ಬೆಂಗಳೂರು: ಭಾರತ ದೇಶದ ಕೃಷಿಯನ್ನು ಕಾರ್ಪೋರೆಟ್ ಕಂಪನಿಗಳಿಗೆ ವಹಿಸಿಕೊಡುವ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರಕಾರದ ದೇಶ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ಪ್ರತಿರೋಧಿಸಿ, ಕಳೆದೊಂದು ವರ್ಷಗಳಿಂದ ದೇಶವ್ಯಾಪ್ತಿಯಾಗಿ ಕೋಟ್ಯಾಂತರ ಜನ ಮತ್ತು ಮುಖ್ಯವಾಗಿ ದೆಹಲಿ ಸುತ್ತಲಿನ ಐದು ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿ ಲಕ್ಷಾಂತರ ಜನ ಕಳೆದ 360 ದಿನಗಳಿಂದ ನಿರಂತರವಾಗಿ ನಡೆಸುತ್ತಿದ್ದ ಐತಿಹಾಸಿಕ ಮತ್ತು ಜಾಗತಿಕ ಗಮನ ಸೆಳೆದ ಸಮರಶೀಲ ಪ್ರತಿರೋಧಕ್ಕೆ ಮಣಿದ ಒಕ್ಕೂಟ ಸರಕಾರ, ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆದಿರುವುದಾಗಿ ಪ್ರಕಟಿಸಿದೆ. ಇದು ದೇಶದ ರೈತರು, ಕಾರ್ಮಿಕರು ಹಾಗೂ ನಾಗರೀಕರ ಸಮರಶೀಲ ಹೋರಾಟಕ್ಕೆ ಸಂದ ಜಯ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹೇಳಿದೆ.
ಕೇಂದ್ರದ ನಿರ್ಧಾರದಿಂದ ದೇಶದ ಕೃಷಿಯನ್ನು ಹಾಗೂ ಸ್ವಾವಲಂಬನೆಯನ್ನು ಕಬಳಿಸುವ ಕಾರ್ಪೋರೇಟ್ ಕಂಪನಿಗಳ ಹುನ್ನಾರಕ್ಕೆ ತೀವ್ರ ಹಿನ್ನಡೆಯಾದಂತಾಗಿದೆಯೆಂದು ಕರ್ನಾಟಕ ಪ್ರಾಂತ ರೈತ ಸಂಘ ಹರ್ಷವ್ಯಕ್ತಪಡಿಸಿದೆ. ಅದೇ ರೀತಿ, ಹೋರಾಟದಲ್ಲಿ ತೊಡಗಿದ ಎಲ್ಲರನ್ನು ಅಭಿನಂದಿಸಿದೆ.
ಆದರೆ, ನರೇಂದ್ರ ಮೋದಿಯವರ ಇಂದಿನ ಈ ಪ್ರಕಟಣೆ ಸಂಸತ್ತಿನಲ್ಲಿ ಕ್ರಮವಹಿಸಿ ಖಾತರಿಪಡಿಸುವ ಮೂಲಕ ಮಾತ್ರವೇ ನಿಜವಾಗಲಿದೆ. ಆದ್ದರಿಂದ ನರೇಂದ್ರ ಮೋದಿ ಈ ಕುರಿತು ತ್ವರಿತ ಕ್ರಮವಹಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.
ಕೆಪಿಆರ್‌ಎಸ್ ರಾಜ್ಯ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಒಕ್ಕೂಟ ಸರಕಾರ ಈ ಕಾರ್ಪೊರೇಟ್ ಕೃಷಿಯನ್ನು ದೇಶದ ಮೇಲೆ ಬಲವಂತವಾಗಿ ಹೇರಲು ಹಠಮಾರಿ ನಿಲುವನ್ನು ತಾಳಿದ್ದರಿಂದ, ಹೋರಾಟ ನಿರತ ಸಾವಿರಾರು ರೈತರು ಹೋರಾಟದ ಕಣದಲ್ಲಿಯೇ ಸಾವಿಗೀಡಾಗುವಂತಾಯಿತು. ಲಾಠಿ ಚಾರ್ಜ್, ಟಿಯರ್ ಗ್ಯಾಸ್ ಹಾಗೂ ವಾಟರ್ ಕೆನಾನ್, ಲಖಿಂಪುರದಲ್ಲಿ ವಾಹನಗಳನ್ನು ಹಾಯಿಸಿ ಕೊಲ್ಲುವ ದಾಳಿಗಳನ್ನು, ಗುಂಡಾ ದಾಳಿಗಳನ್ನು ಪೊಲೀಸರ ಹಿಂಸೆಗಳು, ಕೇಸುಗಳನ್ನು ಎದುರಿಸುವಂತಾಯಿತು. ಹೋರಾಟನಿರತರನ್ನು ನಕಲಿ ರೈತರೆಂದು ಅವಾಚ್ಯವಾಗಿ ನಿಂದಿಸಲಾಯಿತು. ಇದಕ್ಕೆಲ್ಲಾ ಬಿಜೆಪಿ ನೇತೃತ್ವದ ಒಕ್ಕೂಟ ಸರಕಾರವೇ ನೇರ ಹೊಣೆಗಾರನಾಗಿದೆಯೆಂದು ಖಂಡಿಸಿದ್ದಾರೆ.
ಕೆಪಿಆರ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ, ಕರ್ನಾಟಕ ಸರಕಾರ ಒಕ್ಕೂಟ ಸರಕಾರದ ಈ ನೀತಿಗಳನ್ನು ಜಾರಿಗೊಳಿಸುವಲ್ಲಿ ತಾನೇ ಮೊದಲಿಗನೆಂದು ಬೀಗಿ, ಕಾರ್ಪೋರೇಟ್ ಕಂಪನಿಗಳಿಗೆ ರಾಜ್ಯದ ಕೃಷಿಯನ್ನು ವಹಿಸುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ (ತಿದ್ದುಪಡಿ) ಕಾಯ್ದೆಗಳನ್ನು ಜಾರಿಗೊಳಿಸಿದೆ. ಇವುಗಳನ್ನು ವಾಪಾಸು ಪಡೆಯುವ ಕುರಿತು ರಾಜ್ಯ ಸರಕಾರ ಮಾತನಾಡದೇ ಈಗಲೂ ಮೌನವಾಗಿರುವುದನ್ನು ಸಂಘ ಬಲವಾಗಿ ಖಂಡಿಸುತ್ತದೆ. ರಾಜ್ಯ ಸರಕಾರ ಒಕ್ಕೂಟ ಸರಕಾರದಂತೆ ಕ್ರಮವಹಿಸಿ, ಈ ಕೃಷಿ ವಿರೋಧಿ ಕಾಯ್ದೆಗಳನ್ನು ತಕ್ಷಣವೇ ವಾಪಾಸು ಪಡೆಯಲೇಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರ ಈ ಕಾಯ್ದೆಗಳನ್ನು ವಾಪಾಸು ಪಡೆಯದೇ, ಒಕ್ಕೂಟ ಸರಕಾರ ವಾಪಾಸು ಪಡೆದರೆ ಪ್ರಯೋಜನ ನಮಗಿಲ್ಲವೆಂದು ರಾಜ್ಯದ ಜನತೆಗೆ ಸ್ಪಷ್ಟಪಡಿಸಿದೆ. ಹೀಗಾಗಿ, ರಾಜ್ಯದ ರೈತರು – ನಾಗರೀಕರು ಹೋರಾಟವನ್ನು ತೀವ್ರಗೊಳಿಸಲು ಕರೆ ನೀಡಿದೆ.
ಒಕ್ಕೂಟ ಸರಕಾರವೂ, ನಮ್ಮ ಹಕ್ಕೊತ್ತಾಯಗಳ ಹಲವು ಅಂಶಗಳನ್ನು ಪರಿಗಣಿಸಿಲ್ಲ. ಮುಖ್ಯವಾಗಿ, ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿ ಪಡಿಸುವ ಕಾಯ್ದೆ ಹಾಗೂ ರೈತರ – ಕೃಷಿಕೂಲಿಕಾರರ ಸಾಲ ಮನ್ನಾ ಮಾಡುವ ಋಣ ಮುಕ್ತ ಕಾಯ್ದೆ ರಚನೆ ಕುರಿತು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ ವಾಪಾಸು ಪಡೆಯುವ ಕುರಿತು ಮೌನವಹಿಸಿದೆ. ಮಾತ್ರವಲ್ಲಾ, ದೇಶದ ಕಾರ್ಮಿಕ ವರ್ಗವನ್ನು ಕಾರ್ಪೋರೆಟ್ ಸುಲಿಗೆಗೊಳಪಡಿಸಿದ ಕಾರ್ಮಿಕ ಸಂಹಿತೆಗಳ ಕುರಿತು ಏನನ್ನು ಮಾತನಾಡಿಲ್ಲ. ಹೀಗಾಗಿ ಈ ಪ್ರಶ್ನೆಗಳಿಗಾಗಿ ಹೋರಾಟ ಮುಂದುವರೆಯಲಿದೆಯೆಂದು ಕರ್ನಾಟಕ ಪ್ರಾಂತ ರೈತ ಸಂಘ ಸ್ಪಷ್ಟಪಡಿಸಿದೆ.
ಜನಪರ ಹಾಗೂ ದೇಶದ ಸ್ವಾವಲಂಬಿ ಹೋರಾಟವನ್ನು ತೀವ್ರಗೊಳಿಸುವಂತೆ ಜನತೆಗೆ ಕರೆ ನೀಡಿದೆ. ತೀವ್ರ ತೆರನಾದ ಮತ್ತು ದೀರ್ಘಕಾಲದ ನಿರಂತರ ಹೋರಾಟಗಳು ಜನತೆಗೆ ಜಯವನ್ನು ತಂದುಕೊಡಲಿವೆಯೆಂಬುದಕ್ಕೆ ಈ ಚಳುವಳಿ ಸಾಕ್ಷಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಹೇಳಿದೆ.




