ಮತ್ತೊಮ್ಮೆ ಪುನಿತ್ ಸ್ಮರಣೆ
ಬೆಂಗಳೂರು ಲಿಟರರಿ ಫೆಸ್ಟಿವಲ್‌ನಲ್ಲಿ ಅದರ ಆಯೋಜಕರು ಪುನೀತ್ ಅವರ ಸ್ಮರಣೆಗಾಗಿ 04.12.2022ರಂದು ಗೋಷ್ಠಿಯೊಂದನ್ನು ಆಯೋಜಿಸಿದ್ದರು. ಪುನೀತ್ ಅವರ ನೆನಪಿಗಾಗಿ ನಾನು ಸಂಪಾದಿಸಿರುವ `ಮುಗ್ಧ ನಗುವೊಂದರ ಕಣ್ಮರೆ’ ಎಂಬ ಪುಸ್ತಕದ ಹೆಸರನ್ನೇ ಈ ಗೋಷ್ಠಿಗೆ ಇರಿಸಲಾಗಿತ್ತು. ಪುನೀತ್ ಅವರು ತೀರಿಕೊಂಡ ನಂತರ ಕರ್ನಾಟಕವನ್ನೂ ಒಳಗೊಂಡಂತೆ ದೇಶದ ಬೇರೆಬೇರೆ ವಲಯದ ಜನ ಈ ಸಾವಿಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಕೊಳ್ಳುವ ಆಸೆಯಿಂದ ಕೆಲ ಬರಹಗಳನ್ನು ಕಲೆ ಹಾಕಿ ಓದತೊಡಗಿದೆ. ನೋಡು ನೋಡುತ್ತಲೇ ಹತ್ತಾರು ಲೇಖನಗಳು ಸಿಕ್ಕವು. ಹೀಗೆ ದೊರೆತ ಲೇಖನಗಳನ್ನು ಒಟ್ಟಾಗಿಸಿ ಪುಸ್ತಕವೊಂದನ್ನು ಪ್ರಕಟಿಸಲು ನ್ಯಾಯಪಥ ಪತ್ರಿಕೆಯ ಸಂಪಾದಕರಾದ ಗುರುಪ್ರಸಾದ್, ದೊಡ್ಡಿಪಾಳ್ಯ ನರಸಿಂಹಮೂರ್ತಿ ಮುಂದಾದರು. ಆಗ ರೂಪುಗೊಂಡ ಪುಸ್ತಕ `ಮುಗ್ಧ ನಗುವೊಂದರ ಕಣ್ಮರೆ’. ಈ ಪುಸ್ತಕದ ಶೀರ್ಷಿಕೆಯನ್ನೇ ಬೆಂಗಳೂರು ಲಿಟರರಿ ಫೆಸ್ಟಿವಲ್‌ನ ಪ್ರಸ್ತುತ ಗೋಷ್ಠಿಗೆ ಇರಿಸಲಾಗಿತ್ತು.
ಈ ಗೋಷ್ಠಿಯಲ್ಲಿ ಪುನೀತ್ ಕುರಿತು ಮಾತನಾಡಲು ನನ್ನನ್ನು ಆಹ್ವಾನಿಸಿದ (ನನ್ನ ಹೆಸರನ್ನು ಶಿಫಾರಸು ಮಾಡಿದ್ದವರು ಪ್ರೊ. ಪುರುಷೋತ್ತಮ ಬಿಳಿಮಲೆಯವರು) ಪ್ರೊ. ಪ್ರತೀತಿ ಬಲ್ಲಾಳ್ ಅವರು ಈ ಫೆಸ್ಟಿವಲ್ ನ ಆಯೋಜಕರಲ್ಲಿ ಒಬ್ಬರು. ನ್ಯೂಯಾರ್ಕ್ ನ ವಿವಿಯೊಂದರಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಪ್ರತೀತಿ ಅವರು `ನಿಮ್ಮ ಪುಸ್ತಕಕ್ಕೆ `ಮುಗ್ಧ ನಗುವೊಂದರ ಕಣ್ಮರೆ’ ಎಂಬ ಶೀರ್ಷಿಕೆಯನ್ನು ಯಾಕೆ ಇರಿಸಿದಿರಿ?’ ಎಂದು ಕೇಳಿದ್ದರು.
`ಮಗು ಹುಟ್ಟುತ್ತಲೇ ಎರಡು ಭಾಷೆಗಳನ್ನು ಕಲಿಯುತ್ತದೆ, ಒಂದು ಅಮಾಯಕ ನಗು, ಇನ್ನೊಂದು ಯಾಚನೆಯ ಅಳು. ಮಗು ಬೆಳೆದಂತೆ ಅಳುವನ್ನು ಮರೆಮಾಚುತ್ತಾ ಹೋಗುತ್ತದೆ. ನಗು ಮಾತ್ರ ಹಾಗೆಯೇ ಉಳಿದುಕೊಳ್ಳುತ್ತದೆ. ನಾವು ಬೆಳೆಯುತ್ತಾ ಬಾಲ್ಯದ ಮುಗ್ಧತೆಯನ್ನು ಕಳೆದುಕೊಳ್ಳುತ್ತೇವೆ. ನಮಗೆ ದಕ್ಕುವ ಹಣ, ಅಧಿಕಾರ ಮತ್ತು ಕೀರ್ತಿಗಳು ನಮ್ಮಲ್ಲಿರುವ ಮಗುತನವನ್ನು ಕೊಲ್ಲುತ್ತವೆ. ಬಾಲ್ಯದಿಂದ ನಮ್ಮನ್ನು ಹಿಂಬಾಲಿಸಿ ಬರುವ ನಗು ಸಹ ಈ ಅಹಂಕಾರಗಳ ಕಾರಣಕ್ಕಾಗಿ ಮೂಲರೂಪದಲ್ಲಿ ಉಳಿಯುವುದಿಲ್ಲ. ಆದರೆ ಪುನೀತ್ ಅವರಲ್ಲಿದ್ದ ಮಗುತನ ಹಾಗೆಯೇ ಇತ್ತು. ಆ ಮಗುತನದ ಭಾಗವಾಗಿ ಉಳಿದುಕೊಂಡಿದ್ದ ಅವರ ನಗುವಲ್ಲಿ ಮಗುತನದ ಮುಗ್ಧತೆ ಹಾಗೆಯೇ ಉಳಿದುಕೊಂಡಿತ್ತು. ಹಾಗಾಗಿ ಪುನಿತ್ ಎಂದರೆ ನನಗೆ ನೆನಪಾಗುವುದು `ಮುಗ್ಧ ನಗು’.
ನನ್ನ ಜೊತೆ ಈ ಗೋಷ್ಠಿಯಲ್ಲಿ ಹಿರಿಯರಾದ ಕೆ. ಪುಟ್ಟಸ್ವಾಮಿಯವರು ಇದ್ದರು. ಪುಟ್ಟಸ್ವಾಮಿಯವರು ಚಿತ್ರರಂಗದ ಇತಿಹಾಸದ ಮೇಲೆ ಬರವಣಿಗೆ ಮಾಡಿದವರು. ಅವರು ಬರೆದ `ಸಿನೇಮಾಯಾನ’ ಕೃತಿಗೆ ರಾಷ್ಟ್ರಮಟ್ಟದ ಸ್ವರ್ಣಕಮಲ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಆಯೋಜಕರು ನೀಡಿದ್ದ 30 ನಿಮಿಷಗಳಲ್ಲಿಯೇ ನಮ್ಮ ಮಾತುಗಳನ್ನು ನಿರ್ದಿಷ್ಟಗೊಳಿಸಬೇಕಿತ್ತು. ಸಮ್ಮೇಳನಗಳೆಂದರೆ ದೂರ ಓಡಿಹೋಗುವ ನಾನು ಇಲ್ಲಿ ಅತ್ಯಂತ ಪ್ರೀತಿಯಿಂದ ಪಾಲ್ಗೊಂಡಿದ್ದೆ. ಪ್ರಸ್ತುತ ಗೋಷ್ಠಿಯ ಕೇಳುಗರಾಗಿ ಡಾ. ಪುರುಷೋತ್ತಮ ಬಿಳಿಮಲೆ, ಜಯಂತ್ ಕಾಯ್ಕಿಣಿ, ಡಾ. ಅಜಯ್ ಕುಮಾರ್ ಸಿಂಗ್, ಕೃಷ್ಣಪ್ರಸಾದ್ ಮುಂತಾದ ಹಿರಿಯರು ಇದ್ದರು. ಗೆಳೆಯರಾದ ಅರುಣ್ ಜೋಳದಕೂಡ್ಲಿಗಿ, ಗುರುಪ್ರಸಾದ್, ನಾರಾಯಣ್ ಕ್ಯಾಸಂಬಳ್ಳಿ, ಧನಂಜಯ ಇದ್ದರು. ಪ್ರಸ್ತುತ ಸಮ್ಮೇಳನದಲ್ಲಿ ನನ್ನ ಇಷ್ಟದ ಲೇಖಕರಾದ ಪಿ. ಸಾಯಿನಾಥ್ ಸಿಕ್ಕಿದ್ದರು. ಹಾಗೆಯೇ ಕಲಾವಿದ ರಮೇಶ್ ಅರವಿಂದ್ ಅವರೂ ಸಹ.
30 ನಿಮಿಷಗಳ ಕಾಲ ನಾವು ಪುನೀತ್ ಅವರ ಉಪಯುಕ್ತ ಬದುಕು ಮತ್ತು ಅವರು ಒಂದು ಲೋಕೋತ್ತರ ವಿದ್ಯಮಾನವಾಗಿ (Phenomenon) ಬೆಳೆದ ಪರಿಯನ್ನು ಮೆಲುಕು ಹಾಕಿದೆವು. ಪುನೀತ್ ರಾಜಕುಮಾರ್ ಅವರು 2021ರ ಅಕ್ಟೋಬರ್ 29 ರಂದು ನಮ್ಮನ್ನು ಅಗಲಿದರು. ಪುನೀತ್ ಅವರು ಬದುಕಿದ್ದಾಗ ನಾವು ಅವರನ್ನು ಒಬ್ಬ ಸಜ್ಜನ ಕಲಾವಿದ ಎಂದು ಮಾತ್ರ ಭಾವಿಸಿದ್ದೆವು. ಅವರ ಸಿನೇಮಾಗಳನ್ನು ನೋಡಿ ಖುಷಿಪಟ್ಟಿದ್ದೆವು. ಆದರೆ ಪುನೀತ್ ಅವರ ಮರಣದ ನಂತರ ಅವರ ವ್ಯಕ್ತಿತ್ವದ ವಿರಾಟ್ ಸ್ವರೂಪವನ್ನು ನೋಡಿ ಇಡೀ ದೇಶ ಕನ್ನಡ ನಾಡಿನ ಕಡೆ ತಿರುಗಿ ನೋಡುವಂತಾಯ್ತು. ಪುನೀತ್ ಕೇವಲ ಒಬ್ಬ ಕಲಾವಿದನಾಗಿ ಮಾತ್ರವಲ್ಲ, ಒಬ್ಬ ಸಮಾಜಸೇವಕನಾಗಿ, ಸಜ್ಜನ ನಾಗರಿಕನಾಗಿ, ಸಾಮರಸ್ಯದ ಸಂಕೇತವಾಗಿ ನಮ್ಮಲ್ಲಿ ಸದ್ದಿಲ್ಲದೆ ಬೇರೂರಿದ ವಿದ್ಯಮಾನ ನಮ್ಮರಿವಿಗೆ ಬಂದಿರಲಿಲ್ಲ. ಪುನೀತ್ ಸಾವು ಅವರ ಪ್ರಚ್ಛನ್ನ ವ್ಯಕ್ತಿತ್ವವನ್ನು ಈಗ ಅನಾವರಣ ಮಾಡಿದೆ. ನಾಡಿನ ಪಟ್ಟಣ, ನಗರಗಳಲ್ಲದೆ, ರಾಜ್ಯದ ಮೂಲೆಮೂಲೆಯ ಹಳ್ಳಿಗಳಲ್ಲಿ, ಆದಿವಾಸಿಗಳ ಹಾಡಿಗಳಲ್ಲಿ, ಅಲೆಮಾರಿಗಳ ಜೋಪಡಿಗಳಲ್ಲೂ ಪುನೀತ್ ಅವರ ಸ್ಮರಣೆ ನಡೆದೇ ಇದೆ.
ಪುನೀತ್ ಅವರು ಸಣ್ಣ ಪ್ರಾಯದಲ್ಲಿ ನಮ್ಮನ್ನಗಲಿದರು. ನಲವತ್ತಾರು ಸಾಯುವ ವಯಸ್ಸಲ್ಲ. ಆದರೆ ಸಾವು ನಮ್ಮ ಮೇಲೆ ಎರಗಿ ಯಾವಾಗಬೇಕಾದರೂ ಎತ್ತಿಕೊಂಡು ಹೋಗಿಬಿಡಬಹುದು. ಈ ಸಾವೆಂಬ ಸಾವು ಅನಿರೀಕ್ಷಿತವಾಗಿ ತಂದೊಡ್ಡುವ ಆಘಾತವನ್ನು ಸಹಿಸಿಕೊಳ್ಳುವ ವ್ಯಾಕರಣ ಮನುಷ್ಯನಿಗೆ ಇನ್ನೂ ದಕ್ಕಿಲ್ಲ. ಸಾವು ಸೃಷ್ಟಿಸುವ ಶೂನ್ಯ ಮತ್ತು ವಿಷಾದಗಳ ಅಗಾಧತೆ ಯಾವತ್ತೂ ಅನೂಹ್ಯ. ಸಾವುಗಳು ಅನಾವರಣ ಮಾಡುವ ಈ ಖಾಲಿತನ ಶಾಶ್ವತವಾಗಿ ನಮ್ಮ ಜೊತೆಯೇ ಉಳಿದುಬಿಡುತ್ತದೆ. ಪುನೀತ್ ಅವರ ಅನಿರೀಕ್ಷಿತ ಕಣ್ಮರೆ ಈ ಖಾಲಿತನವನ್ನು ಸೃಷ್ಟಿಸಿಬಿಟ್ಟಿದೆ. ಈ ಖಾಲಿತನವನ್ನು ಸಹಿಸಿಕೊಳ್ಳದ ನಾವು ಅವರಿಗೆ ಬಿರುದುಗಳನ್ನು ನೀಡಿ ಸಮಾಧಾನಿಸಿಕೊಳ್ಳಲು ನೋಡುತ್ತಿದ್ದೇವೆ. ಅವರ ಹೆಸರನ್ನು ಊರಿನ ಸರ್ಕಲ್ ಗಳಿಗೆ, ರಸ್ತೆಗಳಿಗೆ, ಹೋಟೆಲ್‌ಗಳಿಗೆ ಇಟ್ಟು, ನಮ್ಮನ್ನಾವರಿಸಿರುವ ಖಾಲಿತನವನ್ನು ನೀಗಿಕೊಳ್ಳಲು ನೋಡುತ್ತಿದ್ದೇವೆ. ಬೆಂಗಳೂರು ಲಿಟರರಿ ಫೆಸ್ಟಿವಲ್‌ನಲ್ಲಿ ಏರ್ಪಡಿಸಿದ್ದ ಪ್ರಸ್ತುತ ಗೋಷ್ಟಿಯೂ ಸಹ ಪುನೀತ್ ಸಾವಿನ ನಂತರ ಸೃಷ್ಟಿಯಾದ ಗಾಢ ವಿಷಾದ ಮತ್ತು ಖಾಲಿತನವನ್ನು ಇಲ್ಲವಾಗಿಸಿಕೊಳ್ಳುವ ಒಂದು ಪ್ರಯತ್ನ ಎಂದೇ ನಾನು ಭಾವಿಸಿದ್ದೇನೆ.
ಅಪ್ಪು ಈಗ ನಮ್ಮ ಜೊತೆಗಿಲ್ಲ. ಆತ ಇಲ್ಲ ಎನ್ನುವ ದುಃಖ ಮತ್ತು ಖಾಲಿತನ ನಮ್ಮನ್ನು ಆವರಿಸಿದೆ. ಕನ್ನಡದ ಚಿತ್ರರಂಗವನ್ನು ಮತ್ತು ಅಭಿನಯ ಕಲೆಯನ್ನು ಇನ್ನೊಂದು ಎತ್ತರಕ್ಕೆ ತೆಗೆದುಕೊಂಡು ಹೋಗುವ ಭರವಸೆ ಮೂಡಿಸಿದ್ದ ಅಪ್ಪು ಹೊರಟು ಹೋಗಿದ್ದಾರೆ. ಅಮಾಯಕವಾಗಿ ನಗುತ್ತಲೇ ಬದುಕಿದ್ದ ಅಪ್ಪು ಈಗಿಲ್ಲ. ಆತನ ನಗು ಯಾವತ್ತೂ ನಮ್ಮನ್ನು ಕಾಡಲಿದೆ. ಕಾಲ ಇಂತಹ ನಗುವನ್ನು ಮತ್ತೆ ಹಡೆಯಲಿ.
ಜೊತೆಗೆ ಪುನೀತ್ ಅವರು ಒಂದು ರೀತಿಯಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಸಾರ್ವಜನಿಕ ಸಜ್ಜನಿಕೆಯ ಪ್ರತಿನಿಧಿಯಂತೆ ಬದುಕಿದ್ದರು. ಸಮಾಜ ದ್ವೇಷಾಸೂಯೆಗಳಿಂದ ಕುದ್ದು ಹೋಗುತ್ತಿರುವ ಈ ಸಂದರ್ಭದಲ್ಲಿ ಅಪ್ಪುವಿನ ಸಾಮರಸ್ಯದ ಬದುಕು ನಮಗೆ ಮಾದರಿಯಾಗಬೇಕಿದೆ. ಇದು ನಾವು ಪುನೀತ್ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.
– ಎ.ಎಸ್.ಪ್ರಭಾಕರ, ಪ್ರಾಧ್ಯಾಪಕರು




