ಗ್ರಾಮ ಪಂಚಾಯತವಾರು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ
ಅಲ್ಪಸಂಖ್ಯಾತ ಸಮುದಾಯಕ್ಕೆ ಮಾಹಿತಿ ಕಾರ್ಯಾಗಾರ ಮಾಡಿ
ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ: ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ವಿವಿಧ ಇಲಾಖೆಗಳು ನೀಡುವ ಫಲಾನುಭವಿ ಆಧಾರಿತ ಮತ್ತು ಸಮುದಾಯ ಆಧಾರಿತ ಯೋಜನೆಗಳನ್ನು ಅರ್ಹ ಅಲ್ಪಸಂಖ್ಯಾತರಿಗೆ ತಲುಪಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯತ ಮಟ್ಟದಲ್ಲಿ ಹಾಗೂ ವಾರ್ಡ್ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ಸಭೆ ಜರುಗಿಸಿ, ಅರ್ಹ ಫಲಾನುಭವಿಗಳ ಪಟ್ಟಿ ತಯ್ಯಾರಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೆಲವು ಇಲಾಖೆ ಅಧಿಕಾರಿಗಳು ಮಾರ್ಚವರೆಗೂ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಮಾಡುತ್ತಾರೆ. ಇದು ಸರಿ ಅಲ್ಲ. ಪ್ರತಿ ಇಲಾಖೆಯಿಂದ ಜಿಲ್ಲಾ ಹಂತದಲ್ಲಿ ತಮ್ಮ ಇಲಾಖೆಯಿಂದ ಕೊಡುವ ಫಲಾನುಭವಿ ಆಧಾರಿತ ಮತ್ತು ಸಮುದಾಯ ಆಧಾರಿತ ಯೋಜನೆಗಳ ಪ್ರಯೋಜನ ಪಡೆದಿರುವವರ ವಿವರಗಳನ್ನು ದಾಖಲಿಸಿ, ನಿರ್ವಹಿಸಬೇಕು. ಇದರಿಂದ ಡುಪ್ಲಿಕೆಟ್ ಅಥವಾ ಯೋಜನೆಯ ಲಾಭ ಪಡೆದವರನ್ನು ನಿಯಂತ್ರಿಸಿ, ಹೊಸ ಫಲಾನುಭವಿಗಳಿಗೆ ಅವಕಾಶ ನೀಡಬಹುದು ಎಂದರು.
ವಿವಿಧ ಇಲಾಖೆಗಳಲ್ಲಿನ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯ ಮತ್ತು ಯೋಜನೆಗಳಲ್ಲಿ ಪ್ರಗತಿ ಸಾಧಿಸದಿರುವುದಕ್ಕೆ ಫಲಾನುಭವಿಗಳು ಅರ್ಜಿ ಹಾಕದಿರುವುದು ಕಾರಣವಾಗಿದೆ. ಆದ್ದರಿಂದ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ಬರುವ 6 ಅಲ್ಪ ಸಂಖ್ಯಾತ ಸಮುದಾಯಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ವಿವಿಧ ಇಲಾಖೆಗಳ ಸಹಯೋಗ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ನಗರ ಹಾಗೂ ಗ್ರಾಮಗಳ ಮಟ್ಟದಲ್ಲಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಬೇಕು ಎಂದರು.
2023-24ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಪ್ರಗತಿಯನ್ನು ಪರಿಶೀಲಿಸಲಾಗಿದೆ. ಎಲ್ಲ ಇಲಾಖೆಗಳು ನಿಗದಿತ ಗುರಿ ಸಾಧಿಸಿವೆ. 2024-25ನೇ ಸಾಲಿಗೆ ನಿಗದಿತ ಗುರಿಗೆ ಎಲ್ಲ ಇಲಾಖೆಗಳು ಕ್ರಿಯಾಯೋಜನೆ ರೂಪಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿದರು.
ಅಲ್ಪಸಂಖ್ಯಾತರಿಗೆ ಸವಲತ್ತುಗಳನ್ನು ತಲುಪಿಸುವ ಕಡೆ ಅಧಿಕಾರಿಗಳು ಗಮನಹರಿಸಬೇಕು. ಪ್ರತಿಯೊಬ್ಬ ನಾಗರಿಕರಿಗೂ ಎಲ್ಲ ಯೋಜನೆಗಳು ಮಾಹಿತಿ ದೊರೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ನಗರಾಭಿವೃದ್ದಿಕೋಶದ ಪ್ರಭಾರ ನಿರ್ದೇಶಕ ಅಜೀಜ್ ದೇಸಾಯಿ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಪ್ರಭುದೇವ್ ಎನ್.ಜಿ., ಡಿವೈಎಸ್ಪಿ ಎಸ.ಎಂ.ನಾಗರಾಜ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣಕುಮಾರ, ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ಇಲಾಖಾವಾರು ಪ್ರಗತಿ ವರದಿ ಸಲ್ಲಿಸಿದರು.




