ನಾನು ಬರೆದಿರುವ `ಬರಿ ನಿದ್ದೆಯಲ್ಲವೊ ಅಣ್ಣಾ! ಪುಸ್ತಕದಿಂದ ಆಯ್ದ ಒಂದು ತುಣುಕು.
ಮೂತ್ರ ವಿಚಾರಂ
ಮೂತ್ರ ಎಂದರೆ ಕೆಲವರು ಮೂಗು ಮುರಿಯುತ್ತಾರೆ. ಮತ್ತೆ ಕೆಲವರು ಅದಕ್ಕೆ ಉಚ್ಚೆ ಎಂದು ಯಾಕೆ ಕರೆಯಬಾರದು ಎಂದು ತಕಾರರು ತೆಗೆಯುತ್ತಾರೆ. ಅದು ಏನೇ ಇರಲಿ. ಮೂತ್ರ ಎಂದರೆ ಏನು ಎಂಬುದನ್ನು ಮತ್ತೆ ವಿವರಿಸಿ ಹೇಳಬೇಕಾಗಿಲ್ಲ. ವ್ಯತ್ಯಾಸ ಇಷ್ಟೆ. ಕೆಲವರು ಎಚ್ಚರಿಕೆ ಇರುವಾಗ, ತಮ್ಮ ಆಸಕ್ತಿ ಹಾಗೂ ಆಯ್ಕೆಗೆ ಅನುಗುಣವಾಗಿ, ಸೂಕ್ತವಾದ ಅಥವಾ ಸೂಕ್ತವಲ್ಲದ ಜಾಗಗಳಲ್ಲಿ ಮೂತ್ರ ಮಾಡುತ್ತಾರೆ. ತಮ್ಮ ಆಸಕ್ತಿ ಎಂದು ಮಾತ್ರ ಹೇಳಲು ಆಗುವುದಿಲ್ಲ. ಮೂತ್ರದ ಭಾರೀ ಒತ್ತಾಯದ ಮೇರೆಗೂ ಮೂತ್ರ ಮಾಡಬೇಕಾಗುತ್ತದೆ. ಹೀಗೆ ಒತ್ತಡದಲ್ಲಿ ಮೂತ್ರ ಮಾಡುವಾಗ, ಕೋಪವೂ, ಸಿಟ್ಟೂ, ಬೈಗುಳ ಈ ಎಲ್ಲವೂ ಬರುತ್ತವೆ. ಆದರೆ ಯಾರಿಗೆ ಬೈಯ್ಯುವುದು? ಯಾವುದಕ್ಕೆ ಬೈಯ್ಯುವುದು? ತಮ್ಮ ತಮ್ಮ ಶಕ್ತ್ಯಾನುಸಾರ ಹೊರಗೆ ದಬ್ಬುವುದು ಅಷ್ಟೆ. ಮೂತ್ರ ಮಾಡಲು ಒಳಗಿನಿಂದ ಒತ್ತಾಯ ಬಂದಾಗ `ನೆಟ್ವರ್ಕ್ ಇಲ್ಲ, ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದೇನೆ’ ಎಂದು ಹೇಳಲು ಸಾಧ್ಯವೆ?
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಎಚ್ಚರ ಇರುವಾಗ ಮಾಡುವ ಮೂತ್ರದ ಬಗ್ಗೆ ಯಾರೂ, ಏನೂ ಹೇಳಬೇಕಾಗಿಲ್ಲ. ಆದರೆ ನಿದ್ದೆ ಮಾಡುವಾಗ ಮಾಡುವ ಮೂತ್ರದ ಬಗ್ಗೆ ಮಾತ್ರ ಏನಾದರೂ ಹೇಳಲೇಬೇಕಾಗುತ್ತದೆ. ಹಾಗಾದರೆ ಇದು ಅಷ್ಟು ಸುಲಭವಾ? ಇಲ್ಲ ಬಹಳ ಕಷ್ಟ. ಯಾಕೆಂದರೆ ನಿದ್ದೆ ಮಾಡುವಾಗ ಮೂತ್ರ ಮಾಡಿದವರನ್ನು, ಅಥವಾ ಮೂತ್ರ ಮಾಡಿದ ಸೀನನ್ನು ನೋಡಿದವರು ಯಾರು? ಅಥವಾ ನಿದ್ದೆಯಲ್ಲಿ ಮೂತ್ರ ಮಾಡಿಕೊಂಡವರು `ನಾನು ನಿದ್ದೆಯಲ್ಲಿ ಮೂತ್ರ ಮಾಡಿಕೊಂಡಿದ್ದೆ’ ಎಂದು ಯಾವಾಗಾದರೂ ಹೇಳುತ್ತಾರೆಯೆ? ನಿದ್ದೆಯಲ್ಲಿ ಮೂತ್ರ ಮಾಡಿಕೊಂಡವರು ಸಾಧ್ಯವಾದಷ್ಟೂ ಅದನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಮನುಷ್ಯರು ಈ ರೀತಿಯ ಅದೆಷ್ಟೋ ಅನುಭವಗಳನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಹೀಗೆ ಇವರು ಮುಚ್ಚಿಟ್ಟುಕೊಳ್ಳುವ ಅನುಭವಗಳನ್ನು ಸಾಹಿತ್ಯ ಬಿಚ್ಚಿಡಬೇಕಾಗುತ್ತದೆ. ಹೀಗಾಗಿ ಮನುಷ್ಯರ ಮುಚ್ಚಿಟ್ಟ ಅನುಭವಗಳು ಸಾಹಿತ್ಯದಲ್ಲಿ ಬಿಚ್ಚಿಕೊಳ್ಳುವ ಮೂಲಕ ಸಾಹಿತ್ಯ ಲೋಕವನ್ನು ವಿಸ್ತಾರ ಮಾಡಿವೆಯಂತೆ. ಸೂಕ್ಷ್ಮಗೊಳಿಸಿವೆಯಂತೆ. ಬಹುಶಃ ಸಾಹಿತ್ಯದ ಮುಖ್ಯವಾದ ಕೆಲಸವೇ ಇದು ಎನ್ನುವವರೂ ಇದ್ದಾರೆ.

ಎಚ್ಚರಿಕೆ ಇದ್ದಾಗ ಉಚ್ಚೆ ಹುಯ್ಯುವುದರಲ್ಲೂ ತರಾವರಿ ಇದೆ ಎಂಬುದು ಇದೀಗ ಬೆಳಕಿಗೆ ಬಂದಿದೆ. ಅವನ್ನು ಹೀಗೆ ಗುರುತಿಸುತ್ತಾ ಹೋಗಬಹುದು. ಬೆಳಿಗ್ಗೆ ಎದ್ದಾಗ, ಮಧ್ಯರಾತ್ರಿ, ಜಾಸ್ತಿ ನೀರು ಕುಡಿದ ಮೇಲೆ, ಜಾಸ್ತಿ ಡ್ರಿಂಕ್ಸ್ ಮಾಡಿದ ಮೇಲೆ, ಬಹಳ ದೂರ ಪ್ರಯಾಣ ಮಾಡಿ ಇಳಿದಾಗ. ಹೀಗೆ ಇದರಲ್ಲೇ ಅನೇಕ ಬಗೆಗಳಿವೆಯಂತೆ. ಇದಿಷ್ಟೇ ಅಲ್ಲದೆ ರಾತ್ರಿ ನಿದ್ದೆ ಮಾಡುವಾಗ ಕೆಲವರು ಹಾಸಿಗೆಯಲ್ಲೇ ಉಚ್ಚೆ ಹುಯ್ದುಕೊಳ್ಳುತ್ತಾರಂತೆ. ಸಂಸ್ಕೃತಿಯನ್ನು ಕುರಿತ ಬರವಣಿಗೆಗಳಲ್ಲಿ, ಮನೆಮಠ, ಉಡಿಗೆತೊಡಿಗೆ, ಊಟ, ಹಾಡು, ಡ್ಯಾನ್ಸು ಅಂತ ಮಾತ್ರ ಬರೆದಿರುತ್ತಾರೆ. ಅದರ ಜೊತೆಗೆ `ಯಾವ ಯಾವ ಜಾತಿಯವರು, ಯಾವ ಯಾವ ಸಮುದಾಯದವರು ರಾತ್ರಿ ನಿದ್ದೆ ಮಾಡುವಾಗ ಹಾಸಿಗೆಯಲ್ಲಿ ಉಚ್ಚೆ ಹುಯ್ಯುತ್ತಾರೆ ಅಥವಾ ಉಚ್ಚೆ ಹುಯ್ಯುವುದಿಲ್ಲ’ ಎಂಬ ಬಗ್ಗೆಯೂ ಬರೆಯುವ ಅಗತ್ಯವಿದೆ. ಆಗ ಸಂಸ್ಕೃತಿ ಕುರಿತ ಬರವಣಿಗೆಗೆ ಒಂದು ಸಮಗ್ರತೆಯೂ, ನಿರ್ದಿಷ್ಟತೆಯೂ ಬರುತ್ತದೆ. ಇದುವರೆಗೆ ಬೌದ್ಧಿಕ ವಲಯಕ್ಕೆ ಗೊತ್ತಿಲ್ಲದ ಸಂಸ್ಕೃತಿಯ ಮುಖ್ಯವಾದ ಅಂಶ ಗೊತ್ತಾಗುತ್ತದೆ. ಹೆಚ್ಚು ಕಡಿಮೆಯಾದರೆ ಇದರಿಂದ ಸಂಸ್ಕೃತಿಯ ವ್ಯಾಖ್ಯಾನವೇ ಚೇಂಜ್ ಆದರೂ ಆಗಬಹುದು. ಯಾವುಯಾವುದೊ ಕಾರಣಕ್ಕೆ ಸಂಸ್ಕೃತಿಯ ವ್ಯಾಖ್ಯಾನ ಚೇಂಜ್ ಆಗುತ್ತದಂತೆ.
ಹಾಗಾದರೆ ನಿದ್ದೆ ಮಾಡುವಾಗ ಹಾಸಿಗೆಯಲ್ಲಿ ಉಚ್ಚೆ ಹುಯ್ಯುವುದನ್ನು ಬರವಣಿಗೆಯಲ್ಲಿ ಮೂಡಿಸಿದ ಕಾರಣಕ್ಕೆ ಅದು ಚೇಂಜ್ ಆಗಬಾರದು ಎಂದೇನೂ ಇಲ್ಲವಲ್ಲ.
ಅಂದ ಹಾಗೆ ಇನ್ನೊಂದು ಮಾತಿದೆ. ಜನಗಣತಿ ಮಾಡುವಾಗ `ನಿಮ್ಮ ಮನೆಯಲ್ಲಿ ಎಷ್ಟು ಜನ ಗಂಡಸರು, ಎಷ್ಟು ಜನ ಹೆಂಗಸರು ಇದ್ದೀರಿ’ ಎಂದು ಕೇಳಿ ಅದನ್ನು ಬರೆದುಕೊಳ್ಳುತ್ತಾರೆ. ಅದೇ ರೀತಿ ಮಕ್ಕಳು ಮರಿಗಳೆಷ್ಟು, ಕೋಳಿಕುನ್ನಿಗಳೆಷ್ಟು ಮುಂತಾದ ಅಂಶಗಳನ್ನೂ ಕೇಳಿ ಬರೆದುಕೊಳ್ಳುತ್ತಾರೆ. ಇದೆಲ್ಲ ಹೊಸದೇನೂ ಅಲ್ಲ. ಅದರ ಜೊತೆಗೆ `ನಿದ್ದೆ ಮಾಡುವಾಗ ಉಚ್ಚೆ ಹುಯ್ದುಕೊಳ್ಳುವ’ ಮಾಹಿತಿಯನ್ನೂ ಜನಗಣತಿಯಲ್ಲಿ ಕಡ್ಡಾಯವಾಗಿ ದಾಖಲಿಸಿದರೆ ಒಳ್ಳೆಯದು. ಇದರಿಂದ ಯಾವ ಯಾವ ಜಾತಿಯ ಜನರು ಹೆಚ್ಚು ಹೆಚ್ಚು ಉಚ್ಚೆ ಹುಯ್ದುಕೊಳ್ಳುತ್ತಾರೆ ಎಂಬುದನ್ನು ಕಂಡುಹಿಡಿಯಬಹುದು.
ಜನಗಣತಿಯಲ್ಲಿ ಇದನ್ನು ಕೇಳಿದರೆ ಅನೇಕರು ಸತ್ಯ ಹೇಳುವುದಿಲ್ಲ. ನಿದ್ದೆ ಮಾಡುವಾಗ ಉಚ್ಚೆ ಹುಯ್ದುಕೊಳ್ಳುತ್ತಿದ್ದವರೂ ಕೂಡ `ನಾವು ಉಚ್ಚೆ ಹುಯ್ದುಕೊಳ್ಳುವುದಿಲ್ಲ’ ಎಂದು ಸುಳ್ಳು ಹೇಳುತ್ತಾರೆ. ಅದಕ್ಕೆ ಒಂದು ಉಪಾಯ ಮಾಡಬೇಕು. `ನಿದ್ದೆ ಮಾಡುವಾಗ ಉಚ್ಚೆ ಹುಯ್ದುಕೊಳ್ಳುವವರಿಗೆ ಸರಕಾರ ಕೆಲವು ವಿಶೇಷ ಸೌಲಭ್ಯಗಳನ್ನು ಕೊಡುತ್ತದೆ’ ಎಂದು ಜನಗಣತಿ ಮಾಡುವವರು ಹೇಳಬೇಕು. ಆ ಮೂಲಕ ಸತ್ಯ ಸಂಗತಿಗಳು ಹೊರಬರುತ್ತವೆ.

– ಪ್ರೊ ಬಿ ಎಂ ಪುಟ್ಟಯ್ಯ, ಪ್ರಾಧ್ಯಾಪಕರು




