ಮೊಗಳ್ಳಿ ಗಣೇಶ್ ಅಗಲಿಕೆ ವೈಯಕ್ತಿಕವಾಗಿ ನೋವುಂಟು ಮಾಡಿದೆ

6 months ago

ಶ್ರೀಯುತ ಮೊಗಳ್ಳಿ ಗಣೇಶ್ ಅವರು ಕನ್ನಡದ ಪ್ರತಿಭಾವಂತ ಲೇಖಕರು. ನಾನು ಮೈಸೂರಿಗೆ ಬಂದಾಗ ಕೆಲ ವರ್ಷ ಇಲ್ಲಿಯೇ ಇದ್ದರು. ಅನಂತದಲ್ಲಿ ಅವರು ಹಂಪಿಗೆ ಪಯಣ ಬೆಳೆಸಿದರು.

ಗಣೇಶ್ ಅವರು ನಾನು ಬರೆದ ಕಥೆಗಳನ್ನು ಓದಿದ್ದರು ಮತ್ತು ಅವರದೇ ಆದ ವ್ಯಾಖ್ಯಾನವೂ ಅವರಿಗಿತ್ತು. ಇವುಗಳ ಕುರಿತು ದೂರವಾಣಿಯಲ್ಲಿ ಅವರು ಮಾತನಾಡಿದರು. ಜೊತೆಗೆ ಚೆನ್ನಣ್ಣ ವಾಲಿಕಾರ್ ಅವರ ಕಥೆಗಳ ಬಗ್ಗೆಯೂ ಕೆಲ ಮಾತುಗಳನ್ನು ಹೇಳಿದ್ದರು. ದಲಿತ ಪರಿಕಲ್ಪನೆಯ ಬಗ್ಗೆ ಆರಂಭದಲ್ಲಿ ಇವರಿಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ ಹಾಗೆ ಗುರುತಿಸಿಕೊಳ್ಳಲು ಅವರು ಬಯಸುತ್ತಿರಲಿಲ್ಲ ಎನಿಸಿದೆ. ಆದರೆ ಕಾಲಂತರದಲ್ಲಿ ಆ ಪರಿಕಲ್ಪನೆಯನ್ನು ಅವರು ತಮ್ಮದನ್ನಾಗಿ ಮಾಡಿಕೊಂಡರು. ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವಾಗ ಹೇಳಿದ ಮಾತೆಂದರೆ, ದಲಿತ ಸ್ತ್ರೀವಾದ ಕುರಿತು ಅವರು ಕೆಲಸ ಮಾಡುವಾಗ “ಈ ವಿಷಯದ ಕುರಿತು ಯಾರೂ ಬರೆದಿಲ್ಲ” ಎಂದುಕೊಂಡೆ ಸಮೀಕ್ಷೆ ಮಾಡಲು ಆರಂಭಿಸಿದೆ. ಆದರೆ ನಿಮ್ಮ ಲೇಖನ ನೋಡಿ ಈ ವಿಷಯದ ಕುರಿತೂ ಬರೆದದ್ದು ನನಗೆ ಆಶ್ಚರ್ಯವೆನಿಸಿತು. ನೀವು ಇಂಥ ವಿಷಯದ ಬಗ್ಗೆ ಬರೆದಿಲ್ಲ ಎಂದು ಹೇಳುವುದು ಕಷ್ಟ ಎಂದಿದ್ದರು.

ಒಂದು ಸಂದರ್ಭದಲ್ಲಿ ಸ್ವಲ್ಪ ನಿಷ್ಟುರವಾದ ಮಾತುಗಳ ಚರ್ಚೆಯೇ ನಡೆಯಿತು. ಅದು ನಾನು ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳ ಸಂಪಾದನಾ ಕಾರ್ಯದಲ್ಲಿ ತೊಡಗಿದ ಸಂದರ್ಭ. ಮೊಗಳ್ಳಿ ಗಣೇಶ್ ಅವರ ಸಾಹಿತ್ಯದ ಕುರಿತು ಲೇಖನವೊಂದನ್ನು ಬರೆದು ಕೊಡಲು ಒಬ್ಬರಿಗೆ ಸೂಚಿಸಿದೆವು. ಆ ವಿಷಯ ಅವರಿಗೆ  ತಲುಪಿತ್ತು. ಆಗ ಅವರು ನನಗೆ ಫೋನಾಯಿಸಿ, “ನನ್ನ ಸಾಹಿತ್ಯದ ಕುರಿತು ನಿಮ್ಮ ಸಾಹಿತ್ಯ ಚರಿತ್ರೆಯ ಸಂಪುಟದಲ್ಲಿ ಬರೆಯಿಸಬೇಡಿ” ಎಂದರು. ಕಾರಣವೇನು ಎಂದು ಕೇಳಿದರೆ, “ಅದು ನನಗೆ ಇಷ್ಟವಿಲ್ಲ” ಎಂದರು. ಮೊಗಳ್ಳಿಯವರೇ ಇದು ಉತ್ತರವಾಗದು. ಏಕೆಂದರೆ ನೀವು ಒಮ್ಮೆ ಬರೆದು ಸಾರ್ವತ್ರಿಕವಾಗಿ ಪ್ರಕಟಿಸಿಯಾದ ಮೇಲೆ ಅದು ನಿಮ್ಮ ಸೊತ್ತಾಗಿ ಉಳಿಯದು, ಅದರ ಬಗ್ಗೆ ಯಾರೂ ಬರೆಯಬಹುದು, ವಿಮರ್ಶಿಸಬಹುದು. “ಅದು ನನಗೆ ಇಷ್ಟ ಇಲ್ಲ” ಎಂದು ಹೇಳುತ್ತಿದ್ದೇನೆ ಅಲ್ಲವೆ? ನೋಡಿ ಒಬ್ಬ ಸಂಪಾದಕನ ಕಷ್ಟಗಳನ್ನು ನೀವು ಅರ್ಥ ಮಾಡಿಕೊಳ್ಳಿ. ನೀವು ಒಬ್ಬ ಮಹತ್ವದ ಲೇಖಕರು. ನಿಮ್ಮ ಕುರಿತು ಲೇಖನ ಇಲ್ಲದೆ ಹೋದರೆ, ನಾನು ಉದ್ದೇಶಪೂರ್ವಕವಾಗಿಯೇ ನಿಮ್ಮ ಬಗ್ಗೆ ಲೇಖನ ಬರೆಸಿಲ್ಲ ಎಂದಾಗುತ್ತದೆ. ಒಂದು ವೇಳೆ, ನೀವು “ಈ ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನನ್ನ ಸಾಹಿತ್ಯದ ಕುರಿತು ಲೇಖನವನ್ನು ಬರೆಯಿಸಿ ಪ್ರಕಟಿಸಬಾರದು” ಎಂದು ಲಿಖಿತವಾಗಿ ಪತ್ರ ಬರೆದರೆ, ನಾನು ಪ್ರಕಟಿಸುವುದನ್ನು ಕೈ ಬಿಡುತ್ತೇನೆ ಮತ್ತು ಯಾರಾದರೂ ಕೇಳಿದರೆ ನಿಮ್ಮ ಪತ್ರ ತೋರಿಸಲು ನನಗೊಂದು ದಾಖಲೆಯಾಗುತ್ತದೆ ಎಂದೆ. “ನೀವು ಹೀಗೆಲ್ಲಾ ಹೇಳುತ್ತೀರಿ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ” ಎಂದರು. ನಿಮ್ಮಿಂದ ನಾನೂ ಇಂಥ ಮಾತು ನಿರೀಕ್ಷಿಸಿರಲಿಲ್ಲ ಎಂದೆ. ಇಬ್ಬರ ಮಾತೂ ಪರಸ್ಪರ ಒಡಂಬಡಿಕೆಯ ದನಿಯಲ್ಲಿ ಮೆತ್ತಗಾದವು.

ಲೇಖನ ಬರೆಯುವವರ ಬಗ್ಗೆ ಅವರಲ್ಲಿ ಅಸಮಾಧಾನ ಇತ್ತೆ? ಎನ್ನುವ ಪ್ರಶ್ನೆ, ಆನಂತರದಲ್ಲಿ ನನಗೆ ಕಾಡಿದೆಯಾದರೂ ಲೇಖನ ಬರೆಯುವವರ ಬಗ್ಗೆ ನನಗೆ ಆತ್ಮವಿಶ್ವಾಸ ಇದ್ದದರಿಂದ ಮತ್ತೆ ನಾನದನ್ನು ಕೆದಕಲು ಹೋಗಲಿಲ್ಲ.

ಅವರ ಅಗಲಿಕೆ ವೈಯಕ್ತಿಕವಾಗಿ ನೋವುಂಟು ಮಾಡಿದೆ ಆದರೆ ಅವರ ಮಾತುಗಳು ಮರುಕಳಿಸುತ್ತವೆ.

– ಅರವಿಂದ ಮಾಲಗತ್ತಿ, ಹಿರಿಯ ಸಾಹಿತಿ

Leave a Reply