ಬದನವಾಳು ಗ್ರಾಮದಲ್ಲಿ ದಲಿತರು ದೇವಸ್ಥಾನ ಪ್ರವೇಶ ಮಾಡುವುದಕ್ಕೆ ಸಂಬಂಧಿಸಿದಂತೆ 1993 ರಲ್ಲಿ ಮೇಲ್ಜಾತಿಯ ಜನರಿಂದ ಮೂವರು ದಲಿತರ ಕೊಲೆಯಾಯಿತು. ಅಂದಿನಿಂದ ಗ್ರಾಮದ ಸಮುದಾಯಗಳ ನಡುವೆ ಮುರಿದುಬಿದ್ದಿದ್ದ ಸಹಬಾಳ್ವೆಯ ಬಾಂಧವ್ಯವನ್ನು 29 ವರ್ಷಗಳ ನಂತರದಲ್ಲಿ ರಾಹುಲ್ ಗಾಂಧಿ ಈಗ ಮರುಜೋಡಿಸಿದರು. ಒಡೆದ ಸಂಬಂಧಗಳನ್ನು ಜೋಡಿಸುವ ಈ ಉಪಕ್ರಮದಲ್ಲಿ ರಾಹುಲ್ ಅಲ್ಲಿನ ಜನರೊಡನೆ ಕುಳಿತು ಸಹಪಂಕ್ತಿ ಭೋಜನ ಮಾಡಿದ್ದಾರೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ
ಇದು ಬಂಧುತ್ವವನ್ನು ಜೋಡಿಸುವ ಅಸಲಿ ಕೆಲಸ. ಬದನವಾಳು ಗ್ರಾಮದಲ್ಲಿ ಸಮುದಾಯಗಳ ಮುರಿದ ಮನಸ್ಸಗಳನ್ನು ಜೋಡಿಸಿದ ವಿಸ್ಮಯ ಭಾರತಾದ್ಯಂತ ಸಾಕಾರವಾಗಬೇಕು.
ಮಾನ್ಯ ಮುಖ್ಯಮಂತ್ರಿ ಬಬೊ ಅವರು ತಮಗಿರುವ ಸ್ಥಾನ ಮತ್ತು ಹಿರಿತನದ ಘನತೆ ಎರಡನ್ನೂ ಮರೆತು ರಾಹುಲ್ ಗಾಂಧಿಯವರನ್ನು “ನಕಲಿ ಗಾಂಧಿಗಳನ್ನು ಕುರಿತು ಗಾಂಧಿ ಜಯಂತಿ ದಿನ ನಾನು ಮಾತಾಡಲಾರೆ” ಎಂದು ಮೂದಲಿಸಿದ್ದಾರೆ. ರಾಹುಲ್ ಅವರು ತಮ್ಮ ಅಜ್ಜಿ ಮತ್ತು ಅಪ್ಪನಂತೆ ರಾಜಕೀಯ ಮಾಡಿದ್ದಿದ್ದರೆ ಅವರು ಕಡೇಪಕ್ಷ ದೆಹಲಿಯ ಮುಖ್ಯಮಂತ್ರಿ ಆಗಿರುತ್ತಿದ್ದರು. ಯುವಜನತೆಯ ಸ್ನೇಹಿಯಾಗಿ, ಬಡಜನರ ಬಂಧುವಾಗಿ, ನೆಲದ ಬದುಕಿನ ಸರಳತೆಗೆ ಹತ್ತಿರವಾಗಿ ಅವರ ನಡಿಗೆ ಶಕ್ತಿರಾಜಕಾರಣದ ಕುತಂತ್ರ ಪಟ್ಟುಗಳಿಂದ ಹೊರತಾದದ್ದು. ರಾಹುಲ್ ಗಾಂಧಿಯವರ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಈಗಿನ ರಾಜಕೀಯ ವಿಷಮ ಸಂಧಿಗ್ಧತೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಲು AICC ಅಧ್ಯಕ್ಷನಾಗಲು ಒಪ್ಪಿರುತ್ತಿದ್ದರು. ಪದವಿಯ ಅಧಿಕಾರ ಮೋಹವೂ ರಾಹುಲ್ ಗಾಂಧಿಯವರಿಗೆ ಇದ್ದಂತೆ ಕಾಣಿಸುತ್ತಿಲ್ಲ. ಸುರಿಯುವ ಮಳೆಯಲ್ಲಿಯೂ ಬದ್ಧತೆಯನ್ನು ಬಿಟ್ಟುಕೊಡದೆ ಸಮಗ್ರ ಭಾರತದ ಐಕ್ಯತೆಯ ಕನಸನ್ನು ರಾಹುಲ್ ಮಣ್ಣಿಗಿಳಿಸಲು ಪ್ರಯತ್ನಿಸುತ್ತಿರುವಾಗ, “ನಕಲಿ ಗಾಂಧಿ” ಪದದ ಬಳಕೆ ಬಬೊ ಅವರಿಗೆ ಶೋಭೆ ತರುವುದಿಲ್ಲ.
ಇದೇ ಸಂದರ್ಭದಲ್ಲಿ ಹಿರಿಯರಾದ ದೇವನೂರ ಮಹಾದೇವ ಅವರು, ರಾಹುಲ್ ಗಾಂಧಿಯವರನ್ನು ಬೇಟಿಮಾಡಿ ಸಂವಿಧಾನದ ಪ್ರಸ್ತಾವನೆಯ ಪಟವನ್ನು ಉಡುಗೊರೆ ನೀಡಿದ್ದಾರೆ. ಪ್ರಜ್ಞಾವಂತ ಹಿರಿಯ ಮನಸ್ಸೊಂದು ಅಂಬೇಡ್ಕರ್ ಅವರ ಸಂವಿಧಾನಕ್ಕಿಂತಲೂ ಮಿಗಿಲಾದ ಉಡುಗೊರೆ ಬೇರಿನ್ನೇನು ಕೊಡಬೇಕು? ಕಾಂಗ್ರೆಸ್ಸಿಗರು ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ತಮ್ಮ ಪಕ್ಷದಲ್ಲೂ ಮತ್ತು ವೈಯಕ್ತಿಕ ಜೀವನದಲ್ಲೂ ಅಳವಡಿಸಿಕೊಳ್ಳಬೇಕೆಂಬ ಸಂದೇಶ ಇದು. ರಾಹುಲ್ ಗಾಂಧಿಯವರು ಸಂವಿಧಾನದ ಆಶಯಗಳೊಂದಿಗೆ ಮುನ್ನಡೆಯಲೆಂಬ ವಿವೇಕದ ಪಾಠ ದೇವನೂರು ಮಹಾದೇವ ಅವರ ಈ ನಡೆಯಲ್ಲಿದೆ. ಅಧಿಕಾರ ಹಿಡಿದ ಜನಪ್ರತಿನಿಧಿಗಳು ಅಪ್ರಜಾಪ್ರಭುತ್ವಕವಾಗಿಯೂ, ಸರ್ವಾಧಿಕಾರಿ ಧೋರಣೆಯಿಂದಲೂ, ಧಾರ್ಮಿಕ ಮತಭ್ರಾಂತಿಯಿಂದಲೂ ನಡೆಯುತ್ತಿರುವಾಗ ದೇವನೂರು ಮಹಾದೇವ ತಮ್ಮ ಅಭಿಲಾಶೆಯನ್ನು ಅಂಬೇಡ್ಕರ್ ಅವರ ಸಂವಿಧಾನದ ಮೂಲಕವೇ ಸಮರ್ಥವಾಗಿ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಅವರನ್ನು ಗೌರವಿಸುವವರೆಲ್ಲರೂ ಗಾಂಧಿಯನ್ನು ತಿರಸ್ಕರಿಸಲೇಬೇಕೆಂಬ ಧೋರಣೆ ಒಂದು ರಾಜಕೀಯ ಸಿದ್ದಾಂತದ ಮಟ್ಟಕ್ಕೆ ಬಂದು ತಲುಪಿದೆ. ಈ ಧೋರಣೆ ಮನುವಾದವು ಮತ್ತಷ್ಟು ಹುಲುಸಾಗಿ ಬೆಳೆಯಲು ಪೂರಕವಾಗಿದೆ.
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು




