1991ರ ನಂತರದ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚೆಯಾಗಲಿ

12 months ago

1991ರ ನಂತರ ದೇಶದಲ್ಲಿ ಕಾಶ್ಮೀರ ಸೇರಿದಂತೆ ಅನೇಕ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು, ಅಮಾಯಕರ ಸಾವು, ಮೇಲಿಂದ ಮೇಲೆ ಸಂಭವಿಸಿರುತ್ತವೆ. ಇದರಿಂದಾಗಿ ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲೂ ಭದ್ರತೆಗೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 1991ರ ಮೊದಲು ದೇಶದಲ್ಲಿ ಈ ಪರಿಸ್ಥಿತಿ ಇರಲಿಲ್ಲ. ಇದಕ್ಕೆ ಕಾರಣ ಯಾರು? ಯಾವ ಯಾವ ವಿಚಾರಗಳಿಂದಾಗಿ ದೇಶದಲ್ಲಿ 1991ರ ನಂತರ ಆಂತರಿಕವಾದ ಭದ್ರತೆ ಮತ್ತು ದೇಶದ ರಕ್ಷಣೆಯ ವಿಚಾರದಲ್ಲಿ ಸಾಕಷ್ಟು ಗಂಭೀರವಾದ ಸಮಸ್ಯೆಗಳು ಕೇಂದ್ರ ಸರ್ಕಾರಗಳನ್ನು ಮತ್ತು ರಾಜ್ಯ ಸರ್ಕಾರಗಳನ್ನು ಬಾಧಿಸುತ್ತಿವೆ ಎಂಬ ಕುರಿತು ಕೂಲಂಕಷವಾಗಿ ಚರ್ಚೆಯಾಗಬೇಕು.

ಪ್ರತಿಯೊಂದು ಭಯೋತ್ಪಾದಕ ಕೃತ್ಯಗಳು ಸಂಭವಿಸಿದಾಗ ಪರಸ್ಪರ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪಗಳನ್ನ ಮಾಡುತ್ತ ಪ್ರತಿಯೊಂದು ಸಂದರ್ಭವನ್ನು ಸಮರ್ಥಿಸಿಕೊಳ್ಳುತ್ತಾ, ತನಿಖೆಯ ಮಾತುಗಳನ್ನಾಡುತ್ತಾ ಜನರ ಗಮನ ಸ್ವಲ್ಪ ಸಡಿಲವಾಗುತ್ತಿದ್ದಂತೆ ಈ ವಿಚಾರಗಳನ್ನು ಮರೆತುಬಿಡುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಶೇಷವಾದಂತಹ ಅಧಿವೇಶನವನ್ನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಡೆಸಿ 1991ರ ನಂತರದ ಎಲ್ಲಾ ಪ್ರಕರಣಗಳನ್ನು ತೆಗೆದುಕೊಂಡು ಇದರ ಬಗ್ಗೆ ಪಕ್ಷತೀತವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಿರಲು ಕೈಗೊಳ್ಳಬೇಕಾದಂತಹ ಕ್ರಮಗಳ ಬಗ್ಗೆ ಆಲೋಚಿಸುವುದು ಅತ್ಯಂತ ಸೂಕ್ತವಾದಂತಹ ಕಾರ್ಯವಾಗಿರುತ್ತದೆ.

ಭದ್ರತೆ  ವಿಚಾರದಲ್ಲಿ ಯಾವ ಯಾವ ಸಂದರ್ಭದಲ್ಲಿ ಲೋಪಗಳಾಗಿದೆ ಎಂಬುದು ಬಹಿರಂಗಗೊಳ್ಳಲಿ. ದೇಶದಲ್ಲಿನ ಎಲ್ಲಾ ಚಟುವಟಿಕೆಗಳಿಗೆ ಪಾಕಿಸ್ತಾನ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣವಾಗಿರುವುದರಿಂದ ಪಾಕಿಸ್ತಾನದ ವಿರುದ್ಧ ಕಳೆದ 30 ವರ್ಷದ ಅವಧಿಯಲ್ಲಿ ಯಾವ ಯಾವ ಸರ್ಕಾರಗಳು ಯಾವ ಯಾವ ನಿಲುವುಗಳನ್ನ ತೆಗೆದುಕೊಂಡಿವೆ ಎನ್ನುವುದು ಚರ್ಚೆಯಾಗಲಿ.

ನಿಜಕ್ಕೂ 1991ರ ನಂತರದ ದೇಶದ ಪರಿಸ್ಥಿತಿ ಬದಲಾಗಲು ಕಾರಣವಾದ ಅನೇಕ ಘಟನಾವಳಿಗಳ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚೆಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ವಿಶೇಷ ಅಧಿವೇಶನವನ್ನ ಕರೆಯಬೇಕೆಂದು ರಾಜಕೀಯ ಪಕ್ಷಗಳು ಒತ್ತಾಯಿಸಬೇಕಾಗಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply