ಪ್ರಿಯ ಡಾ.ರವೀಂದ್ರಗೌಡರಿಗೆ.
ಡಾಕ್ಟ್ರೇ ಹೇಗಿದ್ದೀರಿ? ಇಬ್ಬರೂ ಮಂಡ್ಯದಲ್ಲಿ ಇದ್ದರೂ ಸಹ ಬಹಳ ವರ್ಷಗಳಿಂದ ಪರಸ್ಪರ ಭೇಟಿಯಾಗಲು ಸಾಧ್ಯವಾಗಲಿಲ್ಲ.
- ಮೈಸೂರು ದಸರಾ: ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ
- ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
ನೀವು ರಾಜಕೀಯ ಪ್ರವೇಶ ಮಾಡಿದ ನಂತರ ವೈಯಕ್ತಿಕವಾಗಿ ನನಗೆ ಬೇಸರ ತಂದಿದ್ದು ನಿಜ. ನಾನು ನೀವು ಮಂಡ್ಯದಲ್ಲಿ ಆಸ್ಪತ್ರೆ ತೆರೆದು ಬಡವರ ಸೇವೆಗೆ ಮುಂಚೂಣಿಯಲ್ಲಿರುತ್ತೀರಿ ಎಂದು ನಿರೀಕ್ಷೆ ಮಾಡಿದ್ದೆ. ನನಗೆ ನನ್ನ ಸಾರ್ವಜನಿಕ ಪ್ರವೇಶದ ದಿನಗಳಿಂದಲೂ ರಾಜಕೀಯದ ಬಗ್ಗೆ ಪ್ರೀತಿ ಮತ್ತು ದ್ವೇಷವಿಲ್ಲದ ಭಾವನೆ. ಈ ಕಾರಣದಿಂದ ಮೊದಲಿನಿಂದಲೂ ಒಂದು ಅಂತರ ಕಾಪಾಡಿಕೊಂಡು ಬಂದಿದ್ದೀನಿ.
ನಾನು ಶಿವಮೊಗ್ಗದಲ್ಲಿ ರಾತ್ರಿ ಗೆಳೆಯರ ಮನೆಯಲ್ಲಿ ಊಟ ಮಾಡುತ್ತಿದ್ದಾಗ, ನನ್ನ ಆತ್ಮೀಯ ಗೆಳೆಯ ಹಾಗೂ ನಿವೃತ್ತ ಪ್ತೊಫೆಸರ್ ಒಬ್ಬರು ನೀವು ನನ್ನ ಕುರಿತು ಮಾತನಾಡಿರುವ ವೀಡಿಯೋ ದೃಶ್ಯವನ್ನು ಕಳಿಸಿಕೊಟ್ಟಿದ್ದರು. ಈಗ ಬೆಳಿಗ್ಗೆ ನೋಡಿದೆ.
ಡಾಕ್ಟ್ರೇ, ನಮ್ಮಿಬ್ಬರಲ್ಲೂ ಡಾ.ಸಿ.ಎನ್. ಮಂಜುನಾಥ್ ಬಗ್ಗೆ ಇರುವ ದೃಷ್ಟಿಕೋನ ಒಂದೇ ಆಗಿದೆ. ಅವರು ರಾಜಕೀಯಕ್ಕೆ ಬರುವುದು ಬೇಡ ಎಂದು ನಾನು ಹೇಳಿರುವ ಮಾತನ್ನು ನೀವು ಪ್ರಸ್ತಾಪಿಸಿದ್ದೀರಿ. ಒಳ್ಳೆಯ ವ್ಯಕ್ತಿ ಬರುವುದು ತಪ್ಪಲ್ಲ, ಅವರಿಂದ ಇನ್ನಷ್ಟು ಪರಿಣಾಮಕಾರಿ ಸೇವೆ ಸಲ್ಲಿಸಬಹುದು ಎಂದು ಹೇಳಿದ್ದೀರಿ ನಿಮ್ಮ ಮಾತು ನಿಜ.
ಆದರೆ, ನಿಜಕ್ಕೂ ಅವರ ಸೇವೆಯನ್ನು ಮೋದಿಯಾಗಲಿ, ದೇವೇಗೌಡರಿಗಾಗಲಿ ಬಳಸಿಕೊಳ್ಳುವ ಉದ್ದೇಶ ಇದ್ದರೆ, ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಬಹುದಿತ್ತಲ್ಲವೆ? ಅವರನ್ನು ಕೇಂದ್ರ ಆರೋಗ್ಯ ಸಚಿವರನ್ನಾಗಿ ಮಾಡಿ ಅವರ ಪ್ರತಿಭೆಯನ್ನು ಬಳಸಿಕೊಳ್ಳಬಹುದಿತ್ತಲ್ಲವೆ?
ನನಗೆ ಅವರಂತಹವರು ಈ ರಾಜಕೀಯ ಜಿದ್ದಾಜಿದ್ದಿನಲ್ಲಿ ಹರಕೆಯ ಕುರಿಯಾಗುವುದು ಕಿಂಚಿತ್ತೂ ಇಷ್ಟವಿಲ್ಲ ಇದಷ್ಟೇ ನನ್ನ ಕಾಳಜಿ. ಚುನಾವಣೆಗೆ ನಿಲ್ಲಿಸಿ ಅವರ ವ್ಯಕ್ತಿತ್ವವನ್ನು ಪಣಕ್ಕೊಡ್ಡಿರುವುದು ನಿಜಕ್ಕೂ ಆತಂಕದ ಸಂಗತಿಯಾಗಿದೆ ಡಾಕ್ಟ್ರೇ.
ನೀವೇ ಹೇಳಿರುವ ಹಾಗೆ ಡಿ.ಕೆ.ಸುರೇಶ್ ಮತ್ತು ಮಂಜುನಾಥ್ ಬಗ್ಗೆ ನಿಮ್ಮಲ್ಲಿರುವ ಭಾವನೆಗಳು ನನ್ನ ಭಾವನೆಗಳೂ ಸಹ ಆಗಿವೆ.
ಸುಧಾಮೂರ್ತಿಯವರನ್ನು ರಾಜ್ಯ ಸಭೆಗೆ ನಾಮಕರಣ ಮಾಡಿದ ರೀತಿಯಲ್ಲಿ ಡಾ.ಮಂಜುನಾಥ್ ಅವರನ್ನು ಸಹ ಆಯ್ಕೆ ಮಾಡಿಕೊಳ್ಳಬಹುದಿತ್ತು. ಏಕೆಂದರೆ, ಮಂಜುನಾಥ್ ಅವರದು ಒಬ್ಬ ಶಾಸಕ ಅಥವಾ ಸಂಸದನ ಅರ್ಹತೆ ಮೀರಿದ ವ್ಯಕ್ತಿತ್ವ.
ಸುಧಾಮೂರ್ತಿ ಅವರನ್ನು ಸಾಮಾಜಿಕ ತಾಣಗಳಲ್ಲಿ ಹಲವಾರು ಮಂದಿ ಟೀಕಿಸುವುದನ್ನು ನಾನು ನೋಡಿದ್ದೀನಿ. ಆದರೆ, ಅವರು ಹಾಗೂ ಅವರ ಕಿರಿಯ ಸಹೋದರಿ ಜಯಶ್ರೀ ದೇಶಪಾಂಡೆ ಇಬ್ಬರ ಬಗ್ಗೆ ನನ್ನ ಪ್ರೀತಿ ಮತ್ತು ಗೌರವ ಕಿಂಚಿತ್ತೂ ಕಡಿಮೆಯಾಗಿಲ್ಲ. ಇಬ್ಬರನ್ನೂ ಅಪ್ಪಟ ಹುಬ್ಬಳ್ಳಿ ಭಾಷೆಯಲ್ಲಿ ಅಕ್ಕೋರೇ ಎಂದು ನಾನು ಕರೆಯುವುದು.
ಸಾವಿರಾರು ಕೋಟಿ ರೂಪಾಯಿಗಳ ಒಡತಿಯರಾದ ಈ ಸಹೋದರಿಯರ ಸಾಮಾಜಿಕ ಸೇವೆಯನ್ನು ನಾನು ತೀರಾ ಹತ್ತಿರದಿಂದ ನೋಡಿದವನು. ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿ ನಾನು ಸೇವೆ ಸಲ್ಲಿಸುತ್ತಿದ್ದ ಉದಯ ಟಿ.ವಿ. ಕಚೇರಿ ಇದ್ದ ಕಾರಣ, ಈ ಅಕ್ಕಂದಿರಿಬ್ಬರು ಸಾಮಾನ್ಯ ಮಹಿಳೆಯರಂತೆ ರಸ್ತೆಯಲ್ಲಿ ನಡೆದಾಡುತ್ತಾ, ದುರ್ಗದ ಬೈಲು ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ ತೆಗೆದುಕೊಳ್ಳುವುದು, ಪರಿಚಿತರೊಂದರಿಗೆ ಮಾತಿಗೆ ನಿಲ್ಲುವುದನ್ನು ನಾನು ನೋಡಿದ್ದೀನಿ. ನನಗೆ ಬೆಂಗಳೂರಿನ ಸುಧಾಮೂರ್ತಿಗಿಂತ ಹುಬ್ಬಳ್ಳಿಯಲ್ಲಿ ಸಿಗುವ ಅಕ್ಕೋರು ತುಂಬಾ ಇಷ್ಟ.
ಸುಧಾ ಮೂರ್ತಿ ಅವರ ಆಯ್ಕೆಯಾದಾಗ ನಾನು ಸಂತೋಷಪಟ್ಟೆ. ಏಕೆಂದರೆ, ರಾಜ್ಯಸಭೆಗೆ ನಾಮಕರಣವಾದ ಹಿಂದಿ ಚಿತ್ರತಾರೆ, ರೇಖಾ, ಕ್ರಿಕೆಟ್ ತಾರೆ, ಸಚಿನ್ ತೆಂಡೂಲ್ಕರ್, ಜಯಾ ಬಚ್ಚನ್, ಶತೃಘ್ನ ಸಿನ್ಹಾ, ಕಳೆದ ವರ್ಷ ನಾಮಕರಣವಾದ ಮಾಜಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶ ಗೋಗಯ್ ಇವರುಗಳು ವರ್ಷದಲ್ಲಿ ಒಮ್ಮೆ ಹಾಜರಾದ ಉದಾಹರಣೆಗಳಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಡಾ.ಮಂಜುನಾಥ್ ಅವರನ್ನು ರಾಜಕೀಯ ಕಣಕ್ಕೆ ದೂಡುವುದರ ಬದಲು ನೇರವಾಗಿ ರಾಜ್ಯಸಭೆಗೆ ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲವೆ?
ಇಲ್ಲಿ ನನಗೆ ಎದ್ದು ಕಾಣುವುದು ದೇವೇಗೌಡ ಮತ್ತು ಮೋದಿ ಇವರಿಗೆ ಅವರ ಸೇವೆಯನ್ನು ಬಳಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಅವರ ಜನಪ್ರಿಯತೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಹೊರಟಿರುವ ಪರಿ ನನಗೆ ಅಸಮಾಧಾನವನ್ನು ಉಂಟು ಮಾಡಿದೆ.
ಈ ತಿಂಗಳು ತುಂಬಾ ಬಿಸಿಯಾಗಿದ್ದೀನಿ. ಫೋನ್ ಮಾಡಿ. ಭೇಟಿಯಾಗೋಣ. ನಿಮ್ಮ ಪಾಂಡವಪುರದ ಡಾ.ಲಕ್ಷ್ಮೇಗೌಡರ ಐಶ್ವರ್ಯ ನರ್ಸಿಂಗ್ ಹೋಂ ಸನಿಹದಲ್ಲಿ ನಾನು ಮೈಸೂರಿನಲ್ಲಿ ವಾಸವಾಗಿದ್ದೀನಿ. ಕಳೆದವಾರ ಡಾಕ್ಟರ್ ಬಳಿ ನಿಮ್ಮ ಬಗ್ಗೆ ಪ್ರಸ್ತಾಪಿಸಿ ಮಾತನಾಡುತ್ತಿದ್ದೆ.
ಮನೆಗೆ ಬನ್ನಿ ಊಟ ಮಾಡುತ್ತಾ ಸುದೀರ್ಘವಾಗಿ ಮಾತನಾಡೋಣ.
ಇಂತಿ ಪ್ರೀತಿಯಿಂದ
ಜಗದೀಶ್ ಕೊಪ್ಪ




