ಬಿಜೆಪಿ ಗೆದ್ದಿರುವ ಪ್ರತಿ ಸ್ಥಾನದ ಹಿಂದೆ ಮೇಸ್ತನಂತಹ ಅಮಾಯಕ ಯುವಕರ ರಕ್ತ ಇದೆ: ಸಿದ್ದರಾಮಯ್ಯ

4 years ago

ಪರೇಶ್ ಮೇಸ್ತ ಸಾವು ಆಕಸ್ಮಿಕ ಸಿಬಿಐ ವರದಿ

ಬೆಂಗಳೂರು / ಮಂಗಳೂರು/ ದೆಹಲಿ: ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಪರೇಶ್ ಮೇಸ್ತ ಸಾವು ಹತ್ಯೆಯಲ್ಲ ಆಕಸ್ಮಿಕ ಎಂದು ಸಿಬಿಐ ವರದಿ ಸಲ್ಲಿಸಿದೆ.

ಈ ಪ್ರಕರಣವನ್ನು ಹಿಂದೂಗಳ ಮೇಲಿನ ದಾಳಿ ಎಂದು ಬಿಜೆಪಿ ನಾಯಕರು ಬಿಂಬಿಸಿ ಮತ ಧ್ರುವೀಕರಣಕ್ಕೆ ಯತ್ನಿಸಿದ್ದರು. ವಿಧಾನಸಭೆ ಮತ್ತು ಬೀದಿಯಲ್ಲಿ ಈ ವಿಷಯವನ್ನು ದೊಡ್ಡ ರಾದ್ಧಾಂತವಾಗಿಸಿದ್ದರು. ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷ ಎಂದು ಜನಾಭಿಪ್ರಾಯ ರೂಪಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದರು.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಇದೀಗ ಸಿಬಿಐ ಹೊನ್ನಾವರ ಕೋರ್ಟ್ ಗೆ ವರದಿ ನೀಡಿದ್ದು, ಪರೇಶ್ ಮೇಸ್ತ ಸಾವು ಹತ್ಯೆಯಲ್ಲ, ಆಕಸ್ಮಿಕ ಸಾವು ಎಂದಿದೆ.

ಸಿಬಿಐ ಅಂದು ತಾವು ಹೇಳಿದಂತೆಯೇ ವರದಿ ನೀಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ,
ಹೊನ್ನಾವರದ ಪರೇಶ್ ಮೇಸ್ತನದ್ದು ಹತ್ಯೆ ಅಲ್ಲ, ಆಕಸ್ಮಿಕ‌ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿಯ ಮುಖಕ್ಕೆ ಬಡಿದ ತಪರಾಕಿ. ಬಿಜೆಪಿ ಅವರಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತ ಇದೆ.
ಬಿಜೆಪಿ ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ ಎಂದು ಅವರು ಕಿಡಿಕಾರಿದ್ದಾರೆ.

ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪರೇಶ್ ಮೇಸ್ತಾ ಸಾವನ್ನು ಹಿಂದೂಗಳ ಹತ್ಯೆ ಎಂದು ಮಾಧ್ಯಮಗಳ ಮೂಲಕ ಅರಚಾಡಿದ್ದ ಬಿಜೆಪಿಗರು, ಈಗ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಇದರ ಜೊತೆಗೆ ಇತ್ತೀಚೆಗೆ ಪರೇಶ್ ಮೇಸ್ತಾ ಕೊಲೆ ಆರೋಪಿ ಎನ್ನಲಾದ ವ್ಯಕ್ತಿಯೋರ್ವನಿಗೆ ಸರ್ಕಾರದ ಒಳಗೆ ಸ್ಥಾನ ಕೊಟ್ಟ ಸುದ್ದಿ ಕೇಳಿದ್ದ ನನಗೆ ಕೇಂದ್ರ ಸರ್ಕಾರದ ಕಪಿಮುಷ್ಠಿಗೆ ಸಿಲುಕಿರುವ ಸಿಬಿಐನ ತನಿಖೆಯು ಸರಿಯಾಗಿ ನಡೆದಿದೆಯೋ ಇಲ್ಲವೋ ಎಂಬ ಅನುಮಾನವೂ ಕೂಡಾ ದಟ್ಟವಾಗಿದೆ ಎಂದಿದ್ದಾರೆ.

ಈ ಸಂಗತಿಯ ಆಚೆಗೆ ಹಿಂದೂಗಳ ಹತ್ಯೆ ಎನ್ನುತ್ತಾ ಶವ ರಾಜಕೀಯ ಮಾಡುವ ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗಡೆ, ಸಿ ಟಿ ರವಿ, ನಳೀನ್ ಕುಮಾರ್ ಅವರು ಈ ವೇಳೆ ರಾಜ್ಯದ ಜನರ ಮುಂದೆ ಬಹಿರಂಗವಾಗಿ ಕ್ಷಮೆ ಯಾಚಿಸಲಿ! ಎಂದು ಒತ್ತಾಯಿಸಿದ್ದಾರೆ.

Leave a Reply