ಮಹಾತ್ಮನ ಉತ್ತರಾಧಿಕಾರಿಯಂತೆ ಬದುಕಿದ ಲಾಲ್ ಬಹದ್ದೂರ್ ಶಾಸ್ತ್ರಿ

4 years ago

ಮಹಾತ್ಮನ ಉತ್ತರಾಧಿಕಾರಿಯಂತೆ ಬದುಕಿದ
ಲಾಲ್ ಬಹದ್ದೂರ್ ಶಾಸ್ತ್ರಿ

ಮಹಾತ್ಮನ ಜನ್ಮದಿಂದು ಅಂದರೆ, 1904 ಅಕ್ಟೋಬರ್ ಎರಡರಂದು ಉತ್ತರ ಪ್ರದೇಶದ ಮುಗಲ್ ಶರಾಯ್ ನಲ್ಲಿ ಜನಿಸಿದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಬದುಕು, ಉದಾತ್ತ ಚಿಂತನೆಗಳು ಮತ್ತು ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದ ಗಾಂಧೀಜಿಯವರ ಚಿಂತನೆಗಳಿಂದ ನಮಗೆ ಅವರು ಗಾಂಧೀಜಿಯವರ ಉತ್ತರಾಧಿಕಾರಿಯಂತೆ ಗೋಚರಿಸುತ್ತಾರೆ. ನೋವಿನ ಸಂಗತಿಯೆಂದರೆ, ಗಾಂಧಿ ಜಯಂತಿಯ ಅಬ್ಬರದಲ್ಲಿ ಈ ಪುಣ್ಯಾತ್ಮನನ್ನು ಸ್ಮರಿಸಲಾರದಷ್ಟು ಜಡತ್ವಕ್ಕೆ ನಾವು ನೂಕಲ್ಪಟ್ಟಿದ್ದೀವಿ.

ನೆಹರೂ ನಿಧನಾನಂತರ ಪ್ರಧಾನಿಯಾಗಿ ಕೇವಲ ಒಂದೂವರೆ ಕಾರ್ಯನಿರ್ವಹಿಸಿದರೂ ಸಹ ಶಾಸ್ತ್ರಿಯವರು ನೆಹರೂ ಅವರಷ್ಟೇ ಖ್ಯಾತಿಯನ್ನು ಗಳಿಸಿದ್ದು ವಿಶೇಷ. 1947 ರಿಂದ ಸತತ ಹದಿನೇಳು ವರ್ಷ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ ನೆಹರೂ ಅವರು 1962 ರ ಚೀನಾ ಯುದ್ಧದ ನಂತರ ತೀರಾ ಮುಜಗರಕ್ಕೆ ಒಳಗಾದರು. ಡಾ.ರಾಮಮನೋಹರ ಲೋಹಿಯಾ ಮತ್ತು ಆಚಾರ್ಯ ಕೃಪಲಾನಿಯವರು ನೆಹರೂ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಜನಪ್ರಿಯತೆ ಕೂಡ ಕುಸಿಯತೊಡಗಿತು. ಈ ಸಂದರ್ಭದಲ್ಲಿ ನೆಹರೂ ಅವರ ಮನವಿಯ ಮೇರೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕೆ.ಕಾಮರಾಜ್ ಅವರು ನೆಹರೂ ಅವರ ಮನವಿ ಮೇರೆಗೆ 1963 ರ ಅಕ್ಟೋಬರ್ 3 ರಂದು ಹುದ್ದೆಗೆ ರಾಜಿನಾಮೆ ನೀಡಿ ದೆಹಲಿಗೆ ಬಂದು ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸತೊಡಗಿದರು.

ಕಾಮರಾಜ್ ಅವರು ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ನಂತರ ನೆಹರೂ ಅವರ ಆಡಳಿತದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಸರ್ಕಾರ ಸುಗಮವಾಗಿ ಸಾಗುತ್ತಿತ್ತು. ಆದರೆ, ನೆಹರೂ ಪಾಲಿಗೆ ಈ ಸಂತೃಪ್ತಿ ಬಹಳ ದಿನ ಉಳಿಯಲಿಲ್ಲ. ೧೯೬೪ ರ ಮೇ೨೭ ರಂದು ನೆಹರೂ ಅವರು ಹೃದಯಾಘಾತದಿಂದ ನಿಧನ ಹೊಂದಿದರು. ನೆಹರೂ ನಿಧನರಾದ ಕೂಡಲೇ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಹೊಣೆ ಕಾಮರಾಜ್ ಅವರ ಹೆಗಲಿಗೆ ಬಿತ್ತು. ವಾಸ್ತವವಾಗಿ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಅವರು ಪ್ರಧಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದವು. ಅವರು ನೆಹರೂ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಗುಲ್ಜಾರಿಲಾಲ್ ನಂದಾ ಅವರನ್ನು ಉಸ್ತುವಾರಿ ಪ್ರಧಾನಿಯನ್ನಾಗಿ ನೇಮಕ ಮಾಡಿ ಪ್ರಧಾನಿ ಹುದ್ದೆಗೆ ನಾಯಕರನ್ನು ಹುಡುಕತೊಡಗಿದರು. ಗುಲ್ಜಾರಿ ಲಾಲ್ ನಂದಾ, ಲಾಲ್ ಬಹುದ್ದೂರ್ ಶಾಸ್ತಿç, ಮುರಾರ್ಜಿ ದೇಸಾಯಿ ಮತ್ತು ಇಂದಿರಾ ಗಾಂಧಿ ಈ ಹೆಸರುಗಳು ಅವರ ಮುಂದೆ ಇದ್ದವು. ಅತುಲ್ಯ ಘೋಷ್ ನೀವೇ ಪ್ರದಾನಿಯಾಗಿ ಎಂದು ಕಾಮರಾಜರಿಗೆ ಆಹ್ವಾನ ನೀಡಿದಾಗ ‘ ನನಗೆ ಹಿಂದಿ ಮತ್ತು ಇಂಗ್ಲೀಷ್ ಭಾಷೆ ಬರುವುದಿಲ್ಲ. ಕೇವಲ ಸಂವಹನ ಭಾಷೆಯಾಗಿ ಮಾತ್ರ ಬಳಸಬಲ್ಲೆ, ಮೇಲಾಗಿ ನಾನೊಬ್ಬ ಅವಿದ್ಯಾವಂತ ಭಾರತದ ಪ್ರಧಾನಿಯಾಗುವ ವ್ಯಕ್ತಿ ಇಲ್ಲಿನ ರಾಜ್ಯಗಳಷ್ಟೇ ಅಲ್ಲ, ಜಗತ್ತಿನ ಇತರೆ ದೇಶಗಳ ಜೊತೆಗೆ ಸಮರ್ಥವಾಗಿ ಸಂವಹನ ನಡೆಸುವ ಸಾಮರ್ಥ್ಯ ಹೊಂದಿರಬೇಕು’ ಎಂದು ಹೇಳುವುದರ ಮೂಲಕ ಭಾರತದ ರಾಜಕಾರಣ ಮತ್ತು ನಾಯಕ ಹೇಗಿರಬೇಕು ಎಂಬುದಕ್ಕೆ ಹೊಸ ವ್ಯಾಖ್ಯಾನವನ್ನು ಬರೆದರು.

ಕಾಂಗ್ರೇಸ್ ಕಾರ್ಯಕಾರಿ ಮಂಡಳಿಯ ಸದಸ್ಯರು ಹಾಗೂ ಸಂಸದೀಯ ಮಂಡಳಿಯ ಎಲ್ಲಾ ಸದಸ್ಯರನ್ನು ಪ್ರತ್ಯೇಕವಾಗಿ ರಾಜಪಥ್ ರಸ್ತೆಯ ತಮ್ಮ ನಿವಾಸಕ್ಕೆ ಕರೆಸಿಕೊಂಡು ಅವರ ಅಭಿಪ್ರಾಯ ಸಂಗ್ರಹಿಸತೊಡಗಿದರು. ಈ ನಡುವೆ ಮುರಾರ್ಜಿ ದೇಸಾಯಿ ಬಲಪಂಥೀಯರ ತಂಡವನ್ನು ಕಟ್ಟಿಕೊಂಡು ಪ್ರಧಾನಿಯಾಗಲು ಕಾಮರಾಜರ ಮೇಲೆ ಒತ್ತಡ ಹೇರತೊಡಗಿದರು. ಜೊತೆಗೆ ಪ್ರಧಾನಿಯಾಗುವ ವ್ಯಕ್ತಿಯನ್ನು ಸಂಸತ್ ಸದಸ್ಯರು ಮಾತ್ರ ಆಯ್ಕೆ ಮಾಡಬೇಕು ಎಂಬ ವಾದವನ್ನು ಮಂಡಿಸಿದರು. ಅಷ್ಟರಲ್ಲಿ ಬಹುತೇಕ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದ ಕಾಮರಾಜರು ಸಂಸದೀಯ ಮಂಡಳಿಯ ನಾಯಕ ಯಾರಾಗಬೇಕು ಎಂಬುದನ್ನು ಪಕ್ಷದ ಹೈ ಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳುವುದರ ಮೂಲಕ ಮುರಾರ್ಜಿಯವರ ಮಾತುಗಳನ್ನು ತಿರಸ್ಕರಿಸಿದರು. ಅಂತಿಮವಾಗಿ ಹಿರಿಯ ನಾಯಕರೊಂದಿಗೆ ಸಮಾಲೋಚಿಸಿ ಪ್ರಾಮಾಣಿಕತೆ, ಸರಳತೆ, ಮಿತಭಾಷಿ ಹಾಗೂ ಪಾರದರ್ಶಕತೆಯ ಜೀವನದಲ್ಲಿ ಗಾಂಧೀಜಿಯವರ ಉತ್ತರಾಧಿಕಾರಿ ಎಂಬಂತೆ ಇದ್ದ ಲಾಲ್ ಬಹುದ್ದೂರ್ ಶಾಸ್ತಿçಯವರನ್ನು ನೆಹರೂ ಉತ್ತರಾಧಿಕಾರಿ ಮತ್ತು ನೂತನ ಪ್ರಧಾನಿಯನ್ನಾಗಿ ನೇಮಕ ಮಾಡಿದರು. ಕಾಮರಾಜರ ಈ ಪ್ರಾಮಾಣಿಕ ನಡೆ ಇಡೀ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಯಿತು. ಜೊತೆಗೆ ಪಕ್ಷ ಭೇದ ಮರೆತು ಅವರನ್ನು ಇತರೆ ರಾಷ್ಟ್ರೀಯ ನಾಯಕರು ಗೌರವಿಸತೊಡಗಿದರು.

