ಗಿಲ್ಲಿ ಗೆಲ್ಲಲಿ ಮತ್ತು ಗಿಲ್ಲಿಯಾಗಿಯೇ ನಮ್ಮೆಲ್ಲರ ಮನ ರಂಜಿಸುತ್ತಿರಲಿ

3 months ago

ನನಗೆ ಹಾಸ್ಯ ನಟರು ಇಷ್ಟ. ಹಿಂದಿಯ ಮೆಹಮ್ಮೂದ್, ಅಸ್ರಾನಿ, ಟುನ್ ಟುನ್,ಕೆಸ್ಟೊ ಮುಖರ್ಜಿ, ಜಾನಿವಾಕರ್ ನಿಂದ ಹಿಡಿದು ಜಾನಿ ಲಿವರ್, ರಾಜ್ ಪಾಲ್ ಯಾದವ್.. ಕನ್ನಡದ ನರಸಿಂಹರಾಜು, ಬಾಲಕೃಷ್ಣ, ಮುಸುರಿ ಕೃಷ್ಣಮೂರ್ತಿ ಕಾಶೀನಾಥ್, ರಂಗಾಯಣ ರಘು …. ತಮಿಳಿನ ವಡಿವೇಲು, ಯೋಗಿ ಬಾಬು.. ಎಲ್ಲರೂ ಇಷ್ಟ.

ಚಾರ್ಲಿ ಚಾಪ್ಲಿನ್ ನನ್ನು ಮೀರಿಸಿದ ಹಾಸ್ಯಕಲಾವಿದ ಅವನಿಗಿಂತ ಹಿಂದೆ ಮತ್ತು ನಂತರ ಹುಟ್ಟಿದ್ದಾರೆ ಎಂದು ನನಗೆ ಅನಿಸಿಲ್ಲ. ಆತ ಎಂತಹ ಅಭಿಜಾತ ಕಲಾವಿದನೆಂದರೆ ಅವನ ನಂತರದ ಯಾವ ಹಾಸ್ಯನಟನಿಗೂ ಚಾಪ್ಲಿನ್ ಪ್ರಭಾವದಿಂದ ಹೊರಬರಲಾಗಿಲ್ಲ.

ಒಳ್ಳೆಯ ಹಾಸ್ಯನಟನಾಗದೆ ಪರಿಪೂರ್ಣ ನಟನಾಗಲು ಸಾಧ್ಯವಿಲ್ಲವೇನೋ? ಪ್ರಖ್ಯಾತ ನಟರೆಲ್ಲರೂ ಒಳ್ಳೆಯ ಹಾಸ್ಯನಟರೂ ಹೌದು. ಇದಕ್ಕೆ ಅಮಿತಾಬ್ ಬಚ್ಚನ್, ರಾಜ್ ಕುಮಾರ್, ಕಮಲ್ ಹಾಸನ್ ಮೊದಲಾದವರೇ ನಿದರ್ಶನ.

ಇತ್ತೀಚೆಗೆ ಟಿವಿ ಚಾನೆಲ್ ಗಳಲ್ಲಿ ರಿಯಾಲಿಟಿ ಶೋಗಳು ಶುರುವಾದ ನಂತರ ಹಾಸ್ಯದ ಹೆಸರಲ್ಲಿ ಪೋಲಿ ಜೋಕುಗಳು, ಅಪಹಾಸ್ಯಗಳು ಮೆರೆಯತೊಡಗಿರುವುದು ನಿಜ. ಆದರೆ ಇದರಲ್ಲಿ ಭಾಗವಹಿಸುತ್ತಿರುವ ಹಾಸ್ಯ ಕಲಾವಿದರಲ್ಲಿ ಹೆಚ್ಚಿನವರು ಪ್ರತಿಭಾವಂತರು. ಮೊದಲು ಹೊಟ್ಟೆಪಾಡಿಗೆ, ನಂತರ ದುಡ್ಡಿನ ಆಸೆಗೆ ಮಾಡಬಾರದು ಎಂದು ಅನಿಸಿದ್ದನ್ನೆಲ್ಲ ಅವರು ಮಾಡುತ್ತಿರುವಂತೆ ಕಾಣುತ್ತಿದೆ.

ಇಷ್ಟೆಲ್ಲ ಪೀಠಿಕೆ ಯಾಕೆಂದರೆ…. ಗಿಲ್ಲಿ ನನಗೆ ಇಷ್ಟದ ನಟ. ಆತ ಪ್ರಾರಂಭದಲ್ಲಿ ಮಂಡ್ಯ ಕನ್ನಡದಲ್ಲಿ ಯೂಟ್ಯೂಬ್ ಗೆ ಮಾಡುತ್ತಿದ್ದ ಹಾಸ್ಯದ ವಿಡಿಯೊಗಳು ಚೆನ್ನಾಗಿರುತ್ತಿತ್ತು. ಒಂದೊಂದೇ ಟೇಕ್ ನಲ್ಲಿ ದೀರ್ಘವಾಗಿ ತಡವರಿಸದೆ ಆಡುತ್ತಿದ್ದ ಮಾತುಗಳು, ಅವನ ಭಾವ,ಭಂಗಿ,ನಟನೆ ಅಧ್ಭುತ. ಟಿವಿ ಚಾನೆಲ್ ನಲ್ಲಿಯೂ ಅವನು ಮಾತಿನ ಮೋಡಿಗೆ ಮರುಳಾಗದವರು ಇರಲಾರರು. ಆದರೆ ಬಿಗ್ ಬಾಸ್ ನಲ್ಲಿ ಮಾತ್ರ ಅವನು ಕಳೆದುಹೋಗಿದ್ದ, ಅಲ್ಲಿನ ಅವನ ಪ್ರೇಮಪ್ರಸಂಗ, ಜಗಳ, ಹಠಮಾರಿತನ ಇವೆಲ್ಲವೂ ಅವನಿಗೆ ಒಗ್ಗುವಂತಹದ್ದಲ್ಲ. ಮೂಲತ: ಅವನೊಬ್ಬ ಹಾಸ್ಯ ನಟ.

ಒಂದೊಮ್ಮೆ ಅವನೇನಾದರೂ ಬಿಗ್ ಬಾಸ್ ನಲ್ಲಿ ಗೆದ್ದರೆ  ಗಿಲ್ಲಿ ಹಿಂದಿನ ಹಾಸ್ಯನಟನಾಗಿ ಉಳಿಯುತ್ತಾನೋ ಇಲ್ಲವೋ ಎಂಬ ಸಂದೇಹ ನನಗಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳಾದ ನಂತರ ಅವರು ಬೇರೆ ಜಗತ್ತಿಗೆ ಶಿಫ್ಟ್ ಆಗಿ ಬಿಡುತ್ತಾರೆ. ಸೋನಿ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಪಿಲ್ ಶರ್ಮಾ ಒಬ್ಬ ಅದ್ಭುತ ನಟ, ಈಗ ನೆಟ್ ಫ್ಲಿಕ್ಸ್ ನಲ್ಲಿ ಹಿಂದಿನ ಕಪಿಲ್ ಶರ್ಮಾನನ್ನು ಕಾಣಲಾಗುವುದಿಲ್ಲ. ಈಗ ಅವನೊಬ್ಬ ಸೆಲೆಬ್ರಿಟಿ ಆ್ಯಂಕರ್.

ಗಿಲ್ಲಿ ಗೆಲ್ಲಲಿ ಮತ್ತು ಗಿಲ್ಲಿಯಾಗಿಯೇ ನಮ್ಮೆಲ್ಲರ ಮನ ರಂಜಿಸುತ್ತಿರಲಿ.

ವಿ.ಸೂ: ನಾನು ಬಿಗ್ ಬಾಸ್ ನೋಡುತ್ತಿರುತ್ತೇನೆ, ಯಾಕೆಂದರೆ ಕನ್ನಡದ ಕೆಟ್ಟ ಸೀರಿಯಲ್ ಮತ್ತು ಅದಕ್ಕಿಂತ ಹೆಚ್ಚೇನು ಒಳ್ಳೆಯದಲ್ಲದ ಕನ್ನಡದ ನ್ಯೂಸ್ ಚಾನೆಲ್ ಗಳಿಗಿಂತ ಕನ್ನಡದ ಬಿಗ್ ಬಾಸ್ ಓಕೆ.

– ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು

Leave a Reply