ಮೋದಿ ಬದಲಾಗಲ್ಲ! ಅವರು ಸುಳ್ಳನ್ನು ತ್ಯಜಿಸುವ ಪ್ರಯತ್ನ ಮಾಡಿದ್ರೂ, ಸುಳ್ಳುಗಳೇ ಅವರನ್ನು ತ್ಯಜಿಸಿಹೋಗುವಂತೆ ಕಾಣುತ್ತಿಲ್ಲ. He hates lies; but, lies loves him! ಈಗ ಅಂತಹ ಮತ್ತೊಂದು ಸುಳ್ಳಿನ ಕಥೆ ಹೇಳಿ ಸಿಕ್ಕಿಹಾಕಿಕೊಂಡಿದ್ದಾರೆ. ಆತ್ಮನಿರ್ಭರ, ಮೇಕ್ ಇನ್ ಇಂಡಿಯಾ, ಗೋ ದೇಸಿ ಅಂತೆಲ್ಲ ಪುಂಗುವ ಮೋದಿಯವರು ಇತ್ತೀಚೆಗೆ ಪಾಡ್‌ಕಾಸ್ಟ್ ಸಂದರ್ಶನ ಕೊಟ್ಟದ್ದು ವಿದೇಶಿ ವ್ಯಕ್ತಿ, ಅಮೆರಿಕಾದ ಲೆಕ್ಸ್ ಫ್ರಿಡ್ಮನ್‌ಗೆ. ಅಲ್ಲಿಯೂ ಸಹಾ ತಮ್ಮ ಸುಳ್ಳಿನ ಸರಣಿಯನ್ನು ನಿರರ್ಗಳವಾಗಿ ಮುಂದುವರೆಸಿದ್ದಾರೆ. ಅದರಲ್ಲೊಂದು ಸುಳ್ಳು ಬಹಳ ಇಂಟರೆಸ್ಟಿಂಗ್ ಇದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ತಾನು ಚಿಕ್ಕವನಿದ್ದಾಗ ತುಂಬಾ ಬಡತನ ಅನುಭವಿಸಿದೆ. ಶಾಲೆಗೆ ಹೋಗುವಾಗ ಶೂಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸೀಮೆಸುಣ್ಣಗಳನ್ನು ಸಂಗ್ರಹಿಸಿ, ಬೆಳ್ಳಗೆ ಪಾಲಿಶ್ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾರೆ. ಭಕ್ತರೆಲ್ಲ ಜೋರಾಗಿ ಚಪ್ಪಾಳೆ ತಟ್ಟಿ, ಗೊಳೋ ಅಂತ ಕಣ್ಣೀರು ಸುರಿಸಿ ತಮ್ಮ ಮೋದಿ ಪಪ್ಪಾನ ಕಷ್ಟ ಕೇಳಿ ಮುಮ್ಮಲ ಕೊರಗಿದರು. ಆದರೆ, ತಲೆಯೊಳಗಿನ ಯಂತ್ರದಲ್ಲಿ ಸ್ವಲ್ಪ ಕಾಮನ್‌ಸೆನ್ಸ್ ಕೆಲಸ ಮಾಡಿದವರಿಗೆ ಮಾತ್ರ ಮೋದಿ ಅದೆಂತಹ ಸುಳ್ಳನ್ನು ಪುಂಗುತ್ತಿದ್ದಾರೆ ಅನ್ನೋದು ಅರ್ಥವಾಗುತ್ತೆ.
