ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವಂತಹ ಕಾಂಗ್ರೆಸ್ ಪಕ್ಷಕ್ಕೆ ಜನತೆ 136 ಸ್ಥಾನಗಳನ್ನು ಕೊಟ್ಟು ಸ್ಪಷ್ಟವಾದಂತಹ ಬಹುಮತದೊಂದಿಗೆ ತನ್ನ ಆಡಳಿತವನ್ನು ನಡೆಸಲು ಅವಕಾಶವನ್ನ ಮಾಡಿಕೊಟ್ಟಿರುತ್ತಾರೆ. ಇಂತಹ ಸಂದರ್ಭದಲ್ಲಿ ರಾಜಕೀಯ ಕಾರಣಗಳಿಗಾಗಿ ಮುಖ್ಯಮಂತ್ರಿಯ ಜೊತೆಗೆ ಉಪಮುಖ್ಯಮಂತ್ರಿಯ ಸ್ಥಾನವನ್ನು ಕಲ್ಪಿಸಿಕೊಡಲಾಗಿದೆ. ಇದು ಸಹಜವಾದಂತಹ ಪ್ರಕ್ರಿಯೆ ಆಗಿರುತ್ತದೆ. ಮುಖ್ಯಮಂತ್ರಿಯ ಸಿದ್ದರಾಮಯ್ಯನವರು ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಸಂಘಟನೆಯ ಜವಾಬ್ದಾರಿಯನ್ನು ಹೊತ್ತು ಕರ್ನಾಟಕ ರಾಜ್ಯದಲ್ಲಿ ತಮ್ಮದೇ ಆದಂತಹ ವಿಶಿಷ್ಟವಾದ ರೀತಿಯಲ್ಲಿ ಪಕ್ಷದ ಸಂಘಟನೆ ಮಾಡಿ ಅಧಿಕಾರಕ್ಕೆ ತರುವಲ್ಲಿ ಇವರಿಬ್ಬರ ಪಾತ್ರವೂ ಪ್ರಮುಖವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಇವರಿಗೆ ಸೂಕ್ತವಾದಂತಹ ಸ್ಥಾನಮಾನವನ್ನ ನೀಡಿರುತ್ತಾರೆ.
ಕಳೆದ ಕೆಲವು ದಿನಗಳಿಂದ ಕೆಲವು ಮಂತ್ರಿಗಳು ತಮ್ಮ ಇಲಾಖೆ ಬಗ್ಗೆ ಮಾತನಾಡುವುದಕ್ಕಿಂತ ಡಿಸಿಎಂ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ವಿರೋಧ ಪಕ್ಷದವರು ಸದಾ ಕಾಲ ಯಾವುದಾದರೂ ಒಂದು ತಪ್ಪುಗಳಿಗಾಗಿ ಮತ್ತು ಒಂದು ಗೊಂದಲದ ವಾತಾವರಣಕ್ಕಾಗಿ ಕಾಯುತ್ತಲೆ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಇಂತಹ ಡಿಸಿಎಂ ಮಾತುಗಳು ವಿರೋಧ ಪಕ್ಷದವರಿಗೆ ಆಹಾರವನ್ನು ಒದಗಿಸುತ್ತದೆ ಮತ್ತು ಸಾರ್ವಜನಿಕ ವಲಯದಲ್ಲಿ ಗೊಂದಲವು ಉಂಟಾಗುತ್ತದೆ
ಯಾವುದೇ ಒಂದು ಆಟದಲ್ಲಿ ಆ ತಂಡಕ್ಕೆ ಒಬ್ಬ ನಾಯಕ ಮತ್ತು ಉಪನಾಯಕರು ಮಾತ್ರ ಇರುತ್ತಾರೆ ಯಾವುದೇ ಆಟದಲ್ಲಿ ಅಥವಾ ಯಾವುದೇ ತಂಡದಲ್ಲಿ ಒಂದಕ್ಕಿಂತ ಹೆಚ್ಚು ಉಪನಾಯಕರು ಇರುವಂತಹ ಉದಾಹರಣೆಗಳು ಇರುವುದಿಲ್ಲ. ಇದೇ ಹಿನ್ನೆಲೆಯಲ್ಲಿ ಹಾಲಿ ರಾಜ್ಯದಲ್ಲಿ ಒಬ್ಬ ಡಿಸಿಎಂ ವ್ಯವಸ್ಥೆ ಸರಿಯಾದದ್ದಾಗಿರುತ್ತದೆ. ಈ ಹುದ್ದೆ ಅವರಿಗೆ ಅವರ ಸಂಘಟನೆಯ ಸಾಮರ್ಥ್ಯಕ್ಕೆ ನೀಡಿದಂತಹ ಒಂದು ಗೌರವವು ಆಗಿರುತ್ತದೆ.
ಸದ್ಯದಲ್ಲಿಯೇ ಲೋಕಸಭಾ ಚುನಾವಣೆಗಳು ಬರುತ್ತಿದ್ದು ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಎಂಬ ಆಟವನ್ನು ನಾಯಕ ಮತ್ತು ಉಪನಾಯಕರು ಎನಿಸಿಕೊಳ್ಳುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಂತ್ರಿಮಂಡಲದ ಸದಸ್ಯರು ಆಟಗಾರರ ರೀತಿಯಲ್ಲಿ ಶ್ರದ್ಧೆಯಿಂದ ಆಟವನ್ನು ಆಡಿ ಲೋಕಸಭೆಯಲ್ಲಿ ಜಯಭೇರಿಯನ್ನ ಬಾರಿಸಿದ ನಂತರ ಯಾವುದೇ ಮಾತುಗಳನ್ನಾಡಿದರು ಅದಕ್ಕೆ ಅರ್ಥವಿರುತ್ತದೆ.
ರಾಜ್ಯದ ಜನ ಪ್ರತಿಯೊಬ್ಬ ಮಂತ್ರಿಗಳಿಂದ ಅವರ ಇಲಾಖೆಯ ವಿಶೇಷವಾದ ಯೋಜನೆಗಳು ಮತ್ತು ಅದರ ಅನುಷ್ಠಾನಗೊಳಿಸುವಿಕೆಗಾಗಿ ಕಾತುರದಿಂದ ಇರುತ್ತಾರೆ, ಹೊರತು ಗೊಂದಲದ ಹೇಳಿಕೆಗಳಿಗಾಗಿ ಯಾರು ಸಹ ಕಾಯುವುದಿಲ್ಲ.
ರಾಜ್ಯದ ಜನರ ಮನಸ್ಸಿನ ಭಾವನೆಗಳನ್ನು ಮತ್ತು ಲಕ್ಷಾಂತರ ಕಾರ್ಯಕರ್ತರ ಮನಸ್ಸಿನಲ್ಲಿರುವಂತಹ ಅಭಿಪ್ರಾಯಗಳನ್ನು ಅರಿತು ಕೆಲವು ಮಂತ್ರಿಗಳು ಪದೇ ಪದೇ ಗೊಂದಲದ ಹೇಳಿಕೆಗಳನ್ನು ನೀಡುವಂತಹ ತಮ್ಮ ಬುದ್ಧಿಯನ್ನ ಕೈ ಬಿಟ್ಟು ತಮ್ಮ ಇಲಾಖೆಯ ಅಭಿವೃದ್ಧಿಯತ್ತ ಗಮನವನ್ನು ಹರಿಸಿ ಮುಂಬರುವಂತಹ ಲೋಕಸಭಾ ಚುನಾವಣೆಯಲ್ಲಿ ತಮ್ಮ ತಮ್ಮ ಜಿಲ್ಲೆಯ ವ್ಯಾಪ್ತಿಗೆ ಬರುವ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲುವಂತೆ ಮಾಡಿದರೆ ಅದುವೇ ದೊಡ್ಡ ಸಾಧನೆಯಾಗುತ್ತದೆ.
ಎಲ್ಲರ ಗಮನ ಕಾಂಗ್ರೆಸ್ ಪಕ್ಷದ ಗೆಲುವಿನ ಕಡೆ ಇರಬೇಕೇ ಹೊರತು ಗೊಂದಲದ ವಾತಾವರಣಗಳ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಅಲ್ಲ. ಅಧಿಕಾರದಲ್ಲಿರುವಂತಹ ಜನರಿಗೆ ಅಧಿಕಾರ ಹೊಸದಲ್ಲ. ಆದರೆ ಈ ಪಕ್ಷವನ್ನ ಅಧಿಕಾರಕ್ಕೆ ತರಬೇಕೆಂದು ಹಳ್ಳಿಹಳ್ಳಿಯಲ್ಲಿ ರಸ್ತೆರಸ್ತೆಯಲ್ಲಿ ಹೋರಾಟಗಳನ್ನು ಮಾಡಿರುವ ಕಾರ್ಯಕರ್ತರಿಗೆ ಕೆಲವು ನಾಯಕರುಗಳ ನಡವಳಿಕೆಗಳಿಂದ ಬೇಸರವಾಗುತ್ತದೆ. ನಾವು ವಿರೋಧ ಪಕ್ಷದಲ್ಲಿರುವ ಬಿಜೆಪಿಯನ್ನು ಭಾಗಿಸಿಕೊಂಡು ರಾಜಕೀಯ ಮಾಡಬೇಕೇ ಹೊರತು ನಮ್ಮ ನಮ್ಮಲ್ಲೇ ಗೊಂದಲಗಳನ್ನು ಮಾಡಿಕೊಂಡು ರಾಜಕಾರಣ ಮಾಡುವುದಲ್ಲ.
- ಕೆಎಸ್ ನಾಗರಾಜ್, ಬೆಂಗಳೂರು




