ವಿಧಾನಸಭೆಗಳ ಸಂರಚನೆ
170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ ನೇರ ಚುನಾವಣೆಯ ಮೂಲಕ ಆಯ್ಕೆಯಾದ ಐದುನೂರಕ್ಕಿಂತಲೂ ಹೆಚ್ಚಾಗಿಲ್ಲದಷ್ಟು ಆದರೆ ಅರವತ್ತಕ್ಕಿಂತ ಕಡಿಮೆ ಇಲ್ಲದಷ್ಟು ಸದಸ್ಯರನ್ನು ಒಳಗೊಂಡಿರತಕ್ಕದ್ದು.
(2) (1)ನೆಯ ಖಂಡದ ಉದ್ದೇಶಗಳಿಗಾಗಿ ಪ್ರತಿಯೊಂದು ರಾಜ್ಯವನ್ನು ಪ್ರತಿಯೊಂದು ಚುನಾವಣಾ ಕ್ಷೇತ್ರದ ಜನಸಂಖ್ಯೆ ಮತ್ತು ಅದಕ್ಕೆ ಹಂಚಲಾದ ಸ್ಥಾನಗಳ ಸಂಖ್ಯೆ ಇವೆರಡರ ನಡುವಣ ಅನುಪಾತವು ಕಾರ್ಯಸಾಧ್ಯವಾಗುವಷ್ಟರ ಮಟ್ಟಿಗೆ, ರಾಜ್ಯದಾದ್ಯಂತ ಒಂದೇ ಆಗಿರುವಂಥ ರೀತಿಯಲ್ಲಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸತಕ್ಕದ್ದು.
[ವಿವರಣೆ:- (1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 29ನೆಯ ಪ್ರಕರಣದ ಮೂಲಕ “ವಿವರಣೆ”ಗೆ ಬದಲಾಗಿ (3-1-1977 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) ಈ ಖಂಡದಲ್ಲಿ “ಜನಸಂಖ್ಯೆ” ಎಂದರೆ, ಯಾವ ಹಿಂದಿನ ಕೊನೆಯ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಹಿಂದಿನ ಕೊನೆಯ ಜನಗಣತಿಯಲ್ಲಿ ಖಚಿತಪಡಿಸಿಕೊಂಡ ಜನಸಂಖ್ಯೆ :
ಪರಂತು, ಈ ವಿವರಣೆಯಲ್ಲಿ ಯಾವ ಹಿಂದಿನ ಕೊನೆಯ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಜನಗಣತಿಗೆ ಮಾಡಿದ ಉಲ್ಲೇಖವನ್ನು [2026 ನೆಯ] (2001ನೇ ಇಸವಿಯ ಸಂವಿಧಾನ (ಎಂಬತ್ನಾಲ್ಕನೆಯ ತಿದ್ದುಪಡಿ) ಅಧಿನಿಯಮದ 5ನೆಯ ಪ್ರಕರಣದ ಮೂಲಕ ಅನುಕ್ರಮವಾಗಿ “2000ದ” ಮತ್ತು “1971ರ” ಎಂಬ ಅಂಕಿಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) ಇಸವಿಯ ತರುವಾಯ ಮೊದಲನೆಯ ಸಲ ನಡೆಸಲಾಗುವ ಜನಗಣತಿಯ ಸುಸಂಗತ ಅಂಕಿಗಳು ಪ್ರಕಟವಾಗುವವರೆಗೆ, [2001 ರ] (2003ನೇ ಇಸವಿಯ ಸಂವಿಧಾನ (ಎಂಬತ್ತೇಳನೆಯ ತಿದ್ದುಪಡಿ) ಅಧಿನಿಯಮದ 4ನೇ ಪ್ರಕರಣದ ಮೂಲಕ “1991ರ” ಎಂಬ ಅಂಕಿಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) ಜನಗಣತಿಗೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು.]
(3) ಪ್ರತಿಯೊಂದು ಜನಗಣತಿಯು ಪೂರ್ಣಗೊಂಡ ಮೇಲೆ, ಪ್ರತಿಯೊಂದು ರಾಜ್ಯದ ವಿಧಾನಸಭೆಯಲ್ಲಿನ ಒಟ್ಟು ಸ್ಥಾನಗಳನ್ನು ಮತ್ತು ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸಿರುವುದನ್ನು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾದಂಥ ಪ್ರಾಧಿಕಾರವು ಮತ್ತು ಅಂಥ ರೀತಿಯಲ್ಲಿ ಮರು ಹೊಂದಾಣಿಕೆ ಮಾಡತಕ್ಕದ್ದು:
ಪರಂತು, ಅಂಥ ಮರುಹೊಂದಾಣಿಕೆಯು ಆಗ ಅಸ್ತಿತ್ವದಲ್ಲಿರುವ ವಿಧಾನಸಭೆಯ ವಿಸರ್ಜನೆ ಆಗುವವರೆಗೆ ಆ ಸಭೆಯಲ್ಲಿನ ಪ್ರಾತಿನಿಧ್ಯಕ್ಕೆ ಬಾಧಕವನ್ನುಂಟುಮಾಡತಕ್ಕದ್ದಲ್ಲ:]
ಮತ್ತೂ ಪರಂತು, (1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 29ನೇ ಪ್ರಕರಣದ ಮೂಲಕ (3-1-77 ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.) ಅಂಥ ಮರುಹೊಂದಾಣಿಕೆಯು ರಾಷ್ಟ್ರಪತಿಯು ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದಿಂದ ಜಾರಿಗೆ ಬರತಕ್ಕದ್ದು ಮತ್ತು ಅಂಥ ಮರುಹೊಂದಾಣಿಕೆಯು ಜಾರಿಗೆ ಬರುವವರೆಗೆ ವಿಧಾನಸಭೆಗೆ ಯಾವುದೇ ಚುನಾವಣೆಯನ್ನು ಅಂಥ ಮರುಹೊಂದಾಣಿಕೆಗೆ ಮೊದಲು ಅಸ್ತಿತ್ವದಲ್ಲಿರುವ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಆಧಾರದ ಮೇಲೆ ನಡೆಸಬಹುದು:
ಮತ್ತೂ ಪರಂತು, [2026 ನೆಯ] (2001 ನೇ ಇಸವಿಯ ಸಂವಿಧಾನ (ಎಂಬತ್ನಾಲ್ಕನೆಯ ತಿದ್ದುಪಡಿ) ಅಧಿನಿಯಮದ 5ನೆಯ ಪ್ರಕರಣದ ಮೂಲಕ ಅನುಕ್ರಮವಾಗಿ “2000ದ” ಮತ್ತು “1971ರ” ಎಂಬ ಅಂಕಿಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) ಇಸವಿಯ ತರುವಾಯ ಮೊದಲನೆಯ ಸಲ ನಡೆಸಲಾಗುವ ಜನಗಣತಿಯ ಸುಸಂಗತ ಅಂಕಿಗಳು ಪ್ರಕಟವಾಗುವವರೆಗೆ, ಈ ಖಂಡದ ಮೇರೆಗೆ.-
(i) (2001 ನೆಯ ಇಸವಿಯ ಸಂವಿಧಾನ (ಎಂಬತ್ನಾಲ್ಕನೆಯ ತಿದ್ದುಪಡಿ) ಅಧಿನಿಯಮದ 5ನೆಯ ಪ್ರಕರಣದ ಮೂಲಕ ಕೆಲವು ಪದಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) 1971ರ ಜನಗಣತಿ ಆಧಾರದ ಮೇಲೆ ಮರುಹೊಂದಾಣಿಕೆ ಮಾಡಿರುವಂತೆ ಪ್ರತಿಯೊಂದು ರಾಜ್ಯದ ವಿಧಾನ ಸಭೆಯಲ್ಲಿನ ಸ್ಥಾನಗಳ ಒಟ್ಟು ಸಂಖ್ಯೆಯನ್ನು: ಮತ್ತು
(ii) (2003ನೇ ಇಸವಿಯ ಸಂವಿಧಾನ (ಎಂಬತ್ತೇಳನೆಯ ತಿದ್ದುಪಡಿ) ಅಧಿನಿಯಮದ 4ನೇ ಪ್ರಕರಣದ ಮೂಲಕ 1991ರ” ಎಂಬ ಅಂಕಿಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) [2001ರ ಜನಗಣತಿ ಆಧಾರದ ಮೇಲೆ ಮರುಹೊಂದಾಣಿಕೆ ಮಾಡಬಹುದಾದಂತೆ ಅಂಥ ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸುವುದನ್ನು ಮರುಹೊಂದಾಣಿಕೆ ಮಾಡುವುದು ಅವಶ್ಯಕವಾಗಿರತಕ್ಕದ್ದಲ್ಲ.]
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 66-67




