ಶ್ರೀಗಳ ಅರಣ್ಯಕಾಂಡ ಕುರಿತು ಕವಿ, ಬರಹಗಾರ್ತಿ ನಂದಿನಿ ಹೆದ್ದುರ್ಗ ಅವರ ಬರಹ

2 years ago

ಮೌನೇಶ್ ಬಡಿಗೇರ್..
ಈ ಮೌನೇಶ ಎನ್ನುವ ನಮ್ಮ ಭಾಗಕ್ಕೆ ಅಷ್ಟೇನೂ ಪರಿಚಿತವಲ್ಲದ  ಹೆಸರು ಮೊದಲಿಗೆ ಆಸಕ್ತಿ ಹುಟ್ಟಿಸಿದ್ದು ಎಮ್ ಆರ್ ಕಮಲ ಅವರ ‘ಮೌನೇಶರು’ ಎನ್ನುವ ಕವಿತೆಯಿಂದಾಗಿ.

ಆಹಾ ಎಂತಹ ಉಪಮಾತ್ಮಕವಾದ ಹೆಸರು ಅಂತ ಸಂಭ್ರಮಿಸುವಾಗಲೇ ಎಫ್ ಬಿ ಸಾಕಷ್ಟು ಮೌನೇಶರನ್ನು ತೋರಿಸಿ ಈ ಹೆಸರಿನವರು ಈಗಾಗಲೇ ಸಾಕಷ್ಟಿದ್ದಾರೆ ಪೆದ್ದೇ ಅಂತ ಹೇಳಿತ್ತು. ಈ ಮೌನೇಶರು ಮತ್ತವರ ಬಿಹೇವಿಯರ್ರು ಗಮನಿಸಲಿಕ್ಕೆ ಇಂಟರೆಸ್ಟಿಂಗ್ ವಿಷಯ ಆದೀತಾ ಅಂತಲೂ ಕುತೂಹಲ ಹುಟ್ಟಿತ್ತು ಒಂದು ಕಾಲದಲ್ಲಿ.
….

ಎಲ್ಲೇ ಹೊಸಮಾದರಿಯ ಕವಿತೆ ಕಂಡಾಗಲೂ ಹುಚ್ಚು ಮೋಹದಿಂದ ಗಮನಿಸುವ ನನಗೆ ಎಫಬಿ ಮೌನೇಶ ಬಡಿಗೇರರ ‘ಪ್ರೇಮವೆಂಬ ಅವರ್ಗೀಯ ವ್ಯಂಜನ’  ತೋರಿಸಿದಾಗ ವಿಪರೀತ ಹೊಸತಾದ ಅಭಿವ್ಯಕ್ತಿ ಎನಿಸಿ ಅವರನ್ನು ಸಂಪರ್ಕಿಸಿದ್ದೆ.  ಅವರು ಈ ‘ಅವರ್ಗೀಯ’ದ ಜೊತೆಗೆ  ‘ಮಾಯಾ ಕೋಲಾಹಲ’ ಎನ್ನುವ ಅತಿಚಂದದ ಹೆಸರಿನ ಸಂಕಲನವನ್ನೂ ಕಳಿಸಿ ಖುಷಿ ಹೆಚ್ಚಿಸಿದ್ದರು.

ಮಾಯಾಕೋಲಾಹಲವನ್ನು ಓದಿ ಮೌನೇಶರ ಕಥಾ ಸಾಮರ್ಥ್ಯದ ಮಾಯೆಯ ಬಗ್ಗೆ ,ಅವರ ಆಯ್ದುಕೊಂಡ ಕಥಾವಸ್ತುವಿನ ಬಗ್ಗೆ, ಕಥೆಗಳನ್ನು  ಕಟ್ಟುವ ಬಗ್ಗೆ ,ಕಥೆಯ ಹಾಯ್ದುಕೊಳ್ಳುವ ವಿಸ್ತ್ರತೆಯ ಬಗ್ಗೆ, ನಿಬ್ಬೆರಗಾಗಿ ಆ ಸಂಕಲನದ ಬಗ್ಗೆ ಬರೆದಿದ್ದೆ ಕೂಡ.

ಆ ನಂತರದಲ್ಲಿ ಬುಕ್ ಬ್ರಹ್ಮ ಕಥಾ ಸ್ಪರ್ಧೆಯಲ್ಲಿ ಟಾಪ್ ಇಪ್ಪತ್ತರ ಸ್ಪರ್ದಿಗಳಲ್ಲಿ ಅವರ ಜೊತೆಗೆ ನಾನೂ ಇದ್ದೆ.  ಭೆಟ್ಟಿಯಾದಾಗ ಅವರು ನಿಜಕ್ಕೂ ಮೌನೇಶರೇ ಅನಿಸಿತ್ತು.

ನನ್ನದೊಂದು ಎಫಬಿ ಇಷ್ಯೂ ಆದಾಗ ಅದನ್ನು ವಿರೋಧಿಸಿದವರೆಲ್ಲರೂ ಅನಗತ್ಯ ಕೊಳಕುತನವನ್ನು ತಮ್ಮ ವಾಲ್ ನಲ್ಲಿ ತೋರಿಸಿದ್ದ ಹೊತ್ತಿನಲ್ಲಿ, ತೀರಾ ಆಪ್ತರು ತನಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ತಣ್ಣಗುಳಿದ ಸಂದರ್ಭದಲ್ಲಿ ಮೌನೇಶ್ ನನ್ನ ವಾಲ್ ನಲ್ಲಿ ಅದನ್ನು ನೇರವಾಗಿ  ಪ್ರಶ್ನಿಸಿದ್ದರು. ಮತ್ತು  ಸಭ್ಯವಾಗಿ ವಿರೋಧಿಸಿದ್ದರು. ಅಂದಿನಿಂದಲೂ ಮೌನೇಶರ ಕುರಿತು ಒಂದು ಮುಟಿಗೆ ಹೆಚ್ಚೇ ವಿಶ್ವಾಸ ನಂಗೆ.

ಕಲಾವಿದ, ಕಥೆಗಾರ, ರಂಗಕರ್ಮಿ, ಸಿನೆಮಾ ನಿರ್ದೇಶಕ, ಕವಿ ಹೀಗೆ ತನ್ನ ಪುಟ್ಟ ಆಳ್ತನದಲ್ಲಿ ಮಿಗಿಲು ಪ್ರತಿಭೆಗಳ ಸಂಗಮವಾದ  ಮೌನೇಶ್ ಅತಿ ಹೆಚ್ಚು ಆಪ್ತವೆನಿಸಿದ್ದು ಕಥೆಗಳಲ್ಲಿ .( ನಾನು ಆ ಬಗೆಯನ್ನು ಮಾತ್ರ ಗಮನಿಸಿರುವುದೂ ಕಾರಣ ಇರಬಹುದು)

ಕಳೆದ ವರ್ಷ ಬಿಡುಗಡೆಯಾದ ‘ಶ್ರೀಗಳ ಅರಣ್ಯ ಕಾಂಡ’ ತನ್ನ ವಿಶಿಷ್ಟ ಹೆಸರಿನಿಂದ ನನ್ನನ್ನು ಸೆಳೆಯಿತಾದರೂ ಅದನ್ನು ಓದಿದ್ದು ಮೊನ್ನೆ. ಓದಬೇಕು ಅಂದಕೂಡಲೇ ಪ್ರೀತಿಯಿಂದ ಕಳಿಸಿಕೊಟ್ರು ಮೌನೇಶ್.  ಕೆಲವು ಹೆಸರುಗಳೊಂದಿಗೇ ಹೊಂದಿಹೋಗುವ ಸಹಜ ಕುತೂಹಲದಿಂದ ಅರಣ್ಯ ಕಾಂಡವನ್ನು ತೆರೆದೆ.

ಬಹುತೇಕ ಪುಸ್ತಕ ಬಂದು ತಿಂಗಳಾದರೂ ಹಂಗೇ ಶೆಲ್ಫಿನಲ್ಲಿ  ಉಳಿಸಿ ವರ್ಷದ ನಂತರವೋ ಹೇಗೊ ಓದುವವಳು ನಾನು.  ಅರಣ್ಯ ಕಾಂಡ ಹಾಗಾಗಲಿಲ್ಲ. ತಾನು ಮೊದಲ ಪೇಜು ತೆರೆಸಿಕೊಂಡಿದ್ದೇ ತಡ. ತೀವ್ರ ಸಂಭ್ರಮದಿಂದ ಓದಿಸಿಕೊಂಡಿತು.

ಎಂದಿನ ನನ್ನ ಕೊನೆಯ ಕಥೆಯಿಂದ ಓದುವ ಅಭ್ಯಾಸ ತಪ್ಪಿ ಹಿಂದೆ ಓದಿದ್ದ ‘ಒಂಟಿ ಓಲೆಯ ಮುತ್ತು ‘ ನ್ನೇ ಮರು ಓದಿಗೆ ಆರಿಸಿಕೊಂಡೆ. ಕೇವಲ ಆರು ಕಥೆಗಳಿರುವ ಸಂಕಲನ ಇದು.ಹಾಗಂತ ಸಂಕಲನ ಚಿಕ್ಕದಲ್ಲ. ಸಣ್ಣಕಥೆಗಳ ಮುಖವಾಡ ತೊಟ್ಟ ಕಾದಂಬರಿಯನ್ನು ಹೋಲುವ ಕಥೆಗಳು ಇವು. ಅತಿ ದೀರ್ಘ.

ನಾನೇಕೆ ಇಷ್ಟು ದೀರ್ಘ ಕಥೆಗಳನ್ನು ಬರೆಯಬೇಕು ಎಂದು ತನ್ನನ್ನು ತಾನು ಪ್ರಶ್ನೆ ಮಾಡಿಕೊಳ್ಳುತ್ತಲೇ ಮೌನೇಶ್ ಮತ್ತದೇ ದೀರ್ಘ ಕಥೆಗಳ ಹಾದಿ ಹಿಡಿದಿದ್ದಾರೆ. ಕಥಾವಸ್ತು ಮುಖ್ಯವಾಗಿ ಸಂಬಂಧಗಳ  ಸಂಕೀರ್ಣತೆ.  ಅತ್ಯಂತ ಸಹಜ ವಸ್ತವಿನೊಂದಿಗೆ ಆರಂಭವಾಗುವ ಕಥೆಗಳು ನಡುವಿನಲ್ಲಿ ತಿರುವು ಪಡೆದುಕೊಂಡು ಕಥೆಯನ್ನು ಓದುತ್ತಾ ಓದುತ್ತಾ ವಿಷಾದದ ಹೆಗಲೇರುವಂತೆ ಮಾಡುತ್ತವೆ. ಹಾಗಂತ ಇಲ್ಲಿನ ಕಥೆಗಳನ್ನು ಸಾಮಾನ್ಯ ಕಥೆಗಳಂತೆ ಯಾವುದೇ ಸಂಧರ್ಭದಲ್ಲಾದರೂ ಓದಬಹುದು ಎನ್ನಲಿಕ್ಕಾಗದು.

ಇಲ್ಲಿನ ಕಥೆಗಳನ್ನು ಓದಲಿಕ್ಕೆ ಜೀವವನ್ನು ಭಾವವನ್ನು ಒಂದರೆ ತಾಸು ಅಣಿಮಾಡಿ ಕೊಳ್ಳಲೇ ಬೇಕಾಗುತ್ತದೆ. ಮುನ್ನುಡಿಯೂ ಲೇಖಕರ ಮಾತೂ ಅತ್ಯಂತ ಅಪ್ತ. ಕಥಲೋಕದೊಳಕ್ಕೆ ಇಳಿಯಲಿಕ್ಕೆ ಲೇಖಕರ ಮಾತುಗಳು ಹಾದಿ ತೋರುತ್ತವೆ.

ಇಲ್ಲಿನ ಅಪರೂಪದ ಕಥೆ ‘ಶಾಸ್ತ್ರಿಸಂಗ’ ದ ಒಂದೆರಡು ಸಾಲುಗಳು ಇಲ್ಲಿವೆ. ‘’ಯಾವುದೇ ಬರಹಗಾರ ,ಕಲಾವಿದ ಸ್ವಲ್ಪವಾದರೂ ಪೋಲಿಯಾಗಿರಬೇಡವೇ’’ ಎನ್ನುವ ಹಿರಿಯ ಪತ್ರಕರ್ತ ಶಾಸ್ತ್ರಿ ಮತ್ತು  ಕಿರಿಯ ಸಹದ್ಯೋಗಿ ಇರ್ಫಾನ್ ಈ ಕಥೆಯ ಮುಖ್ಯ ಪಾತ್ರಗಳು.

“ನನ್ನ ಬದುಕಿನಲ್ಲಿ ಅತ್ಯಂತ ಉತ್ಕಟವಾದ ವಸ್ತು ಅಥವಾ ವಿಷಯ ಎಂದರೆ  ಮೊಲೆಗಳು! ಮನುಷ್ಯ ಜನ್ಮದ ಅತ್ಯಂತ ಪವಿತ್ರ ವಸ್ತು ಅವು.  ಅಂಥ ಮೊಲೆಗಳನ್ನು ಹೊತ್ತ ಹೆಣ್ಣು ನನಗೆ ಯಾವತ್ತಿದ್ದರೂ ಆಸಕ್ತಿಯ ವಿಷಯವೇ” ಎಂದು  ಆರಂಭವಾಗುವ ಕಥೆ ಇದು.

ಆರಂಭಕ್ಕೆ ಅದೇ ಮಾಮೂಲು ಸೆಕ್ಸ್ ನ ಪ್ರೇಮದ ಸಂಗತಿಯದ್ದಿರಬಹುದು ಅಂದುಕೊಂಡರೆ ಅದು ತನ್ನ ಉದರದಲ್ಲಿ ಧರ್ಮ, ರಾಜಕಾರಣ, ಕೋಮು ಸೌಹಾರ್ದ, ರಾಜಕೀಯ ಪರಿಸ್ಥಿತಿ, ಹತ್ತಿಕ್ಕಲಾಗದ ಕಾಮ, ಅಸಹಾಯಕವೆನಿಸುವ ಪ್ರೇಮಗಳ ತಿರುವುಗಳನ್ನು ದಾಟಿ ಮತ್ತೆಲ್ಲೋ ನಿಲ್ಲಿಸುತ್ತದೆ. ಕಥೆ ಸಾಗಿರುವ ಹಾದಿ ಓದುಗನಿಗೆ ಉಸಿರು ನಿಲ್ಲಿಸುವಂತಿದೆ.

ವಿಷಾದದ ಅಂತ್ಯ ಕಾಣುವ ಈ ಕಥೆಯಲ್ಲಿ  ಕಂಡೂ ಕಾಣದಂತೆ ಬರುವ ಒಂದು ಮುದ್ದಾದ ಪ್ರೇಮ ಮತ್ತು ವಾತ್ಸಲ್ಯ ಕಥೆಯಲ್ಲಿರುವ ಇತರೆ ಎಲ್ಲ ಸಂಗತಿಗಳನ್ನು ಅವುಚಿಹಾಕಿ ಈ ಕಥೆಯನ್ನು ಹೃದಯದಲ್ಲುಳಿಸುತ್ತದೆ.

ಕಣ್ಣಿನಕಾಯಿಲೆ ,ಅಕ್ಷಿರಾಣಿ ಲಕ್ಷ್ಮಿಬಾಯಿ, ವೇಗದೊಳಗಿನ ಆವೇಗ, ಶ್ರಿಗಳ ಅರಣ್ಯ ಕಾಂಡ ಇವೆಲ್ಲವೂ ಒಂದಕ್ಕಿಂತ ಒಂದು ಚಂದ.

ವೇಗದ ಆವೇಗ ಕಥೆಯಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡುವ ನಾಯಕ ಈ ಜಗತ್ತಿನ ಸರ್ವ ಸಂಗತಿಗಳೂ ಸ್ಟೋರಿ ಮಾಡಲು ಅರ್ಹವೆನಿಸಿ ಅದಕ್ಕೆ ಕ್ಯಾಚಿಯಾದ ಹೆಸರಿಗಾಗಿ ಒದ್ದಾಡುವವ. ಅದರೊಳಗೆ ಅಡಗಿಕೊಂಡ ಸಂಕಟ  ಕಥೆಯನ್ನು ದೀ ಬೆಸ್ಟ್ ಮಾಡಿದೆ.

ಪ್ರತಿ ಕಥೆಯೂ ವಿಷಾದವನ್ನೂ ಸಂಕೀರ್ಣತೆಯನ್ನೂ ಹೊದ್ದು ಹೊಸತಾಗಿ ಅಭಿವ್ಯಕ್ತಿಗೊಂಡಿದೆ. ಕಥೆಗಳು ಕೆಲವೊಮ್ಮೆ ಪ್ರಬಂಧದ ಮಾದರಿ ಪಡಕೊಂಡಿತೇನೊ ಎನ್ನುವ ದಿಗಿಲು ಹುಟ್ಟುವಾಗಲೇ ಮತ್ತೇನೊ ಹೇಳಿ ಅಚ್ಚರಿಗೊಳಿಸುತ್ತವೆ.

ಕಥೆಗಳಲ್ಲಿರುವ ನವಿರು ಹಾಸ್ಯ ಮತ್ತದೇ ಲಲಿತ ಪ್ರಬಂಧಕ್ಕೆ ದಾಟಿಸಿದಂತೆ ಅನಿಸಿದರೂ ಕೊಡಬೇಕಾದ ಕಚಗುಳಿ ಕೊಟ್ಟು  ತನ್ನ ಪಾಲು ಇಷ್ಟು ಎಂದು ಕಥೆಯನ್ನು ಬಿಟ್ಟು ಹೊರಡುತ್ತದೆ.

ನಾನಿಲ್ಲಿನ ಕಥೆಗಳ ವಿಮರ್ಶೆ ಮಾಡಲಾರೆ. ಈ ಕಥೆಗಳ ಓದಿನೊಂದಿಗೆ ಓದುಗ ಅನುಭವಿಸುವ ಪುಳಕವನ್ನು ಮಾತ್ರ ಪದಗಳಿಗೆ ಹಚ್ಚಬಲ್ಲೆ.

ನೋವು ವಿಷಾದ ಪ್ರೇಮ ಈ ಸಂಕಲನದಲ್ಲಿರುವ ಸ್ಥಾಯಿ ಭಾವ. ಸಾಕಷ್ಟು ಪುಟಗಳನ್ನು ತುಂಬಿಕೊಂಡ ಮಂಜುಕಂಗಳಿಂದಲೇ ಓದಿದ್ದೇನೆ. ದಶಕಗಳ ಅವಧಿಯಲ್ಲಿ ಬರೆದಿರುವ ಈ ಕಥೆಗಳು ಕಾಲದ ವೇಗಕ್ಕೆ ಒಂದಿಷ್ಟೂ ಮುಕ್ಕಾಗಿಲ್ಲ. ತಾಜಾತನ ಕಳೆದುಕೊಂಡಿಲ್ಲ.

ಕಥಾಪ್ರಿಯರೆಲ್ಲರೂ ಓದಲೇಬೇಕಾದ ಮತ್ತು ತಮ್ಮ ಸಂಗ್ರಹದಲ್ಲಿ ಇರಿಸಿಕೊಳ್ಳಲೇಬೇಕಾದ ಸಂಕಲನ
‘ಶ್ರೀಗಳ ಅರಣ್ಯ ಕಾಂಡ’ ಇಂತಹ ಅಪರೂಪದ ಕಥೆಗಳಿಗಾಗಿ ನಿಮಗೆ ಅಭಿನಂದನೆಗಳು ಮೌನೇಶ್.

– ನಂದಿನಿ ಹೆದ್ದುರ್ಗ, ಕವಿ, ಬರಹಗಾರ್ತಿ

Leave a Reply