ಸೆಂಟ್ರಲ್ ವಿಸ್ತಾ: ಸೋನಿಯಾ ಗಾಂಧಿಗೆ ಪತ್ರ ಬರೆದ ಜೆ.ಪಿ.ನಡ್ಡಾ- ನಿಜವನ್ನು ನೀವೇ ಹುಡುಕಿ

5 years ago

ದೆಹಲಿ: ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರದ ವಿರುದ್ಧ ದನಿ ಎತ್ತಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಉದ್ದೇಶಿತ ಸೆಂಟ್ರಲ್ ವಿಸ್ತಾ ಕಾಮಗಾರಿಯನ್ನು ನಿಲ್ಲಿಸಿ ಕೊರೊನಾ ನಿಯಂತ್ರಣಕ್ಕೆ ಒತ್ತುಕೊಡಬೇಕು ಎಂಬ ರಾಹುಲ್ ಗಾಂಧಿಯವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಬದಲು ಕೆಸರೆರೆಚುವ ಆಟಕ್ಕೆ ಬಿಜೆಪಿ ಇಳಿದಿದೆ.

ರಾಹುಲ್ ಗಾಂಧಿಯವರ ಟ್ವೀಟ್ ನಂತರ ಕೆರಳಿ ಕೆಂಡಾಮಂಡಲರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೊರೊನಾ ನಿಯಂತ್ರಣಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಂಡಿದೆ ಎಂದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಕೊರೊನಾ ಏರಿಕೆಯಲ್ಲಿ ಕಾಂಗ್ರೆಸ್ ಪಾತ್ರವಿದೆ ಎಂದು ಆರೋಪಿಸಿದ್ದಾರೆ. ವಾಸ್ತವ ಸಂಗತಿ ಏನೆಂದರೆ, ಕೊರೊನ 2ನೇ ಅಲೆಯಲ್ಲಿ ಜೆಪಿ ನಡ್ಡಾ ಅವರು ಮಾಡಿರುವ ಎಲ್ಲ ಆರೋಪಗಳು ಸಮಾನವಾಗಿ ಬಿಜೆಪಿಗೂ ಅನ್ವಯಿಸುತ್ತವೆ.

ಇನ್ನೊಂದು ಸಂಗತಿ ಎಂದರೆ, ರಾಹುಲ್ ಗಾಂಧಿ 2ನೇ ಅಲೆ ಏರಿಕೆಯ ನಂತರ ಪಶ‍್ಚಿಮ ಬಂಗಾಳದಲ್ಲಿ ಉದ್ದೇಶಿಸಿದ್ದ ಎಲ್ಲ ರ್ಯಾಲಿಗಳನ್ನೂ ರದ್ದುಪಡಿಸಿ ಮಾದರಿಯಾಗಿ ವರ್ತಿಸಿದ್ದರು. ಆದರೆ, ಬಿಜೆಪಿ ಶತಾಯಗತಾಯ ಪಶ್ಚಿಮ ಬಂಗಾಳದಲ್ಲಿ ಗೆಲ್ಲಲೇಬೇಕು ಎಂದು ಹಠಕ್ಕೆ ಬಿದ್ದು ಪ್ರಚಾರ ಕಾರ್ಯ ಮುಂದುವರೆಸಿತ್ತು.

ಕೇಂದ್ರ ಸರ್ಕಾರದ ಬಹುತೇಕ ಸಚಿವರು, ಪ್ರಧಾನಿ, ಗೃಹಸಚಿವರಾದಿಯಾಗಿ ಬಿಜೆಪಿ ಕಾರ್ಯಕರ್ತರು ಬಂಗಾಳದಲ್ಲಿ ಬೀಡುಬಿಟ್ಟಿದ್ದರು. ಆದರೆ, ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಹೇಳಿದಂತೆ ಬಿಜೆಪಿ 2 ಅಂಕಿ ದಾಟುವಲ್ಲಿ ವಿಫಲವಾಗಿದೆ. ಆದರೆ, ಬಿಜೆಪಿ ಸ್ಥಾಪಿತ ಸರ್ಕಾರಗಳನ್ನು ಅಸ್ಥಿರಗೊಳಿಸಿ ಸರ್ಕಾರ ರಚಿಸಿದ ಅನೇಕ ಉದಾಹರಣೆಗಳಿವೆ. ಕರ್ನಾಟಕ, ಮಧ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಮೈತ್ರಿ ಸರ್ಕಾರಗಳನ್ನು ಕೆಡವಿ ತನ್ನ ನೇತೃತ್ವದ ಸರ್ಕಾರವನ್ನು ರಚಿಸಿದೆ. ಬಂಗಾಳದಲ್ಲಿ ಕೂಡ ಇಂತಹ ಘಟನೆಗಳು ನಡೆಯಬಹುದೇ? ಎಂಬ ಪ್ರಶ‍್ನೆ ಸದ್ಯಕ್ಕೆ ಮೂಡಿದೆ.

ಏಕೆಂದರೆ, ಈಗ ಪಶ‍್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಗೆದ್ದಿರುವರ 75 ಜನರ ಪೈಕಿ ಮೂವರು ಮಾತ್ರ ಬಿಜೆಪಿಗರು. ಉಳಿದವರೆಲ್ಲ ಟಿಎಂಸಿ ಮತ್ತು ಇತರ ಪಕ್ಷಗಳಿಂದ ವಲಸೆ ಬಂದವರು. ಇವರು ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎನ್ನುತ್ತಾರೆ. ಇರಲಿ, ದೇಶದ ಆಡಳಿತಾರೂಢ ಪಕ್ಷದ ಅಧ್ಯಕ್ಷ ವಿರೋಧ ಪಕ್ಷದ ಅಧ್ಯಕ್ಷೆಗೆ ಬರೆದಿರುವ ಪತ್ರದ ಪೂರ್ಣ ಪಾಠ ಈ ಕೆಳಗಿದೆ.

“2020ರಲ್ಲಿ ಪ್ರಾರಂಭವಾದ ಕೊರೋನಾ ಮಹಾಮಾರಿಯ ನಂತರ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ತೀವ್ರತೆ ನೀಡುವ ಸಲುವಾಗಿ ಸರ್ಕಾರದ ಪ್ರತಿ ಇಲಾಖೆಗಳನ್ನು ಈ ಕಾರ್ಯದಲ್ಲಿ ಜೊತೆಗೂಡಿಸಿ ಕೆಲಸ ಮಾಡುತ್ತಿದ್ದಾರೆ. ಅಗತ್ಯ ಕ್ಷೇತ್ರಗಳಿಗೆ ಆದ್ಯತೆಯೊಂದಿಗೆ ಚಿಕಿತ್ಸಾ ಸಾಮರ್ಥ್ಯವನ್ನು ವೃದ್ಧಿ ಮಾಡಲಾಗುತ್ತಿದೆ ಮತ್ತು ಅಗತ್ಯ ಇರುವವರಿಗೆ ಪರ್ಯಾಯ ಸೌಲಭ್ಯಗಳನ್ನು ಖಚಿತಪಡಿಸಲಾಗುತ್ತಿದೆ. ಕೊರೋನಾವನ್ನು ಎದುರಿಸಲು ಎಲ್ಲಾ ಅಗತ್ಯ ಔಷಧಿಗಳು ಮತ್ತು ಇತರ ಪರಿಕರಗಳ ಲಭ್ಯತೆಯನ್ನು ಖಚಿತಪಡಿಸುವ ಪ್ರಯತ್ನ ನಡೆಯುತ್ತಿದೆ. 2020ರಲ್ಲಿ ಎಂಟು ತಿಂಗಳ ಅವಧಿಗೆ ಭಾರತ ಸರ್ಕಾರವು 80 ಕೋಟಿ ಬಡವರಿಗೆ ಉಚಿತ ರೇಷನ್ ವಿತರಿಸಿದೆ. ಈಗಲೂ ಮುಂದುವರೆಸಲಾಗುತ್ತಿದೆ.

ಇಂತಹ ಸವಾಲಿನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಡವಳಿಕೆಯ ಬಗ್ಗೆ ನನಗೆ ದುಃಖವಿದೆ, ಆದರೆ ಹತಾಶನಾಗಿಲ್ಲ. ನಿಮ್ಮ ಪಕ್ಷದ ಕೆಲವು ಸದಸ್ಯರು ಜನರಿಗೆ ಸಹಾಯ ಮಾಡುವ ಮಹತ್ವದ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ಅವರ ಉತ್ತಮ ಕಾರ್ಯಕ್ಕೆ ನಿಮ್ಮ ಪಕ್ಷದ ಕೆಲವು ಸದಸ್ಯರು ಹರಡಿಸುತ್ತಿರುವ ನಕಾರಾತ್ಮಕತೆಯು ಕರಿಛಾಯೆಯಂತೆ ಬಿದ್ದಿದೆ. ಕಾಂಗ್ರೆಸ್‌ನ ಹಿರಿಯ ನಾಯಕರು ಜನರಿಗೆ ತಪ್ಪು ಮಾಹಿತಿ ನೀಡುವುದನ್ನು, ಸುಳ್ಳು ಮತ್ತು ವದಂತಿ ಹರಡಿಸುವುದನ್ನು ಮತ್ತು ಕೇವಲ ರಾಜಕೀಯ ವಿರೋಧದ ಆಧಾರದಲ್ಲಿ ನಿಲುವು ತಾಳುವುದನ್ನು ನಿಲ್ಲಿಸಲಿ ಎಂಬುದು ಪ್ರತಿಯೊಬ್ಬರ ಇಚ್ಛೆಯಾಗಿದೆ.

ಕಳೆದ ವರ್ಷ ನಮ್ಮ ವಿಜ್ಞಾನಿಗಳು, ವೈದ್ಯರು ಮತ್ತು ನಾವಿನ್ಯಕಾರರು ಲಸಿಕೆ ತಯಾರಿಸುವ ಸಲುವಾಗಿ ಕಠಿಣ ಪರಿಶ್ರಮ ಪಡುತ್ತಿದ್ದ ಸಂದರ್ಭದಲ್ಲಿ, ನಿಮ್ಮ ಪಕ್ಷದ ನಾಯಕರು ಅವರ ಪ್ರಯತ್ನಗಳ ಬಗ್ಗೆ ಅಪಹಾಸ್ಯ ಮಾಡುವ ಯಾವುದೇ ಅವಕಾಶವನ್ನು ಕೈಬಿಡಲಿಲ್ಲ. ಭಾರತವು ಲಸಿಕೆಯನ್ನು ತಯಾರಿಸಿರುವುದು ರಾಷ್ಟ್ರೀಯ ಹೆಮ್ಮೆಯ ವಿಚಾರವಾಗಿದೆ. ಆದರೆ ಕಾಂಗ್ರೆಸ್ ನಾಯಕರು ಅದರ ಬಗ್ಗೆಯೂ ಸಾಕಷ್ಟು ಅಪಹಾಸ್ಯ ಮಾಡಿದರು ಮತ್ತು ಜನರ ಮನಸ್ಸಿನಲ್ಲಿ ಸಂದೇಹ ಮೂಡಿಸುವ ಪ್ರಯತ್ನ ಮಾಡಿದರು. ಎಲ್ಲಿಯವರೆಗೆ ಎಂದರೆ, ನಿಮ್ಮ ಪಕ್ಷದ ಒಬ್ಬ ಮುಖ್ಯಮಂತ್ರಿ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಭಾರತದಲ್ಲಿ ಲಸಿಕೆಯ ಬಗ್ಗೆ ಯಾವುದೇ ಸಂದೇಹ ಉಳಿದುಕೊಂಡಿರುವ ಇತಿಹಾಸವಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಶತಮಾನದಲ್ಲಿ ಒಂದು ಬಾರಿ ಬಂದಿರುವ ವಿಧ್ವಂಸಕ ಮಹಾಮಾರಿಯ ಸಂದರ್ಭದಲ್ಲಿ ಸಂದೇಹವನ್ನು ಮೂಡಿಸುವ ಪ್ರಯತ್ನ ನಡೆಸಿತು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮೋದಿ ಸರ್ಕಾರವು ಲಸಿಕೆಯ ವಿಷಯದಲ್ಲಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂಬ ಮಾತನ್ನಾಡಿದೆ. ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳ ನಡುವೆ ಇಷ್ಟರ ಮಟ್ಟಿಗೆ ಸಂವಹನದ ಕೊರತೆ ಇದೆಯೇ? ಏಪ್ರಿಲ್ ತಿಂಗಳಲ್ಲೇ, ಕಾಂಗ್ರೆಸ್‌ನ ಹಿರಿಯ ನೇತಾರರು ಲಸಿಕೆ ವಿಕೇಂದ್ರೀಕರಣಕ್ಕಾಗಿ ಬೇಡಿಕೆಯಿಟ್ಟಿದ್ದರು.

ಭಾರತ ಸರ್ಕಾರವು ಆದ್ಯತೆಯ ಗುಂಪಿಗೆ ಲಸಿಕೆಯನ್ನು ಖಚಿತಪಡಿಸಲು ಮೊದಲು ಕೆಲ ಹಂತಗಳಲ್ಲಿ ರಾಜ್ಯಗಳಿಗೆ 16 ಕೋಟಿಗೂ ಅಧಿಕ ಲಸಿಕೆ ವಿತರಣೆ ಮಾಡಿತು. ಇದುವರೆಗೆ ಒಟ್ಟು 50% ಲಸಿಕೆಗಳನ್ನು ರಾಜ್ಯಗಳಿಗೆ ಉಚಿತವಾಗಿ ಲಭ್ಯಗೊಳಿಸಲಾಗಿದೆ.

ಯಾವ ರಾಜ್ಯಗಳಲ್ಲಿ ಬಿಜೆಪಿ ಅಥವಾ ಎನ್‌ಡಿಎ ಸರ್ಕಾರವಿದೆಯೋ, ಅಲ್ಲಿ ಬಡವರು ಮತ್ತು ವಂಚಿತರಿಗೆ ಉಚಿತ ಲಸಿಕೆಯನ್ನು ಲಭ್ಯಗೊಳಿಸುವ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಇರುವ ವಿಭಿನ್ನ ರಾಜ್ಯಗಳಲ್ಲಿ ಕೂಡ ಬಡವರಿಗೆ ಇದೇ ರೀತಿ ಉಚಿತ ಲಸಿಕೆ ನೀಡಲಾಗುತ್ತದೆ ಎಂಬ ಭರವಸೆ ಇದೆ. ಜನರಿಗೆ ಉಚಿತ ಲಸಿಕೆಯನ್ನು ನೀಡಲು ಈ ರೀತಿ ನಿರ್ಣಯವನ್ನು ತೆಗೆದುಕೊಳ್ಳುವಿರಾ?

ಭಾರತದಲ್ಲಿ ತಯಾರಾದ ಕೋವಿಡ್-19 ಲಸಿಕೆ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನದ್ದಲ್ಲ. ಇದು ಸಂಪೂರ್ಣ ದೇಶದ್ದು. ಆದರೆ ಕಾಂಗ್ರೆಸ್ ಪಕ್ಷ ಇದರ ಬಗ್ಗೆ ಒಳ್ಳೆಯ ಮಾತನಾಡುವ ಬದಲು ಕೇವಲ ತಪ್ಪು ರಾಜಕೀಯ ಮಾಡಿತು.

ಇಂದು ಕಾಂಗ್ರೆಸ್ ಪಕ್ಷ ಒಂದು ಹೊಸ ನಾಟಕವನ್ನು ಆರಂಭಿಸಿದೆ, ಅದೇನೆಂದರೆ ಎಲ್ಲಾ ಆರೋಪಗಳನ್ನು ಸೆಂಟ್ರಲ್ ವಿಸ್ಟಾ ಯೋಜನೆಯ ಮೇಲೆ ಹಾಕಿ ಬಿಡುವುದು, ಯುಪಿಎ ಆಡಳಿತದ ಸಂದರ್ಭದಲ್ಲೇ ಯೋಜನೆಯ ಅಗತ್ಯತೆಯ ಬಗ್ಗೆ ವಿಷಯ ಪ್ರಸ್ತಾಪವಾಗಿತ್ತು ಎಂಬುದನ್ನು ನಾನು ನಿಮಗೆ ನೆನಪಿಸಿಕೊಡಲು ಬಯಸುತ್ತೇನೆ. ಮಾಜಿ ಲೋಕಸಭೆ ಅಧ್ಯಕ್ಷೆ ಗೌರವಾನ್ವಿತ ಮೀರಾ ಕುಮಾರ್ ಅವರೇ ಒಂದು ಹೊಸ ಸಂಸತ್ ಭವನದ ಅವಶ್ಯಕತೆಯ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕೇಂದ್ರ ನಗರಾಭಿವೃದ್ಧಿ ಸಚಿವರು ಕೂಡ ಉಳಿದ ಪಕ್ಷಗಳಿಗೆ ಯೋಜನೆಯ ಪರವಾಗಿ ಸತ್ಯಾಧಾರಿತ ಉತ್ತರ ನೀಡಿದ್ದರು. ಆದರೂ ಕಾಂಗ್ರೆಸ್ ಪಕ್ಷಕ್ಕೆ ಈ ಸತ್ಯಗಳ ಬಗ್ಗೆ ವಿಶ್ವಾಸವಿಲ್ಲ. ಒಂದು ಕಡೆ ಕಾಂಗ್ರೆಸ್ ಪಕ್ಷ ಸೆಂಟ್ರಲ್ ವಿಸ್ಟಾ ಯೋಜನೆಗೆ ವಿರೋಧ ಮಾಡುತ್ತಿದೆ, ಮತ್ತೊಂದು ಕಡೆ ಕಾಂಗ್ರೆಸ್ ನೇತೃತ್ವದ ಛತ್ತೀಸ್ ಘಡ ಸರ್ಕಾರ ಹೊಸ ವಿಧಾನಸಭಾ ಸಂಕೀರ್ಣವನ್ನು ನಿರ್ಮಾಣ ಮಾಡುತ್ತಿದೆ ಎಂಬ ಬಗ್ಗೆ ಜನರೇ ಆಶ್ಚರ್ಯಚಕಿತರಾಗಿದ್ದಾರೆ.

ಕೋವಿಡ್-19 ಮಹಾಮಾರಿಯ ಹೋರಾಟದ ಸಮಯದಲ್ಲಿ ವಿರುದ್ಧದ ಹೋರಾಟದ ರಾಹುಲ್ ಗಾಂಧಿ ಸೇರಿದಂತೆ ಇತರ ಕಾಂಗ್ರೆಸ್ ನಾಯಕರ ವರ್ತನೆಯನ್ನು ನಾಟಕೀಯ ಮತ್ತು ನೀಚತನದ ಪರಮಾವಧಿಯಾಗಿ ನೆನಪಿಟ್ಟುಕೊಳ್ಳಲಾಗುವುದು.

ನಿಮ್ಮ ನೇತೃತ್ವದ ಕಾಂಗ್ರೆಸ್ ಪಕ್ಷವು ಮೊದಲು ಲಾಕ್‌ಡೌನ್‌ಗೆ ವಿರೋಧ ವ್ಯಕ್ತಪಡಿಸಿತು, ನಂತರ ಲಾಕ್‌ಡೌನ್‌ಗಾಗಿ ಬೇಡಿಕೆ ಇಟ್ಟಿತು. ಕೊರೋನಾ ಬಗ್ಗೆ ಕೇಂದ್ರ ಸರ್ಕಾರದ ಸಲಹೆಗಳನ್ನು ಮೊದಲು ಅನುಮಾನದಿಂದ ನೋಡಿತು, ನಂತರ ನಮಗೆ ಏನೂ ಸೂಚನೆ ಸಿಕ್ಕಿಲ್ಲ ಎಂದು ಹೇಳಿತು, ಕೇರಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಚುನಾವಣಾ ರ್ಯಾಲಿ ಆಯೋಜನೆ ಮಾಡಿದ ಕಾರಣ ಕೊರೋನಾ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿತು. ನಿಮ್ಮ ಪಕ್ಷ ದೊಡ್ಡ ದೊಡ್ಡ ಚುನಾವಣಾ ಸಮಾವೇಶ ಯೋಜನೆ ಮಾಡಿತು. ಇನ್ನೊಂದು ಕಡೆ ಕೊರೋನಾದ ನೀತಿ-ನಿಯಮಗಳ ಮಾತನ್ನಾಡಿ ವಿರೋಧ ವ್ಯಕ್ತಪಡಿಸಿತು.

2ನೇ ಅಲೆ ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲೂ, ಉತ್ತರಭಾರತದಲ್ಲಿ ನಿಮ್ಮ ನಾಯಕರುಗಳು ದೊಡ್ಡ ದೊಡ್ಡ ರಾಜಕೀಯ ಕಾರ್ಯಕ್ರಮಗಳಲ್ಲಿ ತುಂಬಾ ಸಂತಸದಿಂದ ಕಾಣಿಸಿಕೊಳ್ಳುತ್ತಿದ್ದರು. ಅಲ್ಲಿ ಮಾಸ್ಕ್ ಅಥವಾ ಸಾಮಾಜಿಕ ಅಂತರ ಇರಲೇ ಇಲ್ಲ. ಸಾರ್ವಜನಿಕರ ನೆನಪಿನಿಂದ ಇಂತಹ ಮಾಹಿತಿಗಳನ್ನು ಅಳಿಸಿ ಹಾಕಬಹುದಾದ ಕಾಲಘಟ್ಟ ಇದಲ್ಲ.

  • ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ”

Leave a Reply