ಪ್ರತಿ ತಾಲ್ಲೂಕಿನಲ್ಲಿ 2500 ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಗುರಿ: ಕೆ ಎಚ್ ಮುನಿಯಪ್ಪ

11 months ago

ಬೆಂಗಳೂರು: ಪ್ರತಿ ತಾಲ್ಲೂಕಿನಲ್ಲಿ 2500 ನಿವೇಶನಗಳನ್ನು ಸಿದ್ಧಪಡಿಸಿ, ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಗುರಿಯನ್ನು ಹೊಂದಲಾಗಿದೆ. ಫಲಾನುಭವಿಗಳ ಆಯ್ಕೆ ನಿಷ್ಪಕ್ಷಪಾತವಾಗಿರಲಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಡಳಿತ ಭವನದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆಶ್ರಯ ಯೋಜನೆಯಡಿಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ, ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು. ಈಗಾಗಲೇ ಜಿಲ್ಲೆಯಾದ್ಯಂತ 288 ಎಕರೆ ಸರ್ಕಾರಿ ಜಮೀನು ಗುರುತಿಸಿ ನಿವೇಶನಗಳನ್ನು ಸಿದ್ಧಪಡಿಸಲಾಗಿದೆ. ದೇವನಹಳ್ಳಿ ತಾಲ್ಲೂಕಿನಲ್ಲಿ 62 ಎಕರೆ ಸರ್ಕಾರಿ ಜಮೀನಿನಲ್ಲಿ 557 ನಿವೇಶನಗಳನ್ನು ಸಿದ್ಧಪಡಿಸಲಾಗಿದ್ದು, ನಿವೇಶನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದಷ್ಟು ಬೇಗ 2500 ನಿವೇಶನಗಳನ್ನು ಸಿದ್ಧಪಡಿಸಿ, ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದರು.

ನಿವೇಶನ ಹಂಚಿಕೆಯಲ್ಲಿ ಯಾವುದೇ ಜಾತಿ ಅಥವಾ ಪಕ್ಷವನ್ನು ನೋಡದೆ, ನಿಷ್ಪಕ್ಷಪಾತತೆಯಿಂದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಸ್ಥಳೀಯ ಹಂತದಲ್ಲಿ ಯಾವುದೇ ಸಮಸ್ಯೆ ಇದ್ದರೂ, ಯಾರ ಒತ್ತಡಕ್ಕೂ ಮಣಿಯದೆ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ದೇವನಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ 2500 ಮನೆಗಳನ್ನು ನೀಡುವ ಗುರಿ ಹೊಂದಲಾಗಿದ್ದು, ವಸತಿ ಸಚಿವರಿಂದ ಮಂಜೂರಾತಿ ಲಭಿಸಿದೆ. ಶೀಘ್ರದಲ್ಲೇ ವಸತಿ ರಹಿತ ಅರ್ಹರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೋಡಿ ಮುಕ್ತ ಜಿಲ್ಲೆ ಮಾಡುವ ಉದ್ದೇಶದಿಂದ ಜಾರಿಗೊಳಿಸಿರುವ ಪೋಡಿ ಅಭಿಯಾನದಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಈ ಸಾಧನೆಯನ್ನು ಮುಂದುವರೆಸುವುದು ಅಧಿಕಾರಿಗಳ ಜವಾಬ್ದಾರಿ. ಮೊದಲು ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಬೇಕು. ಕಂದಾಯ ಮತ್ತು ಸರ್ವೆ ಅಧಿಕಾರಿಗಳು ತ್ವರಿತಗತಿಯಲ್ಲಿ ಕೆಲಸ ಮಾಡಬೇಕು ಎಂದರು.

ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ, ಜಾನುವಾರುಗಳಿಗೆ ಮೇವು ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ಕೆಲವು ಪಂಚಾಯಿತಿ ಅಧ್ಯಕ್ಷರ ದೂರಿನ ಪ್ರಕಾರ ಜೆಜೆಎಂ ಕಾಮಗಾರಿಯಿಂದ ಹಾನಿಗೊಂಡಿರುವ ಗ್ರಾಮ ರಸ್ತೆಗಳು ಸಾರ್ವಜನಿಕರಿಗೆ ತೊಂದರೆ ತಂದಿವೆ. ಈ ರಸ್ತೆಗಳನ್ನು ಶೀಘ್ರ ಮುಚ್ಚಬೇಕು. ಕಳೆದ ಸಾಲಿನಲ್ಲಿ ಪ್ರಾರಂಭವಾದ ಕಾಮಗಾರಿಗಳನ್ನು ಕೂಡ ಶೀಘ್ರ ಪೂರ್ತಿಗೊಳಿಸಿ ಎಂದರು.

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಅಧಿಕಾರಿಗಳು ಮತ್ತು ಶಿಕ್ಷಕರು ಶ್ರಮಿಸಬೇಕು. ಶಾಲಾ-ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳಲ್ಲಿ ಮೂಲಭೂತ ಹಾಗೂ ಇತರ ಸಮಸ್ಯೆಗಳಿದ್ದರೆ ಮಾಹಿತಿ ನೀಡಿ ಎಂದರು.

ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಔಷಧಿ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಅಧಿಕಾರಿಗಳಾದ ಎ.ಬಿ. ಬಸವರಾಜು ಜಿಲ್ಲಾಧಿಕಾರಿ,ಡಾ. ಕೆ.ಎನ್. ಅನುರಾಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ,ಟಿ.ಕೆ. ರಮೇಶ್ ಉಪಕಾರ್ಯದರ್ಶಿ,ರಾಮಕೃಷ್ಣಯ್ಯ ಮುಖ್ಯ ಯೋಜನಾಧಿಕಾರಿ, ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ, ಇಒ ಶ್ರೀನಾಥ್ ಗೌಡ, ದೊಡ್ಡಬಳ್ಳಾಪುರ ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್, ಇಒ ಮುನಿರಾಜು ಹಾಗೂ ದೇವನಹಳ್ಳಿ ಕ್ಷೇತ್ರದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಹಲವು ಅಧಿಕಾರಿಗಳು ಹಾಜರಿದ್ದರು.

Leave a Reply