ಯಾವುದು ಸುಳ್ಳು ಎಂಬುದನ್ನು ದಯವಿಟ್ಟು ತೋರಿಸಿ: ನೇ.ಭ. ರಾಮಲಿಂಗ ಶೆಟ್ಟಿ

10 months ago

ರಿಗೆ
ಮಾನ್ಯ ಎನ್.ಎಸ್. ಶ್ರೀಧರ ಮೂರ್ತಿ
ಸಂಚಾಲಕರು, ಮಾಧ್ಯಮ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಇಂದ –
ನೇ.ಭ. ರಾಮಲಿಂಗ ಶೆಟ್ಟಿ
ಮಾಜಿ ಗೌರವ ಕಾರ್ಯದರ್ಶಿಗಳು
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

ಮಾನ್ಯರೆ
ವಿಷಯ:  ೦೨/೦೭/೨೦೨೫ರಂದು ಬಿಡುಗಡೆ ಮಾಡಿದ ʻಸೂಕ್ತ ಸಮಯದಲ್ಲಿ ಕ.ಸಾ.ಪ.ದ ಹಿಂದಿನ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟರ ಆರೋಪಗಳಿಗೆ ಪ್ರತಿಕ್ರಿಯೆ: ಕನ್ನಡ ಸಾಹಿತ್ಯ ಪರಿಷತ್ತುʼ ಈ ಪತ್ರಿಕಾ ಪ್ರಕಟಣೆ ಕುರಿತ ಸ್ಪಷ್ಟಣೆ ಕೇಳಿ .

ದಿನಾಂಕ ೦೨/೦೭/೨೦೨೫ ರಂದು ತಾವು ‘ಸೂಕ್ತ ಸಮಯದಲ್ಲಿ ಕ.ಸಾ.ಪ.ದ ಹಿಂದಿನ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟರ ಆರೋಪಗಳಿಗೆ ಪ್ರತಿಕ್ರಿಯೆ: ಕನ್ನಡ ಸಾಹಿತ್ಯ ಪರಿಷತ್ತುʼ ಎಂಬ ತಲೆಬರಹದಲ್ಲಿ ಪತ್ರಿಕಾ ಪ್ರಕಟಣೆಯ ರೂಪದಲ್ಲಿ ಮಾಧ್ಯಮಗಳಿಗೆ ಒಂದು ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದೀರಿ.

ಅದರಲ್ಲಿರುವ ಅಂಶಗಳ ಪ್ರಕಾರ – ಹಿಂದಿನ ಗೌರವ ಕಾರ್ಯದರ್ಶಿಗಳಾಗಿದ್ದ ನೇ.ಭ. ರಾಮಲಿಂಗ ಶೆಟ್ಟರು ಹಲವು ಸುಳ್ಳು ಆರೋಪಗಳನ್ನು ಮಾಡಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ರಾಜೀನಾಮೆಯನ್ನು ಹರಿಬಿಟ್ಟಿರುವುದು ಕನ್ನಡ ಸಾಹಿತ್ಯ ಪರಿಷತ್ತಿನ ಗಮನಕ್ಕೆ ಬಂದಿರುತ್ತದೆ. ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸ್ಥಾನದಿಂದ ಮುಕ್ತಗೊಳಿಸಲು ನಿರ್ಧರಿಸಿ ಈ ಪ್ರಸ್ತಾವನೆಯನ್ನು ಕಾರ್ಯಕಾರಿ ಸಮಿತಿಯ ಮುಂದಿಡಲು ತೀರ್ಮಾನಿಸಲಾಗಿತ್ತು. ಇದರ ಸುಳಿವು ಸಿಕ್ಕಿ ಅವರು ವಜಾಗೊಳ್ಳುವುದನ್ನು ತಪ್ಪಿಸಿಕೊಳ್ಳಲು ರಾಜೀನಾಮೆ ನೀಡಿ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ನೀವು ಪ್ರಸ್ತಾಪಿಸಿದ್ದೀರಿ.

ಮುಂದುವರೆದು, ನೇ.ಭ. ರಾಮಲಿಂಗ ಶೆಟ್ಟಿಯವರ ವಿಚಾರವನ್ನು ಸಾಕ್ಷಿ ಹಾಗೂ ಆಧಾರಗಳ ಸಹಿತವಾಗಿ ಮುಂದಿನ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಅವರ ಯಾವುದೇ ಹೇಳಿಕೆಗಳಿಗೆ ಪ್ರತಿಕ್ರಿಯಿಸದೆ ಇರಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇಲ್ಲಿ ನಾನು ಸ್ಪಷ್ಟವಾಗಿ ಕೇಳಬಯಸುವುದು:

1. ನಾನು “ಸುಳ್ಳು ಆರೋಪಗಳನ್ನು” ಮಾಡಿದೆ ಎಂದು ಹೇಳಲಾಗಿದೆ. ಯಾವುದು ಸುಳ್ಳು ಎಂಬುದನ್ನು ದಯವಿಟ್ಟು ತೋರಿಸಿ.

2. ನನ್ನನ್ನು ಗೌರವ ಕಾರ್ಯದರ್ಶಿ ಸ್ಥಾನದಿಂದ ದೂರವಿಡಲು ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದೀರಿ. ಈ ತೀರ್ಮಾನವನ್ನು ಯಾರು, ಯಾವ ದಿನಾಂಕದಲ್ಲಿ ತೆಗೆದುಕೊಂಡರು?

3. ನಾನು ಸುಳಿವು ಪಡೆದು ರಾಜೀನಾಮೆ ನೀಡಿದ್ದೇನೆ ಎಂದು ಬರೆದಿದ್ದೀರಿ. ಆ ಸುಳಿವು ನೀಡಿದವರು ಯಾರು?

