ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮನ್ವಯತೆ ಇಲ್ಲದೇ ರಾಜ್ಯದ ಅಭಿವೃದ್ದಿಯಲ್ಲಿ ಕುಂಠಿತ: ಡಾ.ಎಲ್.ಹನುಮಂತಯ್ಯ

12 months ago

ಭಾಷಾವಾರು ರಾಜ್ಯಗಳ ರಚನೆಯ ಆಶಯ ಈಡೇರಿದೆಯೆ ಚಿಂತನಗೋಷ್ಠಿ

ಆರ್.ಪ್ರಭುಶಂಕರ್ ದಂಪತಿಗಳಿಗೆ ಅಭಿನಂದನೆ ಕಾರ್ಯಕ್ರಮ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಕುವೆಂಪು  ಸಭಾಂಗಣದಲ್ಲಿ ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗದ ಸಹಯೋಗದಲ್ಲಿ ಕನ್ನಡ ಚಿಂತೆ ಮತ್ತು ಅಭಿನಂದನೆ, ಭಾಷವಾರು ರಾಜ್ಯಗಳ ರಚನೆಯ ಆಶಯ ಈಡೇರಿದೆಯೇ? ಮತ್ತು ರಾಜಭವನದ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್, ಉಮಾದೇವಿ  ದಂಪತಿಗಳಿಗೆ – 60 ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ಮನು ಬಳಿಗಾರ್, ನೃಪತುಂಗ ಶಾಲೆಯ ಉಪಾಧ್ಯಕ್ಷ ಸ.ರ.ಸುದರ್ಶನ್, ಕನ್ನಡ ಗೆಳಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ ಚಾಲನೆ ನೀಡಿದರು.

ಎಲ್.ಹನುಮಂತಯ್ಯ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದಾಗ 500ಕ್ಕೂ ಹೆಚ್ಚು ಸಾಮಂತರ ರಾಜ್ಯವಾಗಿತ್ತು. ಎಲ್ಲವನ್ನೂ ಸೇರಿಸಿ ಅಖಂಡ ಭಾರತ ಮಾಡಿ, ನಂತರ ರಾಜ್ಯಗಳಾಗಿ ಮಾಡಲಾಯಿತು. ವೈವಿಧ್ಯಮಯ ಸಂಸ್ಕೃತಿ ಉಳಿಸಲು, ರಾಜಕೀಯ ದೃಷ್ಟಿಕೋನದಿಂದ 1956ರಲ್ಲಿ ಭಾಷವಾರು ಪ್ರಾಂತ್ಯ ವಿಂಗಡನೆಯ ಮಾಡಲಾಯಿತು ಎಂದರು.

ಅಪ್ಪಟ ಕನ್ನಡ ಮಾತನಾಡುವವರು ಸೊಲ್ಲಾಪುರ, ಕಾಸರಗೋಡು, ಹೊಸುರು ಮೊದಲಾದೆಡೆ ಬೇರೆ ರಾಜ್ಯಗಳಿಗೆ ಸೇರಿದ್ದಾರೆ. ಮೈಸೂರು ಭಾಗದಲ್ಲಿ ನೀರಾವರಿ ಮತ್ತು ಮೈಸೂರು ಮಹಾರಾಜರ ಕೊಡುಗೆಯಿಂದ ಸಮೃದ್ದವಾಗಿ ಬೆಳೆಯಿತು. ಕಲ್ಬುರ್ಗಿ ಜಿಲ್ಲೆಯು ಅತ್ಯಂತ ಹಿಂದುಳಿದ ಪ್ರದೇಶವಾಯಿತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮನ್ವಯತೆ ಇಲ್ಲದೇ ರಾಜ್ಯ ಅಭಿವೃದ್ದಿಯಲ್ಲಿ ಕುಂಠಿತವಾಯಿತು ಎಂದರು.

ದೇಶದಲ್ಲಿ 780ಕ್ಕೂ ಹೆಚ್ಚು ಭಾಷೆಗಳಿವೆ. ಉಪ ಭಾಷೆಗಳು, ಪ್ರಧಾನ ಭಾಷೆಗಳ ನಡುವೆ ತಿಕ್ಕಾಟಗಳು ನಡೆಯುತ್ತಿದೆ. ಖಾಸಗೀಕರಣವಾದ ಮೇಲೆ ರಾಜ್ಯ ರಾಜ್ಯಗಳ ನಡುವೆ ಅಂತರ ಕಡಿಮೆಯಾಯಿತು. ವಲಸಿಗರ ಸಂಖ್ಯೆಗಳು ಹೆಚ್ಚಳವಾಯಿತು. ಗ್ರಾಮೀಣ ಕೃಪಾಂಕವನ್ನು ಕೊಟ್ಟು ಹಳ್ಳಿಯ ಮಕ್ಕಳು ಅಭಿವೃದ್ದಿಯಾಗಬೇಕು ಎಂದಾಗ ಕೋರ್ಟ್ ತಡೆಹಿಡಿಯಿತು. ಮಹಿಷಿ ವರದಿ ಇದುವರೆಗೆ ಸಂವಿಧಾನ ಮಾನ್ಯತೆ ಪಡೆಯದೇ ಜಾರಿಗೆ ಬಂದಿಲ್ಲ ಎಂದರು.

ನಗರ ಮತ್ತು ಹಳ್ಳಿಗಳ ನಡುವೆ ಬಹಳ ಅಂತರವಿದೆ. 75 ವರ್ಷ ಕಳೆದರು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸತತ ವಿರುದ್ದ ದಿಕ್ಕಿನಲ್ಲಿ ಇರುತ್ತದೆ. ಹೆಚ್ಚಿನ ತೆರಿಗೆ ಕೊಡುವ ರಾಜ್ಯಕ್ಕೆ ಸಮರ್ಪಕ ಅನುದಾನ ನೀಡದೇ ಬೇರೆ ರಾಜ್ಯಕ್ಕೆ ನೀಡುತ್ತಾರೆ ಇದು ಸರಿಯಲ್ಲ ಎಂದರು.

ಎಲ್ಲರಿಗೂ ಕುಡಿಯುವ ನೀರು ಕೊಡಬೇಕು ಎಂದು ಇದ್ದರು ಮೇಕದಾಟು ಯೋಜನೆ ಮಾಡಲು ಕೇಂದ್ರ ಸರ್ಕಾರ ಅನುಮತಿಗಾಗಿ ಕಾಯಬೇಕು. ಹಿಂದಿ ಭಾಷೆಗೆ ಸಿಗುವ ಭಾಷೆ, ಸಂಸ್ಕೃತ ಭಾಷೆಗೆ ಹೆಚ್ಚಿನ ಮಾನ್ಯತೆ ಸಿಗುತ್ತಿದೆ. ಆದರೆ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಕನ್ನಡಿಗರು ಆಡುವ ಕನ್ನಡ ಭಾಷೆಗೆ ಮಾನ್ಯತೆ ಸಿಗುತ್ತಿಲ್ಲ. ಶಾಸಕಾಂಗದಲ್ಲಿ ಮಾಡಿದ ಕಾನೂನನ್ನು ರಾಜ್ಯಪಾಲರು ತಿರಸ್ಕಾರ ಮಾಡುತ್ತಾರೆ ಎಂದರೆ ಚರ್ಚೆಯ ವಿಷಯವಾಗಿದೆ ಎಂದರು.

ಮನುಬಳಿಗಾರ್ ಮಾತನಾಡಿ, ಕನ್ನಡ ಮಾತನಾಡುವ ಉತ್ತರ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಕನ್ನಡ ಶಾಲೆ ಇರಲಿಲ್ಲ. ಮರಾಠಿ ಶಾಲೆಗಳು ಇದ್ದವು. ಕನ್ನಡ ಶಾಲೆಗೆ ಹೋಗಬೇಕು ಎಂದರೆ ಧಾರವಾಡ, ಹುಬ್ಬಳ್ಳಿ ಹೋಗಬೇಕಾಗಿತ್ತು. ಸಂಗೀತ ಕಲಿಯಬೇಕು ಎಂದರೆ ಮರಾಠಿ ಕಲಿಯಬೇಕು ಎಂಬ ವಾಡಿಕೆ ಇತ್ತು. ಇಂದು ಸಹ ಕನ್ನಡಿಗರ ಆಶಯ ಈಡೇರಿಲ್ಲ. ಭಾಷೆ, ಉದ್ಯೋಗ ಮತ್ತು ನೀರು ಎಲ್ಲಕ್ಕೂ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದರು.

ನಗರ ಪ್ರದೇಶದಲ್ಲಿ ಜಾತಿ ಮುಖ್ಯವಾಗಿದೆ, ಭಾಷೆ ಮುಖ್ಯವಾಗಿಲ್ಲ ಎಂಬ ಸನ್ನಿವೇಶ ಬಂದಿದೆ. ಕನ್ನಡ ಪರ ಹೋರಾಟಗಾರರು ಆಯ್ಕೆ ಸಮಿತಿಯಲ್ಲಿ ಇದ್ದರೆ ಕನ್ನಡಿಗರಿಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಗ್ರಾಮೀಣ ಬ್ಯಾಂಕ್ ಕನ್ನಡಿಗರಿಗೆ ಮೀಸಲು ಇಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಇದರ ಪರಿಣಾಮ ಎಲ್ಲ ರಾಜ್ಯಗಳ ಆಯಾ ಭಾಷಿಕರಿಗೆ ಉದ್ಯೋಗ ಲಭಿಸುವಂತೆ ಆಯಿತು. ರಾಜ್ಯ ಸಂಸದರಿಗೆ ಜಾತಿ ಮುಖ್ಯವಾಗಿದೆ, ರಾಜ್ಯ ಮುಖ್ಯವಾಗಿಲ್ಲ ಎಂದರು.

ರಾ.ನಂ.ಚಂದ್ರಶೇಖರ್ ಅವರು ಯುವಕರಾಗಿದ್ದ ಕಾಲದಲ್ಲಿ ಗೋಕಾಕ್ ಚಳುವಳಿ ಸಕ್ರಿಯ ಕಾರ್ಯಕರ್ತರಾಗಿ ಪ್ರಭುಶಂಕರ್ ರವರು ತೊಡಗಿಸಿಕೊಂಡರು. ಪ್ರಭುಶಂಕರ್ ಅವರು ಸರ್ಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿದರೂ ನಾಡು, ನುಡಿಯ ಕನ್ನಡ ಕಾಯಕ ಮರೆಯಲ್ಲಿಲ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು ಎಂದರು.

ವ.ಚ.ಚನ್ನೇಗೌಡ ಮಾತನಾಡಿ, ಕನ್ನಡ ನಾಡು, ನುಡಿಗಾಗಿ ಹೋರಾಟ ಮಾಡಿದ ಪ್ರಭುಶಂಕರ್ ಕನ್ನಡ ಭಾಷೆಯ ಕುರಿತು ಅಪಾರ ಚಿಂತನೆ ಮಾಡುತ್ತಾರೆ. ಪೊಟ್ಟಿ ಶ್ರೀರಾಮುಲು ಸತತ ಹೋರಾಟದಿಂದ ಭಾಷಾವಾರು ಪ್ರಾಂತ್ಯ ರಚನೆಯಾಯಿತು. ಜನರ ಒತ್ತಾಯಕ್ಕೆ ಮಣಿದು ಕೇಂದ್ರ ಸರ್ಕಾರ ಭಾಷಾವಾರು ರಾಜ್ಯಗಳ ರಚನೆಯಾಯಿತು ಎಂದರು.

ಬಿಜೆಪಿ, ಕಾಂಗ್ರೆಸ್, ತೃತೀಯ ರಂಗದಲ್ಲಿ ಕೇಂದ್ರದ ಆಡಳಿತ ಮಾಡಿದ ಪಕ್ಷಗಳು ರಾಜ್ಯಕ್ಕೆ ಸತತ ಅನ್ಯಾಯ ಮಾಡಿದ್ದಾರೆ. ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನ ನೀಡಲು ತಾರತಮ್ಯ ಮಾಡಿದರು. ಗಡಿ, ಜಲ ಸಮಸ್ಯೆ ಬಂದಾಗ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತದೆ. ತಮಿಳುನಾಡಿನ ಸಂಸದರು ಒಟ್ಟಾಗಿ ಸೇರಿ ಹೋರಾಟ ಮಾಡುತ್ತಾರೆ. ನಮ್ಮ ರಾಜ್ಯದ ಸಂಸದರು ರಾಜ್ಯದ ಬಗ್ಗೆ ಚಿಂತನೆ ಮಾಡುವುದಿಲ್ಲ. ಇದು ವಿಪರ್ಯಾಸ.
ಕನ್ನಡ ಪರ ಹೋರಾಟಗಾರರ ಶ್ರಮದಿಂದ ಬೆಳಗಾವಿ ಉಳಿಯಿತು, ಜಾತಿ ರಾಜಕಾರಣ ಕರ್ನಾಟಕ ಇಂದು ಹಾಳಾಯಿತು. ರಾಜ್ಯಧ್ವಜಕ್ಕೆ ಮಾನ್ಯತೆ ಕೊಡಿ ಎಂದು 8 ವರ್ಷವಾಯಿತು. ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದರು.

ಸ.ರ.ಸುದರ್ಶನ್ ಮಾತನಾಡಿ, ಸರ್ಕಾರದಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಭಾಷೆ ಉತ್ತಮವಾಗಿ ಜಾರಿಗೆ ಬಂದಿದೆ. ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗ ಲಭಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿರಲ್ಲಿಲ್ಲ. ಗೋಕಾಕ್ ಚಳುವಳಿ ನಂತರ ಕೇಂದ್ರ ಸರ್ಕಾರದಲ್ಲಿ ಕನ್ನಡಿಗರಿಗೆ ಉದ್ಯೋಗ ಲಭಿಸುವಂತಾಯಿತು. ಆಂಗ್ಲ ಭಾಷೆಯ ನಾಮಫಲಕ ಎಲ್ಲ ಕಡೆಗಳಲ್ಲಿ ಎದ್ದು ಕಾಣುತ್ತಿವೆ. ನಾಮಫಲಕದಲ್ಲಿ ಕನ್ನಡ ಕಡ್ಡಾಯ ಸಮರ್ಪಕವಾಗಿ ಜಾರಿಗೆಯಾಗಬೇಕು ಎಂದರು.

ಆರ್.ಪ್ರಭುಶಂಕರ್ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಉನ್ನತ ಹುದ್ದೆಗೆ ಬರಲು ನನ್ನ ತಂದೆ, ತಾಯಿ ಕಾರಣ. ನನ್ನ ನಿವೃತ್ತಿ ನಂತರ ಮುಂದುವರೆಸಿರುವ ರಾಜ್ಯಪಾಲರಿಗೆ ಧನ್ಯವಾದಗಳು, ರಾಜ್ಯಪಾಲರು ಕನ್ನಡ ಭಾಷೆ ಕಲಿತು ಮಾತನಾಡುತ್ತಿದ್ದಾರೆ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದೆ. ನಾಡು, ನುಡಿ ಎಲ್ಲ ಹೋರಾಟದಲ್ಲಿ ನಾನು ಭಾಗವಹಿಸಲು ಹಲವಾರು ಸಾಹಿತಿ, ಕನ್ನಡಪರ ಹೋರಾಟಗಾರರು ಕಾರಣ ಎಂದರು.

ಎಚ್.ಎನ್.ರಮೇಶ್ ಬಾಬು, ಡಾ.ಆರ್.ಶೇಷಾಶಾಸ್ತ್ರಿ, ಆರ್.ರಾಮಸ್ವಾಮಿ, ಉಪೇಂದ್ರ, ಮ.ಚಂದ್ರಶೇಖರ್, ಬಿ.ಎಂ.ಗಂಗಣ್ಣ, ಬಿ.ವಿ.ರವಿಕುಮಾರ್, ಸಾಹಿತ್ಯ, ಕನ್ನಡಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply