ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ ಅತ್ಯಗತ್ಯ: ಅಶ್ವತ್ಥನಾರಾಯಣ

4 years ago

ಬೆಂಗಳೂರು: ಜಪಾನ್, ಜರ್ಮನಿ, ಕೊರಿಯಾ, ಚೀನಾದಂತಹ ದೇಶಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಕಾರಕ ಬದಲಾವಣೆಗಳನ್ನು ಗಮನಿಸಿದರೆ ನಾವು ಹಿಂದಿದ್ದೇವೆ. ಶಿಕ್ಷಣದಲ್ಲಿ ತ್ವರಿತ ಬದಲಾವಣೆ ಆಗದಿದ್ದರೆ ಜಾಗತಿಕ ಸ್ಪರ್ಧೆಯಲ್ಲಿ ಸೋಲುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದರು.

ಕೊಮ್ಮಘಟ್ಟದಲ್ಲಿ ಇರುವ ಪದ್ಮಶ್ರೀ ಮ್ಯಾನೇಜ್ಮೆಂಟ್ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ನಡೆದ ಎನ್ಇಪಿ ಅನುಷ್ಠಾನದಲ್ಲಿ ಅತ್ಯುತ್ತಮ ಪದ್ಧತಿಗಳು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

34 ವರ್ಷಗಳ ಅಂತರದ ಬಳಿಕ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಉತ್ತಮವಾಗಿದೆ. ಜಾಗತೀಕರಣ ಯುಗದಲ್ಲಿ ಸಂಖ್ಯಾಬಲಕ್ಕೆ ಬೆಲೆ ಇಲ್ಲ. ಇಲ್ಲಿ ಪ್ರತಿಭೆ ಮಾತ್ರ ಮೌಲಿಕ ಸಂಗತಿ ಆಗಿದೆ ಎಂದು ಅವರು ಹೇಳಿದರು.

ಈಗಿನದು ಮುಕ್ತ ಯುಗ. ಬಹುಶಿಸ್ತೀಯ ಕಲಿಕೆ ಮತ್ತು ಕೌಶಲ್ಯಾಭಿವೃದ್ಧಿ ಈಗ ಸಾಧ್ಯವಿದೆ. ಎನ್ಇಪಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಸ್ತರ ಸಬಲೀಕರಣದ ಆಶಯವಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಎನ್ಇಪಿಯಲ್ಲಿ ಸಮಗ್ರ ಕಲಿಕೆ, ದೈಹಿಕ ಶಿಕ್ಷಣ, ಆರೋಗ್ಯ, ಸಾಮಾಜಿಕ ಕಳಕಳಿ, ದುರ್ಬಲರಿಗೆ ಸಮಾನ ಅವಕಾಶ, ಆವಿಷ್ಕಾರ, ವೈಜ್ಞಾನಿಕ ಮನೋಭಾವ, ತಂತ್ರಜ್ಞಾನ ಬಳಕೆ ಇತ್ಯಾದಿಗಳಿಗೆ ಮಹತ್ವ ಇದೆ.ದೇಶದಲ್ಲಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಅಗತ್ಯವಿದೆ. ಜತೆಗೆ ಬೋಧನೆಯಲ್ಲೂ ಸುಧಾರಣೆ ಆಗಬೇಕಿದೆ. ಇದಕ್ಕೆ ರಚನಾತ್ಮಕ ದೃಷ್ಟಿಕೋನ ಅಗತ್ಯ ಎಂದು ಹೇಳಿದರು.

ಸ್ಪರ್ಧೆ, ಸುಸ್ಥಿರತೆ, ನೈತಿಕತೆ, ಮೌಲ್ಯ ಇವೆಲ್ಲವನ್ನೂ ನಾವು ಸಮತೋಲನದಿಂದ ಉಳಿಸಿಕೊಳ್ಳಬೇಕು. ಇಲ್ಲದೆ ಹೋದರೆ ನಮ್ಮ ವಿಕಸನಕ್ಕೆ ಯಾವ ಬೆಲೆಯೂ ಇರದು ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ನ್ಯಾಕ್ ಕೇಂದ್ರದ ಡಾ.ಎಸ್ ಸಿ ಶರ್ಮಾ ವರ್ಚುವಲ್ ನಲ್ಲಿ ಮಾತನಾಡಿದರು. ಪದ್ಮಶ್ರೀ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸತೀಶ, ಬೆಂಗಳೂರು ವಿವಿ ಕುಲಪತಿ ಎಸ್.ಎಂ.ಜಯಕರ, ಪದ್ಮಶ್ರೀ ಕಾಲೇಜಿನ ಪ್ರಿನ್ಸಿಪಾಲ್ ಅನುರಾಧಾ ಮುಂತಾದವರು ಉಪಸ್ಥಿತರಿದ್ದರು.

Leave a Reply