ಬೆಂಗಳೂರು: ವಿಜಯಪುರ ಜಿಲ್ಲೆಯ ಮಮದಾಪುರ ಗ್ರಾಮದ 1494 ಎಕರೆ 38 ಗುಂಟೆ ಅರಣ್ಯ ಪ್ರದೇಶಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಆಧ್ಯಾತ್ಮಿಕ ಬೋಧನೆಗಳಿಂದ ಜನಮನ ಗೆದ್ದಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪರಿಸರ ಸಂರಕ್ಷಣೆ ಮತ್ತು ಸಮುದಾಯ ಯೋಗಕ್ಷೇಮಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಶ್ರೀಗಳ ಸ್ಮರಣಾರ್ಥ ಅವರ 2ನೇ ಪುಣ್ಯ ಸ್ಮರಣೆಯ ದಿನವಾದ ಜನವರಿ 2ರಂದು ವಿಜಯಪುರದಲ್ಲಿ ವಿಧ್ಯುಕ್ತವಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣ ಫಲಕ ಅನಾವರಣ ಮಾಡಲಾಗುವುದು ಎಂದರು.
ವಿವಿಧ ಕಾಲಾವಧಿಯಲ್ಲಿ ಮಮದಾಪುರ ಭಾಗದಲ್ಲಿನ ಅರಣ್ಯ ಪ್ರದೇಶಗಳ ಅಧಿಸೂಚನೆಯಾಗಿದ್ದು, ಪ್ರಸ್ತುತ ಸುಮಾರು 1494 ಎಕರೆ 38 ಗುಂಟೆ ವಿಸ್ತೀರ್ಣದ ಅರಣ್ಯವಿದೆ. ಪ್ರಾಣಿಸಂಕುಲ, ಪಕ್ಷಿ ಸಂಕುಲ, ಕೀಟ ಸಂಕುಲ ಮತ್ತು ಸಸ್ಯ ಸಂಕುಲದಿಂದ ಕೂಡಿರುವ ಶ್ರೀಮಂತ ಜೀವವೈವಿಧ್ಯತೆಯ ಈ ತಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವೀಧ್ಯ ಪಾರಂಪರಿಕ ತಾಣ ಎಂದು ಜೀವವೈವಿಧ್ಯ ಕಾಯಿದೆ 2022ರ ಸೆಕ್ಷನ್ 37ರನ್ವಯ ಮರು ನಾಮಕರಣ ಮಾಡಲಾಗುತ್ತಿದೆ ಎಂದರು.
ಮಮದಾಪುರದ ಅಧಿಸೂಚಿತ ಅರಣ್ಯ ಎಲೆ ಉದುರುವ ಕಾಡು ಮತ್ತು ಕುರುಚಲು ಕಾಡುಗಳಿಂದ ಕೂಡಿದ ಪ್ರದೇಶವಾಗಿದ್ದು, ಚಿರತೆಗಳು, ನರಿಗಳು, ಕತ್ತೆ ಕಿರುಬಗಳು ಮತ್ತು ಹಲವಾರು ಪ್ರಭೇದದ ಪಕ್ಷಿಗಳತಾಣವಾಗಿದೆ. ಸಸ್ಯ ಸಂಕುಲ, ಕೀಟ ಸಂಕುಲದ ನೆಲೆವೀಡೂ ಆಗಿದೆ ಎಂದರು.
ಬಿಜಾಪುರ, ಬಾಗಲಕೋಟೆ ಭಾಗದಲ್ಲಿ ಅರಣ್ಯ ಪ್ರದೇಶವೇ ಕಡಿಮೆ ಇದ್ದು, ಇರುವ ವನ ಪ್ರದೇಶವನ್ನು ಮತ್ತು ಇಲ್ಲಿನ ಜೀವ ವೈವಿಧ್ಯತೆಯನ್ನು ಸಂರಕ್ಷಿಸುವುದು ಇಂದಿನ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳ ಹೆಸರನ್ನು ಈ ಕಾನನ ಪ್ರದೇಶಕ್ಕೆ ಇಡುವುದರಿಂದ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲೂ ನೆರವಾಗಲಿದೆ ಎಂದರು.
ಈ ಪಾರಂಪರಿಕ ಜೀವವೈವಿಧ್ಯ ತಾಣಕ್ಕೆ ಸಮುದಾಯ ಬೆಂಬಲವೂ ಲಭಿಸಲಿದೆ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು, ಪರಿಸರದ ಆರೋಗ್ಯ ಜನರ ಯೋಗಕ್ಷೇಮಕ್ಕೆ ನೇರವಾಗಿ ಸಂಬಂಧಿಸಿದೆ ಎಂದು ಪ್ರತಿಪಾದಿಸುತ್ತಿದ್ದರು. ಮಾನವ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಬೇಕು ಎಂದು ಹೇಳುತ್ತಿದ್ದರು. ಅವರ ಈ ನುಡಿಗಳು, ಇಂದಿಗೂ, ಎಂದೆಂದಿಗೂ ಸಾರ್ವಕಾಲಿಕವಾಗಿದ್ದು ಎಂದರು.
ಈ ಜೀವ ವೈವಿಧ್ಯತೆಯ ಅರಣ್ಯಕ್ಕೆ ಅವರ ಹೆಸರು ಇಡುವುದರಿಂದ ನಾಡಿನ ಜನರಲ್ಲಿ ಅದರಲ್ಲೂ ವಿಜಯಪುರ ಭಾಗದ ಜನರಲ್ಲಿ ಜೀವವೈವಿಧ್ಯತೆಯ ಸಂರಕ್ಷಣೆಯ ಅರಿವು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಮಮದಾಪುರ ಗ್ರಾಮದ ಅಧಿಸೂಚಿತ ಅರಣ್ಯಗಳನ್ನು ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪರಂಪರೆಯ ತಾಣವೆಂದು ಘೋಷಿಸುವ ಮೂಲಕ ರಾಜ್ಯ ಸರ್ಕಾರ ಶ್ರೀಗಳ ಪರಿಸರ ಕಾಳಜಿಯನ್ನು ಗೌರವಿಸಿದೆ ಹಾಗೂ ಅವರ ತತ್ವಗಳು ಈ ಪ್ರಮುಖ ಪರಿಸರ ಪ್ರದೇಶದ ಸಂರಕ್ಷಣೆ ಮತ್ತು ಸುಸ್ಥಿರ ನಿರ್ವಹಣೆಗೆ ಮಾರ್ಗದರ್ಶಿಯಾಗಿರುತ್ತದೆ ಎಂದರು.
ಪಾರಂಪರಿಕ ತಾಣ ಘೋಷಣೆಯಿಂದ ಸ್ಥಳೀಯ ಜನರ ಅಥವಾ ಈ ಕಾಡನ್ನು ಅವಲಂಬಿಸಿರುವ ಆದಿವಾಸಿಗಳ ದೈನಂದಿನ ಬದುಕಿನ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪಾರಂಪರಿಕ ತಾಣದ ನಿರ್ವಹಣೆಯಲ್ಲಿ ಸ್ಥಳೀಯ ಜನ ಸಂಪೂರ್ಣ ಪಾಲ್ಗೊಳ್ಳಲು ನೆರವಾಗುತ್ತದೆ. ಆದರೆ, ಜೀವವೈವಿಧ್ಯತೆಯ ಸಂರಕ್ಷಣೆಗೆ ಬಾಧಕವಾಗುವ ಯಾವುದೇ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ ಎಂದರು.




