ನಿಜಕ್ಕೂ ವಿಷ್ಣುವರ್ಧನ್ ಮುಸ್ಲಿಂ ದ್ವೇಷಿಯಾಗಿದ್ದರೇ?

1 year ago

ಸತ್ತು 15 ವರ್ಷಗಳ ನಂತರ ನಟ ವಿಷ್ಣುವರ್ಧನ್ ಅವರಿಗೆ ಆರೆಸ್ಸೆಸ್ ಕಾರ್ಯಕರ್ತನ ಪಟ್ಟಕಟ್ಟುವ ದುಷ್ಟಯತ್ನ!

ನಟ ವಿಷ್ಣುವರ್ಧನ್ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರಾ? ದ್ವೇಷ, ಹಿಂಸೆ, ಮತಾಂಧತೆಯನ್ನೆ ಉಸಿರಾಡುವ ಆರೆಸ್ಸೆಸ್ನ ಮನಸ್ಥಿತಿ ವಿಷ್ಣುವರ್ಧನ್ ಅವರಲ್ಲೂ ಇತ್ತಾ? ಅಭಿಮಾನಿಗಳಿಂದ ‘ಕರುಣಾಮಯಿ’ ಎಂದು ಕರೆಸಿಕೊಳ್ಳುವ ವಿಷ್ಣುವರ್ಧನ್ ಅವರ ಹೃದಯದಲ್ಲಿ ಕೋಮುದ್ವೇಷದ ಬೆಂಕಿ ಉರಿಯುತ್ತಿತ್ತೇ?

ವಿಷ್ಣುವರ್ಧನ್ ನಮ್ಮನ್ನು ಅಗಲಿ ಹದಿನೈದು ವರ್ಷಗಳ ನಂತರ ಅವರ ಸುತ್ತ ಇಂಥಾ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿ ಬಂದಿರುವುದು ದುರಂತದ ಸಂಗತಿ. ಆದರೆ ಅಂತದ್ದೊಂದು ಅನಿವಾರ್ಯತೆಯನ್ನು ಕನ್ನಡ ಸಿನಿಮಾ ಮಂದಿ ನಮ್ಮ ಮುಂದಿರಿಸಿದ್ದಾರೆ.

ವಿಷ್ಣುವರ್ಧನ್ ಅವರಿಗೆ ಬ್ರೇಕ್ ಕೊಟ್ಟು ಬದುಕು ರೂಪಿಸಿಕೊಟ್ಟ ಸಿನಿಮಾ, ನಾಗರಹಾವು. ತರಾಸು ಅವರ ಕಾದಂಬರಿಯನ್ನು ಆಧರಿಸಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಪಾತ್ರದ ಹೆಸರು ರಾಮಾಚಾರಿ. ನಾಯಕನ ಪಾತ್ರಕ್ಕೆ ಸರಿಸಮನಾಗಿ ಚಿತ್ರವನ್ನು ಆವರಿಸಿದ ಮತ್ತೊಂದು ಪಾತ್ರವಿತ್ತು, ಹಿರಿಯ ನಟ ಅಶ್ವತ್ಥ್ ಅಭಿನಯಿಸಿದ್ದ ಚಾಮಯ್ಯ ಮೇಷ್ಟ್ರದ್ದು. ಇದೀಗ ಈ ಎರಡು ಜನಪ್ರಿಯ ಪಾತ್ರಗಳನ್ನೇ ಶೀರ್ಷಿಕೆಯಾಗಿಸಿಕೊಂಡ `ಚಾಮಯ್ಯ ಸನ್ ಆಫ್ ರಾಮಾಚಾರಿ’ ಅನ್ನೋ ಸಿನಿಮಾ ಸೆಟ್ಟೇರಿದೆ. ಬಹುಪಾಲು ನಾಗರಹಾವು ಸಿನಿಮಾದ ಎಲ್ಲಾ ಪಾತ್ರಗಳನ್ನು ಈ ಸಿನಿಮಾದಲ್ಲಿ ಅದೇ ಹೆಸರಿನಲ್ಲಿ ಬಳಸಿಕೊಳ್ಳಲಾಗುವುದು ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಸಾರಾಂಶದಲ್ಲಿ ಹೇಳಬೇಕೆಂದರೆ ನಾಗರಹಾವು ಸಿನಿಮಾದ ಸೀಕ್ವೆಲ್ ರೀತಿ ಈ ಸಿನಿಮಾ ಮೂಡಿಬರಲಿದೆ. ಇನ್ಫ್ಯಾಕ್ಟ್ ನಾಗರಹಾವು ಸಿನಿಮಾ ಎಲ್ಲಿಗೆ ಕೊನೆಯಾಗಿತ್ತೋ ಅಲ್ಲಿಂದಲೇ ಈ ಹೊಸ ಸಿನಿಮಾದ ಕಥೆ ಶುರುವಾಗುತ್ತದಂತೆ. ಅಂದರೆ ತನ್ನ ಪ್ರೇಯಸಿ ಮಾರ್ಗರೇಟ್ ಜೊತೆಗೆ ಸಾಯಲು ಬೆಟ್ಟದಿಂದ ಜಿಗಿವ ರಾಮಾಚಾರಿ, ಈ ಚಿತ್ರದಲ್ಲಿ ಬದುಕಿ ಬರುತ್ತಾನಂತೆ. ಇದು ನಿರ್ದೇಶಕ ಪಲ್ಲಕ್ಕಿಯ ಕಲ್ಪನೆ.

ಇಷ್ಟೇ ಆಗಿದ್ದಿದ್ದರೆ, ಈ ಸಿನಿಮಾದ ಬಗ್ಗೆ ಇಷ್ಟೊಂದು ಚರ್ಚಿಸುವ ಅಗತ್ಯವಿರುತ್ತಿರಲಿಲ್ಲ. ಬಿಡುಗಡೆಯಾದ ನಂತರ ವಿಮರ್ಶೆ ಮಾಡಿ ಸುಮ್ಮನಾಗಬಹುದಿತ್ತು. ಆದರೆ ಇತ್ತೀಚೆಗೆ ಚಿತ್ರತಂಡ ಬಿಡುಗಡೆ ಮಾಡಿರುವ ಒಂದು ಪೋಸ್ಟರ್‍ ಈಗ ದಿವಂಗತ ವಿಷ್ಣುವರ್ಧನ್ ಅವರ ಸುತ್ತ ಅನಗತ್ಯ ವಿವಾದವೊಂದನ್ನು ಹುಟ್ಟುಹಾಕಿದೆ. ಅಂದಹಾಗೆ, ಇಲ್ಲಿ ಇನ್ನೊಂದು ಸಂಗತಿಯನ್ನು ಸ್ಪಷ್ಟಪಡಿಸಬೇಕಿದೆ. ಈ ಸಿನಿಮಾದಲ್ಲಿ ನಿರ್ದೇಶಕ ಪಲ್ಲಕ್ಕಿಯವರು ರಾಮಾಚಾರಿಯ ಪಾತ್ರಕ್ಕೆ, ಅರ್ಥಾತ್ ವಿಷ್ಣುವರ್ಧನ್ ಅವರಿಗೆ ಒಂದು ಐಡೆಂಟಿಟಿಯಾಗಿ ಉಳಿದುಹೋಗಿರುವ ರಾಮಾಚಾರಿಯ ಪಾತ್ರಕ್ಕೆ, ವಿಷ್ಣುವರ್ಧನ್ ಅವರನ್ನೇ ಹೋಲುವ, ಜೂನಿಯರ್‍ ವಿಷ್ಣುವರ್ಧನ್ ಆಗಿ ಸಣ್ಣಪುಟ್ಟ ಆರ್ಕೆಸ್ಟ್ರಾಗಳಲ್ಲಿ ನಟಿಸಿಕೊಂಡಿದ್ದ ಜಯಶ್ರೀ ರಾಜ್ ಎಂಬ ನಟರೊಬ್ಬರನ್ನು ಕರೆತಂದು, ವಿಷ್ಣುವರ್ಧನ್ ಅವರ ತದ್ರೂಪಾಗಿ ತೋರಿಸಿದ್ದಾರೆ.

ಈಗ ಅಸಲೀ ವಿಚಾರಕ್ಕೆ ಬರೋಣ. ಚಿತ್ರತಂಡ ಬಿಡುಗಡೆ ಮಾಡಿದ ಆ ಪೋಸ್ಟರ್‍ನಲ್ಲಿ ವಿಷ್ಣುವರ್ಧನ್ ತದ್ರೂಪಿ ನಟನನ್ನು ಆರೆಸ್ಸೆಸ್ ಕಾರ್ಯಕರ್ತನ ಸಮವಸ್ತ್ರದಲ್ಲಿ, ಸದಾ ವತ್ಸಲೆ ಭಂಗಿಯ ಶೈಲಿಯಲ್ಲಿ ತೋರಿಸಲಾಗಿದೆ, ಕೈಯಲ್ಲಿ ಲಾಠಿ ಕೂಡಾ ಇದೆ. ಒಂದು ಕಾಲ್ಪನಿಕ ಸಿನಿಮಾ, ಅದರಲ್ಲೊಂದು ಪಾತ್ರ, ಆ ಪಾತ್ರದ ವೇಷಭೂಷಣ – ಹಿನ್ನೆಲೆಯ ಬಗ್ಗೆ ನಾವ್ಯಾಕೆ ಇಷ್ಟು ತಲೆಕೆಡಿಸಿಕೊಳ್ಳಬೇಕು? ಎಂದು ನಿಮಗನ್ನಿಸಬಹುದು. ಆದರೆ ವಿಚಾರ ಇಷ್ಟು ಸರಳವಿಲ್ಲ. ಸ್ವತಃ ವಿಷ್ಣುವರ್ಧನ್ ಅವರು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಂತೆ ನಾಗರಹಾವು ಕೇವಲ ಒಂದು ಸಿನಿಮಾ ಅಲ್ಲ. ಅವರ ಪಾಲಿಗೆ ಐಡೆಂಟಿಟಿ ಕಾರ್ಡ್ ಆಗಿ ಬದಲಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ, ಇಡೀ ಭಾರತೀಯ ಸಿನಿಮಾ ಜಗತ್ತಿನ ದಿಗ್ಗಜರೆಲ್ಲ ವಿಷ್ಣುವರ್ಧನ್ ಅವರತ್ತ ತಿರುಗಿ ನೋಡುವಂತೆ ಮಾಡಿದ್ದು ಅವರ ಆ ಮೊದಲ ಸಿನಿಮಾ. ಅದಾದ ನಂತರ ಅವರು ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದರೂ, ನಾಗರಹಾವು ರಾಮಾಚಾರಿಯ ಆಂಗ್ರಿ ಯಂಗ್ ಮ್ಯಾನ್ ಇಮೇಜು ಅವರಿಂದ ಕಳಚಿಕೊಳ್ಳಲಿಲ್ಲ. ವಿಷ್ಣು ಕೂಡಾ ಆ ಸಿನಿಮಾದ ಬಗ್ಗೆ ಅಷ್ಟೆ ನಂಟು ಉಳಿಸಿಕೊಂಡರು. ಎಷ್ಟರಮಟ್ಟಿಗೆಂದರೆ, ಬೆಂಗಳೂರಿನ ಜಯನಗರದಲ್ಲಿ ತಾವೊಂದು ಮನೆ ಕಟ್ಟಿಸಿದಾಗ ಆ ಮನೆಗೆ ವಲ್ಮೀಕ ಎಂದು ಹೆಸರಿಟ್ಟರು. ವಲ್ಮೀಕ ಎಂದರೆ ಹಾವು ವಾಸಿಸುತ್ತದೆ ಎಂದು ನಂಬಲಾಗುವ ಹುತ್ತ ಎಂದರ್ಥ. ನಾಗರಹಾವಿನಂತಹ ರಾಮಚಾರಿ ಪಾತ್ರಧಾರಿಯಾದ ತಾನು ವಾಸಿಸುವ ಮನೆಗೂ ವಲ್ಮೀಕ ಹೆಸರನ್ನು ಆಯ್ಕೆ ಮಾಡಿದ್ದರು.

ಅಂತಹ ನಾಗರಹಾವು ಸಿನಿಮಾದ ಸೀಕ್ವೆಲ್ ರೀತಿ ಒಂದು ಹೊಸ ಸಿನಿಮಾ ತಯಾರಾದಾಗ; ಅದರಲ್ಲಿ ಹಳೆಯ ನಾಗರಹಾವು ಸಿನಿಮಾದ ಪಾತ್ರಗಳೇ ಯಥಾವತ್ತು ಹೆಸರುಗಳೊಂದಿಗೆ ಪುನರಾವರ್ತನೆಯಾದಾಗ; ಅದರಲ್ಲೂ, ರಾಮಾಚಾರಿಯ ಪಾತ್ರಧಾರಿಯಾಗಿ ವಿಷ್ಣುವರ್ಧನ್ ಅವರನ್ನೇ ಹೋಲುವ ನಟನನ್ನು ಬಿತ್ತರಿಸಿದಾಗ ಜನ ಮತ್ತು ವಿಷ್ಣು ಅಭಿಮಾನಿಗಳು ಅದನ್ನೊಂದು  ಸಿನಿಮಾ ಆಗಿ ಅಷ್ಟೆ ಅಲ್ಲದೇ, ವಿಷ್ಣುವರ್ಧನ್ ಅವರ ರೆಫರೆನ್ಸ್ ಮೂಲಕ ಸ್ವೀಕರಿಸಲು ಮುಂದಾಗುತ್ತಾರೆ. ಇಂತಹ ಸ್ವೀಕಾರದ ಸಾಧ್ಯತೆಯಿರುವ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ತದ್ರೂಪಿಯನ್ನು ನೀವು ಆರೆಸ್ಸೆಸ್ ಕಾರ್ಯಕರ್ತನಂತೆ ವಿಜೃಂಭಿಸಿ ತೋರಿಸಿದರೆ, ಅವರ ಅಭಿಮಾನಿಗಳು ವಿಷ್ಣುವರ್ಧನ್ ಅವರು ನಿಜವಾಗಲೂ ಆರೆಸ್ಸೆಸ್ ನಂಟು ಅಥವಾ ಒಲವು ಹೊಂದಿದ್ದರು ಎಂದುಕೊಳ್ಳಬಹುದು.

ವಿಷ್ಣುವರ್ಧನ್ ಎಂಬ ಜನಪ್ರಿಯ ನಟರೊಬ್ಬರ ಮೂಲಕ ಆರೆಸ್ಸೆಸ್ ಎಂಬ ರಾಜಕೀಯ ಪ್ರೇರಿತ ಕೋಮುವಿಭಜಕ ಸಂಘಟನೆಗೆ ಮಾನ್ಯತೆಯನ್ನು ಉತ್ಪಾದಿಸಿಕೊಳ್ಳುವ ಒಂದು ಯತ್ನವಾಗಿ ನಾವಿದನ್ನು ಪರಿಗಣಿಸಬೇಕಾಗುತ್ತದೆ. ಇನ್ಫ್ಯಾಕ್ಟ್, ಆರೆಸ್ಸೆಸ್ ಎಂಬ ಟೊಳ್ಳು ಸಂಘಟನೆ ತನ್ನ ವಿಸ್ತಾರವನ್ನು ವ್ಯಾಪಿಸಿಕೊಳ್ಳುತ್ತಾ, ಬಲಗೊಳ್ಳುತ್ತಾ ಬಂದಿದ್ದೇ ಇಂಥಾ ಮಿಥ್ಯೋನ್ಮಾದಗಳ ಮೂಲಕ. ಮಾನವೀಯ ಮೌಲ್ಯದ ಮೇಲೆ ಧರ್ಮದ ಅಂತರಾಳವನ್ನು ವ್ಯಾಖ್ಯಾನಿಸಲು ಮುಂದಾದ ಸಂತ ಸ್ವಾಮಿವಿವೇಕಾನಂದರನ್ನು; ಕ್ರಾಂತಿಕಾರಿ, ಎಡಪಂಥೀಯ ನಿಲುವು ಹೊಂದಿದ್ದ ಭಗತ್ ಸಿಂಗ್ ಅವರನ್ನು; ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸಿದ್ದ ಸರ್ದಾರ್‍ ವಲ್ಲಭ್ ಬಾಯ್ ಪಟೇಲರನ್ನು ಇಂತದೇ ಮಿಥ್ಯಗಳ ಮೂಲಕ ತನಗೆ appropriate ಮಾಡಿಕೊಳ್ಳಲು ಆರೆಸ್ಸೆಸ್ ಪರಿವಾರ ಯತ್ನಿಸಿದ್ದು ಮತ್ತು ಅದರಲ್ಲಿ ಭಾಗಶಃ ಯಶಸ್ವಿಯಾದದ್ದನ್ನು ನಾವು ಕಂಡಿದ್ದೇವೆ. ಈಗ ಈ ಸಿನಿಮಾದ ನೆಪದಲ್ಲಿ, ವಿಷ್ಣುವರ್ಧನ್ ಅವರನ್ನೂ ಈ ಕಾರ್ಯತಂತ್ರಕ್ಕೆ ಬಳಸಿಕೊಳ್ಳಲಾಗುತ್ತಿದೆಯಾ? ಎಂಬುದೇ ಈಗ ಉದ್ಭವಿಸಿರುವ ವಿವಾದ.

ನಟ ವಿಷ್ಣುವರ್ಧನ್ ಆರೆಸ್ಸೆಸ್ ಕಾರ್ಯಕರ್ತನಾಗಬಾರದೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮುನ್ನ ನಾವು ಒಂದಷ್ಟು ಸಂಗತಿಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಒಂದುವೇಳೆ, ವಿಷ್ಣುವರ್ಧನ್ ಅವರು ಬದುಕಿದ್ದು, ಅವರು ಆರೆಸ್ಸೆಸ್ ಕಾರ್ಯಕರ್ತನ ಪಾತ್ರದಲ್ಲೋ ಅಥವಾ ಸ್ವತಃ ಆರೆಸ್ಸೆಸ್ ಕಾರ್ಯಕರ್ತನಾಗಿಯೋ ಗುರುತಿಸಿಕೊಂಡಿದ್ದರೆ, ಸೈದ್ದಾಂತಿಕವಾಗಿ ಅದು ತಪ್ಪು ಎಂದೆನಿಸಿದರೂ, ವೈಯಕ್ತಿಕವಾಗಿ  ಅದು ಅವರ ನಿಲುವು-ನಿರ್ಧಾರ ಎಂದು ನಾವು ನಿರ್ಲಕ್ಷಿಸಬಹುದಿತ್ತು ಅಥವಾ ವಿಮರ್ಶಿಸಲೂಬಹುದಿತ್ತು. ಆದರೆ ಅವರ ಅನುಪಸ್ಥಿತಿಯಲ್ಲಿ ಅವರ ಸಿನಿಹಿನ್ನೆಲೆ, ರೂಪಗಳನ್ನು ಬಳಸಿಕೊಂಡು ರಾಜಕೀಯಪ್ರೇರಿತ ಸಂಘಟನೆಯೊಂದಕ್ಕೆ ಮಾನ್ಯತೆಯನ್ನು ಉತ್ಪಾದಿಸಿಕೊಳ್ಳಲು ಯತ್ನಿಸುತ್ತಿರೋದನ್ನು ನಾವು ಪ್ರಶ್ನಿಸಲೇಬೇಕಾಗುತ್ತದೆ. ವಿಷ್ಣುವರ್ಧನ್ ಅವರ ತದ್ರೂಪಿನ ಆ ಪಾತ್ರದ ಮೂಲಕ ಆರೆಸ್ಸೆಸ್ಗೆ ದಕ್ಕಬಹುದಾದ ಮಾನ್ಯತೆ, ವಿಸ್ತಾರಕ್ಕಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಆರೆಸ್ಸೆಸ್ ಅದಾಗಲೇ ಆಕ್ರಮಿಸಿಕೊಂಡಾಗಿದೆ ಎಂದು ನೀವು ತಳ್ಳಿಹಾಕಲೆತ್ನಿಸಬಹುದು. ಆದರೆ, ಈಗಾಗಲೇ ಬಲಾಢ್ಯಗೊಂಡಿರುವ ದುಷ್ಟತ್ವಕ್ಕೆ ಸಣ್ಣದಾಗಿ ಸೇರ್ಪಡೆಯಾಗುವ ಹೊಸ ವಿಸ್ತಾರವೂ, ಆ ದುಷ್ಟತ್ವದಿಂದ ಮುಂದೆ ಘಟಿಸುವ ಅನಾಹುತವನ್ನು ದೊಡ್ಡದಾಗಿಸುವ ಸಾಮರ್ಥ್ಯ ಹೊಂದಿರಲಿದೆ ಎಂಬುದನ್ನು ನಾವು ಮರೆಯಬಾರದು.

ಆರೆಸ್ಸೆಸ್, ತನ್ನನ್ನು ತಾನು ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಳ್ಳುತ್ತಲೇ ಬಿಜೆಪಿಯ ಮಾತೃಸಂಸ್ಥೆಯಾಗಿ ಅದು ದೇಶವನ್ನು ಮನುವಾದದತ್ತ ಕೊಂಡೊಯ್ಯುತ್ತಿರುವ ಮುಖವಾಡದ ಸಂಘಟನೆ. ಸೌಹಾರ್ದತೆಯ ನಮ್ಮ ನೆಲದಲ್ಲಿ ಅನ್ಯಧರ್ಮ ದ್ವೇಷವನ್ನು ಬಿತ್ತಿ, ಕೋಮುದಳ್ಳುರಿಗಳನ್ನು ಉತ್ಪಾದಿಸುವ ಮತ್ತು ಆ ಮೂಲಕ ರಕ್ತರಾಜಕಾರಣವನ್ನು ಮಾಡಿಕೊಂಡು ಬಂದಿರುವ ಪರಿವಾರ. ಬಾಬಾ ಸಾಹೇಬ್ ಅಂಬೇಡ್ಕರ್‍ ಅವರು ರಚಿಸಿಕೊಟ್ಟ ಸಮಾನತೆಯ ಸಂವಿಧಾನವನ್ನು ನಖಶಿಖಾಂತ ದ್ವೇಷಿಸಿ, ಅದರ ಜಾಗದಲ್ಲಿ ಜಾತಿವ್ಯವಸ್ಥೆಯ ಮೇಲುಕೀಳಿನ ಮನುವಾದವನ್ನು ಈ ನೆಲದ ಸಂವಿಧಾನವಾಗಿಸುವ ಹಿಡನ್ ಅಜೆಂಡಾ ಹೊಂದಿರುವ ಸಂಘಟನೆ. ಮಹಾತ್ಮಾ ಗಾಂಧಿಯವರ ಹತ್ಯೆಯ ಹಿನ್ನೆಲೆಯಲ್ಲಿ ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಭ್ ಬಾಯ್ ಪಟೇಲ್ ಅವರು ಆರೆಸ್ಸೆಸ್ ಸಂಘಟನೆಯ ಮೇಲೆ ನಿಷೇಧ ಹೇರಿದ್ದರು ಎಂಬ ಒಂದು ಸಂಗತಿ ಸಾಕು, ಈ ಸಂಘಟನೆ ಎಂತಹ ಹಿನ್ನೆಲೆಯದ್ದು ಎಂಬುದನ್ನು ಅರ್ಥ ಮಾಡಿಸಲು. ನಿರ್ದಿಷ್ಟವಾಗಿ ಮುಸ್ಲಿಂ ದ್ವೇಷವೇ ಅದರ ಬಂಡವಾಳ. ಧರ್ಮ ರಾಜಕಾರಣವೇ ಅದರ ಆತ್ಮ.

ಇಂಥಾ ಸಂಘಟನೆಯ ಕಾರ್ಯಕರ್ತನಾಗಿ ನಟ ವಿಷ್ಣುವರ್ಧನ್ ಅವರನ್ನು ತದ್ರೂಪು ಹುನ್ನಾರದ ಮೂಲಕ ಬಿಂಬಿಸಲು ಯತ್ನಿಸಲಾಗುತ್ತಿದೆ. ಈಗ ನಮಗೆ ಒಂದೆರಡು ಪ್ರಶ್ನೆಗಳು ಕಾಡುತ್ತವೆ. ವಿಷ್ಣುವರ್ಧನ್ ನಿಜಕ್ಕೂ ಆರೆಸ್ಸೆಸ್ ಸಂಘಟನೆಯ ಸಿದ್ದಾಂತಕ್ಕೆ ಪೂರಕವಾಗಿ ಬದುಕಿದ್ದರೇ? ಆ ನಿಲುವುಗಳಿಗೆ ಹತ್ತಿರವಿದ್ದರೇ?

ತೆರೆ ಮೇಲಿನ ಒಬ್ಬ ನಟನಾಗಿ ಅಥವಾ ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ಅಲ್ಲದೇ, ಸಾಮಾನ್ಯವಾಗಿ ಎಲ್ಲರೊಳಗಿರುವಂತೆ ಒಬ್ಬ ರಾಜಕೀಯ ನಿಲುವುಗಾರನಾಗಿ ವಿಷ್ಣುವರ್ಧನ್ ಹೇಗೆ ಬದುಕಿದ್ದರು ಎಂದು ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾತ್ರ ಮೇಲಿನ ಪ್ರಶ್ನೆಗಳಿಗೆ ನಮಗೆ ಉತ್ತರ ಲಭಿಸುತ್ತವೆ. ಆದರಿದು, ತುಂಬಾ ನಾಜೂಕಿನ ಕೆಲಸ. ಯಾಕೆಂದರೆ, ವಿಷ್ಣುವರ್ಧನ್ ಅವರ ಅನುಪಸ್ಥಿತಿಯಲ್ಲಿ ಅವರನ್ನು ಆರೆಸ್ಸೆಸ್ ಕಾರ್ಯಕರ್ತನಂತೆ ತೋರಿಸುವುದು ಎಷ್ಟು ಪ್ರಮಾದಕರವೋ, ಅವರ ಅನುಪಸ್ಥಿತಿಯಲ್ಲಿ ಅವರನ್ನು ಆರೆಸ್ಸೆಸ್ ವಿರೋಧಿಯಂತೆ ಬಣ್ಣಿಸುವುದೂ ಅಷ್ಟೇ ಪ್ರಮಾದಕರ. ಆದರೆ ಅವರೇ ಅಧಿಕೃತವಾಗಿ ಸಂದರ್ಶನಗಳಲ್ಲಿ, ಕೃತಿಗಳಲ್ಲಿ ದಾಖಲಿಸಿಕೊಂಡಿರುವ ಅವರ ಬದುಕಿನ ಕೆಲವು ಬಿಡಿಬಿಡಿ ಘಟನೆಗಳ ಮೂಲಕ ಅವರ ವ್ಯಕ್ತಿತ್ವ ಮತ್ತು ಆರೆಸ್ಸೆಸ್ ವಿಚಾರಧಾರೆಗಳ ನಡುವಿನ ಸಾಮ್ಯತೆ ಅಥವಾ ವೈರುಧ್ಯಗಳನ್ನು ನಾವು ತಾಳೆ ನೋಡಿಕೊಂಡಾಗ ಈ ಪ್ರಶ್ನೆಗಳಿಗೆ ಉತ್ತರ ಲಭಿಸುತ್ತವೆ.

ವಿಷ್ಣುವರ್ಧನ್ ಅವರು ರಾಜಕೀಯವಾಗಿ ಯಾವತ್ತೂ ನೇರವಾಗಿ ತಮ್ಮನ್ನು ಅಭಿವ್ಯಕ್ತಿಸಿಕೊಂಡವರಲ್ಲ. ಸಿನಿಮಾ ರಂಗದೊಳಗಿನ ರಾಜಕಾರಣದಿಂದಲೇ ಹೈರಾಣಾಗಿದ್ದ ಮತ್ತು ಆ ರಾಜಕಾರಣದಿಂದಾಗಿ ಕೆಲ ಕಾಲ ಬೆಂಗಳೂರನ್ನೆ ತೊರೆದು ಮದ್ರಾಸಿನಲ್ಲಿ ನೆಲೆಸಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದ ವಿಷ್ಣುವರ್ಧನ್ ಅವರು ತಮ್ಮ ಬದುಕಿನ ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ರಾಜಕಾರಣದ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಯತ್ನಿಸಿದವರು. ತಮ್ಮ ಆಪ್ತ ಗೆಳೆಯ ಅಂಬರೀಶ್ರವರ ರೀತಿ ವಿಷ್ಣುವರ್ಧನ್ ಯಾವತ್ತೂ ತಮ್ಮ ರಾಜಕೀಯ ನಿಲುವುಗಳನ್ನು ಪ್ರಕಟಿಸಲಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ, ಸೈದ್ಧಾಂತಿಕವಾಗಿ ಅವರು ಗೊಂದಲದಲ್ಲಿದ್ದುದು ನಮಗೆ ಅರ್ಥವಾಗುತ್ತೆ. ಇದು ಕೇವಲ ವಿಷ್ಣುವರ್ಧನ್ ಅವರಿಗೆ ಮಾತ್ರ ಸೀಮಿತವಾದುದಲ್ಲ, ಭಾರತದಂತಹ ಜಾತಿವ್ಯವಸ್ಥೆಯ ಸಂಕೀರ್ಣ ಸಮಾಜದಲ್ಲಿ ರೂಪುಗೊಳ್ಳುವ ಬಹುಪಾಲು ವ್ಯಕ್ತಿಗಳು ಎಡ ಮತ್ತು ಬಲ ಎಂಬ ಸಿದ್ದಾಂತಗಳ ನಡುವೆ ಸ್ಪಷ್ಟ ನಿಲುವು ತಳೆಯುವಲ್ಲಿ ಇಂತಹ ಗೊಂದಲಕ್ಕೆ ತುತ್ತಾಗುತ್ತಾರೆ. ಯಾಕೆಂದರೆ ಜಾತಿ-ಧರ್ಮ-ಆಚಾರ ಎಂಬ ಸೆಳೆತಗಳು ಬಾಲ್ಯದಿಂದಲೇ ನಮ್ಮನ್ನು ಆವರಿಸುತ್ತಾ ಬರುತ್ತವೆ. ಪ್ರಜ್ಞಾವಂತಿಕೆಯ ಕಾಲಘಟ್ಟದಲ್ಲಿ ಮಾನವೀಯ ನೈತಿಕ ಮೌಲ್ಯಗಳ ಅರಿವಾಗಿ, ಇವುಗಳಿಂದ ಬಿಡಿಸಿಕೊಳ್ಳಲು ನಾವು ಯತ್ನಿಸಬೇಕಾಗುತ್ತದೆ. ಬಾಲ್ಯದಲ್ಲಿನ ಆವರಿಸುವಿಕೆಯು ಸುಲಭ ಮತ್ತು ಸಹಜ ವಿದ್ಯಮಾನ. ಆದರೆ ಬಿಡಿಸಿಕೊಳ್ಳುವಿಕೆ ನಮ್ಮ ಸ್ವಯಂ ಪ್ರಯತ್ನದ ಫಲ. ಯಾಕೆಂದರೆ ಅದಕ್ಕೋಸ್ಕರ ಪೂರಕವಾತಾವರಣ, ಪ್ರಭಾವ ಬೀರುವ ಅಧ್ಯಯನ, ತಿದ್ದಿತೀಡುವ ಗುರು, ಅನುಭವದ ಅರಿವುಗಳು ಬೇಕಾಗುತ್ತವೆ. ಇವು ತೀಕ್ಷ್ಣವಾಗಿ ಲಭಿಸಿದವರು ಸೈದ್ಧಾಂತಿಕವಾಗಿ ಸ್ಪಷ್ಟಗೊಳ್ಳುತ್ತಾರೆ. ಇಂತಹ ಅವಕಾಶ ಲಭಿಸದವರು ಬಾಲ್ಯದ ನಂಬಿಕೆಗಳನ್ನೆ ತಮ್ಮ ಮಿತಿಗೆ ತಕ್ಕಂತೆ ಗಟ್ಟಿಗೊಳಿಸಿಕೊಳ್ಳುತ್ತಾ ಸಾಗುತ್ತಾರೆ. ಹಾಗಂತ ಮನುಷ್ಯಪ್ರೀತಿ, ಸಹಬಾಳ್ವೆಯ ಅನಿವಾರ್ಯತೆಯನ್ನು ಸಂಪೂರ್ಣವಾಗಿ ಧಿಕ್ಕರಿಸಲಾಗದ ಒತ್ತಡಕ್ಕೂ ಸಿಲುಕಿಕೊಳ್ಳುತ್ತಾರೆ. ಇವತ್ತಿನ ನಮ್ಮ ಬಹುಪಾಲು ಪ್ರಗತಿಪರ, ಎಡಪಂಥೀಯ ಚಿಂತನೆಯವರು ತಮ್ಮ ಹರೆಯದಲ್ಲಿ ಬಲಪಂಥೀಯ ಪ್ರವಾಹದಲ್ಲಿ ತೇಲಿ ಹೊರಬಂದವರು ಎಂಬುದು ಈ ಮಾತಿಗೆ ಸಾಕ್ಷಿ.

ಹೀಗೆ ಗೊಂದಲದ ನಡುವೆ ಹೊಯ್ದಾಡುವವರ ದೊಡ್ಡ ಸಂಖ್ಯೆಯೇ ಈ ದೇಶದಲ್ಲಿದೆ. ಅದರಲ್ಲಿ, ನಾವು ಗಣ್ಯರೆಂದು ಗುರುತಿಸುವ ಜನರೂ ಕಾಣಸಿಗುತ್ತಾರೆ. ಸಿನಿಮಾ ರಂಗವೂ ಇದಕ್ಕೆ ಹೊರತಲ್ಲ. ಸ್ವತಃ ವಿಷ್ಣುವರ್ಧನ್ ಕೂಡಾ ಹೊರತಾದವರಲ್ಲ. ಹಾಗಾಗಿ ತಮ್ಮ ಒಡನಾಟ, ನಡವಳಿಕೆ, ಸ್ನೇಹ-ಸಹವಾಸಗಳಲ್ಲಿ ಮನುಷ್ಯಸಹಜ ಪ್ರೀತಿ-ವಿಶ್ವಾಸಗಳಿಗೆ ಜಾಗ ಕೊಡುತ್ತಲೇ ಶಿವಸೇನೆಯ ಬಾಳಾಸಾಹೇಬ್ ಠಾಕ್ರೆಯನ್ನು ಮೆಚ್ಚಿಕೊಂಡಾಡಿಬಿಡುತ್ತಿದ್ದರು. ಅಂದಿನ ಶಿವಸೇನೆಯ ದ್ವೇಷಕೇಂದ್ರಿತ ಕೋಮುವಿಭಜಕ ರಾಜಕಾರಣವನ್ನು ಬೊಟ್ಟು ಮಾಡಿ ಕೇಳಿದರೆ, ‘ನಾನು ಮೆಚ್ಚಿದ್ದು ಅವರ ಪ್ರಾದೇಶಿಕ ಪ್ರತಿನಿಧಿತ್ವದ ದಿಟ್ಟ ನಾಯಕತ್ವವನ್ನಷ್ಟೇ, ಅವರ ರಾಜಕೀಯ ವೈಖರಿಯನ್ನಲ್ಲ’ ಎಂದು ಶಿವಸೇನೆಯ ಐಡಿಯಾಲಜಿಯಿಂದ ದೂರ ಸರಿಯಲು ಯತ್ನಿಸುತ್ತಿದ್ದರು. ಲೋಪಗಳ ಹೊರತಾಗಿಯೂ ಸಮಾನತೆ ಮತ್ತು ಎಲ್ಲರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರತಿಯಾಗಿ ಒಮ್ಮೊಮ್ಮೆ ಮಿಲಿಟರಿ ಆಡಳಿತ ಉತ್ತಮ ಎಂದುಬಿಡುತ್ತಿದ್ದರು. ಅದರಿಂದಾಗಬಹುದಾದ ಮಾನವಹಕ್ಕುಗಳ ದಮನವನ್ನು ಚರ್ಚಿಸಿದಾಗ, ತಾನು ಆರ್ಮಿಯವರ ಶಿಸ್ತುಬದ್ಧ ಕಾರ್ಯವೈಖರಿ ಮತ್ತು ಕಟ್ಟುನಿಟ್ಟಿನ ಅನುಷ್ಠಾನದ ಆಯಾಮದಿಂದ ಸೇನಾ ಆಡಳಿತದ ಬಗ್ಗೆ ಪ್ರಸ್ತಾಪಿಸಿದೆನಷ್ಟೆ ಎನ್ನುತ್ತಿದ್ದರು. ಒಟ್ಟಾರೆಯಾಗಿ, ಅವರೊಳಗಿನ ಒಬ್ಬ ರಾಜಕೀಯ ನಿಲುವುಗಾರನನ್ನು ನೋಡಲು ಮುಂದಾದರೆ, ಬಹುಪಾಲು ಭಾರತೀಯರಂತೆ ಸೈದ್ಧಾಂತಿಕ ಸ್ಪಷ್ಟತೆಯ ಕೊರತೆ ಮತ್ತು ರಾಜಕಾರಣವನ್ನು ದೂರದೃಷ್ಟಿಯ ಆಯಾಮದಿಂದ ಕಾಣುವ ಊನತೆ ಅವರನ್ನು ಕಾಡುತ್ತಿದ್ದುದು ಗೋಚರಿಸುತ್ತದೆ.

ಈ ಮಿತಿಯನ್ನು ಮೀರಿನಿಲ್ಲುವ ಪ್ರಯತ್ನ ಅವರು ಮಾಡಬಹುದಿತ್ತಾದರೂ, ಅದನ್ನವರು ಮಾಡಲಿಲ್ಲ. ಅದಕ್ಕೆ ಅವರದೆ ಆದ ಕಾರಣಗಳಿರಬಹುದು. ಆದರೆ ಭಕ್ತಿ-ಆಧ್ಯಾತ್ಮಗಳನ್ನು ತುಸು ಅತಿಯೆನ್ನಿಸುವಷ್ಟೆ ತಮ್ಮಲ್ಲಿ ಮೈಗೂಡಿಸಿಕೊಳ್ಳುತ್ತಾ ಬಂದ ವಿಷ್ಣುವರ್ಧನ್ ಅವರು ಕೊನೆಗೆ ಅತಿಧಾರ್ಮಿಕ ವ್ಯಕ್ತಿಯಾಗಿ ಬದಲಾದರು. ಬಿಡುಗಡೆಯ ಹುಡುಕಾಟದಲ್ಲಿ ತಮಗೇ ಅರಿವಿಲ್ಲದೆ ಬಂಧಿಯಾಗುತ್ತಾ ಬಂದರು. ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯನ್ನು ನಾವು ಏಕಾಏಕಿ ಬಲಪಂಥೀಯರ ಚೌಕಟ್ಟಿನಲ್ಲಿಡಲು ಸಾಧ್ಯವಿಲ್ಲ. ಹಾಗೆ ಮಾಡಿದ್ದೇ ಆದಲ್ಲಿ ಭಕ್ತಿ ಚಳವಳಿ, ದಾಸ ಪರಂಪರೆ, ಸೂಫಿ ಕವಲುಗಳ ಕೊಡುಗೆಗಳನ್ನೇ ನಾವು ಅಲ್ಲಗಳೆದಂತಾಗುತ್ತದೆ. ಸ್ವಾಮಿ ವಿವೇಕಾನಂದರು ಧಾರ್ಮಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿಯಾಗಿ ಗೋಚರಿಸಿದರೂ, ಅವರ ಬೋಧನೆಗಳು ಮನುವಾದ ಪ್ರಚುರಪಡಿಸುತ್ತಿದ್ದ ಜಾತಿವ್ಯವಸ್ಥೆ, ಶೋಷಣೆ, ಅಸ್ಪೃಷ್ಯತೆ, ಆಹಾರ ಸಂಸ್ಕೃತಿಯ ಹೇರಿಕೆಯನ್ನು ಕಟುವಾಗಿ ವಿರೋಧಿಸಿದವು. ಕಾಲಾಂತರದಲ್ಲಿ ಅಂತಹ ಸ್ವಾಮಿ ವಿವೇಕಾನಂದರನ್ನೇ ಮನುವಾದದ ಆರೆಸ್ಸೆಸ್ ತನ್ನ ಐಕಾನ್ ಆಗಿ ಅಪಹರಿಸಿತು. ಇಂತಹ ವೈಚಿತ್ಯ್ರಗಳ ವಾಸ್ತವದ ನಡುವೆಯೇ ನಾವು ಮನುಷ್ಯರನ್ನು ಗ್ರಹಿಸಬೇಕಾಗುತ್ತದೆ.

ವಿಷ್ಣುವರ್ಧನ್ ಅವರು ಅತಿಧಾರ್ಮಿಕಗೊಳ್ಳುತ್ತಾ ಬಂದರೂ ಯಾವತ್ತೂ ಮನುಷ್ಯದ್ವೇಷಿಯಾಗಿ ವರ್ತಿಸಿರಲಿಲ್ಲ. ಅದರಲ್ಲೂ ಆರೆಸ್ಸೆಸ್ ಕಲಿಸಿಕೊಡುವ ಮುಸ್ಲಿಂ ದ್ವೇಷವನ್ನು ಯಾವ ಘಳಿಗೆಯಲ್ಲೂ ಉಸಿರಾಡಿದವರಲ್ಲ. ಅದಕ್ಕೆ ಹಲವು ನಿದರ್ಶನಗಳುಂಟು. ಲಂಕೇಶ್ ಪತ್ರಿಕೆಯಲ್ಲಿ ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅವರ ನಿರೂಪಣೆಯಲ್ಲಿ ಪ್ರಕಟವಾದ ಅವರ ಆತ್ಮಕಥಾ ಸರಣಿಯಲ್ಲಿ ಅವರೇ ಹೇಳಿಕೊಂಡಂತೆ, ಮೈಸೂರಿನ ತಮ್ಮ ಬಾಲ್ಯದ ದಿನಗಳನ್ನು ಅವರು ಹೆಚ್ಚಾಗಿ ಕಳೆದದ್ದು ಮುಸ್ಲಿಂ ಮೊಹಲ್ಲಾಗಳಲ್ಲಿ. ಅವರಿಗೆ ಮುಸ್ಲಿಂ ಸ್ನೇಹಿತರೇ ದೊಡ್ಡ ಸಂಖ್ಯೆಯಲ್ಲಿದ್ದರು. ಮುಸ್ಲಿಂ ಗೆಳೆಯರ ಒಡನಾಟದಿಂದಾಗಿ ಉರ್ದು ಶಾಯರಿಗಳನ್ನು ರಾಗಬದ್ಧವಾಗಿ ಹೇಳುವುದನ್ನೂ ಅವರು ಕಲಿತಿದ್ದರಂತೆ. ಇದನ್ನೆಲ್ಲ ನೋಡಿದ ಅವರ ತಾಯಿ ಒಮ್ಮೊಮ್ಮೆ ವಿಷ್ಣುವರ್ಧನ್ ಅವರನ್ನು “ನೀನು ನಮ್ಮ ಮನೆಯಲ್ಲಿ ಹುಟ್ಟಿದವನೋ ಅಥವಾ ಯಾರೋ ಮುಸ್ಲಿಂ ಮನೆಯಲ್ಲಿ ಹುಟ್ಟಿದವನೋ” ಎಂದು ರೇಗಿಸುತ್ತಿದ್ದುದಾಗಿ ಅವರು ಹೇಳಿಕೊಂಡಿದ್ದಾರೆ.

ಅದಕ್ಕೊಂದು ಸ್ವಾರಸ್ಯಕರ ಹಿನ್ನೆಲೆಯಿದೆ. ವಿಷ್ಣುವರ್ಧನ್ ಅವರು ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹುಟ್ಟಿದ ಸಂದರ್ಭದಲ್ಲಿ, ಅವರ ತಾಯಿಯ ಬೆಡ್ನ ಪಕ್ಕದಲ್ಲಿ ಅಡ್ಮಿಟ್ ಆಗಿದ್ದ ಒಬ್ಬ ಮುಸ್ಲಿಂ ಮಹಿಳೆಗೂ ಗಂಡು ಮಗು ಜನಿಸಿತ್ತಂತೆ. ವಿಷ್ಣು ಅವರ ಮುಸ್ಲಿಂ ಒಡನಾಟವನ್ನು ರೇಗಿಸುವ ಸಲುವಾಗಿ ಅವರ ತಾಯಿ ಜನನ ಕಾಲದ ಆ ಘಟನೆಯನ್ನು ಉಲ್ಲೇಖಿಸುತ್ತಾ, “ಅವತ್ತು ಆಸ್ಪತ್ರೆಯಲ್ಲಿ ಬಹುಶಃ ಆ ಮುಸ್ಲಿಂ ಮಗು, ನಮ್ಮ ಮಗು ಅದಲು ಬದಲಾಗಿರಬೇಕು. ನೀನು ಮುಸ್ಲಿಮರ ಮನೆಯ ಹುಡುಗ. ಅದಕ್ಕೇ ಅವರ ಸ್ನೇಹ ಜಾಸ್ತಿ” ಎಂದು ತಮಾಷೆ ಮಾಡುತ್ತಿದ್ದುದಾಗಿ ವಿಷ್ಣುವರ್ಧನ್ ಹೇಳಿಕೊಂಡಿದ್ದರು.

ಈ ಒಡನಾಟ ಕೇವಲ ಬಾಲ್ಯಕ್ಕಷ್ಟೆ ಸೀಮಿತವಾದುದಲ್ಲ. ಅವರು ಬೆಂಗಳೂರಿಗೆ ಬಂದು ನ್ಯಾಷನಲ್ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಶುರು ಮಾಡಿದ ಮೇಲೂ ಮುಂದುವರೆಯಿತು. ನಿಮಗೆ ತಿಳಿದಿರಬಹುದು, ವಿಷ್ಣು ಅವರ ಹೆತ್ತವರು ಇಟ್ಟ ಅವರ ನಿಜವಾದ ಹೆಸರು ಕುಮಾರ್‍ ಅಂತ. ಆದರೆ ನಿಮಗೆ ತಿಳಿಯದ ಸಂಗತಿಯೆಂದರೆ, ಕಾಲೇಜಿನಲ್ಲಿ ಯಾರು ಸಹಾ ಇವರನ್ನು ಕುಮಾರ್‍ ಅಂತ ಕರೆಯುತ್ತಿರಲಿಲ್ಲ. `ಸಲೀಂ ಅಹ್ಮದ್’ ಎಂಬ ಮುಸ್ಲಿಂ ಹೆಸರಿನಿಂದ ಕರೆಯುತ್ತಿದ್ದರೆಂದು ದಾಖಲಿಸಿಕೊಂಡಿದ್ದಾರೆ. ಅವರ ಸ್ನೇಹ-ಒಡನಾಟಗಳು ಇದಕ್ಕೆ ಕಾರಣವಾಗಿದ್ದಿರಬಹುದು.

ಇಂತಹ ವಿಷ್ಣುವರ್ಧನ್ ಅವರನ್ನು  ಮುಸ್ಲಿಂ ದ್ವೇಷವನ್ನೆ ತನ್ನ ಸೈದ್ಧಾಂತಿಕ ಅಸ್ತಿತ್ವವನ್ನಾಗಿ ಮಾಡಿಕೊಂಡ ಆರೆಸ್ಸೆಸ್ ಕಾರ್ಯಕರ್ತನಂತೆ ತೋರಿಸುತ್ತಾರೆಂದರೆ ಅದಿನ್ನೆಂತಾ ಅಪಚಾರ! ಹಿಂದೂ-ಮುಸ್ಲಿಂ ಕೋಮುಗಲಭೆಗಳೇ ಆರೆಸ್ಸೆಸ್ನ ಮೂಲಮಂತ್ರ. ಆದರೆ ಇಂತಹ ಕೋಮುಸಂಘರ್ಷದ ಬಗ್ಗೆ ವಿಷ್ಣು ಅವರ ಅಭಿಪ್ರಾಯವೇನಾಗಿತ್ತು?

ಒಮ್ಮೆ, ಅವರ ಬಳಿ ಪತ್ರಕರ್ತರೊಬ್ಬರು ಅವರ ಅಭಿಮಾನಿಗಳು ರಚಿಸಿಕೊಂಡಿದ್ದ `ವಿಷ್ಣು ಸೇನಾ ಸಮಿತಿ’ಯ ಬಗ್ಗೆ ಪ್ರಸ್ತಾಪಿಸಿದಾಗ ವಿಷ್ಣು ತಮ್ಮ ಅಭಿಮಾನಿಗಳ ಆ ಸಂಘಟನೆಯನ್ನು ಸಮರ್ಥಿಸಿಕೊಳ್ಳುತ್ತಾ ಸಾಕಷ್ಟು ಮಾತಾಡುತ್ತಾರೆ. ಆ ಸಂಘಟನೆಯ ಹುಡುಗರು ಮಾಡುತ್ತಿರುವ ಸಮಾಜಮುಖಿ ಕೆಲಸಗಳನ್ನು ಉಲ್ಲೇಖಿಸುತ್ತಾ ಒಂದು ಮಾತು ಹೇಳ್ತಾರೆ, “ನೋಡಿ ಈ ಮಾತನ್ನು ಅತಿರಂಜಿತ ಎಂದು ಭಾವಿಸಬೇಡಿ. ಅದೆಷ್ಟೋ ಊರುಗಳಲ್ಲಿ ನಮ್ಮ ವಿಷ್ಣು ಸೇನೆ ಹುಡುಗರು ಹಿಂದೂ-ಮುಸ್ಲಿಂ ಗಲಾಟೆಯನ್ನು ತಪ್ಪಿಸಿದ್ದಾರೆ. ಪೊಲೀಸರು ಮಾಡಬೇಕಿದ್ದ ಕೆಲಸವನ್ನು ತಾವು ಮಾಡಿದ್ದಾರೆ”. ವಿಷ್ಣುಸೇನೆ ಹಿಂದೂ-ಮುಸ್ಲಿಂ ಗಲಾಟೆಗಳನ್ನು ತಪ್ಪಿಸಲು ಯತ್ನಿಸಿತ್ತೋ? ಇಲ್ಲವೋ? ನಮಗೆ ನಿಖರವಾಗಿ ಗೊತ್ತಿಲ್ಲದಿರಬಹುದು. ಆದರೆ ಹಿಂದೂ-ಮುಸ್ಲಿಂ ಗಲಾಟೆಗಳು, ತಪ್ಪಿಸಲೇಬೇಕಾದಂತಹ ಸಮಾಜಘಾತುಕ ವಿದ್ಯಮಾನಗಳು ಎಂಬ ಗ್ರಹಿಕೆ ವಿಷ್ಣುವರ್ಧನ್ ಅವರಿಗಿತ್ತು ಎಂಬುದು ಆ ಮಾತಿನಿಂದ ಅರ್ಥವಾಗುತ್ತದೆ. ಇಂತಹ ವಿಷ್ಣುವರ್ಧನ್ ಅವರನ್ನು ಈಗ, ಅವರ ಅನುಪಸ್ಥಿತಿಯಲ್ಲಿ ಅವರ ತದ್ರೂಪಿಯನ್ನು ಬಳಸಿಕೊಂಡು ಮನುಷ್ಯದ್ವೇಷಿ ಆರೆಸ್ಸೆಸ್ ಕಾರ್ಯಕರ್ತನಂತೆ ತೋರಿಸುವುದು ಅವರಿಗೆ ಮಾಡಿದ ಅಪಚಾರವಲ್ಲವೇ?  

ಇನ್ನೊಂದು ವಿಚಾರ. ಅವರು ಸಿನಿಮಾಕ್ಕೆ ಬರುವ ಮುನ್ನ, ಸ್ವಲ್ಪ ಕಾಲ ರಾಜಸ್ಥಾನದ ತನ್ನ ಅಕ್ಕನ ಮನೆಯಲ್ಲಿದ್ದರು. ರಾಜಸ್ಥಾನದಲ್ಲಿ ಆಗ ಡಕಾಯಿತರ ಹಾವಳಿ, ಪ್ರಭಾವ ದಟ್ಟವಾಗಿತ್ತು. ಅವರನ್ನು ನೋಡಿ ತಾನೂ ಡಕಾಯಿತನಾಗಬೇಕು ಅಂತ ವಿಷ್ಣುವರ್ಧನ್ ಅವರು ಅಂದುಕೊಂಡಿದ್ದೆಯಂತೆ. ಯಾಕೆ ಇಂಥಾ ಅಭಿಲಾಷೆ ತನಗೆ ಬಂದಿತ್ತು ಎಂಬುದನ್ನು ವಿವರಿಸುತ್ತಾ “ಅವರೆಲ್ಲಾ ಯಾಕೆ ಡಕಾಯಿತರಾದರು? ನಮ್ಮ ಸಮಾಜದ ಶೋಷಣೆಯಿಂದಲೇ ಅಲ್ಲವೇ. ನಾನು ಅಲ್ಲಿದ್ದಷ್ಟೂ ದಿನ ಪತ್ರಿಕೆಗಳನ್ನು ತೆರೆದರೆ ದಲಿತರ ಮೇಲೆ ನಡೆಯುತ್ತಿದ್ದ ಜಾತಿ ದೌರ್ಜನ್ಯಗಳ ಸುದ್ದಿಯೇ ರಾಚುತ್ತಿದ್ದವು. ಇಂತಹ ದೌರ್ಜನ್ಯಗಳನ್ನು ಪ್ರತಿರೋಧಿಸುವುದಕ್ಕೇ ಅವರು ಡಕಾಯಿತರಾಗಿದ್ದಾರೆ ಎಂದುಕೊಂಡು ನಾನೂ ಡಕಾಯಿತನಾಗಲು, ಬೆಟ್ಟಗುಡ್ಡಗಳಲ್ಲಿ ಅಲೆದಾಡುತ್ತಿದ್ದೆ. ನನ್ನ ಈ ವಿಚಿತ್ರ ವರ್ತನೆಯಿಂದ ಗಾಬರಿಗೊಂಡ ನನ್ನ ಅಕ್ಕ ವಾಪಾಸು ಬೆಂಗಳೂರಿಗೆ ಕಳಿಸಿದಳು. ಡಕಾಯಿತನಾಗಲೇ ಇಲ್ಲ” ಎಂದಿದ್ದರು. ಜಾತಿಯ ಹೆಸರಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ಬಗ್ಗೆ ಅವರಿಗೆ ಅಸಮ್ಮತಿ ಇದ್ದುದು ಈ ಮಾತಿನಿಂದ ಅರ್ಥವಾಗುತ್ತದೆ. ಮನುವಾದವನ್ನು ಶಿರಸಾವಹಿಸಿ ಪಾಲಿಸುವ ಆರೆಸ್ಸೆಸ್, ಜನ್ಮಜಾತ ಜಾತಿ ವ್ಯವಸ್ಥೆಯನ್ನು ಅರ್ಥಾತ್ ಜಾತಿಶೋಷಣೆಯನ್ನು ಸಂಭ್ರಮಿಸುವಂತಹ ಸಂಘಟನೆ. ಅದರ ಕಾರ್ಯಕರ್ತನಾಗಿ ವಿಷ್ಣುವರ್ಧನ್ ಅವರನ್ನು ಕಟ್ಟಿಕೊಡುವುದೆಂದರೆ ಏನರ್ಥ? ಇದಕ್ಕೆ ವಿಷ್ಣುವರ್ಧನ್ ಅವರ ಕುಟುಂಬ ಮತ್ತು ಅವರ ನೈಜ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ?

ಈಗ ಮತ್ತೊಂದು ಆಯಾಮದಿಂದ ಸಿನಿಮಾ ತಂಡದ ಈ ಕುಪ್ರಯತ್ನವನ್ನು ವಿಶ್ಲೇಷಿಸಿ ನೋಡೋಣ. ನಟ ವಿಷ್ಣುವರ್ಧನ್ ಅವರಿಗೂ ಈ ಸಿನಿಮಾಕ್ಕೂ ಸಂಬಂಧವಿಲ್ಲ. ನಾವಿಲ್ಲಿ ನಾಗರಹಾವು ಸಿನಿಮಾದ ಪಾತ್ರಗಳನ್ನಷ್ಟೇ ಮುಂದುವರೆಸಿದ್ದೇವೆ. ವಿಷ್ಣುವರ್ಧನ್ ಅವರ ನೈಜ ವ್ಯಕ್ತಿತ್ವವನ್ನು ಬಳಸಿಕೊಳ್ಳುತ್ತಿಲ್ಲ ಎಂದು ಚಿತ್ರತಂಡ ಸಬೂಬು ಹೇಳಲು ಮುಂದಾಗುತ್ತೆ ಎಂದುಕೊಳ್ಳಿ. ಆಗಲೂ ಅವರ ವಾದ ಬಿದ್ದು ಹೋಗುತ್ತದೆ. ಹಳೆಯ ನಾಗರಹಾವು ಸಿನಿಮಾದ ರಾಮಾಚಾರಿ ಪಾತ್ರವನ್ನೇ ಪರಿಗಣಿಸುವುದಾದರೆ, ಆ ರಾಮಾಚಾರಿ ಪಾತ್ರದ ವ್ಯಕ್ತಿತ್ವ ಆರೆಸ್ಸೆಸ್ನ ಸಿದ್ದಾಂತಕ್ಕೆ ಪೂರಕವಾಗಿತ್ತೆ? ಖಂಡಿತ ಇಲ್ಲ. ಯಾಕೆಂದರೆ ರಾಮಾಚಾರಿಯ ಪಾತ್ರ ಪ್ರೀತಿಸೋದು ಮಾರ್ಗರೇಟ್ ಎಂಬ ಕ್ರಿಶ್ಚಿಯನ್ ಹುಡುಗಿಯನ್ನು. ಆ ಪ್ರೀತಿಗೋಸ್ಕರ ಅವರಿಬ್ಬರು ಪ್ರಾಣವನ್ನೇ ಅರ್ಪಿಸಿಕೊಳ್ಳುತ್ತಾರೆ. ಆದರೆ ಆರೆಸ್ಸೆಸ್ ಮುಸ್ಲಿಮರನ್ನು ದ್ವೇಷಿಸುವಷ್ಟೇ ಕ್ರಿಶ್ಚಿಯನ್ ವಿರುದ್ಧವೂ ದ್ವೇಷಕಾರುವ ಮನಸ್ಥಿತಿಯದ್ದು. ಅನ್ಯಧರ್ಮ ದ್ವೇಷಿಸುವುದೇ ಅದರ ಬಂಡವಾಳ. ಕ್ರಿಶ್ಚಿಯನ್ ಹುಡುಗಿಯನ್ನು ಪ್ರೀತಿಸುವ ರಾಮಾಚಾರಿಗೆ ಕರ್ಮಠ ಆರೆಸ್ಸೆಸ್ ಕಾರ್ಯಕರ್ತನ ಪೋಷಾಕು ತೊಡಿಸಿದರೆ, ಅದು ನಿರ್ದೇಶಕ ಪುಟ್ಟಣ ಕಣಗಾಲ್ಗೆ ಮಾತ್ರವಲ್ಲ, ಕಾದಂಬರಿಕಾರ ತ.ರಾ.ಸು ಅವರಿಗೂ ಮಾಡಿದ ಅಪಚಾರ!
ವಿಷ್ಣುವರ್ಧನ್ ಅವರು ಈಗ ನಮ್ಮ ನಡುವೆ ಇಲ್ಲ. ವ್ಯಕ್ತಿಯಾಗಿ ಹಲವು ಮಿತಿಗಳ ನಡುವೆಯೇ ಒಬ್ಬ ನಟನಾಗಿ ಈ ನಾಡಿನ ಸಾಂಸ್ಕೃತಿಕ ರಂಗವನ್ನು ಶ್ರೀಮಂತಗೊಳಿಸಿಹೋದ ಚೇತನ. ಬದುಕಿದ್ದಾಗಂತೂ ಅವರು ನೆಮ್ಮದಿ ಅನುಭವಿಸಿದ್ದು ಕಮ್ಮಿ. ಆದರೆ ಅಗಲಿದ ನಂತರವಾದರೂ ಅವರ ಹೆಸರನ್ನು ಇಂತಹ ಅನಗತ್ಯ ವಿವಾದಗಳಿಂದ ದೂರವಿಡುವುದು, ಅವರಿಗೆ ಸಲ್ಲಿಸುವ ನಿಜವಾದ ಗೌರವ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ, ವಿಷ್ಣು ಅವರ ರೂಪ-ಹೆಸರು-ಹಿನ್ನೆಲೆಗಳನ್ನು ಬಳಸಿಕೊಂಡು ಸಾಂಸ್ಕೃತಿಕ ಮಾಲಿನ್ಯಕ್ಕೆ ಮುಂದಾಗಿರುವುದು ದೊಡ್ಡ ವಿಪರ್ಯಾಸ.

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply