ಬೌದ್ಧಿಕ ಸ್ವಾತಂತ್ರ್ಯದ ಹುಡುಕಾಟದ ‘ರಕ್ತ ವಿಲಾಪ’

2 years ago

ಭಾರತವು ಭೌತಿಕವಾಗಿ ಸ್ವತಂತ್ರಗೊಂಡಿದೆ. ಆದರೆ ಬೌದ್ಧಿಕವಾಗಿ  ಸ್ವತಂತ್ರಗೊಂಡಿಲ್ಲ, ಸ್ಥಾಪಿತ ಸಂಪ್ರದಾಯಗಳನ್ನು ಪ್ರಶ್ನಿಸಿ ಸತ್ಯಶೋಧದ ಹುಡುಕಾಟ ಮಾಡುವ ಸಂಶೋಧಕನ ಅಭಿಪ್ರಾಯಕ್ಕೆ ಮನ್ನಣೆ ಇಲ್ಲ ಎಂಬ ಆಲಾಪ ‘ರಕ್ತ ವಿಲಾಪ’ ನಾಟಕದ್ದು. ಸಂಶೋಧಕ ಗುಂಡೇಟಿಗೆ ಬಲಿಯಾಗುವ ದೃಶ್ಯದೊಂದಿಗೆ ಆರಂಭಗೊಂಡ ನಾಟಕ, ಕೊನೆಯಾಗುವುದು ಕೂಡ ಗುಂಡಿನ ಸದ್ದಿನೊಂದಿಗೆ. ಈ ನಡುವಿನಲ್ಲಿ ಸಂಶೋಧಕನ ಬರಹದ ಜಗತ್ತು, ಆತನ ಚಿಂತನೆಗಳು, ಯೋಜನೆಗಳು ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಏಕೆಂದರೆ ಸಂಶೋಧಕನಿಗೆ ಸತ್ಯವನ್ನು ಸಮಾಜಕ್ಕೆ ತಿಳಿಸುವ ಹಂಬಲ. ಆದರೆ ಅದನ್ನು ತಿಳಿಸಬಾರದೆಂಬುದು ಸಮಾಜಘಾತಕ ಶಕ್ತಿಗಳ ಹುನ್ನಾರ. ಅದು ಇಂದಿಗೂ ನಡೆಯುತ್ತಲೇ ಇದೆ, ನಡೆಯುತ್ತಿರುತ್ತದೆ.

ದೇವರು, ಧರ್ಮ, ದೇಶಭಕ್ತಿಯ ತ್ರಿಶಂಕು ಸ್ಥಿತಿಯಲ್ಲಿ ಸಮಾಜ, ಯುವ ಜನತೆ ಸಿಲುಕಿಕೊಂಡಿದೆ. ಇದರಿಂದ ಬಿಡುಗಡೆ ಹೇಗೆ ಎಂಬ ಚರ್ಚೆ ನಾಟಕದ ಜೀವಾಳ. ಈ ವಿಚಾರವಾಗಿ ಸಂಶೋಧಕ ಕೋರ್ಟಿನ ಕಟಕಟೆಯಲ್ಲಿ ನಿಲ್ಲಬೇಕಾಗುವುದು. ತನ್ನ ಚಿಂತನೆಯನ್ನು ಆಧಾರ ಸಹಿತವಾಗಿ ಉದಾಹರಣೆಗಳ ಮೂಲಕ ಹೇಳಿದರೂ ನ್ಯಾಯಾಧೀಶರಿಗೆ ಅರ್ಥವಾಗದೆ ಹೋಯಿತು. ದೇವರು, ಧರ್ಮ ಇತ್ಯಾದಿ ಸೂಕ್ಷ್ಮ ವಿಚಾರಗಳ ವಿಷಯದಲ್ಲಿ ನ್ಯಾಯಾಲಯ ಇಂದು ನಾಲಿಗೆ ಇದ್ದರೂ ಇಲ್ಲದಂತೆ ವರ್ತಿಸುವುದಕ್ಕೆ ನಾಟಕ ಸಾಕ್ಷಿ ಆಯಿತು.

ಸಂಶೋಧಕನ ತರ್ಕಕ್ಕೆ ನ್ಯಾಯವಾದಿಗಳಿಗೆ ಪದಗಳೇ ಹೊಳೆಯದೆ ಹೋಗಿದ್ದು ಬೌದ್ಧಿಕ ದಿವಾಳಿತನವನ್ನು  ತೋರಿಸುತ್ತಿತ್ತು. ‘ಸಂಶೋಧಕ ತಪ್ಪು ಹೇಳಿರಬಹುದು ಸುಳ್ಳು ಹೇಳಿರಲಾರ’ ಎಂಬ ಎಂ ಎಂ ಕಲಬುರ್ಗಿ ಅವರ ಮಾತು ರಂಗದಲ್ಲಿ ಸದಾ ಜೀವಂತವಾಗಿತ್ತು. ಏಕೆಂದರೆ ಕಲ್ಬುರ್ಗಿಯವರ ಮೊದಲ ಹಾಗೂ ಕೊನೆಯ ಆದ್ಯತೆ ಸಂಶೋಧನೆ ಆಗಿತ್ತು ಎಂಬುದನ್ನು ಮನವರಿಕೆ ಮಾಡಿ ಕೊಡಲಾಯಿತು.

ಹಾಗೆಯೇ ಸಂಶೋಧಕರ, ವಿಚಾರವಾದಿಗಳ ರಕ್ತ ಈ ನೆಲಕ್ಕೆ ಚೆಲ್ಲಿದ ವಿಕ್ಷಿಪ್ತ ಮನಸ್ಸುಗಳು  ರಂಗದ ಮೇಲೆ ಅಟ್ಟಹಾಸ ಬೀರುತ್ತಾ ಕೇಕೆ ಹಾಕುವುದನ್ನು ನಾಟಕಕಾರ ವಿಕ್ರಮ್ ವಿಸಾಜಿ, ನಿರ್ದೇಶಕ ಪ್ರವೀಣ್ ರೆಡ್ಡಿ ಗುಂಜಳ್ಳಿ ಅವರು ಸಮರ್ಥವಾಗಿ  ಕಟ್ಟಿಕೊಡುವ ಮೂಲಕ ಪ್ರೇಕ್ಷಕರ ಮನ ಗೆದ್ದರು. ಪ್ರೇಕ್ಷಕರು ಆರು ಸಲ ಚಪ್ಪಾಳೆಗೆ ಎಸ್ ಎಂ ಪಂಡಿತ್ ರಂಗಮಂದಿರ ಸಾಕ್ಷಿ ಆಯಿತು. ಸಂಶೋಧಕನ ಅಂತರಂಗದ ಧ್ವನಿಯನ್ನು ರಂಗದನಿಯ ಮೂಲಕ ವಿಸ್ತರಿಸ ಹೊರಟಿರುವುದು ಶ್ಲಾಘನೀಯ. ಸಂಶೋಧಕನ ಅಸಹಾಯಕತೆ, ದೌರ್ಬಲ್ಯದ ಅಂಶಗಳನ್ನು ಕೂಡ ವಿಭಿನ್ನ ಶೈಲಿಯಲ್ಲಿ ಮಾರ್ದನಿಸಿತು. ಅವರ ಒಡನಾಡಿಗಳ ಇಹ ಪರದ ವಿಚಾರಗಳನ್ನು ಕೂಡ ಬಿಂಬಿಸಲು ಪ್ರಯತ್ನಿಸಿದ್ದು ಮಾರ್ಮಿಕವಾಗಿತ್ತು. 

ಸಂಶೋಧಕನ ಆಶಯ ಮತ್ತು ಯುವ ಜನಾಂಗದ ಮಾನಸಿಕ ಅಸ್ವಸ್ಥತೆ ಸಿದ್ದಾಂತಗಳ ಕುರಿತಾಗಿ ರೂಪಗೊಂಡ ಅಭಿಪ್ರಾಯಗಳ ಸಂಘರ್ಷಗಳು ಪ್ರೇಕ್ಷಕರನ್ನು ಸೆರೆ ಹಿಡಿದು ಚಿಂತನೆಯ ಕುಲುಮೆಗೆ ಮಾರ್ಗ ತೋರಿಸಿದವು. ಬುದ್ಧ, ಬಸವ, ಅಂಬೇಡ್ಕರ, ಗಾಂಧೀಜಿಯವರಂತಹ ಆಶಯಗಳೇ ಸಂಶೋಧಕನಿಗೆ ದಾರಿ ದೀಪವಾಗಿದ್ದವೆಂದು ನಾಟಕ ನೆನಪಿಸುತ್ತದೆ. ಆದರೆ ಇದೊಂದು ಓದುವ ವರ್ಗದ ನಾಟಕವಾಗಿ ಜನಸಾಮಾನ್ಯರನ್ನು ಮುಟ್ಟದೆ ಹೋಗುವಂತಹ ಆತಂಕ ಮನೆ ಮಾಡಿತು. ಏಕೆಂದರೆ ಸಂಶೋಧಕನ ಆಶಯ ಜನರಿಗೆ ತಲುಪಲು ನಾಟಕ ಇನ್ನಷ್ಟು ಹದವಾಗುವ ಅನಿವಾರ್ಯತೆ ನಾಟಕಕ್ಕಿದೆ ಎನಿಸುತ್ತದೆ.

ಸಮುದಾಯ ಕಲಬುರ್ಗಿಯವರು ಆಯೋಜಿಸಿದ ಈ ನಾಟಕವನ್ನು ಸಮುದಾಯ ರಾಯಚೂರು ಅಭಿನಯಿಸಿತು. ಇದಕ್ಕೆ ಸಹಕಾರವಾಗಿ ರಂಗಾಯಣ ಕಲಬುರ್ಗಿ, ಕನ್ನಡ ಅಧ್ಯಯನ ಸಂಸ್ಥೆ ಗುಲ್ಬರ್ಗ ವಿಶ್ವವಿದ್ಯಾಲಯ ಸಹಕಾರ ನೀಡಿತ್ತು. ಇಲ್ಲಿನ ನಟರೆಲ್ಲರೂ ಹೆಚ್ಚಾಗಿ ಪದವಿ ಹಂತದ ರಾಯಚೂರಿನ ವಿದ್ಯಾರ್ಥಿಗಳು. ಗುಂಜಳ್ಳಿ ಅವರೇ ನಿರ್ದೇಶಕರಾಗಿ,  ಮುಖ್ಯ ಪಾತ್ರವನ್ನು ವಹಿಸಿ ನಾಟಕಕ್ಕೆ ರಂಗು ತಂದಿದ್ದು ವಿಶೇಷವಾಗಿತ್ತು.  ಲಕ್ಷ್ಮಣ್ ಮಂಡಲ್ ಗೇರಾರವರ ಬೆಳಕಿನ ವಿನ್ಯಾಸ ನಾಟಕಕ್ಕೆ ಮೆರಗು ತಂದುಕೊಡುವಲ್ಲಿ ಯಶಸ್ವಿಯಾಯಿತು. ಇಂಸಾಫ್ ಹೊಸಪೇಟೆ ಅವರ ಸಂಗೀತ ಹಾಗೂ ಆಲಾಪಗಳು ನಾಟಕಕ್ಕೆ ಇತಿಮಿತಿಯಾಗಿದ್ದವು. ಬಹಳಷ್ಟು ಕವಿತೆಗಳನ್ನು ನಾಟಕಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳನ್ನು ನಿರ್ದೇಶಕರು ನಿರಾಕರಿಸಿದಂತೆ ಭಾಸವಾಗುವುದು. ಸೈದ್ಧಾಂತಿಕ ಹಿನ್ನೆಲೆಯ ಸಂಶೋಧಕನ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಇಷ್ಟು ಸಾಕು ಎನ್ನಿಸಿರಲೂಬಹುದು. 

ಒಟ್ಟಾರೆಯಾಗಿ, ಪ್ರಯೋಗವನ್ನು ಗುಂಜಳ್ಳಿಯವರು, ಆರಂಭದಲ್ಲಿಯೇ  ‘ರಕ್ತದ್ವನಿಗಳ ನರ್ತನದ ದರ್ಶನ’ ಮಾಡಿಸುತ್ತಾರೆ, ಹೆಣ್ಣು ಭ್ರೂಣ ಹತ್ಯೆಯಿಂದ ರಕ್ತದ ಕೋಡಿ ಹರಿದು ಅದು ಸಂಶೋಧಕನ ತಲೆಬುರುಡೆಗೆ ಗುಂಡು ಹೊಡೆಯುವ ಸಮಾಜಘಾತಕ ಹೇಡಿಗಳ ವಿರುದ್ಧ ಸಮರ ಸಾರಿರುವ ದೃಶ್ಯ ರೂಪವೇ ರಕ್ತ ವಿಲಾಪ. ಈ ನಾಟಕವನ್ನು ನೋಡುವಾಗ ಸಿದ್ದನಗೌಡ ಪಾಟೀಲರ ಕವಿತೆಯ ಸಾಲಗಳು ನೆನಪಾಗುತ್ತವೆ….
“ನಾವು ನಿಮ್ಮೆದೆಗೆ ಗುಂಡಿಕ್ಕಿದ್ದರೆ
ಒಂದಿಷ್ಟು ಬಂದೂಕುಗಳು ನಮ್ಮೆದುರಿಸುತ್ತವೆ
ಆದರೆ ನೀವು
ನಮ್ಮೆದೆಗೆ ಗುಂಡಿಟ್ಟರೆ
ನಿಮ್ಮ ಬಂದೂಕು ಸಾಕಾಗದಷ್ಟು
ಎದೆಗಳು ನಿಮ್ಮನ್ನು ಎದುರಿಸುತ್ತವೆ”  ಎಂಬ ನಾಟಕದ ಆರ್ತನಾದ  ಕೇಳಿಸುವುದು. ಕೇಳಿಸಿಕೊಳ್ಳಲು ಕಿವಿ ಇದ್ದರೆ ಸಾಲದು, ಯೋಚಿಸುವ ಮನಸ್ಸು ಕೂಡ ಇರಬೇಕೆಂದು ನಾಟಕ ಪ್ರತಿದ್ವನಿಸುತ್ತಿತ್ತು.  

– ರಾಜೇಂದ್ರಕುಮಾರ್ ಕೆ ಮುದ್ನಾಳ, ಯಾದಗಿರಿ

Leave a Reply