ಚಿಕಿತ್ಸೆಯ ನೆಪದಲ್ಲಿ ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕಿ

2 years ago

#Siddaramaiah #DineshGundurao #ksnagaraj #Cutdown #expensive #expenses #treatment

ಅನೇಕ ರೀತಿಯ ಗುಣವಾಗದ ಮಾರಣಾಂತಿಕ ಕಾಯಿಲೆಗಳಿಂದ ನರಳುವ, ಬಳಲುತ್ತಿರುವ ಸಹಸ್ರಾರು ರೋಗಿಗಳು ಚಿಕಿತ್ಸೆಗಾಗಿ ದೊಡ್ಡ ದೊಡ್ಡ ಆಸ್ಪತ್ರೆಗಳು ಮತ್ತು ನುರಿತ ವೈದ್ಯರ ಬಳಿಯಲ್ಲಿ ಬಂದಂತಹ ಸಂದರ್ಭದಲ್ಲಿ ಅವರು ಅನುಭವಿಸುತ್ತಿರುವ ಕಾಯಿಲೆ ಯಾವ ಹಂತದಲ್ಲಿದೆ ಎಂಬ ವಿಚಾರ ವೈದ್ಯರುಗಳಿಗೆ ಅರಿವಿರುತ್ತದೆ.

ಇಂತಹ ರೋಗಿಗಳಿಗೆ ಯಾವುದೇ ಪ್ರಮಾಣದಲ್ಲಿ ಚಿಕಿತ್ಸೆಯನ್ನು ನೀಡಿದರೂ ಸಹ ಕಾಯಿಲೆ ಗುಣವಾಗುವುದಿಲ್ಲ. ಅವರ ಜೀವಕ್ಕೆ ಅಪಾಯ ತಪ್ಪಿದಲ್ಲ ಎಂಬ ವಿಚಾರ ಅವರ ಅನುಭವ ಮತ್ತು ವೈದ್ಯಕೀಯ ಜ್ಞಾನದ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಹೀಗಿದ್ದರೂ ಸಹ ಚಿಕಿತ್ಸೆಯನ್ನು ನೀಡುವ ನೆಪದಲ್ಲಿ ದುಬಾರಿ ವೆಚ್ಚವನ್ನು ಮಾಡಿಸುತ್ತಾರೆ.

ಶ್ರೀಮಂತರಾದರೆ ಇಂತಹ ವೆಚ್ಚವನ್ನು ಭರಿಸಬಲ್ಲರು. ಬಡವರು ಮತ್ತು ಮಧ್ಯಮವರ್ಗದವರು ವೈದ್ಯರ ಮೇಲೆ ಭರವಸೆಯನ್ನಿಟ್ಟು ತಮ್ಮ ಮನೆಯವರನ್ನು ಕಾಪಾಡಿಕೊಳ್ಳುವ ಸಲುವಾಗಿ ಲಕ್ಷಾಂತರ ರೂಪಾಯಿಗಳ ಸಾಲವನ್ನು ಮಾಡುತ್ತಾರೆ. ಕೆಲವು ದಿನಗಳ ನಂತರ ರೋಗಿಯೂ ಉಳಿಯುವುದಿಲ್ಲ, ಸಾಲ ಮಾತ್ರ ಹಾಗೇ ಉಳಿದುಕೊಳ್ಳುತ್ತದೆ. ಇವರ ಕುಟುಂಬದ ಸದಸ್ಯರು ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗುತ್ತಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷವಾಗಿ ಆರೋಗ್ಯ ಇಲಾಖೆ ಒಂದು ಸ್ಪಷ್ಟವಾದಂತಹ ಮಾರ್ಗಸೂಚಿಯನ್ನು ಹೊರಡಿಸಿದರೆ ಒಳ್ಳೆಯದಾಗತ್ತದೆ. ಯಾವ ರೋಗಿಗಳಿಗೆ ಅವರನ್ನು ಬಾಧಿಸುತ್ತಿರುವ ಕಾಯಿಲೆ ವಾಸಿಯಾಗದ ಹಂತಕ್ಕೆ ತಲುಪಿದೆ ಎಂದು ತಿಳಿಯುತ್ತಿದ್ದಂತೆ ಅವರ ಕುಟುಂಬ ಸದಸ್ಯರಿಗೆ ಈ ವಿಚಾರವನ್ನು ತಿಳಿಸಿ ಅವರು ಒಪ್ಪಿಗೆ ನೀಡಿದರೆ ಮಾತ್ರ ಮುಂದಿನ ಚಿಕಿತ್ಸೆಯನ್ನು ನೀಡಬೇಕು ವೈದ್ಯರ ಮನವರಿಕೆಯ ಬಳಿಕ ಅವರು ಮುಂದಿನ ಚಿಕಿತ್ಸೆಗೆ ಆರ್ಥಿಕವಾಗಿ ಅಶಕ್ತರಾದರೆ ನೋವು ನಿವಾರಕ ಔಷಧಿಗಳನ್ನಷ್ಟೇ ಕೊಟ್ಟು ತಿಳುವಳಿಕೆಯನ್ನು ಹೇಳಿ ಕಳುಹಿಸಿಕೊಡುವಂತಹ ಮಾರ್ಗಸೂಚಿಯನ್ನು ಹೊರಡಿಸಿದರೆ ಸಾಲದ ಸುಳಿಗೆ ಸಿಕ್ಕಿ ಸಂಕಷ್ಟಗಳನ್ನು ಅನುಭವಿಸುವ ಕುಟುಂಬಗಳ ರಕ್ಷಣೆ ಮಾಡಿದಂತಾಗುತ್ತದೆ.

ಯಾವುದೇ ಕುಟುಂಬದವರು ಸಹ ತಮ್ಮ ಕುಟುಂಬದ ಸದಸ್ಯರ ಕಾಯಿಲೆ ವಾಸಿಯಾಗಲಿ, ಅವರು ಮತ್ತಷ್ಟು ಕಾಲ ಬದುಕಲಿ ಎಂಬ ಆಸೆಯನ್ನು ಹೊಂದಿರುತ್ತಾರೆ. ಆದರೆ ಕೆಲವು ಮಾರಣಾಂತಿಕ ಕಾಯಿಲೆಗಳು ಒಂದು ಹಂತವನ್ನು ತಲುಪಿದ ಮೇಲೆ ವಾಸಿಯಾಗುವುದಿಲ್ಲ ಎಂಬುದು ಕಟುಸತ್ಯವಾಗಿರುತ್ತದೆ.

ವಿಶೇಷವಾಗಿ ಅಂತಿಮ ಹಂತವನ್ನು ತಲುಪಿದ ಕ್ಯಾನ್ಸರ್ ಕಾಯಿಲೆ, ಮೆದುಳು ನಿಷ್ಕ್ರಿಯಗೊಂಡಂತಹ ಸಂದರ್ಭಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಇಂತಹ ರೋಗಿಗಳ ಕುಟುಂಬದವರನ್ನು ಸುಲಿಯುವುದನ್ನು ನಿಯಂತ್ರಿಸುವುದು ಸರ್ಕಾರದ ಮತ್ತು ಆರೋಗ್ಯ ಇಲಾಖೆಯ ಕರ್ತವ್ಯವೂ ಆಗಿದೆಯಲ್ಲವೇ?

  • ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply