ನಿರ್ಬಂಧ ಮತ್ತು ಸಮದಂಡಿಗಳ ಆವಶ್ಯಕತೆ:ಡಾ.ಬಿ.ಆರ್.ಅಂಬೇಡ್ಕರ್
ಭಾಷಾವಾರು ಪ್ರಾಂತಗಳನ್ನು ಕುರಿತ ಲೇಖನ
ಪ್ರಕಾಶಿತ: ಟೈಮ್ಸ್ ಆಫ್ ಇಂಡಿಯಾ ೨೩ ಏಪ್ರಿಲ್, ೧೯೫೩ರ ದಿನಪತ್ರಿಕೆಯಲ್ಲಿ
ನಿರ್ಬಂಧ ಮತ್ತು ಸಮದಂಡಿಗಳ ಆವಶ್ಯಕತೆ
೧೫೦ ವರ್ಷ ಕಾಲ ದೇಶವನ್ನು ಆಳಿದ ಬ್ರಿಟಿಷರು ಭಾಷಾವಾರು ಪ್ರಾಂತರಚನೆಯ ಸಮಸ್ಯೆ ಪ್ರಚಲಿತ ಇದ್ದಾಗ್ಯೂ ಎಂದೂ ಅದರ ಬಗೆಗೆ ಯೋಚಿಸಲಿಲ್ಲ. ಬಹುಭಾಷಾ ಪ್ರದೇಶಗಳಲ್ಲಿ ಸಾಂಸ್ಕೃತಿಕ ಆವಶ್ಯಕತೆಗಳನ್ನು ಪೂರೈಸುವುದಕ್ಕಿಂತ ಸುಭದ್ರ ಸರಕಾರವನ್ನು ಸ್ಥಾಪಿಸುವುದರಲ್ಲಿ ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಹೆಚ್ಚು ಆಸಕ್ತರಾಗಿದ್ದರು. ಅಂತೂ, ಏಕಭಾಷಿಕರ ಗುಂಪು ಎದ್ದು ಕಾಣುವ ಪ್ರದೇಶಗಳಲ್ಲಿ ತಾವು ಮಾಡಿದ ಆಡಳಿತ ವ್ಯವಸ್ಥೆಯಲ್ಲಿ ಭಾಷಾ ದೃಷ್ಟಿಯಿಂದ ಸ್ವಲ್ಪ ಹೊಂದಾಣಿಕೆ ಮಾಡುವುದು ಅವಶ್ಯ ಎಂದು ಅವರಿಗೆ ತಮ್ಮ ಆಳ್ವಿಕೆಯ ಕೊನೆಗೆ ತಿಳಿಯಿತೆಂಬುದು ನಿಜ. ಉದಾಹರಣೆಗೆ ಭಾರತವನ್ನು ತಾವು ಬಿಡುವುದಕ್ಕೆ ಮುಂಚೆ ಬಂಗಾಲ, ಬಿಹಾರ ಮತ್ತು ಓರಿಸ್ಸಾ ಪ್ರಾಂತಗಳನ್ನು ಭಾಷಾವಾರು ಪ್ರಾಂತಗಳನ್ನಾಗಿ ಮಾಡಿದರು. ಅವರ ಆಳ್ವಿಕೆ ಇನ್ನೂ ಮುಂದುವರೆದಿದ್ದರೆ, ಭಾಷಾವಾರು ಪ್ರಾಂತ ತತ್ವವನ್ನು ತರ್ಕಬದ್ಧವಾಗಿ ಸಂಪೂರ್ಣ ಅನುಷ್ಠಾನಕ್ಕೆ ತರುತ್ತಿದ್ದರೆಂದು ಹೇಳುವುದು ಕಠಿಣ. ಆದರೆ ಬ್ರಿಟಿಷರು ಭಾಷಾವಾರು ಪ್ರಾಂತಗಳ ರಚನೆ ಬಗೆಗೆ ವಿಚಾರಿಸುವುದಕ್ಕಿಂತ ಬಹು ಹಿಂದೆ, ಅಂದರೆ ೧೯೨೦ ರಲ್ಲಿ ಕಾಂಗ್ರೆಸ್ಸು, ಗಾಂಧೀಜಿ ಅವರ ನೇತೃತ್ವದಲ್ಲಿ, ಭಾಷಾವಾರು ಪ್ರಾಂತಗಳು ಆಧಾರದ ಮೇಲೆ ತನಗೋಸ್ಕರವೇ ಒಂದು ಸಂವಿಧಾನವನ್ನು ತಯಾರಿಸಿತು. ೧೯೨೦ರಲ್ಲಿ ರೂಪಿತವಾದ ಸಿದ್ಧಾಂತವನ್ನೊಳಗೊಂಡ ಸಂವಿಧಾನ ಸುಯೋಜಿತವಾದುದು ಅಥವಾ ಜನರನ್ನು ಕಾಂಗ್ರೆಸ್ಸಿನೊಳಗೆ ಎಳೆದುಕೊಳ್ಳಲು ಒಡ್ಡಿದ ಆಮಿಷವೊ ಎಂಬುದನ್ನು ಊಹಿಸುವ ಗೋಜಿಗೆ ಹೋಗುವುದಿಲ್ಲ. ಭಾಷೆಗೆ ಸಂಬಂಧಿಸಿದ ವಿಷಯಗಳು ಮಹತ್ವದವು ಎಂಬುದನ್ನು ಬ್ರಿಟಿಷರು ತಿಳಿದುಕೊಂಡರೆಂಬುದರಲ್ಲಿ ಮತ್ತು ಅದನ್ನು ಸೀಮಿತ ಪ್ರಮಾಣದಲ್ಲಿ ಕಾರ್ಯ ರೂಪಕ್ಕಿಳಿಸಿದರೆಂಬುದರಲ್ಲಿ ಸಂಶಯವಿರುವುದಿಲ್ಲ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ವಿರೋಧ
೧೯೨೦ ರ ಸಂವಿಧಾನದ ಪ್ರಕಾರ ತಾನೇ ನಿರ್ಮಿಸಿದ ಜವಾಬುದಾರಿಯನ್ನು ಹೊರುವ ಆವಶ್ಯಕತೆ ಕಾಂಗ್ರೆಸ್ಸಿಗೆ ೧೯೪೫ ರವರೆಗೆ ಬರಲಿಲ್ಲ. ೧೯೪೫ ರಲ್ಲಿ ಅಧಿಕಾರ ವಹಿಸಿಕೊಂಡಾಗ ಅದಕ್ಕೆ ಈ ಜವಾಬುದಾರಿ ಹೊಳೆಯಿತು. ಲೋಕಸಭೆಯ ಸದಸ್ಯರೊಬ್ಬರು ಭಾರತದಲ್ಲಿ ಭಾಷಾವಾರು ಪ್ರಾಂತಗಳ ರಚನೆ ಕುರಿತು ಮಂಡಿಸಿದ ಗೊತ್ತುವಳಿಯಿಂದ ಇದಕ್ಕೆ ಚಾಲನೆ ದೊರೆಯಿತೆನ್ನುವುದು ಅದರ ಇತ್ತೀಚಿನ ಇತಿಹಾಸವನ್ನು ಅವಲೋಕಿಸಿದಾಗ ತಿಳಿದುಬರುತ್ತದೆ. ಆ ಚರ್ಚೆಯಲ್ಲಿ ಸರಕಾರದ ಪರವಾಗಿ ಉತ್ತರ ಹೇಳುವುದು ನನ್ನ ಪಾಲಿಗೆ ಬಂದಿತು. ನಾನು ಸಹಜವಾಗಿ ಈ ವಿಷಯದ ಬಗೆಗೆ ಮೇಲಿನವರ ನಿಶ್ಚಿತಧೋರಣೆಯನ್ನು ಅರಿಯಲು ಅವರ ಬಳಿಗೆ ಹೋದೆ. ಇದು ವಿಚಿತ್ರವೆಂದು ಅನಿಸಬಹುದು, ಭಾಷಾವಾರು ಪ್ರಾಂತರಚನೆಗೆ ವರಿಷ್ಠರು ಸಂಪೂರ್ಣ ವಿರುದ್ಧ ಇದ್ದರೆಂದು ಸ್ಪಷ್ಟವಾಯಿತು. ಇಂಥ ಪ್ರಸಂಗದಲ್ಲಿ ಚರ್ಚೆಗೆ ಉತ್ತರ ಹೇಳುವ ಜವಾಬುದಾರಿಯನ್ನು ಪ್ರಧಾನ ಮಂತ್ರಿಯವರ ಮೇಲೆ ಹೇರಿ ಪರಿಹಾರ ದೊರಕಿಸಿದ್ದಾಯಿತು. ಪ್ರಧಾನಿ ಅವರು ತಮ್ಮ ಉತ್ತರದಲ್ಲಿ ಪ್ರತ್ಯೇಕ ಆಂಧ್ರಪ್ರಾಂತವನ್ನು ಕೂಡಲೇ ನಿರ್ಮಿಸುವ ಭರವಸೆ ಇತ್ತರು. ಪ್ರಧಾನಿಯವರ ಹೇಳಿಕೆಯ ಆಧಾರದ ಮೇಲೆ ಗೊತ್ತುವಳಿಯನ್ನು ಹಿಂತೆಗೆದುಕೊಳ್ಳಲಾಯಿತು. ಆ ವಿಷಯ ಅಲ್ಲಿಯೇ ಉಳಿಯಿತು. (ಪುಟ 151)
ಎರಡನೆಯ ಬಾರಿ
ನಾನು ಕರಡು ಸಮಿತಿಯ ಅಧ್ಯಕ್ಷನಾದುದರಿಂದ ಈ ವಿಷಯವನ್ನು ಎರಡನೆಯ ಬಾರಿ ಪರಿಶೀಲಿಸಬೇಕಾಯಿತು. ಸಂವಿಧಾನದ ಕರಡು ಸಿದ್ಧವಾದಾಗ, ಗೊತ್ತುವಳಿಯನ್ನು ಕುರಿತು ಅವರು ಹೇಳಿದುದನ್ನು ಲಕ್ಷ್ಯದಲ್ಲಿಟ್ಟುಕೊಂಡು, ಸಂವಿಧಾನದ ಭಾಗ (ಎ) ರಾಜ್ಯಗಳ ಪಟ್ಟಿಯಲ್ಲಿ ಆಂಧ್ರವನ್ನು ಪ್ರತ್ಯೇಕ ರಾಜ್ಯವನ್ನಾಗಿ ಸೇರಿಸಬಹುದೆ ಎಂದು ಪ್ರಧಾನ ಮಂತ್ರಿಯವರಿಗೆ ಒಂದು ಪತ್ರ ಬರೆದು ಕೇಳಿದೆ. ಆಗ ಏನು ನಡೆಯಿತೆಂಬುದನ್ನು ಜ್ಞಾಪಿಸಿಕೊಳ್ಳಲು ನನ್ನ ಬಳಿ ಏನೂ ಇರುವುದಿಲ್ಲ. ಆದರೆ ಸಂವಿಧಾನ ಸಭೆಯ ಅಧ್ಯಕ್ಷರಾದ ಡಾ. ರಾಜೇಂದ್ರಪ್ರಸಾದ್ ಅವರು ಉತ್ತರ ಪ್ರದೇಶದ ವಕೀಲರಾದ ಶ್ರಿಧರ್ ಅವರ ಅಧ್ಯಕ್ಷತೆಯಲ್ಲಿ ಭಾಷಾವಾರು ಪ್ರಾಂತ ರಚನೆಯ ವಿಷಯವನ್ನು ಶೋಧಿಸಲು ಬಂದ ಸಮಿತಿಯನ್ನು ನೇಮಿಸಿದರು.

ಬೇರೆ ಯಾವುದಕ್ಕೂ ಜನರು ಧರ್ ಕಮಿಟಿಯನ್ನು ನೆನಪಿಡಲಿಕ್ಕಿಲ್ಲ. ಆದರೆ ಒಂದು ವಿಷಯದಲ್ಲಿ ಅದನ್ನು ಮರೆಯುವುದಿಲ್ಲ. ಮಹಾರಾಷ್ಟ್ರವನ್ನು ಭಾಷಾವಾರು ಪ್ರಾಂತವನ್ನಾಗಿ ಮಾಡಿದಲ್ಲಿ ಯಾವುದೇ ಸ್ಥಿತಿಯಲ್ಲಿ, ಎಂಥದೇ ಪ್ರಸಂಗದಲ್ಲಿ ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸತಕ್ಕದ್ದಲ್ಲ ಎಂದು ಸಮಿತಿ ಶಿಫಾರಸು ಮಾಡಿತು. ಅನಂತರ ಜೈಪುರ ಕಾಂಗ್ರೆಸ್ ಅಧಿವೇಶನದಲ್ಲಿ ಆ ವರದಿಯನ್ನು ಪರಿಶೀಲಿಸಲಾಯಿತು. ಪ್ರಧಾನ ಮಂತ್ರಿ, ಶ್ರೀ ವಲ್ಲಭಬಾಯಿ ಪಟೇಲ್, ಮತ್ತು ಡಾ. ಪಟ್ಟಾಭಿ ಸೀತಾರಾಮಯ್ಯ ಈ ಮೂವರು ಸದಸ್ಯರ ಕಮಿಟಿಯನ್ನು ಜೈಪುರ ಕಾಂಗ್ರೆಸ್ಸು ನಿಯಮಿಸಿತು. ಅವರು ಒಂದು ವರದಿಯನ್ನು ಸಿದ್ದಮಾಡಿದರು. ಆಂಧ್ರಪ್ರಾಂತವನ್ನು ಕೂಡಲೆ ರಚಿಸಬೇಕೆಂದು, ಆದರೆ ಮದ್ರಾಸನ್ನು ತಮಿಳುನಾಡಿನಲ್ಲಿ ಬಿಡಬೇಕೆಂಬುದು ಅದರ ಸಾರಾಂಶವಾಗಿತ್ತು. ಅದರ ವಿವರಗಳನ್ನು ಪರಿಶೀಲಿಸಲು ಮತ್ತೊಂದು ಸಮಿತಿಯನ್ನು ನಿಯಮಿಸಲಾಯಿತು. ಅದು ಹೆಚ್ಚುಕಡಿಮೆ ಒಮ್ಮತದ ವರದಿಯಾಗಿತ್ತು. ಆದರೆ ಮದ್ರಾಸ್ ಮೇಲಿರುವ ತಮ್ಮ ಹಕ್ಕನ್ನು ಬಿಟ್ಟುಕೊಡಲು ಸಿದ್ಧವಿರದ ಆಂಧ್ರರು ಶ್ರೀ ಪ್ರಕಾಶಂ ಅವರು ಸಹ ಸೇರಿದಂತೆ ಅದನ್ನು ವಿರೋಧಿಸಿದರು. ಅನಂತರ ಅದು ಇದ್ದಲ್ಲಿಯೇ ಸುಪ್ತಸ್ಥಿತಿಯನ್ನಪ್ಪಿತು.

ಅದರ ತರುವಾಯ ಆಂಧ್ರ ಪ್ರಾಂತದ ಸಲುವಾಗಿ ತಮ್ಮ ಜೀವವನ್ನು ಮುಡುಪಾಗಿಟ್ಟು ಶ್ರೀ ಪೊಟ್ಟಿ ಶ್ರೀರಾಮಲು ಅವರ ಪ್ರಸಂಗ ಬರುತ್ತದೆ. ಎಲ್ಲ ಕಾಂಗ್ರೆಸ್ಸಿಗರು ಒಪ್ಪಿಕೊಂಡಂಥ ಒಂದು ವಿಷಯಕ್ಕಾಗಿ ಶ್ರೀರಾಮಲು ಅವರು ತಮ್ಮ ಜೀವ ಕೊಡಬೇಕಾಗಿ ಬಂದದ್ದು ಆಳುವ ಪಕ್ಷದ ಮೇಲೆ ಬರೆದ ಶೋಕ ಟಿಪ್ಪಣಿ ಇದ್ದಂತಿದೆ. ಆಂಧ್ರಪ್ರದೇಶವನ್ನು ನಿರ್ಮಿಸಬೇಕೆಂದು ಮಾಡಿದ ವಿಚಾರವು ಶ್ರೀರಾಮುಲು ಅವರ ಆತ್ಮಕ್ಕೆ ಪ್ರಧಾನಿ ಅವರು ಸಲ್ಲಿಸಿದ ಪಿಂಡದಾನವಿದ್ದಂತಿದೆ. ಇನ್ನಾವ ದೇಶದಲ್ಲಿ ಜನರು ಸರಕಾರದ ಇಂಥ ಕ್ರಮವನ್ನು ಸಹಿಸುತ್ತಿದ್ದರೆಂಬುದನ್ನು ಊಹಿಸಿ ಪ್ರಯೋಜನವಿಲ್ಲ.
ನನ್ನ ಅಭಿಪ್ರಾಯದ ಪ್ರಕಾರ ಒಂದು ಭಾಷಾವಾರು ಪ್ರಾಂತ ನಿರ್ಮಾಣವಾಗುವುದಕ್ಕಿಂತ ಮೊದಲು ಅದು ಮೂರು ಕರಾರುಗಳನ್ನು ಪೂರೈಸಬೇಕಾಗುತ್ತದೆ. ಮೊದಲನೆಯದಾಗಿ, ಅದು ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು. ಸಂವಿಧಾನವನ್ನು ರೂಪಿಸುವ ಸಮಯದಲ್ಲಿ, ಭಾರತೀಯ ಸಂಸ್ಥಾನಗಳ ವಿಲೀನೀಕರಣ ಪ್ರಶ್ನೆ ಪರಿಶೀಲನೆಗೆ ಬಂದಾಗ ಈ ನಿಯಮವನ್ನು ಅಂಗೀಕರಿಸಲಾಯಿತು. ಆರ್ಥಿಕವಾಗಿ ಸ್ವಾವಲಂಬಿಗಳಾದ ಸಂಸ್ಥಾನಗಳಿಗೆ ಮಾತ್ರ ಸ್ವತಂತ್ರ ಪ್ರಾಂತಗಳಾಗಿ ಉಳಿಯಲು ಅನುಮತಿ ನೀಡಲಾಯಿತು. ಉಳಿದೆಲ್ಲ ಸಂಸ್ಥಾನಗಳನ್ನು ನೆರೆಯ ಪ್ರಾಂತಗಳಲ್ಲಿ ವಿಲೀನಗೊಳಿಸಲಾಯಿತು. (ಪುಟ 152)
ಆಂಧ್ರ ಒಂದು ಸಹರಾ ಮರುಭೂಮಿ (?)
ನಿಯೋಜಿತ ಆಂಧ್ರ ಪ್ರಾಂತವು ಆರ್ಥಿಕವಾಗಿ ಸ್ವಾವಲಂಬಿ ಪ್ರಾಂತವಾಗಿರುತ್ತದೆಯೆ? ಆಂಧ್ರಪ್ರಾಂತದ ವಾರ್ಷಿಕ ಆರ್ಥಿಕ ಕೊರತೆ ೫ ಕೋಟಿ ರೂಪಾಯಿಗಳಷ್ಟಿರುತ್ತದೆ ಎಂದು ನ್ಯಾಯಾಧೀಶ ವಾಂಟೊ ಸ್ಪಷ್ಟವಾಗಿ ಒಪ್ಪಿದ್ದರು. ಈ ಕೊರತೆಯನ್ನು ಎರಡು ರೀತಿಯಿಂದ ಕಡಿಮೆ ಮಾಡಬಹುದಾಗಿತ್ತು. ತೆರಿಗೆ ಹೆಚ್ಚಿಸುವುದು ಇಲ್ಲವೆ ಖರ್ಚು ಕಡಿಮೆ ಮಾಡುವುದು. ಆಂಧ್ರ ಈ ಸಮಸ್ಯೆಯನ್ನು ಎದುರಿಸಲೇಬೇಕಾಗುತ್ತದೆ. ಕೇಂದ್ರವು ಈ ಕೊರತೆಯನ್ನು ಭರಿಸುವ ಜವಾಬುದಾರಿಯನ್ನು ಹೊರುತ್ತದೆಯೆ? ಹೊರುವ ಹಾಗಿದ್ದರೆ, ಈ ಹೊರೆ ನಿಯೋಜಿತ ಆಂಧ್ರ ಪ್ರಾಂತಕ್ಕಷ್ಟೇ ಸೀಮಿತವಾಗಿರುತ್ತದೆಯೋ ಅಥವಾ ಉಳಿದ ಇಂಥ ಪ್ರಾಂತಗಳಿಗೆ ಅನ್ವಯಿಸುವುದೋ? ಇವು ಪರಿಶೀಲಿಸಬೇಕಾದ ಪ್ರಶ್ನೆಗಳು.
ಹೊಸ ಆಂಧ್ರ ಪ್ರಾಂತಕ್ಕೆ ನಿರ್ದಿಷ್ಟ ರಾಜಧಾನಿ ಇರುವುದಿಲ್ಲ. ರಾಜಧಾನಿ ಇರದೆ ರಾಜ್ಯ ನಿರ್ಮಾಣ ಮಾಡುವುದನ್ನು ನಾನೆಂದೂ ಕೇಳಿಲ್ಲ. ನಿಯೋಜಿತ ಆಂಧ್ರಪ್ರಾಂತದ ಸರಕಾರಕ್ಕೆ ಮದ್ರಾಸದಲ್ಲಿ ಒಂದು ರಾತ್ರಿ ಕಳೆಯಲು ಅನುಮತಿಸುವ ಸೌಜನ್ಯವನ್ನು ತಮಿಳುಕುಲದ ಮಹಾನಾಯಕ ಶ್ರೀ ರಾಜಗೋಪಾಲಚಾರಿಯವರು ತೋರಿಸುವುದಿಲ್ಲ. ಅತಿಥಿಗಳನ್ನು ಆದರಿಸುವ ಸೌಜನ್ಯ ಹಿಂದೂಧರ್ಮ ವಿಧಿಸಿದ ಕಟ್ಟಳೆ ಆಗಿರುತ್ತದೆ. ನಿವೇಶನವನ್ನು ಆಯ್ದು ಕಾರ್ಯ ನಿರ್ವಹಿಸುವ, ಬೇಕಾದ ಕಟ್ಟಡಗಳನ್ನು ಕಟ್ಟಿಕೊಳ್ಳುವ ಜವಾಬ್ದಾರಿಯನ್ನು ಹೊಸ ಸರಕಾರಕ್ಕೆ ಬಿಟ್ಟುಬಿಡಲಾಗಿದೆ. ಅದು ಯಾವ ಸ್ಥಳವನ್ನು ಆಯ್ದುಕೊಳ್ಳಬೇಕು? ಯಾವುದರಿಂದ ಕಟ್ಟಡಗಳನ್ನು ಕಟ್ಟಿಕೊಳ್ಳಬೇಕು? ಆಂಧ್ರಪ್ರದೇಶ ಒಂದು ಸಹರಾ ಇದ್ದಂತಿದ್ದು ಅದರಲ್ಲಿ ಓಯಿಸಿಸ್‌ಗಳು ಇರುವುದಿಲ್ಲ. ಅದು ಈ ಸಹರಾದಲ್ಲಿ ಕಟ್ಟಡಗಳನ್ನು ಕಟ್ಟಿಸುವುದು ವ್ಯರ್ಥ. ಅಲ್ಲಿ ಇರಲಿಕ್ಕಾಗದೆ ಯೋಗ್ಯ ವಸತಿ ಇದ್ದ ಕಡೆ ಸ್ಥಳಾಂತರಿಸಲೇಬೇಕಾಗುತ್ತದೆ ತಾತ್ಕಾಲಿಕ ಮುಖ್ಯ ಕಚೇರಿಗಳಿಗಾಗಿ ಮಾಡುವ ವೆಚ್ಚ ವ್ಯರ್ಥ. ಸರಕಾರ ಈ ವಿಷಯ ಯೋಚಿಸಿರುವುದೆ? ಶಾಶ್ವತ ರಾಜಧಾನಿ ಆಗಬಹುದಾದಂಥ ಒಂದು ಸ್ಥಳವನ್ನು ಅದಕ್ಕೆ ಈಗಾಗಲೇ ಏಕೆ ಕೊಡಬಾರದು?
ಈ ದೃಷ್ಟಿಯಿಂದ ವಾರಂಗಲ್ ಯೋಗ್ಯ ಸ್ಥಳ ಎಂದು ನನಗನಿಸುತ್ತದೆ. ಅದು ಆಂಧ್ರದ ಪ್ರಾಚೀನ ರಾಜಧಾನಿ. ಅದು ರೈಲ್ವೆ ಜಂಕ್ಷನ್ ಆಗಿರುತ್ತದೆ. ಅಲ್ಲಿ ಅನೇಕ ದೊಡ್ಡ ದೊಡ್ಡ ಕಟ್ಟಡಗಳಿರುತ್ತವೆ. ಅದು ಹೈದರಾಬಾದ್ ಸಂಸ್ಥಾನದ ಭಾಗವಾಗಿರುವ ಆಂಧ್ರಪ್ರದೇಶದಲ್ಲಿ ಬರುವುದು ನಿಜ. ನಿಯಮಾನುಸಾರ, ರಾಕ್ಷಸ ಗಾತ್ರದ ಹೈದರಾಬಾದ್ ಸಂಸ್ಥಾನವನ್ನು ವಿಭಜಿಸಿ ಸಂಪೂರ್ಣ ಆಂಧ್ರಪ್ರಾಂತವನ್ನು ಮಾಡಬಹುದಿತ್ತು. ಆದರೆ, ಪ್ರಧಾನ ಮಂತ್ರಿಗಳಿಗೆ ಒಪ್ಪಿಗೆ ಆಗದಿದ್ದಲ್ಲಿ ಹೈದರಾಬಾದದಲ್ಲಿ ಒಂದು ಆಂಧ್ರಪ್ರದೇಶವನ್ನು ನಿರ್ಮಿಸಿ, ಅದನ್ನು ಹೊಸ ಆಂಧ್ರಪ್ರದೇಶಕ್ಕೆ ಕೂಡಿಸಿ, ತನ್ಮೂಲಕ ವಾರಂಗಲ್ಲಿಗೆ ದಾರಿಮಾಡಲಿಕ್ಕಾಗುವುದಿಲ್ಲವೆ? ಪರ ಪ್ರದೇಶಗಳಿಂದ ಆವೃತವಾದ ಸಂಸ್ಥಾನಗಳಿಗೆ ಭಾರತದಲ್ಲಿ ಕೊರತೆ ಇರುವುದಿಲ್ಲ. ಆದರೆ ಪ್ರಧಾನ ಮಂತ್ರಿಗಳು ಹೈದರಾಬಾದ್ ಮತ್ತು ಕಾಶ್ಮೀರಗಳಲ್ಲಿ ದೇವರ ಇಚ್ಛೆಯ ವಿರುದ್ದ ಕೆಲಸಮಾಡಬಯಸಿದ್ದಾರೆ. ಅದರ ಪರಿಣಾಮವನ್ನು ಅವರು ಕೂಡಲೇ ನೋಡುವರೆಂಬ ಭರವಸೆ ನನಗೆ ಇದೆ.
ಪ್ರಥಮ ಕರಾರು
ಇದು ಕೇವಲ ಅನುಷಂಗಿಕ, ಭಾಷಾವಾರು ಪ್ರಾಂತ ಆರ್ಥಿಕವಾಗಿ ಸ್ವಾವಲಂಬಿ ಆಗಿರಬೇಕೆಂಬುದು ನನ್ನ ವಾದದ ಮುಖ್ಯ ಅಂಶ, ಎರಡನೆಯದಾಗಿ, ಭಾಷಾವಾರು ಪ್ರಾಂತದಲ್ಲಿ ಏನೇನು (ಪುಟ 153)
ಸಂಭವಿಸಬಹುದೆಂಬುದನ್ನು ಗಮನಿಸಬೇಕಾಗಿದೆ. ದುರ್ದೈವದಿಂದ, ಜನಸಂಖ್ಯಾಶಾಸ್ತ್ರದ ಪ್ರಕಾರ ಭಾರತದ ಜನಸಂಖ್ಯೆಯನ್ನು ಯಾರೂ ಸಂಪೂರ್ಣ ಅಭ್ಯಾಸ ಮಾಡಿರುವುದಿಲ್ಲ. ಹಿಂದೂಗಳಷ್ಟು, ಮುಸಲ್ಮಾನರಷ್ಟು ಯಹೂದ್ಯರೆಷ್ಟು, ಕ್ರೈಸ್ತರೆಷ್ಟು ಮತ್ತು ಅಸ್ಪೃಶ್ಯರೆಷ್ಟು ಎಂದು ಕೇವಲ ಜನಗಣತಿಯಿಂದ ತಿಳಿದಿದ್ದೇವೆ. ಎಷ್ಟು ಧರ್ಮಗಳಿವೆ ಎಂಬುದನ್ನು ತಿಳಿದುಕೊಳ್ಳದೆ ಈ ಮಾಹಿತಿ ಉಪಯೋಗಕ್ಕೆ ಬರುವುದಿಲ್ಲ. ವಿವಿಧ ಭಾಷಾವಾರು ಪ್ರಾಂತಗಳಲ್ಲಿ ವಿವಿಧ ಧರ್ಮದವರು ಎಷ್ಟೆಷ್ಟು ಇರುವರೆಂಬುದನ್ನು ತಿಳಿದುಕೊಳ್ಳುವುದು ಅವಶ್ಯವಿರುತ್ತದೆ. ಇದರ ವಿಷಯಕ್ಕೆ ನಮ್ಮ ಬಳಿ ಬಹಳ ಕಡಿಮೆ ಮಾಹಿತಿ ಇರುತ್ತದೆ. ಎಲ್ಲರೂ ತಮ್ಮ ತಮ್ಮ ಜ್ಞಾನಭಂಡಾರ ಮತ್ತು ಸಂಗ್ರಹಿತ ಮಾಹಿತಿಯನ್ನು ಅವಲಂಬಿಸಬೇಕಾಗುತ್ತದೆ. ಭಾಷಾವಾರು ಪ್ರದೇಶದಲ್ಲಿ ಜಾತಿ ವ್ಯವಸ್ಥೆ ಹೀಗಿರುತ್ತದೆ. ಒಂದೆರಡು ಪ್ರಮುಖ ಜಾತಿಗಳು ಮತ್ತು ಕೆಲವು ಅಲ್ಪಸಂಖ್ಯಾತರ ಜಾತಿಗಳಿದ್ದು, ಅಲ್ಪಸಂಖ್ಯಾತರ ಜಾತಿಗಳು ಪ್ರಮುಖ ಜಾತಿಗಳ ಅಧೀನವಾಗಿದ್ದು, ಅವುಗಳನ್ನು ಅವಲಂಬಿಸಿರುತ್ತದೆ ಎಂದರೆ ಅದನ್ನಾದರೂ ವಿರೋಧಿಸುವರೆಂದು ನನಗನಿಸುವುದಿಲ್ಲ.
ಜಾತಿ ವ್ಯವಸ್ಥೆ
ಜಾತಿ ವ್ಯವಸ್ಥೆಯ ಕೆಲವು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಪಂಜಾಬದ ಪೆಪ್ಸುದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಜಾಟರು ಎಲ್ಲ ಕಡೆಗೆ ಪ್ರಬಲ ಇದ್ದಾರೆ. ಹರಿಜನರು ಜಾಟರ ಅಧೀನರಾಗಿದ್ದು, ಅವರನ್ನು ಅವಲಂಬಿಸಿರುತ್ತಾರೆ. ಆಂಧ್ರದ ಉದಾಹರಣೆ ತೆಗೆದುಕೊಳ್ಳಿ. ಈ ಭಾಷಾವಾರು ಪ್ರದೇಶದಲ್ಲಿ ಎರಡು-ಮೂರು ಪ್ರಮುಖ ಜಾತಿಗಳಿರುತ್ತವೆ. ಒಂದೊಂದು ಭಾಗದಲ್ಲಿ ಒಂದೊಂದು ಪ್ರಮುಖ ಇರುತ್ತವೆ. ರೆಡ್ಡಿ, ಕಮ್ಮ ಇಲ್ಲವೆ ಕಾಪು ಜಾತಿಯವರು. ಎಲ್ಲ ಭೂಮಿ, ಎಲ್ಲ ಕಾರ್ಯಾಲಯ, ಎಲ್ಲ ವ್ಯಾಪಾರವನ್ನು ಇವರೇ ಹಿಡಿದಿರುತ್ತಾರೆ. ಎಲ್ಲ ಹರಿಜನರು ಅವರ ಅಧೀನರಾಗಿದ್ದು, ಅವರನ್ನು ಅವಲಂಬಿಸಿ ಜೀವಿಸುತ್ತಾರೆ. ಮಹಾರಾಷ್ಟ್ರದ ಉದಾಹರಣೆ ತೆಗೆದುಕೊಳ್ಳಿ, ಮಹಾರಾಷ್ಟ್ರದ ಪ್ರತಿಯೊಂದು ಹಳ್ಳಿಯಲ್ಲಿ ಮರಾಠರು ಅಧಿಕ ಸಂಖ್ಯೆಯಲ್ಲಿರುತ್ತಾರೆ. ಬ್ರಾಹ್ಮಣರು, ಗುಜಾರರು, ಕೋಳಿಗಳು, ಮತ್ತು ಹರಿಜನರು ಮರಾಠರಿಗೆ ಅಧೀನರಾಗಿದ್ದು, ಅವರೊಂದಿಗೆ ಸಹಕರಿಸುತ್ತಾರೆ. ಬ್ರಾಹ್ಮಣರು ಮತ್ತು ಬನಿಯಾರು ಯಾರ ಭೀತಿಯೂ ಇರದೆ ಜೀವಿಸುತ್ತಿದ್ದ ಕಾಲವೊಂದಿತ್ತು. ಆದರೆ ಕಾಲ ಬದಲಾಗಿರುತ್ತದೆ. ಗಾಂಧೀಜಿಯ ಹತ್ಯೆಯಾದ ಬಳಿಕ ಮರಾಠರು ಬ್ರಾಹ್ಮಣ ಮತ್ತು ಬನಿಯಾರನ್ನು ಚೆನ್ನಾಗಿ ಥಳಿಸಿದ ಪರಿಣಾಮವಾಗಿ, ಸುರಕ್ಷಿತ ಸ್ಥಳಗಳೆಂದು ಪಟ್ಟಣ ಸೇರಿದ್ದಾರೆ. ಬಡ ಹರಿಜನರು ಮತ್ತು ಕೋಳಿಗಳು ಮತ್ತು ಮಾಲಿಗಳು ಮಾತ್ರ ಬಹುಸಂಖ್ಯೆಯ ಮರಾಠರ ಪೀಡೆಯನ್ನು ಅನುಭವಿಸುತ್ತ ಅಲ್ಲೇ ಉಳಿದಿದ್ದಾರೆ. ಈ ಜಾತಿ ವ್ಯವಸ್ಥೆಯನ್ನು ಮರೆಯುವುದು ಅಪಾಯಕರ.
ಭಾಷಾವಾರು ಪ್ರಾಂತದಲ್ಲಿ ಅಲ್ಪಸಂಖ್ಯಾತರ ಸಮಾಜಗಳಿಗೆ ಯಾವ ಭವಿಷ್ಯ ಇರುತ್ತದೆ? (ವಿಧಾನ ಸಭೆ ಮತ್ತು ಲೋಕ ಸಭೆಗಳಿಗೆ) ಶಾಸಕಾಂಗಕ್ಕೆ ಚುನಾಯಿತರಾಗುವ ಸಾಧ್ಯತೆ ಇರುತ್ತದೆಯೆ? ರಾಜ್ಯ ಸರಕಾರದ ಸೇವೆಯಲ್ಲಿ ಸ್ಥಳ ದೊರಕಿಸಲು ಅವರಿಗೆ ಶಕ್ಯವಿರುತ್ತದೆಯೆ? ಅವರ ಆರ್ಥಿಕ ಸ್ಥಿತಿ ಸುಧಾರಿಸುವುದರ ಕಡೆಗೆ ಸರಕಾರದ ಗಮನ ಹರಿಯುವುದೆಂದು ನಿರೀಕ್ಷಿಸಬಹುದೆ? ಇಂಥ ಸ್ಥಿತಿಯಲ್ಲಿ, ಭಾಷಾವಾರು ಪ್ರಾಂತಗಳನ್ನು ನಿರ್ಮಿಸುವುದೆಂದರೆ ಬಹುಸಂಖ್ಯೆಯ ಸಮಾಜದವರ ಕೈಗೆ ಸ್ವರಾಜ್ಯವನ್ನು ಕೊಡುವುದೆಂದು ಅರ್ಥ. ಗಾಂಧೀಜಿ ಅವರು ದೊರಕಿಸಿದ ಸ್ವರಾಜ್ಯಕ್ಕೆ ಎಂಥ ದುರ್ದೆಶೆ? ಸಮಸ್ಯೆಯ ಈ ಮುಖ (ಪುಟ 154)
ಕಾಣಿಸದಿದ್ದವರಿಗೆ, ಭಾಷಾವಾರು ಪ್ರಾಂತದ ಬದಲು ಜಾಟ ಪ್ರಾಂತ, ರೆಡ್ಡಿ ಪ್ರಾಂತ, ಮರಾಠ ಪ್ರಾಂತ ಎಂದರೆ ಹೆಚ್ಚು ಅರ್ಥವಾಗುತ್ತದೆ.
ಗಮನಾರ್ಹ ಮೂರನೆಯ ಸಮಸ್ಯೆ ಎಂದರೆ-ಭಾಷಾವಾರು ಪ್ರಾಂತ ರಚಿಸುವುದೆಂದರೆ ಒಂದು ಭಾಷೆಯನ್ನು ಆಡುವ ಜನರನ್ನೆಲ್ಲ ಒಂದೇ ರಾಜ್ಯದಲ್ಲಿ ಸಂಘಟಿಸುವುದೆ ಆಗಿದೆ. ಮರಾಠರನ್ನೆಲ್ಲ ಒಂದೇ ಮಹಾರಾಷ್ಟ್ರದಲ್ಲಿ ಕೂಡಿಸಬೇಕೆ? ಆಂಧ್ರಪ್ರದೇಶವನ್ನೆಲ್ಲ ಒಂದೇ ಆಂಧ್ರ ರಾಜ್ಯದಲ್ಲಿ ಸೇರಿಸಬೇಕೆ? ಒಂದು ಭಾಷೆ ಆಡುವವರನ್ನು ಒಂದೆಡೆ ಸೇರಿಸುವ ಸಮಸ್ಯೆ ಹೊಸರಾಜ್ಯಗಳಿಗಷ್ಟೇ ಸಂಬಂಧಿಸಿದುದಲ್ಲ. ಈಗ ಅಸ್ತಿತ್ವದಲ್ಲಿರುವ ಭಾಷಾವಾರು ಪ್ರಾಂತಗಳಾದ ಉ. ಪ್ರದೇಶ, ಬಿಹಾರ ಮತ್ತು ಪ. ಬಂಗಾಲಗಳಿಗೂ ಸಂಬಂಧಿಸಿರುತ್ತದೆ. ಹಿಂದೀ ಮಾತನಾಡುವವರನ್ನೆಲ್ಲ ಉ. ಪ್ರದೇಶದಲ್ಲಿರುವಂತೆ ಒಂದೇ ಪ್ರಾಂತದಲ್ಲಿ ಏಕೆ ಸೇರಿಸಬೇಕು. ಮೌಲ್ಯ ಚಕ್ರಾಧಿಪತ್ಯದ ವಿಚ್ಛಿದ್ರತೆಯ ನಂತರ ಭರತಖಂಡದ ಪರಿಸ್ಥಿತಿ ಏನಾಯಿತೋ ಅದೇ ಪರಿಸ್ಥಿತಿ ಏಕತ್ರೀಕರಣದ ಫಲವಾಗಿ ಸಂಭವಿಸುವ ಪ್ರತ್ಯೇಕತಾ ಪ್ರಜ್ಞೆಯಿಂದ ಈ ರಾಷ್ಟ್ರಕ್ಕೊದಗುತ್ತದೆ. ವಿಧಿ ಈ ರಾಷ್ಟ್ರದ ಭವಿಷ್ಯವನ್ನು ಆ ಕಡೆಗೆ ನೂಕುತ್ತಿದೆಯೆ?
ಹಾಗೆಂದರೆ ಭಾಷಾವಾರು ಪ್ರಾಂತ ರಚನೆಗೆ ಸಮರ್ಥನೆ ಇಲ್ಲವೆಂದಲ್ಲ. ಭಾಷಾವಾರು ಪ್ರಾಂತದ ಹೆಸರಿನಲ್ಲಿ ಬಹುಸಂಖ್ಯಾತ ಜಾತಿಯವರಿಂದ ಅಧಿಕಾರದ ದುರುಪಯೋಗ ಆಗದಂತೆ ನಿರ್ಬಂಧ ಮತ್ತು ಸಮಯದಂಡಿಗಳು ಇರಬೇಕೆಂಬುದು ಇದರ ಅರ್ಥ.
- ಡಾ.ಬಿ.ಆರ್.ಅಂಬೇಡ್ಕರ್
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ – 1, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,2015, ಪುಟ ಸಂಖ್ಯೆ 150 – 155




