ಬೆಂಗಳೂರು: ಪಶ್ಚಿಮ ಘಟ್ಟವನ್ನು ಸಂರಕ್ಷಿಸಬೇಕು ಎಂಬುದರಲ್ಲಿ ಯಾವುದೇ ಎರಡು ಮಾತಿಲ್ಲ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ತಲೆತಲಾಂತರಗಳಿಂದ ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ರೈತರು ಮತ್ತು ಜನರ ಬದುಕಿಗೆ ತೊಂದರೆಯಾಗಬಾರದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ವಿಧಾನ ಪರಿಷತ್ನಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು ಎಂದರು.
ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುವ ಪ್ರತಿಯೊಂದು ಹಳ್ಳಿಯಲ್ಲೂ ಸ್ಥಳೀಯ ರೈತರು, ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ತಜ್ಞರೊಂದಿಗೆ ಚರ್ಚಿಸಿ, ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತು ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಮ್ಮ ಮಲೆನಾಡಿನ ರೈತರ ಬದುಕಿನ ಹಿಂದೆ ದೊಡ್ಡ ಹೋರಾಟ ಮತ್ತು ಪರಿಶ್ರಮವಿದೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಭೂಮಿ ನೀಡಿದರು. ನಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಬಗರ್ ಹುಕುಂ ಹಕ್ಕುಪತ್ರ ಹಾಗೂ ಉಚಿತ ಪಂಪ್ಸೆಟ್ಗಳಂತಹ ಯೋಜನೆಗಳ ಮೂಲಕ ರೈತರ ಬದುಕಿಗೆ ಹೊಸ ಶಕ್ತಿ ನೀಡಿದರು ಎಂದರು.
ಇಂದು ಶಿವಮೊಗ್ಗದಲ್ಲಿ ಅಡಕೆ ಕೃಷಿ ದೊಡ್ಡ ಪ್ರಮಾಣದಲ್ಲಿ ಬೆಳೆದಿರುವುದರ ಹಿಂದೆ ಸಾವಿರಾರು ರೈತರ ಪರಿಶ್ರಮವಿದೆ. ಅವರಿಗೆ ಬದುಕು ಕಟ್ಟಿಕೊಟ್ಟಿದ್ದು ನಾವೇ. ಈಗ ಕಸ್ತೂರಿ ರಂಗನ್ ವರದಿಯ ಹೆಸರಿನಲ್ಲಿ ಅವರ ಬದುಕನ್ನೇ ಕಿತ್ತುಕೊಳ್ಳುವ ಪರಿಸ್ಥಿತಿ ಬರಬಾರದು ಎಂದರು.
ನನ್ನ ಕ್ಷೇತ್ರ ಸೊರಬ ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ಇಲ್ಲ. ಆದರೂ ನಾನು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವ. ಶಿವಮೊಗ್ಗ ಜಿಲ್ಲೆಯ ಜನ ನನ್ನ ಜನ. ಅವರಿಗೆ ತೊಂದರೆಯಾದಾಗ ನಾನು ಅವರ ಜೊತೆ ನಿಲ್ಲುವುದು ನನ್ನ ಜವಾಬ್ದಾರಿ. ಅದಕ್ಕಾಗಿಯೇ ಮಲೆನಾಡಿನ ರೈತರ ಹೋರಾಟದಲ್ಲಿ ನಾನು ಭಾಗಿಯಾಗಿದ್ದೇನೆ ಎಂದರು.
ಮಲೆನಾಡಿನ ಜನ ಪಶ್ಚಿಮ ಘಟ್ಟದ ಪರಿಸರದ ಜೊತೆ ಬೆಸೆದುಕೊಂಡು ಬದುಕಿದ್ದಾರೆ. ಅವರನ್ನು ಪರಿಸರದ ವಿರೋಧಿಗಳಂತೆ ನೋಡುವುದು ಸರಿಯಲ್ಲ. ರೈತರ ಬದುಕು ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮನ್ವಯಗೊಳಿಸುವ ಪರಿಹಾರವೇ ನಮ್ಮ ಗುರಿ. ಮಲೆನಾಡಿನ ಜನರ ಹಿತವನ್ನು ಕಾಪಾಡಲು ಸದನದಲ್ಲಿ ನಮ್ಮ ಧ್ವನಿ ಮುಂದುವರಿಯಲಿದೆ ಎಂದರು.