ಮೋದಿ ಹುಟ್ಟಿದ್ದು 1950ರಲ್ಲಿ. ಅಂದರೆ ಅವರ ಶಾಲಾ ದಿನಗಳು ಹೆಚ್ಚೆಂದರೆ ಹದಿನೈದನೇ ವಯಸ್ಸಿನವರೆಗೆ ಅಂದರೆ 1965ರವರೆಗೆ ಚಾಲ್ತಿಯಲ್ಲಿದ್ದವು ಅಂದುಕೊಳ್ಳೋಣ. ಆಗ, ದೇಶದಲ್ಲಿ ಶಿಕ್ಷಣ ಮಾಫಿಯಾ ಬೇರೂರಿರಲಿಲ್ಲ. ಹಾಗಾಗಿ ಅಲ್ಲೊಂದು ಇಲ್ಲೊಂದು ಕ್ರಿಶ್ಚಿಯನ್ನರ ಇಂಗ್ಲಿಷ್ ಮಿಷಿನರಿ ಸ್ಕೂಲುಗಳನ್ನು ಬಿಟ್ಟರೆ, ಬಡವರ ಮಕ್ಕಳ ಓದಿಗೆ ಆಸರೆಯಾಗಿದ್ದುದು ಸರ್ಕಾರಿ ಶಾಲೆಗಳು. ಆ ಸರ್ಕಾರಿ ಶಾಲೆಗೆ ಬರುತ್ತಿದ್ದ ಆಗಿನ ಕಾಲದ ಮಕ್ಕಳಿಗೆ ಮೈಮೇಲೆ ಸುಭದ್ರವಾದ ಬಟ್ಟೆಗೂ ಗತಿ ಇರುತ್ತಿರಲಿಲ್ಲ. ಕಾಲಲ್ಲಿ ಶೂ ಹಾಕುವುದಿರಲಿ, ಹರಿದ ಚಪ್ಪಲಿಗೂ ಗತಿಯಿಲ್ಲದೆ ಬರಿಗಾಲಲ್ಲಿ ಓಡಾಡುತ್ತಿದ್ದರು. ಅಂತದ್ದರಲ್ಲಿ ಈ ಮೋದಿ ತಾನು ಬಿಳಿ ಬಣ್ಣದ ಶೂ ಹಾಕಿ ಶಾಲೆಗೆ ಹೋಗುತ್ತಿದ್ದೆ ಎಂದು ಪುಂಗುತ್ತಾರಲ್ಲಾ ಏನನ್ನಬೇಕು?
ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ ಇರಲಿ, ಮೈಮೇಲೆ ಯುನಿಫಾರ್ಮ್ ಹಾಕಿಸಬೇಕು ಎಂದು ನಮ್ಮ ಸರ್ಕಾರಗಳ ತಲೆಗೆ ಹೊಳೆದಿದ್ದೇ 80ರ ದಶಕದಲ್ಲಿ. ಅಲ್ಲಿಯವರೆಗೆ ಶಾಲೆಯ ಮಕ್ಕಳಿಗೆ ಯೂನಿಫಾರ್ಮೂ ಇರಲಿಲ್ಲ. ಶೈಕ್ಷಣಿಕ ಪ್ರಗತಿಯಲ್ಲಿ ಮುಂದಿರುವ ದಕ್ಷಿಣ ಭಾರತದ ರಾಜ್ಯಗಳನ್ನು, ನಿರ್ದಿಷ್ಟವಾಗಿ ಕರ್ನಾಟಕವನ್ನೆ ಪರಿಗಣಿಸುವುದಾದರೂ 1983ರಲ್ಲಿ ಜಾರಿಗೆ ಬಂದ ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 133 (2) ಅಡಿಯಲ್ಲಿ ಶಾಲಾ ಮಕ್ಕಳಿಗೆ ಯೂನಿಫಾರ್ಮ್‌ನ ಅಗತ್ಯತೆಯನ್ನು ಪರಿಚಯಿಸಲಾಯಿತು. ಹಾಗಂತ ಯೂನಿಫಾರ್ಮನ್ನು ಕಡ್ಡಾಯ ಮಾಡಿರಲಿಲ್ಲ. ಶಿಫಾರಸ್ಸು ಮಾಡಿತ್ತಷ್ಟೆ. ಖಾಸಗಿ ಶಾಲೆಗಳು ತಮ್ಮ ಐಡೆಂಟಿಟಿ ಹಾಗೂ ಪ್ರತಿಷ್ಠೆಯ ಕಾರಣಕ್ಕೆ ಅಲ್ಲಿಂದಾಚೆಗೆ ಯೂನಿಫಾರ್ಮುಗಳನ್ನು ಬಳಸಲು ಶುರು ಮಾಡಿದವು. ಇನ್ನು ಸರ್ಕಾರಿ ಶಾಲೆಯಲ್ಲಿ ಯೂನಿಫಾರ್ಮುಗಳ ಬಳಕೆ ತಕ್ಕಮಟ್ಟಿಗೆ ಅನುಷ್ಠಾನಕ್ಕೆ ಬಂದದ್ದು 90ರ ದಶಕದ ಮಧ್ಯಂತರದ ನಂತರ. ಆಗಲೂ, ಯೂನಿಫಾರ್ಮಿನ ಮಿತಿ ಅಂಗಿ-ಚಡ್ಡಿ-ಸ್ಕರ್ಟು (ಲಂಗ)ಗಳಿಗೆ ಸೀಮಿತವಾಗಿತ್ತೆ ವಿನಾ ಶೂಗಳಿಗೆ ವ್ಯಾಪಿಸಿರಲಿಲ್ಲ. ಸರ್ಕಾರ ಮಕ್ಕಳಿಗೆ ಉಚಿತವಾಗಿ ಯೂನಿಫಾರ್ಮ್ ಬಟ್ಟೆಯನ್ನೇನೊ ನೀಡುತ್ತಿತ್ತು, ಆದರೆ ಅದು ರೆಡಿಮೇಟ್ ಬಟ್ಟೆಗಳಲ್ಲ. ಪೋಷಕರೇ ಹೊಲಿಸಿಕೊಡಬೇಕಿತ್ತು. ಎಷ್ಟೋ ಪೋಷಕರು ಅಷ್ಟು ಸ್ಥಿತಿವಂತರು ಅಥವಾ ಜಾಗೃತರಾಗಿಲ್ಲದ ಕಾರಣ, ಆ ಬಟ್ಟೆಗಳು ಮಕ್ಕಳ ಮೈಮೇಲೆ ಯೂನಿಫಾರ್ಮಾಗುವ ಬದಲು ಅನ್ಯ ಉದ್ದೇಶಗಳಿಗೆ ಬಳಕೆಗೊಳ್ಳುತ್ತಿದ್ದವು. ಶಾಲೆಗಳಲ್ಲಿ ಮಾಸ್ತರರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇನ್ನು ಮಕ್ಕಳ ಯೂನಿಫಾರ್ಮಿಗೆ ಶೂ ಸೇರ್ಪಡೆಯಾದದ್ದು ತೀರಾ ಇತ್ತೀಚೆಗೆ. ಆಗ ಸಹಾ, ಪೋಷಕರಿಗೆ ಹೊರಯಾಗಬಾರದೆನ್ನುವ ಕಾರಣಕ್ಕೆ ಸರ್ಕಾರವೇ ಶೂಭಾಗ್ಯದ ಮೂಲಕ ಉಚಿತವಾಗಿ ಮಕ್ಕಳಿಗೆ ಶೂ ವಿತರಣೆ ಮಾಡಲು ಮುಂದಾಯ್ತು. ಇಷ್ಟಾದರೂ ಸರ್ಕಾರಿ ಶಾಲಾ ಮಕ್ಕಳಲ್ಲಿ ಶೂ ಹಾಕಿಕೊಳ್ಳುವ ಜಾಗೃತಿ ಬಂದಿದೆ ಎಂದುಕೊಂಡಿರಾ? ಇತ್ತೀಚೆಗೆ, ಅಂದರೆ 2023ರ ಡಿಸೆಂಬರ್‍ನಲ್ಲಿ ಅಸೆಂಬ್ಲಿಯಲ್ಲಿ ಉತ್ತರಿಸುತ್ತಾ ಶಿಕ್ಷಣ ಸಚಿವ ಮಧುಬಂಗಾರಪ್ಪನವರು “1,39,078 ವಿದ್ಯಾರ್ಥಿಗಳು ಇವತ್ತಿಗೂ ಶಾಲೆಗೆ ಶೂ ಬದಲು ಚಪ್ಪಲಿ ಹಾಕಿಕೊಂಡು ಬರುತ್ತಿದ್ದಾರೆ” ಎಂದು ಹೇಳಿದ್ದರು. ಇದು ಅಧಿಕೃತ ಅಂಕಿಅಂಶ. ಪುಕ್ಕಟೆಯಾಗಿ ಶೂ ಕೊಟ್ಟೇ ಈ ಪರಿಸ್ಥಿತಿ! ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ರಾಜ್ಯಗಳ ಯೂನಿಫಾರ್ಮ್ ಇತಿಹಾಸವೇ ಇಷ್ಟು ಇತ್ತೀಚಿನದ್ದಾಗಿರುವಾಗ, ಮೋದಿ ಓದಿದ ಉತ್ತರ ಭಾರತದ ಗುಜರಾತಿಯ ಕಥೆ ಏನಾಗಿರಬೇಡ.
ನಿಮಗೆ ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಹೇಳಬೇಕು. ನಾವೆಲ್ಲಾ, ಅಮೆರಿಕಾವನ್ನು ಬಹಳ ಮುಂದುವರಿದ ದೇಶ ಅಂತ ನಂಬಿದ್ದೇವೆ. ಅದು ನಿಜವೂ ಇರಬಹುದು. ಆದರೆ ಅಂತಹ ಅಮೆರಿಕಾದಲ್ಲೂ ಪಬ್ಲಿಕ್ (ಸರ್ಕಾರಿ) ಶಾಲೆಗಳಲ್ಲಿ ಯೂನಿಫಾರ್ಮ್ ಬಳಕೆಗೆ ಒತ್ತು ನೀಡಲು ಶುರುವಾದದ್ದು 1994ರ ನಂತರ. ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ತಮ್ಮ ಒಂದು ಭಾಷಣದಲ್ಲಿ “ನಮ್ಮ ಹರೆಯದ ಶಾಲಾ ಮಕ್ಕಳು, ತಾವು ತೊಡುವ ಡಿಸೈನರ್ ಜಾಕೇಟ್‌ನ ವಿಚಾರವಾಗಿ ಕಿತ್ತಾಡಿಕೊಂಡು, ಹೊಡೆದಾಡಿ ಸಾಯುತ್ತಾರೆ ಎನ್ನುವುದಾದರೆ, ನಾವು ನಮ್ಮ ಸರ್ಕಾರಿ ಶಾಲೆಗಳಲ್ಲಿ ಯೂನಿಫಾರ್ಮನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ಯೋಚಿಸಬೇಕಿದೆ” ಎಂದು ಪ್ರಸ್ತಾಪಿಸಿದರು. ಅದಾದನಂತರವೇ ಯೂನಿಫಾರ್ಮ್‌ಗಳು ಅಮೆರಿಕಾದ ಸರ್ಕಾರಿ ಶಾಲೆಗಳಲ್ಲಿ ಬಳಕೆಗೆ ಬರಲು ಶುರುವಾದದ್ದು. 1998ರ ಅಂದಾಜಿಗೆ ಅಮೆರಿಕಾದ ಶೇ.25ರಷ್ಟು ಸರ್ಕಾರಿ ಶಾಲೆಗಳು ಮಾತ್ರ ಯೂನಿಫಾರ್ಮ್ ಅಳವಡಿಸಿಕೊಂಡಿದ್ದವು. ನಂತರ ಆ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಯಿತು.
ಇದು ಅಮೆರಿಕಾದ ಕಥೆ! ಮೋದಿ ಸ್ಟೂಡೆಂಟ್ ಆಗಿದ್ದಾಗ ಭಾರತದ ಸರ್ಕಾರಿ ಶಾಲೆಗಳ ಕಥೆ ಇನ್ನೇಗಿರಬೇಡ? ಆ ಕಾಲದ ಸಾಕಷ್ಟು ಜನ ಇವತ್ತಿಗೂ ನಮ್ಮ ನಡುವೆ ಬದುಕಿದ್ದಾರೆ. ಅವರ ನೆನಪುಗಳನ್ನು ಕೆದಕಿ ನೋಡಿದಾಗ, ಒಳ್ಳೆಯ ಬಟ್ಟೆಗಳಿಲ್ಲದೆ, ಕಾಲಿಗೆ ಚಪ್ಪಲಿಯಿಲ್ಲದೆ, ತಲೆಗೆ ಎಣ್ಣೆಯೂ ಇಲ್ಲದೆ, ಮಧ್ಯಾಹ್ನದ ಹಸಿದ ಹೊಟ್ಟೆಯಲ್ಲಿ ಶಾಲೆಗೆ ಹೋಗುತ್ತಿದ್ದ ದಿನಗಳನ್ನು ಅವರು ಹಸಿರಸಿರಾಗಿ ಮೆಲುಕುಹಾಕುತ್ತಾರೆ. ಅಂತದ್ದರಲ್ಲಿ ಈ ನಮ್ಮ ಮೋದಿ ಸಾಹೇಬರು, ಆ ಕಾಲದಲ್ಲೆ ಶ್ವೇತವರ್ಣದ ಶೂ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೆ, ಅದಕ್ಕೆ ಪಾಲಿಶ್ ಹಾಕಲು ಸೀಮೆಸುಣ್ಣದಿಂದ ತೀಡಿಕೊಳ್ಳುತ್ತಿದ್ದೆ ಅಂತ ಕೇಳುಗರ ತಲೆಗೆ ಸುಳ್ಳನ್ನು ತೀಡುತ್ತಿದ್ದಾರಲ್ಲಾ? ಹೋಗಲಿ, ಅವರು ಸರ್ಕಾರಿ ಶಾಲೆಯಲ್ಲಲದೆ ಆಗಿನ ಕೆಲವೇ ಕೆಲವು ಖಾಸಗಿ ಶಾಲೆಗಳಲ್ಲಿ ಓದಿದ್ದರೇನೊ ಅಂತ ಅಂದುಕೊಳ್ಳೋಣವೆಂದರೆ, ಖಾಸಗಿ ಶಾಲೆಯಲ್ಲಿ ಓದುವಷ್ಟು ಅನುಕೂಲವಿರುವ ವ್ಯಕ್ತಿ, ಪಾಲಿಶ್ ಗೂ ಗತಿಯಿಲ್ಲದ ಬಡವರು ಹೇಗಾಗುತ್ತಾರೆ? ಅಲ್ಲದೇ ಕ್ರಿಶ್ಚಿಯನ್ನರ ಇಂಗ್ಲಿಷ್ ಮಿಷನರಿ ಸ್ಕೂಲುಗಳು, ನಮ್ಮ ಹಿಂದೂತ್ವದ ಸಿಮ್ಮ ಮೋದಿ ಸಾಹೇಬರಿಗೆ ಆಗಿಬರುವಂತದ್ದೇ?
ಇಂತಹ ಪುಂಗುವಿಕೆಗಳನ್ನು ಕೇಳಲು ಅಮೆರಿಕಾದ ಆ ಪಾಡ್‌ಕಾಸ್ಟ್ ಪುಣ್ಯಾತ್ಮ 48 ಗಂಟೆ ಉಪವಾಸವಿದ್ದು ವ್ರತ ಮಾಡಿ ತಯಾರಾಗಿ ಬಂದಿದ್ದನಂತೆ! ಅದಿನ್ನೆಂತ ದೊಡ್ಡ ಸುಳ್ಳಾಗಿರಬೇಡ….
ಅಂದಹಾಗೆ, ನಮ್ಮ ಮೋದಿ ಸಾಹೇಬರು ಹೀಗಿ ಪಬ್ಲಿಕ್ಕಾಗಿ ಪುಂಗಿ ಸಿಕ್ಕಿಬೀಳ್ತಾ ಇರೋದು ಇದೇ ಮೊದಲೇನಲ್ಲ. ಹಿಂದೊಮ್ಮೆ, ನಾನು ರೈಲ್ವೆ ಸ್ಟೇಷನ್‌ನಲ್ಲಿ ಚಾಯ್ ಮಾರುತ್ತಿದ್ದೆ ಎಂದಿದ್ದರು, ಆದರೆ ಅವರ ಬಾಲ್ಯದ ದಿನಗಳ ಏಜ್‌ಡೇಟ್‌ಗೆ ಹೋಲಿಸಿ ನೋಡಿದರೆ, ಅವರು ಹೇಳಿದ ಊರಿನಲ್ಲಿ ಆಗ ರೈಲ್ವೆ ನಿಲ್ದಾಣವೇ ಇರಲಿಲ್ಲ. ಮತ್ತೊಮ್ಮೆ, ನಾನು ಓದಿದ್ದು ಕೇವಲ ಐದನೇ ಕ್ಲಾಸು ಮಾತ್ರ, ಮನೆ ಬಿಟ್ಟು ಓಡಿಹೋಗಿದ್ದೆ ಎಂದಿದ್ದರು. ಆಮೇಲೆ ನೋಡಿದರೆ, ತಾನು ವಿಶ್ವದ ಏಕೈಕ ಎಂಟೈರ್ ಪೊಲಿಟಿಕ್ ಸೈನ್ಸ್ ಡಬ್ಬಲ್ ಗ್ರಾಜುಯೇಟು ಅನ್ನೋ ಪುಕಾರು ಹಬ್ಬಿಸಿದರು. ಸರಿ, ನಿಮ್ಮ ಡಿಗ್ರಿ ಸರ್ಟೀಫಿಕೇಟು ಕೊಡಿ ನೋಡೋಣ ಅಂತ ಕೇಳಿದರೆ, ಅದು ರಾಷ್ಟ್ರೀಯ ಗೌಪ್ಯ, ಅದನ್ನು ಕೇಳುವುದು ದೇಶದ್ರೋಹಕ್ಕೆ ಸಮಾನ ಅಂತ ಫರ್ಮಾನುಗಳು ಹೊರಬಿದ್ದವು. 80ರ ದಶಕದಲ್ಲೇ ನನ್ನ ಬಳಿ ಡಿಜಿಟಲ್ ಕ್ಯಾಮೆರಾ ಇತ್ತು ಅದರಲ್ಲಿ ಫೋಟೊ ತೆಗೆದು ಇಮೇಲ್ ಕಳಿಸುತ್ತಿದ್ದೆ ಎಂದು ಹೇಳಿದ್ದರು. ದುರಾದೃಷ್ಟಕ್ಕೆ ಇವರೆಡೂ (ಡಿಜಿಟಲ್ ಕ್ಯಾಮೆರಾ, ಇಮೇಲ್) ಭಾರತವನ್ನು ಪ್ರವೇಶಿಸಿದ್ದು 90ರ ದಶಕದ ನಂತರ. ಎಷ್ಟೇ ಆಗಲಿ ಅವರು ನಾನ್ ಬಯಾಲಜಿಕಲ್ ದೈವಾಂಶ ಸಂಭೂತರಲ್ಲವೇ, ಅವರ ಜೀವನದಲ್ಲಿ ಇಂತಹ ಇಲ್ಲಾಜಿಕಲ್ ಚಮತ್ಕಾರಗಳು ನಡೆದಿರಬಹುದೇನೊ…. ಈ ಶೂ ಪ್ರಸಂಗವೂ ಅಂತದ್ದರಲ್ಲಿ ಒಂದು.
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು



