ನಗುಮುಖದಿಂದ ಎಲ್ಲರನ್ನು ಕೈ ಮುಗಿಯುತ್ತಾ ಸ್ವಾಗತಿಸುತ್ತಿದ್ದ ನಿಮ್ಮ ಆ ಮುಖ ಸದಾ ನೆನಪಾಗುತ್ತದೆ. ಸದ್ದುಗದ್ದಲವಿಲ್ಲದೆ ಸುದ್ದಿ ಮಾಡದೆ ಪ್ರತಿ ಶನಿವಾರ ಬೆಂಗಳೂರು ನಗರದ ವೀಕ್ಷಣೆ ಮಾಡುತ್ತಿದ್ದ ನಿಮ್ಮ ಕಾರ್ಯವೈಕರಿ ನೆನಪಾಗುತ್ತಿದೆ. ಪ್ರತಿದಿನವೂ ಬೆಂಗಳೂರಿನಲ್ಲಿ ಇದ್ದ ಎಲ್ಲ ಸಂದರ್ಭದಲ್ಲಿ ಜನತಾದರ್ಶನದ ಮೂಲಕ ನಾಗರಿಕರ ಸಮಸ್ಯೆಗಳನ್ನ ಆಲಿಸುತ್ತಿದ್ದ ನಿಮ್ಮ ದೈನಂದಿನ ಕಾರ್ಯಕ್ರಮ ನೆನಪಾಗುತ್ತಿವೆ. ಬೆಂಗಾವಲು ವಾಹನಗಳಿಲ್ಲದೆ ಅಂಗರಕ್ಷಕರ ಪಡೆಗಳಿಲ್ಲದೆ ಮುಖ್ಯಮಂತ್ರಿ ಆಗಿ ಸಾಮಾನ್ಯರಂತೆ ತಾವು ಕಾರಿನಲ್ಲಿ ಓಡಾಡುತ್ತಾ ಸಿಗ್ನಲ್ ದೀಪಗಳ ಆದೇಶಗಳಿಗಾಗಿ ಕಾಯುತ್ತಿದ್ದ ನಿಮ್ಮ ಕಾರ್ಯವೈಕರಿ ನೆನಪಾಗುತ್ತಿದೆ.
ಜಾತಿ ಮತ ಧರ್ಮದ ಅಥವಾ ಬಡವ ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರನ್ನೂ ಅವರ ಪ್ರತಿಭೆಗಳಿಗೆ ಅನುಗುಣವಾಗಿ ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರೋತ್ಸಾಹಿಸುತ್ತಿದ್ದ ನಿಮ್ಮ ಜಾತ್ಯತೀತ ಮನೋಭಾವ ನೆನಪಾಗುತ್ತಿದೆ.
ಅರಸುರವರ ನಂತರ ಎರಡನೇ ಹಂತದ ನಾಯಕತ್ವಕ್ಕೆ ಚಾಲನೆ ನೀಡಿದ ಮತ್ತು ಮಂತ್ರಿಮಂಡಲದ ಸದಸ್ಯರುಗಳಿಗೆ ಸ್ವಾತಂತ್ರ್ಯವನ್ನು ನೀಡಿ ಅವರ ಉತ್ತಮ ಕಾರ್ಯಗಳಿಗೆ ಉತ್ತೇಜಿಸುತ್ತಿದ್ದ ನಿಮ್ಮ ಮನೋಭಾವ ನೆನಪಾಗುತ್ತಿದೆ.
ತಮ್ಮ ಕುಟುಂಬದವರ ಹಿತಕ್ಕಾಗಿ ರಾಜಕಾರಣದಲ್ಲಿ ಅವಕಾಶವಾದವನ್ನು ಸಿದ್ಧಾಂತವೆಂದು ಪ್ರತಿಪಾದಿಸುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಕುಟುಂಬದವರನ್ನು ರಾಜಕಾರಣದಿಂದ ದೂರವಿಟ್ಟು ಕುಟುಂಬದ ರಾಜಕಾರಣಕ್ಕೆ ಅವಕಾಶವನ್ನು ನೀಡದ ನಿಮ್ಮ ವಿಚಾರಧಾರೆ ನೆನಪಾಗುತ್ತಿವೆ.
ಮಹಾತ್ಮ ಗಾಂಧೀಜಿರವರ ಕನಸಾದಂತಹ ಅಧಿಕಾರ ವಿಕೇಂದ್ರೀಕರಣವನ್ನು ಜಾರಿಗೊಳಿಸಿ 52 ಸಾವಿರ ಜನ ರಾಜ್ಯದ ಪ್ರಜೆಗಳಿಗೆ ಅಧಿಕಾರವನ್ನು ಹಂಚಿದಂತಹ ನಿಮ್ಮ ಪ್ರಜಾಪ್ರಭುತ್ವದ ಪ್ರೇಮ ನಮಗೆ ನೆನಪಾಗುತ್ತಿವೆ.
ಕೂಲಿ ಮಾಡುತ್ತಿದ್ದ ಹೆಣ್ಣು ಮಕ್ಕಳಿಗೆ ಗರ್ಭಿಣಿಯಾದ ಸಂದರ್ಭದಲ್ಲಿ ನಿಮ್ಮ ಆಲೋಚನೆ ನಮಗೆ ಸದಾ ನೆನಪಾಗುತ್ತಿದೆ.
ನಿಮ್ಮ ಶುದ್ಧವಾದ ಕನ್ನಡ ಭಾಷೆಯ ಬಳಕೆ ಮತ್ತು ಕನ್ನಡದ ಮೇಲಿದ್ದ ಪ್ರೀತಿ ಅದಕ್ಕಾಗಿ ಕನ್ನಡ ಕಾವಲು ಸಮಿತಿಯನ್ನ ರಚಿಸಿದ್ದು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನವನ್ನು ನೀಡುತ್ತಿದ್ದಿದ್ದು ರಾಜಕೀಯ ಸಮಾರಂಭವನ್ನು ಹೊರತುಪಡಿಸಿ ಬೇರೆ ಎಲ್ಲ ಸಮಾರಂಭಗಳಲ್ಲಿ ರಾಜಕಾರಣದ ಲವ ಶೇಷಗಳಿಲ್ಲದ ನಿಮ್ಮ ಪ್ರಭುದ್ಧವಾದ ಮಾತುಗಳು ನಮಗೆ ನೆನಪಾಗುತ್ತಿದೆ.
ನಿಮ್ಮ ಲೋಕಾಯುಕ್ತ ವ್ಯವಸ್ಥೆಯ ಪ್ರತಿದಿನವೂ ನೆನಪಾಗುತ್ತಿದೆ.
ಬೆಂಗಳೂರು ನಗರದಲ್ಲಿ ಹಸಿರು ವಲಯವನ್ನ ಕಾಪಾಡುವ ಸಲುವಾಗಿ ನಿಮ್ಮ ಮುಂದಾಲೋಚನೆಯ ಕ್ರಮಗಳು ಬೆಂಗಳೂರು ನಗರದಲ್ಲಿ ಕೋಟ್ಯಂತರ ಸಸಿಗಳನ್ನು ನೆಟ್ಟು ಪರಿಸರವನ್ನ ಉಳಿಸಿದಂತಹ ಆ ನಿಮ್ಮ ಕಾಳಜಿ ನಮಗೆ ನೆನಪಾಗುತ್ತಿದೆ.
ಗೂಂಡಾಗಳ ಹುಟ್ಟನ್ನು ಅಡಗಿಸಿ ರಾಜ್ಯದ ಜನರಿಗೆ ವಿಶೇಷವಾಗಿ ಬೆಂಗಳೂರು ನಗರದ ಜನರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಟ್ಟ ಆ ನಿಮ್ಮ ಆಡಳಿತ ನಡೆಸಿದ ರೀತಿ ಸದಾ ನೆನಪಾಗುತ್ತಿದೆ.
ನಿಮ್ಮಿಂದ ರಾಜಕೀಯವಾಗಿ ಉನ್ನತ ಸ್ಥಾನಕೇರಿದ ಅನೇಕ ನಾಯಕರು ಸಂಕಷ್ಟದ ಕಾಲದಲ್ಲಿ ನಿಮ್ಮ ನಡುವೆ ಇಲ್ಲದಿದ್ದರೂ ನಿಮ್ಮ ಜಾತಿಯವರಲ್ಲದ ನಾಡಿನ ಲಕ್ಷಾಂತರ ಮಂದಿ ನಿಮ್ಮ ಜೊತೆಯಲ್ಲಿದ್ದು ನಿಮ್ಮನ್ನು ಬೆಂಬಲಿಸುತ್ತಿದ್ದ ಆ ಜನಸಾಗರದ ಚಿತ್ರಣ ಈಗಲೂ ನೆನಪಾಗುತ್ತಿದೆ.
ನೀವು ಆರು ಬಾರಿ ಶಾಸಕರಾಗಿ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ 12 ಮುಂಗಡ ಪತ್ರಗಳನ್ನು ರಾಜ್ಯದ ಹಣಕಾಸು ಸಚಿವರಾಗಿ ಮಂಡಿಸಿ ರಾಜ್ಯದ ಮುಖ್ಯಮಂತ್ರಿಯು ಆಗಿ ಕೇಂದ್ರದ ಸಚಿವರು ಆಗಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಿಮ್ಮದೇ ಆದ ವ್ಯಕ್ತಿತ್ವವನ್ನ ಮತ್ತು ಛಾಪನ್ನು ಮೂಡಿಸಿರುವಂತಹ ನಿಮ್ಮ ಹಿರಿತನ ನೆನಪಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗಳು ರಾಜ್ಯ ಸರ್ಕಾರದ ವಿಚಾರಗಳಲ್ಲಿ ಪದೇಪದೇ ಮೂಗು ತೂರಿಸುವ ಘಟನೆಗಳನ್ನು ನೋಡುತ್ತಿದ್ದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಇರಬೇಕಾದಂತಹ ಬಾಂಧವ್ಯ ಮತ್ತು ಹಕ್ಕುಗಳ ವಿಚಾರದಲ್ಲಿ ನೀವು ಪ್ರತಿಪಾದಿಸುತ್ತಿದ್ದ ಸರ್ಕಾರಿ ಆಯೋಗದ ಮಾತುಗಳು ನೆನಪಾಗುತ್ತಿದೆ.
ಪಕ್ಷಾಂತರ ಎಂಬ ವಿಚಾರ ಬಹಳ ದೊಡ್ಡದಾಗಿ ಪ್ರಜಾಪ್ರಭುತ್ವವನ್ನ ನಾಚುವಂತೆ ಮಾಡುತ್ತಿರುವ ಸಂದರ್ಭದಲ್ಲಿ ತಾವು ಚುನಾವಣೆಯ ಸುಧಾರಣೆಗಾಗಿ ಬರೆದಂತಹ ಪುಸ್ತಕ ಅಲ್ಲಿ ಪ್ರಸ್ತಾಪವಾಗಿರುವ ವಿಚಾರಗಳು ಈ ಸಂದರ್ಭದಲ್ಲಿ ನೆನಪಾಗುತ್ತಿವೆ.
ನೀವೊಬ್ಬ ರಾಜಕಾರಣಿ ಎಂದು ಅಥವಾ ನಾಯಕರು ಎಂದು ನೆನಪಿಸಿಕೊಳ್ಳುವುದಕ್ಕಿಂತ ನೀವು ಪ್ರತಿಪಾದಿಸಿದ ಮೌಲ್ಯಾಧಾರಿತ ರಾಜಕಾರಣ ಅದರಿಂದ ನೀವು ಸ್ವತಹ ಅನುಭವಿಸಿದ ಕಹಿ ಘಟನೆಗಳು ರಾಜಕಾರಣದಲ್ಲಿ ಒಂದು ದಾಖಲೆಯಾಗಿದೆ.
ಒಬ್ಬ ರಾಷ್ಟ್ರ ನಾಯಕರಾಗಿ ಸಾಂಸ್ಕೃತಿಕ ಚಿಂತಕರಾಗಿ ಸಾಹಿತ್ಯ ಪ್ರೇಮಿಯಾಗಿ ವಿಶೇಷವಾಗಿ ಮಾನವತಾವಾದಿಯಾಗಿ ನೀವು ಬದುಕಿದ ರೀತಿ ಇಂದಿನ ಸಂದರ್ಭದಲ್ಲಿ ನೆನಪಾಗುತ್ತಿದೆ.
- ಕೆ.ಎಸ್.ನಾಗರಾಜ್, ಬೆಂಗಳೂರು




