ಕನ್ನಡದಲ್ಲಿ ಬಳಸಲು ಸಾಕಷ್ಟು ಪದಗಳಿವೆ ಎಂಬುದನ್ನು ವಿಪಕ್ಷ ನಾಯಕರು ಅರಿತುಕೊಳ್ಳಲಿ

2 years ago

ಕರ್ನಾಟಕ ರಾಜ್ಯದ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಸರ್ಕಾರವನ್ನ ಟೀಕಿಸುವ ಸಂದರ್ಭದಲ್ಲಿ ಕೇವಲ ಒಂದೆರಡು ಪದಗಳನ್ನು ಬಳಸುವುದನ್ನು ಬಿಟ್ಟರೆ ಬೇರೆ ಯಾವ ಪದಗಳು ಅವರಿಗೆ ಪರಿಚಯವೇ ಇಲ್ಲವೆನಿಸುತ್ತಿದೆ. ಪದೇ ಪದೇ ನಾಚಿಕೆ ಆಗುವುದಿಲ್ಲವೇ, ಮಾನ ಮರ್ಯಾದೆ ಇಲ್ಲವೇ ಹಾಗೂ ಬಹುವಚನ ಏಕವಚನದ ಪದಗಳನ್ನು ಬಳಸುತ್ತಿದ್ದಾರೆ.

ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಶಿವಪ್ಪನವರಿಂದ ಹಿಡಿದು ಇಲ್ಲಿಯ ತನಕ ಅನೇಕರು ಈ ಸ್ಥಾನದಲ್ಲಿ ಕುಳಿತು ಆಯಾ ಕಾಲದ ಸರ್ಕಾರಗಳನ್ನು ಟೀಕಿಸಿದ್ದಾರೆ. ಸರ್ಕಾರದ ತಪ್ಪುಗಳನ್ನ ಎತ್ತಿ ಹಿಡಿದಿದ್ದಾರೆ, ಹಲವರ ರಾಜೀನಾಮೆಗಳನ್ನು ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ. ಸರ್ಕಾರಗಳನ್ನು ಬದಲಾಯಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ಶಾಂತವೇರಿ ಗೋಪಾಲಗೌಡರು ಮಾತನಾಡಿದರೆ ಆಳುವ ಸರ್ಕಾರ ಬೆಚ್ಚಿ ಬೀಳುತ್ತಿತ್ತು. ಇದರ ಜೊತೆಯಲ್ಲಿ ಆರೋಗ್ಯ ಪೂರ್ಣವಾದ ತರ್ಕಬದ್ಧವಾದ ವಿಷಯವನ್ನು ಒಳಗೊಂಡ ವಾದವನ್ನು ಮಂಡಿಸಿರುತ್ತಾರೆ. ಅದೇ ರೀತಿಯಲ್ಲಿ ಹೆಚ್ ಡಿ ದೇವೇಗೌಡರು ಅಂಕಿ ಅಂಶಗಳೊಂದಿಗೆ ಸರ್ಕಾರವನ್ನು ಎಚ್ಚರಿಸಿರುತ್ತಾರೆ. ಎಸ್ ಆರ್ ಬೊಮ್ಮಾಯಿ ಅವರು ವಿರೋಧ ಪಕ್ಷದ ನಾಯಕರಾಗಿ ಸಂಸದೀಯ ನೀತಿ ನಿಯಮದ ಅಡಿಯಲ್ಲಿ ಚರ್ಚಿಸಿದ್ದಾರೆ. ಅದೇ ರೀತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ದೇವರಾಜ್ ಅರಸು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ರೈತರ ಹೋರಾಟವನ್ನು ಸಂಘಟಿಸಿ ಸರ್ಕಾರಗಳ ಬದಲಾವಣೆಗೆ ನಾಂದಿಯಾದರು‌.

ಮಾನ್ಯ ವಿರೋಧ ಪಕ್ಷದ ನಾಯಕರು ಹಾಲಿ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿ ಮಾಡಿರುವ ಭಾಷಣಗಳು ಜೊತೆಗೆ ನಿಮ್ಮದೇ ಪಕ್ಷದ ಮಾಧುಸ್ವಾಮಿ ಅವರ ವಿಚಾರ ಮಂಡನೆ, ಬೊಮ್ಮಾಯಿ ಅವರ ವಿಷಯದ ಪ್ರಸ್ತಾವನೆ ಮತ್ತು ವಿಸ್ತಾರದ ಬಗ್ಗೆ ಮಾಡಿರುವ ಟೀಕೆಗಳನ್ನ ವಿಧಾನಸಭೆಯ ಸಚಿವಾಲಯದ ಗ್ರಂಥಾಲಯದಲ್ಲಿ ಒಂದಷ್ಟು ಅಭ್ಯಾಸವನ್ನು ಮಾಡಿ. ನಂತರ ಸಮರ್ಥ ವಿರೋಧ ಪಕ್ಷದ ನಾಯಕರಾಗಿ ಬೆಳೆಯಲಿ ಎಂಬುದು ನಮ್ಮ ಆಶಯ. ಕಾರಣ ಕುಮಾರಸ್ವಾಮಿ ಅವರು ಮತ್ತು ಬೊಮ್ಮಾಯಿ ಅವರು ವಿಧಾನಸಭೆ ಅಧಿವೇಶನದಲ್ಲಿ ಮುಂದಿನ ದಿನದಲ್ಲಿ ಚರ್ಚೆಗೆ ಲಭ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಮರ್ಥ ವಿರೋಧ ಪಕ್ಷ ಬೇಕು ಎನ್ನುವ ವಿಶಾಲ ಮನೋಭಾವ ಉಳ್ಳವರು ಅನೇಕರು ತಾವು ಸಹ ಕನ್ನಡ ಭಾಷೆಯಲ್ಲಿರುವ ಉತ್ತಮ ಪದಗಳನ್ನು ಬಳಸಿಕೊಂಡು ಗುಣಮಟ್ಟದ ಚರ್ಚೆ ಮತ್ತು ಟೀಕೆಯನ್ನು ಮಾಡಿ, ಪ್ರಜಾಪ್ರಭುತ್ವದಲ್ಲಿ ಪ್ರಬಲವಾದ ವಿರೋಧ ಪಕ್ಷ ಸಮರ್ಥವಾದ ವಿರೋಧ ಪಕ್ಷದ ನಾಯಕರು ಅವಶ್ಯವಿದೆ. ಬಿಜೆಪಿಯವರ ರೀತಿಯಲ್ಲಿ ವಿರೋಧ ಪಕ್ಷ ಮುಕ್ತ ದೇಶವನ್ನು ಕಾಣಬೇಕು ಎನ್ನುವ ಭಾವನೆ ಹೊಂದಿರುವವರು ನಾವಲ್ಲ. ಪ್ರಬಲ ವಿರೋಧಪಕ್ಷ ಬೇಕು ಎಂದು ಬಯಸುವವರು ನಾವು.

ವಿರೋಧ ಪಕ್ಷದ ನಾಯಕರು ಎನ್ನುವ ಕಾರಣಕ್ಕೆ ಪದೇ ಪದೇ ಹಗುರವಾದ ಮಾತುಗಳನ್ನ ಆಡುತ್ತಾ ಪ್ರಚಾರ ಪಡೆಯುವಂತಹ ಪ್ರಯತ್ನವನ್ನ ಮಾಡುವುದು ಗುಣಮಟ್ಟದ ನಾಯಕತ್ವದ ಲಕ್ಷಣವಲ್ಲ. ಟೀಕಿಸುವ ಹಾಗಿದ್ದರೆ ಅಟಲ್ ಬಿಹಾರಿ ವಾಜಪೇಯಿ ಅವರ ರೀತಿಯಲ್ಲಿ ಟೀಕಿಸುವುದನ್ನು ಕಲಿಯಿರಿ, ವಿರೋಧ ಪಕ್ಷದ ನಾಯಕರ ಮಾತುಗಳು ಹಾದಿ ಬೀದಿಯಲ್ಲಿ ಮಾತನಾಡುವ ರೀತಿಯಲ್ಲಿ ಇರಬಾರದು. ಅದು ಗಂಭೀರವಾಗಿರಬೇಕು. ಸರ್ಕಾರಗಳು ನಿಜಕ್ಕೂ ಎಚ್ಚರಗೊಳ್ಳುವಂತಿರಬೇಕು, ಇಲ್ಲದಿದ್ದರೆ ಯಾರು ಗಂಭೀರವಾಗಿ ಇವರ ಮಾತುಗಳನ್ನ ಮತ್ತು ಟೀಕೆಯನ್ನು ಗಮನಿಸುವುದಿಲ್ಲ‌.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply