ಬೆಂಗಳೂರು: ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸುವುದು, ರಾಜ್ಯದ ಶ್ರೀಮಂತ ಜೀವವೈವಿಧ್ಯತೆಯನ್ನು ಸಂರಕ್ಷಿಸುವುದು ಮತ್ತು ಅರಣ್ಯ ಪರಿಸರ ವ್ಯವಸ್ಥೆಗಳ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವುದು ಅರಣ್ಯ ಇಲಾಖೆಯ ಪ್ರಾಥಮಿಕ ಕರ್ತವ್ಯವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ನೀತಿ ಚೌಕಟ್ಟು ಕುರಿತ ಅಂತಾರಾಜ್ಯ ಸಚಿವರ ಸಂವಾದ: ಅಂತರಜೀವಿ ಹಣ ಆಂದೋಲನದ ಮೂಲಕ ಪಶ್ಚಿಮ ಘಟ್ಟಗಳಲ್ಲಿನ ಜೀವವೈವಿಧ್ಯತೆಯ ಸಂರಕ್ಷಣೆಗೆ ವೇಗವರ್ಧನೆ’ಸಮಾವೇಶದಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟ ಅಸಾಧಾರಣವಾದ ಅಪರೂಪದ ಜೀವ ವೈವಿಧ್ಯತೆಯೊಂದಿಗೆ, ಅತ್ಯುತ್ತಮ ಸಾರ್ವತ್ರಿಕ ಮೌಲ್ಯದ ಪ್ರದೇಶವಾಗಿದೆ ಎಂದು ಹೇಳಿದರು.
ಕಾಡಿನ ನಾಶವನ್ನು ತಪ್ಪಿಸಲು ಅರಣ್ಯ (ಸಂರಕ್ಷಣೆ) ಕಾಯ್ದೆ, 1980 ಜಾರಿಗೆ ತರಲಾಯಿತು. ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಯ ಮೂಲಕ ವನ್ಯಜೀವಿಗಳ ಆವಾಸಸ್ಥಾನಗಳ ಸಮಗ್ರ ಅಭಿವೃದ್ಧಿ ಎಂಬ ಯೋಜನೆಯನ್ನು ರೂಪಿಸಲಾಯಿತು ಎಂದರು.
ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಪಶ್ಚಿಮ ಘಟ್ಟಗಳನ್ನೊಳಗೊಂಡಿದ್ದು, ಜೀವವೈವಿಧ್ಯತೆಯ ವಿಶ್ವದ ಎಂಟು “ಅದ್ಭುತ ತಾಣಗಳಲ್ಲಿ” ಒಂದಾಗಿವೆ. ಪಶ್ಚಿಮ ಘಟ್ಟಗಳು ಅಂತಾರಾಜ್ಯ ಶ್ರೇಣಿಯಾಗಿರುವುದರಿಂದ ಸಂರಕ್ಷಣಾ ಕಾರ್ಯಗಳನ್ನು ಅಂತರರಾಜ್ಯ ಮಟ್ಟದಲ್ಲಿ ಸಮನ್ವಯಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರ ಮತ್ತು ಸ್ವಾಯತ್ತ ಸಂಸ್ಥೆಗಳ ಧನಸಹಾಯ ಮತ್ತು ಅಭಿವೃದ್ಧಿಯ ಬೆಂಬಲದೊಂದಿಗೆ, ಜೀವವೈವಿಧ್ಯತೆ, ಸಂರಕ್ಷಣೆ ಮತ್ತು ಮೌಲ್ಯ ಸೃಷ್ಟಿ ಸಾಧ್ಯವಾಗುತ್ತದೆ ಎಂಬ ಹೊಸ ಕಲ್ಪನೆಯ ಸಾಧಕ ಬಾಧಕದ ಬಗ್ಗೆ ಚಿಂತನ ಮಂಥನದ ಅಗತ್ಯವಿದೆ ಎಂದು ಹೇಳಿದರು.
ಜೀವವೈವಿಧ್ಯ ಕಾಯ್ದೆ, 2002 ತನ್ನ ಜೀವ ವೈವಿಧ್ಯ ಸಂಪನ್ಮೂಲಗಳ ಮೇಲೆ ಭಾರತದ ಸಾರ್ವಭೌಮ ಹಕ್ಕನ್ನು ಪುನರುಚ್ಚರಿಸುತ್ತದೆ. ಸ್ಥಳೀಯ ಜೀವಸಂಕುಲ, ಸಸ್ಯ ಸಂಕುಲ ಉಳಿಸಲು ನಾವು ಪ್ರಯತ್ನಿಸಬೇಕು ಎಂದರು.
ಪಶ್ಚಿಮ ಘಟ್ಟಗಳಲ್ಲಿನ ಜೀವವೈವಿಧ್ಯತೆಯನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಬಳಸುತ್ತಿರುವ ಪ್ರಸ್ತುತ ಕಾರ್ಯತಂತ್ರಗಳಿಗೆ ಅಂತರ ಜೀವಿ (INTERSPECIES) ಹಣ ಆಂದೋಲನವು ಹೇಗೆ ಹೊಂದಿಕೆಯಾಗುತ್ತದೆ ಎಂಬ ಬಗ್ಗೆ ತಜ್ಞರು ಬೆಳಕು ಚೆಲ್ಲಬೇಕು ಎಂದು ತಿಳಿಸಿದರು.




