DMK-AIDMK ಮೈತ್ರಿ ಉಹಾಪೋಹ: ವಿಜಯ್‌ ಗೆ ನಮ್ಮಿಂದ ನೋ Disturbance ಎಂದ ಸ್ಟಾಲಿನ್

5 months ago


ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಕ್ಷಣಕ್ಷಣಕ್ಕೂ ಹೊಸ ತಿರುವುಗಳು ಎದುರಾಗುತ್ತಿವೆ. ನಟ-ರಾಜಕಾರಣಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚಿಸಲು ಅಗತ್ಯವಾದ ಸಂಖ್ಯಾಬಲದ ಕೊರತೆ ಎದುರಾಗಿದೆ.


ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್ ಅವರಿಗೆ, “118 ಶಾಸಕರ ಬೆಂಬಲದೊಂದಿಗೆ ಬನ್ನಿ” ಎಂದು ರಾಜ್ಯಪಾಲರು ಸೂಚಿಸಿ ವಾಪಸ್ ಕಳುಹಿಸಿರುವ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ರಾಜ್ಯಪಾಲರ ಈ ನಡೆ ಸಾಂವಿಧಾನಿಕ ಬಿಕ್ಕಟ್ಟಿಗೆ ದಾರಿ ಮಾಡಿಕೊಡಬಹುದೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.


ಇನ್ನೊಂದೆಡೆ, ಡಿಎಂಕೆ ಪಕ್ಷ ಸ್ಪಷ್ಟ ನಿಲುವು ಪ್ರಕಟಿಸಿದೆ. ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾತನಾಡಿ, “ನಮಗೆ ಬೇಕಾದ ಸಂಖ್ಯಾಬಲ ಇಲ್ಲ. ಆದ್ದರಿಂದ ನಾವು ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಿಲ್ಲ” ಎಂದು ತಿಳಿಸಿದ್ದಾರೆ. ಜೊತೆಗೆ, ಅತಿದೊಡ್ಡ ಪಕ್ಷವಾಗಿರುವ ಟಿವಿಕೆ ನಾಯಕ ವಿಜಯ್ ಅವರನ್ನು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಬೇಕು ಎಂದು ಒತ್ತಾಯಿಸಿದ್ದಾರೆ.


ಚೆನ್ನೈನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ವಿಶೇಷವಾಗಿ ಎಐಎಡಿಎಂಕೆ ಶಾಸಕರ ಮುಂದಿನ ನಡೆ ಯಾವತ್ತಿರಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಮೂಲಗಳ ಪ್ರಕಾರ, ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟದ ಭಾಗವಾಗಿದ್ದ ಕಾಂಗ್ರೆಸ್ ಪಕ್ಷ ಮಾತ್ರ ಟಿವಿಕೆಗೆ ಬೆಂಬಲ ಸೂಚಿಸಿದೆ. ಆದರೆ ಕಾಂಗ್ರೆಸ್ ಬೆಂಬಲದ ನಂತರವೂ ವಿಜಯ್ ಅವರಿಗೆ ಸರ್ಕಾರ ರಚನೆಗೆ ಇನ್ನೂ ಆರು ಶಾಸಕರ ಕೊರತೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.


ಇತರ ಪಕ್ಷಗಳಾದ ವಿಸಿಕೆ, ಮುಸ್ಲಿಂ ಲೀಗ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ಟಿವಿಕೆಗೆ ಬೆಂಬಲ ನೀಡಲು ನಿರಾಕರಿಸಿರುವ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ತಮಿಳುನಾಡಿನಲ್ಲಿ ರಾಜಕೀಯ ಲೆಕ್ಕಾಚಾರಗಳು ಇನ್ನಷ್ಟು ಕುತೂಹಲಕರ ಹಂತ ತಲುಪಿವೆ.


ಈ ನಡುವೆ, ಮಾಜಿ ಸಿಎಂ ಸ್ಟಾಲಿನ್ ನೀಡಿರುವ ಮತ್ತೊಂದು ಹೇಳಿಕೆ ಗಮನ ಸೆಳೆದಿದೆ. “ಟಿವಿಕೆ ಸರ್ಕಾರ ರಚಿಸಿದರೆ, ನಮ್ಮಿಂದ ಆರು ತಿಂಗಳು ಯಾವುದೇ ತೊಂದರೆ ಇರುವುದಿಲ್ಲ” ಎಂದು ಹೇಳುವ ಮೂಲಕ ಡಿಎಂಕೆ ಪರೋಕ್ಷವಾಗಿ ಮೃದು ನಿಲುವು ತಾಳಿರುವ ಸಂದೇಶ ನೀಡಿದ್ದಾರೆ.


ಒಟ್ಟಿನಲ್ಲಿ, ತಮಿಳುನಾಡಿನಲ್ಲಿ ಸರ್ಕಾರ ರಚನೆ ಕುರಿತ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಮುಂದಿನ ಕೆಲವು ದಿನಗಳು ರಾಜ್ಯ ರಾಜಕೀಯದ ಭವಿಷ್ಯವನ್ನು ನಿರ್ಧರಿಸಲಿವೆ.


Leave a Reply