ಪ್ರಕೃತಿ ಕಾರ್ಯವನ್ನು ನಮ್ಮ ಕಾರ್ಯವೆಂದು ಭಾವಿಸಿ ಮಾತೆಯ ಕೃಪೆಗೆ ಪಾತ್ರರಾಗೋಣ

2 years ago

ಇತ್ತೀಚೆಗೆ ನಾನು ಶಿವಮೊಗ್ಗಕ್ಕೆ ಹೋಗಿ ಬಂದೆ. ಆ ನಗರದ ಮಾಧ್ಯಮಮಿತ್ರರಲ್ಲೊಬ್ಬರಾದ ಪುನೀತ್ ನನ್ನ ‘ಸ್ವಚ್ಛತೆಗಾಗಿ ನಾನೂ ಸಹ ಭಾಗಿ’ ಅಭಿಯಾನದ ಕುರಿತು ವಿಚಾರಿಸಿದರು. ಈ ಅಭಿಯಾನವು ನಮ್ಮ ರಾಜ್ಯದ ವಿವಿಧ ಭಾಗಗಳ ರಸ್ತೆಗಳ ಮೇಲೆ ಚೆಲ್ಲಾಡಿರುವ ಕಸದ ರಾಶಿಗಳ ಕುರಿತು ನಗರವಾಸಿಗಳು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜಕೀಯ ಪ್ರತಿನಿಧಿಗಳು ಗಮನ ಹರಿಸುವ ಸಲುವಾಗಿ ೨೦೨೦ರಲ್ಲಿ ನಾನು ಪ್ರಾರಂಭಿಸಿದ್ದು.

ಇಷ್ಟೇ ಅಲ್ಲದೆ, ಇವರೆಲ್ಲರೂ ಕಸವನ್ನು ಸಾಧ್ಯವಾದಷ್ಟು ಬೇಗ ತೆರವುಗೊಳಿಸುವುದಲ್ಲದೆ ಈ ಕೆಲಸದ ನಿರ್ವಹಣೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಹೊರುವಂತೆ ಮಾಡುವ ಗುರಿ ಹೊಂದಿದೆ. ಈ ಅಭಿಯಾನದ ಕುರಿತು ಚರ್ಚೆ ಮಾಡುತ್ತಿರುವಾಗ ಪತ್ರಿಕಾ ಛಾಯಾಗ್ರಾಹಕರು ಮತ್ತು ಪರಿಸರವಾದಿಗಳಾದ ನಂದನ್, ಪವಿತ್ರ ನದಿ ತುಂಗೆಯ ಅವಸ್ಥೆ ನೋಡಲು ಬಯಸುವಿರಾ ಎಂದು ಕೇಳಿದರು. ನಾನು ಕೂಡಲೇ ತಲೆಯಾಡಿಸಿ ಪುನೀತ್, ನಂದನ್ ಹಾಗೂ ಇತರ ಮಾಧ್ಯಮದವರೊಡನೆ ತುಂಗಾ ನದಿಯ ಬಳಿಗೆ ಹೋದೆ. ಅವರೆಲ್ಲರಿಗೂ ಕಾಲಾಂತರದಿಂದ ದಿನವೂ ಕುಡಿಯಲು ಹಾಗೂ ಇನ್ನಿತರ ಉಪಯೋಗಗಳಿಗಾಗಿ ತುಂಗಾ ನದಿ ನೀರನ್ನು ಬಳಸುತ್ತಿರುವ ಲಕ್ಷಾಂತರ ಜನರ ಆರೋಗ್ಯದ ಬಗ್ಗೆ ಕಳವಳವಾಗಿರುವುದು ನಿಚ್ಚಳವಾಗಿತ್ತು.

‘ಭೀಮನ ಮಡು’ ಎಂದು ಕರೆಯಲ್ಪಡುವ ಆ ಸ್ಥಳಕ್ಕೆ ಹೋದಾಗ, ಅಲ್ಲಿನ ಭಯಾನಕ ಪರಿಸ್ಥಿತಿಯನ್ನು ಕಂಡು ನನಗೆ ಗಾಬರಿಯಾಯಿತು. ನಂದನ್ ಸಂದರ್ಭವನ್ನು ವಿವರವಾಗಿ ತಿಳಿಸಿದರು. ಆದರೆ ನಿಜಕ್ಕೂ ಅದರ ಅಗತ್ಯವಿರಲಿಲ್ಲ, ಎದುರಿಗೆ ಕಾಣುತ್ತಿದ್ದ ದೃಶ್ಯವೇ ಎಲ್ಲವನ್ನು ಸ್ಪಷ್ಟಪಡಿಸಿತ್ತು. ಕೊಳಚೆ ನೀರು ನೇರವಾಗಿ ನದಿಯನ್ನು ಹೊಕ್ಕು ನೀರನ್ನು ಕಲುಷಿತಗೊಳಿಸುತ್ತಿದ್ದುದಷ್ಟೇ ಅಲ್ಲದೆ ನೂರಾರು ಜೊಂಡು, ಕಳೆಗಿಡಗಳು ಬೆಳೆದು ಮೀನುಗಳಿಗೆ ಸರಾಗವಾಗಿ ಉಸಿರಾಡದಂತೆ ಮಾಡಿ ಸಾಯಿಸಿ,ಹರಿಯುವ ನೀರಿನಲ್ಲಿ ಮತ್ತಷ್ಟು ಕಲ್ಮಶಗಳನ್ನು ಉತ್ಪತ್ತಿ ಮಾಡುತ್ತಿತ್ತು. ಇದನ್ನೆಲ್ಲ ನೋಡುತ್ತಿರುವಂತೆಯೇ ನನಗೆ ‘ಗಂಗಾ ಸ್ನಾನ ತುಂಗಾ ಪಾನ’ ಎಂಬ ಮಾತು ನೆನಪಾಯಿತು. ತುಂಗೆಯ ನೀರು ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ ಹಾಗೂ ಅದನ್ನು ‘ತೀರ್ಥ’ರೂಪದಲ್ಲಿ ಸೇವಿಸಬೇಕು. ಆದರೆ ಕುಡಿಯುವುದಿರಲಿ, ಆ ನೀರನ್ನು ಮುಟ್ಟುವುದನ್ನು ಸಹ ನನಗೆ ಕಲ್ಪಿಸಿಕೊಳ್ಳಲು ಆಗಲಿಲ್ಲ.

