ಗೌರವಾನ್ವಿತ ಸಚಿವ ಎಂ.ಬಿ.ಪಾಟೀಲರಿಗೆ
ಮಾನ್ಯರೇ
ಮೊದಲನೆಯದಾಗಿ: ಶೇ.90 ಪ್ರಮಾಣದ ಗ್ರಾಮಸ್ಥರು ತಮ್ಮ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರೆ ಅದರ ಅರ್ಥ ಕೊಡುವುದಿಲ್ಲ ಅಂತಾನೆ.. ಬೇರೆ ಇನ್ನೇನಿಲ್ಲ…
ನೀವು ಬಲವಂತವಾಗಿ ಕಸಿದುಕೊಳ್ಳಲು ಸಾದ್ಯವಿಲ್ಲ.. ಕಾನೂನಾತ್ಮಕವಾಗಿ ಸಹ…
ತಾತ್ವಿಕವಾಗಿ ಹೇಳಬೇಕೆಂದರೆ ರೈತರ ಭೂಮಿ ನಿಮ್ಮ ಫ್ಯೂಡಲಿಸಂ ನ ಜಹಗೀರು ಅಲ್ಲ..
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಎರಡನೆಯದಾಗಿ: ಬಂಡವಾಳಶಾಹಿಗಳು ಎಲ್ಲಿ ಜಾಗ ಕೇಳುತ್ತಾರೆ ಅಲ್ಲಿ ಕೊಡಬೇಕು ಅಂತ ಹೇಳ್ತೀರಲ್ಲ? ನೀವೇನು ಜನ ಪ್ರತಿನಿಧಿಗಳೋ? ಕಾರ್ಪೋರೇಟ್ ಪ್ರತಿನಿಧಿಗಳೋ?
ಜವಾಬ್ದಾರಿ ಹುದ್ದೆಯಲ್ಲಿರುವ ನಿಮಗೆ ವಿವೇಚನೆ ಬೇಡವೇ?
ಒಂದು ವೇಳೆ ಇವರು ಕೈಗಾರಿಕೆಗಾಗಿ ಲಾಲ್ ಬಾಗ್, ವಿಧಾನ ಸೌಧ, ಕಬ್ಬನ್ ಪಾರ್ಕ್ ಮುಂತಾದವುಗಳನ್ನು ಕೇಳುತ್ತಾರೆ ಕೊಡುವಿರೋ? ಕನಿಷ್ಠ ಸಾಮಾನ್ಯ ತಿಳುವಳಿಕೆ ಬೇಡವೇ? ಎಂತವರೆಲ್ಲಾ ಆಯ್ಕೆಯಾಗಿ ಬರುತ್ತೀರಲ್ಲಾ?
ಮೂರನೆಯದಾಗಿ: ಹೌದು ಕೈಗಾರಿಕೆ ಬೆಳೆಯಬೇಕು, ಉದ್ಯೋಗ ಸೃಷ್ಟಿಯಾಗಬೇಕು. ಎಲ್ಲರೂ ಒಪ್ಪುತ್ತಾರೆ. ಅಗತ್ಯವೂ ಹೌದು. ಆದರೆ ಅದು ಬೆಂಗಳೂರು ಮಾತ್ರ ಯಾಕೆ ಸ್ವಾಮಿ? ರಾಯಚೂರು, ಕಲ್ಬುರ್ಗಿ, ಕೊಪ್ಪಳ, ಚಾಮರಾಜನಗರ, ತುಮಕೂರು, ಬೆಳಗಾವಿ ಮುಂತಾದ ಕಡೆ ಯಾಕಿಲ್ಲ? ಯಾಕೆ ಈ ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆಗೆ ಪೂರಕ ವಾತಾವರಣ ಸೃಷ್ಟಿಸಬಾರದು? ಇದು ವಿಕೇಂದ್ರೀಕರಣವಲ್ಲವೇ? ಇಲ್ಲಿ ಪ್ರಾರಂಭಿಸಿದರೆ ಉದ್ಯೋಗ ಸೃಷ್ಟಿಯಾಗುವುದಿಲ್ಲವೇ?
ಶಿವಮೊಗ್ಗ, ಮಂಗಳೂರು, ಬೆಳಗಾವಿ ಮುಂತಾದ ಜಿಲ್ಲಾ ಕೇಂದ್ರಗಳಲ್ಲಿ ವಿಮಾನ ನಿಲ್ದಾಣಗಳಿವೆ. ನಿಮ್ಮ ಕಾರ್ಪೊರೇಟ್ ನವರಿಗೆ ಬೇಕಾಗಿದ್ದು ಅದೇ ಅಲ್ಲವೇ?
ಕರ್ನಾಟಕ ಎಂದರೆ ಬೆಂಗಳೂರು ಮಾತ್ರವೇ?
ನಾಲ್ಕನೆಯದಾಗಿ: ಕೈಗಾರಿಕೆ ಅಭಿವೃದ್ಧಿ ಅಂದರೆ ಕೇವಲ ಖಾಸಗಿ ಬಂಡವಾಳಿಗರಿಗೆ ಮಾತ್ರ ಉತ್ತೇಜನವೇ? ಅವರಿಗೆ ಮಾತ್ರ ಭರಪೂರ ಅವಕಾಶವೇ? ಯಾಕೆ ಸರ್ಕಾರಿ ಉದ್ಯಮಗಳ, ಕಾರ್ಖಾನೆಗಳ ಅಭಿವೃದ್ಧಿ ಕುರಿತು ಮಾತನಾಡುತ್ತಿಲ್ಲ? ಯಾಕೆ ಸಾರ್ವಜನಿಕ ಕೈಗಾರಿಕೆಯನ್ನು ಬಲಪಡಿಸುತ್ತಿಲ್ಲ? ಯಾಕೆ ಸರ್ಕಾರಿ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿಸುತ್ತಿಲ್ಲ?
ನೀವು ಸರ್ಕಾರದ ಕೈಗಾರಿಕಾ ಸಚಿವರೇ? ಅಥವಾ ಕಾರ್ಪೊರೇಟ್ ಗಳ ಸಚಿವರೇ?
ಸಾರ್ವಜನಿಕ ಉದ್ದಿಮೆಗಳ ಸಬಲೀಕರಣ ನಿಮ್ಮ ಆದ್ಯತೆಯಲ್ಲವೇ?
ಐದನೆಯದಾಗಿ: ನರಸಾಪುರ, ಮಾಲೂರು, ತುಮಕೂರು, ಮೈಸೂರು ಮುಂತಾದ ವಲಯಗಳಲ್ಲಿ ಕೆಐಡಿಬಿ ನೂರಾರು ಎಕರೆ ಭೂಮಿ ಖರೀದಿಸಿದೆ. ಆದರೆ ಎಲ್ಲಿಯೂ ಸಂಪೂರ್ಣ ಪ್ರಮಾಣದಲ್ಲಿ ಕೈಗಾರಿಕೆ ಅಭಿವೃದ್ಧಿ ಆಗಲಿಲ್ಲ.. ಕಾರ್ಖಾನೆಗಳು, ಉದ್ದಿಮೆಗಳು ಪ್ರಾರಂಭವಾಗಲಿಲ್ಲ.. ಬಹುತೇಕ ವಲಯಗಳಲ್ಲಿ ಶೇ.80ರಷ್ಟು ಖಾಲಿ ಜಾಗಗಳಿವೆ. ಈ ವಲಯಗಳಲ್ಲಿ ಉದ್ಯೋಗವೂ ಸೃಷ್ಟಿಯಾಗಲಿಲ್ಲ. ಯಾಕೆ? ಇದರ ಕುರಿತು ನೀವು ಮತ್ತು ನಿಮ್ಮ ಇಲಾಖೆ ಉತ್ತರಿಸಬೇಕಲ್ಲವೇ?
ಈಗಿರುವ ಕೆಐಎಡಿಬಿ ವಲಯಗಳಲ್ಲಿ ಕೈಗಾರಿಕೆ ಶುರು ಮಾಡದ, ಉದ್ಯೋಗ ಸೃಷ್ಟಿಸದ ನೀವು ದೇವನಹಳ್ಳಿಯಲ್ಲಿ ಸೃಷ್ಟಿಸಲು ಸಾಧ್ಯವೇ?
ಯಾರಿಗೆ ವಂಚಿಸುತ್ತಿದ್ದೀರಿ?
ಮುಖ್ಯವಾಗಿ: ಇಡೀ ಭೂ ಸ್ವಾಧೀನದ ಹಿಂದಿನ ಕರಾಮತ್ತೇನು? ಅದರಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದ ಪಾತ್ರವಿಲ್ಲವೇ? ರಾಜಕಾರಣಿಗಳಿಗೆ ಲಂಚದ ಪಾಲಿಲ್ಲವೇ? ಇಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ? ಸಮಗ್ರ ತನಿಖೆ ಮಾಡಿಸುವಿರಾ ಪಾಟೀಲ್ ಜಿ?
ಕಡೆಯದಾಗಿ: ಮಾನ್ಯ ಮುಖ್ಯಮಂತ್ರಿಗಳು ವಿರೋಧ ಪಕ್ಷದಲ್ಲಿದ್ದಾಗ ಒಂದು ನೀತಿ, ಅಧಿಕಾರಕ್ಕೆ ಬಂದಾಗ ಒಂದು ನೀತಿ ಅನುಸರಿಸುತ್ತಾರೆಯೇ? ಉತ್ತರಿಸುವಿರಾ? ಸಮಾಜವಾದ ಆಚರಣೆ ನಿಮಗಿಂತ ಚೆನ್ನಾಗಿ ಮತ್ಯಾರಿಗೆ ಗೊತ್ತು? ಆದರೆ… ಜುಲೈ 4ರ ಸಭೆ ನಿಧಾನ ತಂತ್ರಗಾರಿಕೆ ಅಲ್ಲವೇ?
– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರ




