ಆಪ್ ಸೇರಿದ ನಿರ್ದೇಶಕ, ನಿರ್ಮಾಪಕ ನಾರಿ ಶ್ರೀನಿವಾಸ್‌

4 years ago

ಬೆಂಗಳೂರು: ಚಂದನವನದ ನಿರ್ದೇಶಕ, ನಿರ್ಮಾಪಕ ಹಾಗೂ ಜೋಹಾರ್‌ ಪಬ್ಲಿಕೇಷನ್ಸ್‌ ಪ್ರಕಾಶಕ ನಾರಿ ಶ್ರೀನಿವಾಸ್‌ ಆಪ್ ಸೇರಿದರು.

ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ, ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ನಾರಿ ಶ್ರೀನಿವಾಸ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.

ಆಪ್ ರಾಜ್ಯ ಕಚೇರಿಯಲ್ಲಿ ನಾರಿ ಶ್ರೀನಿವಾಸ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ನಂತರ ಪ್ರತಿಕ್ರಿಯೆ ನೀಡಿದ ಪೃಥ್ವಿ ರೆಡ್ಡಿ, ಬಳ್ಳಾರಿ ಮೂಲದವರಾದ ನಾರಿ ಶ್ರೀನಿವಾಸ್‌ ಐದು ಸಿನಿಮಾಗಳನ್ನು ನಿರ್ದೇಶನ ಮಾಡಿ, ಎರಡು ಸಿನಿಮಾಗಳನ್ನು ನಿರ್ಮಿಸಿದ್ದಾರೆ ಎಂದರು.

ಸುಮಾರು 50ಕ್ಕೂ ಹೆಚ್ಚು ಯುವಕರಿಗೆ ಫೋಟೋಗ್ರಫಿ ಕಲಿಸಿ ಅವರಿಗೆ ಜೀವನ ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಆರ್ಥಿಕವಾಗಿ ನೆರವಾಗುವುದು, ಅವರಿಗೆ ಆಹಾರ ವಿತರಣೆ ಸೇರಿದಂತೆ ಅನೇಕ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದರು.

ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಮನೆಯಲ್ಲೇ ಆಹಾರ ತಯಾರಿಸಿ ನೊಂದವರಿಗೆ ವಿತರಿಸಿದ್ದಾರೆ. ಇಂತಹ ಜನಪರ ಕಾಳಜಿಯುಳ್ಳವರು ಆಪ್ ಸೇರುತ್ತಿರುವುದು ಸ್ವಾಗತಾರ್ಹ ಎಂದರು.

ಇದೇ ಸಂದರ್ಭದಲ್ಲಿ ಮಾತಾಡಿದ ನಾರಿ ಶ್ರೀನಿವಾಸ್‌, ರಾಜ್ಯವನ್ನಾಳಿದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರಿವೆ. ಇದರ ಪರಿಣಾಮದಿಂದ ಶ್ರೀಮಂತ ಕುಟುಂಬಗಳ ಮಕ್ಕಳಿಗೆ ಮಾತ್ರ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದರು.

ಬಡ ಹಾಗೂ ಮಧ್ಯಮ ವರ್ಗಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತು, ಇವರೂ ಕೂಡ ವೈದ್ಯರು ಹಾಗೂ ಎಂಜಿನಿಯರ್ ಆಗಬೇಕಾದರೆ ಆಪ್ ಅಧಿಕಾರಕ್ಕೆ ಬರಬೇಕು. ಆಪ್ ಒಂದೇ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿದ್ದು, ದೆಹಲಿಯಲ್ಲಿ ಇದನ್ನು ಸಾಧಿಸಿ ತೋರಿಸಿದೆ ಎಂದರು.

Leave a Reply