4. ಈ ಎಲ್ಲ ಅಂಶಗಳು “ಕಪೋಲಕಲ್ಪಿತ, ಕಾಲ್ಪನಿಕ”ವಾಗಿವೆ ಎಂಬುದು ಸ್ಪಷ್ಟವಾಗಿದೆ ಇದಕ್ಕೆ ನಿಮ್ಮ ಉತ್ತರ ಏನು.?

ಅದೇ ರೀತಿ, ಈ ಪತ್ರಿಕಾ ಪ್ರಕಟಣೆಯು ನಿಮ್ಮದಾಗಿದೆಯೋ, ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತ ಪ್ರಕಟಣೆಯೋ ಎಂಬುದು ಗೊಂದಲದ ವಿಷಯವಾಗಿದೆ. ಹಿಂದಿನ ಎಲ್ಲ ಪತ್ರಿಕಾ ಪ್ರಕಟಣೆಗಳಲ್ಲಿ ಅಧಿಕೃತ ವ್ಯಕ್ತಿಗಳ ಹೆಸರು ಸ್ಪಷ್ಟವಾಗಿ ಇದ್ದವು. ಆದರೆ ಈ ಪ್ರಕಟಣೆಯಲ್ಲಿ ಹೆಸರು ಇಲ್ಲ. ಇದು ಅಡ್ಡಗೋಡೆಯ ಮೇಲಿಂದ ದೀಪ ಇಟ್ಟಂತೆ ತೋರಿಸುತ್ತಿದೆ – ಯಾರೋ ಒಬ್ಬರನ್ನು  ಉಳಿಸಲು ಮಾಡುತ್ತಿರುವ ತಂತ್ರ ಇದು ಎಂಬುದೂ ಸ್ಪಷ್ಟವಾಗುತ್ತಿದೆ.

ಈ ಪ್ರಕಟಣೆಯಲ್ಲಿ “ಕನ್ನಡ ಸಾಹಿತ್ಯ ಪರಿಷತ್ತು” ಎಂಬ ಹೆಸರನ್ನು ಬಳಸಲಾಗಿದೆ. ಈ ಪ್ರಕಟಣೆಯ ಪರವಾಗಿ ಮಾತನಾಡಿದವರು ಯಾರು? ಅದನ್ನು ಸ್ಪಷ್ಟಪಡಿಸಿ. ಇಲ್ಲದಿದ್ದಲ್ಲಿ ನಾನು ಈ ಪ್ರಕಟಣೆಯನ್ನು ನೀವು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಿ, ಸಮಾಜದಲ್ಲಿ ನನ್ನ ಕುರಿತು ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದೀರಿ ಎಂದು ಭಾವಿಸಬೇಕಾಗುತ್ತದೆ.

ನನಗೆ ಅನ್ಯಾಯವಾಗಿದೆ ಎಂಬುದು ನನ್ನ ನಿಲುವು. ನಾನು ನನ್ನ ದೇಶದ ಘನ ಸಂವಿಧಾನದಡಿ, ನನಗೆ ದಕ್ಕಿರುವ ಹಕ್ಕಿನ ಅಡಿಯಲ್ಲಿ ನನಗೆ ಕ ಸಾ ಪ ದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಬಯಲು ಮಾಡಿಕೊಳ್ಳಲು ಅವಕಾಶವಿದೆ. ಅದು ನನ್ನಿಂದ ಸಾಧ್ಯವೂ ಇದೆ. ಅದಕ್ಕಾಗಿ ನಾನು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲು ಅವಕಾಶವಿದೆ. ನಾನು ಅದನ್ನು ಬಳಸಿಕೊಂಡಿದ್ದೇನೆ ಎಂಬುದರಲ್ಲೇನೂ ತಪ್ಪಿಲ್ಲ.

ಆದರೆ ನೀವು ಪ್ರಕಟಣೆಯ ಮೂಲಕ ನಡೆಸಿರುವ ಪ್ರಯತ್ನ, ಅವ್ಯವಹಾರ, ಅಧಿಕಾರದ ದುರುಪಯೋಗಗಳನ್ನು ಸಮರ್ಥಿಸಲು “ಕನ್ನಡ ಸಾಹಿತ್ಯ ಪರಿಷತ್ತು” ಹೆಸರನ್ನು ಬಳಸಿದ ತಂತ್ರ ಮಾತ್ರ ಪ್ರಶ್ನೆಗೆ ಒಳಪಡುವಂತಹದ್ದು.

ಈ ಎಲ್ಲ ಪ್ರಶ್ನೆಗಳಿಗೆ ನೀವು ಶೀಘ್ರ ಉತ್ತರ ನೀಡುವಿರೆಂದು ನಾನು ನಿರೀಕ್ಷಿಸುತ್ತಿದ್ದೇನೆ. ಇಲ್ಲದಿದ್ದಲ್ಲಿ ನಾನು ಕಾನೂನಿನ ಮೊರೆ ಹೋಗಬೇಕಾಗುವುದು ಅನಿವಾರ್ಯವಾಗುವುದು ಎಂಬುದನ್ನು ಈ ಮೂಲಕ ತಿಳಿಸುತ್ತೇನೆ.

ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವೆ.

ಇಂತಿ,
ನೇ.ಭ. ರಾಮಲಿಂಗ ಶೆಟ್ಟಿ
ಮಾಜಿ ಗೌರವ ಕಾರ್ಯದರ್ಶಿಗಳು
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

Leave a Reply