ಭಾಷಾವಾರು ಪ್ರಾಂತ್ಯಗಳು: ಡಾ.ಬಿ.ಆರ್.ಅಂಬೇಡ್ಕರ್
ಭಾಗ 2
ಭಾಷಾವಾರು ಪ್ರಾಂತ್ಯವಾಗಿ ಮಹಾರಾಷ್ಟ್ರ
ಭಾಷಾವಾರು ಆಯೋಗಕ್ಕೆ ಸಲ್ಲಿಸಿದ ಹೇಳಿಕೆ
ಟಿಪ್ಪಣಿ
ಮಹಾರಾಷ್ಟ್ರವನ್ನು ಭಾಷೆಯ ಆಧಾರದ ಮೇಲೆ ಪುನರ್ನಿಮಿಸುವ ಬಗೆಗೆ ಬೇರೆ ಬೇರೆ ಲೇಖಕರು ಬರೆದ ಅನೇಕ ಪುಸ್ತಕ ಮತ್ತು ಕಿರುಪುಸ್ತಕಗಳಿಂದ ಈ ಜ್ಞಾಪಕ ಪತ್ರದಲ್ಲಿ ಬಳಸಿದ ಅಂಕಿ ಸಂಖ್ಯೆಗಳನ್ನು ತೆಗೆದುಕೊಳ್ಳಲಾಗಿದೆ. ಅದೇ ರೀತಿ, ಇದಕ್ಕೆ ಲಗತ್ತಿಸಿದ ಮಹಾರಾಷ್ಟ್ರದ ನಕಾಶೆ ಸಂಪೂರ್ಣ ಸರಿಯಾಗಿದ್ದೆಂದು ತಿಳಿಯಬೇಕಾಗಿಲ್ಲ. ಇಷ್ಟೆ, ಪುನರ್ನಿರ್ಮಾಣವಾದಾಗ ಪ್ರಾಂತ್ಯ ಹೇಗೆ ಕಾಣುವುದೆಂಬುದರ ಕಲ್ಪನೆ ಕೊಡುವ ಉದ್ದೇಶದಿಂದ ಇದನ್ನು ಲಗತ್ತಿಸಲಾಗಿದೆ.
(2.6.2)
ಭಾಷಾವಾರು ಪ್ರಾಂತ್ಯವಾಗಿ ಮಹಾರಾಷ್ಟ್ರ: ಭಾಗ-೧
ಭಾಷಾವಾರು ಪ್ರಾಂತ್ಯಗಳ ಸಮಸ್ಯೆ
ಭಾಷಾವಾರು ಪ್ರಾಂತ್ಯಗಳ ಸಮಸ್ಯೆ ಪಕ್ಷೀಯ ಪೂರ್ವಗ್ರಹಿತ ಅಭಿಪ್ರಾಯ ಮತ್ತು ಹಿತಾಸಕ್ತಿಗಳಿಂದ ಹುಟ್ಟಿರುವ ವಿವಾದಕ್ಕಷ್ಟೇ ಅಲ್ಲ, ಅವುಗಳ ಒಳ್ಳೆಯ ಅಂಶಗಳ ಬಗೆಗಿರುವ ಭಿನ್ನಾಭಿಪ್ರಾಯಗಳಿಗೂ ಎಡೆಗೊಟ್ಟಿರುತ್ತದೆ. ವಿವಾದದ ಅಂಶಗಳು ನೆರೆಹೊರೆಯ ಪ್ರದೇಶಗಳ ನಡುವಿರುವ ಹಕ್ಕು ಪ್ರತಿಹಕ್ಕುಗಳಿಗೆ ಮತ್ತು ಅವುಗಳನ್ನು ಸೇರಿಸುವುದಕ್ಕೆ ಮಾಡಿದ ಕರಾರುಗಳಿಗೆ ಸಂಬಂಧಿಸಿರುತ್ತವೆ. ಮಹಾರಾಷ್ಟ್ರ ಪ್ರಾಂತ್ಯಕ್ಕೆ ಸಂಬಂಧಿಸಿದ ವಿವಾದವನ್ನು ನಾನು ಆನಂತರ ಪರಿಶೀಲಿಸುವೆ. ಈಗ ಮೊದಲು ಭಾಷಾವಾರು ಪ್ರಾಂತ್ಯಗಳ ರಚನೆಯ ಬಗೆಗೆ ಇರುವ ಸೂಚನೆಯ ಒಳ್ಳೆಯ ಅಂಶಗಳನ್ನು ಪರಿಶೀಲನೆಗೆ ಎತ್ತಿಕೊಳ್ಳುವೆನು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಭಾಷಾವಾರು ಪ್ರಾಂತ್ಯಗಳ ನಿರ್ಮಾಣದ ಬೇಡಿಕೆಯಲ್ಲಿ ಅಡಗಿರುವ ಉದ್ದೇಶಗಳು
೨) ಭಾಷಾವಾರು ಪ್ರಾಂತ್ಯಗಳ ನಿರ್ಮಾಣದ ಬೇಡಿಕೆಯಲ್ಲಿ ಆಡಗಿರುವ ಉದ್ದೇಶವೇನು? ಸಾಮಾನ್ಯವಾಗಿ ಭಾಷಾವಾರು ಪ್ರಾಂತ್ಯಗಳ ರಚನೆ ಆಗಬೇಕೆಂದು ವಾದಿಸುವವರು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಭಾಷೆ ಮತ್ತು ಒಂದೊಂದು ಸಂಸ್ಕೃತಿಯ ಜನರು ಇರುತ್ತಾರೆಂದು ನಂಬಿರುತ್ತಾರೆ. ಆದ್ದರಿಂದ ಅವು ತಮ್ಮ ತಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ಬೆಳೆಸಲು ಸಂಪೂರ್ಣ ಅವಕಾಶ ಪಡೆಯಬೇಕು. ಬೇರೆ ಮಾತಿನಲ್ಲಿ ಹೇಳುವುದಾದರೆ, ಪ್ರಾಂತ್ಯಗಳು ವಿಶಿಷ್ಟ ರಾಷ್ಟ್ರೀಯತೆಯ ಅಂಶಗಳನ್ನು ಹೊಂದಿರುತ್ತವೆ. ರಾಷ್ಟ್ರೀಯತೆಯನ್ನು ಪೂರ್ಣ ಬೆಳೆಸುವುದಕ್ಕೆ ಅವುಗಳಿಗೆ ಸ್ವಾತಂತ್ರ್ಯ ಇರಬೇಕು.
ಭಾಷಾವಾರು ಪ್ರಾಂತ್ಯ ರಚನೆಯಿಂದ ಉದ್ಭವಿಸುವ ತೊಂದರೆಗಳು
೩) ಭಾಷಾವಾರು ಪ್ರಾಂತ್ಯರಚನೆಯ ಸಮಸ್ಯೆಯನ್ನು ಚರ್ಚಿಸುವಾಗ ದ್ವಿವಿಧ ರೀತಿಯ ಭಾವೀ ಭಾರತ ಸರಕಾರದ ಸಂರಚನೆಯನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದಿರುವುದು ಸಂಕುಚಿತ ದೃಷ್ಟಿ ಎನಿಸುವುದು. (ಅ) ಕೇಂದ್ರ ಸರಕಾರ ಮತ್ತು (ಬಿ) ಅನೇಕ ಪ್ರಾಂತೀಯ ಸರಕಾರಗಳು ತಮ್ಮ ತಮ್ಮ ಶಾಸಕಾಂಗದ, ಕಾರ್ಯಾಂಗದ ಮತ್ತು ಆಡಳಿತಾತ್ಮಕ ಕಾರ್ಯಗಳ ನಿರ್ವಹಣೆಯಲ್ಲಿ ಪರಸ್ಪರ ಸಂಬಂಧ ಇಟ್ಟುಕೊಂಡು ಹಾಸುಹೊಕ್ಕಾಗಿರಬೇಕಾಗುತ್ತದೆ. ಆದ್ದರಿಂದ ಭಾಷಾವಾರು ಪ್ರಾಂತ್ಯಗಳ ರಚನೆಗೆ ಒಪ್ಪಿಗೆಕೊಡುವ ಮುನ್ನ (ಪುಟ 117)
ಭಾಷಾವಾರು ಕೇಂದ್ರ ಸರಕಾರದ ಕಾರ್ಯ ನಿರ್ವಹಣೆಯ ಮೇಲೆ ಯಾವ ಪರಿಣಾಮ ಬೀರಬಹುದೆಂಬುದನ್ನು ವಿಚಾರಿಸುವುದು ಅಗತ್ಯವಿರುತ್ತದೆ.
೪) ನಿರೀಕ್ಷಿಸಬಹುದಾದ ಅನೇಕ ಪರಿಣಾಮಗಳಲ್ಲಿ ಕೆಳಗಿನವು ಬಹಳ ಸ್ಪಷ್ಟವಿರುತ್ತವೆ :
೧. ತಮ್ಮ ತಮ್ಮ ಜನಾಂಗದ ಭಾಷೆಯ ಮತ್ತು ಸಾಹಿತ್ಯದ ಬಗೆಗೆ ಅಭಿಮಾನ ಇರುವ ಎಷ್ಟು ಗುಂಪುಗಳಿರುವವೊ ಅಷ್ಟು ರಾಷ್ಟ್ರಗಳು ಹುಟ್ಟುವವು. ಕೇಂದ್ರ ಶಾಸಕಾಂಗವು ಅನೇಕ ರಾಷ್ಟ್ರಗಳ ಒಕ್ಕೂಟವಾಗುವುದು ಮತ್ತು ಕೇಂದ್ರ ಕಾರ್ಯಾಂಗವು ತಮ್ಮ ತಮ್ಮ ಸಂಸ್ಕೃತಿಗಳ ಪ್ರತ್ಯೇಕತೆಯ ಅರಿವಿರುವ ಮತ್ತು ಭಿನ್ನಭಿನ್ನ ಆಸಕ್ತಿಗಳನ್ನು ಹೊಂದಿರುವ ಪ್ರತ್ಯೇಕ ರಾಷ್ಟ್ರಗಳ ಸಂಗಮವಾಗುವುದು. ಅವು ಬಹುಮತ ನಿರ್ಣಯ ಒಪ್ಪದಿರುವಂತಹ ಇಲ್ಲವೆ ಹೊರಗೆ ಹೋಗುವಂತಹ ರಾಜಕೀಯ ಅವಿಧೇಯತೆಯನ್ನು ಬೆಳೆಸಿಕೊಳ್ಳಬಹುದು. ಅಂತಹ ಮನೋಧರ್ಮದ ಬೆಳವಣಿಗೆಯ ಸಾಧ್ಯತೆಯನ್ನು ಒಟ್ಟಿನಲ್ಲಿ ತೆಗೆದುಹಾಕುವಂತಿಲ್ಲ. ಅಂತಹ ಮನೋಧರ್ಮ ಬೆಳೆದದ್ದಾದರೆ ಕೇಂದ್ರ ಸರಕಾರದ ಕಾರ್ಯನಿರ್ವಹಣೆ ಅಸಾಧ್ಯವಾಗುವುದು.
೨. ಭಾಷಾವಾರು ಪ್ರಾಂತ್ಯರಚನೆ ಕೇಂದ್ರ ಮತ್ತು ಪ್ರಾಂತಗಳ ನಡುವೆ ಇರಬೇಕಾದ ಅವಶ್ಯಕ ಆಡಳಿತಾತ್ಮಕ ಸಂಬಂಧಗಳಿಗೆ ಮಾರಕವಾಗುವುದು. ಪ್ರತಿಯೊಂದು ಪ್ರಾಂತ್ಯ ತನ್ನದೇ ಭಾಷೆಯಲ್ಲಿ ವ್ಯವಹರಿಸಹತ್ತಿದ್ದರೆ, ಎಷ್ಟು ಭಾಷಾವಾರು ಪ್ರಾಂತ್ಯಗಳಿವೆಯೊ ಅಷ್ಟು ಭಾಷೆಗಳಲ್ಲಿ ಕೇಂದ್ರ ವ್ಯವಹರಿಸಬೇಕಾಗುತ್ತದೆ. ಇದು ಅಸಾಧ್ಯ ಕೆಲಸ ಎಂದು ಒಪ್ಪಲೇಬೇಕಾಗುತ್ತದೆ. ನ್ಯಾಯಾಂಗದ ಮೇಲೆ ಆಗುವ ಪರಿಣಾಮವನ್ನು ಅಭ್ಯಸಿಸುವುದರಿಂದ ಭಾಷಾವಾರು ಪ್ರಾಂತ್ಯಗಳು ಕೇಂದ್ರ ಸರಕಾರದ ಆಡಳಿತ ಯಂತ್ರದ ಕಾರ್ಯ ನಿರ್ವಹಣೆಯಲ್ಲಿ ಭಾರಿ ಬಿಕ್ಕಟ್ಟನ್ನು ಹುಟ್ಟಿಸುತ್ತವೆ ಎಂಬುದು ತಿಳಿದುಬರುತ್ತದೆ. ಈ ಹೊಸ ವ್ಯವಸ್ಥೆಯಲ್ಲಿ ಪ್ರತಿಯೊಂದು ಪ್ರಾಂತ್ಯ ಒಂದು ಉಚ್ಚ ನ್ಯಾಯಾಲಯವನ್ನು ಮತ್ತು ಅದರ ಕೆಳಗೆ ಅನೇಕ ಕೆಳದರ್ಜೆಯ ನ್ಯಾಯಾಲಯಗಳನ್ನು ಹೊಂದುವುದು. ಅವೆಲ್ಲವುಗಳ ಮೇಲೆ ವರಿಷ್ಠ ನ್ಯಾಯಾಲಯ ಇರುವುದು. ಅದು ಉಚ್ಚನ್ಯಾಯಾಲಯಗಳ ವಿರುದ್ಧ ಹೂಡಿದ ಮೊಕದ್ದಮೆಗಳನ್ನು ನಡೆಸುವ ಹಕ್ಕನ್ನು ಪಡೆದಿರುತ್ತದೆ. ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ಪ್ರತಿಯೊಂದು ಉಚ್ಚನ್ಯಾಯಾಲಯವು ಆಯಾ ಪ್ರಾಂತ್ಯದ ಭಾಷೆಯಲ್ಲಿ ಮೊಕದ್ದಮೆಗಳನ್ನು ನಡೆಸುವುದು. ಉಚ್ಚನ್ಯಾಯಾಲಯದಲ್ಲಾದ ಅನ್ಯಾಯವನ್ನು ಸರಿಪಡಿಸಲು ವರಿಷ್ಠ ನ್ಯಾಯಾಲಯಕ್ಕೆ ಮೊರೆ ಹೊಕ್ಕಾಗ ವರಿಷ್ಠ ನ್ಯಾಯಾಲಯ ಏನು ಮಾಡಬೇಕು? ಆಗ ವರಿಷ್ಠ ನ್ಯಾಯಾಲಯವನ್ನು ಮುಚ್ಚಬೇಕಾಗುತ್ತದೆ. ಎಲ್ಲ ನ್ಯಾಯಾಧೀಶರಿಗೆ ದೇಶದ ಎಲ್ಲ ಭಾಷೆಗಳು ಗೊತ್ತಿರುವುದು ಅಸಾಧ್ಯ. (ಸದ್ಯಕ್ಕೆ ನ್ಯಾಯವಾದಿಗಳ ಸಮಸ್ಯೆಯನ್ನು ಬಿಟ್ಟುಬಿಡುತ್ತೇನೆ.)

ತಲೆಕೆಡಿಸಿಕೊಳ್ಳದೆ ಇಂತಹ ಪರಿಸ್ಥಿತಿಯ ಬಗೆಗೆ ಯೋಚಿಸುವುದು ಯಾರಿಗೂ ಸಾಧ್ಯವಿಲ್ಲ. ಅದು ಭಾರತದ ವಿಭಜನೆಗೆ ದಾರಿಮಾಡಬಹುದು. ಭಾರತವು ಒಂದು ಸಂಯುಕ್ತ ರಾಷ್ಟ್ರ ಆಗುವುದು ಬಿಟ್ಟು ಗೊಂದಲ ಮತ್ತು ಅವ್ಯವಸ್ಥೆಯ ಪರಿಸ್ಥಿತಿ ಎದುರಾಗಿ, ಅದೊಂದು ಮತ್ತೊಂದು ವಿಚ್ಛಿದ್ರ ಯುರೋಪ್ ಆಗುವ ಸಾಧ್ಯತೆ ಇರುತ್ತದೆ.
ಭಾಷಾವಾರು ಪ್ರಾಂತ್ಯಗಳಿಂದಾಗುವ ಲಾಭಗಳು
೫) ಭಾಷಾವಾರು ಪ್ರಾಂತ್ಯರಚನೆಯ ಸೂಚನೆಯು ಭಾರತದ ಐಕ್ಯತೆಗೆ ಧಕ್ಕೆ ತರುವಂತಹ (ಪುಟ 118)
ಸಮಸ್ಯೆಗಳನ್ನು ಸೃಷ್ಟಿಸುತ್ತದೆಂಬುದು ನಿಜವಿದ್ದರೂ, ಭಾಷೆಯ ಆಧಾರದ ಮೇಲೆ ಆಗುವ ಪ್ರಾಂತ್ಯಗಳ ಪುನರ್ನಿಮಾಣದಿಂದ ಕೆಲವು ನಿಶ್ಚಿತ ರಾಜಕೀಯ ಲಾಭಗಳಾಗುತ್ತವೆ ಎಂಬುದರಲ್ಲಿ ಸಂಶಯವಿರುವುದಿಲ್ಲ.
೬) ಭಾಷಾವಾರು ಪ್ರಾಂತ್ಯಗಳ ಯೋಜನೆಯಿಂದ ಆಗುವ ಮುಖ್ಯ ಲಾಭ ಎಂದರೆ-ಪ್ರಜಾಸತ್ತೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಮಿಶ್ರಪ್ರಾಂತ್ಯಗಳಿಗಿಂತ ಭಾಷಾವಾರು ಪ್ರಾಂತ್ಯಗಳು ಹೆಚ್ಚು ಸಹಾಯ ಮಾಡುತ್ತವೆ. ಪ್ರಜಾಸತ್ತೆಗೆ ಅವಶ್ಯ ಇರುವ ಏಕರೂಪತ್ವವನ್ನು ಭಾಷಾವಾರು ಪ್ರಾಂತ ತಯಾರಿಸುತ್ತದೆ. ಒಂದು ಪ್ರಾಂತ್ಯದ ಜನರ ಏಕರೂಪತ್ವವು ಅವರೆಲ್ಲರು ಒಂದೇ ಮೂಲ, ಒಂದೇ ಭಾಷೆ, ಒಂದೇ ಸಾಹಿತ್ಯ, ಒಂದೇ ಐತಿಹಾಸಿಕ ಪರಂಪರೆ, ಒಂದೇ ಬಗೆಯ ಆಚಾರ ವಿಚಾರಗಳನ್ನು ಹೊಂದುವುದನ್ನು ಅವಲಂಬಿಸಿರುತ್ತದೆ. ಇದನ್ನು ಯಾವ ಸಮಾಜಶಾಸ್ತ್ರಜ್ಞನೂ ಅಲ್ಲಗಳೆಯುವಂತಿಲ್ಲ. ಸಾಮಾಜಿಕ ಏಕರೂಪತೆ ಇಲ್ಲದಿರುವುದರಿಂದ ರಾಜ್ಯದಲ್ಲಿ ಅಪಾಯಸ್ಥಿತಿ ಉಂಟಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ, ಪ್ರಜಾಸತ್ತಾತ್ಮಕ ಸಂರಚನೆಯ ಆಧಾರದ ಮೇಲೆ ನಿರ್ಮಿಸಿದ ರಾಜ್ಯದಲ್ಲಿ ಸಮರಸ ಭಾವದ ಜನರು ಇಲ್ಲದ ರಾಜ್ಯದಲ್ಲಿ ಪ್ರಜಾಸತ್ತೆ ಕೆಲಸ ಮಾಡದು ಎಂದು ಇತಿಹಾಸದ ನಿದರ್ಶನ ಇರುತ್ತದೆ. ಸಮಾಜಘಾತುಕರ ಗುಂಪುಗಳಾಗಿ ವಿಂಗಡಿಸಲ್ಪಟ್ಟಂತಹ, ಭಿನ್ನರೂಪದ ಜನರಿದ್ದ ಸಮಾಜದಲ್ಲಿ ಪ್ರಜಾಸತ್ತಾತ್ಮಕ ಆಡಳಿತವು ತಾರತಮ್ಯ (ಸಮಾಜ ಸಮಾಜಗಳ ನಡುವೆ), ಉದಾಸೀನತೆ (ಕೆಲವು ಗುಂಪಿನವರ ಬಗೆಗೆ), ಪಕ್ಷಪಾತ, ತುಳಿತ (ಅಧಿಕಾರದಲ್ಲಿದ್ದ ಗುಂಪಿನವರಿಂದ ಉಳಿದವರ ಆಸಕ್ತಿಗಳ)-ಇಂತಹ ವಿಚ್ಛಿದ್ರಕಾರಕ ಶಕ್ತಿಗಳಿಗೆ ಎಡೆಗೊಡುವುದರಲ್ಲಿ ಸಂಶಯ ಇರುವುದಿಲ್ಲ. ಬಹುರೂಪಿ ಸಮಾಜದಲ್ಲಿ ಪ್ರಜಾಸತ್ತೆ ಏಕೆ ಯಶಸ್ವಿ ಆಗದೆಂದರೆ-ಅಲ್ಲಿ ಅಧಿಕಾರ ನಿಷ್ಪಕ್ಷಪಾತವಾಗಿ, ಅರ್ಹತೆಯ ಆಧಾರದ ಮೇಲೆ ಸರ್ವರ ಕಲ್ಯಾಣಕ್ಕಾಗಿ ಉಪಯೋಗಿಸಲ್ಪಡದೆ, ಒಂದೇ ಗುಂಪಿನ ಏಳ್ಗೆಗಾಗಿ ಮತ್ತು ಉಳಿದ ಗುಂಪಿನ ಅವನತಿಗಾಗಿ ಉಪಯೋಗಿಸಲ್ಪಡುತ್ತದೆ. ಏಕಾಭಿರುಚಿಯ ಜನರಿಂದ ಕೂಡಿದ ಏಕರೂಪ ರಾಜ್ಯವು ಪ್ರಜಾಸತ್ತೆಯ ನಿಜವಾದ ಉದ್ದೇಶ ಸಾಧನೆಗೆ ಶ್ರಮಿಸುವುದು, ಏಕೆಂದರೆ ರಾಜಕೀಯ ಅಧಿಕಾರದ ದುರುಪಯೋಗಕ್ಕೆ ಎದೆಗೊಡುವಂತಹ ಕೃತ್ರಿಮ ಆತಂಕಗಳು ಇಲ್ಲವೆ ಸಾಮಾಜಿಕ ದ್ವೇಷ ಅಲ್ಲಿರುವುದಿಲ್ಲ.

೭) ಮೇಲಿನ ವಿವೇಚನೆಯಿಂದ, ಪ್ರಜಾಸತ್ತೆ ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ, ಸಮಾನ ಅಭಿರುಚಿಯ ಏಕರೂಪ ಗುಂಪುಗಳಾಗಿ ದೇಶದ ಜನರನ್ನು ವಿವಿಧ ರಾಜ್ಯಗಳಲ್ಲಿ ಹಂಚಬೇಕಾಗುತ್ತದೆಂದು ಸಿದ್ಧವಾಗುತ್ತದೆ. ಇದೀಗ ಸಿದ್ಧವಾಗುತ್ತಿರುವ ಭಾರತದ ಸಂವಿಧಾನವು ಪ್ರಜಾಸತ್ತಾತ್ಮಕ ರಾಜ್ಯದ ಸಂವಿಧಾನ ವಿನ್ಯಾಸವನ್ನು ಪಡೆದಿರುತ್ತದೆ. ಅಂದರೆ, ಪ್ರಜಾಸತ್ತೆಯು ಯಶಸ್ವಿ ಆಗಬೇಕಿದ್ದರೆ, ಪ್ರತಿಯೊಂದು ಪ್ರಾಂತ್ಯವು ಸಮರಸ ಭಾವನೆಯ ಜನರಿಂದ ಕೂಡಿರಬೇಕಾಗುತ್ತದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೀಗೆ ಹೇಳಬಹುದು. ಪ್ರಜಾಸತ್ತಾತ್ಮಕ ಸಂವಿಧಾನದ ಚೌಕಟ್ಟಿನಲ್ಲಿ ಹೊಂದಿಕೊಂಡು ಕೆಲಸ ಮಾಡಬೇಕಾದರೆ ಪ್ರತಿಯೊಂದು ಪ್ರಾಂತ್ಯವು ಭಾಷಾವಾರು ಪ್ರಾಂತ್ಯವಾಗಬೇಕಾಗುತ್ತದೆ. ಭಾಷಾವಾರು ಪ್ರಾಂತ್ಯರಚನೆಗೆ ಇದು ಸರಿಯಾದ ಸಮರ್ಥನೆಯಾಗಿದೆ.
ಭಾಷಾವಾರು ಪ್ರಾಂತ್ಯ ರಚನೆಯನ್ನು ಮುಂದೂಡಲು ಶಕ್ಯವೇ?
೮) ಭಾಷಾವಾರು ಪ್ರಾಂತ್ಯ ರಚನೆಯನ್ನು ಮುಂದೂಡಲು ಶಕ್ಯವೇ? ಇದಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ವಿಚಾರಗಳನ್ನು ಆಯೋಗದ ಎದುರು ಇಡಬಯಸುತ್ತೇನೆ: (ಪುಟ 119)
i ಭಾಷಾವಾರು ಪ್ರಾಂತ ರಚನೆಯ ಬೇಡಿಕೆಯಲ್ಲಿ ಹೊಸದೇನೂ ಇರುವುದಿಲ್ಲ. ಈಗಾಗಲೇ ಆರು ಪ್ರಾಂತಗಳು (೧) ಪೂರ್ವ ಪಂಜಾಬ್, (೨) ಸಂಯುಕ್ತ ಪ್ರಾಂತಗಳು, (೩) ಬಿಹಾರ, (೪) ಪಶ್ಚಿಮ ಬಂಗಾಲ, (೫) ಅಸ್ಸಾಮ್ ಮತ್ತು (೬) ಓರಿಸ್ಸಾ-ಭಾಷಾವಾರು ಪ್ರಾಂತಗಳಾಗಿರುತ್ತವೆ. ಭಾಷೆಯ ಆಧಾರದ ಮೇಲೆ ಪುನರ್ನಿಮಾಣ ಆಗಬೇಕೆಂದು ಒತ್ತಾಯಿಸುತ್ತಿರುವ ಪ್ರಾಂತಗಳೆಂದರೆ (೧) ಮುಂಬೈ, (೨) ಮದ್ರಾಸ್ ಮತ್ತು (೩) ಕೇಂದ್ರ ಪ್ರಾಂತಗಳು ಆರು ರಾಜ್ಯಗಳ ನಿರ್ಮಾಣದಲ್ಲಿ ಭಾಷಾವಾರು ತತ್ವವನ್ನು ಅನುಸರಿಸಿರುವಾಗ, ಉಳಿದ ರಾಜ್ಯಗಳು ತಮಗೆ ಅದೇ ತತ್ವವವನ್ನು ಅನ್ವಯಿಸಲು ಕೇಳುತ್ತಿದ್ದಾಗ, ಅವುಗಳನ್ನು ಅನಿರ್ದಿಷ್ಟ ಅವಧಿಯವರೆಗೆ ಕಾಯಿಸುವುದು ಸಾಧು ಎನಿಸದು.
ii. ಭಾಷೆಯ ಆಧಾರದ ಮೇಲೆ ನಿರ್ಮಾಣವಾಗದ ಪ್ರಾಂತಗಳಲ್ಲಿಯ ಪರಿಸ್ಥಿತಿ, ಗಂಡಾಂತರ ಮಟ್ಟ ಮುಟ್ಟದಿದ್ದರೂ, ಅದು ಪ್ರಾಚೀನ ತುರ್ಕ ಸಾಮ್ರಾಜ್ಯ ಇಲ್ಲವೆ ಪ್ರಾಚೀನ ಆಸ್ಟ್ರೊ-ಹಂಗೇರಿಯ ಸಾಮ್ರಾಜ್ಯಗಳಿಗಿಂತ ಭಿನ್ನವಿರುವುದಿಲ್ಲ.
iii. ತುರ್ಕಸಾಮ್ರಾಜ್ಯದ ಇಲ್ಲವೆ ಆಸ್ಟ್ರೊ-ಹಂಗೇರಿಯ ಸಾಮ್ರಾಜ್ಯದ ವಿನಾಶಕ್ಕೆ ಕಾರಣವಾದ ಸ್ಪೋಟಕ ಶಕ್ತಿಯೇ ಭಾಷಾವಾರು ಪ್ರಾಂತ್ಯ ರಚನೆಯ ಬೇಡಿಕೆಯಲ್ಲಿ ಅಡಗಿರುತ್ತದೆ. ಅದು ಸ್ಪೋಟಗೊಳ್ಳುವ ಮಟ್ಟಕ್ಕೆ ಪರಿಸ್ಥಿತಿ ಹೋಗದಂತೆ ಮಾಡುವುದು ಉತ್ತಮ. ಪರಿಸ್ಥಿತಿ ವಿಪರೀತವಾದರೆ ಅದನ್ನು ನಿಯಂತ್ರಿಸುವುದು ಕಠಿಣ.
iv. ಎಲ್ಲಿಯವರೆಗೆ ಪ್ರಾಂತ್ಯಗಳು ಪ್ರಜಾಸತ್ತಾತ್ಮಕ ಸಂವಿಧಾನವನ್ನು ಹೊಂದಿರಲಿಲ್ಲವೊ ಅಥವಾ ಹೊಸ ಸಂವಿಧಾನ ಕೊಡಮಾಡುವ, ವಿಸ್ತೃತ ಸಾರ್ವಭೌಮ ಅಧಿಕಾರಗಳನ್ನು ಹೊಂದಿರಲಿಲ್ಲವೋ ಅಲ್ಲಿಯವರೆಗೆ ಭಾಷಾವಾರು ಪ್ರಾಂತ್ಯ ರಚನೆಯ ಬೇಡಿಕೆ ತುರ್ತಿನದಾಗಿರಲಿಲ್ಲ. ಆದರೆ ಹೊಸ ಸಂವಿಧಾನ ಜಾರಿಯಾದ ಬಳಿಕ, ಈ ಸಮಸ್ಯೆ ತೀವ್ರ ಸ್ವರೂಪ ತಳೆದಿದ್ದು, ಅದರ ಪರಿಹಾರ ತುರ್ತಾಗಿ ಆಗಬೇಕಾಗಿರುತ್ತದೆ.
ಬಿಕ್ಕಟ್ಟುಗಳ ಪರಿಹಾರ
೯) ಸಮಸ್ಯೆ ತುರ್ತಾಗಿ ಬಗೆಹರಿಯಬೇಕಿದ್ದರೆ ಅದಕ್ಕೆ ಪರಿಹಾರ ಏನು? ಈಗಾಗಲೇ ಸೂಚಿಸಿದಂತೆ, ಪರಿಹಾರ ಎರಡು ಕರಾರುಗಳನ್ನು ಪೂರೈಸಬೇಕು. ಭಾಷಾವಾರು ಪ್ರಾಂತ್ಯದ ತತ್ವವನ್ನು ಅಂಗೀಕರಿಸುವಲ್ಲಿ, ಭಾರತದ ಐಕ್ಯತೆಗೆ ಧಕ್ಕೆ ಆಗದಂತೆ ಎಚ್ಚರಿಕೆ ವಹಿಸಬೇಕು. ಆದ್ದರಿಂದ, ನನ್ನ ಪರಿಹಾರವು ಹೀಗಿರುತ್ತದೆ-ಅಂದರೆ, ಭಾಷಾವಾರು ತತ್ವದ ಆಧಾರದ ಮೇಲೆ ಪ್ರಾಂತ್ಯಗಳು ಪುನಃ ನಿರ್ಮಾಣವಾಗಬೇಕೆನ್ನುವ ಬೇಡಿಕೆಯನ್ನು ಅಂಗೀಕರಿಸುವಾಗ, ಕೇಂದ್ರದಲ್ಲಿರುವ ಆಡಳಿತ ಭಾಷೆಯೇ ಎಲ್ಲ ಪ್ರಾಂತ್ಯಗಳ ಆಡಳಿತ ಭಾಷೆ ಆಗಬೇಕೆಂದು ಭಾರತದ ಸಂವಿಧಾನದಲ್ಲಿ ಅವಕಾಶ ಕಲ್ಪಿಸಬೇಕು. ಕೇವಲ ಈ ಭೂಮಿಕೆಯ ಆಧಾರದ ಮೇಲೆ ನಾನು ಭಾಷಾವಾರು ಪ್ರಾಂತ್ಯಗಳ ಬೇಡಿಕೆಯನ್ನು ಅನುಮೋದಿಸುತ್ತೇನೆ.
೧೦) ನನ್ನ ಸಲಹೆ ಈಗ ಜಾರಿಯಲ್ಲಿರುವ ಭಾಷಾವಾರು ಪ್ರಾಂತ್ಯಗಳ ಪರಿಕಲ್ಪನೆಗೆ ವಿರುದ್ಧ ಇರುವುದೆಂಬುದರ ಅರಿವು ನನಗೆ ಇರುತ್ತದೆ. ಅದರ ಪ್ರಕಾರ ಪ್ರಾಂತೀಯ ಭಾಷೆಯೇ ಅದರ ಆಡಳಿತ ಭಾಷೆಯಾಗಿರಬೇಕು. ಭಾಷಾವಾರು ಪ್ರಾಂತ್ಯಗಳಿಗೆ ನನ್ನದೇನೂ ಅಭ್ಯಂತರ ಇರುವುದಿಲ್ಲ. ಆದರೆ ಎಲ್ಲಿ (ಪುಟ 120)
ಪ್ರಾಂತೀಯ ಭಾಷೆ ಕೇಂದ್ರದ ಆಡಳಿತ ಭಾಷೆಗಿಂತ ಭಿನ್ನವಾಗಿದೆಯೊ, ಅಲ್ಲಿ ಪ್ರಾಂತೀಯ ಭಾಷೆಯೇ ಆಡಳಿತ ಭಾಷೆ ಆಗುವುದಕ್ಕೆ ನನ್ನ ಬಲವಾದ ಆಕ್ಷೇಪ ಇರುತ್ತದೆ. ನನ್ನ ಆಕ್ಷೇಪಕ್ಕೆ ಈ ಕೆಳಗಿನ ವಿಚಾರಗಳೇ ಆಧಾರ.
೧. ಭಾಷಾವಾರು ಪ್ರಾಂತ್ಯ ರಚನೆಗೂ, ಅವುಗಳ ಆಡಳಿತ ಭಾಷೆಗೂ ಏನೂ ಸಂಬಂಧ ಇರುವುದಿಲ್ಲ. ಯಾವ ಪ್ರಾಂತ್ಯವು ಸಾಮಾಜಿಕ ರಚನೆ ದೃಷ್ಟಿಯಿಂದ ಏಕರೂಪವಿರುತ್ತದೆಯೊ ಅದುವೇ ನಿಜವಾದ ಭಾಷಾವಾರು ಪ್ರಾಂತ್ಯವೆಂದು ನನಗನಿಸುತ್ತದೆ. ಪ್ರಜಾಸತ್ತಾತ್ಮಕ ಸರಕಾರ ಪೂರೈಸಬೇಕಾದಂತಹ ಸಾಮಾಜಿಕ ಧ್ಯೇಯಗಳನ್ನು ಸಾಧಿಸಲು ಅದು ಹೆಚ್ಚು ಅರ್ಹವಿರುತ್ತದೆ. ನನ್ನ ದೃಷ್ಟಿಯಲ್ಲಿ, ಭಾಷಾವಾರು ಪ್ರಾಂತ್ಯಕ್ಕೂ ಅದರ (ಆಡಳಿತ) ಭಾಷೆಗೂ ಯಾವುದೇ ಸಂಬಂಧ ಇರುವುದಿಲ್ಲ. ಭಾಷಾವಾರು ಪ್ರಾಂತ್ಯಗಳ ಯೋಜನೆಯಲ್ಲಿ ಭಾಷೆ ತಕ್ಕಮಟ್ಟಿಗೆ ಮಹತ್ವದ ಪಾತ್ರ ವಹಿಸುತ್ತದೆ. ಭಾಷೆಯ ಆಧಾರದ ಮೇಲೆ ಪ್ರಾಂತ್ಯರಚನೆ ಆಗುವಲ್ಲಿ, ಅಂದರೆ, ಪ್ರಾಂತ್ಯಗಳ ಮೇರೆಗಳನ್ನು ನಿರ್ಧರಿಸುವುದಕ್ಕಷ್ಟೇ ಅದರ ಪಾತ್ರ ಸೀಮಿತವಾಗಿರುತ್ತದೆ. ಭಾಷಾವಾರು ಪ್ರಾಂತ್ಯಗಳ ಯೋಜನೆಯಲ್ಲಿ ಪ್ರಾಂತೀಯ ಭಾಷೆಯೇ ಆಡಳಿತ ಭಾಷೆ ಆಗಬೇಕೆಂಬ ಕಡ್ಡಾಯ ಇರುವುದಿಲ್ಲ. ಒಂದು ಪ್ರಾಂತ್ಯದ ಸಾಂಸ್ಕೃತಿಕ ಐಕ್ಯತೆ ಉಳಿಸುವುದಕ್ಕೆ, ಪ್ರಾಂತೀಯ ಭಾಷೆಯನ್ನೇ ಅದರ ಆಡಳಿತ ಭಾಷೆಯನ್ನಾಗಿ ಮಾಡುವುದು ಅವಶ್ಯ ಇರುವುದಿಲ್ಲ. ಸಾಂಸ್ಕೃತಿಕ ಐಕ್ಯತೆ ಇದ್ದೇ ಇರುತ್ತದೆ. ಅದನ್ನು ಉಳಿಸುವ ಸಂಗತಿಗಳು ಭಾಷೆಯಷ್ಟೇ ಅಲ್ಲದೆ ಇನ್ನೂ ಅನೇಕ ಇರುತ್ತವೆ. ಅವು ಯಾವುವೆಂದರೆ ಒಂದು ಪ್ರಾಂತ್ಯದ ಜನರೆಲ್ಲರಿಗೂ ಒಂದೇ ಐತಿಹಾಸಿಕ ಸಂಪ್ರದಾಯ, ಒಂದೇ ಸಾಮಾಜಿಕ ರೂಢಿಗಳು ಮುಂತಾದವು. ಸುದೈವದಿಂದ, ಒಂದು ಪ್ರಾಂತ್ಯದಲ್ಲಿ ವಾಸಿಸುವವನು, ಯಾವುದೇ ಭಾಷೆಯನ್ನು ಆಡುತ್ತಿದ್ದರೂ, ಅವನು ಆ ಪ್ರಾಂತೀಯನೇ ಆಗಿರುತ್ತಾನೆ. ಮಹಾರಾಷ್ಟ್ರದಲ್ಲಿ ವಾಸಿಸುವವನು, ಮರಾಠಿ ಭಾಷೆಯನ್ನು ಆಡದಿದ್ದರೂ ಮರಾಠಿಗನಾಗದಿರುವ ಭೀತಿ ಇರುವುದಿಲ್ಲ. ಅದೇ ರೀತಿ, ತಮಿಳು ಪ್ರಾಂತ್ಯದವನಾಗಿರಲಿ, ಆಂಧ್ರಪ್ರಾಂತ್ಯದವನಾಗಿರಲಿ, ಬಂಗಾಲ ಪ್ರಾಂತ್ಯದವನಾಗಿರಲಿ, ಅವನು ಆಡುವ ಭಾಷೆ ಯಾವುದೇ ಇರಲಿ, ಆಂಧ್ರದಲ್ಲಿ ವಾಸಿಸುವವನು ಆಂಧ್ರನು, ತಮಿಳು ನಾಡಿನಲ್ಲಿರುವವನು ತಮಿಳನು, ಬಂಗಾಲದಲ್ಲಿ ವಾಸಿಸುವವನು ಬಂಗಾಲಿಯೂ ಆಗಿರುತ್ತಾನೆ.
೨. ನಿಸ್ಸಂದೇಹವಾಗಿ, ಭಾಷಾವಾರು ಪ್ರಾಂತ್ಯಗಳ ಪರವಾಗಿ ಮುಚ್ಚುಮರೆಯಿಲ್ಲದೆ ಮಾತನಾಡುವವರು, ಭಾಷಾವಾರು ಪ್ರಾಂತ್ಯಗಳನ್ನು ಪ್ರತ್ಯೇಕ ರಾಷ್ಟ್ರಗಳನ್ನಾಗಿ ಮಾಡುವ ಉದ್ದೇಶ ತಮಗಿಲ್ಲ ಎಂದು ಹೇಳುತ್ತಾರೆ. ಅವರ ಪ್ರಾಮಾಣಿಕತೆಯನ್ನು ಶಂಕಿಸುವಂತಿಲ್ಲ. ಆದರೆ ಹೀಗೂ ಆಗುವುದುಂಟು-ಕರ್ತೃಗಳು ಎಂದೂ ಉದ್ದೇಶಿಸದಿದ್ದ ದಿಶೆಯಲ್ಲಿ ಘಟನೆಗಳು ಸಂಭವಿಸುತ್ತವೆ. ಆದ್ದರಿಂದ ಕಾಲಕ್ರಮದಲ್ಲಿ ಘಟನೆಗಳು ಅಹಿತಕರ ತಿರುವು ಪಡೆಯದಂತೆ ಪ್ರಾರಂಭದಲ್ಲಿಯೇ ಜಾಗ್ರತೆವಹಿಸುವುದು ಅವಶ್ಯವಿರುತ್ತದೆ. ಒಂದೆಡೆ ವ್ಯವಸ್ಥೆ ಸಡಿಲಾಗುತ್ತಿದ್ದರೆ. ಇನ್ನೊಂದು ಕಡೆಯಿಂದ ಅದನ್ನು ಬಿಗಿಗೊಳಿಸುವುದರಲ್ಲಿ ತಪ್ಪೇನೂ ಇರುವುದಿಲ್ಲ.
೩. ಪ್ರಾಂತೀಯ ಭಾಷೆ ಅದರ ಆಡಳಿತ ಭಾಷೆಯಾಗುವುದು ಸಹಜ ಎನಿಸಿದರೂ, ಹಾಗೆ ಆಗಗೊಡಬಾರದು. ಭಾಷಾವಾರು ಪ್ರಾಂತ್ಯ ರಚನೆಯಲ್ಲಿ ಯಾವುದೇ ಅಪಾಯ ಇರುವುದಿಲ್ಲ. ಅಪಾಯ ಇರುವುದು ಆಯಾ ಪ್ರಾಂತ್ಯದ ಭಾಷೆಗಳನ್ನೇ ಆಡಳಿತ ಭಾಷೆಗಳನ್ನಾಗಿ ಮಾಡುವುದರಲ್ಲಿ. ಪ್ರಾಂತ್ಯ ಭಾಷೆಗಳನ್ನೇ ಆಡಳಿತ ಭಾಷೆಗಳನ್ನಾಗಿ ಮಾಡುವುದು ಪ್ರಾಂತೀಯ ರಾಷ್ಟ್ರಗಳ ನಿರ್ಮಾಣಕ್ಕೆ ಎಡೆಗೊಡುತ್ತದೆ. ಪ್ರಾಂತ್ಯ ಭಾಷೆಗಳನ್ನು ಆಡಳಿತ ಭಾಷೆಗಳಾಗಿ ಬಳಸುವುದರಿಂದ ಪ್ರಾಂತೀಯ ಸಂಸ್ಕೃತಿಗಳು ಉಳಿದವುಗಳಿಂದ ಪ್ರತ್ಯೇಕಿಸಲ್ಪಟ್ಟು ಪ್ರವಹತೆಯನ್ನು ಕಳೆದುಕೊಂಡು ಗಟ್ಟಿಕಲ್ಲಾಗುವವು. ಹೀಗಾಗಲು ಬಿಡುವುದು ಮಾರಕವಾಗುವುದು. (ಪುಟ 121)
ಹೀಗಾಗಲು ಬಿಡುವುದೆಂದರೆ, ಎಲ್ಲದರಲ್ಲಿಯೂ ಪ್ರತ್ಯೇಕತೆಯನ್ನು ಪಡೆದ ಸ್ವತಂತ್ರ ರಾಷ್ಟ್ರಗಳನ್ನು ನಿರ್ಮಿಸಿದಂತೆಯೇ ಮತ್ತು ಸಂಯುಕ್ತ ಭಾರತದ ವಿನಾಶದ ಬಾಗಿಲು ತೆರೆದಂತೆಯೇ. ಪ್ರಾಂತ್ಯ ಭಾಷೆಗಳು ಆಡಳಿತ ಭಾಷೆಗಳಾಗದಿರುವಂಥ ಭಾಷಾವಾರು ಪ್ರಾಂತ್ಯಗಳ ಸಂಸ್ಕೃತಿಗಳು ಜೀವಂತವಿದ್ದು, ಪ್ರವಾಹಕ ಗುಣವನ್ನು ಹೊಂದಿದ್ದು, ಪರಸ್ಪರ ವಿನಿಮಯ ಅಬಾಧಿತವಾಗಿ ನಡೆದಿರುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಪ್ರಾಂತ್ಯಭಾಷೆಗಳು ಆಯಾ ಪ್ರಾಂತಗಳ ಆಡಳಿತ ಭಾಷೆಗಳಾಗಗೊಡಬಾರದು.
೧೧) ಪ್ರಾಂತ್ಯಭಾಷೆಗಿಂತ ಭಿನ್ನವಾದ, ಅಖಿಲಭಾರತದ ಆಡಳಿತ ಭಾಷೆಯನ್ನು ಭಾಷಾವಾರು, ಪ್ರಾಂತ್ಯದ ಮೇಲೆ ಹೇರುವುದರಿಂದ ಅದರ ಸಂಸ್ಕೃತಿಯನ್ನು ಉಳಿಸಲು ಏನೂ ಆತಂಕವಾಗದು. ಸರಕಾರಿ ವಲಯಗಳಲ್ಲಿ ಮಾತ್ರ ಆಡಳಿತ ಭಾಷೆಯನ್ನು ಬಳಸಲಾಗುವುದು. ಉಳಿದ ಕಡೆಗಳಲ್ಲಿ, ಅಂದರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಾಂತ್ಯ ಭಾಷೆಯನ್ನು ಬಳಸಲು ಮಾರ್ಗ ಇನ್ನೂ ಮುಕ್ತವಿರುತ್ತದೆ. ಆಡಳಿತ ಭಾಷೆ ಮತ್ತು ಆಡಳಿತಕ್ಕೆ ಬಳಸದ ಭಾಷೆಗಳ ನಡುವೆ ಆರೋಗ್ಯಕರ ಸ್ಪರ್ಧೆ ನಡೆಯಬಹುದು. ಒಂದು ಇನ್ನೊಂದನ್ನು ಹೊರಹಾಕಲು ಯತ್ನಿಸಬಹುದು. ಆಡಳಿತ ಭಾಷೆ ಪ್ರಾಂತ್ಯಭಾಷೆಯನ್ನು ಹೊರಹಾಕುವಲ್ಲಿ ಯಶಸ್ವಿಯಾದರೆ, ಅದಕ್ಕಿಂತ ಉತ್ತಮವಾದದ್ದು ಇನ್ನಾವುದೂ ಇಲ್ಲ. ಹಾಗೆ ಆಗದಿದ್ದರೂ ಹೆಚ್ಚು ಅಪಾಯವಿರುವುದಿಲ್ಲ. ಸಹಿಸಲಿಕ್ಕಾಗದಂಥ ಪರಿಸ್ಥಿತಿಯೇನೂ ಉದ್ಭವಿಸದು. ಇಂಗ್ಲಿಷ್ ಆಡಳಿತ ಭಾಷೆಯಾಗಿ, ಪ್ರಾಂತ್ಯ ಭಾಷೆ ಸಂಸ್ಕೃತವಾಗಿರುವಂತಹ ಸದ್ಯದ ಪರಿಸ್ಥಿತಿಗಿಂತ ಇದೇನೂ ಹೆಚ್ಚು ಅಸಹನೀಯ ಆಗುವುದಿಲ್ಲ. ವ್ಯತ್ಯಾಸ ಇಷ್ಟೆ. ಇಂಗ್ಲಿಷ್ ಬದಲು ಬೇರೊಂದು ಭಾಷೆ ಆಡಳಿತ ಭಾಷೆ ಆಗುವುದು.
ತೃಪ್ತಿಕರ ಪರಿಹಾರಕ್ಕೆ ಬೇಕಾದ ಅಗತ್ಯತೆಗಳು
೧೨) ನಾನು ಸೂಚಿಸುವ ಪರಿಹಾರ ಆದರ್ಶ ಪರಿಹಾರ ಆಗಲಿಕ್ಕಿಲ್ಲ ಎಂಬುದರ ಅರಿವು ನನಗಿರುತ್ತದೆ. ಅದರಿಂದ ಪ್ರಾಂತ್ಯಗಳಲ್ಲಿ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಸಂವಿಧಾನದ ಕಾರ್ಯನಿರ್ವಹಣೆ ಸಾಧ್ಯವಾಗುತ್ತದೆ. ಆದರೆ ಅದು ಕೇಂದ್ರದಲ್ಲಿ ಸಾಧ್ಯವಾಗುವುದಿಲ್ಲ. ಏಕೆಂದರೆ, ಕೇವಲ ಭಾಷಾವಾರು ಐಕ್ಯ-ಒಂದೇ ಭಾಷೆ ಆಡುವ ಸೌಲಭ್ಯದಿಂದ ಏಕರೂಪತೆ ಹುಟ್ಟುವುದೆಂಬ ಭರವಸೆ ಇರುವುದಿಲ್ಲ. ಅದಕ್ಕೆ ಭಾಷೆಯಿಲ್ಲದೆ ಬೇರೆ ಅನೇಕ ವಿಷಯಗಳ ಅವಶ್ಯಕತೆ ಇರುತ್ತದೆ. ಈ ಮೊದಲು ಹೇಳಿದಂತೆ, ಪ್ರಾಂತಗಳಿಂದ ಕೇಂದ್ರ ಶಾಸನ ಸಭೆಗೆ ಆಯ್ಕೆಯಾದ ಸದಸ್ಯರು ತಮ್ಮ ಪ್ರಾಂತೀಯತೆಯನ್ನು ಕಾಯ್ದುಕೊಂಡಿರುತ್ತಾರೆ. ಬಂಗಾಲಿಗಳು, ತಮಿಳರು, ಆಂಧ್ರರು, ಮಹಾರಾಷ್ಟ್ರೀಯರು, ಕಚೇರಿಗಳಲ್ಲಿ ತಮ್ಮ ಮಾತೃಭಾಷೆಯನ್ನಾಡದೆ ಕೇಂದ್ರದ ಆಡಳಿತ ಭಾಷೆಯನ್ನು ಆಡುತ್ತಿದ್ದರೂ, ಬಂಗಾಲಿಗಳು ಬಂಗಾಲಿಗಳಾಗಿ, ತಮಿಳರು ತಮಿಳರಾಗಿ, ಆಂಧ್ರರು ಆಂಧ್ರರಾಗಿ, ಮಹಾರಾಷ್ಟ್ರೀಯರು ಮಹಾರಾಷ್ಟ್ರೀಯರಾಗಿಯೇ ಇರುತ್ತಾರೆ. ಆದರೆ ಕೂಡಲೇ ಕಾರ್ಯರೂಪಕ್ಕಿಳಿಸುವಂತಹ ಆದರ್ಶ ಪರಿಹಾರ ನನಗೆ ತೋಚುತ್ತಿಲ್ಲ. ಅದಕ್ಕೂ ಸ್ವಲ್ಪ ಕಡಿಮೆ ಮಟ್ಟದ ಪರಿಹಾರದಿಂದ ತುಷ್ಟರಾಗಬೇಕು. ನಾವು ಕಂಡುಹಿಡಿಯುವ ಯಾವುದೇ ಪರಿಹಾರ ಎರಡು ಕರಾರುಗಳನ್ನು ಪೂರೈಸಬೇಕಾಗುತ್ತದೆ : (೧) ಅದು ಆದರ್ಶ ಪರಿಹಾರವಲ್ಲದಿದ್ದರೂ, ಆದರ್ಶಕ್ಕಿಂತ ಸ್ವಲ್ಪ ಕಡಿಮೆ ಇರಬೇಕು (೨) ಅದು ಆದರ್ಶ ಪರಿಹಾರವಾಗಿ ಬೆಳೆಯಲು ಶಕ್ಯವಿರಬೇಕು. ಈ ಎಲ್ಲ ಸಂಗತಿಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ನಿರ್ಣಯಿಸಿದ್ದಾದರೆ, ನಾನು ಸೂಚಿಸಿದ ಪರಿಹಾರ ಈ ಎರಡೂ ಕರಾರುಗಳನ್ನು ಪೂರೈಸುವುದೆಂದು ಧೈರ್ಯವಾಗಿ ಹೇಳಬಲ್ಲೆ. (ಪುಟ 122)
ಭಾಗ-೨
ಮಹಾರಾಷ್ಟ್ರ ಸ್ವಾವಲಂಬಿ ಪ್ರಾಂತ್ಯವಾಗುವುದೆ? ಸ್ವಾಲಂಬನದ ಪರೀಕ್ಷೆಗಳು
೧೩) ಮಹಾರಾಷ್ಟ್ರ ಪ್ರಾಂತ್ಯ ರಚನೆಯ ಪ್ರಶ್ನೆಯನ್ನು ಚರ್ಚಿಸುವಾಗ ಅದು ಸ್ವಾವಲಂಬಿಯಾದ ಪ್ರಾಂತ್ಯವಾಗಬಲ್ಲದೇ ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದು ಅವಶ್ಯ. ಆರ್ಥಿಕವಾಗಿ ಸ್ವತಂತ್ರ ಪ್ರಾಂತ್ಯವೆಂದು ಘೋಷಿಸಲು ಅದು ಕೆಲವು ಕರಾರುಗಳನ್ನು ಪೂರೈಸಬೇಕಾಗುತ್ತದೆ. ಅದು ನಿಶ್ಚಿತ ಪ್ರಮಾಣದ ವಿಸ್ತಾರ, ಜನಸಂಖ್ಯೆ ಮತ್ತು ಜನಸಂಖ್ಯೆಗೆ ಸರಿಸಮವಾದ ಆದಾಯವನ್ನು ಪಡೆಯಬೇಕಾಗುತ್ತದೆ. ಒಂದು ಪ್ರಾಂತ್ಯವು ಕನಿಷ್ಠ ಮಟ್ಟದ ಜೀವನ ಸೌಲಭ್ಯಗಳನ್ನು ಒದಗಿಸುವಷ್ಟು ಸ್ವಾವಲಂಬಿಯಾಗಿದ್ದರೆ ಸಾಲದು. ಅದು ನಿರ್ದಿಷ್ಟ ಮಟ್ಟದ ಆಡಳಿತ ಸುವ್ಯವಸ್ಥೆಯನ್ನು ಮತ್ತು ಸಾಮಾಜಿಕ ಕ್ಷೇಮವನ್ನು ಒದಗಿಸಲು ಬೇಕಾದ ಆದಾಯವನ್ನು ಹೊಂದಿರಬೇಕಾಗುತ್ತದೆ.
ಮಹಾರಾಷ್ಟ್ರ ಆರ್ಥಿಕವಾಗಿ ಸ್ವಾವಲಂಬಿಯೇ?
೧೪) ಮಹಾರಾಷ್ಟ್ರ ಪ್ರಾಂತ್ಯವು ಈ ಎಲ್ಲಾ ಕರಾರುಗಳನ್ನು ಪೂರೈಸುತ್ತದೆಯೇ ಕೆಳಗಿನ ಅಂಕಿಸಂಖ್ಯೆಗಳು ಭಾಷೆಯ ಆಧಾರದ ಮೇಲೆ ನಿರ್ಮಿಸಿದ ಮಹಾರಾಷ್ಟ್ರ ಪ್ರಾಂತ್ಯದ ವಿಸ್ತಾರ ಮತ್ತು ಜನಸಂಖ್ಯೆಯನ್ನು ಸೂಚಿಸುತ್ತವೆ : ( ಪುಟ 123)

ಮಹಾರಾಷ್ಟ್ರದ ವಿಸ್ತಾರ ಮತ್ತು ಜನಸಂಖ್ಯೆ
೧೫) ಮೇಲಿನ ಪಟ್ಟಿ ಎರಡು ತರಹದ ಅಂಕಿಗಳನ್ನು ಕೊಡುತ್ತದೆ :
(೧) ಚಿಕ್ಕಗಾತ್ರದಲ್ಲಿ ಮತ್ತು (೨) ಪೂರ್ಣ ಆಕಾರದಲ್ಲಿ, ಪೂರ್ಣ ಆಕಾರದ ಅಂಕಿಸಂಖ್ಯೆಯ ಪ್ರಕಾರ, ಮರಾಠಿ ಭಾಷಿಕರನ್ನೆಲ್ಲ ಒಂದೇ ಪ್ರಾಂತದಲ್ಲಿ ಸೇರಿಸಿದರೆ, ಅದರ ಒಟ್ಟು ವಿಸ್ತಾರ ೧,೩೩,೪೬೬ ಚದರ ಮೈಲು ಮತ್ತು ಅದರ ಜನಸಂಖ್ಯೆ ೨,೧೫,೮೫,೭೦೦ ಆಗುವುದು. ಚಿಕ್ಕ ಗಾತ್ರದ ಅಂಕಿಸಂಖ್ಯೆಯ ಪ್ರಕಾರ, ಅಂದರೆ, ಬೇರೆ ಸಂಸ್ಥಾನಗಳಲ್ಲಿ ಸೇರಿರುವ ಮರಾಠಿಭಾಷಿಕರನ್ನು ಬಿಟ್ಟು ಆಗುವ ಮಹಾರಾಷ್ಟ್ರದ ವಿಸ್ತಾರ ೮೪,೧೫೧ ಚದರ ಮೈಲು ಮತ್ತು ಜನಸಂಖ್ಯೆ ೧,೫೪,೩೩,೪೦೦ ಆಗುವುದು.
ಮಹಾರಾಷ್ಟ್ರದ ಆದಾಯ
೧೬) ಸದ್ಯದ ತೆರಿಗೆ ಮಾನದ ಪ್ರಕಾರ ಅವಿಸ್ತೃತ ಮಹಾರಾಷ್ಟ್ರದ ವಾರ್ಷಿಕ ಆದಾಯ ಸುಮಾರು ರೂ. ೨೫,೬೧,೫೧,೦೦೦ ಎಂದು ಅಂದಾಜು ಮಾಡಲಾಗಿದೆ.
ಉಳಿದ ಪ್ರಾಂತಗಳೊಂದಿಗೆ ಮಹಾರಾಷ್ಟ್ರದ ತುಲನೆ
೧೭) ಇಷ್ಟು ವಿಸ್ತಾರ, ಜನಸಂಖ್ಯೆ ಮತ್ತು ಆದಾಯ ಹೊಂದಿರುವ ಮಹಾರಾಷ್ಟ್ರ ಸ್ವಾವಲಂಬಿ ಪ್ರಾಂತ ಆಗಬಲ್ಲದೇ ಎಂಬುದನ್ನು ತಿಳಿದುಕೊಳ್ಳಲು ಬೇರೆ ದೇಶಗಳೊಂದಿಗೆ ಹೋಲಿಸಿ ನೋಡುವುದು ಅವಶ್ಯವಿರುತ್ತದೆ. ಅಮೇರಿಕೆಯ ಸಂಯುಕ್ತ ಸಂಸ್ಥಾನದಲ್ಲಿರುವ ಪ್ರಥಮ (ಅತಿ ದೊಡ್ಡ) ಮತ್ತು ನಾಲ್ವತ್ತೇಳನೆಯ (ಅತಿಸಣ್ಣ) ಪ್ರಾಂತಗಳ ಅಂಕಿಗಳನ್ನು ಅವುಗಳ ವಿಸ್ತಾರ ಮತ್ತು ಜನಸಂಖ್ಯೆ ಕ್ರಮದಲ್ಲಿ ಇಲ್ಲಿ ಕೊಟ್ಟಿರುತ್ತೇನೆ.

೧೮) ಅವಿಸ್ಕೃತ ಮಹಾರಾಷ್ಟ್ರವನ್ನಾಗಲಿ ಪೂರ್ಣ ಮಹಾರಾಷ್ಟ್ರವನ್ನಾಗಲಿ ತುಲನೆಗೆ ತೆಗೆದುಕೊಂಡರೆ, ಅದು ಅಮೇರಿಕೆಯ ಸಂಯುಕ್ತ ಸಂಸ್ಥಾನಗಳ ಯಾವುದೇ ರಾಜ್ಯಕ್ಕಿಂತ-ವಿಸ್ತೀರ್ಣದಲ್ಲಿ ಅತಿ ಚಿಕ್ಕದಾಗಿರುವ ಡೆಲವೇರಿಗಿಂತಲೂ ಮತ್ತು ಜನಸಂಖ್ಯೆಯಲ್ಲಿ ಅತಿ ದೊಡ್ಡದಾಗಿರುವ ನ್ಯೂಯಾರ್ಕಿಗಿಂತಲೂ-ಎಷ್ಟೋ ಪಟ್ಟು ದೊಡ್ಡದಿರುತ್ತದೆಂದು ತಿಳಿದುಬರುತ್ತದೆ. (ಪುಟ 124)
೧೯) ಸದ್ಯಕ್ಕೆ ಅಸ್ತಿತ್ವದಲ್ಲಿರುವ ಭಾಷಾವಾರು ಪ್ರಾಂತ್ಯಗಳು ಮತ್ತು ಭಾವೀ ಭಾಷಾವಾರು ಪ್ರಾಂತಗಳೊಂದಿಗೆ ಮಹಾರಾಷ್ಟ್ರವನ್ನು ಹೋಲಿಸುವುದು ಉಪಯುಕ್ತವಾಗಬಹುದು. ಅವುಗಳ ವಿಸ್ತಾರ, ಜನಸಂಖ್ಯೆ, ಮತ್ತು ಆದಾಯದ ಅಂಕಿಸಂಖ್ಯೆಗಳನ್ನು ಕೆಳಗೆ ಕೊಟ್ಟಿರುತ್ತದೆ.
ಈ ಅಂಕಿಸಂಖ್ಯೆಗಳಿಗೆ ಮಹಾರಾಷ್ಟ್ರದ ಅಂಕಿಸಂಖ್ಯೆಗಳನ್ನು ಹೋಲಿಸಿದರೆ, ವಿಸ್ತಾರ, ಜನಸಂಖ್ಯೆ ಮತ್ತು ಆದಾಯದ ದೃಷ್ಟಿಯಿಂದ ಮಹಾರಾಷ್ಟ್ರ ಆರ್ಥಿಕವಾಗಿ ಸ್ವಾವಲಂಬಿ ಪ್ರಾಂತ್ಯವಾಗಲು ಅಷ್ಟೇ ಅಲ್ಲ, ಅದೊಂದು ಬಲಿಷ್ಠ ಪ್ರಾಂತ್ಯ ಆಗುವುದೆನ್ನುವುದರಲ್ಲಿ ಸಂಶಯವಿರುವುದಿಲ್ಲ.

ಭಾಗ-೩
ಮಹಾರಾಷ್ಟ್ರ ಪ್ರಾಂತವು ಸಂಯುಕ್ತ ರೂಪದ ವ್ಯವಸ್ಥೆಯದಾಗಬೇಕೊ ಅಥವಾ ಏಕರೂಪದ ವ್ಯವಸ್ಥೆಯದಾಗಬೇಕೊ?
ವಿವಾದಾಸ್ಪದ ವಿಷಯಗಳ ಕಡೆಗೆ ನಾನೀಗ ಗಮನ ಹರಿಸುವೆನು. ಮಹಾರಾಷ್ಟ್ರದ ಏಕೀಕರಣವು ವಿವಾದಾಸ್ಪದ ವಿಷಯವಾಗಿರುವುದಿಲ್ಲ. ವಿವಾದವಿರುವುದು ಅದನ್ನು ಹೇಗೆ ಕಾರ್ಯರೂಪಕ್ಕಿಳಿಸಬೇಕೆಂಬುದರ ಬಗೆಗೆ. ನವ ಮಹಾರಾಷ್ಟ್ರ ಒಂದೇ ಶಾಸಕಾಂಗ ಮತ್ತು ಒಂದೇ ಕಾರ್ಯಾಂಗದಿಂದ ಕೂಡಿದ ಏಕವ್ಯವಸ್ಥೆಯ ಪ್ರಾಂತ್ಯವಾಗಬೇಕೆಂಬುದು ಒಂದು ವಿಚಾರ. ಇನ್ನೊಂದು ವಿಚಾರದ ಪ್ರಕಾರ, ಎರಡು ಉಪಪ್ರಾಂತಗಳಿಂದ ಕೂಡಿದ ಸಂಯುಕ್ತ ವ್ಯವಸ್ಥೆಯ ಪ್ರಾಂತವಾಗಬೇಕು. ಒಂದು ಉಪಪ್ರಾಂತದಲ್ಲಿ ಮುಂಬೈ ಪ್ರಾಂತ್ಯದ ಮರಾಠಿ ಮಾತಾಡುವ ಜಿಲ್ಲೆಗಳಿರಬೇಕು. ಇನ್ನೊಂದರಲ್ಲಿ ಮಧ್ಯಪ್ರಾಂತಗಳ ಮತ್ತು ಬೀರಾರ್‌ನ ಮರಾಠಿ ಮಾತಾಡುವ ಜಿಲ್ಲೆಗಳಿರಬೇಕು. ಎರಡು ಉಪಪ್ರಾಂತ್ಯಗಳ ವಿಚಾರ ಹುಟ್ಟಿರುವುದು ಮಧ್ಯಪ್ರಾಂತ್ಯಗಳ ಮತ್ತು ಬೀರಾರ್ ಪ್ರಾಂತ್ಯಗಳ ಮರಾಠಿ ಮಾತಾಡುವ ಜನರಿಂದ ಅದು ತಮ್ಮ ರಾಜಕೀಯ ಜೀವನ (ಪುಟ 125)
ಕೊನೆಗೊಳ್ಳುವುದೆಂಬ ಭೀತಿ ಇರುವ ಕೆಲವೇ ಉಚ್ಚಜಾತಿಯ ರಾಜಕಾರಣಿಗಳ ವಿಚಾರವೆಂದು ತಿಳಿದು ನನಗೆ ಸಮಾಧಾನವೆನಿಸಿದೆ. ಅದಕ್ಕೆ ಮಧ್ಯಪ್ರಾಂತ್ಯಗಳ ಹಾಗೂ ಬೀರಾರ್‌ನ ಸಾಮಾನ್ಯ ಜನರ ಬೆಂಬಲ ಇರುವುದಿಲ್ಲ. ಒಂದು ಬಹು ಮಹತ್ವದ ತತ್ವವನ್ನು ವಿವರಿಸುವ ಅವಕಾಶ ಇದರಿಂದ ದೊರೆಯುವುದೆಂಬ ಕಾರಣದಿಂದ ಈ ಭಿನ್ನ ವಿಚಾರವನ್ನಿಲ್ಲಿ ಪ್ರತಿಪಾದಿಸಿರುತ್ತೇನೆ. ಭಾಷಾವಾರು ಪ್ರಾಂತ್ಯವನ್ನು ನಿರ್ಮಿಸುವ ನಿರ್ಣಯ ತೆಗೆದುಕೊಂಡ ಬಳಿಕ, ಒಂದಕ್ಕೊಂದು ಹತ್ತಿದ ಮತ್ತು ಒಂದೇ ಭಾಷೆಯನ್ನಾಡುವ ಜನರಿರುವ ಜಿಲ್ಲೆಗಳೆಲ್ಲ ಒಂದೇ ಪ್ರಾಂತ್ಯದಲ್ಲಿ ಬರಬೇಕೆಂಬುದು ನನ್ನ ಖಚಿತ ಅಭಿಪ್ರಾಯ. ಆಯ್ಕೆಗಾಗಲಿ ಅಥವಾ ಸ್ವಂತ ನಿರ್ಣಯಗಳಾಗಲಿ ಇಲ್ಲಿ ಅವಕಾಶ ಇರಕೂಡದು. ದೊಡ್ಡ ಪ್ರಾಂತೀಯ ಘಟಕಗಳನ್ನು ನಿರ್ಮಿಸಲು ಎಲ್ಲರೂ ಪ್ರಯತ್ನಿಸತಕ್ಕದ್ದು. ಚಿಕ್ಕ ಪ್ರಾಂತ್ಯಗಳು ಸಾಮಾನ್ಯ ಸ್ಥಿತಿಯಲ್ಲಿ ಭಾಗವಾಗುತ್ತವೆ, ತುರ್ತು ಸ್ಥಿತಿಯಲ್ಲಿ ದುರ್ಬಲತೆಯ ತಾಣಗಳಾಗುತ್ತವೆ. ಅಂತಹ ಪ್ರಸಂಗವನ್ನು ತಪ್ಪಿಸತಕ್ಕದ್ದು. ಆದ್ದರಿಂದಲೇ ಮಹಾರಾಷ್ಟ್ರದ ಎಲ್ಲ ಭಾಗಗಳು ಒಂದೇ ಪ್ರಾಂತ್ಯದಲ್ಲಿ ಸೇರಬೇಕೆಂದು ನಾನು ಒತ್ತಿ ಹೇಳುತ್ತೇನೆ.
ಭಾಗ-೪
ಮಹಾರಾಷ್ಟ್ರ ಮತ್ತು ಮುಂಬೈ ನಗರ ಮುಂಬೈ ಬಗೆಗಿರುವ ವಿವಾದ
೨೧) ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸಬೇಕೊ, ಬೇಡವೊ ಎಂಬ ಮತ್ತೊಂದು ವಿಷಯದ ಬಗೆಗೆ ವಿವಾದವಿರುತ್ತದೆ. ಭಾರತೀಯ ವರ್ತಕರ ಭವನದಲ್ಲಿ ಒಂದು ಸಭೆ ಸೇರಿತ್ತು. ಆ ಸಭೆಯಲ್ಲಿ ಭಾಗವಹಿಸಿದವರ ಸಂಖ್ಯೆ ೬೦ ಕ್ಕೂ ಒಬ್ಬ ಭಾರತೀಯ ಕ್ರೈಸ್ತನ ಹೊರತಾಗಿ ಅವರೆಲ್ಲರು ಗುಜರಾತಿ ಮಾತನಾಡುವ ವರ್ತಕರು ಮತ್ತು ಉದ್ದಿಮೆದಾರರು. ಅದು ಕೆಲವೇ ವರ್ಗದವರ ಚಿಕ್ಕ ಸಭೆಯಾದರೂ ಅದರ ಗೊತ್ತುವಳಿಗಳನ್ನು ಭಾರತದ ಪ್ರತಿಯೊಂದು ಮಹತ್ವದ ವೃತ್ತಪತ್ರಿಕೆಯ ಮುಖಪುಟದಲ್ಲಿ ತಕ್ಷಣ ಪ್ರಕಟಿಸಲಾಯಿತು ಮತ್ತು ಆ ಗೊತ್ತುವಳಿಗಳ ಪ್ರಭಾವ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮೇಲೆ ಅಧಿಕವಾದ್ದರಿಂದ ಅದು ಆ ಗೊತ್ತುವಳಿಗಳನ್ನು ಕುರಿತು ಸಂಪಾದಕೀಯ ಲೇಖನವನ್ನೇ ಬರೆಯಿತು. ಅದು ಮಹಾರಾಷ್ಟ್ರ ಪ್ರಾಂತದ ವಿರುದ್ಧ ಎತ್ತಿದ ನಿಂದಕ ದ್ವನಿಯನ್ನು ಮೆಲ್ಲಗೆ ಖಂಡಿಸುತ್ತ, ಆ ಸಭೆಯ ಗೊತ್ತುವಳಿಗಳನ್ನೆಲ್ಲ ಎತ್ತಿಹಿಡಿಯಿತು. ಐಯರ್ಲೆಂಡಿನ ವಿವಾದದಲ್ಲಿ “ಲಾರ್ಡ್ ಬರ್ಕನ್ ಹೆಡ್ ನು ಐಯರ್ಲೆಂಡದ ಮುಂದಾಳು ಮಿ. ರೆಡಮಾರ್ಡಗೆ ಕೊಟ್ಟ ಉತ್ತರದ ಸಾಧುತ್ವವೇ ಇದರಿಂದ ಸಿದ್ದವಾಗುತ್ತದೆ. ಅಂದರೆ ಕೆಲವು ಪ್ರಸಂಗಗಳಲ್ಲಿ ಅಲ್ಪಸಂಖ್ಯೆಯ ವರ್ಗವೇ ಬಹುಸಂಖ್ಯೆಯ ವರ್ಗಕ್ಕಿಂತ ಹೆಚ್ಚು ಪ್ರಭಾವೀ ಇರುತ್ತದೆ.
ಈ ವಿವಾದದ ಬಗೆಗೆ ಅನುಕೂಲ ಮತ್ತು ಪ್ರತಿಕೂಲ ವಿಚಾರಗಳನ್ನು ಮಂಡಿಸದಿದ್ದಲ್ಲಿ ನನ್ನ ವಿಜ್ಞಾಪನ ಪತ್ರವು ಬಹಳ ಅಪೂರ್ಣವಾಗುವುದು. ಅದಕ್ಕೆ ಎರಡು ಕಾರಣಗಳುಂಟು. ಮೊದಲನೆಯದಾಗಿ, ಆ ಸಭೆಯು ಬಹು ಮಹತ್ವದ ಸಭೆ ಎಂದು ಪರಿಗಣಿಸಲಾಗಿರುತ್ತದೆ. ಎರಡನೆಯದಾಗಿ, ಸಭೆಯ ಗೊತ್ತುವಳಿಗಳನ್ನು ವಿಶ್ವವಿದ್ಯಾಲಯದ ಖ್ಯಾತ ಪ್ರಾಧ್ಯಾಪಕರು ಎತ್ತಿಹಿಡಿದಿರುತ್ತಾರೆ.
ಮುಂಬೈ ಬಗೆಗಿನ ಸೂಚನೆಗಳು
೨೨) ಸಭೆಯು ಕೆಳಗಿನ ಗೊತ್ತುವಳಿಯನ್ನು ಅಂಗೀಕರಿಸಿತು : (ಪುಟ 126)
(೧) ಭಾಷಾವಾರು ಪ್ರಾಂತರಚನೆಯ ಪ್ರಶ್ನೆಯನ್ನು ಮುಂದೂಡಬೇಕು. ಇಲ್ಲವೆ
(೨) ಹಾಗೆ ಮುಂದೂಡಲು ಸಾಧ್ಯವಿಲ್ಲದಿದ್ದಲ್ಲಿ, ಮುಂಬೈನಗರವನ್ನು ಪ್ರತ್ಯೇಕ ಪ್ರಾಂತ್ಯವನ್ನಾಗಿ ಮಾಡಬೇಕು.
ಇವೂ ಅಲ್ಲದೆ, ಮೂರನೆಯ ಗೊತ್ತುವಳಿಯನ್ನು ಸಹ ಮಂಡಿಸಲಾಗಿತ್ತು. ಅದೆಂದರೆ ಕೊಂಕಣವನ್ನು ಪ್ರತ್ಯೇಕ ಪ್ರಾಂತ್ಯವನ್ನಾಗಿ ಮಾಡಿ, ಮುಂಬೈಯನ್ನು ಅದರ ರಾಜಧಾನಿ ಮಾಡಬೇಕು. ಈ ಯೋಜನೆಗೆ ಯಾರ ಬೆಂಬಲವೂ ಇದ್ದಿರಲಿಲ್ಲ. ಆದ್ದರಿಂದ ಅದನ್ನು ಚರ್ಚಿಸುವ ಆವಶ್ಯಕತೆ ಇರುವುದಿಲ್ಲ.
ಮುಂಬೈ ಬಗೆಗೆ ನಿರ್ಣಯ ಈಗಲೇ ತೆಗೆದುಕೊಳ್ಳಬೇಕು
೨೩) ಮುಂಬೈ ಮಹಾರಾಷ್ಟ್ರದಲ್ಲಿ ಸೇರಬೇಕೋ ಅಥವಾ ಬೇಡವೋ ಎಂಬ ಮುಖ್ಯ ಸಮಸ್ಯೆಯನ್ನು ಇತ್ಯರ್ಥಗೊಳಿಸಿದ್ದಾದರೆ, ಮಹಾರಾಷ್ಟ್ರ ಪ್ರಾಂತ್ಯ ರಚನೆಯ ವಿಷಯವನ್ನು ಮುಂದೂಡುವುದಕ್ಕೆ ನನ್ನದೇನೂ ಅಭ್ಯಂತರ ಇರುವುದಿಲ್ಲ. ಇನ್ನೊಂದು ಇಲ್ಲವೆ ಹತ್ತು ವರ್ಷ ಮುಂದಕ್ಕೆ ಹಾಕಿದರೂ ನಡೆಯುತ್ತದೆ ಆದರೆ, ಆ ಗೊತ್ತುವಳಿ ಕೇವಲ ಪಲಾಯನವಾದ ಆಗಿರುತ್ತದೆ. ಅದು ಸಮಸ್ಯೆಯನ್ನು ಬಗೆಹರಿಸದೆ, ಸುಮ್ಮನೆ ಮುಂದೂಡುತ್ತದೆ. ಆದ್ದರಿಂದ ಮುಖ್ಯ ಸಮಸ್ಯೆಯ ಇತ್ಯರ್ಥ ಈಗಲೇ ಆಗತಕ್ಕದ್ದು.
ಮುಂಬೈ ಮಹಾರಾಷ್ಟ್ರದಿಂದ ಹೊರಗುಳಿಯಬೇಕೆಂಬುದಕ್ಕೆ ಆಧಾರ
೨೪) ಮುಂಬೈಯನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸಬೇಕೆಂಬ ನಿಲುವಿನ ಪರ ವಾದದ ಅಂಶಗಳನ್ನು ಕೆಳಗೆ ಕೊಟ್ಟಿರುತ್ತದೆ :
೧) ಮುಂಬೈ ಎಂದೂ ಮಹಾರಾಷ್ಟ್ರದ ಭಾಗ ಆಗಿರುವುದಿಲ್ಲ.( ಪ್ರೊ. ಘೀವಾಲ-ಫ್ರೀ ಪ್ರೆಸ್ ಜರ್ನಲ್, ೬-೯-೧೯೪೮ ಮತ್ತು ಪ್ರೊ. ಮೋರೆ-ಫ್ರೀಪ್ರೆಸ್ ಜರ್ನಲ್, ೧೨-೯-೧೯೪೮)
೨) ಮುಂಬೈ ಎಂದೂ ಮರಾಠಾ ಸಾಮ್ರಾಜ್ಯದ ಭಾಗ ಆಗಿರಲಿಲ್ಲ. (ಪ್ರೊ. ಘೀವಾಲ-ಫ್ರೀ ಪ್ರೆಸ್ ಜರ್ನಲ್, ೬-೯-೧೯೪೮ ಮತ್ತು ಪ್ರೊ. ಮೋರೆ-ಫ್ರೀಪ್ರೆಸ್ ಜರ್ನಲ್, ೧೨-೯-೧೯೪೮)
೩) ಮುಂಬೈ ನಗರದಲ್ಲಿ ಮರಾಠಿ ಮಾತನಾಡುವವರು ಬಹುಸಂಖ್ಯೆಯಲ್ಲಿ ಇರುವುದಿಲ್ಲ. (ಪ್ರೊ. ಸಿ.ಎನ್.ವಕೀಲ, ಫ್ರೀಪ್ರೆಸ್ ಜರ್ನಲ್, ೨೧-೯-೧೯೪೮)
೪) ಮುಂಬೈ ನಗರದಲ್ಲಿ ಗುಜರಾಥಿಗಳು ಬಹಳ ಹಿಂದಿನ ಕಾಲದಿಂದ ವಾಸವಾಗಿದ್ದಾರೆ. (ಪ್ರೊ. ಘೀವಾಲ, ಫ್ರೀಪ್ರೆಸ್ ಜರ್ನಲ್, ೬-೯-೧೯೪೮)
೫) ಮುಂಬೈ ಮಹಾರಾಷ್ಟ್ರದ ಹೊರಗಿನ ಪ್ರದೇಶಗಳ ಮುಖ್ಯವ್ಯಾಪಾರೀ ಕೇಂದ್ರ ಆಗಿರುತ್ತದೆ. ಆದ್ದರಿಂದ ಮುಂಬೈ ಮೇಲೆ ಮಹಾರಾಷ್ಟ್ರದ ಹಕ್ಕು ಇರುವುದಿಲ್ಲ. ಅದು ಇಡೀ ಭಾರತಕ್ಕೆ ಸೇರಿದ್ದು. (ಪ್ರೊ. ಸಿ.ಎನ್. ವಕೀಲ, ಫ್ರೀಪ್ರೆಸ್ ಜರ್ನಲ್, ೧೧-೯-೧೯೪೮)
೬) ಮುಂಬೈಯಲ್ಲಿ ವ್ಯಾಪಾರ ಮತ್ತು ಉದ್ದಿಮೆಯನ್ನು ಸ್ಥಾಪಿಸಿದವರು ಮತ್ತು ಬೆಳೆಸಿದವರು ಗುಜರಾಥಿ ಭಾಷೆಯನ್ನು ಆಡುವವರು. ಮಹಾರಾಷ್ಟ್ರೀಯರು ಅಲ್ಲಿ ಕೇವಲ ಕರಣಿಕರು (ಪುಟ
127)
ಮತ್ತು ಕೂಲಿಗಳಾಗಿ ದುಡಿಯುತ್ತಿದ್ದಾರೆ. ಹೆಚ್ಚು ಪ್ರಮಾಣದಲ್ಲಿ ಕಾರ್ಮಿಕರಾಗಿದ್ದ ಮಹಾರಾಷ್ಟ್ರೀಯರ ರಾಜಕೀಯ ಪ್ರಭುತ್ವದ ಕೆಳಗೆ ವ್ಯಾಪಾರ ಮತ್ತು ಉದ್ದಿಮೆಯ ಒಡೆಯರನ್ನು ಇಡುವುದು ತಪ್ಪಾಗುತ್ತದೆ. (ಪ್ರೊ. ಸಿ.ಎನ್.ವಕೀಲ, ಬಾಂಬೆ ಕ್ರಾನಿಕಲ್)
೭) ಮುಂಬೈಯ ಹೆಚ್ಚಿನ ಆದಾಯದ ಮೇಲೆ ಜೀವಿಸುವ ಉದ್ದೇಶದಿಂದ ಮುಂಬೈಯನ್ನು ಮಹಾರಾಷ್ಟ್ರ ತನ್ನಲ್ಲಿ ಸೇರಿಸಿಕೊಳ್ಳಬಯಸುತ್ತದೆ. (ಪ್ರೊ. ಸಿ.ಎನ್.ವಕೀಲ, ಭಾರತೀಯ ವರ್ತಕರ ಸಂಘದಲ್ಲಿ)
೮) ಬಹು ಭಾಷೆಗಳ ಪ್ರಾಂತ್ಯವಿರುವುದು ಹೆಚ್ಚು ಉತ್ತಮ. ಅಲ್ಲಿ ಅಲ್ಪಸಂಖ್ಯೆಯವರಿಗೆ ಅಪಾಯ ಇರುವುದಿಲ್ಲ. (ಪ್ರೊ. ದಂತವಾಲ, ಫ್ರೀಪ್ರೆಸ್ ಜರ್ನಲ್, 1-9-1948)
೯) ಪ್ರಾಂತಗಳ ಪುನರ್ವಿಂಗಡಣೆ ವೈಚಾರಿಕ ಮಾರ್ಗ ಅನುಸರಿಸಬೇಕೇ ವಿನಹ, ಪ್ರತ್ಯೇಕ ರಾಷ್ಟ್ರೀಯ ಭಾವನೆ ಪ್ರಚೋದಿಸುವ ಭಾವುಕ ಮಾರ್ಗವನ್ನೆಲ್ಲ. (ಪ್ರೊ. ಘೀವಾಲ, ಫ್ರೀಪ್ರೆಸ್ ಜರ್ನಲ್, ಸೆಪ್ಟೆಂಬರ್ ೧೯೪೮)
ಸಿದ್ಧಮಾಡುವ ಹೊಣೆಗಾರಿಕೆ
೨೫) ಈ ಅಂಶಗಳನ್ನು ಪರಿಶೀಲಿಸುವುದರಿಂದ ಒಂದನೆಯವು ಮತ್ತು ಎರಡನೆಯವು ಪೂರ್ವಭಾವೀ ಅಂಶಗಳೆಂದು ಸ್ಪಷ್ಟವಿರುತ್ತದೆ. ಏಕೆಂದರೆ, ಸಿದ್ದಮಾಡುವ ಹೊಣೆ ಯಾರದೆಂದು ನಿರ್ಧರಿಸುವಲ್ಲಿ ಅವು ನಮಗೆ ಸಹಾಯ ಮಾಡುತ್ತವೆ. ಮುಂಬೈ ಮಹಾರಾಷ್ಟ್ರದ ಭಾಗವೆಂದು ಸಿದ್ಧವಾಗಿರುವಾಗ, ಮಹಾರಾಷ್ಟ್ರದಿಂದ ಅದನ್ನು ಏಕೆ ಪ್ರತ್ಯೇಕಿಸಬೇಕೆಂದು ಸಿದ್ಧಮಾಡಿ ತೋರಿಸುವ ಹೊಣೆ, ಮುಂಬೈ ಪ್ರತ್ಯೇಕ ಇರಬೇಕೆಂದು ಒತ್ತಾಯಿಸುವವರದಿರುತ್ತದಲ್ಲದೆ, ಮುಂಬೈ ಮಹಾರಾಷ್ಟ್ರದ ಭಾಗವಾಗಿ ಉಳಿಯಬೇಕೆಂದು ಹಕ್ಕಿನಿಂದ ಹೇಳುವವರದಲ್ಲ. ಆದ್ದರಿಂದ ನಾನು ಈ ಎರಡು ಅಂಶಗಳನ್ನು ಮೊದಲಿಗೆ ಪರಿಶೀಲಿಸುತ್ತೇನೆ.
(೧) ಮತ್ತು (೨) ಅಂಶಗಳು
ಇತಿಹಾಸದ ತೀರ್ಪು
೨೬) ಈ ಅಂಶಗಳನ್ನು ಇತಿಹಾಸ ಮತ್ತು ಭೂಗೋಳ ಎರಡರ ಬೆಳಕಿನಲ್ಲಿ ನೋಡಬಹುದು. ಈ ಸಮಸ್ಯೆಯನ್ನು ಬಿಡಿಸುವಲ್ಲಿ ಇತಿಹಾಸ ಸಹಾಯ ಮಾಡಲಾರದೆಂಬ ಮನವರಿಕೆ ನನಗಿರುತ್ತದೆ. ನಮ್ಮ ನಿರ್ಣಯಕ್ಕೆ ಆಧಾರವಾಗಬೇಕಾದ ವಾಸ್ತವ ಸಂಗತಿಗಳನ್ನು ಹುಡುಕಲು ಎಷ್ಟು ಹಿಂದಕ್ಕೆ ಹೋಗಬೇಕೆಂದು ಗೊತ್ತಾಗುವುದಿಲ್ಲ. ಇಲ್ಲಿ ಪ್ರಾಚೀನ ಇತಿಹಾಸ ಪ್ರಯೋಜನಕಾರಿ ಆಗದೆಂಬುದು ಸ್ಪಷ್ಟವಿರುತ್ತದೆ. ನಮಗೆ ಉಪಯೋಗಕ್ಕೆ ಬರುವುದು ವರ್ತಮಾನದ ಗತ ಇತಿಹಾಸ. ನಮ್ಮ ಎದುರಿರುವ ಸದ್ಯದ ಸಮಸ್ಯೆಯನ್ನು ( ಪುಟ 128)
ಬಿಡಿಸಲು ವರ್ತಮಾನದ ಇತಿಹಾಸ ಸಹಾಯವಾಗಬಹುದೆಂಬ ಭರವಸೆಯನ್ನು ಯಾರಾದರೂ ಪ್ರಶ್ನಿಸಬಹುದು. ಪ್ರಾಚೀನ ಕಾಲದಲ್ಲಿ ಗೆದ್ದು ಆಳುವವರ ಮತ್ತು ಸೋತು ಆಳಲ್ಪಡುವವರ ನಡುವೆ ಸಂಪರ್ಕ ಇರುತ್ತಿತ್ತು. ಭಾರತಕ್ಕೆ ಅನ್ವಯಿಸುವ ಮಾತು ಯೂರೋಪಕ್ಕೂ ಅನ್ವಯಿಸುತ್ತದೆ. ಆದರೆ ಇಂತಹ ಸಂಪರ್ಕಗಳ ಪರಿಣಾಮಗಳು ಯೂರೋಪ್ ಮತ್ತು ಭಾರತದಲ್ಲಿ ಬೇರೆ ಬೇರೆ ಆಗಿರುತ್ತವೆ. ಯೂರೋಪದಲ್ಲಿ ಇಂಥ ಸಂಪರ್ಕಗಳ ಪರಿಣಾಮವಾಗಿ ಪರಸ್ಪರ ತಿಕ್ಕಾಡುವ ಸಾಮಾಜಿಕ ಘಟಕಗಳ ಸರಿ ಬೆರಕೆ ಸಾಧ್ಯವಾಯಿತು. ಮೇಲಿಂದ ಮೇಲೆ ನಡೆದ ಅಂತರ್ಬಣಗಳ ಮದುವೆಗಳು ಮೂಲ ಜನಾಂಗಗಳನ್ನು ದಿಙ್ಮೂಢಗೊಳಿಸಿರುತ್ತವೆ. ಅತಿಹೆಚ್ಚು ಉಪಯುಕ್ತವಿದ್ದ ಇಲ್ಲವೆ ಎಲ್ಲ ಜನರಾಡುವ ಒಂದು ಭಾಷೆ ಇನ್ನೊಂದನ್ನು ಪದಚ್ಯುತಗೊಳಿಸಿತು. ಒಂದೇ ದೇಶದಲ್ಲಿಯ ಶ್ರೇಷ್ಠ ನಾಗರಿಕತೆಯು ಮಿಕ್ಕವುಗಳನ್ನು ಸಹಜವಾಗಿ ಕಿತ್ತುಹಾಕಿರುತ್ತದೆ. ಪರಕೀಯ ಸಂಸ್ಕೃತಿಗಳನ್ನು ಮತ್ತು ಭಾಷೆಗಳನ್ನು ಅರಗಿಸಿಕೊಳ್ಳುವ ಸಹಜ ಬಲವು ತೀರ ಪ್ರಬಲವಿದ್ದುದರಿಂದ ಅದರ ನಿಯಂತ್ರಣಕ್ಕೆ ಕ್ರಮಕೈಕೊಳ್ಳುವುದು ಅವಶ್ಯವಿರುತ್ತದೆ. ಭಾರತದಲ್ಲಿ ಎಂತಹ ಪ್ರವೃತ್ತಿ ಇರುತ್ತದೆ? ನಿಶ್ಚಯವಾಗಿಯೂ ಅದು ಬೆರಕೆಗೆ ವಿರುದ್ಧ ಇರುತ್ತದೆ. ಮುಸಲ್ಮಾನರು ಹಿಂದೂಗಳನ್ನು ಜಯಿಸಿದರು. ಆದರೆ ಮುಸಲ್ಮಾನರು ಮುಸಲ್ಮಾನರಾಗಿ ಉಳಿದರು ಮತ್ತು ಹಿಂದೂಗಳು ಹಿಂದೂಗಳಾಗಿ ಉಳಿದರು. ಮಹಾರಾಷ್ಟ್ರೀಯರು ಗುಜರಾಥಿಗಳನ್ನು ಗೆದ್ದರು. ಮತ್ತು ಕೆಲವರ್ಷ ಅವರನ್ನು ಆಳಿದರು. ಗುಜರಾತಿಗಳ ಮೇಲೆ ಅದರ ಪರಿಣಾಮ ಏನಾಯಿತು? ಪರಿಣಾಮ ಶೂನ್ಯ, ಗುಜರಾತಿಗಳು ಗಜರಾತಿಗಳಾಗಿ ಉಳಿದಿದ್ದಾರೆ. ಮತ್ತು ಮಹಾರಾಷ್ಟ್ರೀಯರು ಮಹಾರಾಷ್ಟ್ರೀಯರಾಗಿ ಉಳಿದಿದ್ದಾರೆ. ಮಹಾರಾಷ್ಟ್ರೀಯರನ್ನು ಚಾಲುಕ್ಯರು ಗೆದ್ದರು. ಶಿಲಾಹಾರರೂ ಮಹಾರಾಷ್ಟ್ರೀಯರನ್ನು ಗೆದ್ದರು. ಆದರೆ ಅವರ ನಡುವೆ ಸರಿಬೆರಕೆ ಏರ್ಪಡಲಿಲ್ಲ. ಚಾಲುಕ್ಯರು ಹಾಗೂ ಶಿಲಾಹಾರರು ತಾವು ಇದ್ದ ಹಾಗೇ ಉಳಿದರು. ಮಹಾರಾಷ್ಟ್ರೀಯರೂ ಹಾಗೆ ಉಳಿದರು. ಐತಿಹಾಸಿಕ ಪರಿಸ್ಥಿತಿ ಹೀಗಿದ್ದಾಗ ಸದ್ಯದ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ಅದರಿಂದ ಏನು ಸಹಾಯ ಸಿಕ್ಕಬಹುದು? ಆಂತರಿಕ ಏರಿಳಿತಗಳು ಮತ್ತು ಬಾಹ್ಯ ದಾಳಿಗಳ ಇತಿಹಾಸ ಚಲಿಸುವ ಚಿತ್ರಕ್ಕಿಂತ ಹೆಚ್ಚೇನೂ ಆಗಿರುವುದಿಲ್ಲ ಪರಕೀಯರ ಇಲ್ಲವೆ ಸ್ವದೇಶೀಯರ ಜಯಕ್ಕೆ ಏನೂ ಅರ್ಥ ಇರುವುದಿಲ್ಲ ಮತ್ತು ಅದರಿಂದ ಏನೂ ಸಿದ್ಧ ಆಗುವುದಿಲ್ಲ.
ಭೂಗೋಳದ ತೀರ್ಪು
೨೭) ನಾವು ಈಗ ಭೂಗೋಳದ ಕಡೆಗೆ ತಿರುಗೋಣ ಮತ್ತು ಅದರ ತೀರ್ಪನ್ನು ಗಮನಿಸೋಣ. ಇತಿಹಾಸಕ್ಕಿಂತ ಇದು ಹೆಚ್ಚು ಉತ್ತಮ ಸಾಕ್ಷಿ ಇದ್ದಂತೆ ತೋರುತ್ತದೆ. ಈ ಉದ್ದೇಶಕ್ಕಾಗಿ ಮಹಾರಾಷ್ಟ್ರದ ಪ್ರದೇಶದಲ್ಲಿ ಮುಂಬೈಯ ಸ್ಥಳವನ್ನು ಗಮನಿಸಬೇಕಾಗುತ್ತದೆ. ಮಹಾರಾಷ್ಟ್ರ ಅಸ್ತಿತ್ವಕ್ಕೆ ಬಂದದ್ದಾದರೆ ಅದರ ಆಕಾರ ತ್ರಿಕೋನವನ್ನು ಹೋಲುತ್ತದೆ. ಒಂದು ಬದಿಗೆ ದಮನ್ ಮತ್ತು ಕಾರವಾರಗಳ ನಡುವಿನ ಪಶ್ಚಿಮ ಕರಾವಳಿ ಇರುತ್ತದೆ. ಮುಂಬೈ ದಮನ್ ಮತ್ತು ಕಾರವಾರಗಳ ಮಧ್ಯ ಇರುತ್ತದೆ. ಗುಜರಾಥ ಪ್ರಾಂತ ದಮನ್‌ದಿಂದ ಪ್ರಾರಂಭವಾಗಿ ಉತ್ತರಕ್ಕೆ ಹರಡುತ್ತದೆ. ಮುಂಬೈ ಗುಜರಾಥ ಪ್ರಾಂತದ ಪ್ರಾರಂಭದ ಗುರುತಾದ ದಮನ್‌ನ ದಕ್ಷಿಣಕ್ಕೆ ೮೫ ಮೈಲು ಮತ್ತು ಕರ್ನಾಟಕದ ಪ್ರಾರಂಭದ ಗುರುತಾದ ಕಾರವಾರದ ಉತ್ತರಕ್ಕೆ ೨೫೦ ಮೈಲು ದೂರದಲ್ಲಿರುತ್ತದೆ. ದಮನ್ ಮತ್ತು ಕಾರವಾರಗಳ ನಡುವಿನ ಸಂಪೂರ್ಣ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿದ್ದಾದರೆ, ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದಲ್ಲವೆಂದು ಹೇಗೆ ಸಾಧಿಸುವುದು? (ಪುಟ 129)
ಇದು ಅಲ್ಲಗಳೆಯಲಿಕ್ಕಾಗದಂಥ ನೈಸರ್ಗಿಕ ಸಂಗತಿ. ಭೂಗೋಳ ಮುಂಬೈಯನ್ನು ಮಹಾರಾಷ್ಟ್ರದ ಭಾಗವನ್ನಾಗಿ ಮಾಡಿರುತ್ತದೆ. ಪ್ರಾಕೃತಿಕ ಸಂಗತಿಗಳಿಗೆ ಸವಾಲು ಹಾಕಬಯಸುವವರು ಹಾಕಲಿ. ಪೂರ್ವಗ್ರಹಪೀಡಿತವಲ್ಲದ ಬುದ್ಧಿಗೆ ಮುಂಬೈ ಮಹಾರಾಷ್ಟಕ್ಕೆ ಸೇರಿದ್ದೆಂಬುದಕ್ಕೆ ಭೂಗೋಳ ಅಂತಿಮ ಆಧಾರವಾಗಿರುತ್ತದೆ.
ಮುಂಬೈ ಮತ್ತು ಮರಾಠಾ ಸಾಮ್ರಾಜ್ಯ
೨೮) ಮುಂಬೈಯನ್ನು ಮರಾಠರು ತಮ್ಮ ಸಾಮ್ರಾಜ್ಯದಲ್ಲಿ ಸೇರಿಸಿಕೊಳ್ಳದಿದ್ದ ಸಂಗತಿ, ಭೂಗೋಳ ಕೊಟ್ಟ ನಿರ್ಣಯದ ಸಾಧುತ್ವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ತರಲಾರದು. ಮರಾಠರು ಮುಂಬೈಯನ್ನು ಗೆಲ್ಲುವಗೊಡವೆಗೆ ಹೋಗದಿದ್ದರೇನಾಯಿತು? ಅದರಿಂದ ಮುಂಬೈ ಮಹಾರಾಷ್ಟ್ರದ ಭಾಗವಲ್ಲವೆಂದು ಸಿದ್ಧವಾಗುವುದಿಲ್ಲ. ಅದರ ಅರ್ಥ ಇಷ್ಟೆ ಮರಾಠರ ಶಕ್ತಿ ಭೂಶಕ್ತಿ ಆಗಿತ್ತು ಮತ್ತು ಅವರು ಬಂದರನ್ನು ಗೆಲ್ಲುವುದರ ಕಡೆಗೆ ಲಕ್ಷ್ಯಹಾಕಲಿಲ್ಲ.
೨೯) (೧) ಮತ್ತು (೨) ಅಂಶಗಳ ನಿರ್ಣಯ ಸಿಕ್ಕಿರುವಾಗ, ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸತಕ್ಕದ್ದಲ್ಲ ಎಂದು ವಾದಿಸುವವರ ಮೇಲೆ ಅದನ್ನು ಸಿದ್ಧಮಾಡುವ ಜವಾಬುದಾರಿಕೆಯನ್ನು ಹೇರತಕ್ಕದ್ದು. ಅವರು ತಮ್ಮ ಜವಾಬುದಾರಿಯನ್ನು ನಿಭಾಯಿಸಿದ್ದಾರೆಯೆ? ಈ ಪ್ರಶ್ನೆ ನಮ್ಮನ್ನು ಇತರ ಅಂಶಗಳ ಪರಿಶೀಲನೆಗೆ ತೊಡಗಿಸುತ್ತದೆ.
ಅಂಶ (3)
ಮರಾಠಿ ಮಾತನಾಡುವ ಜನಸಂಖ್ಯೆ-ಬಹುಸಂಖ್ಯೆಯೇ ಅಥವಾ ಅಲ್ಪಸಂಖ್ಯೆಯೇ?
೩೦) ಈ ಪ್ರಶ್ನೆಯ ವಿಷಯದಲ್ಲಿ ಒಮ್ಮತ ಇರುವುದಿಲ್ಲ. ಮುಂಬೈ ಮಹಾರಾಷ್ಟ್ರದಲ್ಲಿ ಸೇರಬೇಕೆಂಬುದರ ಪರವಾಗಿ ಮಾತನಾಡುತ್ತ ಪ್ರೊ. ಗಾಡಗೀಳ್ ಅವರು ೧೯೪೧ರ ಜನಗಣತಿಯ ಪ್ರಕಾರ ಮುಂಬೈಯಲ್ಲಿ ಮರಾಠಿ ಮಾತಾಡುವವರ ಸಂಖ್ಯೆ ಶೇ. ೫೧ ಇರುವುದೆಂದು ಒತ್ತಿ ಹೇಳುತ್ತಾರೆ. ಅದರ ವಿರುದ್ಧ ಮಾತನಾಡುತ್ತ ಪ್ರೊ. ಘೀವಾಲಾ ಅವರು ಮರಾಠಿ ಮಾತನಾಡುವವರ ಸಂಖ್ಯೆ ಶೇ. ೪೧ ಇದೆ ಎಂದು ಹೇಳಿದರೆ, ಪ್ರೊ. ವಕೀಲ್ ಅವರು ಅದರ ಪ್ರಮಾಣವನ್ನು ಇನ್ನೂ ಕಡಿಮೆ ಮಾಡಿ ಇನ್ನೂ ಕೆಳಗೆ, ಅಂದರೆ ಶೇ. ೩೯ಕ್ಕೆ ಇಳಿಸುತ್ತಾರೆ. ಈ ಅಂಕಿ ಸಂಖ್ಯೆಗಳನ್ನು ಪರಿಶೀಲಿಸಲು ನನಗೆ ಸಮಯ ಇರಲಿಲ್ಲ. ಮುಂಬೈಯ ಜನಗಣನೆಯಿಂದ ಮರಾಠಿ ಆಡುವವರ ನಿಖರವಾದ ಅಂಕಿ ಸಂಖ್ಯೆ ಸಿಗುವುದಿಲ್ಲ ಎಂದು ನನಗನ್ನಿಸುತ್ತದೆ. ಆದಾಗ್ಯೂ ಪ್ರೊ. ವಕೀಲ್ ಅವರು ಕೊಡುವ ಕಾರಣಗಳನ್ನು ಓದಿದರೆ, ಅವರು ಬಯಸಿದಂತೆ ಆಗಬಯಸುವ ಕಾರಣಗಳನ್ನು ಕೊಟ್ಟಿದ್ದಾರೆಂದು ಅನಿಸದಿದ್ದರೂ, ಅವು ಕಾಲ್ಪನಿಕ ಎಂದು ಅನಿಸದಿರದು. ಆದರೆ, ಪ್ರೊ. ವಕೀಲ್ ಅವರು ಕೊಡುವ ಅಂಕಿ ಸಂಖ್ಯೆ ಸರಿ ಎಂದು ತಿಳಿದರೂ, ಅದರಿಂದ ಏನಾಗಬೇಕಾಗಿದೆ? ಅದರಿಂದ ಯಾವ ನಿರ್ಣಯಕ್ಕೆ ಬರಲು ಶಕ್ಯ? ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸಬೇಕೆಂಬ (ಪು 130)
ಬೇಡಿಕೆಯನ್ನು ಹತ್ತಿಕ್ಕಬಹುದೆ? ಬ್ರಿಟಿಷರು ಭಾರತದ ಒಡೆಯರಾದಂದಿನಿಂದ ಭಾರತವು ಒಂದೇ ರಾಷ್ಟ್ರ ಆಗಿರುತ್ತದೆ. ಅದರಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮುಕ್ತ ಸಂಚಾರದ ಹಕ್ಕು ಇರುತ್ತದೆ. ಭಾರತೀಯರೆಲ್ಲ ಬಂದು ಮುಂಬೈಯಲ್ಲಿ ನೆಲೆಸಿದರೆ, ಅದರಿಂದ ಮಹಾರಾಷ್ಟ್ರೀಯರಿಗೆ ಯಾಕೆ ತೊಂದರೆ ಆಗಬೇಕು? ಅದು ಅವರ ತಪ್ಪಲ್ಲ. ಮುಂಬೈಯನ್ನು ಮಹಾರಾಷ್ಟ್ರದಿಂದ ಹೊರಗಿಡಲು ಜನಸಂಖ್ಯೆಯು ಆಧಾರವಾಗಲಾರದು.
ಅಂಶ (೪)
ಗುಜರಾಥಿಗಳು ಮುಂಬೈಯ ಮೂಲ ನಿವಾಸಿಗಳೆ?
೩೧) ಈ ಪ್ರಶ್ನೆಯನ್ನು ಆಮೂಲಾಗ್ರ ಪರಿಶೀಲಿಸೋಣ. ಗುಜರಾಥಿಗಳು ಮೂಲ ನಿವಾಸಿಗಳಲ್ಲದ್ದಿರೆ ಅವರು ಮುಂಬೈಗೆ ಹೇಗೆ ಬಂದರು? ಅವರ ಸಂಪತ್ತಿನ ಮೂಲವೇನು? ಯಾವ ಗುಜರಾಥೀಯ ತಾನೆ ತಾನು ಮುಂಬೈಯ ಮೂಲ ನಿವಾಸಿ ಎಂದು ಹೇಳಿಬಯಸುವನು? ಮತ್ತೆ ಅದೇ ಪ್ರಶ್ನೆ ನಮ್ಮನ್ನು ಕೆಣಕುತ್ತದೆ-ಹಾಗಾದರೆ, ಅವರು ಮುಂಬೈಗೆ ಹೇಗೆ ಬಂದರು? ಪೋರ್ಚುಗೀಸರು, ಫ್ರೆಂಚರು ಮತ್ತು ಇಂಗ್ಲಿಷರು ಮಾಡಿದಂತೆ ನಷ್ಟ ಇಲ್ಲದೆ ಅಪಾಯ ಎದುರಿಸುವ ಸಾಹಸ ಮಾಡಿದರೆ? ಈ ಪ್ರಶ್ನೆಗಳಿಗೆ ಇತಿಹಾಸ ಕೊಡುವ ಉತ್ತರಗಳು ಸ್ಪಷ್ಟ ಇರುತ್ತವೆ. ಸ್ವಯಂ ಪ್ರೇರಣೆಯಿಂದ ಗುಜರಾಥಿಗಳು ಮುಂಬೈಗೆ ಬರಲಿಲ್ಲ. ಮಾರುಕಟ್ಟೆಯ ದಲ್ಲಾಳಿಗಳಾಗಿ ಕೆಲಸ ಮಾಡಲು ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳು ಅವರನ್ನು ಕರೆತಂದರು. ಈಸ್ಟ್ ಇಂಡಿಯಾ ಕಂಪನಿಯ ಪ್ರಥಮ ಕಾರಖಾನೆ ಸೂರತ್ ದಲ್ಲಿ ಪ್ರಾರಂಭವಾಯಿತು. ವ್ಯಾಪಾರ ನಿರ್ವಹಿಸುವಲ್ಲಿ ದಲ್ಲಾಳಿಗಳಾಗಿ ಕೆಲಸ ಮಾಡಿದ ಸೂರತ್ ವರ್ತಕರನ್ನು ಅವರು ಅರಿತಿದ್ದರು. ಆದ್ದರಿಂದ ಅವರನ್ನು ಮುಂಬೈಗೆ ಕರೆತಂದರು. ಗುಜರಾಥಿಗಳು ಮುಂಬೈಗೆ ಬಂದುದು ಹೀಗೆ. ಎರಡನೆಯದಾಗಿ, ಉಳಿದ ವರ್ತಕರೊಂದಿಗೆ ಮುಕ್ತ ಸ್ಪರ್ಧೆಗಿಳಿಯುವ ಉದ್ದೇಶದಿಂದ ಅವರು ಮುಂಬೈಗೆ ಬರಲಿಲ್ಲ. ಅವರು ಈಸ್ಟ್ ಇಂಡಿಯಾ ಕಂಪನಿಯಿಂದ ಕೆಲವು ವಿಶೇಷ ವ್ಯಾಪಾರಿ ಸೌಲಭ್ಯಗಳನ್ನು ಪಡೆದುಕೊಂಡು ಬಂದರು. ಅವರನ್ನು ಮುಂಬೈಗೆ ಆಮದು ಮಾಡಿಕೊಳ್ಳುವ ವಿಷಯವನ್ನು ೧೬೭೧ ರಲ್ಲಿ ಆಗಿನ ಗವರ್ನರ್ ಆಂಗೀಯರ್ (Aungier) ಅವರು ಮೊದಲಬಾರಿ ಪರಿಶೀಲಿಸಿದರು. ಬಾಂಬೆ ನಗರ ಮತ್ತು ದ್ವೀಪದ ಗೆಜೆಟಿಯರ್‌ನ ಒಂದನೆಯ ಸಂಪುಟದಲ್ಲಿ ಈ ಕೆಳಗಿನಂತೆ ಅದರ ಉಲ್ಲೇಖ ಇರುತ್ತದೆ: (ಬಾಂಬೆ ಗೆಜೆಟಿಯರ್ ಪುಟ ೪೬-೪೭)
ಗವರ್ನರ್ ಆಂಗೀಯರ್ ಅವರು ಆಸಕ್ತಿ ವಹಿಸಿದ ಯೋಜನೆ ಎಂದರೆ ಮುಂಬೈಯಲ್ಲಿ ಸೂರತ್ ವರ್ತಕರು (ಬನಿಯಾರು) ನೆಲೆಸುವ ವಿಷಯವನ್ನು ನಿರ್ಧರಿಸುವುದು. ಮಹಾಜನರು ಇಲ್ಲವೆ ಸೂರತ್ ಬನಿಯಾ ಸಮಾಜದ ಸಭೆಯು ಮುಂಬೈಗೆ ಬರುವ ಸಾಹಸವನ್ನು ಮಾಡುವ ಮುಂಚೆ ಕೆಲವು ಸೌಲಭ್ಯಗಳ ಭರವಸೆಯನ್ನು ಬಯಸಿದರೆಂದು ಮತ್ತು ಕಂಪನಿಯು ಮಹಾ ಜನದ ಬೇಡಿಕೆಗಳಿಗೆ ಸಾಮಾನ್ಯ ಒಪ್ಪಿಗೆ ಕೊಟ್ಟಿತೆಂದು ತೋರುತ್ತದೆ. ೧೦ನೇ ಜನವರಿಯಂದು ಸೂರತ್ ಕೌನ್ಸಿಲ್ ಕಂಪನಿಗೆ ಒಂದು ಪತ್ರ ಬರೆಯಿತು. ಮುಂಬೈಯಲ್ಲಿ ಅವರಿಗೆ ಬೇಕಾದ ಸೌಲಭ್ಯಗಳನ್ನು ಕುರಿತು ಸ್ಯಾಮಸನ್ ಹಡಗಿನ ಮುಖಾಂತರ (ಪುಟ 131)
ಕಳಿಸಿದ ಅರ್ಜಿಗೆ ನೀವು ಕೊಟ್ಟ ಉತ್ತರದಿಂದ ಮಹಾಜನ ಇಲ್ಲವೆ ಬನಿಯಾರ ಮುಖ್ಯ ಸಂಘವು ಸಮಾಧಾನವಾಗಿರುತ್ತದೆ. ಆದರೂ ಇನ್ನೊಮ್ಮೆ ತಮಗೆ ತೊಂದರೆ ಕೊಡಬೇಕೆಂದು ನಿರ್ಧರಿಸಿದ್ದಾರೆ. ತಮ್ಮ ಹಕ್ಕುಗಳನ್ನು ಕೊಟ್ಟು ಅವನ್ನು ನಿಮ್ಮ ಮುದ್ರಿಕೆಯಿಂದ ದೃಢೀಕರಿಸಬೇಕೆಂದು, ನಿಮ್ಮ ಮಧ್ಯಸ್ಥಗಾರ ಶ್ರೀ ಭೀಮಾಜಿ ಪಾರಖ್ ಅವರಿಗೆ ಆದೇಶ ನೀಡಿದ್ದಾರೆ. ಅಲ್ಲದೆ ತಮ್ಮ ಬೇಡಿಕೆಯನ್ನು ಪುಷ್ಟೀಕರಿಸುವ ಕಾರಣಗಳನ್ನು ಫಾಲ್ಕನ್ ಹಡಗಿನ ಮೂಲಕ ಕಳಿಸಲಾಗುತ್ತಿರುವ ಈ ಕಾಗದದಲ್ಲಿ ವಿವರಿಸಿದ್ದಾರೆ.
ತಮ್ಮ ಬೇಡಿಕೆಯನ್ನು ಬಲಪಡಿಸಲು ಉಪಯೋಗಿಸಿದ ವಾದದಲ್ಲಿ ಸ್ವಲ್ಪ ತೂಕ ಇದ್ದಂತೆ ತೋರುತ್ತದೆ. ಮಾನ್ಯ ಕಂಪನಿಯು ಶಾಶ್ವತ ಎಂದೂ, ಅದರ ಕಾಯಿದೆಗಳು ಬಲಯುತವಾಗಿರುತ್ತವೆ ಎಂದೂ ಅವರು ಹೇಳುತ್ತಾರೆ. ಆದರೆ ಅದರ ಅಧ್ಯಕ್ಷರು ಮತ್ತು ಕೌನ್ಸಿಲ್‌ಗಳು ಬದಲಾಗುತ್ತವೆ. ಅವುಗಳ ಸ್ಥಳದಲ್ಲಿ ಹೊಸದಾಗಿ ಬಂದ ಅಧ್ಯಕ್ಷ ಹಾಗೂ ಕೌನ್ಸಿಲ್‌ಗಳು ಹಿಂದಿನವರು ಕೊಟ್ಟಿದ್ದನ್ನು ಬದಲಾಯಿಸುತ್ತಾರೆ. ಮಾನ್ಯರು, ಈ ಕಾರಣಕ್ಕಾಗಿ ಅವರ ವಿನಂತಿಯನ್ನು ಮಂಜೂರ್ ಮಾಡುವಿರೆಂದು ಆಶಿಸುತ್ತಾರೆ. ನಮ್ಮ ತೀರ್ಪಿನ ಪ್ರಕಾರ, ಅದರಿಂದ ನಿಮಗೆ ಆತಂಕ ಒದಗುವುದಿಲ್ಲ. ತದ್ವಿರುದ್ಧ ಅದರಿಂದ ಹೆಚ್ಚು ಪ್ರಯೋಜನ ಆಗಬಹುದು. ಅವರಿಗೆ ಕೊಡುವ ಹಕ್ಕುಗಳ ಇತಿಮಿತಿಗಳನ್ನು ನಿರ್ಧರಿಸುವುದು ನಿಮ್ಮ ಬುದ್ದಿಗೆ ಬಿಟ್ಟ ವಿಷಯ. ಅವರ ಪತ್ರಕ್ಕೆ ನೀವು ಉತ್ತರ ಬರೆಯುವ ಕೃಪೆ ಮಾಡಿದರೆ ಅವರಿಗೆ ಬಹಳ ಸಮಾಧಾನ ಆಗುತ್ತದೆ ಮತ್ತು ನಿಮ್ಮ ಹಿತಾಸಕ್ತಿಗಳಿಗೆ ಏನೂ ಬಾಧೆ ಬರದು. (ಬಾಂಬೆ ಗೆಜೆಟಿಯರ್ ಸಂಪುಟ ೧, ಪುಟ ೭೪-೭೬)
೩೨) ಈಸ್ಟ್ ಇಂಡಿಯಾ ಕಂಪನಿಯಿಂದ ಗುಜರಾಥಿಗಳು ಯಾವ ವಿಶೇಷ ಸೌಲಭ್ಯಗಳನ್ನು ಕೇಳಿದ್ದರು? ದಿಯು ನಗರದ ಪ್ರಸಿದ್ದ ಬನಿಯಾ ನೀಮಾ ಪಾರಖ್ ಪ್ರಕಾರ ಕೆಳಗಿನ ಮನವಿಯಿಂದ ಅವರು ಕೇಳಿದ ಸೌಲಭ್ಯಗಳ ಬಗೆಗೆ ಸ್ವಲ್ಪ ಕಲ್ಪನೆ ಬರುತ್ತದೆ.
೧) “ಮನೆ ಇಲ್ಲವೆ ಉಗ್ರಾಣ ಕಟ್ಟಲು ಎಷ್ಟು ಬೇಕೆಂದು ತೀರ್ಮಾನಿಸಿದಷ್ಟು ನಿವೇಶನವನ್ನು ಸದ್ಯದ ನಗರದ ಸಮೀಪದಲ್ಲಿ ಬಾಡಿಗೆ ಹೇರದೆ ಮಾನ್ಯ ಕಂಪನಿಯವರು ಕೊಡತಕ್ಕದ್ದು.
೨) ಅವರು ತನ್ನ ಜಾತಿಯ ವೆರ್ಸ್ (ಗೋರರು ಇಲ್ಲವೆ ಪುರೋಹಿತರು) ಬ್ರಾಹ್ಮಣರೊಂದಿಗೆ ಯಾವುದೇ ವ್ಯಕ್ತಿಯನ್ನು ಪೀಡಿಸದೆ ತನ್ನ ಮನೆಯಲ್ಲಿ ತನ್ನ ಧರ್ಮವನ್ನು ನಿರಾತಂಕವಾಗಿ ಆಚರಿಸಬಹುದು. ಇಂಗ್ಲಿಷ್, ಪೋರ್ಚುಗೀಸ್, ಇಲ್ಲವೆ ಬೇರಿನ್ನಾವ ಕ್ರೈಸ್ತನು, ಇಲ್ಲವೆ ಇಸ್ಲಾಮ ಧರ್ಮದವನಿಗೆ ತಮ್ಮ ಕಾಂಪೌಂಡಿನಲ್ಲಿ ವಾಸಿಸಲಿಕ್ಕಾಗಲಿ, ಯಾವುದೇ ಪ್ರಾಣಿವಧೆ ಮಾಡುವುದಕ್ಕಾಗಲಿ, ಯಾವುದೇ ರೀತಿಯ ಪ್ರಾಣಿಹಿಂಸೆ ಮಾಡುವುದಕ್ಕಾಗಲಿ ಪರವಾನಗಿ ಕೊಡಬಾರದು. ಯಾವುದೇ ವ್ಯಕ್ತಿ ತಮ್ಮ ಮನೆಯ ಕಾಂಪೌಂಡಿನಲ್ಲಿ ತಮ್ಮನ್ನು ನೋಯಿಸಬಹುದೆಂದು ಅನಿಸಿದಲ್ಲಿ, ಗವರ್ನರ್ (ಸೂರತ್‌ದಲ್ಲಿ) ಇಲ್ಲವೆ ಡೆಪ್ಯೂಟಿ ಗವರ್ನರ್ (ಮುಂಬೈಯಲ್ಲಿ)ರಿಗೆ ಅವನ ವಿರುದ್ಧ ದೂರು ಸಲ್ಲಿಸಿದಲ್ಲಿ, ಉಳಿದವರಿಗೆ ಪಾಠಕಲಿಸುವ ರೀತಿಯಲ್ಲಿ ಅವನನ್ನು ದಂಡಿಸಬೇಕು. ತಮ್ಮ ಧರ್ಮದ ವಿಧಿವಿಧಾನದ ಪ್ರಕಾರ ತಮ್ಮವರ ಶವಸಂಸ್ಕಾರ ಮಾಡುವ ಹಕ್ಕುಗಳನ್ನೇ ತಮಗೆ ಕೊಡಬೇಕು. ಹಾಗೆ ಮದುವೆ ಸಮಾರಂಭಗಳಲ್ಲಿ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸುವ ಹಕ್ಕು ತಮಗಿರಬೇಕು. ತಮ್ಮ ಉದ್ಯೋಗದ (ಪುಟ 132)
ಯಾವುದೇ ವ್ಯಕ್ತಿಯನ್ನು ಗಂಡಾಗಲಿ, ಹೆಣ್ಣಾಗಲಿ, ಯಾವುದೇ ವಯಸ್ಸಿನವರಿರಲಿ-ಕ್ರೈಸ್ತಧರ್ಮ ಸ್ವೀಕರಿಸಲು ಒತ್ತಾಯಿಸಬಾರದು.
೩) ತಾನು ಮತ್ತು ತನ್ನ ಕುಟುಂಬದವರು ಮನೆಕಾಯುವ (ಗಸ್ತಿ) ಕೆಲಸ ಇಲ್ಲವೆ ಅದಕ್ಕೆ ಸಂಬಂಧಿಸಿದ ಕರ್ತವ್ಯಗಳಿಂದ ಮುಕ್ತವಿರಬೇಕು. ಕಂಪನಿ, ಗವರ್ನರ್, ಡೆಪ್ಯೂಟಿ ಗವರ್ನರ್, ಕೌನ್ಸಿಲ್ ಇಲ್ಲವೆ ಬೇರೆ ಯಾರೇ ಆಗಲಿ ಯಾವುದೇ ಕಾರಣಕ್ಕಾಗಿ, ವೈಯಕ್ತಿಕ ಇಲ್ಲವೆ ಸಾರ್ವಜನಿಕ ಉಪಯೋಗಕ್ಕಾಗಲಿ ಸಾಲಕೊಡಲು ತಮ್ಮನ್ನು ಒತ್ತಾಯಿಸತಕ್ಕದ್ದಲ್ಲ.
೪) ತನ್ನ, ತನ್ನ ವಕೀಲರ, ಆಟಾರ್ನಿಗಳ ಇಲ್ಲವೆ ತಮ್ಮ ಜಾತಿಯ ವ್ಯಾಪಾರಿಗಳ ಮತ್ತು ನಡುಗಡ್ಡೆಯಲ್ಲಿ ವಾಸಿಸುವ ಯಾವುದೇ ವ್ಯಕ್ತಿಯ ನಡುವೆ ಭಿನ್ನಾಭಿಪ್ರಾಯ ಉಂಟಾದಲ್ಲಿ, ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಲ್ಲಿ, ತನ್ನನ್ನಾಗಲಿ, ತಮ್ಮವರನ್ನಾಗಲಿ ಸರಿಯಾದ ತಿಳುವಳಿಕೆಯ ನೋಟೀಸು ಕೊಡದೆ, ಸಾರ್ವಜನಿಕರೆದುರು ಬಂಧಿಸಬಾರದು, ಅಪಮಾನಮಾಡಬಾರದು, ಜೇಲಿಗೆ ಒಯ್ಯಬಾರದು. ತಾನು ಇಲ್ಲವೆ ತಮ್ಮವರು ಪ್ರಾಮಾಣಿಕವಾಗಿ ಹಾಗೂ ಸ್ನೇಹಸೌಹಾರ್ದದಿಂದ ನ್ಯಾಯ ಒದಗಿಸಿಕೊಳ್ಳುವ ಹಕ್ಕು ಪಡೆದಿರಬೇಕು ಮತ್ತು ಒಂದು ವೇಳೆ ತಾನು ಇಲ್ಲವೆ ತನ್ನ ಆಟಾರ್ನಿ ಮತ್ತು ತಮ್ಮ ಜಾತಿಯ ವರ್ತಕರ ನಡುವೆ ಭಿನ್ನಾಭಿಪ್ರಾಯ ಉಂಟಾದಲ್ಲಿ, ನ್ಯಾಯಾಲಯಕ್ಕೆ ಹೋಗದೆ, ತಮ್ಮಲ್ಲಿಯೇ ವ್ಯಾಜ್ಯ ತೀರಿಸಿಕೊಳ್ಳುವ ಸ್ವಾತಂತ್ರ್ಯವಿರಬೇಕು.
೫) ತಾನು ಬಯಸಿದ ಬಂದರುಗಳಿಗೆ ಹಡಗಿನಲ್ಲಿ ಹೋಗಿ ವ್ಯಾಪಾರ ಮಾಡುವ ಮತ್ತು ಒಮ್ಮೆ ಗವರ್ನರ್ ಇಲ್ಲವೆ ಡೆಪ್ಯೂಟಿ ಗವರ್ನರ್ ಇಲ್ಲವೆ ಸುಂಕದವರಿಗೆ ನೋಟೀಸುಕೊಟ್ಟು ಅವರ ಒಪ್ಪಿಗೆ ಪಡೆದ ಬಳಿಕ ಹಡಗು ನಿಲ್ಲಿಸುವ, ಫೀ ಕೊಡದೆ ತನಗೆ ಸರಿಕಂಡಾಗ ಹಡಗಿನ ಹೊರಗೆ ಹೋಗುವ ಇಲ್ಲವೆ ಒಳಗೆ ಬರುವ ಸ್ವಾತಂತ್ರ್ಯವಿರಬೇಕು.
೬) ಹನ್ನೆರಡು ತಿಂಗಳ ಅವಧಿಯಲ್ಲಿ ಮಾರಾಟವಾಗುವುದಕ್ಕಿಂತ ಹೆಚ್ಚು ಸರಕನ್ನು ದಂಡೆಗೆ ಇಳಿಸಿಕೊಂಡಿದ್ದರೆ, ಆಮದು ಮಾಡುವ ಇಲ್ಲವೆ ರಫ್ತು ಮಾಡುವ, ತೆರಿಗೆ ಕೊಡದೆ ತನಗೆ ಬೇಕಾದ ಬಂದರುಗಳಿಗೆ ಹೆಚ್ಚಿನ ಸರಕನ್ನು ಸಾಗಿಸುವ ಸ್ವಾತಂತ್ರ್ಯ ಹೊಂದಿರಬೇಕು.
೭) ಯಾವುದೇ ವ್ಯಕ್ತಿ ತನಗೆ ಋಣಿಯಾಗಿದ್ದಲ್ಲಿ ಮತ್ತು ಉಳಿದ ವರ್ತಕರಿಗೂ ಋಣಿಯಾಗಿದ್ದಲ್ಲಿ, ಎಲ್ಲರ ಸಾಲವನ್ನು ತೀರಿಸುವುದು ಅವನಿಗೆ ಶಕ್ಯವಿಲ್ಲದಿದ್ದಾಗ, ಉಳಿದವರಿಗಿಂತ ಮೊದಲು ತನ್ನ ಸಾಲವನ್ನು ವಸೂಲಿ ಮಾಡುವ ಹಕ್ಕು ತನಗಿರಬೇಕು.
೮) ಯುದ್ಧ ನಡೆದರೆ ಇಲ್ಲವೆ ಯಾವುದೆ ಅಪಾಯ ಸಂಭವಿಸಿದರೆ, ತನ್ನ ಸರಕು, ನಗನಾಣ್ಯ ಮತ್ತು ಕುಟುಂಬದವರನ್ನು ಸುರಕ್ಷಿತವಾಗಿ ಇರಿಸಲು ಕೋಟೆಯೊಳಗೆ ಒಂದು ಉಗ್ರಾಣದ ಮನೆ ಕೊಡಬೇಕು.
೯) ತನಗೆ ಇಲ್ಲವೆ ತನ್ನ ಕುಟುಂಬದವರಿಗೆ, ಕೋಟೆಗೆ, ಗವರ್ನರ್ ಇಲ್ಲವೆ ಡೆಪ್ಯೂಟಿ ಗವರ್ನರ್ ಮನೆಗೆ ಹೋಗುವ ಮತ್ತು ಅಲ್ಲಿಂದ ಹಿಂದಿರುಗುವ ಸ್ವಾತಂತ್ರ್ಯ ಇರಬೇಕು. ತಮ್ಮನ್ನು ನಾಗರಿಕ ಮರ್ಯಾದೆಯಿಂದ ಸ್ವಾಗತಿಸಬೇಕು ಮತ್ತು ತಮ್ಮ ಯೋಗ್ಯತೆಯ ಪ್ರಕಾರ ಕುಳಿತುಕೊಳ್ಳಲು ಪರವಾನಗಿ ಇರಬೇಕು. ಕುದುರೆಗಾಡಿ, ಕುದುರೆ, ಮೇನೆ ಮತ್ತು ಕೊಡೆಗಳನ್ನು ತಮ್ಮ ಅನುಕೂಲ ಬಂದಂತೆ ಯಾವುದೇ ಆತಂಕವಿಲ್ಲದೆ ಬಳಸುವ ಹಕ್ಕಿರಬೇಕು. ತಮ್ಮ ಸೇವಕರು ಕತ್ತಿ ಮತ್ತು ಕಠಾರಿಗಳನ್ನು ಹಿಡಿಯಬಹುದು. ಅವರಿಗೆ ಯಾರೂ ಬೈಯ್ಯಬಾರದು. (ಪುಟ 133)
ಅವರು ಅಪರಾಧ ಮಾಡದೆ ಅವರನ್ನು ಹೊಡೆಯಬಾರದು ಇಲ್ಲವೆ ಜೇಲಿಗೆ ಹಾಕಬಾರದು. ತನ್ನ ಸಂಬಂಧಿಕರು, ಸ್ನೇಹಿತರು, ತನ್ನನ್ನಾಗಲಿ, ತನ್ನ ಕುಟುಂಬದವರನ್ನಾಗಲಿ, ಕಾಣಲು ಯಾವುದೇ ಬಂದರುಗಳಿಂದ ಬಂದರೂ ಅವರನ್ನು ಮರ್ಯಾದೆಯಿಂದ ಕಾಣಬೇಕು.
೧೦) ತಾನು ಇಲ್ಲವೆ ತಾನು ಗೊತ್ತುಪಡಿಸಿದವರು ಯಾರೆ ಆಗಲಿ, ತೆಂಗಿನಕಾಯಿ, ಅಡಿಕೆ, ವೀಳ್ಯದೆಲೆ ಮತ್ತು ಹೊರಗೆ ರಫ್ತು ಮಾಡದಿದ್ದಂತಹ ಯಾವುದೇ ವಸ್ತುವನ್ನು ಯಾರಿಗೂ ಹಿಂಸೆಯಾಗದಂತೆ ಆ ನಡುಗಡ್ಡೆಯಲ್ಲಿ ಮಾರುವ ಸ್ವಾತಂತ್ರ್ಯ ಇರಬೇಕು.
೩೩) ನೀಮಾ ಪಾರಖ್ ಅವರ ಮನವಿಯ ಪರಿಶೀಲನೆ ಹೇಗಾಯಿತೆಂಬುದನ್ನು ಮುಂಬೈಯ ಡೆಪ್ಯೂಟಿ ಗವರ್ನರ್ ಅವರ ೧೬೭೭ ರ ಏಪ್ರಿಲ್ ೩ ನೇ ತಾರೀಖಿನ ಉತ್ತರದಲ್ಲಿ ಕಾಣಬಹುದು :
“(ಮೇಲಿನವರ) ಆದೇಶದ ಪ್ರಕಾರ ನೀಮಾ ಪಾರಖ್ ವ್ಯಾಪಾರಸ್ಥರ ಬೇಡಿಕೆಗಳನ್ನು ಪರಿಶೀಲಿಸಿದ್ದೇವೆ. ನಮಗೆ ತಿಳಿದಂತೆ ಅವರು ಕೇಳುವ ಸವಲತ್ತುಗಳು ಯಾವುದೇ ತಪ್ಪುತಿಳುವಳಿಕೆಯಿಂದ ಪ್ರೇರಿತವಾದವುಗಳಾಗಿಲ್ಲ. ಅವುಗಳಲ್ಲಿ ಬಹಳಷ್ಟು ತೀರ ಕೆಳದರ್ಜೆಯವರು ಹೊಂದಿರುವಂತಹ ಸವಲತ್ತುಗಳಾಗಿರುತ್ತವೆ.
“ಕಂಪನಿಯ ಒಡೆತನದಲ್ಲಿ ಸಾಕಷ್ಟು ವಿಸ್ತಾರವಾದ ಭೂಮಿ ಇರುವುದರಿಂದ ಮೊದಲನೆಯದನ್ನು ಪೂರೈಸುವುದು ಬಹಳ ಸರಳ. ಇಲ್ಲಿ ನೆಲೆಸಲು ಬರುವ ಬನಿಯಾಗಳಿಗೆ ಮತ್ತು ಇತರರಿಗೆ ನಾವು ಪ್ರತಿದಿನ ಅದನ್ನೇ ಮಾಡುತ್ತೇವೆ. ಎರಡನೆಯ ವಿಷಯದಲ್ಲಿ ಹೇಳುವುದಾದರೆ, ಎಲ್ಲರಿಗೂ ತಮ್ಮ ತಮ್ಮ ಧರ್ಮ ಆಚರಿಸುವ ಮತ್ತು ಮದುವೆ ಮುಂಜಿಗಳಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸುವ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಬನಿಯಾಗಳು ತಮ್ಮವರ ಶವಗಳನ್ನು ಅಪವಿತ್ರಗೊಳಿಸದೆ ಅವುಗಳಿಗೆ ಅಗ್ನಿಸಂಸ್ಕಾರ ಕೊಡುತ್ತಿದ್ದಾರೆ. ತಮ್ಮಷ್ಟಕ್ಕೆ ತಾವು ವಾಸಿಸುವ ಬನಿಯಾಗಳ ಮನೆಗಳ ಸಮೀಪ ಯಾವುದೇ ಪ್ರಾಣಿಯನ್ನು ಕೊಲ್ಲಲು ಯಾರಿಗೂ ಪರವಾನಗಿ ಕೊಡುವುದಿಲ್ಲ. ಯಾರೂ ಮನೆಯವರ ಪರವಾನಗಿ ಇರದೆ ಯಾರ ಮನೆಯನ್ನಾದರೂ ಪ್ರವೇಶಿಸಬಹುದೆಂದು ಯಾರೂ ಊಹಿಸಬಾರದು. ವ್ಯಕ್ತಿಗಳ ಇಚ್ಛೆಯ ವಿರುದ್ಧ ಯಾರನ್ನಾದರೂ ಕ್ರೈಸ್ತರನ್ನಾಗಿ ಮತಾಂತರಗೊಳಿಸಲು ಬಲತ್ಕಾರ ಮಾಡಿದರೆ, ಇಡೀ ಜಗತ್ತೇ ನಮ್ಮನ್ನು ಖಂಡಿಸುವುದು. ಹೊರೆ ಹೊರಲು ಯಾವ ವ್ಯಕ್ತಿಯನ್ನೂ ಅವನ ಇಚ್ಛೆಯ ವಿರುದ್ಧ ಒತ್ತಾಯಿಸುತ್ತಿರುವುದಿಲ್ಲ. ಯಾವುದೆ ಬನಿಯಾ, ಬ್ರಾಹ್ಮಣ, ಮುಸಲ್ಮಾನ ಇಲ್ಲವೆ ಅಂಥವರು ಯಾರೇ ಆಗಲಿ ಅವರನ್ನು ನಗರ ಕಾವಲು ಮಾಡುವ ಕಾರ್ಯಕ್ಕೆ ಒತ್ತಾಯಿಸುವುದಿಲ್ಲ. ಆದರೆ ಯಾವುದೆ ವ್ಯಕ್ತಿ ವಾಡೆ ಕೊಂಡಿದ್ದರೆ, ಎಚ್ಚರಿಕೆ ಕೊಟ್ಟೊಡನೆ ಒಬ್ಬ ಸುಸಜ್ಜಿತ ಸೈನಿಕರನ್ನು ಕಳಿಸಬೇಕು. ಆದರೆ ಅವನಿಗೆ ಭೂಮಿ ಇರದಿದ್ದರೆ, ಅವನಿಂದ ಸುಂಕ (ಕಂದಾಯ) ವಸೂಲಿ ಮಾಡುವುದಿಲ್ಲ. ಆದ್ದರಿಂದ ನೀಮಾ ಅವರಿಗೆ ಈ ಸವಲತ್ತುಗಳನ್ನು ಕೊಡಬಹುದು. ಅವನು ಭೂಮಿಯನ್ನು ಕೊಳ್ಳಲು ಹೊರಟಾಗ ತೆರಿಗೆಯ ಕಿರುಭಾರವನ್ನು ಅದರ ಮೇಲೆ ಕೊಡಬೇಕಾಗುವುದೆಂಬ ತಿಳುವಳಿಕೆಯನ್ನು ಅವನಿಗೆ ಕೊಡಬೇಕು.
“ನಾಲ್ಕನೆಯ ಬೇಡಿಕೆಯು ನಿಜಕ್ಕೂ ವಿಶೇಷ ಸವಲತ್ತು ಆಗಿರುತ್ತದೆ. ಆದರೆ ಸಿಡುಕಿನ ಗಿರಿಧರ ಮತ್ತು ಇನ್ನೂ ಕೆಲವರು ಪಡೆದಿರುವ ಸೌಲಭ್ಯಕ್ಕಿಂತ ಹೆಚ್ಚೇನೂ ಅಲ್ಲ. ಈ ಸೌಲಭ್ಯ ಅವನನ್ನು ಈ ನಾಡಿನ ಕಾಯಿದೆ ಕಟ್ಟಳೆಯಿಂದ ಮುಕ್ತ ಮಾಡುವುದಿಲ್ಲ, ಆದರೆ ನ್ಯಾಯ ಗೌರವಯುತ ರೀತಿಯಲ್ಲಿ ದೊರೆಯುವಂತಾಗಬೇಕೆಂದು ಅದು ಕೇಳುತ್ತದೆ. ಅದರ ವಿಷಯಕ್ಕೆ ಅವನಿಗೆ ಸಂಶಯವಿರುವುದು ಬೇಡ ಮತ್ತು ತಮ್ಮ ತಮ್ಮಲ್ಲಿಯ ಭಿನ್ನಾಭಿಪ್ರಾಯಗಳನ್ನು ತಮ್ಮಲ್ಲಿಯೇ ಬಗೆಹರಿಸಿಕೊಳ್ಳಲು ಮಾನ್ಯ ಗವರ್ನರ್ ಅವರ ಪರವಾನಗಿ ಇರುತ್ತದೆ. (ಪುಟ 134)
“ಐದನೆಯ ಬೇಡಿಕೆಯ ವಿಷಯಕ್ಕೆ ಹೇಳುವುದಾದರೆ, ಪ್ರತಿ ಟನ್ ಭಾರಕ್ಕೆ ಇರುವ ೧ ರೂಪಾಯಿ ಹಡಗು ನಿಲ್ಲಿಸುವ ಫೀ ಸಂಪೂರ್ಣ ರದ್ದುಪಡಿಸಲಾಗಿದೆ. ೧೦೦ ಟನ್ ಭಾರಕ್ಕಿರುವ ಅತಿ ಸ್ವಲ್ಪ ೧ ರೂ. ಫೀ ಮಾತ್ರ ಇರುತ್ತದೆ. ಅದು ಬಹಳಷ್ಟು ಇಲ್ಲದಿರುವುದರಿಂದ ನಾವೇನೂ ಅದಕ್ಕೆ ಅಂಟಿಕೊಳ್ಳುವುದಿಲ್ಲ. ಗವರ್ನರ್ ಅವರು ಕೊಡಬೇಕೆಂದು ಹೇಳಿದರೂ, ಅವನು ತನ್ನ ಹಡಗುಗಳ ಮಟ್ಟಿಗಷ್ಟೇ ಕೇಳುತ್ತಿರುವುದರಿಂದ, ಕಂಪನಿಯು ಅದನ್ನು ಬಿಡಬಹುದು.
“ಆರನೆಯ ಸವಲತ್ತನ್ನು ನಾವು ಸರಿಯಾಗಿ ಅರ್ಥಮಾಡಿದರೆ, ಎಲ್ಲರೂ ಅನುಭವಿಸುವ ಸೌಲಭ್ಯಕ್ಕಿಂತ ಹೆಚ್ಚಿರುವುದಿಲ್ಲ. ಇಲ್ಲಿ ಯಾರೂ ತಾವು ರಫ್ತು ಮಾಡುವ ವಸ್ತುಗಳಿಗಾಗಲಿ ಇಲ್ಲವೆ ಕೊಂಡುಕೊಳ್ಳುವ ವಸ್ತುಗಳಿಗಾಗಲಿ ಸುಂಕಕೊಡುವುದಿಲ್ಲ. ಆದರೆ ಮಾರಲಿಕ್ಕಾಗದ ಸರಕುಗಳನ್ನು ಇಳಿಸಿಕೊಳ್ಳುವುದಕ್ಕೆ ಸುಂಕ ಕೊಡದಿದ್ದರೆ ಕಂಪನಿಗೆ ಅಧಿಕ ಹಾನಿ ಆಗುತ್ತದೆ. ಎರಡು ವರ್ಷ ಗುತ್ತಿಗೆ ಆಧಾರದ ಮೇಲೆ ತೆರಿಗೆಯನ್ನು ಗುತ್ತಿಗೆಗೆ ಬಿಡಲಾಗಿದ್ದು, ಅದು ಮರಳಿ ಇಡಿಯಾಗಿ ಕಂಪನಿ ಕೈಗೆ ಬರುವವರೆಗೆ, ಅವರಿಗೆ ಕೊಡುವ ಸೌಲಭ್ಯದಿಂದ ಕಂಪನಿಯ ಆದಾಯಕ್ಕೆ ಧಕ್ಕೆ ಬರುವುದಿಲ್ಲ.
“ಏಳನೆಯ ಬೇಡಿಕೆಯ ವಿಷಯಕ್ಕೆ, ನಮ್ಮ ಕಾಯಿದೆಯ ಪ್ರಕಾರ, ಯಾವುದೇ ವ್ಯಕ್ತಿಯು ಒಬ್ಬರಿಗಿಂತ ಹೆಚ್ಚು ಜನರ ಸಾಲ ತೀರಿಸಬೇಕಾಗಿದ್ದಲ್ಲಿ ಯಾರು ಕೋರ್ಟಿನಲ್ಲಿ ಮೊದಲು ತೀರ್ಪು ಪಡೆಯುತ್ತಾರೊ ಅವರ ಋಣವನ್ನು ಮೊದಲು ತೀರಿಸಲಾಗುವುದು. ಆದರೆ ಅದಕ್ಕಾಗಿ ಯಾರೂ ಖೇದಪಡಬೇಕಾಗಿಲ್ಲ. ಒಮ್ಮೆ ಕೊಟ್ಟಿರುವ ಹಣದ ಮೇಲೆ ಯಾವ ಸಾಲಗಾರನ ಹಕ್ಕು ಇರುವುದಿಲ್ಲ. ಏಕೆಂದರೆ ಅದರ ಒಡೆಯನಾಗುವುದಿಲ್ಲ. ತೀರ್ಪುಕೊಟ್ಟಾಗ ಕಾಯಿದೆ ಪ್ರಕಾರ ಕೊಟ್ಟಂತಾಗುವದು. ಆದ್ದರಿಂದ (ತೀರ್ಪು ಬಾರದೆ) ಅದರ ಒಡೆಯನಾಗಲಾರ. ಆದರೆ ಒಬ್ಬ ವ್ಯಕ್ತಿ ಇಬ್ಬರಿಂದ ಹಣ ಪಡೆದಿದ್ದರೆ, ಮೊದಲು ಒಬ್ಬ ದಾವೆ ಮಾಡುತ್ತಾನೆ. ಅನಂತರ ಎರಡನೆಯವನು ದಾವೆ ಮಾಡುತ್ತಾನೆ. ಎರಡನೆಯವನಿಗೆ ಯಾವ ನ್ಯಾಯದ ಪ್ರಕಾರ ಸಾಲಕೊಂಡವನ ಆಸ್ತಿಪಾಸ್ತಿಯನ್ನು ಕೊಡಲಿಕ್ಕಾಗುತ್ತದೆ. ಇಷ್ಟೆ, ನಮ್ಮ ಕಾಯಿದೆ ಪ್ರಕಾರ ಅವನಿಗೆ ಸಾಧ್ಯವಿದ್ದಷ್ಟು ಬೇಗ ನ್ಯಾಯ ದೊರಕಿಸುವ ಯತ್ನ ಮಾಡಲಾಗುವುದು ಮತ್ತು ಸಂಬಂಧಿಸಿದ ಸಾಲಗಾರರನ್ನು ಪೂರ್ಣ ಸಾಲ ಮರುಪಾವತಿ ಮಾಡಲು ಒತ್ತಾಯಿಸಲಾಗುವುದು. ಮತ್ತು ಕೊಡದಿರುವ ಮೊತ್ತದ ಸಲುವಾಗಿ ಗವರ್ನರ್ ಅವರು ಬಿಡುಗಡೆಗೆ ಆಜ್ಞೆ ಮಾಡುವವರೆಗೆ ಜೇಲಿನಲ್ಲಿ ಇರಿಸಲಾಗುವುದು. ಇಷ್ಟರಿಂದ ಅವನಿಗೆ ತೃಪ್ತಿ ಆಗಬಹುದೆಂದು ನಾವು ಭಾವಿಸುತ್ತೇವೆ.
“ಎಂಟನೆಯ ಸವಲತ್ತಿನ ಪ್ರಕಾರ, ಯುದ್ಧ ಸಾರಿದರೆ, ಎಲ್ಲ ಗೌರವಸ್ಥರಿಗೆ, ಕೋಟೆಗೆ ಹೋಗಿ ಅಲ್ಲಿ ತಮ್ಮ ನಗನಾಣ್ಯ ಮತ್ತು ಬೇರೆ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿಡುವ ಸ್ವಾತಂತ್ರ್ಯ ಇರುತ್ತದೆ. ಕೋಟಿಯನ್ನು ಕಚ್ಚಾ ಮತ್ತು ಉರುಟು ವಸ್ತುಗಳಿಂದ ತುಂಬುತ್ತಾನೆಂದು ನಾನೇನೂ ತಿಳಿಯುವದಿಲ್ಲ. ಆದರೆ ಸಣ್ಣ ಖೋಲೆ ಹಿಡಿಸುವಷ್ಟು ಆಭರಣ, ಮನೆಯ ಸಾಮಾನು, ಬೆಲೆಬಾಳುವ ಬಟ್ಟೆ ಮುಂತಾದವನ್ನು ತಾನು ಇಚ್ಚಿಸಿದಷ್ಟು ತರಬಹುದು ಮತ್ತು ತನಗೆ ಮತ್ತು ತನ್ನ ಕುಟುಂಬದವರಿಗಾಗಿ ಒಂದು ಉಗ್ರಾಣವನ್ನು ಕೊಡಲಾಗುವುದು.
“ಒಂಬತ್ತನೆಯ ಮತ್ತು ಹತ್ತನೆಯ ಸವಲತ್ತುಗಳನ್ನು ಒಟ್ಟಿಗೆ ಕೂಡಿಸಬಹುದು. ಅವು ಕೇವಲ ಸಂಖ್ಯೆಯನ್ನು ಬೆಳೆಸಲಿಕ್ಕೆ ಬೇರೆ ಬೇರೆ ಇರುತ್ತವೆ. ಅವನ್ನು ಅನುಷ್ಠಾನಕ್ಕೆ ತಂದರೆ ನಮ್ಮ ಸರಕಾರವು ನಗದಿರಲಾರದು. ಏಕೆಂದರೆ, ಅವರು ಈಗಾಗಲೆ ಕೇಳುವುದಕ್ಕಿಂತ ಹೆಚ್ಚು ಸವಲತ್ತು ಪಡೆದಿರುತ್ತಾರೆ. ಏಕೆಂದರೆ, ಕೋಟೆಯೊಳಗೆ ಹೋಗಲಿಕ್ಕೆ ಮತ್ತು ಕೋಟೆಯಿಂದ ಹಿಂದಿರುಗಲಿಕ್ಕೆ ಪರವಾನಗಿಯನ್ನು ( ಪುಟ 135)
ಸರಿಯಾದ ಮುನ್ಸೂಚನೆ ಕೊಟ್ಟಿದ್ದರೆ, ಯಾರಿಗೂ ಅಲ್ಲಗಳೆಯುವುದಿಲ್ಲ ಮತ್ತು ತನ್ನಿಷ್ಟ ಬಂದಷ್ಟು ಕುದುರೆಗಾಡಿ, ಕುದುರೆ ಮುಂತಾದವುಗಳನ್ನು ಇಟ್ಟುಕೊಳ್ಳಬಹುದು. ಸೇವಕರು ಇಷ್ಟವಿದ್ದ ಆಯುಧ ಧರಿಸಬಹುದು. ಇದು ಸಾಮಾನ್ಯ ಸವಲತ್ತಾಗಿರುತ್ತದೆ. ನಿರಂತರವಾಗಿ ವಸ್ತುಗಳನ್ನು ಕೊಳ್ಳುವ ಮತ್ತು ಮಾರುವ ಸ್ವಾತಂತ್ರ್ಯಕ್ಕಿಂತ ಹೆಚ್ಚೇನೂ ನಮ್ಮಿಂದ ಬೆಳೆದಿರುವುದಿಲ್ಲ. ಈ ಸ್ವಾತಂತ್ರ್ಯವೇ ಉದ್ಯೋಗದ ಲೋಹಚುಂಬಕ.
“ಕೊನೆಯದಾಗಿ ಸುಂಕ ಹಾಕದೆ ಹತ್ತು ಮಣ ತಂಬಾಕನ್ನು ಇಟ್ಟುಕೊಳ್ಳಲು ಪರವಾನಗಿ ಕೇಳುವುದೆ ಹೆಚ್ಚು ಕಠಿಣವಾದ ಬೇಡಿಕೆ ಅನಿಸುತ್ತದೆ. ಯಾಕೆಂದರೆ ಇಂತಹ ಬೇಡಿಕೆಗಳನ್ನು ಈಡೇರಿಸಿದ್ದಾದರೆ, ಒಕ್ಕಲಿಗರು ಇನ್ನೂ ಹೆಚ್ಚಿನ ಸವಲತ್ತು ಕೇಳುತ್ತಾರೆ. ಹತ್ತು ಮಣ ತಂಬಾಕು ಮಾರಿದರೆ ಅವರಿಗೆ ಬಹಳಷ್ಟು ಲಾಭಸಿಗುತ್ತದೆ. ಈ ಬೇಡಿಕೆಯನ್ನು ಹೇಗೆ ಈಡೇರಿಸಬೇಕೆಂಬುದು ನಮಗೆ ತಿಳಿಯದಾಗಿದೆ. ಈ ವಿಷಯದಲ್ಲಿ ತಾವು ನಮಗಿಂತಲೂ ಹೆಚ್ಚು ಉತ್ತಮ ನಿರ್ಣಯ ತೆಗೆದುಕೊಳ್ಳಲು ಶಕ್ಯರು (ಇದು ಬಹುಶಃ ನೀಮಾ ಪಾರಖ್ ರ ಹೊಸ ಬೇಡಿಕೆ ಇದ್ದಂತಿದೆ.)
೩೪) ಅದಕ್ಕೆ ಉತ್ತರವಾಗಿ ದಿನಾಂಕ ೨೬ ನೇ ಏಪ್ರಿಲ್ ಸೂರತ್ ಕೌನ್ಸಿಲ್ ಹೀಗೆ ಬರೆಯಿತು. (ಬಾಂಬೆ ಗೆಜೆಟಿಯರ್, ಸಂಪುಟ ೧, ಪುಟ ೨೨) ನೀಮಾ ಪರಖಾ ಬನಿಯಾರು ಮುಂಬೈಯಲ್ಲಿ ನೆಲೆಸುವ ಸಲುವಾಗಿ ಮಂಡಿಸಿದ ಬೇಡಿಕೆಗಳನ್ನು ಕುರಿತು ಬರೆದ ನಿಮ್ಮ ಉತ್ತರವನ್ನು ನಾವು ಗಮನಿಸುತ್ತೇವೆ. ಮತ್ತೊಮ್ಮೆ ಅವರ ಬೇಡಿಕೆಗಳ ಬಗೆಗೆ ವಿಚಾರಿಸುವಾಗ, ಈ ನಡುಗಡ್ಡೆಯಲ್ಲಿ ಯಾರೂ ನಮ್ಮ ವಿಷಯಕ್ಕೆ ಎಳ್ಳಷ್ಟು ತಪ್ಪು ತಿಳುವಳಿಕೆ ಆಗದಂತೆ ಜಾಗ್ರತೆವಹಿಸುವೆವು ಮತ್ತು ಸುಂಕರಹಿತವಾಗಿ ಪ್ರತಿವರುಷ ೧೦ ಮಣ ತಂಬಾಕನ್ನು ಈ ನಡುಗಡ್ಡೆಯಲ್ಲಿ ಪಡೆಯುವ ಇಲ್ಲವೆ ತರುವ ಬೇಡಿಕೆಯನ್ನು ಇಡಿಯಾಗಿ ಒಪ್ಪುವುದನ್ನು ಬಿಟ್ಟು ಅವರ ಉಳಿದೆಲ್ಲ ಬೇಡಿಕೆಗಳನ್ನು ನಾವು ಎತ್ತಿಹಿಡಿಯುತ್ತೇವೆ.
ಅಂಶ (೫)
ಮುಂಬೈ-ಭಾರತದ ಮಾರಾಟ ಮಳಿಗೆ
೩೫) ಮುಂಬೈ ಭಾರತದ ಮಾರಾಟ ಮಳಿಗೆ ಎಂಬುದನ್ನು ಒಪ್ಪಬಹುದು. ಆದರೆ ಅದೇ ಕಾರಣದಿಂದ ಮಹಾರಾಷ್ಟ್ರ ಮುಂಬೈಯನ್ನು ತನ್ನದೆಂದು ಸಾಧಿಸಲಿಕ್ಕೆ ಆಗದೆಂದು ಹೇಳುವ ಮಾತನ್ನು ಅರ್ಥ ಮಾಡಿಕೊಳ್ಳುವುದು ಕಠಿಣವೆನಿಸುತ್ತದೆ. ಪ್ರತಿಯೊಂದು ಬಂದರು ಸೇವೆ ಸಲ್ಲಿಸುವ ಪ್ರದೇಶ ತನ್ನ ದೇಶವಲ್ಲದೆ ಹೊರದೇಶಗಳನ್ನೂ ಒಳಗೊಂಡಿರುತ್ತದೆ. ಆಗ ಆ ಬಂದರವನ್ನು ಅದು ಯಾವ ದೇಶದ ಭೂಭಾಗದಲ್ಲಿರುತ್ತದೆಯೋ ಆ ದೇಶ ತನ್ನದೆಂದು ಕರೆಯಲಿಕ್ಕಾಗದೆಂದು ಹೇಳಲಿಕ್ಕಾಗದು. ಸ್ವಿಟ್ಜರ್ ಲೆಂಡ್‌ಗೆ ತನ್ನದೇ ಆದ ಬಂದರು ಇರುವುದಿಲ್ಲ. ಅದು ಜರ್ಮನ್, ಇಟಾಲಿಯನ್ ಇಲ್ಲವೆ ಫ್ರೆಂಚ್ ಬಂದರುಗಳನ್ನು ಉಪಯೋಗಿಸುತ್ತದೆ. ಅದಕ್ಕಾಗಿ ಜರ್ಮನಿ, ಇಟಲಿ ಇಲ್ಲವೆ ಫ್ರಾನ್ಸ್ ಗೆ ತಮ್ಮ ಬಂದರುಗಳ ಮೇಲಿರುವ ಪ್ರಾದೇಶಿಕ ಅಧಿಕಾರವನ್ನು ಸ್ವಿಟ್ಟರ್‌ಲೆಂಡ್ ಅಲ್ಲಗಳೆಯಬಲ್ಲದೆ? ಮಹಾರಾಷ್ಟ್ರವಲ್ಲದೆ ಇನ್ನುಳಿದ ಪ್ರಾಂತಗಳಿಗೂ ಬಂದರಾಗಿ ಸೇವೆ ಸಲ್ಲಿಸುತ್ತಿರುವ ಕಾರಣಕ್ಕಾಗಿ, ಮುಂಬೈ ತನ್ನದೆಂದು ಕರೆದುಕೊಳ್ಳುವ ಅಧಿಕಾರವನ್ನು (ಪುಟ 136)
ಮಹಾರಾಷ್ಟ್ರೀಯರಿಗೆ ಏಕೆ ಅಲ್ಲಗಳೆಯಬೇಕು? ಮಹಾರಾಷ್ಟೇತರರಿಗೆ ಮುಂಬೈ ಬಂದರನ್ನು ಮುಚ್ಚಿಬಿಡುವ ಅಧಿಕಾರವನ್ನು ಮಹಾರಾಷ್ಟ್ರ ಹೊಂದಿದ್ದರೆ ಆಗ ವಸ್ತು ಸ್ಥಿತಿ ಬದಲಾಗುತ್ತಿತ್ತು. ಸಂವಿಧಾನದ ಪ್ರಕಾರ ಹಾಗೆ ಮಾಡುವ ಅಧಿಕಾರ ಅದಕ್ಕಿರುವುದಿಲ್ಲ. ಇದರ ಪರಿಣಾಮವಾಗಿ ಮುಂಬೈ ಅನ್ನು ಮಹಾರಾಷ್ಟ್ರದಲ್ಲಿ ಸೇರಿಸುವುದರಿಂದ, ಅದರ ಸೇವೆಯನ್ನು ಹಿಂದಿನಂತೆಯೇ ಬಳಸಿಕೊಳ್ಳುವ ಮಹಾರಾಷ್ಟೇತರ ಪ್ರಾಂತ್ಯಗಳ ಹಕ್ಕಿಗೆ ಧಕ್ಕೆ ಬರುವುದಿಲ್ಲ.
ಅಂಶ (೬)
ಗುಜರಾತಿಗಳು-ಮುಂಬೈಯ ವ್ಯಾಪಾರ ಮತ್ತು ಉದ್ದಿಮೆಯ ಒಡೆಯರು
೩೬) ವ್ಯಾಪಾರದಲ್ಲಿ ಗುಜರಾತಿಗಳದೇ ಏಕಸ್ವಾಮ್ಯ ಎಂಬುದನ್ನು ಒಪ್ಪಬಹುದು. ಆದರೆ ಈ ಏಕಸ್ವಾಮ್ಯವನ್ನು ಈಸ್ಟ್ ಇಂಡಿಯಾ ಕಂಪನಿ ಅವರು ಮುಂಬೈಯಲ್ಲಿ ನೆಲೆಸುವಾಗ ಕೊಡಮಾಡಿದ ಸವಲತ್ತುಗಳ ಲಾಭದಿಂದ ಪಡೆಯಲು ಶಕ್ಯವಾಯಿತು. ಮುಂಬೈಯ ವ್ಯಾಪಾರ ಉದ್ದಿಮೆಗಳನ್ನು ಯಾರು ಸ್ಥಾಪಿಸಿದರೆಂಬುದನ್ನು ತಿಳಿದುಕೊಳ್ಳಲು ದೊಡ್ಡ ಸಂಶೋಧನೆಯ ಅವಶ್ಯಕತೆ ಇರುವುದಿಲ್ಲ. ಗುಜರಾತಿಗಳು ಮುಂಬೈಯ ವ್ಯಾಪಾರ ಉದ್ದಿಮೆಗಳನ್ನು ಸ್ಥಾಪಿಸಿದರೆನ್ನುವ ಹೇಳಿಕೆಗೆ ಯಾವ ಆಧಾರವೂ ಇರುವುದಿಲ್ಲ. ಅದನ್ನು ಸ್ಥಾಪಿಸಿದವರು ಗುಜರಾತಿಗಳಲ್ಲ, ಯೂರೋಪಿಯನ್ನರು. ಗುಜರಾತಿಗಳು ಎಂದು ಹೇಳುವವರು, ಹಾಗೆ ಹೇಳುವುದಕ್ಕೆ ಮೊದಲು ಟೈಮ್ಸ್ ಆಫ್ ಇಂಡಿಯಾ ಕೈಪಿಡಿಯನ್ನು ಓದಲಿ, ಅದರ ಪ್ರಕಾರ ಗುಜರಾತಿಗಳು ಕೇವಲ ವರ್ತಕರಾಗಿದ್ದಾರೆ. ಉದ್ದಿಮೆದಾರರಾಗಿರುವುದು ಬೇರೆ ವಿಷಯ, ವರ್ತಕರು ಉದ್ದಿಮೆದಾರರು ಒಂದೇ ಆಗಲಾರದು.
೩೭) ಮುಂಬೈ ಮಹಾರಾಷ್ಟ್ರದ್ದೆಂದು ಒಮ್ಮೆ ಸಾಬೀತು ಆದಮೇಲೆ ಮುಂಬೈಯನ್ನು ತನ್ನೊಳಗೆ ಸೇರಿಸಿಕೊಳ್ಳುವ ಮಹಾರಾಷ್ಟ್ರದ ಹಕ್ಕನ್ನು, ಮುಂಬೈಯ ವ್ಯಾಪಾರ, ಉದ್ದಿಮೆಗಳು ಗುಜರಾತಿಗಳ ಒಡೆತನದಲ್ಲಿವೆ ಎಂಬ ವಾದ ಹತ್ತಿಕ್ಕಲಾರದು. ಒತ್ತೆ ಕೊಟ್ಟ ನಿವೇಶನದಲ್ಲಿ ಒತ್ತೆ ತೆಗೆದುಕೊಂಡವನು ಶಾಶ್ವತ ಕಟ್ಟಡಗಳನ್ನು ಕಟ್ಟಿಸಿಕೊಂಡಿರುವ ಕಾರಣಕ್ಕಾಗಿ, ನಿವೇಶನದ ಮೇಲೆ ಇರುವ ಮೂಲ ಒಡೆಯನ ಹಕ್ಕನ್ನು ತೆಗೆದುಹಾಕಲು ಬರುವುದಿಲ್ಲ. ಗುಜರಾತಿಗಳು ವ್ಯಾಪಾರ ಉದ್ದಿಮೆಗಳನ್ನು ಸ್ಥಾಪಿಸಿದ್ದಾರೆಂದರೂ ಕೂಡ, ಅವರ ಸ್ಥಿತಿ ಒತ್ತೆ ನೆಲದ ಮೇಲೆ ಮನೆಕಟ್ಟಿಕೊಂಡವರ ಸ್ಥಿತಿಗಿಂತ ಭಿನ್ನವಿರುವುದಿಲ್ಲ.
೩೮) ಆದರೆ, ಮುಂಬೈ ಮಹಾರಾಷ್ಟ್ರದಲ್ಲಿ ಸೇರಬೇಕೊ, ಬೇಡವೊ ಎಂಬುದನ್ನು ನಿರ್ಧರಿಸಬೇಕಾದ ಸಮಸ್ಯೆಗೆ, ಮುಂಬೈಯ ವ್ಯಾಪಾರ ಮತ್ತು ಉದ್ದಿಮೆಗಳನ್ನು ಯಾರು ಸ್ಥಾಪಿಸಿದರೆಂಬುದು ಅಪ್ರಸ್ತುತ. ವ್ಯಾಪಾರ ಮತ್ತು ಉದ್ದಿಮೆಗಳ ಮೇಲಿನ ಏಕಸ್ವಾಮ್ಯವನ್ನು ಆಧರಿಸಿರುವ ವಾದ ನಿಜವಾಗಿಯೂ ರಾಜಕೀಯ ವಾದವಾಗಿರುತ್ತದೆ. ಒಡೆಯರು ಆಳುಗಳ ಮೇಲೆ ಒಡೆತನ ಸಾಧಿಸಬಹುದು; ಆದರೆ ಆಳುಗಳು ಒಡೆಯರ ಮೇಲೆ ತಮ್ಮ ಒಡೆತನವನ್ನು ಸಾಧಿಸಲು ಎಂದೂ ಪರವಾನಗಿ ಕೊಡಬಾರದೆಂದು ಇದರ ಅರ್ಥವಾಗುತ್ತದೆ. ಈ ವಾದಸರಣಿಯನ್ನು ಅನುಸರಿಸುವವರಿಗೆ ತಾವು ಏನನ್ನು ವಿರೋಧಿಸುತ್ತಿರುವೆವೆಂಬುದು ಗೊತ್ತಿದ್ದಂತೆ ತೋರುವುದಿಲ್ಲ. ಈ ವಾದವನ್ನು ಮುಂಬೈ ನಗರದ ಸಮಸ್ಯೆಗೆ ಸೀಮಿತಗೊಳಿಸಬೇಕೆ ಅಥವಾ ಎಲ್ಲಕ್ಕೂ ಅನ್ವಯಿಸಬೇಕೆ ಎಂಬುದರ ಬಗ್ಗೆ ಅವರ ವಿರೋಧ ಮಾತ್ರ ಸುಸ್ಪಷ್ಟವಾಗಿದೆ. (ಪುಟ 137)
೩೯) ಅದನ್ನು ಎಲ್ಲ ಕಡೆಗೂ ಏಕೆ ಅನ್ವಯಿಸಬಾರದೆನ್ನುವುದಕ್ಕೆ ಕಾರಣವಿರುವುದಿಲ್ಲ. ಏಕೆಂದರೆ, ಮುಂಬೈಯ ಜನರನ್ನು ಒಡೆಯರು ಮತ್ತು ಆಳುಗಳು ಇಲ್ಲವೆ ಬಂಡವಾಳಗಾರರು ಮತ್ತು ಕೂಲಿ ಆಳುಗಳಾಗಿ ಮಾಡುವ ಹಾಗೆ ಗುಜರಾಥ ಪ್ರಾಂತವನ್ನು ಇಲ್ಲವೆ ಭಾರತದಲ್ಲಿಯ ಎಲ್ಲ ಪ್ರಾಂತಗಳನ್ನು ಎರಡು ಭಾಗ ಮಾಡಬೇಕಾಗುತ್ತದೆ. ಮುಂಬೈಯ ಒಡೆಯ ಮತ್ತು ಬಂಡವಾಳಗಾರರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಮುಂಬೈಯನ್ನು ಕೆಲಸಗಾರರು ತುಂಬಿರುವ ಮಹಾರಾಷ್ಟ್ರದ ಹೊರಗಿಟ್ಟರೆ, ಗುಜರಾತಿನ ಬಂಡವಾಳಗಾರರನ್ನು ಅಲ್ಲಿಯ ಗುಜರಾತಿ ಕಾರ್ಮಿಕರಿಂದ ರಕ್ಷಿಸಲು ಯಾವ ವಿಧಾನ ಸೂಚಿಸುತ್ತಾರೆ? ಮುಂಬೈಯಲ್ಲಿರುವ ಗುಜರಾತಿಗಳ ಪರ ವಾದ ಮಂಡಿಸಲು ತಲೆಕೆದರಿಕೊಳ್ಳುತ್ತಿರುವ ವಕೀಲ ಮತ್ತು ದಾಂತವಾಲಾರಂಥ ಪ್ರಾಧ್ಯಾಪಕರು ಗುಜರಾತಿನ ಕಾರ್ಮಿಕವರ್ಗದವರಿಂದ ಗುಜರಾತಿನ ಬಂಡವಾಳಗಾರರನ್ನು ರಕ್ಷಿಸುವ ಉಪಾಯ ಮತ್ತು ವಿಧಾನದ ಬಗೆಗೆ ಯೋಚಿಸಿರುವುದಿಲ್ಲ. ಪ್ರೌಢ ಮತದಾನವನ್ನು ಕೈಬಿಡುವುದೊಂದೇ ಅವರು ಸೂಚಿಸಬಹುದಾದ ಉಪಾಯ ಆಗಿರುತ್ತದೆ. ಮುಂಬೈ ಬಂಡವಾಳಗಾರರನ್ನಷ್ಟೇ ರಕ್ಷಿಸುವುದಾಗಿರದೆ ಎಲ್ಲ ಬಂಡವಾಳಗಾರರನ್ನು ರಕ್ಷಿಸುವ ಉದ್ದೇಶ ಅವರದಾಗಿದ್ದರೆ, ಇದೊಂದೇ ಉಪಾಯ ಇರುತ್ತದೆ.
೪೦) ಆದಾಗ್ಯೂ ಈ ಪ್ರಾಧ್ಯಾಪಕರು ಒತ್ತಿ ವಾದಿಸಬಹುದಾದಂಥ ಒಂದು ಅಂಶವಿರುತ್ತದೆ. ಅದೇನೆಂದರೆ, ಮುಂಬೈ ಮಹಾರಾಷ್ಟ್ರದಲ್ಲಿ ಸೇರಿದ್ದಾದರೆ, ಮಹಾರಾಷ್ಟ್ರೀಯರು ಬಹುಸಂಖ್ಯೆಯಲ್ಲಿರುವುದರಿಂದ ಅವರು ಮುಂಬೈಯಲ್ಲಿರುವ ಗುಜರಾತಿ ಬಂಡವಾಳಗಾರರ ವಿಷಯದಲ್ಲಿ ತಾರತಮ್ಯ ಮಾಡಬಹುದೆಂಬುದು ಇಂತಹ ವಾದವನ್ನು ಯಾರಾದರೂ ಪ್ರಶಂಸಿಸಬಹುದು. ಆದರೆ, ಈ ವಾದವನ್ನು ಬಳಸುವವರು ಕೆಳಗಿನ ಎರಡು ಸಂಗತಿಗಳನ್ನು ಗಮನಿಸಬೇಕು.
೧) ಇಂತಹ ಸ್ಥಿತಿಯು ಕೇವಲ ಮಹಾರಾಷ್ಟ್ರದಲ್ಲಷ್ಟೇ ಅಲ್ಲ. ಅದು ಯಾವುದೇ ಪ್ರಾಂತದಲ್ಲಿ ಉದ್ಭವಿಸಬಹುದು. ಬಿಹಾರದ ಬಗೆಗೆ ಇಲ್ಲಿ ಹೇಳಬಯಸುತ್ತೇನೆ. ಬಿಹಾರದಲ್ಲಿಯ ಕಲ್ಲಿದ್ದಲು ದೊರೆಯುವ ಪ್ರದೇಶ ಬಿಹಾರದ ಜನರಿಗೆ ಸಂಬಂಧಿಸಿದ್ದು. ಆದರೆ ಕಲ್ಲಿದ್ದಲು ಮಾಲಿಕರು ಗುಜರಾತಿಗಳು, ಕಾಥೇವಾಡದವರು, ಇಲ್ಲವೆ ಯೂರೋಪಿಯನ್ನರು ಆಗಿರುತ್ತಾರೆ. ಬಿಹಾರಿಗಳು ಗುಜರಾತಿಗಳು, ಕಾಥೇವಾಡಿಗಳ ಇಲ್ಲವೆ ಯೂರೋಪಿಯನ್ನರ ನಡುವೆ ತಾರತಮ್ಯ ಮಾಡುವ ಸಾಧ್ಯತೆ ಇರುವುದಿಲ್ಲ. ಬಿಹಾರದ ಕಲ್ಲಿದ್ದಲು ಕ್ಷೇತ್ರಗಳನ್ನು ಬಿಹಾರ ಪ್ರಾಂತದ ಹೊರಗುಳಿಸಿ, ಕಾಥೇವಾಡ ಮತ್ತು ಗುಜರಾತಿನ ಕಲ್ಲಿದ್ದಲು ಗಣಿಮಾಲಿಕರ ಹಿತದೃಷ್ಟಿಯಿಂದ ಇನ್ನೊಂದು ಪ್ರತ್ಯೇಕ ಪ್ರಾಂತ ಮಾಡಬೇಕೆ?
೨) ಭಾರತದ ಸಂವಿಧಾನವು ಅಲ್ಪಸಂಖ್ಯಾತರ ವಿರುದ್ಧ ಆಗಬಹುದಾದ ತಾರತಮ್ಯದ ಸಾಧ್ಯತೆಯನ್ನು ಗಮನಿಸಿರುತ್ತದೆ. ಅಲ್ಲದೆ ಅದನ್ನು ತಡೆಯಲು ಸಾಕಷ್ಟು ಅವಕಾಶ ಕಲ್ಪಿಸಿರುತ್ತದೆ. ತಾರತಮ್ಯ ಮಾಡುವುದರ ವಿರುದ್ಧ ಕಾಯಿದೆಗಳಿರುತ್ತವೆ. ಹಾನಿ ಭರಿಸುವ ಕುರಿತು ಕಾಯಿದೆಗಳಿರುತ್ತವೆ. ಯಾವುದೆ ನಾಗರಿಕನಿಗೆ ಆಗುವ ಅಪಾಯ, ಅನ್ಯಾಯ ಇಲ್ಲವೆ ಕಿರುಕುಳ ತಡೆಯಲು ವ್ಯಕ್ತಿಗಳ ಮತ್ತು ಸರಕಾರಗಳ ವಿರುದ್ಧ ವಿಶೇಷ ಸವಲತ್ತಿನ ರಿಟ್‌ಗಳನ್ನು ಕೊಡುವ ಅಧಿಕಾರ ಹೊಂದಿರುವ ಉಚ್ಚನ್ಯಾಯಾಲಯಗಳಿರುತ್ತವೆ. ತಾರತಮ್ಯತೆಯ ವಿರುದ್ಧ ಮುಂಬೈಯ ಗುಜರಾತಿ ವರ್ತಕರು ಮತ್ತು ಉದ್ದಿಮೆದಾರರಿಗೆ ಇದಕ್ಕೂ ಎಂಥ ಹೆಚ್ಚಿನ ರಕ್ಷಣೆ ಬೇಕಾಗಿರುತ್ತದೆ? (ಪುಟ 138)
ಅಂಶ (2)
ಮುಂಬೈಯ ಹೆಚ್ಚಿನ ಆದಾಯದ ಮೇಲೆ ಮಹಾರಾಷ್ಟ್ರದ ಕಣ್ಣು
೪೧) ಮುಂಬೈಯ ಹೆಚ್ಚುವರಿ ಆದಾಯದ ಮೇಲೆ ಮಹಾರಾಷ್ಟ್ರದ ಕಣ್ಣಿರುವುದನ್ನು ನಿಂದಿಸುವುದಕ್ಕೆ ಮುಂಚೆ ಮುಂಬೈಯ ಆದಾಯ ಅದರ ವೆಚ್ಚಕ್ಕಿಂತ ಹೆಚ್ಚಿರುತ್ತದೆಂದು ಸಿದ್ಧಮಾಡಬೇಕು. ಹೆಚ್ಚಿದಂತೆ ತೋರುತ್ತಿರುವುದು ನಿಜವಾಗಿಯೂ ಲೆಕ್ಕದಲ್ಲಿ ತಪ್ಪಾಗಿರುವುದರಿಂದ. (೧) ಗವರ್ನರ್ ಮತ್ತು ಅವರ ಸಿಬ್ಬಂದಿ (೨) ಮಂತ್ರಿ ಮಹೋದಯರು ಮತ್ತು ಅವರ ಸಿಬ್ಬಂದಿ (೩) ಶಾಸಕಾಂಗ ಮತ್ತು ಅದರ ಮೇಲಿನ ವೆಚ್ಚ (೪) ನ್ಯಾಯಾಂಗ (೫) ಪೊಲೀಸ್ ಮತ್ತು (೬) ಪ್ರಾಂತೀಯ ಕಚೇರಿಗಳ ವ್ಯವಸ್ಥೆ (ಕಮೀಷನರ್ ಆಫ್ ಪೊಲೀಸ್ ಮತ್ತು ಡೈರೆಕ್ಟರ್ ಆಫ್ ಪಬ್ಲಿಕ್ ಇನ್‌ಸ್ಪೆಕ್ಷನ್), ಪೊಲೀಸ್ ಕಮೀಷನರ್ ಮತ್ತು ಶಿಕ್ಷಣ ಇಲಾಖೆ ನಿರ್ದೇಶಕರು-ಈ ಪ್ರತಿಯೊಬ್ಬರ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ತಪ್ಪಾಗುತ್ತದೆ. ಸದ್ಯದ ತೆರಿಗೆ ದರದ ಪ್ರಕಾರ ಮೇಲಿನ ಖರ್ಚಿನ ಬಾಬತ್ತುಗಳನ್ನು ಮುಂಬೈಯ ಖರ್ಚಿಗೆ ಸೇರಿಸಿದರೆ ಮುಂಬೈಯಿ ಆದಾಯ ಹೆಚ್ಚಾಗುವುದಿಲ್ಲ. ಮುಂಬೈಯ ವೆಚ್ಚದಲ್ಲಿ ಇದನ್ನೆಲ್ಲ ಸೇರಿಸುವುದನ್ನು ಬಿಟ್ಟು ಅನಂತರ ಆದಾಯ ಹೆಚ್ಚಿರುವುದೆಂದು ಹೇಳುವುದು ತಪ್ಪು ಸಿದ್ದಾಂತವಾಗುತ್ತದೆ.
೪೨) ಮುಂಬೈಯ ಹೆಚ್ಚುವರಿ ಆದಾಯದ ಮೇಲೆ ಜೀವಿಸುವ ಉದ್ದೇಶದಿಂದ ಮಹಾರಾಷ್ಟ್ರೀಯರು ಮುಂಬೈಯನ್ನು ಕೇಳುತ್ತಿದ್ದಾರೆನ್ನುವ ಹೇಳಿಕೆ ನಿಜಕ್ಕೂ ತಪ್ಪಾಗಿರುವುದಷ್ಟೆ ಅಲ್ಲ, ಅದು ಮಹಾರಾಷ್ಟ್ರೀಯರ ಉದ್ದೇಶದ ಬಗೆಗೆ ಸಂದೇಹ ಹುಟ್ಟಿಸುತ್ತದೆ. ಮಹಾರಾಷ್ಟ್ರೀಯರು ಇಂತಹ ಉದ್ದೇಶದಿಂದ ಪ್ರೇರಿತರಾಗಿರುವರೆಂದು ನನಗೆ ಅನಿಸುವುದಿಲ್ಲ. ಅವರು ವ್ಯಾಪಾರಿಗಳಲ್ಲ. ಉಳಿದ ಸಮುದಾಯ ಹಾಗೆ ಅವರಿಗೆ ಹಣದ ಆಶೆ ಇರುವುದಿಲ್ಲ. ಇದು ಅವರ ಉಚ್ಚಗುಣಗಳಲ್ಲಿ ಒಂದು ಎಂದು ನಂಬಿದವರಲ್ಲಿ ನಾನೂ ಒಬ್ಬ. ಎಂದೂ ಹಣ ಅವರ ದೇವತೆ ಆಗಿರುವುದಿಲ್ಲ. ಅದೆಂದೂ ಅವರ ಸಂಸ್ಕೃತಿಯ ಭಾಗ ಆಗಿರುವುದಿಲ್ಲ. ಅದಕ್ಕಾಗಿಯೇ ಅವರು ಹೊರಗಡೆಯಿಂದ ಬಂದ ಉಳಿದೆಲ್ಲ ಸಮಾಜದವರಿಗೆ ವ್ಯಾಪಾರ, ಉದ್ದಿಮೆಯ ಮೇಲೆ ಏಕಸ್ವಾಮ್ಯ ಸಾಧಿಸಲು ಅವಕಾಶ ಕೊಟ್ಟಿರುತ್ತಾರೆ. ಆದರೆ ನಾನು ತೋರಿಸಿಕೊಟ್ಟಂತೆ, ಮುಂಬೈ ಹೆಚ್ಚಿನ ಆದಾಯ ಹೊಂದಿರುವುದಿಲ್ಲ ಮತ್ತು ಮಹಾರಾಷ್ಟ್ರೀಯರು ಅದರ ಮೇಲೆ ಕಣ್ಣಿಡುವ ಪ್ರಶ್ನೆ ಇರುವುದೇ ಇಲ್ಲ.
೪೩) ಒಂದು ವೇಳೆ ಅಂತಹ ಉದ್ದೇಶ ಮಹಾರಾಷ್ಟ್ರೀಯರಲ್ಲಿ ಇದ್ದರೆ ತಪ್ಪೇನಿದೆ? ಮುಂಬೈಯ ವ್ಯಾಪಾರ ಮತ್ತು ಉದ್ದಿಮೆಗಳನ್ನು ಸ್ಥಾಪಿಸುವುದಕ್ಕಾಗಿ ಬೇಕಾದ ಕೆಲಸಗಾರರನ್ನು ಒದಗಿಸುವಲ್ಲಿ ಎಲ್ಲ ಪ್ರಾಂತದವರಿಗಿಂತ ಮಹಾರಾಷ್ಟ್ರದವರು ಹೆಚ್ಚು ಮಹತ್ವದ ಪಾತ್ರ ವಹಿಸಿದ್ದಾರೆ ಮತ್ತು ಮುಂದಾದರೂ ಹಾಗೇ ಮಾಡಬಹುದೆನ್ನುವ ಕಾರಣದಿಂದ ಮುಂಬೈಯ ಹೆಚ್ಚುವರಿ ಆದಾಯದ ಮೇಲೆ ತಮ್ಮ ಹಕ್ಕು ಇರುವುದೆಂದು ಡಾಣಾಡಂಗುರ ವಾದಿಸಬಹುದು. ಉತ್ಪನ್ನದ ಮೇಲೆ ಹೆಚ್ಚಲ್ಲದಿದ್ದರೂ ಬಂಡವಾಳಕ್ಕಿರುವಷ್ಟು ಅಧಿಕಾರ ಕಾರ್ಮಿಕರದ್ದಿರುತ್ತದೆಂಬುದನ್ನು ಅಲ್ಲಗೆಳೆಯಲು ಎಂತಹ ಖ್ಯಾತ ಅರ್ಥಶಾಸ್ತ್ರಜ್ಞನಿಗೂ ಕಠಿಣವಾಗುತ್ತದೆ.
೪೪) ಎರಡನೆಯದಾಗಿ, ಮುಂಬೈಯ ಹೆಚ್ಚಿನ ಆದಾಯವನ್ನು ಕೇವಲ ಮಹಾರಾಷ್ಟ್ರದವರು ಉಪಯೋಗಿಸದೆ ಭಾರತದ ಜನರೆಲ್ಲ ಉಪಯೋಗಿಸುತ್ತಿದ್ದಾರೆ. ಮುಂಬೈ ಜನರು ಕೇಂದ್ರಕ್ಕೆ ಕೊಡುವ ಆದಾಯ ತೆರಿಗೆ, ತೆರಿಗೆ ಮೇಲಿನ ತೆರಿಗೆ (Super tax) ಮುಂತಾದ್ದು ಸಮಗ್ರ ಭಾರತದ ಸಲುವಾಗಿ (ಪುಟ 139)
ವೆಚ್ಚಮಾಡಲಾಗುತ್ತಿದೆ ಅದರ ಲಾಭವನ್ನು ಎಲ್ಲ ಪ್ರಾಂತದವರೂ ಹಂಚಿಕೊಳ್ಳುತ್ತಿದ್ದಾರೆ. ಯು.ಪಿ., ಬಿಹಾರ, ಅಸ್ಸಾಮ್, ಓರಿಸ್ಸಾ, ಪ. ಬಂಗಾಲ, ಪೂ, ಪಂಜಾಬ್ ಮತ್ತು ಮದ್ರಾಸ್ ಪ್ರಾಂತಗಳು ಮುಂಬೈಯ ಹೆಚ್ಚಿನ ಆದಾಯವನ್ನು ಕಬಳಿಸುವುದಕ್ಕೆ ಪ್ರೊ. ವಕೀಲ್ ಅವರ ಅಭ್ಯಂತರ ಇರುವುದಿಲ್ಲ. ಅವರ ಅಭ್ಯಂತರ ಇರುವುದು ಅದರ ಅಲ್ಪ ಅಂಶವನ್ನು ಮಹಾರಾಷ್ಟ್ರದವರು ಉಪಯೋಗಿಸುವುದಕ್ಕೆ ಇದಕ್ಕೆ ನ್ಯಾಯವಾದ ಎನ್ನುವುದಿಲ್ಲ. ಇದು ಕೇವಲ ಮಹಾರಾಷ್ಟ್ರದವರ ಬಗೆಗಿರುವ ತಮ್ಮ ದ್ವೇಷದ ಪ್ರದರ್ಶನವಾಗಿರುತ್ತದೆ.
೪೫) ಮುಂಬೈಯನ್ನು ಪ್ರತ್ಯೇಕ ಪ್ರಾಂತವನ್ನಾಗಿ ಮಾಡಿದರೂ. ಮಹಾರಾಷ್ಟ್ರ ಮುಂಬೈಯ ಹೆಚ್ಚುವರಿ ಆದಾಯದಲ್ಲಿ ತನ್ನ ಪಾಲನ್ನು ಪಡೆಯುವುದನ್ನು ಪ್ರೊ. ವಕೀಲ್ ಅವರು ಹೇಗೆ ತಪ್ಪಿಸುತ್ತಾರೆಂಬುದು ನನಗೆ ತಿಳಿಯುವುದಿಲ್ಲ. ಮುಂಬೈ ಪ್ರತ್ಯೇಕ ಪ್ರಾಂತವಾದಾಗ್ಯೂ, ಅದು ಆದಾಯ ತೆರಿಗೆ, ತೆರಿಗೆ ಮೇಲೆ ತೆರಿಗೆ ಮುಂತಾದ್ದನ್ನು ಕೊಡಬೇಕಾಗುತ್ತದೆ. ಮತ್ತು ನಿಶ್ಚಯವಾಗಿಯೂ ಮುಂಬೈ ಕೇಂದ್ರಕ್ಕೆ ಕೊಟ್ಟುದರೊಳಗಿಂದ ಮಹಾರಾಷ್ಟ್ರ ತನ್ನ ಪಾಲನ್ನು ಪ್ರತ್ಯಕ್ಷವಾಗಿ ಇಲ್ಲವೆ ಅಪ್ರತ್ಯಕ್ಷವಾಗಿ ಪಡೆದೇ ಪಡೆಯುತ್ತದೆ. ಈಗಾಗಲೇ ಹೇಳಿದಂತೆ ಪ್ರೊ. ವಕೀಲ್ ಅವರ ವಾದದಲ್ಲಿ ಸತ್ಯಕ್ಕಿಂತ ದ್ವೇಷ ಹೆಚ್ಚಿರುತ್ತದೆ.
ಅಂಶ (೮) ಮತ್ತು (೯)
ಮುಂಬೈಯನ್ನು ಮಹಾರಾಷ್ಟ್ರಕ್ಕೆ ಸೇರಿಸುವುದರ ವಿರುದ್ಧ ಇದ್ದ ಸಾಮಾನ್ಯ ವಾದಗಳು
೪೬) ಪ್ರೊ. ದಾಂತವಾಲಾ ಮತ್ತು ಪ್ರೊ. ಘೀವಾಲಾ ಅವರು ಒತ್ತಿಹೇಳಿದ ಅಂಶಗಳ ಕಡೆಗೆ ನಾನೀಗ ಗಮನ ಹರಿಸುವೆನು. ಅವರ ವಾದಗಳು ಭಾಷಾವಾರು ಪ್ರಾಂತಗಳ ರಚನೆ ತತ್ವದ ಬುಡವನ್ನೇ ಕಡಿಯುತ್ತವೆ. ಅದಕ್ಕಾಗಿಯೇ ಅದನ್ನು ಈ ಜ್ಞಾಪಕ ಪತ್ರದ ಪ್ರಥಮ ಭಾಗದಲ್ಲೇ ಚರ್ಚಿಸಬೇಕಾಗಿತ್ತು. ಆದರೆ ಅವರ ವಾದ ಮುಂಬೈಯನ್ನು ಮಹಾರಾಷ್ಟ್ರದ ಹೊರಗಿಡಬೇಕೆಂದಿರುವುದರಿಂದ ಅದನ್ನು ಈ ಭಾಗದಲ್ಲಿ ಚರ್ಚಿಸುವುದು ಸರಿ ಎಂದು ನನಗನಿಸುತ್ತದೆ. ಈ ಭಾಗದಲ್ಲಿಯ ಅಂಶಗಳು ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸುವುದಕ್ಕೆ ವಿರೋಧಿ ವಾದಗಳಾಗಿರುತ್ತವೆ.
೪೭) ಭಾಷಾವಾರು ಪ್ರಾಂತಗಳ ರಚನೆ ಒಳ್ಳೆಯದಲ್ಲ ಎಂಬುದು ಈರ್ವರು ಪ್ರಾಧ್ಯಾಪಕರ ವಾದಗಳ ಮುಖ್ಯಾಂಶ ಆಗಿರುತ್ತದೆ. ಭಾಷಾವಾರು ಪ್ರಾಂತಗಳ ವಿರುದ್ಧ ಎತ್ತಿರುವ ಕಿರುಚಾಟ ತೀರ ತಡವಾಗಿ ಕೇಳಬರಹತ್ತಿದೆ. ಈ ಪ್ರಾಧ್ಯಾಪಕರು ಎಂದಿನಿಂದ ಈ ವಿಚಾರಗಳನ್ನು ಹೊಂದಿದ್ದಾರೆಂಬುದು ತಿಳಿದಿರುವುದಿಲ್ಲ. ಗುಜರಾತನ್ನೂ ಭಾಷಾವಾರು ಪ್ರಾಂತವಾಗಿ ಪುನರ್ಘಟಿಸುವುದಕ್ಕೆ ತಮ್ಮ ವಿರೋಧವಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿರುವುದಿಲ್ಲ. ಇಲ್ಲವೆ, ಮೊದಲು ಭಾಷಾವಾರು ಪ್ರಾಂತ ರಚನೆ ತತ್ವವನ್ನು ಒಪ್ಪಿ, ಆ ತತ್ವದ ಪ್ರಕಾರ ಮುಂಬೈಯನ್ನು ಮಹಾರಾಷ್ಟ್ರಕ್ಕೆ ಒಪ್ಪಿಸಬೇಕಾಗುತ್ತದೆಂದು ಗೊತ್ತಾದ ಕೂಡಲೆ ಅವಸರದಿಂದ ಅದನ್ನು ಬಿಟ್ಟುಬಿಟ್ಟಿದ್ದಾರೆ. ಬಹುಶಃ ತಮ್ಮ ಉದ್ದೇಶಕ್ಕೆ ಸೀಮಿತವಾದ ವಾದವು ದೊರೆಯದೆ, ತಾವು ಹೇಳಬಯಸುವುದಕ್ಕಿಂತ ಹೆಚ್ಚಿಗೆ ಹೇಳುವಂಥ ವಾದಕ್ಕೆ ಮೊರೆಹೋದ ಪ್ರಸಂಗಗಳಲ್ಲಿ ಇದೂ ಒಂದಾಗಿರುತ್ತದೆ. ಏನೇ ಆಗಲಿ, ಅವರ ವಾದಗಳ ಹುರುಳನ್ನು ಒರೆಗೆ ಹಚ್ಚಲು ಸಿದ್ಧನಿದ್ದೇನೆ.
೪೮) ಪ್ರೊ. ದಾಂತವಾಲಾ ಅವರು ಭಾಷಾವಾರು ಪ್ರಾಂತಗಳ ವಿರುದ್ಧ ಇರುವ ತಮ್ಮ ವಿಚಾರಗಳ (ಪುಟ 140)
ಸಮರ್ಥನೆಗೆ ಲಾರ್ಡ್ ಆ್ಯಕ್ಷನ್ ಅವರನ್ನು ಅವಲಂಬಿಸಿರುತ್ತಾರೆ. ಅವರ ಪ್ರಸಿದ್ದ ಪುಸ್ತಕ ಸ್ವಾತಂತ್ರ್ಯೇತಿಹಾಸ ಮತ್ತು ಇತರ ಪ್ರಬಂಧಗಳು (The History of Freedom and other Essays) ದಲ್ಲಿ “ರಾಷ್ಟ್ರೀಯತ್ವ” ಪ್ರಬಂಧದಿಂದ ಕೆಳಗಿನ ಗದ್ಯಭಾಗವನ್ನು ಎತ್ತಿಕೊಳ್ಳುತ್ತಾರೆ:
“ನಾಗರಿಕ ಜೀವನ ನಡೆಸಲು ಸಮಾಜ ನಿರ್ಮಾಣವಾಗಬೇಕಾದರೆ ಅನೇಕ ಜನರು ಒಟ್ಟಿಗೆ ಸೇರುವುದು ಅವಶ್ಯವಿರುವಂತೆ, ಒಂದು ರಾಷ್ಟ್ರ ನಿರ್ಮಾಣವಾಗಲು ಅನೇಕ ರಾಜ್ಯಗಳು ಒಟ್ಟಿಗೆ ಸೇರುವುದು ಅವಶ್ಯವಿರುತ್ತದೆ.”
೪೯) ಈ ಅವತರಣಿಕೆ ಲಾರ್ಡ್ ಆ್ಯಕ್ಷನ್ ಅವರ ವಿಚಾರಗಳನ್ನು ಪೂರ್ಣ ತಪ್ಪಾಗಿ ಬಿಂಬಿಸುತ್ತದೆಂದು ಹೇಳಲು ನನಗೆ ವಿಷಾದ ಎನಿಸುತ್ತದೆ. ಅವತರಣಿಕೆ ದೊಡ್ಡ ಗದ್ಯಭಾಗದ ಪ್ರಾರಂಭದ ಕೆಲವು ಸಾಲುಗಳಾಗಿರುತ್ತದೆ. ಆ ಪೂರ್ಣ ಗದ್ಯಭಾಗ ಇಲ್ಲಿದೆ.
“ನಾಗರಿಕ ಜೀವನ ನಡೆಸಲು ಸಮಾಜ ನಿರ್ಮಾಣವಾಗಬೇಕಾದರೆ ಅನೇಕ ಜನರು ಒಟ್ಟಿಗೆ ಸೇರುವುದು ಅವಶ್ಯವಿರುವಂತೆ, ಒಂದು ರಾಷ್ಟ್ರ ನಿರ್ಮಾಣವಾಗಲು ಅನೇಕ ರಾಜ್ಯಗಳು ಒಟ್ಟಿಗೆ ಸೇರುವುದು ಅವಶ್ಯವಿರುತ್ತದೆ. ರಾಜಕೀಯ ಒಕ್ಕೂಟಗಳಲ್ಲಿ ಬೌದ್ಧಿಕವಾಗಿ ಹೆಚ್ಚಿನ ಗುಣಮಟ್ಟದ ಜನಾಂಗಗಳೊಂದಿಗೆ ಕೂಡಿ ಜೀವಿಸುವುದರಿಂದ ಕೆಳಮಟ್ಟದ ಜನಾಂಗಗಳು ಉದ್ದಾರವಾಗುತ್ತವೆ. ಶಕ್ತಿಗುಂದಿದ ಮತ್ತು ಅವನತಿಯ ಮಾರ್ಗ ಹಿಡಿದ ರಾಜ್ಯಗಳು ಕಿರಿಯ ರಾಜ್ಯಗಳ ನವ ಚೈತನ್ಯ ಸಂಪರ್ಕದಿಂದ ಪುನಃ ಚೇತರಿಸಿಕೊಂಡಿರುತ್ತವೆ. ನೈತಿಕ ಅಧಃಪತನಗೊಳಿಸುವ ಸರ್ವಾಧಿಕಾರತ್ವದ ಇಲ್ಲವೆ ವಿಘಟನಗೊಳಿಸುವ ಪ್ರಜಾಪ್ರಭುತ್ವದ ಪ್ರಭಾವದ ಕಾರಣದಿಂದ ಯಾವ ರಾಜ್ಯಗಳ ಸಂಘಟನೆಯ ಮೂಲಾಂಶಗಳು ಮತ್ತು ಸರಕಾರ ನಡೆಸುವ ಸಾಮರ್ಥ್ಯ ಕುಂದಿರುತ್ತವೆಯೊ ಆ ರಾಷ್ಟ್ರಗಳು ಅಧಿಕ ಬಲಿಷ್ಠ, ಆದರೆ ಅವು ಭ್ರಷ್ಟ ಜನಾಂಗಗಳ ಶಿಸ್ತಿನ ಪ್ರಭಾವದಿಂದ ಮೊದಲಿನ ಸ್ಥಿತಿಗೆ ಬರುತ್ತವೆ. ಮತ್ತು ವಿನೂತನ ಶಿಕ್ಷಣವನ್ನು ಪಡೆಯುತ್ತವೆ. ಈ ಫಲವತ್ತಾಗಿಸುವ ಮತ್ತು ಪುನಃ ಸೃಷ್ಟಿಸುವ ಪ್ರಕ್ರಿಯೆ ಒಂದೇ ಸರಕಾರದ ಕೆಳಗೆ ವಾಸಿಸುವುದರಿಂದ ಸಾಧ್ಯವಿರುತ್ತದೆ. ರಾಷ್ಟ್ರದ ಕಡಾವಿಯಲ್ಲಿ ಬೆಸುಗೆ ಕಾರ್ಯ ನಡೆಯುತ್ತದೆ. ಅದರಿಂದ ಒಂದು ಭಾಗದ ಮಾನವ ಜನಾಂಗದ ಚೈತನ್ಯ, ಜ್ಞಾನ, ಮತ್ತು ಶಕ್ತಿಗಳನ್ನು ಇನ್ನೊಂದು ಭಾಗದ ಜನರಿಗೆ ಮುಟ್ಟಿಸಬಹುದು”.
೫೦) ಉಳಿದ ಗದ್ಯಭಾಗವನ್ನು ಪ್ರೊ. ದಾಂತವಾಲಾ ಅವರು ಏಕೆ ಬಿಟ್ಟರೆಂಬುದನ್ನು ತಿಳಿಯುವುದು ಕಷ್ಟ. ಇದು ಉದ್ದೇಶಪೂರ್ವಕ ಸತ್ಯವನ್ನು ಹತ್ತಿಕ್ಕುವ ಮತ್ತು ಅಸತ್ಯವನ್ನು ಎತ್ತಿಹಿಡಿಯುವ ಒಂದು ಉದಾಹರಣೆ ಎಂದು ನಾನು ಸೂಚಿಸಬಯಸುವುದಿಲ್ಲ. ವಸ್ತುಸ್ಥಿತಿ ಏನಿದೆ ಎಂದರೆ, ಅದು ಲಾರ್ಡ್ ಆ್ಯಕ್ಷನ್ ಅವರ ವಿಚಾರಗಳನ್ನು ತಪ್ಪಾಗಿ ಬಿಂಬಿಸುತ್ತದೆ. ಈ ಪ್ರಾಧ್ಯಾಪಕ ಮಹಾಶಯರು ಅದರ ಮೇಲೆ ಇಷ್ಟೊಂದು ಭರವಸೆ ಏಕೆ ಇಟ್ಟರೆಂಬುದು ನನಗೆ ಅರ್ಥವಾಗುವುದಿಲ್ಲ. ಕೆಳಮಟ್ಟದ ಜನಾಂಗಗಳನ್ನು ಉಚ್ಚಮಟ್ಟದವರೊಂದಿಗೆ ಕೂಡಿಸಿದರೆ, ಕೆಳಮಟ್ಟದವರು ಸುಧಾರಿಸಬಹುದೆಂಬುದು ಸ್ಪಷ್ಟವಿರುತ್ತದೆ. ಆದರೆ ಪ್ರಶ್ನೆ ಇರುವುದು ಯಾರು ಕೆಳಮಟ್ಟದವರು, ಯಾರು ಉಚ್ಚಮಟ್ಟದವರೆಂಬುದು, ಗುಜರಾತಿಗಳು ಮಹಾರಾಷ್ಟ್ರೀಯರಿಗಿಂತ ಕೆಳಮಟ್ಟದವರೆ? ಇಲ್ಲವೆ ಮಹಾರಾಷ್ಟ್ರೀಯರು ಗುಜರಾತಿಗಳಿಗಿಂತ ಕೆಳಮಟ್ಟದವರೆ? ಎರಡನೆಯದಾಗಿ, ಗುಜರಾತಿಗಳ ಮತ್ತು ಮಹಾರಾಷ್ಟ್ರೀಯರ ನಡುವೆ ಅವರಿಬ್ಬರನ್ನು ಒಂದುಗೂಡಿಸುವ ಭರವಸೆಯ ಸಂಪರ್ಕ ನಾಲೆ ಯಾವುದು? ಈ ಪ್ರಶ್ನೆಯ ಬಗೆಗೆ ಪ್ರೊ. ದಾಂತವಾಲಾ ಅವರು ಯೋಚಿಸಿರುವುದಿಲ್ಲ. ಅವರಿಗೆ ಲಾರ್ಡ್ ಆ್ಯಕ್ಷನ್ ಅವರ ಪ್ರಬಂಧದಲ್ಲಿ ಒಂದು ವಾಕ್ಯ ಸಿಕ್ಕಿತು. ತಮ್ಮ ವಾದವನ್ನು ಸಮರ್ಥಿಸಲು ಮತ್ತೇನೂ ಸಿಗದೆ ಇದ್ದುದರಿಂದ ಅದನ್ನು ಜಿಗಿದು ಹಿಡಿದರು. ತಾತ್ಪರ್ಯ (ಪುಟ 141)
ಇಷ್ಟೆ, ಭಾಷಾವಾರು ಪ್ರಾಂತ ರಚನೆಯ ಸಮಸ್ಯೆಗೆ ಸಂಬಂಧಿಸಿದ ಯಾವುದೇ ಅಂಶ ಅದರಲ್ಲಿರುವುದಿಲ್ಲ
೫೧) ಪ್ರೊ. ದಾಂತವಾಲಾ ಅವರ ವಾದಗಳ ಬಗೆಗೆ ಇಷ್ಟು ಹೇಳುವುದು ಸಾಕು. ಈಗ ನಾನು ಪ್ರೊ. ಘೀವಾಲಾ ಅವರ ವಾದದ ಅಂಶಗಳನ್ನು ಪರಿಶೀಲಿಸುವೆ. ಪ್ರೊ. ಘೀವಾಲಾ ಅವರು ಕೂಡ ಲಾರ್ಡ್ ಆ್ಯಕ್ಟನ್ ಅವರ ಮೇಲೆ ಭರವಸೆ ಇಡುತ್ತಾರೆ. ಅವರು ಲಾರ್ಡ್ ಆ್ಯಕ್ಷನ್ ಅವರ ರಾಷ್ಟ್ರೀಯತೆ ಕುರಿತು ಬರೆದ ಪ್ರಬಂಧದಿಂದ ಒಂದು ಭಾಗ ಉದ್ದರಿಸುತ್ತಾರೆ. ಆ ಗದ್ಯಭಾಗವನ್ನು ನಾನು ಇಲ್ಲಿ ಪೂರ್ಣ ಕೊಡುತ್ತೇನೆ.
“ರಾಷ್ಟ್ರೀಯತೆಯ ಆಧುನಿಕ ಸಿದ್ಧಾಂತವು ರಾಷ್ಟ್ರೀಯತೆಯ ಹಕ್ಕುಗಳ ಅತಿ ಪ್ರಬಲ ಎದುರಾಳಿ ಆಗಿರುತ್ತದೆ. ಸೈದ್ಧಾಂತಿಕವಾಗಿ, ರಾಷ್ಟ್ರ ಮತ್ತು ರಾಜ್ಯ ಎರಡನ್ನು ಸರಿಸಮಾನ ಮಾಡುವುದರಿಂದ, ರಾಷ್ಟ್ರದ ಮೇರೆಯ ಒಳಗೆ ಬರುವ ಉಳಿದೆಲ್ಲ ರಾಜ್ಯವನ್ನು ವಾಸ್ತವವಾಗಿ ಅಧೀನ ಸ್ಥಿತಿಗೆ ಇಳಿಸಿದಂತಾಗುತ್ತದೆ. ಒಂದು ರಾಷ್ಟ್ರ ಆಗಿರುವ ರಾಜ್ಯ ಮಿಕ್ಕವುಗಳನ್ನು ತನ್ನ ಸಮಾನ ಎಂದು ಒಪ್ಪಲು ಸಾದ್ಯವಿಲ್ಲ. ಏಕೆಂದರೆ, ಎಲ್ಲ ಸಮಾನ ಎಂದು ಗ್ರಹಿಸಿದರೆ ಒಂದು ರಾಜ್ಯವು ರಾಷ್ಟ್ರವಾಗದೆ ರಾಜ್ಯವಾಗಿಯೇ ಉಳಿಯುವುದು. ಅಂದರೆ ಈ ತತ್ವದಲ್ಲಿ ವಿರೋಧಾಭಾಸವಿರುತ್ತದೆ. ಆದ್ದರಿಂದ ಸಮಾನ ಎಲ್ಲ ಹಕ್ಕುಗಳು ತನಗೇ ಸೇರಿದವು ಎಂದು ಹೇಳುವ ಮುಖ್ಯ ಘಟಕ ಹೊಂದಿರುವ ಮಾನವೀಯ ಮತ್ತು ನಾಗರಿಕ ಅಂಶಗಳ ಪ್ರಮಾಣಕ್ಕನುಗುಣವಾಗಿ ಕಡಿಮೆ ಮಟ್ಟದ ಜನಾಂಗಗಳು ನಶಿಸುತ್ತವೆ. ಇಲ್ಲವೆ ಗುಲಾಮಿ ಸ್ಥಿತಿಗೆ ಇಳಿಸಲ್ಪಡುತ್ತವೆ. ಇಲ್ಲವೆ ಹೊರಹಾಕಲ್ಪಡುತ್ತವೆ. ಅದೂ ಇಲ್ಲಿ ಪರಾವಲಂಬಿ ಸ್ಥಿತಿಯಲ್ಲಿ ಇರಿಸಲ್ಪಡುತ್ತವೆ”.
೫೨) ವಿದ್ವಾಂಸರಾದ ಪ್ರಾಧ್ಯಾಪಕರು ಲಾರ್ಡ್ ಆ್ಯಕ್ಷನ್ ಅವರ ಹೆಸರನ್ನೇಕೆ ತಮ್ಮ ವಾದದಲ್ಲಿ ಎಳೆತಂದರೆಂದು ನನಗೆ ತಿಳಿಯುವುದಿಲ್ಲ. ನಿಜಕ್ಕೂ ಉದ್ಧೃತ ಗದ್ಯಭಾಗ ಅವರಿಗೆ ಸಹಾಯ ಮಾಡುವುದಿಲ್ಲ. ಒಂದು ವಿಚಾರ ಅವರ ತಲೆ ತುಂಬಿದಂತೆ ತೋರುತ್ತದೆ. ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸಿದ್ದಾದರೆ ಮಹಾರಾಷ್ಟ್ರ ಪ್ರಾಂತವು ಎರಡು ಪ್ರಾಂತಗಳಿಂದ ಕೂಡಿರಬೇಕಾಗುತ್ತದೆ-ಒಂದು ಪ್ರಾಂತವು ಮರಾಠಿ ಮಾತಾಡುವವರಿಂದ, ಇನ್ನೊಂದು ಗುಜರಾತಿ ಮಾತಾಡುವವರಿಂದ ಕೂಡಿರಬೇಕಾಗುತ್ತದೆ. ಮರಾಠಿ ಮಾತನಾಡುವ ವರ್ಗ ಪ್ರಬಲವಾಗುವುದರಿಂದ ಗುಜರಾತಿ ಮಾತಾಡುವ ವರ್ಗ ಅಧೀನ ವರ್ಗದ ಸ್ಥಿತಿಗೆ ಇಳಿಯುತ್ತದೆ. ಅವರು ಈ ಸಮಸ್ಯೆಯನ್ನು ಮಂಡಿಸಿದ ರೀತಿಯ ಬಗೆಗೆ ತಕರಾರು ಇರುವುದಿಲ್ಲ. ಆದರೆ ಅವರು ಮಾಡಿದ ತೀರ್ಮಾನಗಳಿಗೆ ಬಹಳಷ್ಟು ತಕರಾರುಗಳಿರುತ್ತವೆ.
೫೩) ಮೊದಲನೆಯದಾಗಿ, ಜಾತೀಯ ಆಧಾರದ ಮೇಲೆ ಸಂಘಟಿತವಾಗಿರುವಂಥ ಸಮಾಜವನ್ನು ಹೊಂದಿರುವ ಭಾರತ ದೇಶವನ್ನು ಆಡಳಿತದ ಉದ್ದೇಶಕ್ಕಾಗಿ ಯಾವ ವಿಧದಲ್ಲಿ ವಿಭಜಿಸಿದರೂ, ಪ್ರತಿಯೊಂದು ಭಾಗದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಒಂದೊಂದು ಸಮಾಜ ಬಲಿಷ್ಠವಾಗಿರುತ್ತದೆ. ಬಲಿಷ್ಠವಾಗಿರುವುದರಿಂದ ಆ ಪ್ರದೇಶದ ರಾಜಕೀಯ ಅಧಿಕಾರಕ್ಕೆಲ್ಲ ಅದುವೇ ವಾರಸುದಾರ ಆಗುತ್ತದೆ. ಮುಂಬೈಯನ್ನೊಳಗೊಂಡ ಏಕೀಕೃತ ಮಹಾರಾಷ್ಟ್ರದಲ್ಲಿ ಮರಾಠಿ ಮಾತನಾಡುವ ಜನರು ಗುಜರಾತಿ ಮಾತನಾಡುವವರ ಮೇಲೆ ಅಧಿಕಾರ ನಡೆಸಿದರೆ, ಈ ಸ್ಥಿತಿಯು ಮಹಾರಾಷ್ಟ್ರಕ್ಕಷ್ಟೇ ಸೀಮಿತವಾಗಿರಬಹುದೆ? ಮರಾಠಿ ಮಾತನಾಡುವವರೊಳಗೆ ಇಂಥ ಘಟನೆಗಳು ಸಂಭವಿಸುವುದಿಲ್ಲವೆ? ಗುಜರಾತ್ ಪ್ರತ್ಯೇಕ ಪ್ರಾಂತವಾಗುವ ಪಕ್ಷಕ್ಕೆ ಇಂಥ ಘಟನೆ ಸಂಭವಿಸುವುದಿಲ್ಲವೆ? ಮರಾಠಿ ಮಾತನಾಡುವ ಪ್ರದೇಶದಲ್ಲಿಯೇ ಮರಾಠರು ಮತ್ತು ಮರಾಠೇತರರು ಎಂದು ವರ್ಗಗಳಾಗುತ್ತವೆ. ಮರಾಠರು ಪ್ರಬಲ ವರ್ಗದವರಿದ್ದುದರಿಂದ, (ಪುಟ 142)
ಗುಜರಾತಿ ಮಾತನಾಡುವವರನ್ನು ಮತ್ತು ಮರಾಠೇತರನ್ನು ಅಧೀನ ಸ್ಥಿತಿಗೆ ಹತ್ತಿಕ್ಕುತ್ತಾರೆ. ಅದೇ ರೀತಿ ಗುಜರಾತಿನ ಕೆಲವು ಭಾಗಗಳಲ್ಲಿ ಅನವಿಲ ಬ್ರಾಹ್ಮಣರದು ಪ್ರಬಲ ವರ್ಗವಿರುತ್ತದೆ. ಉಳಿದ ಭಾಗದಲ್ಲಿ ಪತಿದರರು (Patidars) ಪ್ರಬಲವರ್ಗದವರಾಗಿದ್ದಾರೆ. ಅನವಿಲರು ಮತ್ತು ಪತಿದರರು ಉಳಿದ ಸಮಾಜದವರನ್ನು ಅಧೀನ ಸ್ಥಿತಿಗೆ ಹತ್ತಿಕ್ಕುತ್ತಾರೆ. ಆದ್ದರಿಂದ ಈ ಸಮಸ್ಯೆ ಮಹಾರಾಷ್ಟ್ರಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಇದು ಸಾರ್ವತ್ರಿಕ ಸಮಸ್ಯೆ ಆಗಿರುತ್ತದೆ.
೫೪) ಈ ಸಮಸ್ಯೆಗೆ ಪರಿಹಾರ ಏನು? ಸಮ್ಮಿಶ್ರ ಪ್ರಾಂತಗಳಿರುವುದೇ ಪರಿಹಾರ ಎಂದು ಪ್ರೊ. ಘೀವಾಲಾ ಅವರು ನಂಬುತ್ತಾರೆ. ಈ ಪರಿಹಾರ ಅವರು ಸ್ವತಃ ಕಂಡುಹಿಡಿದಿದ್ದಲ್ಲ. ಅದನ್ನು ಅವರು ಲಾರ್ಡ್ ಆ್ಯಕ್ಟನ್ ಅವರಿಂದ ತೆಗೆದುಕೊಂಡಿರುತ್ತಾರೆ. ಆದರೆ ಲಾರ್ಡ್ ಆ್ಯಕ್ಷನ್ ಅವರು ಪ್ರತಿಪಾದಿಸುವ ಪರಿಹಾರ ನಿಃಸಂಶಯವಾಗಿಯೂ ಶುದ್ಧಾಂಗವಾಗಿ ತಪ್ಪಾಗಿದೆ. ಲಾರ್ಡ್ ಆ್ಯಕ್ಷನ್ ಅವರು ತಮ್ಮ ವಿಚಾರದ ಸಮರ್ಥನೆಗೆ ಆಸ್ಟ್ರಿಯಾದ ಉದಾಹರಣೆ ಕೊಡುತ್ತಾರೆ. ದುರ್ದೈವದಿಂದ ಆಸ್ಟ್ರಿಯಾದ ಗತಿ ಏನಾಯಿತೆಂದು ನೋಡಲು, ಲಾರ್ಡ್ ಆ್ಯಕ್ಷನ್ ಅವರು ಬಹಳ ದಿವಸ ಬಾಳಲಿಲ್ಲ. ಆಸ್ಟ್ರಿಯಾ ಸಮ್ಮಿಶ್ರ ರಾಷ್ಟ್ರ ಆಗಿತ್ತು. ಆದರೆ ಎಲ್ಲ ರಾಜ್ಯಗಳಿಗೆ ಸುರಕ್ಷೆಯನ್ನು ಒದಗಿಸುವುದಾಗದೆ, ರಾಜ್ಯಗಳ ಪರಸ್ಪರ ತಿಕ್ಕಾಟ ಆಸ್ಟ್ರಿಯವನ್ನು ನುಚ್ಚು ನೂರು ಮಾಡಿತು. ನಿಜವಾದ ಪರಿಹಾರ ಸಮ್ಮಿಶ್ರ ರಾಷ್ಟ್ರ ಅಲ್ಲ. ಸಾಮಾನ್ಯವಾಗಿ ಜಾತ್ಯಾತೀತ ಬಹುಸಂಖ್ಯಾ ವರ್ಗದವರು ಹಿಡಿಯಬಹುದಾದ ಅಧಿಕಾರವನ್ನು ಯಾವ ವರ್ಗದವರಿಗೂ ಕೊಡದೆ ಇರುವ ಮತ್ತು ಎಲ್ಲ ಜನರ ಹೆಸರಿನಲ್ಲಿ ಉಪಯೋಗಿಸಬಹುದಾದ ಸರ್ವತಂತ್ರ ಸ್ವತಂತ್ರ ರಾಷ್ಟ್ರವೇ ನಿಜವಾದ ಪರಿಹಾರವಾಗಿರುತ್ತದೆ. ಪ್ರೊ. ಘೀವಾಲಾ ಅವರು ಈ ಪರಿಹಾರ ಸ್ವೀಕರಿಸಲು ಸಿದ್ಧರಿರುತ್ತಾರೆಯೆ? ಅವರ ಉತ್ತರ ಏನಿರಬಹುದೆಂಬುದಕ್ಕೆ ಯಾರಿಗೂ ಸಂಶಯ ಇರುವುದಿಲ್ಲ.
೫೫) ಎರಡನೆಯದಾಗಿ, ಪ್ರೊ. ಫೀವಾಲಾ ಅವರು ಸಾಮಾಜಿಕ ಅರ್ಥದ ರಾಷ್ಟ್ರೀಯತೆಯನ್ನು ಕಾಯಿದೆಯ ಮತ್ತು ರಾಜಕೀಯ ಅರ್ಥದ ರಾಷ್ಟ್ರೀಯತೆಯೊಂದಿಗೆ ಸೇರಿಸಿ ಗೊಂದಲ ಮಾಡಿದ್ದಾರೆ. ಭಾಷಾವಾರು ಪ್ರಾಂತದ ಬಗೆಗೆ ಮಾತಾಡುವಾಗ ಜನರು ಅನೇಕ ವೇಳೆ ರಾಷ್ಟ್ರೀಯತೆಯ ಬಗೆಗೆ ಹೇಳುತ್ತಾರೆ. ಕಾಯಿದೆಗೆ ಮತ್ತು ರಾಜಕೀಯಕ್ಕೆ ಸಂಬಂಧವಿಲ್ಲದ ಅರ್ಥದಲ್ಲಷ್ಟೇ ಈ ರೀತಿ ಪದಬಳಕೆ ಮಾಡಲು ಶಕ್ಯವಿರುತ್ತದೆ. ನನ್ನ ಯೋಜನೆಯಲ್ಲಿ ಎರಡು ಪ್ರತ್ಯೇಕ ಪ್ರಾಂತಗಳ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ನನ್ನ ಸೂಚನೆ ಎರಡು ಪ್ರಾಂತದ ವಿಚಾರವನ್ನು ಮೊಳಕೆಯಲ್ಲಿಯೇ ಕತ್ತರಿಸುತ್ತದೆ. ಆದರೆ, ಸಾಮಾನ್ಯವಾಗಿ ಸೂಚಿಸಲಾಗಿದ್ದ ಮಾದರಿಯ ಪ್ರಕಾರ ಪ್ರಾಂತೀಯ ಭಾಷೆಯನ್ನೇ ಆಡಳಿತ ಭಾಷೆ ಹೊಂದಿದ ಭಾಷಾವಾರು ಪ್ರಾಂತಗಳನ್ನು ನಿರ್ಮಿಸಿದಾಗ್ಯೂ, ಸ್ವತಂತ್ರ ರಾಷ್ಟ್ರಗಳು ಹೊಂದಿದ ಸಾರ್ವಭೌಮತ್ವವನ್ನು ಈ ಪ್ರಾಂತಗಳು ಹೊಂದಲಾರವು.
೫೬) ಪ್ರೊ. ಘೀವಾಲಾ ಅವರು ಏನು ಬಯಸಿದ್ದಾರೆನ್ನುವುದನ್ನು ಖಚಿತವಾಗಿ ತಿಳಿದುಕೊಳ್ಳುವುದು ಕಠಿಣ, ವಿಶಾಲ ಅರ್ಥದಲ್ಲಿ ಅವರು ಬಯಸಿದ್ದು ಎರಡು ವಿಷಯಗಳು : (೧) ಮಿಶ್ರರಾಜ್ಯ ಮತ್ತು (೨) ಪ್ರಮುಖವರ್ಗ, ಸಣ್ಣವರ್ಗಗಳನ್ನು ಅಧೀನ ಸ್ಥಿತಿಗೆ ಇಳಿಸುವ ಪ್ರಭಾವೀ ಸ್ಥಿತಿಯಲ್ಲಿ ಇಲ್ಲದಿರುವಿಕೆ. ಇದನ್ನು ಸಾಧಿಸುವಲ್ಲಿ ಭಾಷಾವಾರು ಪ್ರಾಂತಗಳು ಹೇಗೆ ಆತಂಕ ಒಡ್ಡುತ್ತವೆಂಬುದು ನನಗೆ ತೋಚುವುದಿಲ್ಲ. ಕಾರಣ, ಭಾಷೆಯ ಆಧಾರದ ಮೇಲೆ ಪ್ರಾಂತಗಳ ಪುನರ್‌ನಿರ್ಮಾಣ ಆದಾಗ್ಯೂ (೧) ಪ್ರಾಂತಗಳು ಪ್ರೊ. ಘೀವಾಲಾ ಅವರು ಬಯಸಿದ ಅನೇಕ ಸಮಾಜಗಳ ಮಿಶ್ರಪ್ರಾಂತಗಳಾಗಿ ಮುಂದುವರೆಯುವುವು. ( ಪುಟ 143)
(೨) ಸಣ್ಣ ಸಮಾಜಗಳ ಮತ್ತು ಸಣ್ಣ ಪ್ರಾಂತಗಳ ಹಿತರಕ್ಷಿಸುವ ಉದ್ದೇಶದಿಂದ ಹೆಚ್ಚು ಸ್ಪುಟವಾದ ಮಿಶ್ರ ರಾಜ್ಯವನ್ನು ಬಯಸಿದರೆ, ನಿಶ್ಚಯವಾಗಿಯೂ ಕೇಂದ್ರದಲ್ಲಿ ಅಂಥ ಮಿಶ್ರ ರಾಜ್ಯ ಬರುವುದು.
ನಾನು ಹೇಳಿದಂತೆ, ಮಿಶ್ರರಾಜ್ಯ ಒಳ್ಳೆಯ ಇಲ್ಲವೆ ಗಟ್ಟಿ ರಾಜ್ಯ ಎಂದು ನನಗೇನೂ ಅನ್ನಿಸುವುದಿಲ್ಲ. ಆದರೆ ಪ್ರೊ. ಘೀವಾಲಾ ಅವರು ಬಯಸಿದರೆ, ಒಂದಲ್ಲ ಒಂದು ರೀತಿಯಲ್ಲಿ ಪ್ರಾಂತ ಮತ್ತು ಕೇಂದ್ರ ಎರಡೂ ಕಡೆಗಳಲ್ಲಿ ಅದನ್ನು ಪಡೆಯಬಹುದು. ಮೊದಲನೆಯದರಲ್ಲಿ ವಿವಿಧ ಸಮಾಜಗಳು ಸೇರಿ ಒಂದು ಪ್ರಾಂತವಾಗುವುದು. ಮತ್ತು ಎರಡನೆಯದರಲ್ಲಿ ವಿವಿಧ ಪ್ರಾಂತಗಳು ಪ್ರತಿನಿಧಿಗಳು ಕೇಂದ್ರದಲ್ಲಿ ಒಟ್ಟು ಸೇರುವುದು.
೫೭) ಅವರ ಎರಡನೆಯ ಉದ್ದೇಶಕ್ಕೆ ಎರಡು ತರಹದ ರಕ್ಷಣೆ ಇರುತ್ತದೆ. ಮೊದಲನೆಯದಾಗಿ, ಮಿಶ್ರ ರಾಜ್ಯಕೊಡಲು ಶಕ್ಯವಿರುವಂತಹ ರಕ್ಷಣೆಯನ್ನು ಪ್ರತಿಯೊಬ್ಬ ಪ್ರಜೆ ಪಡೆಯುತ್ತಾನೆ. ಎರಡನೆಯದಾಗಿ, ಭಾರತದ ತುಂಬೆಲ್ಲ ಪ್ರಜೆತನ ಒಂದೇ ಆಗುವುದು. ಪ್ರಾಂತೀಯ ಪ್ರಜೆತನ ಇರುವುದಿಲ್ಲ. ಮಹಾರಾಷ್ಟ್ರದಲ್ಲಿರುವ ಗುಜರಾತಿ ವ್ಯಕ್ತಿಯು ಮಹಾರಾಷ್ಟ್ರದಲ್ಲಿರುವ ಮರಾಠಿಗನಿಗಿರುವ ಹಕ್ಕುಗಳನ್ನೇ ಪಡೆಯುತ್ತಾನೆ. ಭಾಷಾವಾರು ಪ್ರಾಂತಗಳ ವಿರುದ್ಧ ಈ ಸೌಲಭ್ಯಗಳನ್ನು ಕೊಟ್ಟ ಬಳಿಕ ಪ್ರೊ. ಘೀವಾಲಾ ಅವರ ತಕರಾರು ಏನೆಂಬುದು ನನಗೆ ತಿಳಿಯದಾಗಿದೆ.
೫೮) ಪ್ರೊ. ಘೀವಾಲಾ ಅವರು ಇನ್ನೂ ಎರಡು ಶಿಫಾರಸುಗಳನ್ನು ಮಾಡಿರುತ್ತಾರೆ.
೧) ಪ್ರಾಂತಗಳನ್ನು ಪುನಃ ವಿಂಗಡಿಸುವುದಿದ್ದರೆ, ಭಾಷೆಯ ಆಧಾರದ ಮೇಲೆ ಮಾಡದೆ. ತಾರ್ಕಿಕ ಆಧಾರದ ಮೇಲೆ ಮಾಡಬೇಕು.
೨) ರಾಷ್ಟ್ರೀಯತೆಯನ್ನು ವೈಯಕ್ತಿಕ ವಿಷಯವನ್ನಾಗಿ ಮಾಡಬೇಕು.
೫೯) ಆರ್ಥಿಕ ತಳಹದಿಯ ಮೇಲೆ ಮಾಡುವ ಪ್ರಾಂತಗಳ ಪುನರ್ವಿಂಗಡಣೆ ತಾರ್ಕಿಕವೆನಿಸುತ್ತದೆ. ಭಾಷೆಯ ತಳಹದಿಯ ಮೇಲೆ ಮಾಡುವುದಕ್ಕಿಂತ ಈ ವಿಧಾನ ಹೆಚ್ಚು ವೈಜ್ಞಾನಿಕ ಎನಿಸುತ್ತದೆ. ಆದಾಗ್ಯೂ, ಪ್ರಾಂತಗಳ ಅವೈಜ್ಞಾನಿಕ ಪುನರ್ವಿಂಗಡಣೆ ಭಾರತದ ಆರ್ಥಿಕ ಮೂಲಕ ಉಪಯೋಗಕ್ಕೆ ಹೇಗೆ ಅಡ್ಡಿ ಬರುವುದೊ ನನಗೆ ತಿಳಿಯದಾಗಿದೆ. ಪ್ರಾಂತೀಯ ಮೇರೆಗಳು ಆಡಳಿತಾತ್ಮಕ ಅಷ್ಟೆ. ಅವು ಆರ್ಥಿಕ ಮೂಲಗಳ ಸರಿಯಾದ ಉಪಯೋಗಕ್ಕೆ ಅಡೆತಡೆಗಳನ್ನು ಒಡ್ಡುವುದಿಲ್ಲ. ಭಾಷಾವಾರು ಪ್ರಾಂತಗಳಿಲ್ಲರುವ ಆರ್ಥಿಕ ಮೂಲಗಳ ಬಗೆಗೆ ಆಯಾ ಪ್ರಾಂತದವರಿಗಲ್ಲದೆ ಬೇರೆಯವರಿಗೆ ಏನೂ ತಿಳಿಯದಂಥ ಪರಿಸ್ಥಿತಿ ಉದ್ಭವಿಸುತ್ತಿದ್ದರೆ, ಭಾಷಾವಾರು ಪ್ರಾಂತ ರಚನೆ ಒಂದು ಕುಹಕ ಯೋಜನೆ ಆಗುತ್ತಿತ್ತು. ಆದರೆ ಅಂಥ ಪ್ರಸಂಗ ಇರುವುದಿಲ್ಲ. ಎಲ್ಲಿಯವರೆಗೆ ಆರ್ಥಿಕ ಮೂಲಗಳನ್ನು ಯಾರು ಬೇಕಾದರೂ ಉಪಯೋಗ ಮಾಡುವುದನ್ನು ನಿಷೇಧಿಸುವ ಅಧಿಕಾರವನ್ನು ಭಾಷಾವಾರು ಪ್ರಾಂತಗಳಿಗೆ ಕೊಡುವುದಿಲ್ಲವೋ, ಅಲ್ಲಿಯವರೆಗೆ ಭಾಷಾವಾರು ಪ್ರಾಂತ, ವೈಚಾರಿಕ ತಳಹದಿಯ ಮೇಲೆ ರಚಿಸಿದ ಪ್ರಾಂತದಿಂದ ದೊರೆಯುವ ಎಲ್ಲ ಲಾಭಗಳನ್ನು ಕೊಡುತ್ತದೆ.
೬೦) ರಾಷ್ಟ್ರೀಯತೆಯನ್ನು ವೈಯಕ್ತಿಕ ವಿಷಯವನ್ನಾಗಿಸುವ ಮತ್ತು ಅದನ್ನು ಧರ್ಮದ ಸಮಾನವಾಗಿ ಕಾಣಬೇಕೆನ್ನುವ ಅನುಮೋದನೆಯನ್ನು ಅತಿ ಅವಾಸ್ತವಿಕ ಎಂದು ತಳ್ಳಿಹಾಕಬಹುದು. ಅದು ಅನೇಕ ಆಡಳಿತಾತ್ಮಕ ಸಮಸ್ಯೆಗಳನ್ನು ಎಬ್ಬಿಸುವುದು. ಜಗತ್ತು ಒಂದೇ ರಾಷ್ಟ್ರವಾದಾಗ, ಮತ್ತು ಎಲ್ಲ ರಾಷ್ಟ್ರಗಳು ಅದರ ಅಂಗರಾಷ್ಟ್ರಗಳಾದಾಗ ಇದು ಸರಿಯಾಗಿ ಕಾರ್ಯರೂಪಕ್ಕೆ ಬರುವುದು. (ಪುಟ 144)
೬೧) ಇದುವರೆಗೆ ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸುವುದಕ್ಕೆ ವಿರೋಧ ಮಾಡಿದವರು ಪ್ರತಿಪಾದಿಸಿದ ವಾದಗಳನ್ನು ಪರಿಶೀಲಿಸಿದ್ದೇನೆ. ಅವು ಬಹಳ ಮಹತ್ವದವು ಎನಿಸಿದ್ದರಿಂದ ಅವನ್ನು ಪರಿಶೀಲಿಸುವ ತೊಂದರೆಯನ್ನು ತೆಗೆದುಕೊಂಡಿದ್ದೇನೆ. ಸಾಮಾನ್ಯನು ತಪ್ಪುದಾರಿ ಹಿಡಿಯದಂತೆ ಮಾಡುವ ಉದ್ದೇಶದಿಂದ ನಾನು ಈ ಕೆಲಸ ಮಾಡಿದ್ದೇನೆ. ಸಾಮಾನ್ಯನು ತಪ್ಪುದಾರಿ ಹಿಡಿಯುವ ಸಾಧ್ಯತೆ ಇತ್ತು. ಮತ್ತು ಅದಕ್ಕೆ ಎರಡು ಕಾರಣಗಳಿದ್ದವು. ಮೊದಲನೆಯದಾಗಿ, ಈ ವಾದಗಳನ್ನು ಮಂಡಿಸಿದವರು ಸಾಮಾನ್ಯರಿರುವುದಿಲ್ಲ. ಅವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಎರಡನೆಯದಾಗಿ, ಪ್ರೊ. ಗಾಡಗೀಳ್ ಅವರು ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸುವ ಸೂಚನೆಯನ್ನು ಮಾಡಿದ ಬಳಿಕ ಈ ಪ್ರಾಧ್ಯಾಪಕರು ತಮ್ಮ ವಾದಗಳನ್ನು ಮಂಡಿಸಿದರು. ದುರ್ದೈವದಿಂದ, ಇದುವರೆಗೆ ಪ್ರೊ. ಗಾಡಗೀಳ್ ಅವರ ಪ್ರತಿವಾದಿಗಳ ವಾದವನ್ನು ಖಂಡಿಸುವ ಯತ್ನ ಯಾರೂ ಮಾಡಿರುವುದಿಲ್ಲ. ಅದರಿಂದ ಪ್ರೊ. ಗಾಡಗೀಳ್ ಅವರ ಪ್ರತಿಸ್ಪರ್ಧಿಗಳು ಗೆದ್ದಿದ್ದಾರೆಂಬ ತಪ್ಪುತಿಳುವಳಿಕೆ ಜನರಿಗೆ ಉಂಟಾಗಿರುತ್ತದೆ. ಈ ತಪ್ಪು ಕಲ್ಪನೆಯನ್ನು ಹೋಗಲಾಡಿಸುವುದು ಅತಿ ಅವಶ್ಯವಿತ್ತು.
ಸಮಸ್ಯೆಯ ಇನ್ನೊಂದು ಮುಖ
೬೨) ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸುವ ಬಗ್ಗೆ ಪ್ರೊ. ಗಾಡಗೀಳ್ ಅವರು ಎದುರಾಳಿಗಳಿಗೆ ತೋಚದಂಥ ಆದರೆ ನ್ಯಾಯಯುತವಾಗಿ ಮತ್ತು ಗಟ್ಟಿಯಾಗಿ ಮಹಾರಾಷ್ಟ್ರೀಯರ ಪರವಾಗಿ ಮಂಡಿಸಬಹುದಾದಂಥ, ಕೆಲವು ವಾದಗಳು ಇರುತ್ತವೆ. ಆಯೋಗಕ್ಕೆ ಈ ವಿಚಾರಗಳು ಹೊಳೆಯುವ ಅಥವಾ ಹೊಳೆಯದಿರುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ, ಆಯೋಗಕ್ಕೆ ಅವಶ್ಯಕತೆ ಎನಿಸಿದರೂ, ಅವನ್ನಿಲ್ಲಿ ಹೇಳಬಯಸುತ್ತೇನೆ.
ಕಲ್ಕತ್ತಾ ಮತ್ತು ಮುಂಬೈ
೬೩) ಮುಂಬೈಯನ್ನು ಮಹಾರಾಷ್ಟ್ರದ ಹೊರಗಿಡಬೇಕೆಂಬ ಸಮಸ್ಯೆಗೆ ಸಂಬಂಧಿಸಿದ ನಿರ್ಣಯ ತೆಗೆದುಕೊಳ್ಳುವಾಗ ಆಯೋಗ ಕಲ್ಕತ್ತೆಯ ಸ್ಥಾನವನ್ನು ಗಮನಿಸಬೇಕು. ಮುಂಬೈಯ ಹಾಗೆ ಕಲ್ಕತ್ತಾ ಪೂರ್ವಭಾರತದ ಮಾರಾಟ ಮಳಿಗೆ. ಮುಂಬೈಯಲ್ಲಿರುವ ಮಹಾರಾಷ್ಟ್ರೀಯರು ಹೇಗೆ ಅಲ್ಪಸಂಖ್ಯಾತರೋ ಹಾಗೆ ಕಲ್ಕತ್ತೆಯಲ್ಲಿರುವ ಬಂಗಾಲಿಗಳು ಅಲ್ಪ ಸಂಖ್ಯಾತರಾಗಿದ್ದಾರೆ. ಮುಂಬೈಯಲ್ಲಿರುವ ಮಹಾರಾಷ್ಟ್ರೀಯರ ಹಾಗೆ ಕಲ್ಕತ್ತೆಯಲ್ಲಿರುವ ಬಂಗಾಲಿಯರು ವ್ಯಾಪಾರ ಉದ್ದಿಮೆಗಳ ಒಡೆಯರಾಗಿರುವುದಿಲ್ಲ. ತದ್ವಿರುದ್ಧ ಕಲ್ಕತ್ತೆಯಲ್ಲಿಯ ಬಂಗಾಳಿಗಳ ಸ್ಥಿತಿ ಮುಂಬೈಯಲ್ಲಿಯ ಮಹಾರಾಷ್ಟ್ರೀಯರ ಸ್ಥಿತಿಗಿಂತ ಹೆಚ್ಚು ಕೆಟ್ಟಿದ್ದಿತು. ಏಕೆಂದರೆ, ಮಹಾರಾಷ್ಟ್ರೀಯರು ಕನಿಷ್ಠ ಪಕ್ಷ ಮುಂಬೈಯ ವ್ಯಾಪಾರ ಮತ್ತು ಉದ್ದಿಮೆಗಳಿಗೆ ಕೂಲಿಕಾರರನ್ನು ಒದಗಿಸಿದರೆಂದು ಅಧಿಕಾರವಾಣಿಯಿಂದ ಹೇಳಬಹುದಾಗಿದೆ. ಬಂಗಾಲಿಗಳು ಈ ವಿಷಯದಲ್ಲಿ ಏನನ್ನೂ ಅನ್ನುವಂತಿಲ್ಲ. ಆಯೋಗವು ಮುಂಬೈಯನ್ನು ಮಹಾರಾಷ್ಟದಿಂದ ಪ್ರತ್ಯೇಕಿಸುವ ವಾದವನ್ನು ಸ್ವೀಕರಿಸಿದರೆ, ಕಲ್ಕತ್ತೆಯನ್ನು ಬಂಗಾಲದಿಂದ ಬೇರ್ಪಡಿಸುವಂತೆ ಶಿಫಾರಸು ಮಾಡಲು ಸಿದ್ಧವಿರಬೇಕಾಗುತ್ತದೆ. ಏಕೆಂದರೆ, ಈಗ ಕೊಟ್ಟಿರುವ ಕಾರಣಗಳಿಗೆ ಮುಂಬೈಯನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸಲು ಸಾಧ್ಯವಾದರೆ, ಅವೇ (ಪುಟ 145)
ಕಾರಣಗಳು ಕಲ್ಕತ್ತೆಗೆ ಅನ್ವಯಿಸುತ್ತಿರುವಾಗ ಕಲ್ಕತ್ತೆಯನ್ನೇಕೆ ಬಂಗಾಲದಿಂದ ಪ್ರತ್ಯೇಕಿಸಲಿಕ್ಕಾಗದು ಎಂಬುದು ಬಹಳ ಸಮಂಜಸ ಪ್ರಶ್ನೆಯಾಗಿದೆ.
ಮುಂಬೈ ಪ್ರತ್ಯೇಕ ಪ್ರಾಂತವಾಗುವ ಸಾಮರ್ಥ್ಯ ಹೊಂದಿರುತ್ತದೆಯೇ?
೬೪) ಮುಂಬೈಯಲ್ಲಿ ಪ್ರತ್ಯೇಕಿಸುವುದಕ್ಕಿಂತ ಮೊದಲು ಆರ್ಥಿಕ ದೃಷ್ಟಿಯಿಂದ ಸ್ವತಂತ್ರ ಪ್ರಾಂತವಾಗುವ ಸಾಮರ್ಥ್ಯ ಅದು ಹೊಂದಿರುತ್ತದೆ ಎಂದು ಸಿದ್ಧಮಾಡಿ ತೋರಿಸಬೇಕು. ಆದಾಯ ಮತ್ತು ವೆಚ್ಚದ ಸರಿಯಾದ ಲೆಕ್ಕ ಇಟ್ಟಿದ್ದಾದರೆ, ಸದ್ಯದ ತೆರಿಗೆಯ ಮಾನವ ಆಧಾರದ ಮೇಲಿಂದ ಅದು ಸ್ವಾವಲಂಬಿ ಪ್ರಾಂತವಾಗಲಿಕ್ಕಿಲ್ಲ. ಹಾಗಿದ್ದಾಗ, ಮುಂಬೈ ಪ್ರತ್ಯೇಕ ಪ್ರಾಂತವಾಗಬೇಕೆಂಬ ವಾದ ಮುರಿದುಬೀಳುತ್ತದೆ. ಮುಂಬೈಯನ್ನು ಓರಿಸ್ಸಾ ಮತ್ತು ಅಸ್ಸಾಮಗಳಂಥ ಪ್ರಾಂತಗಳೊಂದಿಗೆ ಹೋಲಿಸುವುದು ನಿರುಪಯೋಗ, ಉಚ್ಚ ಆಡಳಿತ ಮಟ್ಟ, ಉಚ್ಚ ಜೀವನ ಮಟ್ಟ, ಹೆಚ್ಚು ಕೂಲಿ ಇದ್ದುದರಿಂದ ತೆರಿಗೆದಾರರನ್ನು ಹಿಂಡಿ ಹಿಪ್ಪಿ ಮಾಡುವಷ್ಟು ತೆರಿಗೆ ಹೇರಿದರೂ, ಮುಂಬೈಯ ವೆಚ್ಚ ಭರಿಸಲು ಸಾಕಾಗುವಷ್ಟು ಆದಾಯ ಬರುವುದಿಲ್ಲ.
ಮಹಾಮುಂಬೈ ಮಾಡುವುದರ ಉದ್ದೇಶ
೬೫) ಮುಂಬೈ ಮೇರೆಗೆ ಹತ್ತಿದ ಮಹಾರಾಷ್ಟ್ರದ ಭಾಗಗಳನ್ನು ಸೇರಿಸಿ ಮಹಾಮುಂಬೈ ಮಾಡುವಲ್ಲಿ ಮುಂಬೈ ಸರಕಾರ ತೋರಿದ ಅಸಹ್ಯ ಅವಸರದ ಕಾರಣದಿಂದ ಅದು ಆರ್ಥಿಕವಾಗಿ ಸ್ವಾವಲಂಬಿ ಪ್ರಾಂತವಾಗುವುದರ ಬಗೆಗಿರುವ ಸಂಶಯ ಇನ್ನಷ್ಟು ಹೆಚ್ಚಾಗುತ್ತದೆ. ಮುಂಬೈಯನ್ನು ಸ್ವಾವಲಂಬಿ ಪ್ರಾಂತವನ್ನಾಗಿ ಮಾಡುವುದಕ್ಕಲ್ಲದೆ ಬೇರಿನ್ನಾವ ಉದ್ದೇಶಕ್ಕಾಗಿ ಆ ಪ್ರದೇಶವನ್ನು ಮುಂಬೈಯಲ್ಲಿ ಕೂಡಿಸಿರುವುದಿಲ್ಲ. ಬೇರಿನ್ನಾವ ಉದ್ದೇಶವಿರಲು ಸಾಧ್ಯ? ಎಲ್ಲಿಯವರೆಗೆ ಮುಂಬೈ ಮಹಾರಾಷ್ಟ್ರದ ಭಾಗವಾಗಿತ್ತೋ ಅಲ್ಲಿಯವರೆಗೆ ಮಹಾರಾಷ್ಟ್ರದ ಯಾವ ಭಾಗದಲ್ಲಿ ಅದನ್ನು ಸೇರಿಸಬೇಕೆಂಬುದು ಮಹತ್ವದ ವಿಷಯ ಆಗಿರಲಿಲ್ಲ. ಆದರೆ ಮುಂಬೈಯನ್ನು ಪ್ರತ್ಯೇಕ ಪ್ರಾಂತವನ್ನಾಗಿ ಮಾಡುವಾಗ, ಅದಕ್ಕೆ ಸ್ವಾವಲಂಬನ ಶಕ್ತಿಯನ್ನು ನೀಡುವ ಸಲುವಾಗಿ ಮಹಾರಾಷ್ಟ್ರೀಯರು ತಮ್ಮ ಪ್ರದೇಶವನ್ನು ಬಿಟ್ಟುಕೊಡಲು ದೀರ್ಘ ಅವಧಿ ಹಿಡಿಯುವುದು. ಗುಜರಾಥೀಯರು ಬೇಡುವಂತೆ ಮುಂಬೈಯನ್ನು ಬಿಟ್ಟುಕೊಡುವುದಷ್ಟೇ ಅಲ್ಲ ಮಹಾಮುಂಬಯಿ ಯೋಜನೆಯನ್ನು ಪೂರೈಸಲು ಮಹಾರಾಷ್ಟ್ರವು ಕೆಲವು ಭಾಗವನ್ನೂ ನ್ಯಾಯಯುತವಾಗಿ ಬಿಟ್ಟುಕೊಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಜವಾಬುದಾರಿ ಭಾಷಾವಾರು ಪ್ರಾಂತ ರಚನೆಯ ಆಯೋಗದ ಮೇಲೆ ಬಿದ್ದಿದೆ. ಈ ಜವಾಬುದಾರಿಯಿಂದ ತಪ್ಪಿಸಿಕೊಳ್ಳಲು ಆಯೋಗಕ್ಕೆ ಸಾಧ್ಯವಾಗದು.
೬೬) ಮಹಾರಾಷ್ಟ್ರ ಮತ್ತು ಮುಂಬೈ ಒಂದಕ್ಕೊಂದು ಅವಲಂಬಿಸಿರುವುದಕ್ಕೆ ಅಲ್ಲ, ಅವು ನಿಜವಾಗಿಯೂ ಒಂದಾಗಿದ್ದು, ಅವಿಭಾಜ್ಯವಿರುತ್ತವೆ. ಎರಡನ್ನು ಪ್ರತ್ಯೇಕಿಸುವುದರಿಂದ ಎರಡಕ್ಕೂ ಪ್ರಾಣಾಂತಿಕ ಪೆಟ್ಟು ಬೀಳುತ್ತದೆ. ಮುಂಬೈಯ ಜಲ ಮತ್ತು ಜಲವಿದ್ಯುತ್ತಿನ ಮೂಲಗಳು ಮಹಾರಾಷ್ಟ್ರದಲ್ಲಿರುತ್ತವೆ ಮಹಾರಾಷ್ಟ್ರದ ಬುದ್ಧಿಜೀವಿಗಳು ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಮುಂಬೈಯನ್ನು ಮಹಾರಾಷ್ಟ್ರದಿಂದ (ಪುಟ 146)
ಪ್ರತ್ಯೇಕಿಸುವುದೆಂದರೆ, ಮುಂಬೈಯ ಆರ್ಥಿಕ ಸ್ಥಿತಿಯನ್ನು ಕೆಡಿಸಿದಂತಾಗುತ್ತದೆ, ಮತ್ತು ಮಹಾರಾಷ್ಟ್ರೀಯರನ್ನು ಅವರ ಬುದ್ದಿಜೀವಿಗಳಿಂದ ಪ್ರತ್ಯೇಕಿಸುವುದರಿಂದ ಅವರು ಮಾರ್ಗದರ್ಶನವಿಲ್ಲದೆ ದಾರಿ ಕಳೆದುಕೊಳ್ಳುತ್ತಾರೆ. ಅವರು ಯಾವ ಗತಿಯನ್ನೂ ಹೊಂದುವುದಿಲ್ಲ.
ಮಧ್ಯಸ್ಥಿಕೆಯಿಂದ ಪರಿಹಾರ ಕಂಡು ಹಿಡಿಯುವುದು
೬೭) ಮುಂಬೈ ಸಮಸ್ಯೆಯನ್ನು ಮಧ್ಯಸ್ಥಿಕೆಯಿಂದ ಮುಗಿಸಿಬಿಡಬೇಕೆಂದು ಕೆಲವು ಮೂಲಗಳಿಂದ ಸೂಚನೆಗಳು ಬಂದಿರುವುದನ್ನು ನಾನು ಕಂಡಿದ್ದೇನೆ. ಇದಕ್ಕಿಂತ ಹೆಚ್ಚು ಅಸಂಬದ್ಧ ಸೂಚನೆಯನ್ನು ನಾನೆಂದೂ ಕೇಳಿರುವುದಿಲ್ಲ. ಮದುವೆಗೆ ಸಂಬಂಧಿಸಿದ ವ್ಯಾಜ್ಯವನ್ನು ಮಧ್ಯಸ್ಥ ವ್ಯಕ್ತಿಯ ನಿರ್ಣಯದ ಆಧಾರದ ಮೇಲೆ ಮುಗಿಸುವುದು ಎಷ್ಟು ಅಸಂಬದ್ಧವೊ ಇದೂ ಅಷ್ಟೇ ಅಸಂಬದ್ಧ ಎನಿಸುತ್ತದೆ. ಮುಂಬೈ ಮತ್ತು ಮಹಾರಾಷ್ಟ್ರಗಳನ್ನು ದೇವರು ಒಂದಾಗಿ ಸೃಷ್ಟಿಸಿದ್ದಾನೆ. ಯಾವ ಮಧ್ಯಸ್ಥಿಕೆಗಾರನೂ ಅವೆರಡನ್ನು ಬೇರ್ಪಡಿಸಲಾರ. ಅದನ್ನು ನಿರ್ಣಯಿಸುವ ಅಧಿಕಾರವಿರುವುದು ಆಯೋಗಕ್ಕಷ್ಟೆ, ಅದೇ ಈ ವ್ಯಾಜ್ಯವನ್ನು ಬಗೆಹರಿಸಲಿ. (ಪುಟ 147)
– ಡಾ.ಬಿ.ಆರ್.ಅಂಬೇಡ್ಕರ್
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ – 1, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,2015, ಪುಟ ಸಂಖ್ಯೆ 111 – 147




