ಅಸ್ಪೃಶ್ಯರು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧರಾಗಬೇಕು
ಸುತ್ತಮುತ್ತಲಿನ ಸಹೋದರ ಸಹೋದರಿಯರನ್ನು ಮನಪರಿವರ್ತನೆ ಮಾಡುವುದು ಸವಾಲಾಗಿದೆ
ಕನ್ನಡ ಸಾಹಿತ್ಯ ಪರಿಷತ್ತು ಮೇಲ್ವರ್ಗದವರ ಕೈಯಲ್ಲಿದೆ
ದಲಿತ ಸಾಹಿತ್ಯ ಪರಿಷತ್ತು ಪರ್ಯಾಯವಾಗಿ ಬೆಳೆಯುವ ಶಕ್ತಿಯನ್ನು ಪಡೆದುಕೊಳ್ಳಬೇಕು
ರಾಜಕೀಯ ಶಕ್ತಿ ಬೆಳವಣಿಗೆಯಿಂದ ಸಾಧ್ಯ
ಚಾಮರಾಜನಗರ: ಬುದ್ಧನ ಬೆಳಕು ಇಂದು ಎಲ್ಲೆಡೆ ಪ್ರಸರಿಸುತ್ತಿದೆ. ಕೆಲವೇ ವರ್ಷಗಳಲ್ಲಿ ಅಸ್ಪೃಶ್ಯರು ಅರ್ಥ ಮಾಡಿಕೊಂಡು ಬೌದ್ಧರಾಗುತ್ತಾರೆ ಎಂಬ ಭರವಸೆ ಇದೆ ಎಂದು ಮಾಜಿ ಸಚಿವ ಬಿ ಸೋಮಶೇಖರ್ ಅಭಿಪ್ರಾಯಪಟ್ಟರು.
ನಗರದ ಸಾರನಾಥ ಬೌದ್ಧ ವಿಹಾರದಲ್ಲಿ ರಂಗವಾಹಿನಿ ಸಂಸ್ಥೆ ಹಾಗೂ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಡಾ. ಬಿ.ಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ನೆನಪಿನಾರ್ಥ ಹಾಗೂ ದಲಿತ ಸಾಹಿತ್ಯ ಪರಿಷತ್ತಿನ 30ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಬುದ್ಧ ಕವಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಶೋಕ ಚಕ್ರವರ್ತಿ ಆಡಳಿತದ ಚುಕ್ಕಾಣಿ ಹಿಡಿದಿದ್ದರಿಂದ ಬೌದ್ಧ ಧರ್ಮ ವಿಶ್ವವ್ಯಾಪಿ ಪ್ರಸರಿಸಲು ಸಾಧ್ಯವಾಯಿತು ಎಂದರು.
ಅಸ್ಪೃಶ್ಯರು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧರಾಗಬೇಕು. ತಮ್ಮ ಸುತ್ತಮುತ್ತಲಿನ ಸಹೋದರ ಸಹೋದರಿಯರನ್ನು ಮನಪರಿವರ್ತನೆ ಮಾಡುವುದು ಸವಾಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೇಲ್ವರ್ಗದವರ ಕೈಯಲ್ಲಿದೆ. ದಲಿತ ಸಾಹಿತ್ಯ ಪರಿಷತ್ತು ಪರ್ಯಾಯವಾಗಿ ಬೆಳೆಯುವ ಶಕ್ತಿಯನ್ನು ಪಡೆದುಕೊಳ್ಳಬೇಕು. ರಾಜಕೀಯ ಶಕ್ತಿ ಬೆಳವಣಿಗೆಯಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹಾಗೂ ಸಾಹಿತಿ ಮಂಜು ಕೋಡಿಉಗನೆ ಬುದ್ಧ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ದಮ್ಮ ದೀಕ್ಷಾ ನೆನಪಿನಲ್ಲಿ ನಡೆಯುತ್ತಿರುವುದು ಇದೇ ಪ್ರಥಮ ಕವಿಗೋಷ್ಠಿಯಾಗಿದೆ. ಕನ್ನಡ ಸಾಹಿತ್ಯದಲ್ಲಿ ಬೌದ್ಧಧರ್ಮದ ಹಿನ್ನೆಲೆಯಲ್ಲಿ ಕಾವ್ಯ ರಚನೆ ಮಾಡಿರುವುದು ತೀರ ವಿರಳವಾಗಿದೆ. ಅಂಬೇಡ್ಕರ್ ಅವರು ಬರೆದ ಬುದ್ಧ ಮತ್ತು ಆತನ ಧರ್ಮ ಕೃತಿಯು ನಿಜಕ್ಕೂ ಕಾವ್ಯವೇ ಆಗಿದೆ. ಪ್ರಸ್ತುತ ಜಗತ್ತಿಗೆ ಬೌದ್ಧ ಸಾಹಿತ್ಯ ಪ್ರಯೋಜನಕಾರಿಯಾಗಿದೆ. ತಲ್ಲಣಗೊಳ್ಳುತ್ತಿರುವ ಭಾರತಕ್ಕೆ ಬೌದ್ಧ ಧರ್ಮ ಚಿಕಿತ್ಸಕವಾಗಿ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಎ.ಎಂ ಶಿವಸ್ವಾಮಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಮೊದಲು ಬೌದ್ಧ ಯುಗ ಇತ್ತು ಎಂದು ಹಲವು ವಿದ್ವಾಂಸರು ಗುರುತಿಸಿದ್ದಾರೆ. ಬೌದ್ಧ ಚಿಂತನೆಗಳು ಕನ್ನಡ ಸಂವೇದನೆಯನ್ನು ಸೆಳೆದಿದೆ. ಅದನ್ನು ಕವಿಗಳು ಸ್ವೀಕರಿಸಿದ್ದಾರೆ. ಬೌದ್ಧ ಸಾಹಿತ್ಯ ಕನ್ನಡ ಸಾಹಿತ್ಯದೊಳಗೆ ಬೆರೆತಿದೆ. ಯಾರ ಒತ್ತಡ ಪ್ರಭಾವವು ಇಲ್ಲದೆ ಬೌದ್ಧ ಸಾಹಿತ್ಯ ಕುರಿತು ಹಲವರು ಕೆಲಸ ಮಾಡಿದ್ದಾರೆ. ಕವಿಗೋಷ್ಠಿಯಲ್ಲಿನ ಕವನಗಳು ಬುದ್ಧನ ಚಿಂತನೆ ಆಶಯ ಕುರಿತು ಇವೆ. ಅಂತರಂಗದ ಮಾನವೀಯ ಸಂಸ್ಕಾರದ ಬೋಧಿಸತ್ವದ ಅರಿವು ಪಡೆದುಕೊಳ್ಳಲು ಇಂತಹ ಗೋಷ್ಠಿ ಮಹತ್ವದ್ದು ಆಗಿದೆ ಎಂದರು.
ಕವಿಗೋಷ್ಠಿಯಲ್ಲಿ ಕವಿ ಆಸಿಮ “ಏಕೋ ಬುದ್ಧ ಕೋಪಗೊಂಡಿದ್ದಾನೆ”, ಮಂಜುನಾಥ ಕೆಸ್ತೂರು ಅವರು “ಬುದ್ಧನಂದು ಹೇಳಿದ ಮಾತು”, ಕಮರವಾಡಿ ಮಹಾದೇವಸ್ವಾಮಿಯವರು “ಘನ ಶರಣ ಗೌತಮ”, ಬೆಂಡರವಾಡಿ ಪುಷ್ಪ ಅವರು “ಬುದ್ಧ ತೋರಿದ ಅರಿವಿನ ಮಾರ್ಗ” ಕೆಂಪನಪುರ ಶಿವಕುಮಾರ ಅವರು “ಜಾತ್ಯಾತೀತತೆ ಜಾರಿ ಹೋಗುತ್ತಿದೆ”, ಎಸ್.ಎಂ. ರವೀಂದ್ರ ಅವರು “ಬುದ್ಧನ ಶಾಂತಿ”, ಕಾಳಿಂಗಸ್ವಾಮಿ ಸಿದ್ದಾರ್ಥ್ ಅವರು “ಬುದ್ಧನಿದ್ದಾನೆ ನಮ್ಮೊಳಗೆ”, ಅಂಬಳೆ ಶ್ರೀನಿವಾಸ್ ಅವರು “ಮರೆತಿರೋ ನನ್ನನ್ನ”, ಕಿರಣ್ ರಾಜ್ ಎಂ ಅವರು “ಪರಿವರ್ತನೆ ಗಾಳಿ ಬೀಸುತ್ತಿದೆ” ಯೋಗೇಶ್ ಕೆ ಚಿಕ್ಕತುಪ್ಪೂರು ಅವರು “ದಿವ್ಯಜ್ಞಾನಿ” ಎಂಬ ಕವಿತೆಗಳನ್ನು ವಾಚನ ಮಾಡಿದರು. ಕವಿಗೋಷ್ಠಿಯಲ್ಲಿ15ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಯರಗನಹಳ್ಳಿ ಬಿ ಗುರುರಾಜು, ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ, ಕರ್ನಾಟಕ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ಸಿ ಕೆ ರಾಮಸ್ವಾಮಿ ಮೊದಲಾದವರು ಹಾಜರಿದ್ದರು.




