ಡಾ.ಕೆ.ಕಸ್ತೂರಿ ರಂಗನ್ ಅವರಿಗೆ ಭಾರತ ರತ್ನ ನೀಡಬೇಕು: ಹೆಚ್.ಕೆ.ಪಾಟೀಲ್

8 months ago

ಬೆಂಗಳೂರು: ಖ್ಯಾತ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸ್ಪೀಕರ್ ಯು.ಟಿ.ಖಾದರ್ ಅವರು ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ಕಸ್ತೂರಿ ರಂಗನ್ ಅವರಿಗೆ ಪದ್ಮವಿಭೂಷಣ ಸೇರಿದಂತೆ ಎಲ್ಲಾ ಪ್ರಶಸ್ತಿಗಳು ದೊರೆತಿವೆ. ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವನ್ನು ಅವರಿಗೆ ಮರಣೋತ್ತರವಾಗಿ ನೀಡಬೇಕು ಎಂದರು.

ಇದಕ್ಕೂ ಮುನ್ನ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕಸ್ತೂರಿ ರಂಗನ್ ಅವರ ಹೆಸರನ್ನು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡುವ ಮೂಲಕ ಗೌರವ ಸಲ್ಲಿಸಬೇಕು. ವಿದ್ಯಾರ್ಥಿಗಳು ಕಸ್ತೂರಿ ರಂಗನ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಸ್ಮರಿಸುತ್ತಾರೆ ಎಂಬ ಸಲಹೆ ನೀಡಿದರು. ಖ್ಯಾತ ನಟಿ ಬಿ.ಸರೋಜಾದೇವಿ ಅವರ ಹೆಸರನ್ನು ಮಲ್ಲೇಶ್ವರಂ 11 ಮುಖ್ಯರಸ್ತೆಯ, 11 ಅಡ್ಡರಸ್ತೆಗೆ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಡೆರ್ರಿಕ್ ಎಂ.ಬಿ. ಫುಲಿನ್ಫಾ ಅವರು ಆಂಗ್ಲೋ ಇಂಡಿಯನ್ ನಾಮ ನಿರ್ದೇಶಿತ ಸದಸ್ಯರಾಗಿದ್ದರು. ಕೇಂದ್ರ ಸರ್ಕಾರ ರಾಜ್ಯಸಭೆ, ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಈ ನಾಮನಿರ್ದೇಶನ ಮಾಡುವುದನ್ನು ತೆಗೆದಿದೆ. ಇದ್ದಿದ್ದರೆ, ಆ ಸಮುದಾಯಕ್ಕೆ ಅನುಕೂಲವಾಗುತ್ತಿತ್ತು ಎಂದರು.

ಬಿಜೆಪಿ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಲೆನಾಡಿನ ಭಾಗದಲ್ಲಿ ಬೋರ್ವೆಲ್ ಕೊರೆಸಿ ನೀರು ಕೊಟ್ಟವರು ಬೇಗಾನೆ ರಾಮಯ್ಯ ಎಂದು ಸ್ಮರಿಸಿದರು. ಪಹಲ್ಗಾಮ್ ದುರಂತ ಅತ್ಯಂತ ಅಮಾನುಷ ಕೃತ್ಯ ಎಂದ ಅವರು, ಆರ್ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಹಾಗೂ ಏರ್ ಇಂಡಿಯಾದ ದುರಂತದಲ್ಲಿ ಅಗಲಿದ ಗಣ್ಯರಿಗೆ ಶ್ರದ್ದಾಂಜಲಿ ಸಲ್ಲಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಬಿಜೆಪಿ ಶಾಸಕರಾದ ಆರ್. ಸುರೇಶ್ ಕುಮಾರ್, ಬಿ.ವೈ.ವಿಜಯೇಂದ್ರ ಅವರು ಇತ್ತೀಚೆಗೆ ಅಗಲಿದ ಗಣ್ಯರ ಗುಣಗಾನ ಮಾಡಿ, ಪಹಲ್ಗಾಮ್ ದಾಳಿ, ಆರ್ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತದ ದುರಂತ, ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದರು. ಮೊದಲಿಗೆ ಸಂತಾಪ ಸೂಚನೆ ನಿರ್ಣಯವನ್ನು ಕಲಾಪದಲ್ಲಿ ಮಂಡಿಸಿದ ಸ್ಪೀಕರ್ ಯು.ಟಿ.ಖಾದರ್ ಅವರು, ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಪಹಲ್ಗಾಮ್ನಲ್ಲಿ ಉಗ್ರರ ಗುಂಡಿಗೆ ಬಲಿಯಾದ 28 ಮಂದಿ, ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಮೃತಪಟ್ಟ 11 ಮಂದಿ, ಗುಜರಾತ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚನಾ ನಿರ್ಣಯವನ್ನು ಪ್ರಸ್ತಾಪಿಸಿ, ಇವರೆಲ್ಲರ ಆತ್ಮಕ್ಕೆ ಶಾಂತಿ ಕೋರಿದರು.

ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚನಾ ನಿರ್ಣಯದ ಮೇಲೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸದಸ್ಯರು ಮಾತನಾಡಿದ ನಂತರ ಅಗಲಿದ ಗಣ್ಯರ ಸೇವೆಯನ್ನು ಸ್ಮರಿಸಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಬಳಿಕ ಸದನದಲ್ಲಿ ಅಗಲಿದ ಗಣ್ಯರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Leave a Reply