ಬೆಳೆ ಹಾನಿ ಸಮೀಕ್ಷೆಯಲ್ಲಿ ಅರ್ಹ ರೈತರು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿ

1 year ago

ಬೆಳೆ ಹಾನಿ ಸಮೀಕ್ಷೆಯಲ್ಲಿ ಅರ್ಹ ರೈತರು ಬಿಟ್ಟು ಹೋಗದಂತೆ ಮತ್ತು ಅನರ್ಹರು ಸೆರ್ಪಡೆ ಆಗದಂತೆ ಎಚ್ಚರಿಕೆ ವಹಿಸಿ

ರೈತರ ಪಟ್ಟಿಯನ್ನು ಸಾರ್ವಜನಿಕರಿಗೆ ಪ್ರಚುರಪಡಿಸಿ: ದಿವ್ಯ ಪ್ರಭು

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಸಿಕ ಸಭೆ

ಧಾರವಾಡ: ಅಕ್ಟೋಬರ್ ತಿಂಗಳಲ್ಲಿ ಸುರಿದ ಅಕಾಲಿಕ, ನಿರಂತರ, ದಟ್ಟ ಮಳೆಯಿಂದಾಗಿ ಆಗಿರುವ ಬೆಳೆ ಹಾನಿ ಸಮೀಕ್ಷೆಯಲ್ಲಿ ಅನರ್ಹರು ಸೆರ್ಪಡೆ ಆಗದಂತೆ ಅಧಿಕಾರಿ, ಸಿಬ್ಬಂದಿ ಎಚ್ಚರಿಕೆ ವಹಿಸಬೇಕು ಮತ್ತು ಅರ್ಹ ಯಾವ ಒಬ್ಬ ರೈತರ ಜಮೀನುಗಳು ಬೆಳೆ ಹಾನಿ ಸಮೀಕ್ಷೆಯಿಂದ ಹೊರಗುಳಿಯದಂತೆ ಕಾಳಜಿವಹಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಸಿಕ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಬೆಳೆ ಹಾನಿ ಸಮೀಕ್ಷಾ ವರದಿಯನ್ನು ಆನ್ಲೈನ್ ಮೂಲಕ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ಮತ್ತು ಪ್ರಕಟಿತ ಸಮೀಕ್ಷಾ ವರದಿಯ ಪ್ರತಿಯನ್ನು ಆಯಾ ತಾಲೂಕಿನ ತಹಶಿಲ್ದಾರ ಕಚೇರಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ತೋಟಗಾರಿಕೆ ಇಲಾಖೆ ಕಚೇರಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಗ್ರಾಮ ಪಂಚಾಯತ ಮಟ್ಟದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಡಂಗುರ ಸಾರುವ ಮೂಲಕ ರೈತ ಕುಟುಂಬಗಳಿಗೆ ಬೆಳೆ ಹಾನಿ ಸಮೀಕ್ಷೆ ಕೈಗೊಂಡಿರುವ ಕುರಿತು ಮತ್ತು ಬೆಳೆ ಹಾನಿ ಆಗಿರುವ ರೈತರ ಹೆಸರು, ವಿವರ ಇರುವ ಬಗ್ಗೆ ಪರಿಶೀಲಿಸಿ, ಆಕ್ಷೆಪಣೆಗಳಿದ್ದಲ್ಲಿ ಸಲ್ಲಿಸಲು ಮಾಹಿತಿ ನೀಡಬೇಕು. ಗ್ರಾಮ ಪಂಚಾಯತಗಳ ಸೂಚನಾ ಪಲಕದಲ್ಲಿ ಆಯಾ ಗ್ರಾಮಗಳ ಬೆಳೆ ಹಾನಿ ಸಮೀಕ್ಷಾ ವರದಿಯ ಪ್ರತಿಯನ್ನು ಪ್ರಚುರ ಪಡಿಸಬೇಕು ಎಂದರು. 

ವರದಿ ಪ್ರಕಟಿಸಿದ 7 ದಿನದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ: ಬೆಳೆ ಹಾನಿ ಸಮೀಕ್ಷಾ ವರದಿಯಲ್ಲಿ ರೈತರ ಜಮೀನು, ಬೆಳೆ ವಿವರ ಬಿಟ್ಟು ಹೋಗಿದ್ದಲ್ಲಿ, ವಿವರ ಸರಿ ಇರದಿದ್ದಲ್ಲಿ ಅಥವಾ ಪ್ರಕಟಿತ ವರದಿಯಲ್ಲಿನ ಅಂಶಗಳ ಬಗ್ಗೆ ತಕರಾರುಗಳಿದ್ದಲ್ಲಿ ಸಂಬಂಧಿಸಿದ ರೈತರು ಸಮೀಕ್ಷಾ ವರದಿ ಪ್ರಕಟಿಸಿದ 7 ದಿನದೊಳಗೆ ತಮ್ಮ ತಾಲೂಕಿನ ತಹಶಿಲ್ದಾರ ಕಚೇರಿಯಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಇದನ್ನು ಪರಿಶೀಲಿಸಿ, ಕೃಷಿ ಇಲಾಖೆ ಅಧಿಕಾರಿಗಳು, ತಹಶಿಲ್ದಾರರು ಕ್ರಮವಹಿಸಿ, ಅಂತಿಮ ಸಮೀಕ್ಷಾ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದರು. 

ಅಕ್ಟೋಬರ್ 1 ರಿಂದ ನವೆಂಬರ 4 ವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 111.02 ಮೀ.ಮೀ ಬದಲಿಗೆ 221.09 ಮೀ.ಮೀ ಮಳೆ ಆಗಿದೆ. ಅಕ್ಟೋಬರ್ ನಲ್ಲಿ ಮಳೆಯಿಂದಾಗಿ ಎರಡು ಮಾನವ ಜೀವ ಹಾನಿ ಆಗಿದ್ದು, ನಿಯಮಾನುಸಾರ ತಲಾ ರೂ. 5 ಲಕ್ಷದಂತೆ ಒಟ್ಟು ರೂ. 10 ಲಕ್ಷಗಳ ಪರಿಹಾರ ವಿತರಿಸಲಾಗಿದೆ. ಮತ್ತು 6 ದೊಡ್ಡ ಜನುವಾರುಗಳ ಜೀವ ಹಾನಿಯಾಗಿದ್ದು, ರೂ. 2.22 ಲಕ್ಷ ಪರಿಹಾರ ಹಾಗೂ ಮೂರು ಸಣ್ಣ ಜಾನುವಾರುಗಳ ಜೀವ ಹಾನಿ ಆಗಿದ್ದು, ರೂ. 12 ಸಾವಿರ ಪರಿಹಾರ ವಿತರಿಸಲಾಗಿದೆ ಎಂದರು.

ನಿರಂತರ ಮಳೆಯಿಂದಾಗಿ ಅಕ್ಟೋಬರ್ ತಿಂಗಳಿನಲ್ಲಿ ವಿವಿಧ ತಾಲೂಕುಗಳು ಸೇರಿದಂತೆ ಮೂರು ಮನೆಗಳು ಪೂರ್ಣ ಹಾನಿಯಾಗಿವೆ. ಮತ್ತು 482 ಮನೆಗಳು ಭಾಗಶಃ ಹಾನಿಯಾಗಿವೆ. ಈ ಪೈಕಿ 453 ಮನೆಗಳಿಗೆ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಮತ್ತು ಬಾಕಿ ಉಳಿದಿರುವ ಪ್ರಕರಣಗಳ ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ. ಮನೆಗಳಿಗೆ ನೀರು ನುಗ್ಗಿರುವ 264 ಪ್ರಕರಣಗಳಿಗೆ ರೂ. 12.18 ಲಕ್ಷ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಎಚ್.ಎಚ್. ಕುಕನೂರ, ಎಲ್ಲ ತಾಲೂಕುಗಳ ತಹಶೀಲ್ದಾರರು, ತಾಲೂಕಾ ಪಂಚಾಯತ ಇಓ ಗಳು, ಶಾಲಾ ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ ರಾಜ್ ಇಂಜಿನೀಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Reply