ನಮ್ಮ ನಡುವಿನ ಕೆಲವೊಂದು ವೈದ್ಯರ ವ್ಯಕ್ತಿತ್ವಗಳ ನೆನಪುಗಳು

2 years ago

ಕೆಂಪೇಗೌಡ ನಗರದ ಸಮೀರಪುರ ಎಂಬ ಬಡವರು ಹೆಚ್ಚು ವಾಸಿಸುವಂತಹ ಪ್ರದೇಶದಲ್ಲಿ 50 ವರ್ಷಗಳ ಹಿಂದೆ ಒಂದು ಕ್ಲಿನಿಕ್ ಆರಂಭವಾಗುತ್ತದೆ. ಆ ಕ್ಲಿನಿಕ್ಕಿನ ವೈದ್ಯರು ಡಾ. ರಾಮನ್. ಎತ್ತರದ ಮನುಷ್ಯ ಸಣ್ಣದಾದ ದೇಹ ಮುಖದಲ್ಲಿ ಸದಾ ನಗುವನ್ನು ತುಂಬಿಕೊಂಡಿರುತ್ತಿದ್ದರು. ಆರಂಭದ ದಿನಗಳಲ್ಲಿ ಇವರ ಕಡೆ ಯಾರು ತಿರುಗಿ ನೋಡಲಿಲ್ಲ. ದಿನಗಳು ಕಳೆಯುತ್ತಿದ್ದಂತೆ ಕೆಂಪೇಗೌಡ ನಗರ ಮತ್ತು ಅನೇಕ ಭಾಗದ ಜನರಿಗೆ ಡಾ. ರಾಮನ್ ತಮ್ಮ ಪಾಲಿನ ದೇವರಾದರು. ರಾಮನ್ ರವರು ನೋಡಿಬಿಟ್ಟರೆ ಸಾಕು ಕಾಯಿಲೆ ವಾಸಿಯಾಗುತ್ತದೆ ಎನ್ನುವ ನಂಬಿಕೆ ಬಂದುಬಿಟ್ಟಿತು. ಹೀಗಾಗಿ ಬೆಳಿಗ್ಗೆ 9:00ಗೆ ಇವರ ಕ್ಲಿನಿಕ್ ತೆರೆದರೆ ಮುಚ್ಚುತ್ತಿದ್ದಿದ್ದು ಅನೇಕ ಬಾರಿ ರಾತ್ರಿ ಒಂದು ಗಂಟೆ ಎರಡು ಗಂಟೆಯಾದರೂ ಆಯಿತು. ಇವರು ರಜಾ ಹಾಕಿಬಿಟ್ಟರೆ ರೋಗಿಗಳ ಪಾಡು ಹೇಳತೀರದು.

ಇವರು ರೋಗಿಗಳನ್ನ ಮಾತನಾಡಿಸುವ ರೀತಿ, ರೋಗಿಗಳ ಕಾಯಿಲೆ ಅರ್ಧವಾಸಿಯಾಗಿ ಬಿಡುತ್ತದೆ. ಇನ್ನು ಇವರು ನೀಡುವ ಔಷಧಿಗಳು ಮತ್ತು ಮಾತ್ರೆಗಳು ಅತ್ಯಂತ ಕಡಿಮೆ ಬೆಲೆಯದು. ಇವರು ಸಹ ಆರಂಭದಲ್ಲಿ ಹತ್ತು ರೂಪಾಯಿಂದ ಆರಂಭಿಸಿ ಸೇವೆಯನ್ನ ಸಲ್ಲಿಸುತ್ತಾ ಬಂದಿದ್ದರು. ಇಂದಿಗೂ ಸಹ ಇವರು ಬಡವರು ಮತ್ತು ತುಂಬಾ ಪರಿಚಯಸ್ತರ ಬಳಿ ಹಣವನ್ನು ಪಡೆಯುವುದಿಲ್ಲ. ಇವರ ಮತ್ತೊಂದು ವಿಶೇಷವೇನೆಂದರೆ ಇವರು ಕ್ಲಿನಿಕ್ ಆರಂಭಿಸಿದ ದಿನದಿಂದ 75 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಂದ ಎಂದಿಗೂ ಶುಲ್ಕವನ್ನು ಪಡೆದಿರುವುದಿಲ್ಲ. ಇದೇ ಪದ್ಧತಿಯನ್ನು ಇಂದಿಗೂ ಅನುಸರಿಸುತ್ತಿದ್ದಾರೆ. ತಮಗೆ ವಿವಿಧ ಕಂಪನಿಗಳಿಂದ ಬರುವ ಔಷಧಿಗಳ ಸ್ಯಾಂಪಲ್ ಗಳನ್ನು ಉಚಿತವಾಗಿ ಹಂಚುತ್ತಾರೆ. ಹಣ ಇಲ್ಲದಿದ್ದರೂ ಚಿಕಿತ್ಸೆ ನೀಡುತ್ತಾರೆ. ಹಣ ಕೊಡದಿದ್ದರೂ ಕೇಳುವುದಿಲ್ಲ. ಇಷ್ಟೇ ಹಣ ಕೊಡಿ ಎಂದು ಯಾರನ್ನು ಒತ್ತಾಯಿಸುವುದಿಲ್ಲ. ಇವರ ಸರಳತೆ ಯಾವ ಪ್ರಮಾಣದಲ್ಲಿದೆ ಎಂದರೆ ಅನೇಕರ ಪಾಲಿಗೆ ಇವರು ಮನೆಯ ಬಂಧು ಆಗಿದ್ದಾರೆ. ಇವರ ಬಳಿ ಬಂದು ತಮ್ಮ ಕಾಯಿಲೆಗಳನ್ನ ಹೇಳಿಕೊಂಡರೆ ಸಮಾಧಾನವಾಗುತ್ತದೆ ಎನ್ನುವ ಭಾವದಿಂದ ಇವರಿಗಾಗಿ ಕಾಯುತ್ತಾರೆ. ಇವರಿಂದ ಚಿಕಿತ್ಸೆ ಪಡೆದವರ ಪಟ್ಟಿ ಅನೇಕ ಗಣ್ಯರಿಂದ ಹಿಡಿದು ಸಾಮಾನ್ಯರವರೆಗೂ ಇದೆ.

ಎಂದು ಸಹ ಹಣ ಸಂಪಾದನೆ ಆಸೆಗೆ ಬಿದ್ದವರಲ್ಲ, ಕೀರ್ತಿ ಬಯಸುವವರು ಅಲ್ಲ ಪ್ರಶಸ್ತಿಗಳ ಹಿಂದೆ ಹೋದವರು ಅಲ್ಲ. ಯಾರಾದರೂ ಸನ್ಮಾನ ಮಾಡುತ್ತೇವೆ ಎಂದು ಇವರ ಬಳಿಗೆ ಹೋದರೆ ನಯವಾಗಿ ನಿರಾಕರಿಸುತ್ತಾರೆ. ಇವುಗಳಲ್ಲಿ ಆಸಕ್ತಿಯನ್ನು ತೋರಿಸುವುದಿಲ್ಲ.

ಇಂದಿನ ಸಂದರ್ಭದಲ್ಲಿಯೂ ತಾವು ಅತ್ಯಂತ ಕಡಿಮೆ ಹಣವನ್ನ ಪಡೆದು ಚಿಕಿತ್ಸೆ ನೀಡುತ್ತೀರಿ ಏಕೆ ಎಂದು ಕೇಳಿದರೆ ಅವರು ನೀಡುವ ಉತ್ತರ ಹೀಗಿರುತ್ತದೆ: “ಎಷ್ಟು ದುಡಿದರು ಮನುಷ್ಯನಿಗೆ ಸಮಾಧಾನವಾಗುವುದಿಲ್ಲ. ಅದಕ್ಕಾಗಿ ಅದರ ಹಿಂದೆ ಬಿದ್ದರೆ ನಾವು ಮನುಷ್ಯರಾಗಿರುವುದಿಲ್ಲ. ಭಗವಂತ ಅವಕಾಶವನ್ನ ಕೊಟ್ಟಿದ್ದಾನೆ ಜನ ಪ್ರೀತಿಯನ್ನು ನೀಡಿದ್ದಾರೆ ಇದಕ್ಕಿಂತ ದೊಡ್ಡ ಆಸ್ತಿ ಯಾವುದು ಬೇಡ. ಸಂಪಾದನೆ ಮಾಡಿ ಹೊತ್ತುಕೊಂಡು ಹೋಗುವುದಾದರೂ ಏನಿದೆ?” ಎಂದು ದಾರ್ಶನಿಕರಂತೆ ಮಾತನಾಡುತ್ತಾರೆ. ಕೇವಲ ಮಾತನಾಡುತ್ತಾರೆ ಅಲ್ಲ; ಅದೇ ರೀತಿಯಲ್ಲಿ ನಡೆದುಕೊಂಡಿದ್ದಾರೆ. ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ ಇವರಿಗೆ ಶುಭವನ್ನ ಕೋರುತ್ತಾ ಇವರ ಸೇವೆ ಮತ್ತಷ್ಟು ವರ್ಷಗಳ ಕಾಲ ಎಲ್ಲರಿಗೂ ದೊರೆಯುವಂತಾಗಲಿ ಎಂದು ಪ್ರಾರ್ಥಿಸುತ್ತೇವೆ.

ಜಯದೇವ ಆಸ್ಪತ್ರೆಯಲ್ಲಿ ಸೂಪರಿಂಟೆಂಡಾಟಾಗಿ ನಂತರ ರೇಡಿಯೋಲಜಿ ವಿಭಾಗದಲ್ಲಿ ಅತ್ಯಂತ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಭೂಪಾಲ್ ಸಾವಿರಾರು ಜನ ರೋಗಿಗಳ ಪಾಲಿಗೆ ಆಪದ್ಬಾಂಧವರಾಗಿದ್ದಾರೆ. ಇವರು ಜಯದೇವ ಆಸ್ಪತ್ರೆಯಲ್ಲಿ ಇಂದಿಗೂ ಸಹ ಪ್ರಮುಖ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅಲ್ಲಿನ ಸಂಸ್ಥೆ ನಿಗದಿಪಡಿಸುವ ವೆಚ್ಚದಲ್ಲಿ ಸಹಾಯ ಮಾಡುವಂತಹ ಅಧಿಕಾರವನ್ನು ಇವರು ಪಡೆದಿರುತ್ತಾರೆ. ಈ ಹಿನ್ನೆಲೆಯಲ್ಲಿ ಇವರ ಕಚೇರಿಯ ಮುಂದೆ ಪ್ರತಿದಿನ ನೂರಾರು ಮಂದಿ ಇವರಿಗಾಗಿ ಕಾಯುತ್ತಲೇ ಇರುತ್ತಾರೆ. ಪ್ರತಿಯೊಬ್ಬರ ಕಡತವನ್ನು ತೆಗೆದುಕೊಂಡು ರೋಗಿಯ ಮುಖಭಾವವನ್ನು ಅರಿತು ಅವರ ಆರ್ಥಿಕ ಪರಿಸ್ಥಿತಿಯನ್ನು ಗ್ರಹಿಸಿ ಸಾಕಷ್ಟು ಪ್ರಮಾಣದಲ್ಲಿ ಸಂಸ್ಥೆಯ ನಿಬಂಧನೆಗಳ ಅಡಿಯಲ್ಲಿ ಸಾಧ್ಯವಾದಷ್ಟು ರಿಯಾಯಿತಿಯನ್ನು ಮಾಡಿಸಿಕೊಟ್ಟು ತಿಳುವಳಿಕೆ ಇಲ್ಲದ ಜನರಿಗೆ ತಮ್ಮ ಸಹಾಯಕರ ಮೂಲಕ ವೈದ್ಯರ ಬಳಿಗೆ ಕಳುಹಿಸಿಕೊಟ್ಟು ಸಕಾಲದಲ್ಲಿ ಚಿಕಿತ್ಸೆ ಮತ್ತು ನೆರವನ್ನ ನೀಡುವುದರ ಮೂಲಕ ಸಾವಿರಾರು ಜನ ರೋಗಿಗಳ ಪಾಲಿಗೆ ನೆರವಾಗಿದ್ದಾರೆ. ಇವರು ಸಹ ಯಾವುದೇ ಪ್ರಶಸ್ತಿಯ ಹಿಂದೆ ಬಿದ್ದವರಲ್ಲ, ತಾವು ಮಾಡುವ ಸೇವೆಯ ಪ್ರಚಾರವನ್ನು ಪಡೆಯುವವರು ಅಲ್ಲ, ಪ್ರತಿದಿನವೂ ಆಸ್ಪತ್ರೆಗೆ ಬಂದು ಇವರು ಸಲ್ಲಿಸುತ್ತಿರುವ ಸೇವೆ ವಿಶೇಷವಾಗಿ ಬಡವರು ಮತ್ತು ಅಸಹಾಯಕರ ನೆರವಿಗೆ ಇವರ ಸಕಾಲಿಕವಾದಂತಹ ಮಾರ್ಗದರ್ಶನ ಮತ್ತು ನೆರವು ಡಾಕ್ಟರ್ ಭೂಪಾಲ್ ರವರ ಬಗ್ಗೆ ಜಯದೇವ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಗೌರವದ ಭಾವನೆ ಇದೆ. ಇವರ ಅನುಭವ ಹಿರಿತನ ಮತ್ತು ಸೇವಾ ಮನೋಭಾವ ಮತ್ತಷ್ಟು ವರ್ಷಗಳ ಕಾಲ ಜನರಿಗೆ ದೊರೆಯುವಂತಾಗಿ ಇವರ ಮೂಲಕ ಮತ್ತಷ್ಟು ಜನರ ಕುಟುಂಬಗಳು ಸಂಕಷ್ಟದಿಂದ ಪಾರಾಗಲು ದಾರಿಯಾಗಲಿ ಎಂದು ಪ್ರಾರ್ಥಿಸುತ್ತೇವೆ.

ಕಿದ್ವಾಯ್ ಆಸ್ಪತ್ರೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಹಲವಾರು ವರ್ಷಗಳ ಕಾಲ ಸೇವೆಯನ್ನ ಮಾಡಿದ್ದ ಶ್ರೀ ಸಿದ್ದಲಿಂಗ ಸ್ವಾಮಿರವರಿಗೆ ಶುಭವನ್ನ ಕೋರಬೇಕಾದದ್ದು ನಮ್ಮ ಕರ್ತವ್ಯವಾಗಿರುತ್ತದೆ. ಇವರು ಸಹ ಆಸ್ಪತ್ರೆಯಲ್ಲಿ ಪ್ರತಿದಿನವೂ ಪಾದರಸದಂತೆ ಓಡಾಡುತ್ತಾ ಎಲ್ಲಾ ರೋಗಿಗಳಿಗೆ ಸರ್ಕಾರದ ಯೋಜನೆಗಳ ವಿಚಾರಗಳನ್ನು ತಿಳಿಸುತ್ತಾ ಅಗತ್ಯವಾದ ಸಂದರ್ಭದಲ್ಲಿ ತಾವೇ ವೈದ್ಯರ ಬಳಿಗೆ ರೋಗಿಗಳನ್ನು ಕರೆದುಕೊಂಡು ಹೋಗಿ ಚಿಕಿತ್ಸೆಯನ್ನ ಕೊಡಿಸುವ ವ್ಯವಸ್ಥೆಯನ್ನು ಮಾಡಿರುತ್ತಾರೆ. ಜೊತೆಗೆ ಸರ್ಕಾರದ ಸೌಲಭ್ಯದ ಅಡಿಯಲ್ಲಿ ಬಡವರು ಪಡೆದುಕೊಳ್ಳಬಹುದಾದಂತಹ ಚಿಕಿತ್ಸೆಯ ಸೌಕರ್ಯಗಳನ್ನು ತಿಳಿಸಿಕೊಟ್ಟು ಅದಕ್ಕೆ ಬೇಕಾದ ದಾಖಲೆಗಳನ್ನು ಸಿದ್ಧಪಡಿಸುವ ವಿಚಾರವನ್ನು ತಿಳಿಸಿಕೊಟ್ಟಿರುತ್ತಾರೆ. ಇವರು ಸಹ ವೈದ್ಯರಲ್ಲದಿದ್ದರೂ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಯಾವ ರೀತಿಯಲ್ಲಿ ಬಡವರ ಪರವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ದುಡಿಯಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಇಂದಿಗೂ ಸಹ ಇವರು ನಿವೃತ್ತಿಯ ನಂತರವೂ ಇವರನ್ನು ಭೇಟಿ ಮಾಡಿ ಅಥವಾ ದೂರವಾಣಿ ಮಾಡಿ ಸಂಕಷ್ಟವನ್ನು ತೋಡಿಕೊಂಡರೆ ಜಯದೇವ ಆಸ್ಪತ್ರೆ ಮತ್ತು ಕಿದ್ವಾಯ್ ಆಸ್ಪತ್ರೆಗಳಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಜಯ್ ಗಾಂಧಿ ಆಸ್ಪತ್ರೆ ರಾಜೀವ್ ಗಾಂಧಿ ಆಸ್ಪತ್ರೆ ಮುಂತಾದ ಕಡೆಗಳಲ್ಲಿ ತಮ್ಮ ಸಹಪಾಠಿಗಳ ಮೂಲಕವಾದರೂ ಅಗತ್ಯ ನೆರವನ್ನ ದೊರಕಿಸಿ ಕೊಡುತ್ತಿದ್ದಾರೆ. ಇವರಿಗೂ ಸಹ ಶುಭವನ್ನು ಕೋರುತ್ತೇವೆ.

ಕಿಮ್ಸ್ ಆಸ್ಪತ್ರೆಯಲ್ಲಿ ಡಾ. ವೇದವತಿ ರವರ ಸೇವೆಯನ್ನು ಸಹ ಸಾರ್ವಜನಿಕರು ಗಮನಿಸಿರುತ್ತೇವೆ ಇವರು ದೊಡ್ಡ ವೈದ್ಯರಾದರು ಹಲವಾರು ವರ್ಷಗಳ ಕಾಲ ಸೇವೆಯನ್ನ ಮಾಡಿ ತಮ್ಮ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದರು ಸಹ ಅತ್ಯಂತ ಸರಳವಾದ ರೀತಿಯಲ್ಲಿ ನಡೆದುಕೊಳ್ಳುತ್ತಾ ಅಗತ್ಯವಾದ ಎಲ್ಲ ಸಂದರ್ಭದಲ್ಲಿ ರೋಗಿಗಳಿಗೆ ಆಸ್ಪತ್ರೆಯಲ್ಲಿ ನೆರವನ್ನ ನೀಡುವುದರ ಜೊತೆಗೆ ಆಸ್ಪತ್ರೆಗೆ ದಾಖಲಾದ ರೋಗಿಗಳ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಅವರ ಸಂಬಂಧಪಟ್ಟವರಿಗೆ ಸಮಾಧಾನದಿಂದ ವಿವರಿಸುತ್ತಾ ಅವರಲ್ಲಿ ವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಸೇವೆಯನ್ನ ಬಯಸಿ ಪ್ರತಿದಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಹಲವಾರು ಮಂದಿ ಕಾಯುತ್ತಿರುತ್ತಾರೆ. ಕಾರಣ ಸಮಾಧಾನ ಚಿತ್ತದಿಂದ ಸಹನೆಯಿಂದ ರೋಗಿಯ ವಿವರಗಳನ್ನು ಪಡೆದು ಇವರು ನೀಡುವ ಮಾರ್ಗದರ್ಶನ ಮತ್ತು ನೆರವನ್ನು ಇಷ್ಟಪಡುವಂತಹ ಮಂದಿ ಇವರಿಗಾಗಿ ಕಾಯುತ್ತಾರೆ. ಇವರು ಇಷ್ಟೆಲ್ಲ ಸೇವೆಯನ್ನ ಮಾಡುತ್ತಿದ್ದರು ಯಾವುದೇ ಕೀರ್ತಿ ಮತ್ತು ಪ್ರತಿಷ್ಠೆಯನ್ನ ಹಾಗೂ ಹಿರೀತನವನ್ನು ತಲೆಗೆ ಅಂಟಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಸೇವೆಯನ್ನು ಮಾಡುತ್ತಲೇ ಇದ್ದಾರೆ. ಇವರ ಪತಿ ಡಾ. ಶ್ರೀನಿವಾಸರವರು ವಿಕ್ಟೋರಿಯಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಸಹ ಬಡವರಿಗೆ ಸ್ಪಂದಿಸುವ ವಿಚಾರದಲ್ಲಿ ಹಿಂದೆ ಬಿದ್ದಿರುವುದಿಲ್ಲ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿಶೇಷವಾಗಿ ಬರುವ ಗ್ರಾಮೀಣ ಭಾಗದ ಜನರ ವಿಚಾರದಲ್ಲಿ ಬಹಳ ಶ್ರದ್ಧೆಯಿಂದ ಕರ್ತವ್ಯವನ್ನು ನಿರ್ವಹಿಸುತ್ತ ಅಗತ್ಯವಾದ ನೆರವನ್ನ ಕೊಡಿಸಿ ಕೊಡುತ್ತಿದ್ದಾರೆ.

ಇದೇ ರೀತಿಯಲ್ಲಿ ಮಕ್ಕಳ ವೈದ್ಯರಾದ ಡಾ. ಪದ್ಮನಾಭ ಇವರು ಹನುಮಂತನಗರದಲ್ಲಿ ಪರಿಮಳ ಮಕ್ಕಳ ಆಸ್ಪತ್ರೆ ತೆರೆದಿದ್ದು, ಇವರು ಸಹ ಕೇವಲ ಹತ್ತು ರೂಪಾಯಿಗೆ ಚಿಕಿತ್ಸೆಯನ್ನ ನೀಡುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಇವರು ಧೈರ್ಯವಾಗಿ ತಮ್ಮ ಕ್ಲಿನಿಕ್ ಅನ್ನ ಪ್ರತಿದಿನವೂ ತೆರೆದು ಸಕಾಲಿಕವಾಗಿ ಔಷಧಿಗಳನ್ನ ನೀಡಿ ನೂರಾರು ಜನರ ಆತಂಕವನ್ನು ದೂರ ಮಾಡಿರುತ್ತಾರೆ. ಮಕ್ಕಳ ವೈದ್ಯರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಹಿರಿಯರಿಗೂ ಚಿಕಿತ್ಸೆ ನೀಡುವ ಇವರು ಯಾವುದೇ ಪ್ರತಿಫಲ ಅಪೇಕ್ಷಿಸದೆ ಇಂದಿಗೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಕೆಲವು ಹಿರಿಯ ವೈದ್ಯರು ಯಾವ ರೀತಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಜನರ ಪ್ರೀತಿ ವಿಶ್ವಾಸವನ್ನ ಗಳಿಸಿದ್ದರು ಎನ್ನುವುದಕ್ಕೆ ವಿಕ್ಟೋರಿಯಾ ಆಸ್ಪತ್ರೆಯ ನರರೋಗಗಳ ವೈದ್ಯರಾಗಿದ್ದ ಡಾಕ್ಟರ್ ಮೃತ್ಯುಂಜಯಣ್ಣ ರವರ ಹೆಸರು ಪ್ರಮುಖವಾಗಿರುತ್ತದೆ. ಹಲವಾರು ದಶಕಗಳ ಕಾಲ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇವರಿಗಾಗಿ ಜನ ಹಂಬಲಿಸುತ್ತಿದ್ದರು. ಮೃತ್ಯುಂಜಯಣ್ಣ ಎಂದರೆ ಅನೇಕರ ಪಾಲಿಗೆ ಮೃತ್ಯುವನ್ನ ಗೆದ್ದು ಕೊಟ್ಟ ಅಣ್ಣನೆಯಾಗಿದ್ದರು.

ಇದೇ ರೀತಿಯಲ್ಲಿ ಈಗಲೂ ಉಚಿತವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸಮಾಧಾನ ಕೇಂದ್ರ ಎನ್ನುವ ಸಂಸ್ಥೆಯ ಮೂಲಕ ಮನೋರೋಗಿಗಳಿಗೆ ಚಿಕಿತ್ಸೆಯನ್ನು ಕೊಡುತ್ತಿರುವ ಡಾಕ್ಟರ್ ಸಿ ಎನ್ ಚಂದ್ರಶೇಖರ್ ಅತ್ಯಂತ ಪ್ರಮುಖವಾದ ವ್ಯಕ್ತಿಯಾಗಿರುತ್ತಾರೆ. ತಮ್ಮ ಸಂಪಾದನೆಯ ಎಲ್ಲ ಭಾಗವನ್ನು ಮತ್ತು ತಮ್ಮ ಸ್ಥಿರಾಸ್ತಿಗಳನ್ನು ಹಾಗೂ ವಿವಿಧ ಸಂದರ್ಭಗಳಲ್ಲಿ ತಮಗೆ ಬಂದ ಪ್ರಶಸ್ತಿಗಳ ಮೊತ್ತವನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾನವಾಗಿ ನೀಡುತ್ತಾ ತಾವು ನಿರ್ದೇಶಕರಾಗಿ ದುಡಿದ ನಿಮಾನ್ಸ್ ಆಸ್ಪತ್ರೆಯ ಅಭಿವೃದ್ಧಿಗೆ ವೈಯಕ್ತಿಕವಾದಂತಹ ಕಾಣಿಕೆಯನ್ನು ಸಲ್ಲಿಸಿರುವುದು ದೊಡ್ಡದಾದ ಸಂಗತಿ ಆಗಿರುತ್ತದೆ. ಎಂದಿಗೂ ಸಹ ಇವರು ಮೈಕೋ ಲೇಔಟ್ ಅರಕೆರೆಯಲ್ಲಿ ಸಮಾಧಾನ ಕೇಂದ್ರದಲ್ಲಿ ಮನೋರೋಗಿಗಳಿಗೆ ಉಚಿತವಾದಂತಹ ಚಿಕಿತ್ಸೆಯನ್ನ ಸಲಹೆಯನ್ನು ನೀಡುತ್ತಾರೆ. ಇದಲ್ಲದೆ ಇವರು ಮನೋರೋಗಕ್ಕೆ ಸಂಬಂಧಪಟ್ಟಂತೆ ಹಲವಾರು ಪುಸ್ತಕಗಳನ್ನ ಬರೆದಿದ್ದಾರೆ.

ಹೀಗೆ ನಮ್ಮ ನಡುವೆ ಅನೇಕರು ತಮ್ಮದೇ ಆದಂತಹ ಸೇವೆಯನ್ನ ತಮ್ಮ ವೃತ್ತಿಯಲ್ಲಿ ಸಲ್ಲಿಸಿರುತ್ತಾರೆ. ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ ಸದ್ದಿಲ್ಲದೆ ಸುದ್ದಿ ಇಲ್ಲದೆ ಪ್ರಚಾರವಿಲ್ಲದೆ ದುಡಿದಿರುವಂತಹ ಮಹನೀಯರನ್ನು ನೆನಪು ಮಾಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಇವರ ಸಾಲಿನಲ್ಲಿ ಎನ್ಆರ್ ಕಾಲೋನಿಯಲ್ಲಿ ಇಂದಿಗೂ ಸೇವೆ ಸಲ್ಲಿಸುತ್ತಿರುವ ಡಾ ಎಂ ಆರ್ ವಿ ಪ್ರಸಾದ್ ರವರನ್ನ ಹೆಸರಿಸದಿದ್ದರೆ ಅದು ಲೋಪವಾಗುತ್ತದೆ. ಗಾಯನ ಸಮಾಜದ ಅಧ್ಯಕ್ಷರಾಗಿ ಉತ್ತಮ ಸಂಗೀತಗಾರರಾಗಿ ಜೊತೆಗೆ ಶ್ರೇಷ್ಠ ವೈದ್ಯರಾಗಿಯೂ ಸೇವೆಯನ್ನು ಸಲ್ಲಿಸುತ್ತಿರುವ ಎಂ ಆರ್ ವಿ ಪ್ರಸಾದ್ ರವರು ಸೇವೆ ಸಲ್ಲಿಸುತ್ತಿರುವ ಎನ್ಆರ್ ಕಾಲೋನಿಯ ರಾಯರ ಮಠದ ಪಕ್ಕದಲ್ಲಿ ಪ್ರತಿದಿನವೂ ಇವರ ಕ್ಲಿನಿಕ್ ಮುಂದೆ ಜನರು ತುಂಬಿರುತ್ತಾರೆ. ಏಕೆಂದರೆ ಇವರು ಚಿಕಿತ್ಸೆಯ ಜೊತೆಗೆ ಜನರಿಗೆ ಪ್ರೀತಿಯನ್ನು ನೀಡುತ್ತಾರೆ.

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply