ಬಸವಣ್ಣನವರ ತತ್ವಗಳಿಗೆ ಮಾರು ಹೋಗಿ ಲಿಂಗಾಯತದಲ್ಲಿ ಲೀನವಾದ ಶೈವ ಪರಂಪರೆಗಳು

10 months ago

ಮಳೆ ಬಂದ್ಹೋದ ಮೇಲೆ.

ಲಿಂಗಾಯತ ಮಠಾಧಿಪತಿಗಳು ಒಂದುಗೂಡಿ ಸಭೆ ಮಾಡಿದಾಗ ಹೆಚ್ಚು ಹೊಟ್ಟೆ ಉರಿಯುವುದು ಪಂಚಪೀಠಾದೀಶ್ವರಿಗೆ. ನಿನ್ನೆ ಧಾರವಾಡದಲ್ಲಿ ನಡೆದ ವಿರಕ್ತ ಮಾಠಧೀಶರ ಸಭೆಯ ಒಗ್ಗಟ್ಟಿನ ಚಿತ್ರಗಳು ಕಣ್ಮುಂದೆ ಬರುತ್ತಿದ್ದಂತೆ ಯುದ್ದಕ್ಕಿಳಿದು ಬಿಟ್ಟಿದ್ದಾರೆ ರಂಭಾಪುರಿ ಪೂಜ್ಯರು. ಮೇಲಾಗಿ ಇವರ ಕೋಪಾಗ್ನಿಗೆ ಮತ್ತಿಷ್ಟು ತುಪ್ಪ ಸುರುವಿದ್ದು ಲಿಂಗಾಯತಕ್ಕೆ ಬಸವಣ್ಣನೆ ಮೂಲ, ಲಿಂಗಾಯತ ಸ್ವತಂತ್ರ ಧರ್ಮ, ವಚನಗಳೆ ನಮ್ಮ ಧರ್ಮಗ್ರಂಥ ಎಂದಾಗ ದೂರ್ವಾಸ ಮುನಿಗಳಾಗಿ ಬಿಟ್ಟಿದ್ದಾರೆ ರಂಭಾಪುರಿ ಶ್ರೀಗಳು.

ಪಂಚಪೀಠದ ಪೀಠಾಧೀಶ್ವರರು ಲಿಂಗಾಯತರೇ ಅಲ್ಲವೆಂದು ಅನೇಕ ಪುರಾವೆಗಳನ್ನು ಒದಗಿಸಿದರೂ ಅವರು ಅದನ್ನು ಒಪ್ಪಿಕೊಳ್ಳದೆ, ಶತಮಾನಗಳಿಂದ ಹೇಳುತ್ತಿರುವ ಸುಳ್ಳನ್ನೇ ಪದೆಪದೆ ಹೇಳಿ, ಸುಳ್ಳಿಗೆ ಸತ್ಯದ ಲೇಬಲ್ ಹಚ್ಚಲು ಪ್ರಯತ್ನಿಸುತ್ತಲೇ ಇರುತ್ತಾರೆ. ಲಿಂಗಾಯತರು ತಮ್ಮ ಸಮಯ ವ್ಯರ್ಥಮಾಡಿಕೊಳ್ಳುತ್ತಲೆ ಇವರಿಗೆ ದಾಖಲೆ ಒದಗಿಸಿ.. ಒದಗಿಸಿ…. ಕೈ ಸೋತು ಹೋದರೂ ಅವರು ತಮ್ಮ ವಾದವನ್ನು ಕೊನೆಗಾಣಿಸುವುದಿಲ್ಲ. ಇರಲಿ.

‘ಲಿಂಗಾಯತ ಚಳುವಳಿ ೨೦೧೭-೧೮’ ಪುಸ್ತಕದಲ್ಲಿ ಇವರ ಸಂಪೂರ್ಣ ಇತಿಹಾಸ ಬಯಲಿಗಿಟ್ಟರೂ ಇನ್ನೂ ಅನೇಕ ದಾಖಲೆಗಳನ್ನು ಸ್ಥಳಾಭಾವದಿಂದ ಕಾಣಿಸಲಾಗಲಿಲ್ಲ. ಅಲ್ಲಿ ದಾಖಲಿಸದೆ ಇರುವ ಕೆಲ ವಿಚಾರ ತಮ್ಮುಂದಿವೆ.

ಬಸವ ಪೂರ್ವದಲ್ಲಿದ್ದ ಕೆಲವು ಶೈವ ಪರಂಪರೆಗಳು ಬಸವಣ್ಣನವರ ತತ್ವಗಳಿಗೆ ಮಾರು ಹೋಗಿ ಬಸವ ಸ್ಥಾಪಿತ ಲಿಂಗಾಯತದಲ್ಲಿ ಲೀನವಾದವು. ಇದು ಸರಳವಾಗಿ  ರಾಜಕೀಯ ಭಾಷೆಯಲ್ಲಿ ಹೇಳುವುದಾದರೆ ಇಂದಿರಾಗಾಂಧಿಯವರ ತುರ್ತು ಪರಸ್ಥಿತಿಯ ನಂತರ ಜನತಾ ಪಕ್ಷದ ಸ್ಥಾಪನೆಯಂತೆ. ಇಂದಿರಾಗಾಂಧಿಯವರನ್ನು ಮಟ್ಟಹಾಕಲು ಸೋಶಷಿಯಲಿಸ್ಟರು, ಜನಸಂಘಿಗಳು, ಸಂಸ್ಥಾ ಕಾಂಗ್ರೆಸ್ಸಿಗರು, ಸಮಾಜವಾದಿಗಳೆಲ್ಲರೂ  ಮತ್ತಿತರ ಸಣ್ಣಪುಟ್ಟ ಪಕ್ಷಗಳೆಲ್ಲವೂ ಸೇರಿಕೊಂಡು ಜನತಾಪಕ್ಷವನ್ನು ಸ್ಥಾಪಿಸಿದಂತೆ ಹನ್ನೆರಡನೆಯ ಶತಮಾನದಲ್ಲಿ ವೈದಿಕರ ಶೋಷಣೆಯ ವಿರುದ್ಧ ಹುಟ್ಟಿಕೊಂಡ ಜನಸಾಮಾನ್ಯರ ಧರ್ಮವೇ ಲಿಂಗಾಯತ ಧರ್ಮ. ಶೈವ ಸಂಪ್ರದಾಯವಾದಿಗಳಾದ ಕಾಪಾಲಿಕರು, ಕಾಳಾಮುಖರು, ನಾಥರು, ಮಹಾವೃತರು, ಲಕುಲೀಶರು ಮತ್ತು ಪಾಶುಪತರು ತಮ್ಮ ಮೂಲವನ್ನು ತೊರೆದು ಲಿಂಗಾಯತ ಧರ್ಮ ಸ್ವೀಕರಿಸಿದರು. ಇವರೊಂದಿಗೆ ಕೆಲ ಜೈನರು, ಕೆಲ ಬೌದ್ಧರು, ಕೆಲವು ಇಸ್ಲಾಂಮಿಗರು ಲಿಂಗಾಯತ ಸಿದ್ಧಾಂತಕ್ಕೆ ಮಾರುಹೋದರು.

ಇವರೆಲ್ಲರೂ ಅನುಭವ ಮಂಟಪಕ್ಕೆ ಬಂದು ತಮ್ಮ ತಮ್ಮ  ವಿಚಾರ ಮಂಡಿಸಿ ಅವುಗಳನ್ನು ಅಲ್ಲಮಪ್ರಭುಗಳ ಸಮಕ್ಷಮದಲ್ಲಿ ಚರ್ಚಿಸಿ ಹೊಸ ಲಿಂಗಾಯತ ಸಿದ್ಧಾಂತಗಳನ್ನು ಪಾಲಿಸುವ ವಚನ ನೀಡಿದರು. (ವಚನ =promise ) ತಾವು ನೀಡಿದ ವಚನಗಳನ್ನು ದಾಖಲಿಸಿದರು.

ನೀವು ಈಗಾಗಲೇ  ತಿಳಿದಿರುವಂತೆ ಇವರು ಕಲ್ಯಾಣದ ಉತ್ತರಕ್ಕಿರುವ ಅಫಗಾನಿಸ್ಥಾನ, ದಕ್ಷಿಣಕ್ಕಿರುವ ಮಧುರೈ, ಪೂರ್ವಕ್ಕಿರುವ ಬೆಂಗಾಲ, ಪಶ್ಚಿಮಕ್ಕಿರುವ ಗುಜರಾತ್ ದೇಶಗಳಿಂದ ಬಂದವರಾಗಿದ್ದರು. ಇವರ್ಯಾರು ಒಂದು ವರ್ಗ, ಒಂದು ವರ್ಣ, ಒಂದು ಲಿಂಗಕ್ಕೆ ಸೀಮಿತರಾದವರಾಗಿರಲಿಲ್ಲ. ಒಂದೇ ಕಾಯಕಕ್ಕೂ ಸೇರಿದವರಾಗಿರಲಿಲ್ಲ. ಇವರೆಲ್ಲರೂ ವಿಭಿನ್ನ ಸಂಸ್ಕ್ರತಿಯ, ವಿಭಿನ್ನ ಕಾಯಕದ ವಿಭಿನ್ನ ವರ್ಗದ, ವಿಭಿನ್ನ ಲಿಂಗದವರಾದರೂ ಇವರೆಲ್ಲರೂ ಒಂದೆ ಬಗೆಯಾಗಿ ಚಿಂತಿಸಿ ಒಂದಾಗಿದ್ದು ಒಂದು ವಿಸ್ಮಯವೆ. ಬಂದವರನ್ನು ‘ಇವನಾರವ ಇವನಾರವ’ ಎನ್ನದೆ ‘ಇಂವ ನಮ್ಮವ’ ಎಂದು ಎಲ್ಲರನ್ನು ಅಪ್ಪಿ ಒಪ್ಪಿಕೊಂಡಿದ್ದು ಬಸವಣ್ಣನವರ ಅಗಾಧ ಶಕ್ತಿ. ಅದೊಂದು ಮಹಾ ಪವಾಡ. ಅವರ ಸಂಘಟನಾ ಶಕ್ತಿ, ಚತುರ ಮುಂದಾಲೋಚನೆ, ಎಲ್ಲರನ್ನು ಹಿಡಿದಿಟ್ಟುಕೊಳ್ಳುವ ನಾಯಕತ್ವದ ಗುಣ ಕೇವಲ ಅತಿ ಮಾನವನಲ್ಲಿ ಮಾತ್ರ ಕಾಣಬಹುದು. ಇಂತಹ ಬಾಹುಳ್ಯದ ಸಂತ ಮಹಾತ್ಮನೆ ಬಸವಣ್ಣ. ಅವನ ಮಹಾನ್ ಶಕ್ತಿಯನ್ನು ಕಂಡು ಅವನನ್ನು ದೈವತ್ವಕ್ಕೇರಿಸಿದರು. ಪುರಾಣಿಕರು ಅವನನ್ನು ಅತಿಮಾನವನ್ನಾಗಿ ಚಿತ್ರಿಸಿ ಅವನಿಂದ ಪವಾಡಗಳನ್ನು ಸೃಷ್ಟಿಸಿದರು. ಆದರೆ ಬಸವಣ್ಣನವರು ಒಬ್ಬ ಚಿಂತಕ, ಒಬ್ಬ ವಿಶಾಲ ಹೃದಯದ ದೈವತ್ವದ ಶಕ್ತಿ ಹೊಂದಿದ ಮಹಾನ್ ಮಾನವ.

ಇವರೆಲ್ಲರಿಗೂ ಸರಳವಾದ ಮಾನವರಲ್ಲಿ ಭೇದ ಮಾಡದ, ಕಾಯಕಕ್ಕೆ ಪ್ರಾಮುಖ್ಯತೆ ನೀಡುವ, ಶುದ್ಧ ಕಾಯಕ ಮಾಡುವ, ಆ ಕಾಯಕದಿಂದ ಬಂದ ಉತ್ಪಾದನೆಯನ್ನು ಸಾಮೂಹಿಕವಾಗಿ  ಹಂಚಿಕೊಂಡು ತಿನ್ನುವ (ದಾಸೋಹ) ಮಹತ್ವವಾದ ತಿರ್ಮಾನ ಮಾಡಿದ್ದರು.  ಶೋಷಣೆಗೆ ಮೂಲವಾದ ಗುಡಿ ಗುಂಡಾರ ಸಂಸ್ಕ್ರತಿಯನ್ನು ತಿರಸ್ಕರಿಸಿ ದೇಹವೆ ದೇವಾಲಯ ಎಂದರು. ಭಕ್ತನೆ ಸತ್ಯ ಶುದ್ಧನಾದರೆ ನೀನೇ ದೇವರಾಗಬಲ್ಲೆ ಎಂದರು. ಒಬ್ಬ ಸೃಷ್ಠಿಕರ್ತನಿರುವುದಾಗಿ  ಒಪ್ಪಿಕೊಂಡು ಅವನಿಗೆ ಶಿವನೆಂದರು. ಶಿವನೊಬ್ಬನೇ ದೇವರೆಂದರು. ದೇವರನ್ನು ಮೂರ್ತಿಯನ್ನಾಗಿಸದೆ, ಅವನಿಗೊಬ್ಬ ಅರ್ಚಕನನ್ನು ನೇಮಿಸದೆ, ಅವನನ್ನು ಮೂರ್ತಿಯನ್ನಾಗಿಸದೆ ಅವನು ಸರ್ವಾಂತರ್ಯಾಮಿ ಎಂದರು. ಅವನನ್ನು ಬಯಲಲ್ಲಿ, ಆಕಾಶದಲ್ಲಿ, ಪರಿಸರದಲ್ಲಿ ನೋಡಿ ಎನ್ನುತ್ತ ಅವನ ವಿಸ್ತಾರವು ಜಗದಗಲ ಮುಗಿಲಗಲ ಮಿಗೆಯಗಲ ಎಂದರು. ಸಾಮಾನ್ಯ ಜನರೆಲ್ಲ ಸೇರಿಕೊಂಡು ಸಾಮಾನ್ಯ ತಿಳುವಳಿಕೆಯ ಸರಳ ಸುಂದರವಾದ ಹೊಸ ಧರ್ಮಕ್ಕೆ ನಾಂದಿ ಹಾಡಿದರು. ಹೊಸ ಧರ್ಮಕ್ಕೆ ಸಂವಿಧಾನ ಇರಲೆಂದರು. ಸಂವಿಧಾನದಲ್ಲಿ ಎಂಟು ಅಷ್ಠಾವರಣ ಐದು ಪಂಚಾಚಾರ ಆರು ಷಟ್ ಸ್ಥಲಗಳು ಬೇಕೆಂದರು.

ಇದನ್ನೆಲ್ಲ ಒಪ್ಪಿಕೊಂಡ ಕೆಲ ಶೈವರು ಕೆಲ ಜೈನರು, ಕೆಲ ಬೌದ್ಧರು, ನಾಥರು, ಪಾಶುಪತರು, ಮಹಾವೃತರು, ಲಕುಲೀಶರು ಹೊಸ ಧರ್ಮವನ್ನು ಸ್ವಿಕರಿಸಿ ಬಸವಣ್ಣ ತಮ್ಮ ನಾಯಕ ಅವನೇ ಧರ್ಮ ಸ್ಥಾಪಕನೆಂದರು. ಅಲ್ಲಮ ಪ್ರಭುದೇವರನ್ನು ಶೂನ್ಯ ಪೀಠಕ್ಕೇರಿಸಿ ಅವನನ್ನು ಮೊದಲ ಪೀಠಾಧ್ಯಕ್ಷನನ್ನಾಗಿ ದ್ವನಿ ಮತದಿಂದ ಚುನಾಯಿಸಿದರು. ಅಂದು ಬಸವಣ್ಣನವರನ್ನು ಒಪ್ಪಿಕೊಂಡು ಅವನೇ ನಮ್ಮ ಧರ್ಮಸ್ಥಾಪಕನೆಂದ ಕಾಳಾಮುಖರು ಮುಂದೆ ೨೦೦ ವರ್ಷಗಳು ತಮ್ಮ ಅಸ್ತಿತ್ವವನ್ನು ಮರೆತು ಲಿಂಗಾಯತರಾದರು. ಆ ಕಾಳಾಮುಖರೇ ನಾವು ಬಸವಣ್ಣನವರಿಗಿಂತ ಪೂರ್ವಜರೆಂದು ಕರೆದುಕೊಳ್ಳುತ್ತಿರುವ ಇಂದಿನ ವೀರಶೈವರೆಂದು ಕೂಗಾಡುತ್ತಿರುವ ಪಂಚಪೀಠಾಧಿಪತಿಗಳು.

ಅಂದು ಬಂದು ಲಿಂಗಾಯತವನ್ನು ಒಪ್ಪಿ ತಮ್ಮ ಮೂಲ ಸಿದ್ಧಾಂತಗಳನ್ನು ತೊರೆದು ಹೊಸ ಸಿದ್ಧಾಂತವನ್ನು ಒಪ್ಪಿಕೊಂಡು ಲಿಂಗಾಯತವು ಹನ್ನೆರಡನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದು ಮೂಲ ಸಿದ್ಧಾಂತಿಗಳು ಅದರಲ್ಲಿ ಲೀನವಾಗಿದ್ದವು. ಇಂದು ವೀರಶೈವರೆಂದು ಕರೆದುಕೊಳ್ಳುತ್ತಿರುವ ಕಾಳಾಮುಖರು ನಿಸ್ಸಂಶಯವಾಗಿ ಪ್ರಾಚೀನರು. ಇವರು ಬಸವ ಪೂರ್ವದಲ್ಲಿದ್ದರು ಎಂಬುದಕ್ಕೆ ಸಾಕಷ್ಟು ಕಲ್ಲು ಶಾಸನಗಳಿವೆ, ತಾಮ್ರ ಪಟಗಳಿವೆ. ವೀರಶೈವರು ತಾವು ಶೈವರೆಂದೂ, ಹಿಂದೂಗಳೆಂದು  ವೇದ ಪುರಾಣಗಳನ್ನು ಒಪ್ಪುವರೆಂದು ಹೇಳಿಕೊಳ್ಳುತ್ತಲೆ ಬಂದಿದ್ದಾರೆ. ಆದರೆ ಇವರೆಂದೂ ತಾವು ಕಾಳಾಮುಖರು ಅಥವಾ ಪಾಶುಪತರೆಂದು ಕಣ್ಮರೆಯಾದ ಶೈವ ಪರಂಪರೆವರೆಂದು  ಹೇಳಿಕೊಂಡಿಲ್ಲ. ಅದಕ್ಕೂ ಕಾರಣಗಳಿವೆ. ಕಾಳಾಮುಖರ ಆಚರಣೆಗಳು ಸಹಜಮಾನವನ ನಾಗರಿಕ ಆಚರಣೆಗಳಾಗಿರಲಿಲ್ಲ. ಆ ಆಚರಣೆಗಳು ಇಂದೂ ಭಾರತದಲ್ಲಿ ಪಳೆಯುಳಿಕೆಗಳಂತಿವೆ.  ಅವುಗಳನ್ನೂ ಓದುಗರು ಸಹ ಕೆಲದಿನಗಳ ಹಿಂದೆ ಜರುಗಿದ ಕುಂಭ ಮೇಳದಲ್ಲಿ ನೋಡಿರುವಿರಿ. ಅಲ್ಲಿ ನಡೆದಿದ್ದೆಲ್ಲವೂ ಕಾಳಾಮುಖ ಆಚರಣೆಗಳೆ. ಇಂತಹ ಆಚರಣೆಗಳು ನಾಗರಿಕ ಸಮಾಜದ ಲಿಂಗಾಯತ ಆಚರಣೆಗಳೆಂದರೆ ಭಕ್ತರು ದೂರ ಮಾಡಿಯಾರೆಂದು ಅವರೆಂದೂ ತಮ್ಮ ಪೂರ್ವಿಕರ ಪುರ್ವಾಪರ ಚರ್ಚಿಸುವುದಿಲ್ಲ. ಮೇಲಾಗಿ ನಾಗರಿಕ ಸಮಾಜದ ಅಮಾಯಕ ಲಿಂಗಾಯತ ಭಕ್ತರು ಅವರನ್ನು ಆರಾಧಿಸುತ್ತಿರುವಾಗ ಅವರೇಕೆ ಅನಾಗರಿಕ ಆಚರಣೆಗಳು ತಮ್ಮದೆಂದಾರು?

ಇಂದಿಗೂ ಪ್ರಸ್ತುತವಿರುವ ವೀರಶೈವ/ಲಿಂಗಾಯತರ ಒಂದು ಆಚರಣೆ ನೀವು ವೀರಭದ್ರ ದೇವರ ಭಕ್ತರಾದ ಪುರವಂತರ ವೇಷದಲ್ಲಿ ನೋಡಿರಬಹುದು. ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಪುರವಂತರ ಸೊಂಟಕ್ಕೆ ಕಟ್ಟಿಕೊಂಡಿರುವ ತಾಮ್ರದ ಮಾನವನ ರುಂಡಿನಾಕಾರದ ಮೂರ್ತಿಗಳನ್ನು ಇಂದೂ ಸಹ ಪುರವಂತನ ವೇಷಧಾರಿ ಕಟ್ಟಿಕೊಂಡಿರುವುದನ್ನು ಕಾಣಬಹುದು. ಅವನು ಕುಣಿಯುವಾಗ ಪಾರ್ವತಿ ಪಿತ ದಕ್ಷನ ಸಂಹಾರ ಮಾಡುವ ವಡಪುಗಳನ್ನು ಹೇಳುವುದನ್ನು  ಕೇಳಿರಬಹುದು. ಇವು ಕಾಳಾಮುಖರ ಆಚರಣೆಗಳು. ವೀರಶೈವರು ಯಜ್ಞ ಯಾಗಾದಿಗಳನ್ನು ಇಂದಿಗೂ ಕಾಪಾಡಿಕೊಂಡು ಮಾಡುತ್ತಲೂ ಇದ್ದಾರೆ. ಪುರವಂತಿಕೆಯಲ್ಲಿ ಕಾಣುವ ಗುಗ್ಗಳವು ಯಜ್ಞ ಕುಂಡದ ರೂಪವೇ ಆಗಿದೆ. ಇನ್ನೊಂದು ಉದಾಹರಣೆಯನ್ನು ಇಲ್ಲಿ ನೀಡಬಹುದು ಉತ್ತರ ಕರ್ನಾಟಕದ ಅನೇಕ ಗ್ರಾಮಗಳಲ್ಲಿ ಇಂದಿಗೂ ಕೆಲ ದೇವಸ್ಥಾನಗಳಲ್ಲಿ ಕೆಂಡ(ಸಿಡಿ ಆಡುವುದು) ತುಳಿಯುವುದನ್ನು ಕಂಡಿರಬಹುದು. ಇದು ಸಹ ಪಾರ್ವತಿಪಿತ ದಕ್ಷನ ಯಜ್ಞವನ್ನು  ದ್ವಂಸ ಮಾಡುವ ಪ್ರತಿರೂಪವೆ ಆಗಿದೆ.

೧೨೫೨ ನಂತರ ಸುಮಾರು ಇನ್ನೂರು ವರ್ಷಗಳಿಗಿಂತ ಹೆಚ್ಚಿನ ಸಮಯದಲ್ಲಿ ಕಾಳಾಮುಖರ ಶಾಸನಗಳಿಲ್ಲ. (ಬಸವಣ್ಣನವರ ಪ್ರಭಾವದ ದಿನಗಳು) ಆದರೆ ೧೪ನೆ ಶತಮಾನದ ನಂತರ ಮತ್ತೆ ಈ ವಿಷಯದ ಶಾಸನಗಳು ಕಾಣಸಿಗುತ್ತವೆ. ಡೆವಿಡ್ ಲಾರೆಂಜನ್ ಎಂಬ ಸಂಶೋಧಕ ಬರೆಯುತ್ತಾರೆ “ಬಸವ ಹಾಗೂ ಅವನ ಜೊತೆಯವರು ಹಿಂದಿನ ಚಳುವಳಿಯ ಬಹಳಷ್ಟು ಸಾಂಸ್ಕೃತಿಕ ಹಾಗೂ ಸಾಮಾಜಿಕ  ಮೌಲ್ಯಗಳಲ್ಲಿ ಕ್ರಾಂತಿಯನ್ನು ಉಂಟುಮಾಡಿದರೆಂಬುದಲ್ಲಿ ಸಂದೇಹವೇ ಇಲ್ಲ. ಲಿಂಗಾಯತವು ಕಾಳಾಮುಖ ಮತದ ಸುಧಾರಣೆಯ ಪರವಾದ ಒಂದು ಪಂಥವನ್ನು ಪ್ರತಿನಿಧಿಸದೆ ಆ ಮತ ವ್ಯವಸ್ಥೆಯನ್ನು ಬುಡಮೇಲು ಮಾಡಿತೆನ್ನಲು ಅಡ್ಡಿಯಿಲ್ಲ. ಮುಂದಿನ ಕಾಲದಲ್ಲಿ ವೀರಶೈವರು ಕಾಳಾಮುಖರಂತಹ ಧಾರ್ಮಿಕ ಹಾಗೂ ಸಾಮಾಜಿಕ ಸಂಪ್ರದಾಯದ ನಿಷ್ಠೆಯತ್ತ ಹಿಂದುರಿಗಿದರೆನ್ನುವುದು ಬೆರೊಂದು ಪ್ರಶ್ನೆಯಾಗಿದೆ” ಎನ್ನುತ್ತಾರೆ. ಇಂತಹ ಅನೇಕ ದಾಖಲೆಗಳನ್ನು ಕೊಡಬಹುದು.

ಮೈಗೆ ಭಸ್ಮ ಧರಿಸಿ, ಬಣ್ಣ ಬಣ್ಣದ ಪೋಷಾಕು ಧರಿಸಿ ಸರ್ವಾಲಂಕಾರಗೊಂಡು ಸಿಂಹಾಸನದ ಮೇಲೆ ಆಸೀನರಾಗಿ ಧರ್ಮಾಧಿಕಾರಿಯಾಗುವುದು ಲಿಂಗಾಯತ ಧರ್ಮದ ಯಾವ ಸಿದ್ಧಾಂತದಲ್ಲಿದೆ? ನೀವೇ ಯೋಚಿಸಿ. “ಬಾಗಿದ ತಲೆ, ಮುಗಿದ ಕೈ” ಲಿಂಗಾಯತದ ಸಿದ್ಧಾಂತ. ಆದರೆ ಶರಣ ಸಂಸ್ಕೃತಿಯನ್ನು ಧಿಕ್ಕರಿಸಿ ಎಲ್ಲರಿಗಿಂತ ಎತ್ತರದ ಆಸನ ಬಯಸುವ, ಯಾವುದೇ ಲಿಂಗಾಯತದ ಆಚರಣೆಗಳನ್ನು ಪಾಲಿಸದ, ಇಷ್ಟಲಿಂಗದ ಒಳಗಡೆ ಸ್ಥಾವರಲಿಂಗವನ್ನು ಮುಚ್ಚಿಟ್ಟು, ಇಷ್ಟಲಿಂಗವನ್ನು ಅಂಗೈಯಲ್ಲಿ ಹಿಡಿದು ಬೆಳ್ಳಿ, ಬಂಗಾರದ ಬಟ್ಟಲುಗಳಿಂದ ಲಿಂಗಾರ್ಚನೆ ಮಾಡುತ್ತ ಶ್ರೀಮಂತಿಕೆ ಪ್ರದರ್ಶನ ಮಾಡುವ ವೀರಶೈವ ಪಂಚಪೀಠಾಧೀಶ್ವರರು ಹೇಗೆ ಲಿಂಗಾಯತರ ಗುರುಗಳಾಗಳಾದಾರು? ಇವರು  ಕಾಳಾಮುಖರ (ವೀರಶೈವರ) ಗುರುಗಳು, ಲಿಂಗಾಯತರ ಗುರುಗಳಲ್ಲವೇ ಅಲ್ಲ.

– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply