ಬೆಂಗಳೂರು: ಕೃಷ್ಣ ಜಲವಿವಾದ ಕುರಿತಂತೆ ನ್ಯಾಯ ಮಂಡಳಿ ನೀಡಿರುವ ಐತೀರ್ಪಿನ ಅನ್ವಯ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಇದಕ್ಕೆ ಮಹಾರಾಷ್ಟ್ರ ತೆಗೆದಿರುವ ತಕರಾರಿಗೆ ಅವರದೇ ಸರ್ಕಾರದ ವರದಿಯನ್ನು ಉತ್ತರವಾಗಿ ನೀಡಲು ತೀರ್ಮಾನಿಸಿದೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಆಲಮಟ್ಟಿ ಅಣೆಕಟ್ಟು ಹೆಚ್ಚಳ ಎತ್ತರದಿಂದ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಬರೆದಿರುವ ಪತ್ರಕ್ಕೆ ನೀರಾವರಿ ತಜ್ಞರ ವರದಿಯ ಮೂಲಕ ಉತ್ತರ ನೀಡಲು ಮುಂದಾಗಿದೆ.
ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ ಜಿಲ್ಲೆಯಲ್ಲಿನ ಪ್ರವಾಹಕ್ಕೆ ರಾಜ್ಯದ ಆಲಮಟ್ಟಿ ಮತ್ತು ಹಿಪ್ಪರಗಿ ಜಲಾಶಯದಲ್ಲಿನ ನೀರಿನ ಸಂಗ್ರಹ ಕಾರಣವಲ್ಲ ಎಂದು ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ನೀರಾವರಿ ತಜ್ಞರ ಸಮಿತಿ ನೀಡಿರುವ ವರದಿಯಲ್ಲಿ ಉಲ್ಲೇಖವಾಗಿದೆ ಎಂಬ ಅಂಶವನ್ನು ಮನದಟ್ಟು ಮಾಡಲು ತೀರ್ಮಾನಿಸಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಯಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿಯ ಅಧ್ಯಯನಕ್ಕಾಗಿ ಮಹಾರಾಷ್ಟ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ನಂದಕುಮಾರ ವಡನೆರೆ ನೇತೃತ್ವದಲ್ಲಿ 2020ರಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯಲ್ಲಿ ನೀರಾವರಿ ತಜ್ಞರಾದ ಸಂಜಯ ಘನೇಕರ, ಆರ್.ಆರ್. ಪವಾರ, ಪ್ರದೀಪ ಪುರಂದರೆ, ಅತುಲ್ ಕಪೋಲೆ, ಆರ್.ಡಿ. ಮೊಹತೆ, ಎಸ್.ಎಲ್.ದಾಯಫುಲೆ, ಎನ್.ಎಸ್. ಖರೆ, ಧೈರ್ಯಶೀಲ ಪವಾರ ಅವರಿದ್ದರು.
ಈ ಸಮಿತಿ ಆಲಮಟ್ಟಿ ಮತ್ತು ಹಿಪ್ಪರಗಿ ಜಲಾಶಯ ಸೇರಿ ಕರ್ನಾಟಕ, ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿ ಪಾತ್ರದಲ್ಲಿ ಆರು ತಿಂಗಳು ಅಧ್ಯಯನ ನಡೆಸಿದರು. ಆಲಮಟ್ಟಿಗೆ ಮಹಾರಾಷ್ಟ್ರ ತಜ್ಞರ ಸಮಿತಿ ಭೇಟಿ ನೀಡಿದಾಗ, ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್‌ಎಲ್) ಅಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳಿಗೆ ಆಲಮಟ್ಟಿ ಜಲಾಶಯದಲ್ಲಿ ಪ್ರತಿ ವರ್ಷ ನೀರು ಸಂಗ್ರಹಿಸುವ ವಿಧಾನ, ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದ್ದರು. ತಾಂತ್ರಿಕ ಅಂಶಗಳ ಆಧಾರದ ಮೇಲೆ ಪ್ರವಾಹದ ಆರೋಪವನ್ನು ಅಲ್ಲಗಳೆದಿದ್ದರು.
ಸಾಂಗ್ಲಿ, ಮಿರಜ್ ಮತ್ತು ಕೊಲ್ಹಾಪುರ ಭಾಗದಲ್ಲಿ ನೀರು ನುಗ್ಗಿ ಹಾನಿ ಸಂಭವಿಸಲು ಆಲಮಟ್ಟಿ ಮತ್ತು ಹಿಪ್ಪರಗಿ ಜಲಾಶಯಗಳೇ ಕಾರಣವೆಂದು ಪ್ರತಿ ವರ್ಷ ಮಹಾರಾಷ್ಟ್ರ ಸರ್ಕಾರವು ಆರೋಪಿಸುವುದರಲ್ಲಿ ಹುರುಳಿಲ್ಲ ಎಂದು ಮನದಟ್ಟು ಮಾಡಿಕೊಟ್ಟರು.
ಇದಾದ ನಂತರ ಸಮಿತಿ ಮಹಾರಾಷ್ಟ್ರದಲ್ಲಿ ಕೂಡ ಅಧ್ಯಯನ ನಡೆಸಿ ಎಲ್ಲರ ಅಭಿಪ್ರಾಯ ಆಲಿಸಿ, ತಾಂತ್ರಿಕ ವರದಿ ತಯಾರಿಸಿ, ಅಂದಿನ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ವರದಿ ಸಲ್ಲಿಸಿದೆ. ಇದರಲ್ಲಿ ಪ್ರವಾಹ ಉಂಟಾಗಲು ಕರ್ನಾಟಕದ ಜಲಾಶಯಗಳು ಕಾರಣವಲ್ಲ. ನದಿಪಾತ್ರದಲ್ಲಿನ ಅತಿಕ್ರಮಣ, ಕಾನೂನು ಬಾಹಿರ ಕಟ್ಟಡಗಳ ನಿರ್ಮಾಣಗಳೇ ಮುಖ್ಯ ಕಾರಣ. ಜತೆಗೆ ಮಳೆಗಾಲದಲ್ಲಿ ಅತಿ ಮಳೆಯಾದ ತಕ್ಷಣವೇ ಹಳ್ಳ, ಕೊಳ್ಳ, ನದಿಗಳು ಏಕಾಏಕಿ ಉಕ್ಕಿ ಹರಿಯುವುದರಿಂದ ಪ್ರವಾಹ ಉಂಟಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಈ ವರದಿ ಆಧಾರವಾಗಿಟ್ಟುಕೊಂಡು ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ.
ಈ ನಡುವೆ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್, ಆಲಮಟ್ಟಿ ಅಣೆಕಟ್ಟು ಹೆಚ್ಚಳ ಎತ್ತರ ವಿಚಾರ ಇದೀಗ ಮುಗಿದ ಅಧ್ಯಾಯವಾಗಿದೆ. ನ್ಯಾಯ ಮಂಡಳಿಯೇ ಐತೀರ್ಪಿನಲ್ಲಿ ಅಣೆಕಟ್ಟು ಹೆಚ್ಚಳ ಎತ್ತರಕ್ಕೆ ಅನುಮತಿ ನೀಡಿದೆ. ಅದರಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಪ್ರವಾಹ ಕುರಿತಂತೆ ಮಹಾರಾಷ್ಟ್ರ ಸರ್ಕಾರ ಎತ್ತಿರುವ ತಕರಾರಿಗೆ ಅವರದೇ ಸರ್ಕಾರದ ನೀರಾವರಿತಜ್ಞರ ಸಮಿತಿ ಉತ್ತರ ನೀಡಿದೆ. ಹೀಗಿದ್ದರೂ ಅಲ್ಲಿನ ಸರ್ಕಾರ ವಿನಾಕಾರಣ ವಿವಾದ ಮಾಡುತ್ತಿದೆ ಎಂದರು.




