ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ವಿಷಯವಾಗಿ ರಾಜಕಾರಣ ಮಾಡಲಾಗುತ್ತಿದೆ: ಎಂ.ಬಿ.ಪಾಟೀಲ್

9 months ago

ಬೆಂಗಳೂರು: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ವಿಷಯವಾಗಿ ಮಹಾರಾಷ್ಟ್ರದಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜಕೀಯ ಕಾರಣಕ್ಕಾಗಿಯೇ ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಕರಾರು ತೆಗೆದಿದ್ದಾರೆ ಎಂದರು.

ಕರ್ನಾಟಕವು ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ಈಗಿರುವ 519.60 ಮೀಟರ್ನಿಂದ 524.256 ಮೀ.ಗೆ ಎತ್ತರಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದೆ ಎನ್ನುವ ಮಹಾರಾಷ್ಟ್ರದ ತಕರಾರಿಗೆ ಅರ್ಥವಿಲ್ಲ ಎಂದರು.

ಮಹಾರಾಷ್ಟ್ರದ ಇಂಥಹ ವಾದ ಈಗಾಗಲೇ ನ್ಯಾಯಾಧಿಕರಣ, ಸುಪ್ರೀಂಕೋರ್ಟ್ ಮತ್ತು ಲೋಕಸಭೆಗಳಲ್ಲಿ ತಿರಸ್ಕೃತವಾಗಿದೆ , ʻಆಲಮಟ್ಟಿ ಅಣೆಕಟ್ಟೆಯನ್ನು ನಾವು ಕಟ್ಟುವುದಕ್ಕೂ ಮೊದಲೇ ಸಾಂಗ್ಲಿಯಲ್ಲಿ 1964, 1976, 1994 ಮತ್ತು 1997ರಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು ಎಂದರು.

ಸುಪ್ರೀಂಕೋರ್ಟ್ ಕೂಡ ಅಣೆಕಟ್ಟೆಯ ಎತ್ತರವನ್ನು 524.256 ಮೀ.ಗೆ ನಾವು ಏರಿಸಬಹುದು ಎಂದು 2000ನೇ ಇಸವಿಯಲ್ಲೇ ಹೇಳಿದೆ. ಇದಾದ ಮೇಲೂ ಮಹಾರಾಷ್ಟ್ರವು ನಮಗೆ ವಿರುದ್ಧವಾಗಿ 2005ರಲ್ಲಿ ನ್ಯಾಯಾಧಿಕರಣಕ್ಕೆ ಹೋಯಿತು. ಆದರೆ ಅದರ ಮಧ್ಯಾಂತರ ಮನವಿಯು ಅಲ್ಲೂ ತಿರಸ್ಕೃತಗೊಂಡಿದೆ ಎಂದರು.

ಆಲಮಟ್ಟಿ ಅಣೆಕಟ್ಟೆಯ ಕಾರಣದಿಂದಾಗಿಯೇ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದೆ ಎಂಬ ವಾದವನ್ನು ನ್ಯಾಯಮಂಡಳಿಯು ಪುರಸ್ಕರಿಸಿಲ್ಲ. ಈ ಸಂಬಂಧವಾಗಿ ನ್ಯಾಯಾಧಿಕರಣವು 2010 ಮತ್ತು 2013ರಲ್ಲಿ ಕೂಡ ವಿಸ್ತೃತ ವರದಿ ನೀಡಿದೆ. ಈ ವಿಚಾರದಲ್ಲಿ ಅದು ಹಿಪ್ಪರಗಿ ಜಲಾಶಯವನ್ನೂ ಪರಿಗಣಿಸಿದೆ ಎಂದರು.

ಜತೆಗೆ, ಕೃಷ್ಣಾ ನೀರು ಹಂಚಿಕೆ ಸಂಬಂಧ ರಚಿಸಲಾದ ಎರಡನೆಯ ನ್ಯಾಯಾಧಿಕರಣವು ನೀಡಿರುವ ತೀರ್ಪನ್ನು ಇದುವರೆಗೂ ಯಾವ ರಾಜ್ಯಗಳೂ ಪ್ರಶ್ನಿಸಿಲ್ಲ. ಹೀಗಿರುವಾಗ, ಈಗ ಇದ್ದಕ್ಕಿದ್ದಂತೆ ತಕರಾರು ತೆಗೆಯುವುದರ ಹಿಂದಿನ ಉದ್ದೇಶ ಯಾರಿಗಾದರೂ ಅರ್ಥವಾಗುತ್ತದೆ ಎಂದರು.

ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸಿದರೆ ತನಗೆ ನೀರು ಬರುವುದಿಲ್ಲ ಎಂದು ಆಂಧ್ರಪ್ರದೇಶ ಕೂಡ (ವಿಭಜನೆಗೂ ಮುನ್ನ) ಆಕ್ಷೇಪಣೆ ತೆಗೆದಿತ್ತು. ಆದರೆ, ಅದರ ವಾದ ಕೂಡ ಬಿದ್ದು ಹೋಗಿದೆ. ಮಹಾರಾಷ್ಟ್ರವು ಈಗ ನಾವು ಅಣೆಕಟ್ಟೆಯ ಎತ್ತರಕ್ಕೆ ಮುಂದಾಗಿರುವುದನ್ನು ಮರುಪರಿಶೀಲಿಸಲು ಆಗ್ರಹಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಐದು ವರ್ಷಗಳ ಕಾಲ ನೀರಾವರಿ ಸಚಿವನಾಗಿದ್ದ ನನಗೆ ಇದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಇದೆ ಎಂದರು.

ಸಾಂಗ್ಲಿ ಜಿಲ್ಲೆಯಲ್ಲಿ ಜಲಾನಯನ ಪ್ರದೇಶಗಳು ವಿಪರೀತ ಒತ್ತುವರಿಯಾಗಿವೆ. ಇದಕ್ಕೆ ಸಂಬಂಧಿಸಿದ ವರದಿ ನನ್ನ ಬಳಿ ಇದೆ. ಅಲ್ಲಿನ ಸರಕಾರ ಈ ಸಮಸ್ಯೆಯನ್ನು ಬಗೆಹರಿಸುವ ಕಡೆಗೆ ಗಮನ ಕೊಡಬೇಕು. ಅದನ್ನು ಬಿಟ್ಟು ನಮಗೆ ಅಡ್ಡಗಾಲು ಹಾಕಬಾರದು. ನನ್ನಲ್ಲಿರುವ ದಾಖಲೆಗಳನ್ನು ನಾನು ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರಿಗೂ ಕೊಡುತ್ತೇನೆ. ನಾವು ಇದಕ್ಕೆ ವಿವರವಾಗಿ ತಕ್ಕ ಉತ್ತರ ಕೊಡುತ್ತೇವೆ ಎಂದರು.

Leave a Reply