1964 ರ ಜೂನ್ ತಿಂಗಳಿನಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಲಾಲ್‌ಬಹದ್ದೂರ್ ಶಾಸ್ತಿçಯವರು ತಮ್ಮ ನಿಷ್ಪಕ್ಷಪಾತ ಗುಣ ಮತ್ತು ಪ್ರಾಮಾಣಿಕತೆಯ ವ್ಯಕ್ತಿತ್ವದ ಮೂಲಕ ಎಲ್ಲರ ಮನಗೆದ್ದರು. ಆಡಳಿತಾರೂಢ ಪಕ್ಷದ ಸದಸ್ಯರಲ್ಲಿ ಇದ್ದ ಭಿನ್ನಮತಗಳು ಕರಗತೊಡಗಿದವು. ನೆಹರೂ ನಂತರದ ಸಮರ್ಥ ಪ್ರಧಾನಿ ಎಂಬ ಕೀರ್ತಿಗೆ ಅವರು ಪಾತ್ರರಾದರು. ಕಾಮರಾಜ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಶಾಸ್ತಿçಯವರಿಗೆ ಬೆಂಬಲವಾಗಿ ನಿಂತರು. ಲಾಲ್‌ಬಹದ್ದೂರ್ ಶಾಸ್ತಿçಯವರ ಆಳ್ವಿಕೆಯಲ್ಲಿ ಕಾಮರಾಜ್ ಅವರ ಸಹಕಾರದಿಂದ ಶ್ರೀಲಂಕಾ ಪ್ರಧಾನಿಯಾಗಿದ್ದ ಸಿರಿಮಾವೋ ಭಂಡಾರನಾಯಿಕೆ ಜೊತೆ ಭಾರತ-ಶ್ರೀಲಂಕಾ ಒಪ್ಪಂಧ ಏರ್ಪಟ್ಟಿತು. 1964 ರ ಅಕ್ಟೋಬರ್ 30 ರಂದು ನಡೆದ ಈ ಒಪ್ಪಂಧದಲ್ಲಿ ಶ್ರೀಲಂಕಾದಲ್ಲಿ ನೆಲೆಯೂರಿದ್ದ ಭಾರತ ಮೂಲದ ನಾಗರೀಕರಿಗೆ ವಿಶೇಷವಾಗಿ ತಮಿಳು ನಾಗರೀಕರಿಗೆ ಸ್ಥಳೀಯ ಸಿಂಹಳ ರಾಷ್ಟಿçÃಯವಾದಿಗಳಿಂದ ಯಾವುದೇ ತೊಂದರೆಯಾಗಬಾರದು ಮತ್ತು ಅವರಿಗೆ ಅಲ್ಲಿನ ನಾಗರೀಕತೆಯನ್ನು ನೀಡಬೇಕೆಂದು ಸಹಮತಕ್ಕೆ ಬರಲಾಯಿತು. ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಅಲ್ಲಿನ ಚಹಾ ತೋಟಗಳಲ್ಲಿ ದುಡಿಯಲು ಹೋಗಿದ್ದ ತಮಿಳು ಕಾರ್ಮಿಕರು ಅಲ್ಲಿಯೇ ಶಾಶ್ವತವಾಗಿ ನೆಲೆ ನಿಂತಿದ್ದರು. ಈ ಸಮಸ್ಯೆಯನ್ನು ಕಾಮರಾಜರು ಮಧ್ಯವರ್ತಿಯಾಗಿ ನಿಂತು ಬಗೆ ಹರಿಸಿದ್ದು ಅವರ ಕುರಿತಾಗಿ ತಮಿಳರಲ್ಲಿ ಅಪಾರ ಗೌರವ ಉಂಟಾಯಿತು.
ಈ ನಡುವೆ 1965 ರ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನೆರೆಯ ಪಾಕಿಸ್ತಾನ ರಾಷ್ಟ್ರವು ಭಾರತದ ಜಮ್ಮು ಕಾಶ್ಮೀರದ ಕೇಂದ್ರಾಳಿತ ಪ್ರದೇಶಕ್ಕೆ ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಕಳುಹಿಸಿ ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಬೇಕೆಂಬ ಗಲಭೆ ಎಬ್ಬಿಸುವುದರ ಮೂಲಕ ಹಿಂಸಾಚಾರಕ್ಕೆ ನಾಂದಿಯಾಡಿತು. ಈ ಸಂದರ್ಭದಲ್ಲಿ ಶಾಸ್ತ್ರಿಯವರು ಆಗಸ್ಟ್ ತಿಂಗಳಿನಲ್ಲಿ ಪಾಕಿಸ್ತಾನದ ಮೇಲೆ ಯುದ್ಧವನ್ನು ಘೋಷಿಸಿದರು. ಹದಿನೇಳು ದಿನಗಳ ಕಾಲ ನಡೆದ ಯುದ್ದದಲ್ಲಿ ಪಾಕಿಸ್ತಾನಕ್ಕೆ ಅಪಾರ ಸಾವುನೋವುಗಳು ಉಂಟಾದವು. ಸಂಯುಕ್ತ ರಾಷ್ಟ್ರಗಳ ಮಧ್ಯಸ್ತಿಕೆಯಿಂದ ( ವಿಶ್ವ ಸಂಸ್ಥೆ) 1966 ರ ಜನವರಿ 10 ರಂದು ಅಂದಿನ ರಷ್ಯಾ ದೇಶದ ತಾಷ್ಕೆಂಟ್ ನಗರದಲ್ಲಿ ಲಾಲ್ ಬಹದ್ದೂರ್ ಶಾಸ್ತಿç ಮತ್ತು ಪಾಕ್ ಅಧ್ಯಕ್ಷ ಅಯೂಬ್‌ಖಾನ್ ನಡುವೆ ಕದನ ವಿರಾಮದ ಒಪ್ಪಂಧ ಏರ್ಪಟ್ಟಿತು. ಭಾರತದ ಪಾಲಿನ ದುರಂತವೆಂಬಂತೆ ಅಂದು ತಾಷ್ಕೆಂಟ್ ನಗರದಲ್ಲಿ ತಂಗಿದ್ದ ಶಾಸ್ತಿçಯವರು ಬೆಳಗಿನ ಎರಡು ಗಂಟೆಯ ಸಮಯದಲ್ಲಿ ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಅಲ್ಲಿಯೇ ಅಸುನೀಗಿದರು.

ರಾಜಕಾರಣದಲ್ಲಿದ್ದರೂ ಸಹ ಗಾಂಧೀಜಿವರ ಚಿಂತನೆಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಅವರಂತೆ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಬದುಕನ್ನು ಬದುಕಿದ ಮಹನೀಯರಲ್ಲಿ ಶಾಸ್ತ್ರಿ ಮತ್ತು ಕೆ.ಕಾಮರಾಜ್ ಬಹು ಮುಖ್ಯರಾದವರು.

– ಜಗದೀಶ್ ಕೊಪ್ಪ, ಬರಹಗಾರರು

Leave a Reply