ಮಾನ್ಯ ಸೂಲಿಬೆಲೆಯವರೇ, ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಭಾಷಣವನ್ನು ಕೇಳಿ ನಾನು ತಮ್ಮ ಅಭಿಮಾನಿಯಾಗಿದ್ದೇನೆ. ಹಿಂದೂಗಳ ಬಗ್ಗೆ ತಮಗಿರುವ ಕಾಳಜಿ, ಮೋದಿಯವರ ಕುರಿತಾದ ಆ ನಿಮ್ಮ ಅಚಲ ಭಕ್ತಿಗೆ ನಾನು ಸಂಪೂರ್ಣ ಮನಸೋತಿದ್ದೇನೆ. ಈಗ ತುರ್ತಾಗಿ ನಿಮ್ಮನ್ನು ನಾನು ಹೀಗೆ ಬಹಿರಂಗವಾಗಿ (ನನ್ನ ಬಳಿ ನಿಮ್ಮ ಮೊಬೈಲ್ ನಂಬರ್ ಇಲ್ಲದ್ದರಿಂದಾಗಿ) ಸಂಪರ್ಕಿಸಲು ಒಂದು ಕಾರಣವಿದೆ.
ನನ್ನ ಹೆಸರು ನಂಜೇಗೌಡ. ಅಪ್ಪಟ ಹಿಂದೂ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ. ನನ್ನ ಪಕ್ಕದ ಮನೆಯಲ್ಲಿ ಫತೇಹ್ ಅಲಿ ಎಂಬ ಮುಸ್ಲೀಮನ ಮನೆಯಿದೆ. ಅವನನ್ನು ಕಂಡರೆ ನನಗಾಗುವುದಿಲ್ಲ. ಅವರ ಮನೆಯ ಆಚಾರವಿಚಾರದ ಗಾಳಿಯೂ ನಮ್ಮ ಮನೆಗೆ ಬೀಸಬಾರದೆಂದು ಎತ್ತರದ ಕಾಂಪೌಂಡ್ ಗೋಡೆ ಕಟ್ಟಿಕೊಂಡು ನೆಲೆಸಿದ್ದೇನೆ.
ನಿನ್ನೆ ಒಂದು ಘೋರ ದುರಂತ ನಡೆದುಹೋಗಿದೆ. ಈ ವಿಚಾರದಲ್ಲಿ ಹಿಂದೂಗಳಿಗೆ ನ್ಯಾಯ ಕೊಡಿಸಲು ನೀವೇ ಸೂಕ್ತರೆಂದು ತಮ್ಮ ಬಳಿ ಈ ಮನವಿ ಮಾಡಿಕೊಳ್ಳುತ್ತಿದ್ದೇನೆ. ನಿನ್ನೆ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಫತೇಹ್ ಅಲಿಯ ಮನೆಯ ಸ್ಟೋರ್ ರೂಮಿನಲ್ಲಿದ್ದ ಮುಸ್ಲಿಂ ಹೆಗ್ಗಣ, ವಿನಾ ಕಾರಣ ಕಾಲು ಕೆರೆದುಕೊಂಡು ನಮ್ಮ ಸ್ಟೋರ್ ರೂಮಿನ ಹಿಂದೂ ಹೆಗ್ಗಣದ ಮೇಲೆ ಜಗಳ ಆರಂಭಿಸಿತು. ಹೆಗ್ಗಣಗಳ ಜಗಳ ತಾನೇ, ಸ್ವಲ್ಪ ಹೊತ್ತು ಕಾದಾಡಿ ಸುಮ್ಮನಾಗುತ್ತವೆ ಎಂದು ನಾನು ನಿರ್ಲಕ್ಷಿಸಿದೆ. ಆದರೆ ಆ ಸೈತಾನಿ ಮುಸ್ಲಿಂ ಹೆಗ್ಗಣ, ನಮ್ಮ ಹಿಂದೂ ಹೆಗ್ಗಣದ ಮೇಲೆ ಬಿಟ್ಟೂಬಿಡದೆ ದಾಳಿ ನಡೆಸಿ, ಕೊನೆಗೆ ಕೊಂದೇಬಿಟ್ಟಿತು. ಹಿಂದೂ ಮನೆಯ ಸ್ಟೋರ್ ರೂಮಿನಲ್ಲಿದ್ದ ದವಸಧಾನ್ಯ ತಿಂದುಕೊಂಡು ಸಾತ್ವಿಕನಂತಿದ್ದ ನಮ್ಮ ಹಿಂದೂ ಹೆಗ್ಗಣವು, ಮೂರು ಹೊತ್ತೂ ಸಾಬರ ಮನೆಯ ಮಾಂಸಮಡ್ಡಿ ತಿಂದು ರಕ್ಕಸನಂತಿದ್ದ ಆ ಮುಸ್ಲಿಂ ಹೆಗ್ಗಣದ ದಾಳಿಗೆ ತುತ್ತಾಗಿ, ರಕ್ತ ಕಾರಿಕೊಂಡು ಒದ್ದಾಡುತ್ತಾ ಪ್ರಾಣ ಬಿಟ್ಟಿದ್ದನ್ನು ನೋಡಿ ನನ್ನ ಹಿಂದೂತ್ವದ ರಕ್ತ ಕೊತಕೊತ ಕುದಿಯುತ್ತಿತ್ತು. ನಿಮ್ಮಂತಹ ಕದನಶೂರರು ಪಕ್ಕದಲ್ಲಿ ಇಲ್ಲದೇ ಇದ್ದುದರಿಂದ ಏನೂ ಮಾಡದ ಅಸಹಾಯಕತೆಯಲ್ಲಿ ಕೈಕೈ ಹಿಸುಕಿಕೊಂಡು ಸುಮ್ಮನಾದೆ!
ಸಿದ್ರಾಮಯ್ಯನ ಕಾಂಗ್ರೆಸ್ ಸರ್ಕಾರ ಬಂದಮೇಲೆ, ಮುಸ್ಲಿಮರಷ್ಟೇ ಅಲ್ಲ ಮುಸ್ಲಿಂ ಹೆಗ್ಗಣಗಳಿಗೂ ಬಲ ಬಂದಂತಾಗಿದೆ. ನಡುಬೀದಿಯಲ್ಲೇ ಹಿಂದೂ ಹೆಗ್ಗಣಗಳನ್ನು ಅಟ್ಟಾಡಿಸಿ ಕೊಲೆ ಮಾಡುತ್ತಿವೆ. ಇದನ್ನು ನಾವು ನಿರ್ಲಕ್ಷಿಸಬಾರದು. ತಾವು ಈ ಸುದ್ದಿ ತಿಳಿದ ಕೂಡಲೇ, ನಿಮ್ಮ ಕಸಿನ್ ಸಿಸ್ಟರ್ ಸಮೇತ ಸಮಸ್ತ ಕೇಸರಿ ಬ್ರಿಗೇಡನ್ನು ಕರೆದುಕೊಂಡು ನಮ್ಮ ಸಹಾಯಕ್ಕೆ ಬರುತ್ತೀರಿ ಎಂಬ ನಿರೀಕ್ಷೆಯಲ್ಲಿ ನಮ್ಮ ಹಿಂದೂ ಹೆಗ್ಗಣದ ಶವಸಂಸ್ಕಾರ ಕೂಡಾ ಮಾಡದೆ, ಕಾಂಪೌಂಡಿನ ಮೂಲೆಯಲ್ಲಿ ಇಟ್ಟಿದ್ದೇವೆ. ನೀವು ಬಂದು, ಈ ಹಿಂದೂ-ಮುಸ್ಲಿಂ ಹೆಗ್ಗಣಗಳ ಪ್ರಕರಣವಿಟ್ಟುಕೊಂಡು, ದಯವಿಟ್ಟು ಬೆಂಗಳೂರಿಗೆ ಬೆಂಕಿ ಹಚ್ಚಿ. ಸರ್ಕಾರದಿಂದ ನಮಗೆ ಒಂದಿಷ್ಟು ಪರಿಹಾರ ಬರುವಂತೆ ಮಾಡಿ. ಆ ಮುಸ್ಲಿಂ ಹೆಗ್ಗಣಕ್ಕೆ ತಕ್ಕ ಪಾಠ ಕಲಿಸಿ. ನನಗೆ ಗೊತ್ತು, ಈ ಘಟನೆಯನ್ನು ಕೇಳಿದ ತರುವಾಯ ನಿಮ್ಮ ಕರುಳು ಕಿತ್ತು ಬರುತ್ತದೆ ಅಂತ. ಆದರೆ ದಯವಿಟ್ಟು ಆತುರದಲ್ಲಿ ಏನೇನೊ ಕಿತ್ತುಕೊಂಡು ಆಸ್ಪತ್ರೆ ಸೇರಬೇಡಿ. ನಮ್ಮ ಹೆಗ್ಗಣದ ಸಾವಿಗೆ ನ್ಯಾಯ ಕೊಡಿಸುವವರು ಯಾರು? ಇಲ್ಲಿ ಬಂದು ಬೆಂಗಳೂರಿಗೆ ಬೆಂಕಿ ಹಚ್ಚಿದ ತರುವಾಯ ಏನನ್ನಾದರೂ ಕಿತ್ತುಕೊಳ್ಳಿ ಅಭ್ಯಂತರವಿಲ್ಲ.
ಇಂತಿ ನಿಮ್ಮ ನಿರೀಕ್ಷೆಯಲ್ಲಿ…
ನಂಜೇಗೌಡ S/o ಉರೀಗೌಡ
ಬೆಂಗಳೂರು



