ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ವಿರೋಧಿಗಳು ಯಥಾಸ್ಥಿತಿವಾದಿಗಳು

5 years ago

ಅನ್ನಭಾಗ್ಯ ವಿರೋಧಿಸುವವರು ಯಥಾಸ್ಥಿತಿವಾದಿಗಳು. ಅನ್ನಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್ ವಿರೋಧಿಸುವವರು ದೇಶದಲ್ಲಿ ಬಿಟ್ಟಿ ಇಂಟರ್ ನೆಟ್ ಕೊಟ್ಟಾಗ ಏಕೆ ವಿರೋಧಿಸುವುದಿಲ್ಲ? ಅಮೆಜಾನ್ ಮೊದಲಾದ ಆನ್ ಲೈನ್ ಮಾರುಕಟ್ಟೆಯಲ್ಲಿ ಸಿಗುವ ಆಫರ್ ಮತ್ತು ಕ್ರೆಡಿಟ್ ಕಾರ್ಡ್ ಆಫರ್ ಹಾಗೂ ಶಾಪಿಂಗ್ ಮಾಲ್ ಗಳಲ್ಲಿ ಕೊಡುವ ಆಫರ್ ಗಳನ್ನು ಮುಗಿ ಬಿದ್ದು ಮೇಲ್ವರ್ಗದವರೆಲ್ಲ ಬಳಸಿಕೊಳ್ಳುವುದಿಲ್ಲವೇ?

ಹಸಿದವರಿಗೆ ಮಾತ್ರ ಹಸಿವಿನ ಘೋರ ಪರಿಸ್ಥಿತಿ ಅರಿವಾಗುತ್ತದೆ. ಬಿಸಿ ನೀರಿನ ಶವರ್ ಅಡಿ ಸ್ನಾನ ಮಾಡುವವರಿಗೆ ಮಳೆಯ ಅನಾಹುತ ಹೇಗೆ ಅರಿವಾಗಬಲ್ಲದು. ಒಂದು ವೈಯಕ್ತಿಕ ಉದಾಹರಣೆ ಕೊಡುವೆ. ನಾನು 1999ಕ್ಕೆ ನನ್ನ ಊರು ಬಿಟ್ಟೆ. ಪ್ರತಿ ಬಾರಿ ಊರಿಗೆ ಹೋದ ಸಮಯದಲ್ಲಿ ಚಹಾ ಕೊಡಿಸು, ತಿಂಡಿ ಕೊಡಿಸು ಎಂದು ಶೋಷಿತ ಸಮುದಾಯದವರು ತಲೆ ಕೆರೆದು ಮೈಯನ್ನೆಲ್ಲ ಹಿಡಿಯನ್ನಾಗಿಸಿ, ಮನಸನ್ನೆಲ್ಲ ಮುದುಡಿಕೊಂಡು ನಿಲ್ಲುತ್ತಿದ್ದವರನ್ನು ನೋಡಿದ್ದೇನೆ. ಆದರೆ ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ನಂತರ ಜನ ಘನತೆ, ಗೌರವದಿಂದ ಬದುಕಲು ಅವಕಾಶ ಸಿಕ್ಕಿತು.

ಇನ್ನೊಂದು ಸಂಗತಿ. ಅಕ್ಕಿ ಕೊಟ್ಟರೆ ಮುಗಿಯಿತೇ? ಬೇಳೆ, ಬೆಲ್ಲ, ಸಕ್ಕರೆ, ಸೊಪ್ಪು, ಅಡುಗೆ ಎಣ್ಣೆ, ಸಿಲಿಂಡರ್, ಓಡಾಡಲು ಇಂಧನ, ಶಿಕ್ಷಣ, ಆರೋಗ್ಯ ಇತ್ಯಾದಿಗಳ ಹಂಗು ಬಡವರಿಗೆ ಇಲ್ಲವೇ? ಅವರಿಗೆ ಹಬ್ಬಗಳು, ಸಾವು, ನೋವು, ನಲಿವಿಗೆ ಖರ್ಚಿಗೆ ಹಣ ಬೇಕಾಗುವುದಿಲ್ಲವೇ? ಇವಕ್ಕೆಲ್ಲ ಅವರಿಗೆ ಜನಪರ ಕಾರ್ಯಕ್ರಮಗಳ ವಿರೋಧಿಗಳಾದ ನೀವೆಲ್ಲ ಹಣ ಕೊಡುವಿರಾ?

ಬಿಟ್ಟಿ ಇಂಟರ್ ನೆಟ್ ಕೊಟ್ಟದ್ದರಿಂದ ದೇಶದಲ್ಲಿ 5-6 ವರ್ಷಗಳಲ್ಲಿ 1.5 ಲಕ್ಷ ಹೆಣ್ಣುಗಳ ಮೇಲೆ ಅತ್ಯಾಚಾರ ನಡೆದಿದೆ. ಇದಕ್ಕೆ ಯಾರು ಹೊಣೆ? ಬಡವರಿಗೆ ಅಕ್ಕಿ ಕೊಟ್ಟರೆ ಸೋಮಾರಿಗಳಾದರೆ ಟಾಟಾ, ಬಿರ್ಲಾ, ಪ್ರೇಂಜಿ, ಅದಾನಿ, ಅಂಬಾನಿ ಮೊದಲಾದವರು ಯಾಕೆ ಸೋಮಾರಿಗಳಾಗಿಲ್ಲ? ಅವರು ಮನಸು ಮಾಡಿದರೆ ದೇಶವನ್ನೇ ಕೊಂಡುಕೊಳ್ಳಬಲ್ಲಷ್ಟು ಹಣ ಅವರ ಬಳಿ ಇದೆ. ಅವರು ಸೋಮಾರಿಗಳಾಗದೆ ಬಡವರು ಅನ್ನ ಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್ ಯೋಜನೆಯಿಂದ ಸೋಮಾರಿಗಳಾಗುವುದು ಹೇಗೆ?

ಯಥಾಸ್ಥಿತಿವಾದಿಗಳು ಈ ದೇಶದ ಶೇ. 85ರಷ್ಟು ಶೂದ್ರ, ದಲಿತ, ಆದಿವಾಸಿ, ಅಸಂಘಟಿತ, ಮಹಿಳೆಯರು ಭಿಕ್ಷುಕರಾಗಿಯೇ ಇರಬೇಕು, ಹಸಿವಿನಿಂದಲೇ ನರಳಬೇಕು ಎಂದು ಬಯಸುತ್ತಾರೆ. ನೀವು ಯಾರ ಪರ, ಯಾರ ವಿರುದ್ಧ ಎಂಬುದು ನಿಮ್ಮ ಖಂಡನೆ, ಸಮರ್ಥನೆಗಳಿಂದಲೇ ಬಹಿರಂಗವಾಗುತ್ತದೆ.

ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ

Leave a Reply