಯಯನ ಮಾಡಿದ ಕಾರಣಕ್ಕೋ ಕುಮಾರಸ್ವಾಮಿಯವರು ಬಿಜೆಪಿಯ ಪೇಶ್ವೆಗಳನ್ನು ಖಂಡತುಂಡವಾಗಿ ಟೀಕಿಸಿದ್ದನ್ನು ಕರ್ನಾಟಕದ ಜನತೆ ಮರೆತಿಲ್ಲ.

ಮೇ ಚುನಾವಣೆಯ ಸಂದರ್ಭದಲ್ಲಿ ನಾನು ಇಡೀ ಕರ್ನಾಟಕ ರಾಜ್ಯದಾದ್ಯಂತ ಸುತ್ತಿದೆ. ಅನೇಕ ಕಡೆ ಪತ್ರಿಕಾಗೋಷ್ಠಿಗಳು ಹಾಗೂ ಸಭೆಗಳಲ್ಲಿ ಬಿಜೆಪಿಯ ವಿರುದ್ಧ ಸಾಕಷ್ಟು ಮಾತನಾಡಿದೆ. ಬಿಜೆಪಿಯನ್ನು ಸೋಲಿಸಬಲ್ಲ ಯಾವುದೇ ಪಕ್ಷದ ಸಮರ್ಥ ಅಭ್ಯರ್ಥಿ ಅಥವಾ ಸ್ವತಂತ್ರ ವ್ಯಕ್ತಿಯಾದರೂ ಪರವಾಗಿಲ್ಲ, ಅವನನ್ನು ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದೆ. ಜೆಡಿಎಸ್ ಗೆಲ್ಲಬಲ್ಲ ಕ್ಷೇತ್ರಗಳಲ್ಲಿ ಆ ಪಕ್ಷದ ಪರವಾಗಿಯೂ ಪ್ರಚಾರ ಮಾಡಿದೆ. ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಜಯ ತಂದು ಕೊಟ್ಟರು. ಬಿಜೆಪಿ ಸೋತು ಸುಣ್ಣವಾಯಿತು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಭರದಲ್ಲಿ ಕನ್ನಡಿಗರು ಜೆಡಿಎಸ್ ಪಕ್ಷವನ್ನು ಗುಡಿಸಿ ಹಾಕಿದರು. ಜೆಡಿಎಸ್ ಗೆದ್ದರೆ ಮತ್ತೆ ಎಲ್ಲಿ ಹೋಗಿ ಬಿಜೆಪಿಯವರೊಂದಿಗೆ ಕೈಜೋಡಿಸಿ, ಅವರ ಅಧಿಕಾರಕ್ಕೆ ಮೆಟ್ಟಿಲಾಗಿ ಬಿಡುತ್ತಾರೋ ಎನ್ನುವ ಆತಂಕ ನಮ್ಮ ಜನರ ಮನಸ್ಸಿನಲ್ಲಿ ಮನೆ ಮಾಡಿತ್ತು ಎಂದನಿಸುತ್ತದೆ.

ಜನರ ಈ ತೀರ್ಮಾನವನ್ನು ರಾಜಕೀಯ ಪಕ್ಷಗಳು ಸಹಜವಾಗಿ ಗೌರವಿಸಿ ಒಪ್ಪಿಕೊಳ್ಳಬೇಕು. ಆದರೆ ಕುಮಾರಸ್ವಾಮಿಯವರು ಹತಾಶಗೊಂಡಂತೆ ಬಿಜೆಪಿಯ ಮೈತ್ರಿಯತ್ತ ಕೈಚಾಚಿ ಹೊರಟರು.

ಇದರಿಂದ ಉಂಟಾಗುವ ದುಷ್ಪರಿಣಾಮಗಳು ನಿಜಕ್ಕೂ ಘನ ಘೋರವಾಗಲಿವೆ. ಸದ್ಯಕ್ಕೆ ಕಾಂಗ್ರೆಸ್ ವಿರೋಧಿ ನಿಲುವಿನ ಕಾರಣಕ್ಕಾಗಿ ಕುಮಾರಸ್ವಾಮಿ ಅವರು ಬಿಜೆಪಿಯ ಕಡೆಗೆ ಹೊರಟಿರಬಹುದು. ಮುಂದಿನ ರಾಜಕೀಯ ಮೇಲಾಟದಲ್ಲಿ ಅವರು ಬಿಜೆಪಿಯನ್ನು ನಿಂದಿಸುತ್ತಾ, ಅಲ್ಲಿಂದ ಹೊರಬಂದರೂ ಬರಬಹುದು. ಆದರೆ ಅವರ ಜೊತೆಗೆ ಈಗ ಹೋಗುತ್ತಿರುವ ಲಕ್ಷಾಂತರ ಕಾರ್ಯಕರ್ತರು ಬಿಜೆಪಿಯನ್ನು ಬಿಟ್ಟು ಬರಲಾರರು. ಅದರಲ್ಲೂ ಜೆಡಿಎಸ್ ಪಕ್ಷದ ಬಗೆಗೆ ಅಪಾರ ಅಭಿಮಾನವುಳ್ಳ ಒಕ್ಕಲಿಗ ಜನಾಂಗದ ತರುಣರು ಒಮ್ಮೆ ಬಿಜೆಪಿಯ ಚಕ್ರವ್ಯೂಹದ ಒಳಗೆ ಹೋದರೆ, ಅಲ್ಲಿಂದ ವಾಪಸ್ ಬರಲು ಸಾಧ್ಯವಾಗುವುದಿಲ್ಲ. ಆನಂತರ ಅವರು ಬಿಜೆಪಿಯ ಅಂಧ ಭಕ್ತರಾಗಿ ಕುಮಾರಸ್ವಾಮಿಯವರನ್ನು ನಿಂದಿಸುವುದರ ಜೊತೆಗೆ ನಮ್ಮೆಲ್ಲರ ಹೆಮ್ಮೆಯ ಕನ್ನಡಿಗ, ಚಾರಿತ್ರಿಕ ಪುರುಷ ದೇವೇಗೌಡರನ್ನು ನಿಂದಿಸತೊಡಗುತ್ತಾರೆ.
ಈ ಮಾತಿಗೆ ಸಾಕ್ಷಿಯಾಗಿ ನಾವು ಬಂಗಾರಪ್ಪನವರ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಕಾಂಗ್ರೆಸ್ ಪಕ್ಷದ ಮೇಲಿನ ಕೋಪದಿಂದ ಅವರು ಬಿಜೆಪಿಗೆ ಪಕ್ಷಾಂತರ ಮಾಡುತ್ತಾರೆ. ಅವರೊಂದಿಗೆ ಹಾಲಪ್ಪ, ಬೇಲೂರು ಗೋಪಾಲಕೃಷ್ಣ ಮುಂತಾದ ಶಾಸಕರು ಸೇರಿದಂತೆ ಅನೇಕ ಜನ ಶಿಷ್ಯರು, ಅಭಿಮಾನಿಗಳು ಬಿಜೆಪಿ ಸೇರಿಕೊಳ್ಳುತ್ತಾರೆ. ಮತ್ಯಾವುದೋ ಸಂದರ್ಭದಲ್ಲಿ ಬಂಗಾರಪ್ಪನವರಿಗೆ ಬಿಜೆಪಿಯ ಬ್ರಾಹ್ಮಣ್ಯದಿಂದ ಉಸಿರು ಕಟ್ಟಿದಂತಾಗಿ, ಅವರು ಬಿಜೆಪಿಗೆ ರಾಜೀನಾಮೆ ಕೊಟ್ಟು ಹೊರ ಬರುತ್ತಾರೆ. ದುರಂತವೆಂದರೆ ಅವರೊಂದಿಗೆ ಹೋಗಿದ್ದ ಶಾಸಕರಾಗಲಿ, ಮತದಾರರಾಗಲಿ, ಅಭಿಮಾನಿಗಳಾಗಲಿ ಬಿಜೆಪಿಯನ್ನು ಬಿಟ್ಟು ಬರುವುದಿಲ್ಲ. ಅವರು ಅಲ್ಲಿಯೇ ಉಳಿಯುತ್ತಾರೆ. ಬಂಗಾರಪ್ಪ ಏಕಾಂಗಿಯಾಗುತ್ತಾರೆ. ಇದೇ ಪರಿಸ್ಥಿತಿ ನಾಳೆ ಕುಮಾರಸ್ವಾಮಿಯವರಿಗೂ ಬರುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಇದೆ. ಅಧಿಕಾರ ಸ್ಥಾನಮಾನಗಳ ಆಸೆಯ ಕಾರಣಕ್ಕೋ, ಕುಟುಂಬದ ಹಿತ ಸಂರಕ್ಷಣೆಗೊ ಅಥವಾ ಬಿಜೆಪಿ ಸೃಷ್ಟಿಸಿರುವ ಭಯದ ಕಾರಣಕ್ಕೋ ಇಂದು ಕುಮಾರಸ್ವಾಮಿ, ಬಿಜೆಪಿಯ ಕದ ತಟ್ಟುತ್ತಿರಬಹುದು. ಅವರ ಎಲ್ಲ ಸಮಸ್ಯೆಗಳಿಗೂ ತಾತ್ಕಾಲಿಕ ಪರಿಹಾರವೂ ದೊರೆಯಬಹುದು. ಆದರೆ, ಇದು ಶಾಶ್ವತ ಅಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ನಾಳೆ ಕುಮಾರಸ್ವಾಮಿ ಏನಾದರೂ ಒಂದು ಸಣ್ಣ ಎಡವಟ್ಟು ಮಾಡಿ ಬಿಜೆಪಿ ವಿರುದ್ಧ ನಿಂತರೆ ಅವರನ್ನು, ಅವರ ಕುಟುಂಬವನ್ನು, ಜೆಡಿಎಸ್ ಪಕ್ಷವನ್ನು, ಜೊತೆಗೆ ಒಕ್ಕಲಿಗ ಜನಾಂಗವನ್ನು ಬಿಜೆಪಿಯ ಬ್ರಾಹ್ಮಣ್ಯ ಸರ್ವನಾಶ ಮಾಡುವ ಅಪಾಯ ಕಾದಿದೆ. ಆ ಮೂಲಕ ಕರ್ನಾಟಕದ ಕನ್ನಡಿಗರ ಭವಿಷ್ಯವೂ ನಾಶವಾಗಲಿದೆ. ಕರ್ನಾಟಕದ ಅಸ್ಮಿತೆ ನೆಲ ಜಲ ಭಾಷೆ ಸಂಸ್ಕೃತಿ ಇತಿಹಾಸ ಎಲ್ಲವನ್ನು ಉತ್ತರ ಭಾರತೀಯರು ಹೊಸಕಿ ಹಾಕಲಿದ್ದಾರೆ.

ಗಟ್ಟಿಯಾದ ಪ್ರಾದೇಶಿಕ ಪಕ್ಷವಾಗಿ ಬೆಳೆಯಬೇಕಾದ ಜೆಡಿಎಸ್ ಪಕ್ಷ, ಬಿಜೆಪಿಯಂತಹ ಹೆಬ್ಬಾವಿನ ಹೊಟ್ಟೆಯೊಳಗೆ ಕರಗಿ ಹೋಗುತ್ತದೆ. ನಾಳೆ ಕಾಂಗ್ರೆಸ್ ಬಗ್ಗೆ ಜನತೆ ಭ್ರಮ ನಿರಸನಗೊಂಡರೆ, ಅವರಿಗೆ ಜೆಡಿಎಸ್ ಎನ್ನುವ ಪರ್ಯಾಯ ಪಕ್ಷದ ಆಯ್ಕೆ ಎದುರಿಗಿದ್ದರೆ ಒಳ್ಳೆಯದಲ್ಲವೇ. ಜೆಡಿಎಸ್ ಬಗ್ಗೆ ನಮಗೆಲ್ಲ ಪ್ರಾದೇಶಿಕ ಅಸ್ಮಿತೆಯನ್ನು ಕಾಪಾಡಿಕೊಳ್ಳುವ ಪಕ್ಷ ಎನ್ನುವ ನಿರೀಕ್ಷೆ ಇದೆ. ಆ ನಿರೀಕ್ಷೆಯು ಹುಸಿಯಾದರೆ, ಕನ್ನಡ ನಾಡಿನ ಕಥೆ ಏನು?

ಇದು ರಾಜಕೀಯ ಕ್ಷೇತ್ರದ ತಲ್ಲಣವಾದರೆ, ಕನ್ನಡದ ಸಾಂಸ್ಕೃತಿಕ ಲೋಕದ ತಲ್ಲಣ ಮತ್ತೊಂದು ರೀತಿಯಲ್ಲಿದೆ. ಬಿಜೆಪಿ ತನ್ನ ಪರಂಪರಾಗತ ವೈದಿಕ ಸನಾತನಿ ದುರ್ಗುಣಕ್ಕೆ ತಕ್ಕಂತೆ, ನಮ್ಮ ನಾಡಿನ ಬುದ್ಧಿಜೀವಿಗಳನ್ನು ಅತ್ಯಂತ ಹೀನಾಯವಾಗಿ ಹಂಗಿಸುತ್ತಿದೆ. ಅದಕ್ಕಾಗಿಯೇ ಹಲವು ತಂಡಗಳನ್ನು ತಯಾರುಮಾಡಿ, ಕನ್ನಡ ಸಾಂಸ್ಕೃತಿಕ ಲೋಕದ ಗಣ್ಯರ ಮೇಲೆ ಎರಡು ರೂಪಾಯಿ ಕೂಲಿ ಸಂಬಳ ಕೊಟ್ಟು ಛೂ ಬಿಟ್ಟಿದೆ. ಹೆದರಿಸಿ, ಬೆದರಿಸಿ, ಭಯ ಸೃಷ್ಟಿಸಿ, ಅವಮಾನಿಸಿ ಬುದ್ಧಿಜೀವಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ತಮ್ಮ ಬೇಳೆ ಬೇಯುತ್ತದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತು.

ಜೆಡಿಎಸ್ ಪಕ್ಷದಲ್ಲೂ ಕೆಲವು ಬುದ್ಧಿವಂತ ಹುಡುಗರು ಇದ್ದಾರೆ. ಅವರಿಗೆ ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಹಾಗೂ ಒಕ್ಕಲಿಗ ಜನಾಂಗದ ಬಗ್ಗೆ ಬಹುದೊಡ್ಡ ಅಭಿಮಾನವಿದೆ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಕುರುಡು ಕುದುರೆಗಳಂತೆ ಅವರು ತಮ್ಮ ನಾಯಕನನ್ನು ಹಿಂಬಾಲಿಸಿ ಬಿಜೆಪಿಗೆ ಹೋಗುತ್ತಾರೆ. ಅಲ್ಲಿಗೆ ಹೋದ ಮೇಲೆ ಅವರು ಬಿಜೆಪಿಯ ಕಾರ್ಯಕರ್ತರಂತೆ ವರ್ತಿಸತೊಡಗುತ್ತಾರೆ. ಜೆಡಿಎಸ್ ಪಕ್ಷದ ಜಾತ್ಯತೀತ ಪರಿಕಲ್ಪನೆಯನ್ನು ಅವರು ಮರೆತುಬಿಡುತ್ತಾರೆ. ಬಿಜೆಪಿ ಕಾರ್ಯಕರ್ತರಂತೆ, ಮುಸ್ಲಿಮರ ಮೇಲೆ ನಿತ್ಯವೂ ಸುಳ್ಳುಗಳ ಮಳೆ ಸುರಿಸುತ್ತಾರೆ. ಈ ಸುಳ್ಳುಗಳನ್ನು ಬಿಜೆಪಿಯ ಐಟಿ ಸೆಲ್ ಸೃಷ್ಟಿಸಿಕೊಡುತ್ತದೆ ಎಂಬುದನ್ನು ಮರೆಯಬಾರದು. ನಮ್ಮಂತವರು ಯಾವುದೇ ವಾಸ್ತವ ಸಂಗತಿಗಳನ್ನು ತಿಳಿಸಿದರು, ಅವರು ಅದನ್ನು ಧಿಕ್ಕರಿಸಿ ನಿಲ್ಲುತ್ತಾರೆ. ಕೀಳು ಮಟ್ಟದ ಭಾಷೆಯನ್ನು ಬಳಸಿ, ನಮ್ಮ ವಿರುದ್ಧ ಅವಮಾನಕರವಾಗಿ, ಪಶುಗಳಂತೆ ಮಾತನಾಡತೊಡಗುತ್ತಾರೆ. ಈ ಮನುಷ್ಯ ರೂಪದ ಪ್ರಾಣಿಗಳ ಜೊತೆ ಮಾತನಾಡುವುದಕ್ಕಿಂತ ತೆಪ್ಪಗಿರುವುದೇ ವಾಸಿ ಎನ್ನುವ ಅಭಿಪ್ರಾಯಕ್ಕೆ ನಮ್ಮಂತವರು ಬಂದುಬಿಡುತ್ತೇವೆ.

ನಾವು ಅಂತಿರಲಿ, ಅವಕಾಶ ಸಿಕ್ಕರೆ ಕುವೆಂಪು ಅವರಂತಹ ಧೀಮಂತ ವ್ಯಕ್ತಿತ್ವವನ್ನು ಇವರು ಬಾಯಿಗೆ ಬಂದಂತೆ ಟೀಕಿಸಿ ಮಾತನಾಡುವ ದುಸ್ಸಾಹಸ ಮಾಡುತ್ತಾರೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಸಿಲುಕಿರುವ ಒಕ್ಕಲಿಗ ತರುಣ ತರುಣಿಯರನ್ನು ಬಿಜೆಪಿಯ ಪುರೋಹಿತಶಾಹಿ ಕಪಿ ಮುಷ್ಠಿಯಿಂದ ಹೊರತರುವ ದಾರಿಗಳನ್ನು ಒಕ್ಕಲಿಗ ಜನಾಂಗದ ಹಿರಿಯರು, ಮಠಾಧೀಶರು, ಪ್ರಜ್ಞಾವಂತರು, ರಾಜಕಾರಣಿಗಳು, ಸಂಘ ಸಂಸ್ಥೆಗಳ ಮುಖಂಡರು ಮಾಡುವ ಅನಿವಾರ್ಯತೆ ಇದೆ.

  • ಎಲ್.ಎನ್. ಮುಕುಂದರಾಜ್, ಹಿರಿಯ ಸಾಹಿತಿ

Leave a Reply