ಸಾರ್ವಜನಿಕರು ಬಹುತೇಕ ಕಚೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಹತ್ತಾರು ಬಾರಿ ಅಲೆದಾಡಬೇಕಾಗಿದೆ. ಯಾವುದೇ ಕಚೇರಿಯಲ್ಲಿಯೂ ಯಾವುದೇ ಕೆಲಸಗಾರರು ಸಾರ್ವಜನಿಕ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಿಲ್ಲ. ಅವರು ಕೊಟ್ಟ ಪತ್ರಗಳಿಗೆ ಸೂಕ್ತವಾದ ಉತ್ತರವನ್ನು ನೀಡುವುದಿಲ್ಲ. ಅವರ ಕಡತಗಳ ಹಿಂದೆ ಅವರೇ ಅಲೆದಾಡದಿದ್ದರೆ ಕಡತಗಳು ಮೂಲೆಯಲ್ಲಿ ಬಿದ್ದಿರುತ್ತದೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಾರ್ವಜನಿಕರು ಮತ್ತು ಹಿರಿಯ ನಾಗರಿಕರು ತಮ್ಮ ನಂಬಿಕಸ್ತ ಜನರಿಗೆ ತಮ್ಮ ಕೆಲಸ ಕಾರ್ಯಗಳನ್ನು ಕಚೇರಿಗಳಲ್ಲಿ ಮಾಡಿಕೊಡಲು ಒಪ್ಪಿಸುತ್ತಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇಂತಹ ಜನರು ಕಚೇರಿಗಳಲ್ಲಿ ಓಡಾಡಬಾರದು ಎಂದು ಇತ್ತೀಚಿಗೆ ಕೆಲವು ಇಲಾಖೆಗಳಲ್ಲಿ ಆದೇಶವನ್ನು ಮಾಡಿ, ಅವರುಗಳನ್ನು ಅಪರಾಧಿಗಳಂತೆ ನೋಡುತ್ತಾ, ಅವರ ಮೊಬೈಲ್ ಗಳನ್ನು ಕಸಿದುಕೊಳ್ಳುವುದು, ಅವರನ್ನು ಅವಮಾನಿಸುವುದು, ಮುಂತಾದಂತಹ ಕೆಲಸಗಳು ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇಂತಹ ನಡವಳಿಕೆಗಳು ಸರಿ ಕಾಣುವುದಿಲ್ಲ.
ಯಾವುದಾದರೂ ಒಬ್ಬ ನಿರ್ದಿಷ್ಟ ವ್ಯಕ್ತಿಯ ಮೇಲೆ ದೂರು ಬಂದರೆ ಅಂತಹ ವ್ಯಕ್ತಿಯ ಮೇಲೆ ಕ್ರಮಗಳನ್ನು ಕೈಗೊಳ್ಳಲು ಎಲ್ಲ ಇಲಾಖೆ ಅಧಿಕಾರಿಗಳಿಗೆ ಅಧಿಕಾರವಿದೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ಓಡಾಡುವಂತಹ ಎಲ್ಲರ ಮೇಲೂ ಅನುಮಾನದಿಂದ ನೋಡುವಂತಹ ಪ್ರವೃತ್ತಿ ಸರಿಯಲ್ಲ. ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸವನ್ನು ಅಲೆದಾಡಿಸದೆ, ಸುತ್ತಾಡಿಸದೆ, ಹಿಂಸೆ ನೀಡದೆ, ಸಿಬ್ಬಂದಿ ಮತ್ತು ಅಧಿಕಾರಿಗಳು ಮಾಡಿಕೊಟ್ಟು ಬಿಟ್ಟರೆ ಆಗ ಯಾರು ಸಹ ಕಚೇರಿಗೆ ಬರುವ ಅವಶ್ಯಕತೆ ಇರುವುದಿಲ್ಲ. ಇಂತಹ ವ್ಯವಸ್ಥೆಯನ್ನು ತರಲು ಸಾಧ್ಯವಿದ್ದರೆ ನಂತರ ನಿಮ್ಮ ಕೆಲವು ಅತಿರೇಕದ ನಿರ್ಧಾರಗಳನ್ನು ಒಪ್ಪಬಹುದು.
ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಎರಡನೇ ದರ್ಜೆ ಗುಮಾಸ್ತರಿಂದ ಹಿಡಿದು ಎಲ್ಲ ಹಂತದ ಅಧಿಕಾರಿಗಳಿಗೆ ಪ್ರತಿದಿನ ಅವರು ಎಷ್ಟು ಕಡತಗಳನ್ನು ಪರಿಶೀಲಿಸಿದ್ದಾರೆ, ಎಷ್ಟು ಕಡತಗಳನ್ನು ವಿಲೇವಾರಿ ಮಾಡಿದ್ದಾರೆ, ಯಾವ ಕಡತಗಳಿಗೆ ಮತ್ತು ಪತ್ರಗಳಿಗೆ ಹಿಂಬರಹ ನೀಡಿದ್ದಾರೆ ಎಂಬ ಎಲ್ಲ ಮಾಹಿತಿಯನ್ನು ಪ್ರತಿದಿನವೂ ತಮ್ಮ ಕರ್ತವ್ಯ ನಿರ್ವಹಣ ವರದಿ ಎಂಬ ಹೆಸರಿನಲ್ಲಿ ದಾಖಲಿಸುವಂತೆ ಆದೇಶಿಸಬೇಕು. ಪ್ರತಿ ವಾರಕ್ಕೆ ಒಮ್ಮೆ ಕಚೇರಿಯ ಅಧೀಕ್ಷಕರು ಇದನ್ನು ಪರಿಶೀಲಿಸಬೇಕು, ಕಾರ್ಯವೈಖರಿಯನ್ನ ಅಲ್ಲಿನ ಪ್ರಮುಖ ಅಧಿಕಾರಿ ಗಮನಿಸಬೇಕು, ಪ್ರತಿಯೊಂದು ಇಲಾಖೆಯಲ್ಲಿನ ವ್ಯವಸ್ಥಾಪಕ ನಿರ್ದೇಶಕರು ಅಥವಾ ಆಯುಕ್ತರು ತಿಂಗಳಿಗೊಮ್ಮೆ ತಮ್ಮ ಕಚೇರಿಗಳಲ್ಲಿ ಯಾವ ರೀತಿಯಲ್ಲಿ ಕಡತಗಳು ವಿಲೇವಾರಿ ಆಗಿದೆ ಎಂಬುದನ್ನ ಪರಿಶೀಲಿಸಿ, ಆ ವರದಿಯನ್ನ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ನೀಡಬೇಕು, ಇಲಾಖೆಯ ಮುಖ್ಯ ಕಾರ್ಯದರ್ಶಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಇವರಿಗೆ ಮಾಹಿತಿ ನೀಡಬೇಕು, ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ತಮ್ಮ ಇಲಾಖೆಯ ಪ್ರಗತಿಯ ಬಗ್ಗೆ ಆಯಾ ಇಲಾಖೆಯ ಮಂತ್ರಿಗಳಿಗೆ ಮಾಹಿತಿ ನೀಡಬೇಕು. ಮುಖ್ಯಮಂತ್ರಿಗಳು ಪ್ರತಿ ತಿಂಗಳು ತಮ್ಮ ಸರ್ಕಾರದ ಕರ್ತವ್ಯ ನಿರ್ವಹಣಾ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕು. ಈ ರೀತಿಯ ವ್ಯವಸ್ಥೆ ಜಾರಿಯಾದರೆ ಮಾತ್ರವೇ ಸರ್ಕಾರಿ ಇಲಾಖೆಗಳಲ್ಲಿ ಪಾರದರ್ಶಕ ಆಡಳಿತ ಸಾಧ್ಯವಾಗುತ್ತದೆ.
ಇದೇ ರೀತಿಯಲ್ಲಿ ಪ್ರತಿಯೊಬ್ಬ ಶಾಸಕರು ಮತ್ತು ಸಂಸದರು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಕೆಲಸವನ್ನು ಪ್ರತಿ ತಿಂಗಳು ಮಾಡಿದ್ದೀವಿ ಎನ್ನುವುದನ್ನು ಪಕ್ಷದ ಅಧ್ಯಕ್ಷರಿಗೆ ವರದಿಯ ರೂಪದಲ್ಲಿ ನೀಡಬೇಕು, ಪಕ್ಷದ ಅಧ್ಯಕ್ಷರು ಅವುಗಳನ್ನ ಗಮನಿಸಿ ಅವರಿಗೆ ಬುದ್ಧಿ ಹೇಳುವ ಅಥವಾ ತಿದ್ದುವ ಇಲ್ಲವೇ ಅಭಿನಂದಿಸುವ ಕೆಲಸವನ್ನು ಮಾಡಬೇಕು.
ಯಾರು ಯಾರಿಗೂ ಉತ್ತರದಾಯಿ ಆಗದಿದ್ದರೆ ಯಾವ ಕೆಲಸವಾಗುವುದಿಲ್ಲ. ಎಲ್ಲವೂ ಕೇವಲ ಕಾಟಾಚಾರಕ್ಕೆ ನಡೆಯುತ್ತದೆ, ಇಂದಿಗೂ ಸಹ ಅನೇಕ ಸರ್ಕಾರಿ ಕಚೇರಿಗಳಲ್ಲಿ ಹತ್ತಾರು ವರ್ಷಗಳಿಂದ ಧೂಳು ಹಿಡಿದು ನಿಂತಿರುವ ಕಡತಗಳಿವೆ. ಹಲವಾರು ತಿಂಗಳುಗಳಿಂದ ತಿರುಗಿ ನೋಡದ ಸಾರ್ವಜನಿಕರ ಅರ್ಜಿಗಳಿವೆ. ಯಾರು ಗಮನವನ್ನು ಹರಿಸುತ್ತಾರೋ, ಯಾರಿಗೆ ಪ್ರಭಾವವಿದೆಯೋ, ಅಂತಹ ಕಡತಗಳು ಮತ್ತು ಅರ್ಜಿಗಳು ಕೂಡಲೇ ನಾಗಾಲೋಟದಲ್ಲಿ ಇತ್ಯರ್ಥವಾಗಿ ಆದೇಶಗಳಾಗುತ್ತದೆ. ಇಲ್ಲದಿದ್ದರೆ ಮೂಲೆಯಲ್ಲಿ ಕಸದ ತಿಪ್ಪೆಯಂತೆ ಬಿದ್ದಿರುತ್ತದೆ.
ವ್ಯವಸ್ಥೆಯಲ್ಲಿನ ಲೋಪವನ್ನು ಮೊದಲು ಸರಿಪಡಿಸಿ, ನಂತರ ಸಾರ್ವಜನಿಕರನ್ನು ನಿಯಂತ್ರಿಸುವಂತಹ ವಿಚಾರಕ್ಕೆ ಬನ್ನಿ.
ಮುಖ್ಯಮಂತ್ರಿಗಳು ಪ್ರತಿ ತಿಂಗಳು ಸಂಬಂಧಿಸಿದ ಇಲಾಖೆ ಸಚಿವರಿಗೆ ತಮ್ಮ ಇಲಾಖೆಯ ಪ್ರಗತಿಯ ವಿವರವನ್ನು ಕೇಳಬೇಕು. ಮಂತ್ರಿಗಳು ತಮ್ಮ ಇಲಾಖೆ ಕಾರ್ಯದರ್ಶಿಗಳ ಮೂಲಕ ಮಾಹಿತಿ ಪಡೆದುಕೊಳ್ಳಬೇಕು, ಇಲಾಖಾ ಕಾರ್ಯದರ್ಶಿಗಳು ತಮ್ಮ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಕಡ್ಡಾಯವಾಗಿ ಮಾಹಿತಿಯನ್ನು ಪಡೆಯಬೇಕು. ಆಗ ಮಾತ್ರವೇ ಎಲ್ಲರಿಗೂ ಭಯವಿರುತ್ತದೆ, ಇಲ್ಲದಿದ್ದರೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