ಇತ್ತೀಚೆಗೆ ಕಾಂಕ್ರೀಟ್ ಹಾಕಿ ಬಲಪಡಿಸಿದ ನದಿ ದಂಡೆ ಸಂಪೂರ್ಣವಾಗಿ ನಿರ್ಜನವಾಗಿತ್ತು ಮತ್ತು ಅದರ ಸುತ್ತಲಿನ ಪರಿಸರವನ್ನು ಯಾರೂ ಸ್ವಚ್ಛಗೊಳಿಸಿರಲೇ ಇಲ್ಲ. ಆ ಜಾಗದ ವಿಡಿಯೋ ಮಾಡಿ ಈ ವಿಷಯದ ಕುರಿತು ಗಮನ ಹರಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡೆ. ಸಾಮಾನ್ಯವಾಗಿ ಕಸ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ನಾನು ವಿಡಿಯೋ ಮಾಡಿದಾಗ, ಆ ವಿಡಿಯೋಗಳನ್ನು ನನ್ನ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್ ಗಳನ್ನು ಬಳಸಿ ಹಾಕಿಕೊಳ್ಳುವುದಲ್ಲದೆ, ಸಂಬಂಧಪಟ್ಟ ಅಧಿಕಾರಿಗಳೊಡನೆಯೂ ಹಂಚಿಕೊಳ್ಳುತ್ತೇನೆ. ಅಷ್ಟೇ ಅಲ್ಲದೆ, ಅವರಿಗೆ ಕರೆ ಮಾಡಿ ಆ ಸಮಸ್ಯೆಯನ್ನು ಆದಷ್ಟು ಬೇಗನೆ ಇತ್ಯರ್ಥ ಮಾಡುವಂತೆ ಮಾಡುತ್ತೇನೆ. ಆದರೆ ಇಲ್ಲಿ ಸಮಸ್ಯೆಯು ಸಾಕಷ್ಟು ದೊಡ್ಡದಿದ್ದು ಬಹಳ ತೀವ್ರವಾಗಿದೆ. ಹಾಗಾಗಿ ಮಾನ್ಯ ಮುಖ್ಯಮಂತ್ರಿ  ಸಿದ್ದರಾಮಯ್ಯನವರನ್ನು ನೇರವಾಗಿ ಭೇಟಿ ಮಾಡಲು ನಿರ್ಧರಿಸಿದೆ.

ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದಾಗ, ನಾನು ಮಾಡಿದ ವಿಡಿಯೋವನ್ನು ಅವರೊಂದಿಗೆ ಹಂಚಿಕೊಂಡೆ. ನೋಡುನೋಡುತ್ತಿರುವಂತೆಯೇ ತಮ್ಮ ಸಿಬ್ಬಂದಿಗೆ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ  ರಾಜೇಶ್ ಅಮ್ಮಿನಭಾವಿಯವರನ್ನು ಸಂಪರ್ಕಕ್ಕೆ ತರಲು ಹೇಳಿದರು. ಸಂಪರ್ಕಕ್ಕೆ ಬಂದ ಕೂಡಲೇ ಮುಖ್ಯಮಂತ್ರಿಯವರು ಸಮಸ್ಯೆಗಳನ್ನು ಆದಷ್ಟು ಬೇಗನೆ ಇತ್ಯರ್ಥಪಡಿಸುವಂತೆ ಸೂಚಿಸಿದರು. ಮುಖ್ಯಮಂತ್ರಿಗಳ ಈ ಕ್ಷಿಪ್ರ ಪ್ರತಿಕ್ರಿಯೆ ನೋಡಿ ನಾನು ಆಶ್ಚರ್ಯಚಕಿತನಾದೆ. ಆದರೆ ಅಷ್ಟಕ್ಕೇ ಬಿಡದೆ, ರಾಜೇಶ್ ಅವರಿಗೆ ಕರೆ ಮಾಡಿದೆ. ಅವರ ದನಿಯಲ್ಲೂ ನನ್ನಷ್ಟೇ ಕಳವಳವಿತ್ತು. ಅವರ ಸಲಹೆಯಂತೆ ಅವರ ಸಿಬ್ಬಂದಿಯನ್ನು ಕಚೇರಿಯಲ್ಲಿ ಭೇಟಿ ಮಾಡಿದೆ. ಸಿಬ್ಬಂದಿಯವರು ಅಲ್ಲಿನ ಸಂದರ್ಭ ಹಾಗೂ ಸಮಸ್ಯೆಗಳನ್ನು ವಿವರವಾಗಿ ಬಿಡಿಸಿಟ್ಟರು. ಅಲ್ಲದೆ, ನೀರಾವರಿ ನಿಗಮವು ತುಂಗಾ ನದಿಯುದ್ದಕ್ಕೂ ಅತಿಹೆಚ್ಚು ಮಲಿನಗೊಂಡ ಜಾಗಗಳನ್ನು ಗುರುತಿಸಿ ಇಟ್ಟುಕೊಂಡ ಭೂಪಟವನ್ನು ನನ್ನೊಂದಿಗೆ ಹಂಚಿಕೊಂಡು ಆ ಜಾಗಗಳನ್ನು ತೋರಿಸಿದರು. ಹಾಗೆ ಪ್ರಮುಖವಾಗಿ ಬಾಧೆಗೊಳಗಾಗಿರುವ ಸ್ಥಳಗಳು ಶಿವಮೊಗ್ಗ, ಭದ್ರಾವತಿ, ಹರಿಹರ ಮತ್ತು ಹೊನ್ನಾಳಿ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರನ್ನು ಭೇಟಿಯಾಗುವಂತೆ ಅಮ್ಮಿನಭಾವಿ ಸಲಹೆ ಕೊಟ್ಟರು. ನಾವು ಜನಸಾಮಾನ್ಯರು ಆಡಳಿತ ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ಸಾಮಾನ್ಯವಾಗಿ ತಪ್ಪು ಕಲ್ಪನೆ ಹೊಂದಿರುತ್ತೇವೆ. ಆದರೆ ಜಿಲ್ಲಾಧಿಕಾರಿಗಳು ನನ್ನೊಂದಿಗೆ ಮಾತನಾಡಿದ ರೀತಿ ಕಂಡು ಆಶ್ಚರ್ಯವೂ, ಸಂತಸವೂ ಆಯಿತು. ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಮತ್ತು ಏಜೆನ್ಸಿಗಳೊಡನೆ ನನ್ನ ಜೊತೆ ಸಭೆ ನಡೆಸುವುದಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿದರು.

ಈ ಮಧ್ಯೆ, ಶಿವಮೊಗ್ಗದಿಂದ ಕರೆ ಮಾಡಿದ ಭರತ್ ಹೆಗ್ಗಡೆಯವರು ಶಿವಮೊಗ್ಗ ಗ್ರಾಮಾಂತರದ ಜೆಡಿಎಸ್ಕಾರ್ಯಾಧ್ಯಕ್ಷರಾದ ಕಾಂತರಾಜ್ ರವರು ಈ ಉದಾತ್ತ ಕೆಲಸದಲ್ಲಿ ಕೈ ಜೋಡಿಸಲು ಆಸಕ್ತಿ ಹೊಂದಿದ್ದಾರೆಂದು ತಿಳಿಸಿದರು. ಆ ಕೂಡಲೇ ನಾನವರಿಗೆ ಕರೆ ಮಾಡಲು, ಮುಂದಿನ ಸಲ ನಾನು ಶಿವಮೊಗ್ಗಕ್ಕೆ ಹೋದಾಗ ಸಂಸದರು, ಎಮ್ಮೆಲ್ಲೆ ಹಾಗೂ ಎಮ್ಮೆಲ್ಸಿಗಳನ್ನು ಭೇಟಿಯಾಗಿ, ಸಮಸ್ಯೆಯನ್ನು ಅವರೊಂದಿಗೆ ಚರ್ಚಿಸಿ, ಅವರ ಬೆಂಬಲ ಕೋರಲು ನನ್ನನ್ನು ಕರೆದುಕೊಂಡು ಹೋಗುವುದಾಗಿ ಹೇಳಿದರು.

ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಿಗದಿಯಾದಾಗ, ಅವರ ಅನುಮತಿ ಪಡೆದು ಪುನೀತ್ರವರು, ಭರತ್ರವರುನಂದನ್ರವರು, ಹಾಗೂ ಈ ದೀರ್ಘಕಾಲದ ಸಮಸ್ಯೆಯನ್ನು ಅಭ್ಯಸಿಸಿರುವ ಪರಿಸರವಾದಿ ಶ್ರವಣ್ ಅವರನ್ನು ಈ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದೆ.

ನಿಗದಿಯಾದ ಸಭೆಗೆ ಅಮ್ಮಿನಭಾವಿ, ಅವರ ಸಿಬ್ಬಂದಿ ಮತ್ತು ನಾನು ಶಿವಮೊಗ್ಗಕ್ಕೆ ಹೋದೆವು. ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ. ಆರ್. ಸುಜಾತ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಪಿ. ವಿಶ್ವನಾಥ್ ಮುದ್ದಜ್ಜಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಎಲ್ಲರೂ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಿದರು. ನಾನು ಸಮಸ್ಯೆ ಅಧ್ಯಯನ ಮಾಡಿ ಹಾಗೂ ತಜ್ಞರ ಸಲಹೆಗಳನ್ನು ಒಳಗೊಂಡ ಪಟ್ಟಿಯನ್ನು ತಯಾರಿಸಿಅವರೊಂದಿಗೆ ಹಂಚಿಕೊಂಡೆ. ಈ ಪಟ್ಟಿಯಲ್ಲಿ ಜನತೆಯನ್ನು ತೊಡಗಿಸಿಕೊಳ್ಳಲು ಹಾಗೂ ಪ್ರವಾಸಿಗರನ್ನು ಸೆಳೆಯಲು ನನ್ನದೇ ಕೆಲವು ಉಪಾಯಗಳನ್ನು ಸೂಚಿಸಿದೆ. ಈ ಯೋಜನೆಗೆ ‘ಪವಿತ್ರ ತುಂಗಾ ನದಿಯ ಜೀರ್ಣೋದ್ಧಾರ ಮತ್ತು ಅದರಲ್ಲಿ ಮರುಜೀವ ಬರುವಂತೆ ಮಾಡುವುದು’ಎಂದು ಹೆಸರಿಟ್ಟೆ. ಆ ಪಟ್ಟಿ:
ತೆಗೆದುಕೊಳ್ಳಬೇಕಾದ ಕ್ರಮಗಳು
೧. ಫ್ಯಾಕ್ಟರಿಗಳ ತ್ಯಾಜ್ಯ ನಗರಗಳ ಕೊಳಚೆ ನೀರಿನ ಜೊತೆಗೆ ನೇರವಾಗಿ ನದಿಗೆ ಹರಿಯುವುದನ್ನು ತಡೆಯುವುದು.
೨. ಎಲ್ಲಾ ಕಾರ್ಖಾನೆಗಳ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ನಿರ್ಮಾಣ/ಪುನಶ್ಚೇತನ/ರಿಪೇರಿ, ನಿರ್ವಹಣೆ
ಮತ್ತು ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸುವುದು. ಹಾಗೂ ಇವುಗಳನ್ನು ಜಾರಿಗೆ ತರುವುದರಲ್ಲಿ ಯಾವುದೇ ಉಲ್ಲಂಘನೆ/ವೈಫಲ್ಯ ಕಂಡು ಬಂದಲ್ಲಿ ಭಾರೀ ಪ್ರಮಾಣದ ದಂಡ ವಿಧಿಸಲು ಸಾಧ್ಯವಾಗುವಂತೆ ನಿಬಂಧನೆಗಳನ್ನು ರಚಿಸುವುದು.
೩. ಹೊಲಗದ್ದೆಗಳಲ್ಲಿ, ಅದರಲ್ಲೂ ತುಂಗಾ ನದಿ ದಂಡೆಯ ಸಮೀಪದಲ್ಲಿರುವ ಜಾಗೆಗಳಲ್ಲಿ ಅಧಿಕ ಪ್ರಮಾಣದಲ್ಲಿ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ತಪ್ಪಿಸುವುದು.
೪. ಅಂತೆಯೇ, ನದಿ ನೀರಿನಲ್ಲಿ ಕೃತಕ ಅಥವಾ ಜೈವಿಕ ರೀತಿಯಲ್ಲಿ ವಿಘಟನೆಗೊಳ್ಳದ ಮಾರ್ಜಕಗಳನ್ನು (ಡಿಟರ್ಜೆಂಟ್ಸ್) ಬಟ್ಟೆ/ವಾಹನ/ಜಾನುವಾರುಗಳನ್ನು ತೊಳೆಯುವುದಕ್ಕಾಗಿ ಬಳಸುವುದನ್ನು ತಡೆಯುವುದು.
೫. ಹೂವು ಮತ್ತಿತರೆ ವಸ್ತುಗಳನ್ನು ನದಿಗೆ ಎಸೆಯುವುದನ್ನು ತಡೆಯುವುದು.
೬. ತುಂಗಾ ನದಿಯ ತಟದಲ್ಲಿರುವ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ನಾಗರಿಕ ಸಮಿತಿಗಳನ್ನು ರಚಿಸುವುದರ ಮೂಲಕ ಒಡೆತನ ನೀಡಿ, ಅವುಗಳ ಮುಖಾಂತರ ಯೋಜನೆಯ ಪ್ರಗತಿಯ ಮೇಲ್ವಿಚಾರಣೆ ಮಾಡುವುದು.
೭. ಹರಿದ್ವಾರ ಮತ್ತು ವಾರಾಣಸಿಗಳಲ್ಲಿ ನಡೆಯುವ ಗಂಗಾ ಆರತಿಯಂತೆ ತುಂಗಾ ಆರತಿ, ಬೋಟಿಂಗ್, ರಾಫ್ಟಿಂಗ್ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಿ, ಈ ಮೂಲಕ ಪ್ರವಾಸಿಗರನ್ನು ಸೆಳೆಯುವುದು.
೮. ಅಗತ್ಯ ಬಿದ್ದಲ್ಲಿ ಜನರನ್ನು ಕರ್ನಾಟಕ ಸರ್ಕಾರ ನಡೆಸುವ ಕಾರ್ಯಕ್ರಮದಲ್ಲಿ ಸೇರಿಸಿಕೊಂಡು, ಕ್ರೌಡ್ ಫಂಡಿಂಗ್ ಅಥವಾ ವಿದೇಶಿ ನೆರವನ್ನು ಸಂಪಾದಿಸುವುದು. ಈ ಸಂಬಂಧ ಕೇಂದ್ರ ಸರ್ಕಾರ/ಏಜೆನ್ಸಿಗಳನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ತೊಡಗಿಸಿಕೊಳ್ಳುವುದು. 
೯. ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಮತ್ತು ನೀರಾವರಿ ನಿಗಮ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪಂಚಾಯಿತಿಗಳು ಮತ್ತು ಮುನಿಸಿಪಲ್ ಕಾರ್ಪರೇಷನ್ಗಳೇ ಮುಂತಾದ ಏಜೆನ್ಸಿಗಳನ್ನು ಈ ಯೋಜನೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದು.

ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳು
೧. ಕೊಳಚೆ ನೀರು ನದಿ ಸೇರುವುದನ್ನು ತಡೆಯುವುದು
೨. ಕಾರ್ಖಾನೆಗಳಲ್ಲಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಸ್ಥಾಪನೆ
೩. ನದಿ ಪಾತ್ರದಲ್ಲಿ ತುಂಬಿರುವ ಕಳೆ ಕಿತ್ತು ನೀರನ್ನು ಸ್ವಚ್ಛಗೊಳಿಸುವುದು
೪. ಕರ್ನಾಟಕದ ಮುಖ್ಯಮಂತ್ರಿಯವರು ಕೈಗೊಳ್ಳುವ ತುಂಗಾ ಆರತಿಯ ದಿನಾಂಕ ನಿಗದಿಪಡಿಸುವುದು.

ಸಭೆ ಮುಗಿದ ನಂತರ ಕಾಂತರಾಜ್ ರವರೊಂದಿಗೆ ಶಿವಮೊಗ್ಗ ಸಂಸದ (ಬಿಜೆಪಿ) ರಾಘವೇಂದ್ರ ಯಡಿಯೂರಪ್ಪ, ಶಿವಮೊಗ್ಗ ಟೌನ್ ಶಾಸಕ ಚನ್ನಬಸಪ್ಪ ಹಾಗೂ ಜೆಡಿಎಸ್ ನ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪುರ್ಯ ನಾಯಕ್ ರವರನ್ನು ಭೇಟಿ ಮಾಡಿದೆ.

ಶಿವಮೊಗ್ಗ ಎಮ್ಮೆಲ್ಸಿ ಧನಂಜಯ ಸರ್ಜಿಯವರನ್ನು ಭೇಟಿ ಮಾಡಿದಾಗ ಅವರು ಹೇಳಿದರು, “ಒಂದು ಕಾಲದಲ್ಲಿ ತುಂಗಾ ನೀರನ್ನು ಸೇವಿಸಿದರೆ ಕಾಯಿಲೆಗಳು ವಾಸಿಯಾಗುತ್ತಿದ್ದವು ಎಂದು ನಂಬಲಾಗಿತ್ತು. ಆದರಿಂದು ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿದೆ.” ಸರ್ಜಿಯವರ ಸಲಹೆ ಮೇರೆಗೆ ತುಂಗಾ ನದಿಯ ಮಾಲಿನ್ಯದ ಕುರಿತು ಆಳವಾದ ಜ್ಞಾನ ಹೊಂದಿರುವ ಮತ್ತೊಬ್ಬ ಪರಿಸರವಾದಿ ಶ್ರೀಪತಿಯವರೊಂದಿಗೆ ಮಾತನಾಡಿದೆ. ಅವರು ಹೇಳಿದರು, “ಇತ್ತೀಚಿನ ತುಂಗಾ ನದಿ ನೀರಿನ ಪರೀಕ್ಷೆಗಳು ನದಿ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹಲವಾರು ಪಟ್ಟು ಹೆಚ್ಚು ಪ್ರಮಾಣದಲ್ಲಿ ಅಲ್ಯೂಮಿನಿಯಂ ಇರುವುದನ್ನು ಖಚಿತಪಡಿಸಿವೆ. ಕೃಷಿಗೆ ಬಳಸುವ ಕ್ರಿಮಿ ನಾಶಕಗಳು, ಕಳೆ ನಾಶಕಗಳು, ರಾಸಾಯನಿಕ ಗೊಬ್ಬರಗಳು ಮಣ್ಣಿನಲ್ಲಿರುವ ಅಲ್ಯೂಮಿನಿಯಂ ಕರಗಿಸಿ ನದಿಗೆ ಸೇರಿಸುವುದೇ ಇದಕ್ಕೆ ಕಾರಣವೆಂದು ಊಹಿಸಲಾಗಿದೆ.ಹೆಚ್ಚು ಪ್ರಮಾಣದ ಅಲ್ಯೂಮಿನಿಯಂ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಅಧ್ಯಯನದ ಅಂಕಿ ಅಂಶಗಳ ಅವಶ್ಯಕತೆ ಇದೆ ಮತ್ತು ಜನರಲ್ಲಿ ತಿಳುವಳಿಕೆ ಮೂಡಿಸುವ ಅವಶ್ಯಕತೆ ಇದೆ.ಆದ್ದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಾಥಮಿಕ ಮಣ್ಣು, ನೀರು ಪರೀಕ್ಷಾ ಕೇಂದ್ರಗಳ ಸ್ಥಾಪನೆ ಮತ್ತು ತಾಲ್ಲೂಕು ಮಟ್ಟದ ಉನ್ನತ ದರ್ಜೆಯ ಮಣ್ಣು, ನೀರು ಪರೀಕ್ಷಾ ಕೇಂದ್ರಗಳ ಸ್ಥಾಪನೆ ಅಗತ್ಯವಾಗಿದೆ.”

“ತುಂಗಾ ನಾಲೆಯೊಂದು ಶಿವಮೊಗ್ಗ ನಗರದ ಮಧ್ಯಭಾಗದಲ್ಲಿ ಹರಿಯುತ್ತಿದೆ ನಾಲೆಯ ಅಕ್ಕಪಕ್ಕದಲ್ಲಿ ಬಫರ್ ಜೋನ್ ಅಂದರೆ ನೀರಾವರಿ ಇಲಾಖೆಯ ಜಾಗದಲ್ಲಿ ಅನಧಿಕೃತ ಷೆಡ್ ಮನೆಗಳನ್ನು ನಿರ್ಮಾಣ ಮಾಡಿ ಈಗ ಅವುಗಳಲ್ಲಿ ಶಾಶ್ವತ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ನಾಲೆ ಹರಿಯುವ ನ್ಯೂ ಮಂಡ್ಲಿ ಅಣ್ಣಾ ನಗರ ಟಿಪ್ಪು ನಗರ ಹೊಸಮನೆ ವೆಂಕಟೇಶ್ ನಗರ ನವುಲೆ ರಾಗಿಗುಡ್ಡ ಮತ್ತು ಚಟ್ನಳ್ಳಿ ಮುಖಾಂತರ ಹೊನ್ನಾಳಿಯಲ್ಲಿ ತುಂಗಭದ್ರಾ ನದಿಗೆ ಸೇರುತ್ತದೆ. ಈ ಮಾರ್ಗದಲ್ಲಿ ಕಳೆದ 20 ವರ್ಷಗಳ ಹಿಂದೆ ಸ್ವಚ್ಛವಾಗಿ ಹರಿಯುತ್ತಿದ್ದ ತುಂಗಾ ನಾಲೆ ನೀರು ಮನೆ ಬಳಕೆಗೆ ಕುಡಿಯಲು ಮತ್ತು ಕೃಷಿ ಬಳಕೆಗೆ ಯೋಗ್ಯವಾದ ನೀರಾಗಿತ್ತು. ಆದರೆ ಈ ಭಾಗದ ಇಕ್ಕೆಲಗಳಲ್ಲಿ ಬಂದು ಅನಧಿಕೃತ ಶೆಡ್ ಮನೆ ನಿರ್ಮಾಣ ಮಾಡಿದಂತವರಿಗೆ ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳಾದ ಚರಂಡಿ ಯುಜಿಡಿ ಸಂಪರ್ಕಗಳಿಲ್ಲ. ಈ ಮನೆಗಳಲ್ಲಿ ವಾಸಿಸುತ್ತಿರುವವರು ಚರಂಡಿ ಮತ್ತು ಟಾಯ್ಲೆಟ್ ನೀರನ್ನು ನೇರವಾಗಿ ಚಾನೆಲ್ ಗೆ ಬಿಡುತ್ತಿದ್ದಾರೆ ಕಲುಷಿತಗೊಂಡ ಈ ನಾಲೆಯ ನೀರಿನಿಂದ ನವುಲೇ ಮತ್ತು ಭೂಮ್ಮನಕಟ್ಟೆ ಮುಂದಿನ ಗ್ರಾಮದ ಜನರು ಸೊಪ್ಪು ತರಕಾರಿ ಬೆಳೆಯುತ್ತಿದ್ದಾರೆ ಹಾಗೆಯೇ ಹೊನ್ನಾಳಿಯವರೆಗೂ ಹರಿದು ಹೋಗುವ ಇದೇ ನೀರನ್ನು ಕೃಷಿ ಬಳಕೆ ಮಾಡುತ್ತಿದ್ದಾರೆ ಇಲ್ಲಿ ಕೃಷಿ ಮಾಡುವ ರೈತರಿಗೆ ಆರೋಗ್ಯ ಹದಗಟ್ಟಿದೆ ಮತ್ತು ಚರ್ಮದ ಕಾಯಿಲೆಗಳು ಅಂಟಿದೆ. 

ಈ ಭಾಗದಲ್ಲಿ ಅನಧಿಕೃತ ಮನೆ ಶೆಡ್ ನಿರ್ಮಾಣ  ಮಾಡಿ ವಾಸಿಸುವ ಜನರ ಸರ್ವೆ ಕಾರ್ಯ ಮಾಡಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯದ ಸರ್ವರಿಗೂ ಸೂರು (Housing for all) ಯೋಜನೆ ಅಡಿಯಲ್ಲಿ ಮನೆಗಳನ್ನು ನೀಡಿ ಸದರಿ ಜಾಗವನ್ನು ತೆರವುಗೊಳಿಸಿ ನಾಲೆಯ ಇಕ್ಕೆಲಗಳಲ್ಲಿ ಧ್ಯಾನವನ ಉದ್ಯಾನವನ ನಿರ್ಮಾಣ ಮಾಡಿ ಕಲುಷಿತಗೊಂಡಿರುವ ನಾಲೆಯನ್ನು ಉಳಿಸುವ ಕಾರ್ಯ ಮಾಡಬಹುದು.

ನಗರದ ಹೃದಯ ಭಾಗದಲ್ಲಿರುವ ರಾಜ ಕಾಲವೇಗಳ ನೀರನ್ನು ನೇರವಾಗಿ ತುಂಗಾ ನದಿಗೆ ಬಿಡಲಾಗುತ್ತಿದೆ ಮತ್ತು ಗೋಪಾಳ ವಿನೋಬನಗರ ಗಾಡಿಕೊಪ್ಪ ಇಂಡಸ್ಟ್ರಿಯಲ್ ಏರಿಯಾ ಗಳಿಂದ ಬರುವ ರಾಜಕಾಲುವೆ ಗಳ ನೀರನ್ನು ಸ್ವಚ್ಛ ಮಾಡದೆ ನೇರವಾಗಿ ತುಂಗಾ ನಾಲಗೆ ಬಿಡಲಾಗುತ್ತಿದೆ. ಕಾನೂನಿನ ಪ್ರಕಾರ ರಾಜ ಕಾಲುವೆ ಗಳನ್ನು ಅಭಿವೃದ್ಧಿಪಡಿಸಿ ಕಲುಷಿತಗೊಂಡ ನೀರನ್ನು ಮರುಬಳಕೆ ಮಾಡುವ ಯಂತ್ರಗಳನ್ನು ಉಪಯೋಗಿಸಿ (STP or ETP) ಸ್ವಚ್ಛವಾದ ನೀರನ್ನ ಹೊರ ಬಿಡಬೇಕು.” ಎಂದು  ಐಡಿಯಲ್ ಗೋಪಿ ಮಹಾನಗರ ಪಾಲಿಕೆಯಮಾಜಿ ಸದಸ್ಯರು ನನಗೆ ಕರೆ ಮಾಡಿ ತಿಳಿಸಿದರು.

ಇದಕ್ಕೆ ಪೂರಕವೆಂಬಂತೆ ಶ್ರವಣ್ ರವರೊಂದಿಗೆ ಮಾತನಾಡಿದಾಗ ಅವರು ಈ ಕೆಳಕಂಡದ್ದನ್ನು ತಿಳಿಸಿದರು,“ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಯು  ಸರಿಹೋಗಬೇಕಾದರೆ ಮಹಾನಗರ ಪಾಲಿಕೆಯಿಂದ ಪ್ರತ್ಯೇಕವಾಗಿ ಒಳಚರಂಡಿ ವ್ಯವಸ್ಥೆಯನ್ನು ನೋಡಿಕೊಳ್ಳಲು ಆಸಕ್ತಿಇರುವ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಮೂರು ಜನ ಕಿರಿಯ ಅಭಿಯಂತರರನ್ನು  ನೇಮಕ ಮಾಡಿಕೊಳ್ಳಬೇಕು. ಒಂದು ಪಕ್ಷ,  ಮೇಲ್ವಿಚಾರಣೆ ನೋಡಿಕೊಳ್ಳಲು ಅಭಿಯಂತರರು ಇಲ್ಲದಿದ್ದರೆ:
1. ವೇಟ್ ವೆಲ್ ಗಳಲ್ಲಿ ನಿರ್ವಹಣೆ ಮಾಡುತ್ತಿರುವರು ಸರಿಯಾಗಿ ಕೆಲಸ ಮಾಡದಿದ್ದಲ್ಲಿ ಕಲುಷಿತ ನೀರು ನದಿಗೆ ಸೇರುತ್ತದೆ.
2. ಮಳೆ ನೀರು ಹೆಚ್ಚಾದಾಗ STP, ವೇಟ್ ವೆಲ್ ರಾಜಕಾಲುವೇಗಳಿಗೆ ಅಳವಡಿಸಿರುವ ಗೆಟ್ ಗಳ ನಿರ್ವಹಣೆಸರಿಯಾಗಿ ಮಾಡದ್ದಿದ್ದರೆ ಅಲ್ಲಿಯ ನೀರು ಸಮೀಪವಿರುವ ಮನೆಗಳಿಗೆ ನುಗ್ಗುವ ಸಾಧ್ಯತೆಯಿರುತ್ತದೆ.”
ಆದರೆ, ಈ ಸಮಸ್ಯೆಗೆ ಇನ್ನೊಂದು ಮುಖವಿದೆ. ಬಿಜೆಪಿಯ ಶಿವಮೊಗ್ಗ ಎಮ್ಮೆಲ್ಸಿ ಡಿ. ಎಸ್. ಅರುಣ್ ಅವರನ್ನು ಭೇಟಿ ಮಾಡಿದಾಗ ತುಂಗಾ ನದಿಯ ಪುನರುತ್ಥಾನ ಯೋಜನೆಗೆ ಬೇಕಾಗುವ ಮೊತ್ತದ ಕುರಿತು ತಮ್ಮ ಆತಂಕ ಹಂಚಿಕೊಂಡರಲ್ಲದೆ ಸಚಿವರಾದ ಬೈರತಿ ಸುರೇಶ್ ರವರೂ ಸಹ ಇದೇ ಆತಂಕ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು. ಶಿವಮೊಗ್ಗದಿಂದ ತುಂಗಾ ಮತ್ತು ಭದ್ರಾ ನದಿಗಳು ಕೂಡುವ ಸ್ಥಳವಾದ ಕೂಡಲಿಯ ನಡುವಿನ ಒಂದು ಸಣ್ಣ ೧೮ ಕಿ.ಮೀ ಉದ್ದದ ತುಂಗೆಯ ಹರವಿನ ಪುನರುತ್ಥಾನ ಯೋಜನೆಯ ಅಂದಾಜು ಖರ್ಚು ಸರಿಸುಮಾರು ಆರುನೂರು ಕೋಟಿ ರೂಪಾಯಿಗಳೆಂಬುದನ್ನು ಉಲ್ಲೇಖಿಸಿದರು. ಈ ಬೃಹತ್ ಗಾತ್ರದ ಮೊತ್ತವನ್ನು ಎಲ್ಲಿಂದ ತರುವುದೆಂದು ಅವರಿಗೆ ಚಿಂತೆಯಾಗಿತ್ತು.
ನಾನು ಅರುಣ್ ರವರಿಗೆ ಕೇಂದ್ರ ಸರ್ಕಾರವನ್ನು ಯೋಜನೆಯಲ್ಲಿ ಭಾಗಿಯಾಗುವಂತೆ ನಾವು ಕೇಳುವುದು, ಜನರನ್ನು ಭಾಗಿಯಾಗುವಂತೆ ಕೇಳುವುದು ಅಥವಾ ಕ್ರೌಡ್ ಫಂಡಿಂಗ್ ಮೂಲಕ ಹಣ ಸೇರಿಸುವುದು, ತಂತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಮುಖಾಂತರ ಉದ್ದಿಮೆದಾರರು ಹಣ ಹೂಡುವಂತೆ ಕೇಳುವುದುಮತ್ತು ಅಂತರರಾಷ್ಟ್ರೀಯ ನಿಧಿ, ಹಣಕಾಸು ಉಳ್ಳವರ (ಸಂಸ್ಥೆಗಳು, ವ್ಯಕ್ತಿಗಳು) ಮೂಲಕ ವಿದೇಶಿ ಧನಸಹಾಯ ಪಡೆಯುವುದು ಎಂದೆಲ್ಲ ಸಲಹೆಗಳನ್ನು ಕೊಟ್ಟೆ. ಆದರೆ, ಇಂತಹ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ನಿಗಾ ಇಡಲು ಸರ್ಕಾರವು ಜವಾಬ್ದಾರಿಯುತ ನಾಗರಿಕರು, ಕಾರ್ಯಕರ್ತರು ಹಾಗೂ ನಾಯಕರುಗಳನ್ನೊಳಗೊಂಡ,ತಾವು ಮಾಡುವ ಕೆಲಸಗಳ ಹೊಣೆಗಾರಿಕೆ ಹೊರುವ ಪಡೆಯೊಂದನ್ನು ರಚಿಸಲೇ ಬೇಕೆಂದು ಸೇರಿಸಿದೆ.

ಇದಿನ್ನೂ ಪ್ರಾರಂಭ ಅಷ್ಟೇ. ಸಾಂಘಿಕ ಪ್ರಯತ್ನ ಮತ್ತು ಪರಿಶ್ರಮದಿಂದ, ನಾವೆಲ್ಲರೂ ಒಟ್ಟಿಗೆ ಇಂದು ಸವಾಲೊಡ್ಡುವ ಕೆಲಸಗಳನ್ನು ಯಶಸ್ವಿಯಾಗಿ ‌ಸಂಪನ್ನಗೊಳಿಸಬಲ್ಲೆವೆಂಬ ವಿಶ್ವಾಸ ನನಗಿದೆ. ನಾನು ಭೇಟಿ ಮಾಡಿದ ಪ್ರತಿಯೊಬ್ಬರೂ ತಾವು ಪ್ರತಿನಿಧಿಸುವ ಪಕ್ಷಗಳ ಹೊರತಾಗಿಯೂ, ನಮ್ಮ ಈ ಮಹತ್ಕಾರ್ಯಕ್ಕೆ ನಿಜವಾದ, ಪಕ್ಷಪಾತವಿಲ್ಲದಂತಹ ಸಂಪೂರ್ಣ ಬೆಂಬಲ ಕೊಡುವ ಭರವಸೆ ನೀಡಿದರು.

ಪ್ರತಿದಿನವೂ ಹಲವಾರು ಸಾರ್ವಜನಿಕ ಸಮಸ್ಯೆಗಳನ್ನು ನಾವೆಲ್ಲ ಗಮನಿಸುತ್ತಿರುತ್ತೇವೆ. ಆದರೆ ಅವುಗಳನ್ನು ನಿರ್ಲಕ್ಷಿಸುವುದರೆಡೆಗೊ ಅಥವಾ ದೂಷಿಸುವ ಆಟದ ಕಡೆಗೇ ನಮ್ಮ ಒಲವು. ಸಾಧಾರಣವಾಗಿ, ನಾವು ಜನಸಾಮಾನ್ಯರಾದುದರಿಂದ ನಮ್ಮ ದನಿಯಲ್ಲಿ ಬಲವಿಲ್ಲವೆಂಬ ಕಲ್ಪನೆ ಇಟ್ಟುಕೊಂಡು ಸಮಸ್ಯೆಗಳ ವಿರುದ್ಧ ಹೋರಾಡುವುದರಿಂದ ನಮ್ಮನ್ನು ನಾವು ತಡೆಹಿಡಿದಿಟ್ಟುಕೊಂಡಿರುತ್ತೇವೆ. ಆದರೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು ಅಥವಾ ಚಳುವಳಿಗಾರರು ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ಆರಂಭಿಸಿದಾಗ ನಮ್ಮಲ್ಲಿನ ಬಹುತೇಕ ಜನರಂತೆ ಅವರೆಲ್ಲರೂ ಸಾಮಾನ್ಯ ಜನರಾಗಿದ್ದು, ಅಂತಿಮವಾಗಿ ತಮ್ಮ ದೂರದೃಷ್ಟಿ ಹಾಗೂ ಪರಿಶ್ರಮದಿಂದ ಶ್ರೇಷ್ಠ, ಪ್ರಭಾವಿ ವ್ಯಕ್ತಿಗಳಾಗಿದ್ದು, ಸಮಾಜವು ಮತ್ತಷ್ಟು ಒಳ್ಳೆಯದಕ್ಕಾಗಿ ಬದಲಾಗಲು ಸಹಾಯ ಮಾಡಿತು. ನಾವು ಚಲಾಯಿಸುವ ಮತಕ್ಕೆ ಶಕ್ತಿಯಿದೆ ಎಂದರೆ, ನಮಗೂ ಶಕ್ತಿಯಿದೆ. ಅದನ್ನು ಉಪಯೋಗಿಸಿ ನೂರಕ್ಕೆ ನೂರು ನಮ್ಮ ಶ್ರಮ ವಿನಿಯೋಗಿಸೋಣ.

ಪ್ರಕೃತಿಯು ತಾನು ರಚಿಸಿರುವ ವ್ಯವಸ್ಥೆಗಳನ್ನು ತನ್ನದೇ ರೀತಿಯಲ್ಲಿ ಶುದ್ಧಗೊಳಿಸಿಕೊಳ್ಳುತ್ತದೆ ಎಂದು ನನಗನಿಸುತ್ತದೆ. ಆದರೆ, ಈ ಶುದ್ಧೀಕರಣದ ಮೇಲೆ ನಾವು ವಿವೇಚನೆ ಇಲ್ಲದೆ ಬಿಡುಗಡೆ ಮಾಡುವ ಮಾಲಿನ್ಯಕಾರಕಗಳು ತೀವ್ರ ಪರಿಣಾಮಗಳನ್ನು ಉಂಟು ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಕೃತಿ ಈ ಜವಾಬ್ದಾರಿಯನ್ನು ನಿರ್ವಹಿಸಲು ಜನರನ್ನು ಆಯ್ದುಕೊಳ್ಳುತ್ತದೆ. ಹಾಗೇನಾದರೂ ನಾವು ಆಯ್ಕೆಯಾದಲ್ಲಿ ಅದನ್ನು ವರವೆಂದು ಪರಿಗಣಿಸಿ ನಾವು ಕೇವಲ ಪ್ರಕೃತಿಗೆ ಬೇಕಾದ ಫಲಿತಾಂಶವನ್ನು ದೊರಕಿಸಿ ಕೊಡುವ ನಿಮಿತ್ತ ಮಾತ್ರದವರೆಂಬುದನ್ನು ಅಂಗೀಕರಿಸಬೇಕು. ಈ ಪವಿತ್ರ ನದಿಯ ಕಾಯಕಲ್ಪ ಮತ್ತು ಪುನರುಜ್ಜೀವನ ಪ್ರತಿಯೊಬ್ಬರ ಚಳುವಳಿ. ಕನ್ನಡಿಗರಾಗಿ, ಭಾರತೀಯರಾಗಿ ನಮ್ಮ ನದಿಗಳಿಗೆ ನಾವೆಂದೂ ಋಣಿಗಳು. ಆ ಋಣವನ್ನು ತೀರಿಸಲು ನಮ್ಮ ಅಳಿಲು ಸೇವೆ ನಾವು ಸಲ್ಲಿಸಲೇಬೇಕು. ಈ ಪವಿತ್ರವಾದಹೋರಾಟ, ಪೂಜ್ಯ ಗುರಿಹಾಗೂ ಆಧ್ಯಾತ್ಮಿಕವಾದ ಅಭಿಯಾನದಲ್ಲಿ ಕೈ ಜೋಡಿಸೋಣ ಬನ್ನಿ – ನಮ್ಮ ನಮ್ಮ ನದಿಗಳನ್ನು ಶುದ್ಧವಾಗಿ ಮತ್ತು ನಿರ್ಮಲವಾಗಿ ಉಳಿಯುವಂತೆ ಮಾಡಿ, ಅವುಗಳ ನೀರು ಕುಡಿಯಲು ಮತ್ತು ಇತರೆ ಉಪಯೋಗಗಳಿಗೆ ಬಳಸಲು ಯೋಗ್ಯವಾಗುವಂತೆ ಮಾಡೋಣ.
ತುಂಗೆಯನ್ನು ಶುಚಿಗೊಳಿಸಲು ಅಧಿಕಾರಿಗಳು ಮತ್ತು ಸಾರ್ವಜನಿಕರ ಮನವೊಲಿಸುವ ಪ್ರಯತ್ನ ಖಂಡಿತವಾಗಿಯೂ ಇದೇ ಮೊದಲಲ್ಲ. ಹಲವಾರು ಜನರು ಈ ಹಿಂದೆಯೂ ಪ್ರಯತ್ನ ಪಟ್ಟಿದ್ದಾರೆ. ಆದರೆ ನಾವೀಗ ಅವರೆಲ್ಲರೂ ಹೊತ್ತಿಸಿದ ಕಿಡಿಯನ್ನು ದೀವಟಿಗೆಯ ಜ್ಯೋತಿಯನ್ನಾಗಿ ಮಾಡಿಕೊಂಡು ನಮ್ಮ ಹಿಂದಿನ ಚಳುವಳಿಗಾರರಿಂದ ಮುಂದಿನ ಪೀಳಿಗೆಗಳಿಗೆ ತಲುಪಿಸಬೇಕು. ಬನ್ನಿ, ಎಲ್ಲರೂ ಇನ್ನು ಮುಂದೆ ಪರಸ್ಪರರನ್ನು ದೂಷಿಸುವುದನ್ನು ಬಿಟ್ಟು, ಒಟ್ಟಾಗಿ ಈ ಯೋಜನೆಯು ಪೂರ್ಣಗೊಳ್ಳಲುದಿನಾಂಕವನ್ನು ನಿಗದಿಪಡಿಸಿ, ನಿಗದಿತ ಸಮಯದೊಳಗೆ ಕೆಲಸ ಮುಗಿಸಿ, ಮುಂದಿನ ಪೀಳಿಗೆಗಳಿಗೆ ಮಾದರಿಯಾಗೋಣ ಎಂದು ಪ್ರತಿಜ್ಞೆ ಮಾಡೋಣ. ಎಲ್ಲರೂ ಆ ಪ್ರಕೃತಿಯ ಕಾರ್ಯವನ್ನು ನಮ್ಮ ಕಾರ್ಯವೆಂದು ಭಾವಿಸಿ, ಆ ಮಾತೆಯ ಕೃಪೆಗೆ ಪಾತ್ರರಾಗೋಣ.

– ಅನಿರುದ್ಧ ಜತಕರ, ನಟ

Leave a Reply