ಆಲಮಟ್ಟಿ, ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧ: ಸಿದ್ದರಾಮಯ್ಯ

3 years ago

#breaking #State #Govt #committed #implementation #Alamatti #Krishna #Yojana #Siddaramaiah

ವಿಜಯಪುರ: ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಸೇರಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ದವಿದೆ. ಆದರೆ, ಇದಕ್ಕೂ ಮುನ್ನ ನ್ಯಾಯಮಂಡಳಿ ಐತೀರ್ಪನ್ನು ಕೇಂದ್ರ ಸರ್ಕಾರ ಅಧಿಸೂಚನೆಯ ಗೆಜೆಟ್ ಅನ್ನು ಹೊರಡಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಭರ್ತಿಯಾಗಿರುವ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐತೀರ್ಪಿನ ಅಧಿಸೂಚನೆ ಪ್ರಕಟಿಸದ ಹೊರತು ಯುಕೆಪಿ ಮೂರನೇ ಹಂತ ಅನುಷ್ಠಾನ ಅಸಾಧ್ಯ ಎಂದು ತಿಳಿಸಿದರು.

ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮೂರನೇ ಹಂತದ ಯೋಜನೆಗಳ ಅನುಷ್ಠಾನಕ್ಕೆ ಅಂದಾಜು 1 ಲಕ್ಷ ಕೋಟಿ ರೂಪಾಯಿ ಅನುದಾನ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಬೇಕಿದೆ ಎಂದು ಪ್ರತಿಪಾದಿಸಿದರು.

ಈ ಸಂಬಂಧ ರಾಜ್ಯ ಸರ್ಕಾರದ ಬೇಡಿಕೆಯನ್ನು ಮಂಡಿಸಲು ಪ್ರಧಾನಿ, ಕೇಂದ್ರ ಜಲಸಂಪನ್ಮೂಲ ಸಚಿವರ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲಾಗುವುದು. ಭೇಟಿಗೆ ಸಮಯ ಕೊಡುವಂತೆ ಕೇಳಿ ಪತ್ರ ಬರೆಯಲಾಗಿದೆ. ಸಮಯ ಕೊಟ್ಟರೆ ಭೇಟಿಯಾಗಿ ವಸ್ತುಸ್ಥಿತಿ ತಿಳಿಸಲಾಗುವುದು ಎಂದರು.

ಇದೇ ವೇಳೆ ಉಪಸ್ಥಿತರಿದ್ದ ಉಪ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಮಾತನಾಡಿ, ಮಳೆ ಕೊರತೆ ನಡುವೆಯೂ ಈ ಬಾರಿ ಕೃಷ್ಣೆ ತುಂಬಿದೆ. ಬಾಗಿನ ಅರ್ಪಣೆ ಮಾಡಿದ್ದೇವೆ. ರೈತರ ಹಿತ ಕಾಪಾಡಲು ಆದ್ಯತೆ ನೀಡುತ್ತೇವೆ. ಪುನರ್ವಸತಿ, ಪುನರ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಕಾವೇರಿ ವಿಷಯದಲ್ಲಿ ಯಾವುದೇ ಆತಂಕ ಬೇಡ. ನಮ್ಮ ವಕೀಲರು ಸಮರ್ಥವಾಗಿ ರಾಜ್ಯದ ಪರ ವಾದ ಮಂಡಿಸುತ್ತಿದ್ದಾರೆ. ರಾಜ್ಯದ ರೈತರ ಪರವಾಗಿ ಸರ್ಕಾರ ಇರಲಿದೆ ಎಂದರು.

ಈ ಸಮಯದಲ್ಲಿ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಕೃಷ್ಣ ಬೈರೇಗೌಡ, ಆರ್.ಬಿ.ತಿಮ್ಮಾಪುರ, ಶಾಸಕರಾದ ಯಶವಂತ ರಾಯಗೌಡ ಪಾಟೀಲ, ಸಿ.ಎಸ್.ನಾಡಗೌಡ, ಅಶೋಕ ಮನಗೂಳಿ, ವಿಠಲ ಕಟಕದೋಂಡ, ಎಚ್.ವೈ.ಮೇಟಿ, ವಿಜಯಾನಂದ ಕಾಶಪ್ಪನವರ, ಜೆ.ಟಿ.ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಪ್ರಕಾಶ ರಾಠೋಡ, ಸುನೀಲ್ ಗೌಡ ಪಾಟೀಲ, ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಕೆಬಿ ಜಿಎನ್ ಎಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿವಕುಮಾರ್ ಇದ್ದರು.

Leave a Reply